ಹಾಲಿನಂತೆ ಹೊಳೆಯುವ ಅಬುಧಾಬಿಯ ಶೇಖ್ ಝೈದ್ ಮಸೀದಿ
ನನ್ನ ಮರ್ಕಟ ಮನ ಬಿಡುವು ಸಿಕ್ಕಾಗಲೆಲ್ಲಾ ಪ್ರವಾಸಕ್ಕೆ ಹಾತೋರೆಯುತ್ತಿರುತ್ತದೆ. ಈಗಂತೂ ನಿವೃತ್ತಿ ಪರ್ವದ ದಿನಗಳು, ಜೊತೆಗೆ, ಅನವರತವೂ ಪ್ರವಾಸಕ್ಕೆಂದು ಬ್ಯಾಗ್ ಹೇಗಲೇರಿಸಿಕೊಂಡು ಸನ್ನದ್ಧ ಸ್ಥಿತಿಯ ಗೆಳೆಯರ ತಂಡ. ಕೇಳಬೇಕೆ, ಕಳೆದ ವರ್ಷ ಯು.ಎ.ಇ ದೇಶದ ದುಬೈ ನಗರದ ಬೇಟಿಗೆ ಇವರೊಡನೆ ಪ್ರವಾಸದ ಭಾಗ್ಯ ಲಭಿಸಿತ್ತು. ವಯಸ್ಸು ಹಿರಿಯ ನಾಗರೀಕರದ್ದಾಗಿದ್ದರು ಹುಮ್ಮಸ್ಸಿಗೆ ಬರವಿರಲಿಲ್ಲ. ಜಿರೋ ವಾಲೇಟ್ನ ಪ್ಯಾಕೇಜ ಟೂರ್ ಆಯ್ಕೆ ಮಾಡಿಕೊಂಡಿದ್ದರಿಂದ, ಎಲ್ಲವನ್ನು ಒಪ್ಪವಾಗಿ, ಯಾವ ಲೋಪವೂ ಇರದಂತೆ ನಮ್ಮ ಟ್ರಾವೆಲ್ ಸಂಸ್ಥೆ ಪ್ರವಾಸವನ್ನು ವ್ಯವಸ್ಥೆಗೊಳಿಸಿತ್ತು.
- ವೆಂಕಟೇಶ್ ಮುದಗಲ್
ದುಬೈನಿಂದ ಸುಮಾರು 139 ಕಿಲೋಮೀಟರ್ ದೂರದಲ್ಲಿರುವ ಅಬುಧಾಬಿಯನ್ನು ತಲುಪಲು ನಾವು, ರಸ್-ಅಲ್-ಖೈಮಾದಿಂದ ದುಬೈ ಮೂಲಕ ಅಲ್-ಸಿಲಾವರೆಗೆ ಸಂಪರ್ಕ ಕಲ್ಪಿಸುವ ಎಂಟು ಲೇನ್‌ಗಳ ವಿಶಾಲವಾದ ಶೇಖ್ ಝೈದ್ ಹೆದ್ದಾರಿಯ ಮೂಲಕ ಐಷಾರಾಮಿ ಹವಾನಿಯಂತ್ರಿತ ವಾಹನದಲ್ಲಿ ಹೊರಟೆವು. ನಮ್ಮ ಮಾರ್ಗದರ್ಶಿ ಕನ್ನಡತಿ ಫಾತಿಮಾ ಎಲ್ಲರನ್ನು ಸ್ವಾಗತಿಸಿದರು. ಎಂಟು ಲೇನ್‌ಗಳ ಹೆದ್ದಾರಿ, ಎರಡು ಬದಿಗಳಲ್ಲೂ ಮರಳುಭೂಮಿ ಸೇರಿ ಅನೂಹ್ಯ ಸೌಂದರ್ಯವನ್ನು ಸೃಷ್ಟಿಸಿತ್ತು. ಕೆಲ ಹೊತ್ತು ಪಯಣದ ನಂತರ, ರಸ್ತೆಯ ಮೇಲ್ಬಾಗದ ಬಣ್ಣ ಕಡು ಕಪ್ಪಿನ ಬದಲು ನಸುಗೆಂಪು ಕಾಣ ತೊಡಗಿತು. ದುಬೈನಲ್ಲಿ ನೆಲೆಸಿರುವ ನಮ್ಮ ಮಾರ್ಗದರ್ಶಕಿ ಫಾತಿಮಾ, ಕನ್ನಡದ ಮಧುರ ಧ್ವನಿಯಲ್ಲಿ ದಾರಿಯುದ್ದಕ್ಕೂ ದುಬೈ ಮತ್ತು ಅಬುಧಾಬಿಯ ಕುರಿತ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು. ರಸ್ತೆ ನಸುಗೆಂಪು ಬಣ್ಣದಲ್ಲಿ ಕಾಣತೊಡಗಿದಾಗಲೇ ಅಬುಧಾಬಿಯ ಗಡಿ ಆರಂಭವಾಗುತ್ತದೆ ಎಂದು ಅವರು ತಿಳಿಸಿದ್ದರು. ತಮ್ಮದೇ ವಿನೂತನ ಶೈಲಿಯಲ್ಲಿ ಗಡಿಗಳನ್ನು ಗುರುತಿಸುವ ಎಮಿರೇಟ್ಸ್ ಜಾಣ್ಮೆಗೆ ನಾವು ಸಹ ಕರತಾಡನ ಮಾಡಿದೆವು. ದುಬೈ ನಗರ ಕಾಂಕ್ರೀಟ್ ಕಾಡಿನಂತೆ ಕಂಡರೆ, ಅಬುಧಾಬಿ ನಗರದಲ್ಲಿ ಹಸಿರಿನ ಸ್ಪರ್ಶ ಹೆಚ್ಚು ಕಾಣಿಸುತ್ತದೆ. ಯುಎಇ ದೇಶದ ಬಹುಪಾಲು ತೈಲ ನಿಕ್ಷೇಪಗಳು ಕೂಡ ಅಬುಧಾಬಿಯಲ್ಲೇ ಇರುವುದರಿಂದ ಹಾಗೂ ಇದು ಯುಎಇ ದೇಶದ ರಾಜಧಾನಿಯೂ ಆಗಿರುವುದರಿಂದ ಈ ನಗರಕ್ಕೆ ವಿಶೇಷ ಮಹತ್ವ ಇದೆ.
ಇದನ್ನೂ ಓದಿ: ಎಳನೀರಿಗೂ, ತಾಳೆಹಣ್ಣಿಗೂ ಸೋದರ ಸಂಬಂಧಿ
ಖರ್ಜೂರದ ಮಾರುಕಟ್ಟೆ
ಅಬುಧಾಬಿ ತಲುಪಿದ ಮೇಲೆ ಮೊದಲಿಗೆ ನಾವು ಭೇಟಿ ನೀಡಿದ್ದು ಅಲ್ಲಿನ ಪ್ರಸಿದ್ಧ Al Mina Dates Market. ಎರಡೂ ಬದಿಗಳಲ್ಲಿ ಸಾಲಾಗಿ ನಿಂತ ಅಂಗಡಿಗಳು ಸೈನಿಕರ ಶಿಸ್ತಿನಂತೆ ಕಂಡವು. ಅಂಗಡಿಗಳಲ್ಲಿ Khalas, Fard, Sheeshe, Madjoul ಮೊದಲಾದ ವಿವಿಧ ಬಗೆಯ ಖರ್ಜೂರಗಳು ಕಣ್ಣಿಗೆ ಹಬ್ಬವಾಗಿದ್ದವು. ಖರ್ಜೂರದಿಂದ ತಯಾರಿಸಿದ ಚಾಕೊಲೆಟ್‌ಗಳೂ ಪ್ರವಾಸಿಗರ ಗಮನ ಸೆಳೆಯುತ್ತವೆ. ಆಶ್ಚರ್ಯವೆಂದರೆ ಈ ಅಂಗಡಿಗಳ ಬಹುತೇಕ ಮಾಲೀಕರು ಕೇರಳ ಮೂಲದ ಭಾರತೀಯರು. ವಿದೇಶಿ ನೆಲೆಯಲ್ಲೂ ಭಾರತೀಯರ ಪರಿಶ್ರಮದ ಗುರುತು ಕಂಡಾಗ ಮನಸ್ಸಿಗೆ ಹೆಮ್ಮೆಯ ಭಾವನೆ ಮೂಡಿತು. ಬಾಯಲ್ಲಿಟ್ಟರೆ ಕರಗುವ ಅಪರೂಪದ ಖರ್ಜೂರದ ಖರೀದಿಗೆ ಮುಗಿ ಬಿದ್ದಿದ್ದೆವು.

ಹಾಲಿನಂತೆ ಹೊಳೆಯುವ ಮಹಾಕಟ್ಟಡ
ಖರ್ಜೂರ ಮಾರುಕಟ್ಟೆಯಿಂದ ಹೊರಟು ನಾವು ತಲುಪಿದ್ದು ಅಬುಧಾಬಿಯ ಕೀರ್ತಿಯ ಕಿರೀಟವಾದ ಶೇಖ್ ಝೈದ್ ಗ್ರಾಂಡ್ ಮೊಸ್ಕ್‌ಗೆ. ಪ್ರವೇಶದ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಪಾಲಿಸಿ ಒಳಗೆ ಕಾಲಿಟ್ಟ ಕ್ಷಣವೇ ನಾನು ಮೂಕವಿಸ್ಮಿತನಾದೆ. ಹಾಲಿನಂತೆ ಬಿಳಿಯಾಗಿ ಹೊಳೆಯುವ ಆ ಕಟ್ಟಡ ಸೂರ್ಯಕಿರಣದಲ್ಲಿ ದಿವ್ಯವಾಗಿ ಕಂಗೊಳಿಸುತ್ತಿತ್ತು. ಈ ಮಸೀದಿಯ ನಿರ್ಮಾಣ 1996ರಲ್ಲಿ ಆರಂಭವಾಗಿ 2007ರಲ್ಲಿ ಪೂರ್ಣಗೊಂಡಿದೆ. ಇದು ಯುಎಇ ದೇಶದ ಅತಿ ದೊಡ್ಡ ಮಸೀದಿಯಾಗಿದ್ದು, ಸುಮಾರು 12 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಇದರ ನಿರ್ಮಾಣ ಕನಸನ್ನು ಸಾಕಾರಗೊಳಿಸಿದವರು ಯುಎಇ ದೇಶದ ದಿವಂಗತ ಅಧ್ಯಕ್ಷ ಝೈದ್ ಬಿನ್ ಸುಲ್ತಾನ್ ಅಲ್ ನಹ್ಯನ್. ಅವರ ಸಮಾಧಿಯೂ ಇದೇ ಮಸೀದಿಯ ಪರಿಸರದಲ್ಲಿದೆ.
ವಾಸ್ತುಶಿಲ್ಪದ ವೈಭವ
ಸಿರಿಯಾ ದೇಶದ ವಾಸ್ತುಶಿಲ್ಪಿ ಯೂಸುಫ್ ಅಬ್ದೆಲ್ಕಿ ರೂಪಿಸಿದ ಈ ಮಸೀದಿ ಪರ್ಷಿಯನ್, ಮೊಘಲ್ ಮತ್ತು ಇಂಡೋ-ಇಸ್ಲಾಮಿಕ್ ಶೈಲಿಗಳ ಅದ್ಭುತ ಸಂಯೋಜನೆ. ಮಸೀದಿಯೊಳಗೆ 82 ಭವ್ಯ ಗುಮ್ಮಟಗಳಿದ್ದು, ಒಂದೇ ಸಮಯದಲ್ಲಿ ಸುಮಾರು 41,000 ಜನರು ಪ್ರಾರ್ಥನೆ ಸಲ್ಲಿಸಬಹುದು. ಅಮೃತಶಿಲೆಯಿಂದ ಅಲಂಕರಿಸಲ್ಪಟ್ಟ ಕಂಬಗಳು ಹಾಗೂ ಚಂದ್ರನ ಚಲನೆಯ ಪ್ರೇರಣೆಯಿಂದ ರೂಪಿಸಿದ ಬೆಳಕಿನ ವ್ಯವಸ್ಥೆ ಕಟ್ಟಡದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಕನ್ನಡದ ಖ್ಯಾತ ಕವಿ ಎಚ್.ಎಸ್ ವೆಂಕಟೇಶಮೂರ್ತಿ ಅವರ ʼಸೌಂದರ್ಯವೆಂದರೆ ಮನಸ್ಸು ಮೌನವಾಗುವ ಕ್ಷಣʼ ಎಂಬ ವಾಣಿ ನನ್ನ ಮನದೊಳಗೆ ಹೀಗೆ ಮೂಡಿ ಹಾಗೆ ಮರೆಯಾಯಿತು.
ವಿಶ್ವದ ಅತಿದೊಡ್ಡ ಕಾರ್ಪೆಟ್ ಮತ್ತು ದೀಪದ ಗೊಂಚಲುಗಳು
ಈ ಮಸೀದಿಗೆ ಪಾಕಿಸ್ತಾನದ ಲಾಹೋರಿನ ಬಾದಶಾಹಿ ಮಸೀದಿಯಿಂದ ನೆಲಹಾಸಿನ ವಿನ್ಯಾಸಕ್ಕೆ ಪ್ರೇರಣೆ ದೊರೆತಿದೆ ಎನ್ನಲಾಗುತ್ತದೆ. ಮಸೀದಿಯೊಳಗಿನ ಪ್ರಾರ್ಥನಾ ಮಂದಿರದಲ್ಲಿ ಹರಡಿರುವ ಭವ್ಯ ಕಾರ್ಪೆಟ್ ವಿಶ್ವದಲ್ಲಿಯೇ ಅತಿ ದೊಡ್ಡದು ಎನ್ನಲಾಗಿದೆ. ಸುಮಾರು 60,570 ಚದರಡಿ ವಿಸ್ತೀರ್ಣ ಹೊಂದಿರುವ ಈ ಕಾರ್ಪೆಟ್ ಅನ್ನು ಇರಾನ್ ದೇಶದ ಕಲಾವಿದ ಅಲಿ ಖಾಲಿಖಿ ವಿನ್ಯಾಸಗೊಳಿಸಿದ್ದು, ನ್ಯೂಜಿಲ್ಯಾಂಡಿನ ಉಣ್ಣೆಯಿಂದ ಎರಡು ವರ್ಷಗಳ ಕಾಲದಲ್ಲಿ ಸುಮಾರು 1200 ಕೆಲಸಗಾರರು, 220 ಕೋಟಿ ಗಂಟುಗಳಿಂದ ಸಿದ್ಧಪಡಿಸಿದ ಸಂಗತಿ ಅರಿತು ಬೆರಗಾದೆ. ಇದರ ತೂಕವೇ ಸುಮಾರು 35 ಟನ್ ಅಂತೆ. ಇದರ ಜತೆಗೆ ಜರ್ಮನಿಯ ಮುನಿಕ್ ನಗರದಿಂದ ತರಿಸಲಾದ ಏಳು ಭವ್ಯ ಶಾಂಡೆಲಿಯರ್‌ಗಳು ಮಸೀದಿಯ ಒಳಾಂಗಣವನ್ನು ಇನ್ನಷ್ಟು ದಿವ್ಯವಾಗಿ ಮೆರಗುಗೊಳಿಸುತ್ತವೆ.

ಮೌನದಲ್ಲಿ ಉಳಿಯುವ ನೆನಪು
ಇಲ್ಲಿನ ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ಪ್ರವಾಸಿಗರು ಮನಬಂದಂತೆ ಫೋಟೋಗಳನ್ನು ತೆಗೆದುಕೊಳ್ಳಬಹುದು. ಸಿಬ್ಬಂದಿಯ ವಿನಯಶೀಲತೆ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಗಮನ ಸೆಳೆಯುತ್ತದೆ. ಸುತ್ತಲಿನ ಉದ್ಯಾನಗಳು, ಕಾರಂಜಿಗಳು ಮತ್ತು ಎಲ್ಲೆಡೆ ಕಾಣುವ ಸ್ವಚ್ಛತೆ ಈ ಸ್ಥಳವನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ಹುಡುಕಿದರೂ ಕಸದ ಕಣವೂ ಕಾಣದಷ್ಟು ಶಿಸ್ತಿನಿಂದ ಈ ಸ್ಥಳವನ್ನು ನಿರ್ವಹಿಸಲಾಗುತ್ತಿದೆ. ಸಂಜೆಯ ಬೆಳಕು ಮಸೀದಿಯ ಬಿಳಿ ಗೋಡೆಗಳ ಮೇಲೆ ಬೀಳುವಾಗ ಅದು ಇನ್ನಷ್ಟು ದಿವ್ಯವಾಗಿ ಕಾಣುತ್ತದೆ. ಮರಳುನಾಡಿನ ಮಧ್ಯೆ ಹಾಲಿನಂತೆ ಹೊಳೆಯುವ ಈ ಶ್ವೇತ ಮಸೀದಿ ಮಾನವ ಸೃಜನಶೀಲತೆ ಮತ್ತು ಆಧ್ಯಾತ್ಮಿಕತೆಯ ಅದ್ಭುತ ಸಂಕೇತ. ಅಬುಧಾಬಿಯ ಈ ಶ್ವೇತ ಮಹಾಮಸೀದಿ ಮನದೊಳಗೆ ಮೌನವಾಗಿ ನೆಲೆಸಿದ ಒಂದು ಮಧುರ ನೆನಪಾಗಿ ಉಳಿಯಿತು.