ಭಾರತದ ಪ್ರವಾಸೋದ್ಯಮ ಇಂದು ಒಂದು ಮೌನ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ವಿಶ್ವದ ರಾಜಕೀಯ ಅಸ್ಥಿರತೆ, ವಿಮಾನ ದರಗಳ ಏರಿಕೆ, ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳಲ್ಲಿನ ಬದಲಾವಣೆ—ಇವೆಲ್ಲವೂ ಭಾರತೀಯರ ಪ್ರವಾಸದ ಆಯ್ಕೆಯನ್ನು ನಿಧಾನವಾಗಿ ಬದಲಾಯಿಸುತ್ತಿವೆ. ವಿದೇಶ ಪ್ರವಾಸದ ಕನಸು ಕಾಣುತ್ತಿದ್ದ ಅನೇಕರು ಈಗ ತಮ್ಮದೇ ದೇಶದೊಳಗಿನ ಹೊಸ ತಾಣಗಳನ್ನು ಹುಡುಕುತ್ತಿದ್ದಾರೆ. ಈ ಬದಲಾವಣೆ ಭಾರತದ ಹೊಟೇಲ್ ಮತ್ತು ಆತಿಥ್ಯ ಉದ್ಯಮದ ಭವಿಷ್ಯವನ್ನೇ ಮರುರೂಪಿಸುವ ಸೂಚನೆ ತೋರುತ್ತಿದೆ.

ಇದನ್ನೂ ಓದಿ: ಹೈಟೆಕ್ ಹಾದಿಯಲ್ಲಿ ಕರ್ನಾಟಕ ಟೂರಿಸಂ

ಆಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ, ದೇಶೀಯ ಪ್ರವಾಸಿಗರು ಈಗ ಭಾರತದ ಪ್ರವಾಸೋದ್ಯಮ ವೆಚ್ಚದ ಬಹುಪಾಲನ್ನು, ಅಂದರೆ ಸುಮಾರು ಶೇ.84ರಷ್ಟನ್ನು ಭರಿಸುತ್ತಿದ್ದಾರೆ. ಅರ್ಥಾತ್, ಭಾರತದ ಹೊಟೇಲ್ ಉದ್ಯಮದ ನಿಜವಾದ ಶಕ್ತಿ ವಿದೇಶಿ ಪ್ರವಾಸಿಗರಲ್ಲಿ ಮಾತ್ರ ಇದೆ ಎಂಬ ಭ್ರಮೆಯ ಗುಳ್ಳೆ ಒಡೆದು ಹೋಗಿದೆ. ಭಾರತದೊಳಗೇ ಪ್ರವಾಸ ಮಾಡುವ ಭಾರತೀಯರು ನಮ್ಮ ದೇಶದ ಹೊಟೇಲ್ ಮತ್ತು ರೆಸಾರ್ಟ್ ಉದ್ಯಮ್ದ ಬೆನ್ನೆಲುಬಾಗುತ್ತಿದ್ದಾರೆ.ಇದು ನಮ್ಮ ಪ್ರವಾಸೋದ್ಯಮ, ಹೊಟೇಲ್ ಉದ್ಯಮ ಗಂಭೀರವಾಗಿ ಗಮನಿಸಬೇಕಾದ ಅಂಶ.

Untitled design (16)

ಒಂದು ಕಾಲದಲ್ಲಿ ಪಂಚತಾರಾ ಹೊಟೇಲ್ ಗಳ ಬ್ಯುಸಿನೆಸ್ ಮಾಡೆಲ್ ಬಹುತೇಕ ವಿದೇಶಿ ಪ್ರವಾಸಿಗರು, ಕಾರ್ಪೊರೆಟ್ ಪ್ರಯಾಣಿಕರು ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಜಾಗತಿಕ ಬಿಕ್ಕಟ್ಟುಗಳು ಆ ಮಾಡೆಲ್ ನ ದೌರ್ಬಲ್ಯವನ್ನು ಎತ್ತಿ ಹಿಡಿದಿವೆ. ವಿದೇಶಿ ಪ್ರವಾಸಿಗರ ಆಗಮನ ಕುಸಿದು ಹೊಟೇಲ್ ಗಳ ಕೊಠಡಿಗಳು ಖಾಲಿ ಹೊಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಹೊಟೇಲ್ ಮತ್ತು ರೆಸಾರ್ಟ್ ಉದ್ಯಮದ ಸಹಾಯಕ್ಕೆ ಬಂದಿರೋದು ದೇಶೀಯ ಪ್ರವಾಸೋದ್ಯಮ. ಸ್ಥಿರವಾದ ಮಾರುಕಟ್ಟೆ ಒದಗಿಸಿರುವುದು ಡೊಮಸ್ಟಿಕ್ ಟೂರಿಸಂ.

ಇಂದು ಭಾರತೀಯ ಪ್ರವಾಸಿಗನ ಪ್ರವಾಸದ ವ್ಯಾಖ್ಯಾನವೂ ಬದಲಾಗಿದೆ. ದೀರ್ಘ ರಜೆ ಮಾತ್ರವಲ್ಲ; ವೀಕೆಂಡ್ ಟ್ರಿಪ್, ಸ್ಟೇಕೇಷನ್, ವರ್ಕೇಷನ್, ಆಧ್ಯಾತ್ಮಿಕ ಪ್ರವಾಸ, ಕುಟುಂಬ ಪ್ರವಾಸ, ಆಹಾರ ಪ್ರವಾಸ, ವೆಲ್‌ನೆಸ್ ಪ್ರವಾಸ—ಹೀಗೆ ಪ್ರವಾಸದ ಹಲವು ಹೊಸ ರೂಪಗಳು ಬೆಳೆಯುತ್ತಿವೆ. ಹೊಟೇಲ್‌ಗಳೂ ಇದಕ್ಕೆ ತಕ್ಕಂತೆ ತಮ್ಮ ಉತ್ಪನ್ನಗಳನ್ನು ಬದಲಾಯಿಸಬೇಕಾಗಿದೆ. ಗ್ರಾಹಕ ಈಗ ಕೇವಲ ಮಲಗೆದ್ದು ಹೋಗಲು ಪ್ರವಾಸಿ ಸ್ಥಳಗಳಲ್ಲಿರುವ ಹೊಟೇಲ್ ರೆಸಾರ್ಟ್ ಗಳಿಗೆ ಬರುವುದಿಲ್ಲ. ಆತ ಅನುಭವಕ್ಕಾಗಿ ಬರುತ್ತಾನೆ. ಪ್ರವಾಸೋದ್ಯಮ ಈಗ ಮಾರಬೇಕಿರೋದು ಅನುಭವವನ್ನು.

ಈ ಬೆಳವಣಿಗೆಯಿಂದಾಗಿ ಟಯರ್-2, ಟಯರ್-3 ನಗರಗಳತ್ತ ಹೋಟೆಲ್ ಉದ್ಯಮ ಗಮನ ಹರಿಸಲಾರಂಭಿಸಿದೆ. ಉತ್ತಮ ರಸ್ತೆ ಸಂಪರ್ಕ, ಪ್ರಾದೇಶಿಕ ವಿಮಾನ ಸಂಪರ್ಕ ಮತ್ತು ಡಿಜಿಟಲ್ ಬುಕಿಂಗ್ ವ್ಯವಸ್ಥೆಗಳು ಸಣ್ಣ ನಗರಗಳನ್ನೂ ಪ್ರವಾಸಿಗರ ನಕ್ಷೆಯಲ್ಲಿ ಪ್ರಮುಖವಾಗಿ ಗುರುತಿಸುತ್ತಿವೆ. ವಾರಾಣಸಿ, ಅಮೃತಸರದಂಥ ಆಧ್ಯಾತ್ಮಿಕ ತಾಣಗಳಿಂದ ಹಿಡಿದು ಗೋವಾದಂಥ ಮನೋರಂಜನಾ ತಾಣಗಳವರೆಗೆ ದೇಶೀಯ ಪ್ರವಾಸಿಗರ ಬೇಡಿಕೆ ಹೆಚ್ಚುತ್ತಿದೆ.

ಕರ್ನಾಟಕದಂಥ ರಾಜ್ಯಗಳಿಗೆ ಇದು ಬಹುದೊಡ್ಡ ಅವಕಾಶ.ಕೊಡಗು, ಶಿವಮೊಗ್ಗ, ಹಂಪಿ, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳು, ಇವುಗಳನ್ನು ಕೇವಲ ಪ್ರವಾಸಿ ಸ್ಥಳಗಳೆಂದು ನೋಡುವ ಬದಲು ದೇಶೀಯ ಪ್ರವಾಸಿಗರಿಗೆ ಅನುಭವದ ತಾಣಗಳಾಗಿ ರೂಪಿಸಬೇಕಿದೆ. ಸ್ಥಳೀಯ ಆಹಾರ, ಜನಪದ ಸಂಸ್ಕೃತಿ, ಪ್ರಕೃತಿ, ಸಾಹಸ ಚಟುವಟಿಕೆ, ಗ್ರಾಮೀಣ ಜೀವನ, ಹಸ್ತಕಲೆ ಇವೆಲ್ಲವನ್ನೂ ಪ್ರವಾಸೋದ್ಯಮ ಉತ್ಪನ್ನವಾಗಿ ಪರಿವರ್ತಿಸುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ಹೊಟೇಲ್ ಉದ್ಯಮಕ್ಕೂ ಒಂದು ಎಚ್ಚರಿಕೆಯ ಗಂಟೆ ಇದೆ. ದೇಶೀಯ ಪ್ರವಾಸಿಗ ಎಂದರೆ ಕೇವಲ ಕಡಿಮೆ ಬೆಲೆಯ ಗ್ರಾಹಕ ಎಂಬ ಹಳೆಯ ಕಲ್ಪನೆ ಬದಲಾಗಬೇಕು. ಭಾರತೀಯ ಪ್ರವಾಸಿಗ ಖರ್ಚು ಮಾಡಲು ಸಿದ್ಧನಿದ್ದಾನೆ. ಆದರೆ ಅವನಿಗೆ ಮೌಲ್ಯಕ್ಕೆ ತಕ್ಕ ಅನುಭವ ಬೇಕು. ಸ್ವಚ್ಛತೆ, ಉತ್ತಮ ಸೇವೆ, ಸ್ಥಳೀಯ ಆಹಾರ, ಸುರಕ್ಷತೆ, ಪಾರದರ್ಶಕ ದರ ಮತ್ತು ಡಿಜಿಟಲ್ ಸೌಲಭ್ಯ, ಇವೆಲ್ಲವೂ ಈಗ ಅವನ ನಿರೀಕ್ಷೆಯ ಭಾಗ.

ಅಂಕಿಅಂಶಗಳ ಪ್ರಕಾರ 2026ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸರಾಸರಿ ಕೊಠಡಿ ದರ ₹10,000–₹10,200ಕ್ಕೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ.6–8ರಷ್ಟು ಏರಿಕೆಯಾಗಿದೆ. ಕಾರ್ಪೊರೆಟ್ ಪ್ರಯಾಣ, MICE ಮತ್ತು ಬಲವಾದ ದೇಶೀಯ ಬೇಡಿಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ವಿಷಯ ಇಷ್ಟೆ; ಭಾರತೀಯ ಪ್ರವಾಸಿಗ ಈಗ ಹೊಟೇಲ್ ಉದ್ಯಮದ ‘ಪರ್ಯಾಯ ಮಾರುಕಟ್ಟೆ’ ಅಲ್ಲ; ಆತನೇ ಪ್ರಮುಖ ಮಾರುಕಟ್ಟೆ.

Untitled design (18)

ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ಮೂಲಸೌಕರ್ಯವೂ ಅದಕ್ಕೆ ತಕ್ಕಂತೆ ಬೆಳೆಯಬೇಕು. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ತಾಣದ ಗುಣಮಟ್ಟ ಕುಸಿಯಬಾರದು. ಭಾರತೀಯರ ಹೊಸ ಮನೋಭಾವವನ್ನು ಒಂದು ಶಾಶ್ವತ ಪ್ರವಾಸೋದ್ಯಮ ಆರ್ಥಿಕತೆಯಾಗಿ ಪರಿವರ್ತಿಸುವ ಸಮಯ ಇದು. ವಿದೇಶ ಪ್ರವಾಸ ದುಬಾರಿಯಾಗಿರುವುದರಿಂದ ಜನರು ದೇಶದೊಳಗೆ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಸಂತೋಷಪಡುವುದಕ್ಕಿಂತ, ನಾಳೆಯೂ ಅವರು ಭಾರತವನ್ನೇ ಆಯ್ಕೆ ಮಾಡುವಂತೆ ಮಾಡುವುದು ನಮ್ಮ ಗುರಿಯಾಗಬೇಕು. ವಿದೇಶದ ಬಾಗಿಲು ಕೆಲವೊಮ್ಮೆ ರಾಜಕೀಯ ಕಾರಣದಿಂದ ಮುಚ್ಚಬಹುದು. ವಿಮಾನ ದರಗಳು ಏರಬಹುದು. ಜಾಗತಿಕ ಬಿಕ್ಕಟ್ಟುಗಳು ಬರಬಹುದು. ಆದರೆ ದೇಶದೊಳಗೆ ಪ್ರವಾಸ ಮಾಡುವ ಭಾರತೀಯರ ಸಂಖ್ಯೆ ನಮ್ಮ ಕೈಯಲ್ಲಿದೆ. ಹೀಗಾಗಿ ಭಾರತದ ಹೊಟೇಲ್ ಉದ್ಯಮದ ಭವಿಷ್ಯದ ದೊಡ್ಡ ಅತಿಥಿ ವಿದೇಶದಿಂದ ಬರುವವನಲ್ಲ. ಅವನು ನಮ್ಮ ಪಕ್ಕದ ನಗರದಿಂದ, ನಮ್ಮದೇ ರಾಜ್ಯದಿಂದ, ನಮ್ಮದೇ ದೇಶದಿಂದ ಬರುವ ಭಾರತೀಯ ಪ್ರವಾಸಿಗ. ಅವನನ್ನು ಸ್ವಾಗತಿಸಲು ಹೊಟೇಲ್ ಉದ್ಯಮ ಸಿದ್ಧವಾಗಿದೆಯೇ? ಇದು ಈಗ ಕೇಳಬೇಕಾದ ನಿಜವಾದ ಪ್ರಶ್ನೆ.