ದಕ್ಷಿಣ ಕಾಶಿಯಲ್ಲಿ ದಕ್ಷನ ಗಡ್ಡ!
ಕೊಟ್ಟಿಯೂರ್ ಉತ್ಸವಕ್ಕೆ ಭೇಟಿ ನೀಡಿದಾಗ, ಅಂಗಡಿಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಈ ಬಿಳಿ ಹೂವುಗಳು ನೇತುಹಾಕಿರುವುದನ್ನು ಕಾಣಬಹುದಾಗಿದೆ. ಈ ಹೂವಿನ ಹೆಸರು ಓಡಪೂವು. ಈ ಉತ್ಸವಕ್ಕೆ ಬಂದು ಈ ಹೂವುಗಳನ್ನು ಕೊಂಡು ಮನೆಗೆ ವಾಪಸಾಗುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
- ರಕ್ಷಿತಾ ಕರ್ಕೇರ
ಸೋಷಿಯಲ್ ಮೀಡಿಯಾ ತೆರೆದರೆ ಸಾಕು ಕನಿಷ್ಠ 10 ಕಂಟೆಂಟ್ ಗಳಾದರೂ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕೇರಳದ ಕೊಟ್ಟಿಯೂರು ದೇಗುಲಕ್ಕೆ ಸಂಬಂಧಿಸಿದ್ದಾಗಿರುತ್ತವೆ. ವರ್ಷದಲ್ಲಿ ಕೇವಲ 28 ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಈ ದೇಗುಲ ಪ್ರಕೃತಿ ನಡುವೆ ಆರಾಧಿಸಲ್ಪಡುವ ಪವಿತ್ರ ಕ್ಷೇತ್ರ. ಸುತ್ತ ನೀರು, ತಲೆ ಎತ್ತಿ ನೋಡಿದರೆ ಬರೀ ಕಾಡು. ಕಿವಿಗೊಟ್ಟು ಕೇಳಿದರೆ ಕೇಳಿಸುವ ಪಕ್ಷಿಗಳ ಕಲರವ, ಯಾವುದೇ ಆಡಂಬರ, ವೈಭೋಗ ಇಲ್ಲದ ಕೇವಲ ಹುಲ್ಲಿನಿಂದ ನಿರ್ಮಿತ ಪುಟ್ಟ ಗುಡಿಸಿಲಂತಿರುವ ದೇಗುಲ, ಹೀಗೆ ಹಲವು ವಿಶೇಷತೆಗಳಿಂದ ತುಂಬಿರುವ ಕೊಟ್ಟಿಯೂರು ಕ್ಷೇತ್ರದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೊಟ್ಟಿಯೂರು ಉತ್ಸವ ಮತ್ತು ಪೂಜೆ ಪುನಸ್ಕಾರಗಳಿಂದಾಚೆಗೆ ದೇವಾಲಯದ ಬಗ್ಗೆ ಉಲ್ಲೇಖಿಸಲು ಹಲವು ವಿಷಯಗಳಿವೆ. ಅದರಲ್ಲೊಂದು ಅಚ್ಚರಿಯ ಸಂಗತಿ ’ಓಡಪೂವು’.

ಕೊಟ್ಟಿಯೂರ್ ಉತ್ಸವಕ್ಕೆ ಭೇಟಿ ನೀಡಿದಾಗ, ಅಂಗಡಿಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಈ ಬಿಳಿ ಹೂವುಗಳು ನೇತುಹಾಕಿರುವುದನ್ನು ಕಾಣಬಹುದಾಗಿದೆ. ಈ ಹೂವಿನ ಹೆಸರು ಓಡಪೂವು. ಈ ಉತ್ಸವಕ್ಕೆ ಬಂದು ಈ ಹೂವುಗಳನ್ನು ಕೊಂಡು ಮನೆಗೆ ವಾಪಸಾಗುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಈ ಓಡಪೂವುಗಳನ್ನು ಪ್ರಸಾದವಾಗಿ ಏಕೆ ನೀಡಲಾಗುತ್ತದೆ ಎಂಬುದು ನಿಮಗೆ ಗೊತ್ತೇ? ಇದರ ಹಿಂದೆ ಹಲವಾರು ನಂಬಿಕೆಗಳಿವೆ.
ಕೊಟ್ಟಿಯೂರಿನಲ್ಲಿ ನಡೆದಿದೆ ಎಂದು ನಂಬಲಾದ ದಕ್ಷ ಯಜ್ಞದ ಕಥೆ ನಮಗೆ ಗೊತ್ತಿರುತ್ತದೆ.. ಪರಶಿವನ ವಿರೋಧದ ನಡುವೆಯೇ ತನ್ನ ತಂದೆ ದಕ್ಷ ನಡೆಸಿದ ಯಜ್ಞಕ್ಕೆ ಬಂದಾಗ ಸತಿ ತನ್ನ ಪತಿಗಾದ ಅವಮಾನದಿಂದ ಬೇಸರಗೊಂಡು ಯಜ್ಞ ಕುಂಡಕ್ಕೆ ಹಾರಿ ಪ್ರಾಣವನ್ನೇ ತ್ಯಜಿಸುತ್ತಾಳೆ. ಕೈಲಾಸದಲ್ಲಿ ಧ್ಯಾನಿಸುತ್ತಿದ್ದ ಶಿವನು ಇದನ್ನು ಕೇಳಿ ಕೋಪಗೊಳ್ಳುತ್ತಾನೆ. ಉಗ್ರ ಕೋಪದಲ್ಲಿ ಶಿವನು ತನ್ನ ಜಟೆಯಿಂದ ವೀರಭದ್ರನನ್ನು ಸೃಷ್ಟಿಸುತ್ತಾನೆ. ಉಗ್ರ ಸ್ವರೂಪಿ ವೀರಭದ್ರ ದಕ್ಷನ ತಲೆ ಕಡಿದು ಆತನ ಗಡ್ಡವನ್ನು ಕಿತ್ತು ಎಸೆಯುತ್ತಾನೆ. ಹಾಗೆ ಅವನು ಎಸೆದ ಗಡ್ಡವು ಈ ಓಡಪೂವಾಗಿ ಬದಲಾಯಿತು ಎಂಬ ಪ್ರತೀತಿ ಇದೆ.
ಇತರ ಕೆಲವು ನಂಬಿಕೆಗಳ ಪ್ರಕಾರ, ದಕ್ಷ ಯಜ್ಞವನ್ನು ಮುನ್ನಡೆಸಿದ ಭೃಗು ಮಹರ್ಷಿ ಮತ್ತು ಅವನೊಂದಿಗಿದ್ದ ಇತರ ಋಷಿಗಳ ಗಡ್ಡವನ್ನು ವೀರಭದ್ರ ಮತ್ತು ಇತರ ರಾಕ್ಷಸರು ಕಿತ್ತು ಎಸೆಯುತ್ತಾರೆ. ಈ ಗಡ್ಡಗಳೇ ಓಡಪೂವುಗಳಾಗಿ ಬದಲಾದವು ಎಂದೂ ಹೇಳಲಾಗುತ್ತದೆ.

ಓಡಪೂವು ತಯಾರಿಸುವುದು ಹೇಗೆ?
ಓಡಪೂವುಗಳನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಇದನ್ನು ಮಾಡಲು ಬೇಕಾದ ಬಿದಿರಿನ ತುಂಡುಗಳನ್ನು ಕೊಟ್ಟಿಯೂರು ಪ್ರದೇಶಗಳಿಂದ ಮತ್ತು ವಯನಾಡಿನ ಪಕ್ಕದಲ್ಲಿರುವ ಅರಣ್ಯ ಗಡಿಯಿಂದ ತರಲಾಗುತ್ತದೆ. ಕೊಟ್ಟಿಯೂರು ಉತ್ಸವದ ಸಂದರ್ಭದಲ್ಲಿ ಈ ಬಿದಿರನ್ನು ಕತ್ತರಿಸಲು ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ನೀಡಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಜೊಂಡುಗಳನ್ನು ನಿರ್ದಿಷ್ಟ ಗಾತ್ರಕ್ಕೆ ಕತ್ತರಿಸಿ ನೀರಿನಲ್ಲಿ ಇಡಲಾಗುತ್ತದೆ. ನಂತರ ಅವುಗಳನ್ನು ಪುಡಿಮಾಡಿ, ಮೊಳೆಗಳಿರುವ ಬಾಚಣಿಗೆಯಿಂದ ಬಾಚಲಾಗುತ್ತದೆ. ಹೂವಿನ ಆಕಾರ ನೀಡಿ ಮತ್ತೆ ನೀರಿನಲ್ಲಿ ಇಡಲಾಗುತ್ತದೆ. ಹೀಗೆ ಮಾಡದಿದ್ದರೆ ಓಡಪೂವು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ, ಅದನ್ನು ನೀರಿನಿಂದ ಹೊರತೆಗೆದು, ಸ್ವಚ್ಛಗೊಳಿಸಿ ಹೂವಿನ ರೂಪಕ್ಕೆ ತರಲಾಗುತ್ತದೆ. ವಿಚಿತ್ರ ಎಂದರೆ ಈ ಕ್ಷೇತ್ರವಲ್ಲದೇ ಬೇರೆಲ್ಲಿಯೂ ನೀವು ಈ ಓಡಪೂವನ್ನು ತಯಾರಿಸಲು ಜಪ್ಪಯ್ಯ ಅಂದ್ರೂ ಸಾಧ್ಯವಿಲ್ಲವಂತೆ!
ಕೊಟ್ಟಿಯೂರಿನಿಂದ ಪಡೆದ ಓಡಪೂವನ್ನು ಮನೆಗಳಲ್ಲಿ ಮತ್ತು ವಾಹನಗಳಲ್ಲಿ ನೇತುಹಾಕುವ ಸಂಪ್ರದಾಯವಿದೆ. ಹಾಗೆ ಮಾಡುವುದರಿಂದ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಕೊಟ್ಟಿಯೂರಿಗೆ ಭೇಟಿ ನೀಡುವವರು, ಅಲ್ಲಿಗೆ ಹೋಗಲು ಸಾಧ್ಯವಾಗದವರಿಗೆ ಓಡಪೂವನ್ನು ತಂದು ಕೊಡುವ ಸಂಪ್ರದಾಯವೂ ಇದೆ. ಇನ್ನು ತಾನು ಅನುಭವಿಸಿದ ನೋವು ತನ್ನ ಭಕ್ತರಿಗೆ ಬಾರದಿರಲಿ ಎಂದು ಪರಶಿವನೇ ರಕ್ಷಣೆಯಾಗಿ ನೀಡುವ ಪ್ರಸಾದವಂತೆ ಈ ಓಡಪೂವು!