ಈ ತಂತ್ರಜ್ಞಾನ ಬಳಸುವುದರಿಂದ ವಿಶ್ವದ ಅತ್ಯಂತ ಸುರಕ್ಷಿತ ನಗರಕ್ಕೆ ಮತ್ತಷ್ಟು ರಕ್ಷಣೆ
ಅಬುಧಾಬಿಯ ಹೋಟೆಲ್ಗಳಲ್ಲಿ ಅತಿಥಿಗಳ ಸುರಕ್ಷತೆ, ನಿಖರತೆ ಹಾಗೂ ಕಾರ್ಯಚಟುವಟಿಕೆಗಳ ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಮುಖ ಗುರುತಿಸುವ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಈ ವ್ಯವಸ್ಥೆ ಅತಿಥಿಯ ಚೆಕ್-ಇನ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ವಿಶ್ವದ ಅತ್ಯಂತ ಸುರಕ್ಷಿತ ನಗರವೆಂದು ನಿರಂತರವಾಗಿ ಗುರುತಿಸಲ್ಪಟ್ಟ ಅಬುಧಾಬಿ (Abu dhabi) ಇದೀಗ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸುಧಾರಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು (Face Recognisation Technology) ಹೋಟೆಲ್ಗಳಲ್ಲಿ ಹಂತ ಹಂತವಾಗಿ ಜಾರಿಗೆ ತರುತ್ತಿದೆ.
ಅಬುಧಾಬಿಯ ಹೋಟೆಲ್ಗಳಲ್ಲಿ ಅತಿಥಿಗಳ ಸುರಕ್ಷತೆ, ನಿಖರತೆ ಹಾಗೂ ಕಾರ್ಯಚಟುವಟಿಕೆಗಳ ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಮುಖ ಗುರುತಿಸುವ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಈ ವ್ಯವಸ್ಥೆ ಅತಿಥಿಯ ಚೆಕ್-ಇನ್ (Check-in) ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಂತ್ರಜ್ಞಾನ ಅತಿಥಿಗಳ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಿ, ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್ಶಿಪ್, ಕಸ್ಟಮ್ಸ್ ಮತ್ತು ಪೋರ್ಟ್ ಸೆಕ್ಯುರಿಟಿ (ICP) ಯಿಂದ ನಿಗದಿತ ಸುರಕ್ಷಿತ ಡೇಟಾಬೇಸ್ಗೆ ಕಳುಹಿಸಲಾಗುತ್ತದೆ. ಸಂಗ್ರಹಿತ ಮಾಹಿತಿ ದೌರ್ಜನ್ಯಕ್ಕೆ ಒಳಗಾಗದಂತೆ ಶಕ್ತಿಯುತ ಎನ್ಕ್ರಿಪ್ಷನ್ ವ್ಯವಸ್ಥೆ ಜಾರಿಯಲ್ಲಿದೆ.
ಈ ಯೋಜನೆಯ ಮೊದಲ ಹಂತವನ್ನು ಅಬುಧಾಬಿ ನಗರ, ಅಲ್ ಐನ್ ಪ್ರದೇಶ ಹಾಗೂ ಅಲ್ ಧಫ್ರಾ ಪ್ರದೇಶದ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಜಾರಿಗೆ ತರಲಾಗುತ್ತಿದೆ. ನಂತರದ ಹಂತದಲ್ಲಿ 4 ಸ್ಟಾರ್ ಹೋಟೆಲ್ಗಳಿಗೆ ವಿಸ್ತರಣೆ ಮಾಡಲಾಗುವುದು. ಕೊನೆಗೆ ಎಲ್ಲಾ ಹೋಟೆಲ್ ವರ್ಗಗಳನ್ನು ಈ ಯೋಜನೆಯಡಿ ತರಲಾಗುವುದು.
ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ (DCT), ICP ಹಾಗೂ ವಿವಿಧ ಹೋಟೆಲ್ಗಳೊಂದಿಗೆ ಸಹಕರಿಸಿ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ತಾಂತ್ರಿಕ ಸಹಾಯ, ತರಬೇತಿ ಹಾಗೂ ನಿರಂತರ ಸಂವಹನ ವ್ಯವಸ್ಥೆ ಸ್ಥಾಪಿಸಲಾಗಿದೆ.
2025ರ ಮೊದಲ ತ್ರೈಮಾಸಿಕದಲ್ಲಿಯೇ ಅಬುಧಾಬಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ದಾಖಲಿಸಿದೆ – ಒಟ್ಟು 1.4 ಮಿಲಿಯನ್ ಓವರ್ನೈಟ್ ಪ್ರವಾಸಿಗರನ್ನು ಆತಿಥ್ಯವಿತ್ತಿದ್ದು, ಹೋಟೆಲ್ಗಳಿಂದ 2.3 ಬಿಲಿಯನ್ ಧೀರಹಂ ಆದಾಯ ಗಳಿಸಿದೆ. ತಾತ್ಕಾಲಿಕ ದಾಖಲೆಗಳ ಪ್ರಕಾರ, 2025ರಲ್ಲಿ ಪ್ರವಾಸೋದ್ಯಮದಿಂದ ಒಟ್ಟು 62 ಬಿಲಿಯನ್ ಧೀರಹಂ ಆದಾಯ ನಿರೀಕ್ಷೆ ಇದೆ ಹಾಗೂ 2.55 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
Numbeo Safety Index ಪ್ರಕಾರ ಅಬುಧಾಬಿ ಕಳೆದ 9 ವರ್ಷಗಳಿಂದ ವಿಶ್ವದ ಅಗ್ರಗಣ್ಯ ಸುರಕ್ಷಿತ ನಗರ ಎಂಬ ಪಟ್ಟಿಯನ್ನು ಕಾಯ್ದುಕೊಂಡಿದ್ದು, ಈ ಹೊಸ ತಂತ್ರಜ್ಞಾನದಿಂದ ಈ ಪಟ್ಟಿಗೆ ಮತ್ತಷ್ಟು ಬಲ ಬರುತ್ತದೆ ಎಂಬ ವಿಶ್ವಾಸವಿದೆ.
“ಅತಿಥಿಗಳ ಅನುಭವವನ್ನು ಸುಧಾರಿಸುವುದಲ್ಲದೆ, ಹೋಟೆಲ್ ಉದ್ಯೋಗಿಗಳಿಗೂ ಹೆಚ್ಚಿನ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಮುಂದುವರೆದಿದೆ. ನಮ್ಮ ಹೋಟೆಲ್ ಪಾಲುದಾರರು ಹಾಗೂ ರಾಷ್ಟ್ರಿಯ ಸಂಸ್ಥೆಗಳೊಂದಿಗೆ ಸಹಕಾರದ ಮೂಲಕ, ನಾವು ಪ್ರವಾಸಿಗರಿಗೆ ಸ್ಮಾರ್ಟ್, ಭದ್ರ ಮತ್ತು ಸುಗಮವಾದ ಅನುಭವ ಒದಗಿಸಲು ಬದ್ಧರಾಗಿದ್ದೇವೆ,” ಎಂದು DCT ಅಬುಧಾಬಿಯ ಪ್ರವಾಸೋದ್ಯಮ ನಿರ್ದೇಶಕ ಸಲೆಹ್ ಮೊಹಮ್ಮದ್ ಅಲ್ ಗೆಜಿನಿ ಹೇಳಿದ್ದಾರೆ.