Thursday, July 24, 2025
Thursday, July 24, 2025

ಚಾಪ್‌ಸ್ಟಿಕ್ ಚಮತ್ಕಾರ

ಜಪಾನಿನ ಆಹಾರ ಸಂಸ್ಕೃತಿಯಲ್ಲಿ ಚಾಪ್‌ಸ್ಟಿಕ್‌ಗಳ ಬಳಕೆಗೆ ಕೆಲವು ನಿರ್ದಿಷ್ಟ ಶಿಷ್ಟಾಚಾರಗಳಿವೆ. ಚಾಪ್‌ಸ್ಟಿಕ್‌ಗಳನ್ನು ಪ್ಲೇಟಿನಲ್ಲಿ ನೇರವಾಗಿ ನಿಲ್ಲಿಸುವುದು ಶೋಕವನ್ನು ಸೂಚಿಸಿದರೆ, ಆಹಾರವನ್ನು ಒಂದು ಚಾಪ್‌ಸ್ಟಿಕ್‌ನಿಂದ ಇನ್ನೊಂದಕ್ಕೆ ವರ್ಗಾಯಿಸುವುದು ಅಂತ್ಯಕ್ರಿಯೆಯ ವಿಧಿಗಳನ್ನು ನೆನಪಿಸುತ್ತದೆ.

ಜಪಾನಿಗೆ ಹೋಗುವ ಮುನ್ನ ಸಾಧ್ಯವಾದರೆ ಎರಡು ಸಂಗತಿಗಳನ್ನು ತಿಳಿದುಕೊಳ್ಳಿ ಎಂದು ಉಪದೇಶ ಮಾಡುವುದುಂಟು. ಆ ಪೈಕಿ ಮೊದಲನೆಯದು, ಜಪಾನಿ ಭಾಷೆಯ ಕೆಲವು ಪದಗಳನ್ನು ಕಲಿಯುವುದು ಮತ್ತು ಎರಡನೆಯದು, ಚಾಪ್‌ಸ್ಟಿಕ್ ಹಿಡಿದು ಆಹಾರ ಸೇವಿಸುವುದು. ಹಾಗೆ ನೋಡಿದರೆ, ಗುಡ್ ಮಾರ್ನಿಂಗ್, ಗುಡ್ ನೈಟ್, ಥಾಂಕ್ಯೂ ಮುಂತಾದವುಗಳಿಗೆ ಜಪಾನಿ ಭಾಷೆಯಲ್ಲಿ ಏನಂತಾರೆ ಎಂಬುದನ್ನು ಕಲಿಯಬಹುದು ಅಥವಾ ಬಾಯಿಪಾಠ ಮಾಡಬಹುದು. ಆದರೆ ಚಾಪ್ ಸ್ಟಿಕ್ ಹಿಡಿದು ಆಹಾರವನ್ನು ಬಾಯಿಗಿಡುವುದು ಕಷ್ಟ. ಚಾಪ್‌ಸ್ಟಿಕ್ ಹಿಡಿಯುವುದನ್ನು ಕಲಿಯುವ ಹೊತ್ತಿಗೆ ಜಪಾನ್ ಪ್ರವಾಸ ಮುಗಿದಿರುತ್ತದೆ. ಅಲ್ಲಿಂದ ಬಂದ ಬಳಿಕ ಕಲಿತಿದ್ದು ಪ್ರಯೋಜನವಾಗುವುದಿಲ್ಲ. ಹೀಗಾಗಿ ಅಲ್ಲಿ ಕಲಿತಿದ್ದನ್ನು ಮರೆತುಬಿಡುತ್ತೇವೆ.

ಚಾಪ್‌ಸ್ಟಿಕ್‌ಗಳು (ಹಾಶಿ) ಅಂದರೆ ಕೇವಲ ಆಹಾರ ಸೇವನೆಯ ಉಪಕರಣಗಳಷ್ಟೇ ಅಲ್ಲ, ಅವು ಜಪಾನಿನ ಸಂಸ್ಕೃತಿ, ಧರ್ಮ ಮತ್ತು ದಿನಚರಿಯ ಅವಿಭಾಜ್ಯ ಅಂಗ. ಚಾಪ್‌ಸ್ಟಿಕ್‌ಗಳು ಜಪಾನಿನಲ್ಲಿ ನಾರಾ ಕಾಲದಿಂದ (ಕ್ರಿ.ಶ. 710-794) ಬಳಕೆಯಲ್ಲಿವೆ ಅಂತಾರೆ. ಆದಿಕಾಲದಲ್ಲಿ ಅವುಗಳನ್ನು ದೇವತೆಗಳಿಗೆ ಆಹಾರ ಅರ್ಪಿಸುವ ಧಾರ್ಮಿಕ ವಿಧಿಗಳಲ್ಲಿ ಬಳಸಲಾಗುತ್ತಿತ್ತಂತೆ. ಈ ಉಪಕರಣಗಳು ಮಾನವ ಮತ್ತು ದೇವತೆಗಳ ನಡುವಿನ ಸಂಪರ್ಕದ ಸಂಕೇತವಾಗಿದ್ದವಂತೆ. ಈ ನಂಬಿಕೆ ಇಂದಿಗೂ ಜಪಾನಿನ ಶಿಂಟೋ ಧರ್ಮದಲ್ಲಿ ಚಾಲ್ತಿಯಲ್ಲಿದೆ. ಚಾಪ್‌ಸ್ಟಿಕ್ ಗಳಲ್ಲಿ ದೇವತೆಗಳು ವಾಸಿಸುತ್ತಾರೆ ಎಂದೂ ನಂಬುತ್ತಾರೆ. ಹೀಗಾಗಿ ಜಪಾನಿಯರಿಗೆ ಚಾಪ್‌ಸ್ಟಿಕ್‌ಗಳು ಪರಮಪವಿತ್ರ ಸಾಧನ. ದೇಹಕ್ಕೂ, ಆಹಾರಕ್ಕೂ ನಡುವಿನ ಸೇತುವಾದರೂ, ಅದಕ್ಕೆ ದೈವತ್ವದ ಸ್ಥಾನ ನೀಡಿರುವುದು ಅಚ್ಚರಿಯೇ ಸರಿ. ಈ ಕಾರಣದಿಂದ ಅವುಗಳ ಸರಿಯಾದ ಬಳಕೆ ಮತ್ತು ಶಿಷ್ಟಾಚಾರಗಳ ಪಾಲನೆಯು ಜಪಾನಿನ ಸಂಸ್ಕೃತಿಗೆ ತೋರಿಸುವ ಗೌರವವಾಗಿದೆ.

istockphoto-471404395-612x612

ಜಪಾನಿನ ಚಾಪ್‌ಸ್ಟಿಕ್‌ಗಳನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಿರುತ್ತಾರೆ. ಅವು ಹಗುರವಾಗಿದ್ದು, ಒಂದು ತುದಿಯಲ್ಲಿ ತೆಳ್ಳಗಾಗಿರುತ್ತವೆ. ಇವುಗಳನ್ನು ವಿವಿಧ ಅಳತೆ ಮತ್ತು ವಿನ್ಯಾಸಗಳಲ್ಲಿ ತಯಾರಿಸಲಾಗುತ್ತದೆ. ಚಾಪ್‌ಸ್ಟಿಕ್ ಅನ್ನು ಹಿಡಿದು ಸರಿಯಾಗಿ ಆಹಾರ ಸೇವಿಸುವುದು ಒಂದು ಕಲೆ. ಹಾಗಂತ ಅದನ್ನು ಕರಗತವಾಗಿಸಿಕೊಳ್ಳುವುದು ಸುಲಭವಲ್ಲ. ಸಾಕಷ್ಟು ಸಲ ಆಹಾರವನ್ನು ಬಟ್ಟೆ ಮೇಲೆ ಚೆಲ್ಲಿಕೊಳ್ಳುವುದು ಅನಿವಾರ್ಯ. ಸರಿಯಾಗಿ ಬಳಸುವುದನ್ನು ಕಲಿತರೆ ಆಹಾರ ಸೇವನೆ ಸುಲಭ.

ಒಂದು ಚಾಪ್‌ಸ್ಟಿಕ್ ಅನ್ನು ಹೆಬ್ಬೆಟ್ಟು ಮತ್ತು ಮಧ್ಯಮ ಬೆರಳಿನ ನಡುವೆ ಸ್ಥಿರವಾಗಿ ಹಿಡಿಯಬೇಕು. ಮತ್ತೊಂದು ಚಾಪ್‌ಸ್ಟಿಕ್ ಅನ್ನು ತಲೆಬೆರಳು ಮತ್ತು ತುದಿಬೆರಳಿನ ನಡುವೆ ಇಟ್ಟು ಮೇಲ್ಮೈಯಲ್ಲಿ ಚಲಿಸುವಂತೆ ಮಾಡಬೇಕು. ಚಾಪ್‌ಸ್ಟಿಕ್‌ಗಳ ತುದಿಗಳನ್ನು ಬಳಸಿಕೊಂಡು ಆಹಾರವನ್ನು ನಿಖರವಾಗಿ ಅವುಗಳನ್ನು ಬಾಯಿಗೆ ತರುವಾಗ, ಚಾಪ್‌ಸ್ಟಿಕ್ ನಾಲಗೆಗೆ ತಾಕಬಾರದು. ಬಾಯಿಯ ಒಳಗೂ ಇಡಬಾರದು. ಚಿಕ್ಕ ಆಹಾರ ಪದಾರ್ಥಗಳನ್ನು ಹಿಡಿಯುವ ಅಭ್ಯಾಸದಿಂದ ನೈಪುಣ್ಯ ಸಾಧಿಸಬಹುದು.

istockphoto-627317496-612x612

ಜಪಾನಿನ ಆಹಾರ ಸಂಸ್ಕೃತಿಯಲ್ಲಿ ಚಾಪ್‌ಸ್ಟಿಕ್‌ಗಳ ಬಳಕೆಗೆ ಕೆಲವು ನಿರ್ದಿಷ್ಟ ಶಿಷ್ಟಾಚಾರಗಳಿವೆ. ಚಾಪ್‌ಸ್ಟಿಕ್‌ಗಳನ್ನು ಪ್ಲೇಟಿನಲ್ಲಿ ನೇರವಾಗಿ ನಿಲ್ಲಿಸುವುದು ಶೋಕವನ್ನು ಸೂಚಿಸುತ್ತದೆ. ಹೀಗಾಗಿ ಅದನ್ನು ಹಾಗೆ ಹಿಡಿಯುವಂತಿಲ್ಲ. ಆಹಾರವನ್ನು ಒಂದು ಚಾಪ್‌ಸ್ಟಿಕ್‌ನಿಂದ ಇನ್ನೊಂದಕ್ಕೆ ನೇರವಾಗಿ ವರ್ಗಾಯಿಸುವುದು ಅಂತ್ಯಕ್ರಿಯೆಯ ವಿಧಿಗಳನ್ನು ನೆನಪಿಸುತ್ತದೆ. ಆಹಾರದ ಮೇಲೆ ಚಾಪ್‌ಸ್ಟಿಕ್‌ಗಳನ್ನು ತಿರುಗಿಸುತ್ತಾ ಏನು ತಿನ್ನಬೇಕು ಎಂದು ನಿರ್ಧರಿಸುವುದು ಅಸಭ್ಯ. ಹಾಗೆಯೇ ಆಹಾರವನ್ನು ಚಾಪ್‌ಸ್ಟಿಕ್‌ಗಳಿಂದ ಚುಚ್ಚಿ ತಿನ್ನುವುದು ತಪ್ಪು. ಅದೇ ರೀತಿ, ಚಾಪ್‌ಸ್ಟಿಕ್‌ಗಳನ್ನು ಚುಂಬಿಸುವುದು ಅಥವಾ ಚಪ್ಪರಿಸುವುದು ಕೂಡ ಅಸಭ್ಯ. ಚಾಪ್‌ಸ್ಟಿಕ್‌ಗಳನ್ನು ಬಳಸಿಕೊಂಡು ಬಟ್ಟಲನ್ನು ಎಳೆಯುವುದು ಸಹ ತಪ್ಪು.

20201218-The-Complete-Guide-to-Japanese-Dining-Etiquette_02-Chopsticks

ಇತ್ತೀಚೆಗೆ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಜಪಾನಿನಲ್ಲಿ ಮರುಬಳಕೆ ಮಾಡಬಹುದಾದ ಚಾಪ್‌ಸ್ಟಿಕ್‌ಗಳ ಬಳಕೆ ಹೆಚ್ಚಾಗಿದೆ. ಮೈ ಚಾಪ್‌ಸ್ಟಿಕ್ ಚಳವಳಿ ಜನಪ್ರಿಯವಾಗಿದ್ದು, ಜನರು ತಮ್ಮದೇ ಆದ ಚಾಪ್‌ಸ್ಟಿಕ್‌ಗಳನ್ನು ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತಿದೆ. ಇದು ಮರದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!