Wednesday, June 17, 2026
Wednesday, June 17, 2026

ಪ್ರಕೃತಿಯ ಸೌಂದರ್ಯದ ಜತೆಗೆ ಸಾವಿನ ಭೀತಿ

ಸಾಶಾ ತನ್ನ ನೋವನ್ನು ಮರೆಯಲು ಆಸ್ಟ್ರೇಲಿಯಾದ ಹಿನ್ನೀರಿನಲ್ಲಿ ಒಂಟಿಯಾಗಿ ಕಯಾಕಿಂಗ್ ಮಾಡಲು ಹೊರಡುತ್ತಾಳೆ. ಆದರೆ, ಅಲ್ಲಿ ಅವಳಿಗೆ ಎದುರಾಗುವ ಬೆನ್ ಎಂಬ ವ್ಯಕ್ತಿ ಆಕೆಯ ಪ್ರವಾಸವನ್ನು ನರಕವನ್ನಾಗಿ ಮಾಡುತ್ತಾನೆ. ಬೆನ್ ಒಬ್ಬ ನರಭಕ್ಷಕ. ತನಗಿಂತ ಬಲಿಷ್ಠವಾಗಿರುವ ಶತ್ರುವಿನಿಂದ ತಪ್ಪಿಸಿಕೊಳ್ಳಲು ಸಾಶಾ ತನ್ನ ಕೌಶಲ್ಯಗಳನ್ನು ಹೇಗೆ ಬಳಸುತ್ತಾಳೆ? ಯಾರು ಯಾರನ್ನು ಬೇಟೆಯಾಡುತ್ತಾರೆ ಮತ್ತು ಈ ಭೀಕರ ಹೋರಾಟದಲ್ಲಿ ಅಂತಿಮವಾಗಿ ಯಾರು ಮೇಲುಗೈ ಸಾಧಿಸಿ ಅಪೆಕ್ಸ್‌ ಆಗಿ ಉಳಿಯುತ್ತಾರೆ ಎಂಬುದೇ ಸಿನಿಮಾದ ಜೀವಾಳ.

  • ಎಂ. ಆರ್.‌ ಸಚಿನ್‌. ಬೆಂಗಳೂರು

ಪ್ರವಾಸ ಎಂದರೆ ಕೇವಲ ಸುಂದರ ತಾಣಗಳ ವೀಕ್ಷಣೆ ಮಾತ್ರವಲ್ಲ; ಅದು ಸಾಹಸ, ಅನಿಶ್ಚಿತತೆ ಮತ್ತು ಪ್ರಕೃತಿಯ ಅಗಾಧತೆಯ ನಡುವೆ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ದಾರಿಯೂ ಹೌದು. ಆದರೆ, ಅನ್ವೇಷಣೆಯ ಹಾದಿಯಲ್ಲಿ ಎದುರಾಗುವ ಸಣ್ಣ ತಪ್ಪೂ ಪ್ರಾಣಕ್ಕೆ ಕುತ್ತು ತರಬಹುದು ಎಂಬ ಸತ್ಯವನ್ನು 2026ರ ಇಂಗ್ಲಿಷ್ ಸಿನಿಮಾ 'ಅಪೆಕ್ಸ್' ಅತ್ಯಂತ ರೋಚಕವಾಗಿ ತೆರೆದಿಟ್ಟಿದೆ. ಬಲ್ತಾಸರ್ ಕೊರ್ಮಾಕುರ್ ನಿರ್ದೇಶನದ ಈ ಚಿತ್ರವು ಕೇವಲ ಒಂದು ಆಕ್ಷನ್ ಥ್ರಿಲ್ಲರ್ ಆಗಿ ಉಳಿಯದೆ, ಪ್ರವಾಸಿಗರಿಗೆ ಮತ್ತು ಸಾಹಸಪ್ರಿಯರು ನೋಡಲೇಬೇಕಾದ ಸಿನಿಮಾವಾಗಿದೆ.

ನಾರ್ವೆಯ ಹಿಮಶಿಖರಗಳಿಂದ ಆಸ್ಟ್ರೇಲಿಯಾದ ದಟ್ಟ ಅಡವಿಯವರೆಗೆ

ಈ ಸಿನಿಮಾದ ಆರಂಭವೇ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ನಾರ್ವೆಯ ಪ್ರಸಿದ್ಧ 'ಟ್ರೋಲ್ ವಾಲ್' ಪರ್ವತದ ಮೇಲೆ ಸಾಶಾ (ಚಾರ್ಲಿಜ್ ಥೆರಾನ್) ಮತ್ತು ಅವಳ ಸಂಗಾತಿ ಟಾಮಿ (ಎರಿಕ್ ಬಾನಾ) ಪರ್ವತಾರೋಹಣ ಮಾಡುವ ಅದ್ಭುತ ದೃಶ್ಯಗಳಿಂದಲೇ ಸಿನಿಮಾ ತೆರೆದುಕೊಳ್ಳುತ್ತದೆ. ಆದರೆ, ಹವಾಮಾನ ವೈಪರೀತ್ಯ ಮತ್ತು ಒಂದು ಸಣ್ಣ ಅಪಘಾತ ಸಾಶಾಳ ಜೀವನವನ್ನೇ ಬದಲಿಸುತ್ತದೆ. ಪ್ರವಾಸದಲ್ಲಿ ಸುರಕ್ಷತೆ ಎಷ್ಟು ಮುಖ್ಯ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿ. ನಂತರ ಕತೆಯು ಆಸ್ಟ್ರೇಲಿಯಾದ ಕಾಲ್ಪನಿಕ 'ವಂದಾರಾ ನ್ಯಾಷನಲ್ ಪಾರ್ಕ್' ಕಡೆಗೆ ಸಾಗುತ್ತದೆ. ಅಲ್ಲಿನ ಹಸಿರು, ರಭಸದಿಂದ ಹರಿಯುವ ನದಿಗಳು ಮತ್ತು ಕಾಡಿನ ನಿಗೂಢತೆ ಪ್ರವಾಸಿಗರ ಕಣ್ಣಿಗೆ ಹಬ್ಬದಂತೆ ಕಂಡರೂ, ಪ್ರತಿ ಹಂತದಲ್ಲೂ ಅಪಾಯ ಹೊಂಚು ಹಾಕಿ ಕುಳಿತಿರುತ್ತದೆ.

ಇದನ್ನೂ ಓದಿ: ಗಾಳಿಪಟ ಸಿನಿಮಾದಲ್ಲಿ ಮಲೆನಾಡೇ ಸೆರೆಯಾಗಿದೆ

ಒಬ್ಬಂಟಿ ಪ್ರವಾಸಿ ಮತ್ತು ನರಭಕ್ಷಕನ ಬೇಟೆ

ಸಾಶಾ ತನ್ನ ನೋವನ್ನು ಮರೆಯಲು ಆಸ್ಟ್ರೇಲಿಯಾದ ಹಿನ್ನೀರಿನಲ್ಲಿ ಒಂಟಿಯಾಗಿ ಕಯಾಕಿಂಗ್ ಮಾಡಲು ಹೊರಡುತ್ತಾಳೆ. ಪ್ರವಾಸವನ್ನು ಪ್ರೀತಿಸುವವರಿಗೆ ಇದು ಕನಸಿನ ಜಾಗದಂತೆ ತೋರುತ್ತದೆ. ಆದರೆ, ಅಲ್ಲಿ ಅವಳಿಗೆ ಎದುರಾಗುವ ಬೆನ್ (ಟ್ಯಾರನ್ ಎಗರ್ಟನ್) ಎಂಬ ವ್ಯಕ್ತಿ ಆಕೆಯ ಪ್ರವಾಸವನ್ನು ನರಕವನ್ನಾಗಿ ಮಾಡುತ್ತಾನೆ. ಬೆನ್ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಆತ ಒಬ್ಬ ನರಭಕ್ಷಕ. ಒಬ್ಬ ಸಾಹಸಿ ಪರ್ವತಾರೋಹಿ. ತನಗಿಂತ ಬಲಿಷ್ಠವಾಗಿರುವ ಶತ್ರುವಿನಿಂದ ತಪ್ಪಿಸಿಕೊಳ್ಳಲು ಸಾಶಾ ತನ್ನ ಕೌಶಲ್ಯಗಳನ್ನು ಹೇಗೆ ಬಳಸುತ್ತಾಳೆ? ಯಾರು ಯಾರನ್ನು ಬೇಟೆಯಾಡುತ್ತಾರೆ ಮತ್ತು ಈ ಭೀಕರ ಹೋರಾಟದಲ್ಲಿ ಅಂತಿಮವಾಗಿ ಯಾರು ಮೇಲುಗೈ ಸಾಧಿಸಿ ಅಪೆಕ್ಸ್‌ ಆಗಿ ಉಳಿಯುತ್ತಾರೆ ಎಂಬುದೇ ಸಿನಿಮಾದ ಜೀವಾಳ. ಕಾಡಿನಲ್ಲಿ ದಾರಿ ತಪ್ಪಿದಾಗ ಅಥವಾ ಯಾರಾದರೂ ಬೆನ್ನಟ್ಟಿದಾಗ ಪರಿಸರವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ.

ತಾಂತ್ರಿಕ ಶ್ರೀಮಂತಿಕೆ ಮತ್ತು ನಟನೆ

ಚಾರ್ಲಿಜ್ ಥೆರಾನ್ ಅವರು ಪರ್ವತಾರೋಹಿ ಮತ್ತು ಸರ್ವೈವರ್ ಪಾತ್ರದಲ್ಲಿ ಜೀವ ತುಂಬಿದ್ದಾರೆ. ಆಕೆಯ ದೈಹಿಕ ಶ್ರಮ ಮತ್ತು ಅಭಿನಯ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಟ್ಯಾರನ್ ಎಗರ್ಟನ್ ಅವರ ಕ್ರೂರ ಪಾತ್ರವು ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸುತ್ತದೆ. ಲಾರೆನ್ಸ್ ಶೆರ್ ಅವರ ಛಾಯಾಗ್ರಹಣವು ಆಸ್ಟ್ರೇಲಿಯಾದ ಕಾಡುಗಳನ್ನು ಸುಂದರವಾಗಿ ಮಾತ್ರವಲ್ಲದೆ ಭಯಾನಕವಾಗಿಯೂ ಚಿತ್ರಿಸಿದೆ. ಸಿನಿಮಾ ನೋಡುವಾಗ ನಾವು ಆ ಕಾಡಿನೊಳಗೆ ಹೋಗಿದ್ದೇವೆ ಎಂಬ ಭಾಸವಾಗುತ್ತದೆ.

ಈ ಸಿನಿಮಾ ಪ್ರವಾಸಿಗರಿಗೆ ಕೊಡುವ ಸಂದೇಶವೇನು?

ಈ ಸಿನಿಮಾ ಪ್ರವಾಸ ಪ್ರೇಮಿಗಳಿಗೆ ಕೆಲವು ಪ್ರಮುಖ ಅಂಶಗಳನ್ನು ನೆನಪಿಸುತ್ತದೆ. ಅಪರಿಚಿತ ಪ್ರದೇಶಗಳಿಗೆ ಹೋಗುವಾಗ ಸ್ಥಳೀಯರ ಸಲಹೆಯನ್ನು ನಿರ್ಲಕ್ಷಿಸಬಾರದು ಎಂಬ ಎಚ್ಚರಿಕೆಯನ್ನು ರೇಂಜರ್ ಸಾಶಾಗೆ ನೀಡುತ್ತಾನೆ. ಹೀಗೆ ಸ್ಥಳಿಯರ ಎಚ್ಚರಿಕೆ ನಿರ್ಲಕ್ಷಿಸಬಾರದು ಎಂಬ ಸಂದೇಶವಿದೆ. ಪ್ರವಾಸದ ವೇಳೆ ಕಿಟ್ ಅಥವಾ ಬ್ಯಾಗ್ ಕಳೆದುಹೋದರೆ ಎದುರಾಗುವ ಸಂಕಷ್ಟಗಳನ್ನು ಈ ಚಿತ್ರ ಎತ್ತಿ ತೋರಿಸುತ್ತದೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಹೇಗೆ ಪಾರಾಗಬಹುದು ಎಂಬುದಕ್ಕೆ ಸಾಶಾ ಪಾತ್ರ ಮಾದರಿ.

2026ರ ಬಹುನಿರೀಕ್ಷಿತ ಸಿನಿಮಾವಾಗಿದ್ದ 'ಅಪೆಕ್ಸ್' ಈಗ ಪ್ರಮುಖ ಒಟಿಟಿ ಸಂಸ್ಥೆಯಾದ ನೆಟ್‌ಫ್ಲಿಕ್ಸ್ನಲ್ಲಿ ಲಭ್ಯವಿದೆ. 95 ನಿಮಿಷಗಳ ಈ ಚಿತ್ರವು ನಿಮ್ಮನ್ನು ಸೀಟಿನ ತುದಿಯಲ್ಲಿ ಕೂರಿಸುವುದರಲ್ಲಿ ಸಂಶಯವಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?