ಶುಕಮುನಿಗಳನ್ನು ವಿನಮ್ರವಾಗಿಸಲು ಪ್ರಯಾಣಕ್ಕೆ ಕಳಿಸಿದ ವ್ಯಾಸರು
ಎಲ್ಲ ಸೌಕರ್ಯಗಳಿದ್ದರೂ ಕಷ್ಟದ ಹಾದಿಯಲ್ಲಿ ಪ್ರಯಾಣಿಸುವಂತೆ ಸೂಚಿಸಿದ ವ್ಯಾಸರ ಮಾತನ್ನು ಕೇಳಿದ ಶುಕ ಮುನಿಗಳಿಗೆ ಕೊನೆಗೆ ಸಿಕ್ಕಿದ್ದು ಜ್ಞಾನದ ಬೆಳಕು ಹೊರತು ಇನ್ನೇನಲ್ಲ! ದಾರಿ ಕಷ್ಟ ಎನಿಸದರೂ ಗಮ್ಯದಲ್ಲಿ ಸಿಗುವ ಸುಖವನ್ನು ಕಂಡಾಗ ಸಾರ್ಥಕ ಎನಿಸುತ್ತದೆ.
ಪುರಾಣ ಪ್ರಯಾಣ
ಮಹಾಮುನಿ ವ್ಯಾಸರ ಪುತ್ರರಾದ ಶುಕ ಮುನಿಗಳು ಪರಮ ಶಾಂತರು ಮತ್ತು ಜ್ಞಾನೋದಯ ಪಡೆದವರು. ಇತರರಿಗಿಂತ ಭಿನ್ನವಾಗಿ, ಅವರು ಪ್ರಾಪಂಚಿಕ ಆಸೆಗಳಿಂದ ಮುಕ್ತರಾಗಿದ್ದರು ಮತ್ತು ಅವರ ಮನಸ್ಸು ಸದಾ ಪರಮಾತ್ಮನ ಚಿಂತನೆಯಲ್ಲಿ ಮಗ್ನವಾಗಿರುತ್ತಿತ್ತು. ಇದಕ್ಕೆ ಕಾರಣ ಒಂದು ಸುದೀರ್ಘ ಪ್ರಯಾಣ.
ತಂದೆ ವ್ಯಾಸರು ಶುಕಮುನಿಗಳಿಗೆ ಮಿಥಿಲೇಶ್ವರನಾದ ಜನಕನ ಬಳಿ ಹೋಗಲು ಹೇಳುತ್ತಾರೆ. ಮೋಕ್ಷಶಾಸ್ತ್ರದ ಸಿದ್ಧಾಂತವನ್ನು ಕಲಿಯಲು ಹೇಳುತ್ತಾರೆ. ಆದರೆ, ʼನೀನು ಮಿಥಿಲಾಪಟ್ಟಣಕ್ಕೆ ಅಂತರಿಕ್ಷಮಾರ್ಗವನ್ನು ಬಿಟ್ಟು ಭೂಮಿಯ ಮೇಲೆ ನಡೆದು ಸಾಗಬೇಕು. ಅಲ್ಲಿಗೆ ತಲುಪುವಾಗ ವಿನಮ್ರವಾಗಿರಬೇಕು. ಸುಖವನ್ನು, ವಿಶೇಷವಾದ ಸ್ಥಾನ-ಮಾನಗಳನ್ನು ಹುಡುಕಿಕೊಂಡು ಹೋಗಬಾರದು. ಏಕೆಂದರೆ, ಅವುಗಳಲ್ಲಿ ಹೆಚ್ಚಿನ ಆಸಕ್ತಿಯುಂಟಾದರೆ ಅಹಂಕಾರ ಬೆಳೆಯುವ ಸಾಧ್ಯತೆಯಿರುತ್ತದೆ. ಯಾಜ್ಯನಾದ ಜನಕನ ಮುಂದೆ ಅಹಂಕಾರವನ್ನು ಪ್ರದರ್ಶಿಸಬಾರದುʼ ಎಂಬ ಶರತ್ತನ್ನಿಟ್ಟರು.
ಇದನ್ನೂ ಓದಿ: ಗುರುದಕ್ಷಿಣೆ ತರಲು ಹೊರಟ ಉತ್ತಂಕನ ಪಯಣ
ಪ್ರಯಾಣ ಮಾಡುವಾಗ ಎಲ್ಲ ಸುಖಗಳು ಕಾಲು ಬುಡದಲ್ಲೇ ಸಿಕ್ಕರೆ ಯಾವುದೇ ಅನಿರೀಕ್ಷಿತ ಕಷ್ಟಗಳಿಗೆ ಮನಸ್ಸು ಒಗ್ಗಿಕೊಳ್ಳುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ದಾರಿಯಲ್ಲಿ ಸಿಗುವ ಹಲವು ಹೊಸ ಅನುಭವವಗಳು ಮನಸ್ಸನ್ನು ಇನ್ನಷ್ಟು ವಿನಮ್ರವಾಗಿಸುತ್ತದೆ. ಅದೇ ಪ್ರಯಾಣದ ಮುಖ್ಯ ಉದ್ದೇಶ!
ಮಾರ್ಗದಲ್ಲಿ ಶುಕನು ಅನೇಕ ಪರ್ವತ, ನದಿ, ಸರ್ಪ ಹಾಗೂ ಹಲವು ಪ್ರಾಣಿಗಳಿಂದ ಕೂಡಿದ್ದ ಕಾಡುಗಳನನ್ನು ದಾಟಿ ಇಲಾವೃತವರ್ಷ, ಹರಿವರ್ಷ, ಹೈಮವತವರ್ಷವನ್ನು ದಾಟಿ ಭಾರತವರ್ಷಕ್ಕೆ ಆಗಮಿಸಿದನು. ಮಹಾಮುನಿಯಾದ ಶುಕನು ಚೀನ-ಹೂಣರೇ ಮೊದಲಾದವರು ವಾಸಿಸುತ್ತಿದ್ದ ವಿವಿಧದೇಶಗಳನ್ನೂ ಭೇಟಿ ಮಾಡಿದನು. ತಂದೆಯ ಅಪ್ಪಣೆಯಂತೆ ನಡೆದುಕೊಳ್ಳುತ್ತಾ ಮತ್ತು ಅವರ ಆದೇಶವನ್ನೇ ಸ್ಮರಿಸಿಕೊಳ್ಳುತ್ತಾ ಪ್ರಯಾಣ ಮಾಡಿದನು. ದಾರಿಯಲ್ಲಿ ರಮ್ಯವಾದ ಪಟ್ಟಣಗಳನ್ನೂ, ಧನ-ಧಾನ್ಯಗಳಿಂದ ಸಮೃದ್ಧವಾದ ನಗರಗಳನ್ನೂ, ವಿಚಿತ್ರವಾದ ರತ್ನಗಳನ್ನೂ ನೋಡಿದನು. ಆದರೆ, ಅವುಗಳಾವುವೂ ಕಣ್ಣುಗಳಿಗೆ ಕಾಣಲೇ ಇಲ್ಲ ಎಂಬಂತೆ ಗಮನವನ್ನು ಹರಿಸದೇ ಮುಂದೆ ಹೋಗುತ್ತಿದ್ದನು. ಸುಂದರ ಉದ್ಯಾನವನಗಳನ್ನೂ, ಸೌಧಗಳನ್ನೂ ಅನೇಕಪುಣ್ಯ ತೀರ್ಥಗಳನ್ನೂ ನೋಡಿ ಭೇಟಿ ಮಾಡಿ ಮುಂದೆಹೋದನು.
ಶುಕ ಮುನಿಗಳು ಕಾಡುಗಳು, ಹಳ್ಳಿಗಳು ಮತ್ತು ನದಿತೀರಗಳ ಮೂಲಕ ಸಂಚರಿಸುವಾಗ, ಪ್ರಕೃತಿಯೇ ಅವರನ್ನು ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿತ್ತು. ಪಕ್ಷಿಗಳು ಅವರನ್ನು ಸ್ತುತಿಸುವಂತೆ ಮಧುರವಾಗಿ ಹಾಡುತ್ತಿದ್ದವು ಮತ್ತು ಕಾಡು ಪ್ರಾಣಿಗಳು ಸಹ ಅವರ ಸನ್ನಿಧಿಯಲ್ಲಿ ಸೌಮ್ಯವಾಗಿ ವರ್ತಿಸುತ್ತಿದ್ದವು.
ಶುಕನು ಅಲ್ಪಕಾಲದಲ್ಲಿಯೇ ಮಹಾತ್ಮನಾದ, ಧರ್ಮಪ್ರಭುವಾದ ಜನಕನಿಂದ ಪರಿಪಾಲಿಸಲ್ಪಡುತ್ತಿದ್ದ ವಿದೇಹರಾಜ್ಯಗಳನ್ನು ತಲುಪಿದನು. ಅನ್ನ-ಪಾನಗಳಿಂದಲೂ ನಾನಾ ಪ್ರಕಾರವಾದ ಖಾದ್ಯವಸ್ತುಗಳಿಂದಲೂ ಸಮೃದ್ಧವಾಗಿದ್ದ ವಿದೇಹನ ರಾಜ್ಯದಲ್ಲಿದ್ದ ಅನೇಕ ಗ್ರಾಮಗಳನ್ನೂ, ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ಹಳ್ಳಿಗಳನ್ನೂ, ಅಸಂಖ್ಯಾತವಾದ ಗೋವುಗಳ ಸಮೂಹಗಳಿಂದ ತುಂಬಿದ್ದ ಹಳ್ಳಿಗಳನ್ನೂ ನೋಡಿದನು. ಭತ್ತ ಮತ್ತು ಹಸುಗಳು ತಿನ್ನುವ ಹುಲ್ಲುಗಳಿಂದ ತುಂಬಿಹೋಗಿದ್ದ ಗದ್ದೆಗಳನ್ನೂ, ಹಾಗೆಯೇ ಹಂಸ-ಸಾರಸಪಕ್ಷಿಗಳಿಂದ ಸೇವಿಸಲ್ಪಡುತ್ತಿದ್ದ, ಕಾಂತಿಯುಕ್ತವಾಗಿದ್ದ, ಕಮಲಗಳಿಂದ ಸಮಲಂಕೃತವಾಗಿದ್ದ ನೂರಾರು ಸರೋವರಗಳನ್ನೂ ನೋಡಿದನು. ಹೀಗೆ ಸಮೃದ್ಧವಾದ ಧನ-ಧಾನ್ಯಾದಿಗಳನ್ನು ಹೊಂದಿರುವ ಜನರು ವಾಸಿಸುತ್ತಿದ್ದ ವಿದೇಹದೇಶಗಳಲ್ಲಿ ಮುಂದೆ ಹೋಗುತ್ತಾ ಕಡೆಗೆ ಸಕಲವಿಧವಾದ ವಸ್ತು ಗಳಿಂದಲೂ ಸಮೃದ್ದವಾಗಿದ್ದ, ಬಹುರಮ್ಯವಾಗಿದ್ದ ಮಿಥಿಲಾಪಟ್ಟಣದ ಉಪವನವನ್ನು ಸೇರಿದನು. ಅಚ್ಯುತನಾದ ಶುಕನು ಆನೆಗಳಿಂದಲೂ, ಕುದುರೆಗಳಿಂದಲೂ, ರಥಗಳಿಂದಲೂ ವ್ಯಾಪ್ತವಾಗಿದ್ದ, ನರ-ನಾರಿಯರಿಂದ ತುಂಬಿಹೋಗಿದ್ದ, ಸುಂದರವಾಗಿದ್ದ ಆ ಉಪವನವನ್ನು ಕೂಡ ನೋಡಿಯೂ ನೋಡದಂತೆ ಮುಂದೆ ನಡೆದನು. ತಿಳಿಯಬೇಕಾದ ವಿಷಯದ ಭಾರವನ್ನೇ ಮನಸ್ಸಿನಿಂದ ಹೊತ್ತುಕೊಂಡು ಅದರ ಅಂತರಾರ್ಥವೇನೆಂಬುದನ್ನೇ ಮನಸ್ಸಿನಲ್ಲಿ ವಿಚಾರಮಾಡುತ್ತಾ ಆತ್ಮಾರಾಮನಾದ ಶುಕನು ಪ್ರಸನ್ನಾತ್ಮನಾಗಿ ಮಿಥಿಲಾಪಟ್ಟಣವನ್ನು ಸೇರಿದನು.

ಮಿಥಿಲಾಪಟ್ಟಣದ ಹೆಬ್ಬಾಗಿಲಿನಲ್ಲಿದ್ದ ದ್ವಾರಪಾಲಕರು ತಮ್ಮ ಅನುಮತಿಯೇ ಇಲ್ಲದೇ ಒಳಕ್ಕೆ ಹೋಗುತ್ತಿದ್ದ ಶುಕನನ್ನು ನಿಲ್ಲಿಸಿದರು. ದ್ವಾರಪಾಲಕರು ಕಠಿಣವಾದ ಮಾತುಗಳನ್ನಾಡುತ್ತಿದ್ದರೂ ಸ್ವಲ್ಪವೂ ಕೋಪಿಸಿಕೊಳ್ಳದೇ ಶುಕನು ಅಲ್ಲಿಯೇ ನಿಂತುಬಿಟ್ಟನು. ಅಷ್ಟು ದೂರ ಪ್ರಯಾಣ ಮಾಡಿದ್ದರೂ, ಸೂರ್ಯನ ತಾಪ ಹೆಚ್ಚಿದ್ದರೂ ಅವನಿಗೆ ಆಯಾಸವಾಗಿರಲಿಲ್ಲ. ಆದರೆ ಅವನ ಸ್ಥಿತಿಯನ್ನು ನೋಡಿ ಆ ದ್ವಾರಪಾಲಕರ ಸಮುದಾಯದಲ್ಲಿ ಒಬ್ಬನಿಗೆ ಮಾತ್ರ ದುಃಖವಾಯಿತು. ಆ ದ್ವಾರಪಾಲಕನು ಸಂಪೂಜಿಸಿ ರಾಜನ ಅರಮನೆಯ ಎರಡನೆಯ ಆವರಣಕ್ಕೆ ಕಳುಹಿಸಿಕೊಟ್ಟನು.
ನೆರಳನ್ನೂ ಮತ್ತು ಬಿಸಿಲನ್ನೂ ಸಮವಾಗಿ ಭಾವಿಸಿದ್ದ ಶುಕದೇವನು ಎರಡನೆಯ ಆವರಣದಲ್ಲಿದ್ದ ಒಂದು ಜಗುಲಿಯ ಮೇಲೆ ಕುಳಿತು ಮೋಕ್ಷದ ವಿಷಯವನ್ನೇ ಚಿಂತಿಸುತ್ತಿದ್ದನು. ಸ್ವಲ್ಪ ಹೊತ್ತಿನಲ್ಲಿಯೇ ರಾಜನ ಮಂತ್ರಿಯು ಶುಕನ ಬಳಿಗೆ ಬಂದು ಅವನನ್ನು ರಾಜನ ಅರಮನೆಯ ಮೂರನೆಯ ಆವರಣಕ್ಕೆ ಕರೆದೊಯ್ದನು. ಆ ಮೂರನೆಯ ಆವರಣದಲ್ಲಿ ಅಂತಃಪುರಕ್ಕೆ ಸಂಬಂಧಿಸಿದಂತೆ ಸುಂದರವಾದ ಮತ್ತು ವಿಶಾಲವಾದ ಉದ್ಯಾನವನತ್ತು. ಅಲ್ಲಿ ಪ್ರತ್ಯೇಕವಾಗಿ ಜಲಕ್ರೀಡೆಯಾಡಲು ಸುಂದರವಾದ ಜಲಾಶಯಗಳಿದ್ದವು. ಹೂಗಳಿಂದ ಅಲಂಕೃತವಾಗಿದ್ದ ರಮ್ಯವಾಗಿದ್ದ ಅನೇಕ ವೃಕ್ಷಗಳಿದ್ದುವು. ಅಲ್ಲಿ ಕುಳಿತುಕೊಳ್ಳಲು ಶುಕನಿಗೆ ಆಸನವನ್ನಿತ್ತು ಮಂತ್ರಿಯು ಹೊರಟು ಹೋದನು.
ಇವೆಲ್ಲ ಆದ ಬಳಿಕ ಜನಕನ ಬಳಿ ಶುಕಮುನಿ ಹೋದನು. ಇಬ್ಬರ ನಡುವೆಯೂ ಜ್ಞಾನ, ಅಧ್ಯಾತ್ಮ, ಮೋಕ್ಷ, ಧರ್ಮದ ಕುರಿತು ಸುದೀರ್ಘ ಚರ್ಚೆಯೂ ನಡೆಯಿತು. ಶುಕನ ಮಾತುಗಳನ್ನು ಕೇಳಿ ಜನಕ ಕೂಡ ಮೆಚ್ಚಿಕೊಂಡನು. ಜನಕನ ಬಳಿ ಕಲಿಯಬೆಕಾಗಿದ್ದ ವಿಷಯಗಳ ಅರಿವು ಶುಕನಿಗೆ ಅರ್ಧ ಪ್ರಯಾಣದಲ್ಲೇ ಆಗಿತ್ತು.
ಶುಕ ಮುನಿಗಳ ಪ್ರಯಾಣವು ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸಿದ ಆಧ್ಯಾತ್ಮಿಕ ತೀರ್ಥಯಾತ್ರೆಯಾಗಿ ಉಳಿಯಿತು. ಶುದ್ಧ ಜ್ಞಾನ, ವೈರಾಗ್ಯ ಮತ್ತು ಭಕ್ತಿಯ ಸಂಕೇತವಾಗಿ ಅಜರಾಮರಾದರು. ನಿಜವಾದ ಪಯಣ ಎಂದರೆ ಕೇವಲ ಭೂಮಿಯ ಮೇಲಿನ ಸಂಚಾರವಲ್ಲ. ಅದು ನಮ್ಮೊಳಗಿನ ಪಯಣ. ತಿಳಿವಳಿಕೆ, ಶಾಂತಿ ಮತ್ತು ಪರಮ ಸ್ವಾತಂತ್ರ್ಯದತ್ತ ಸಾಗುವ ಹಾದಿ ಎಂಬುದನ್ನು ಅವರ ಜೀವನ ನೆನಪಿಸುತ್ತದೆ. ಮನಸ್ಸಿನಲ್ಲಿರುವ ಸಣ್ಣ ಅಹಂಕಾರ ಕಡಿಮೆಯಾಗಿ ಇನ್ನಷ್ಟು ವಿನಮ್ರವಾಗಬೇಕಂದರೆ ಕನಿಷ್ಠ ಒಂದು ಪ್ರಯಾಣವನ್ನಾದರೂ ಮಾಡಬೇಕಾಗುತ್ತದೆ.