ಮಣ್ಣಿನ ಬೊಂಬೆಯ ಹರಕೆಯನ್ನು ಅರ್ಪಿಸುವ ಅಪರೂಪದ ದೇವಾಲಯವೊಂದು ಬೆಳ್ತಂಗಡಿ ತಾಲೂಕಿನ ಸುರ್ಯದಲ್ಲಿದೆ. ಶಾಸನಗಳಲ್ಲಿ ಈ ಗ್ರಾಮವನ್ನು ಸುರಾಯ ಎಂದು ಕರೆಯಲಾಗಿದೆ. ಸುರ್ಯ ದೇವಾಲಯದ ನಂದಿ ಪೀಠದಲ್ಲಿ ಒಂದು ಶಾಸನವಿದೆ. ಇದರಲ್ಲಿ ಪಿಂಗಲ ನಾಮ ಸಂವತ್ಸರದಲ್ಲಿ ನಾರಾಯಣ ಸೇನ ಬೋಪ ಎನ್ನುವವರು ಈ ದೇವಾಲಯದಲ್ಲಿ ನಂದಿಕೇಶ್ವರನನ್ನು ಪ್ರತಿಷ್ಠಾಪಿಸಿದ ಉಲ್ಲೇಖವಿದೆ.

ಇದನ್ನೂ ಓದಿ: ಫೇವಾ ದಡದಲ್ಲಿ ಫೇಮಸ್‌ ಬಾರಾಹಿ ಆರತಿ

ಸ್ಥಳ ಪುರಾಣ

ಒಮ್ಮೆ ಮಹಿಳೆಯೊಬ್ಬಳು ತನ್ನ ಮಗ ಸುರೆಯನ ಜತೆ ಕಾಡಿಗೆ ಸೊಪ್ಪು ತರಲು ಹೋಗುತ್ತಾಳೆ. ಸೊಪ್ಪು ಕಡಿಯುವಾಗ ಕತ್ತಿ ಶಿವಲಿಂಗಕ್ಕೆ ತಾಗಿ ರಕ್ತ ಚಿಮ್ಮಿತು. ಅವಳಿಂದ ಶಿವಲಿಂಗ ಕಾಣಿಸಿದ ಕಾರಣ ಆ ಶಿವಲಿಂಗಕ್ಕೆ ಸುರ್ಯ ಎಂಬ ಹೆಸರು ಬಂತು ಎಂದು ನಂಬಲಾಗಿದೆ. ನಂತರ ಶಿವಲಿಂಗ ಸಿಕ್ಕ ಸ್ಥಳದ ಪಕ್ಕದಲ್ಲೇ ದೇವಾಲಯ ನಿರ್ಮಾಣವಾಯಿತು ಎನ್ನಲಾಗಿದೆ. ಈ ಘಟನೆ ನಡೆದ ಸ್ಥಳ ದೇವಾಲಯದ ಉತ್ತರಕ್ಕೆ ಸುಮಾರು 100 ಮೀಟರ್ ದೂರದಲ್ಲಿದೆ. ಅಲ್ಲಿ ಮೂಲ ಶಿವಲಿಂಗಗಳು ಇನ್ನು ಇವೆ. ಇಲ್ಲಿ ಬೃಗು ಮಹರ್ಷಿ ಶಿಷ್ಯರೊಬ್ಬರು ತಪಸ್ಸು ಮಾಡಿದ್ದು, ಅವರ ತಪಸ್ಸಿಗೆ ಒಲಿದು ಶಿವ ಪಾರ್ವತಿಯರು ಲಿಂಗ ರೂಪದಲ್ಲಿ ಇಲ್ಲಿ ನೆಲೆಸಿದರು ಎನ್ನಲಾಗಿದೆ. ಮೂಲ ಲಿಂಗಕ್ಕೆ ಈಗ ನಿತ್ಯ ಪೂಜೆ ನಡೆಯುತ್ತಿದೆ. ಭಕ್ತರು ಇಲ್ಲಿ ಹರಕೆ ಸಲ್ಲಿಸುತ್ತಾರೆ. ಇದನ್ನು ಹರಕೆ ಬನ ಎಂದು ಕರೆಯಲಾಗುತ್ತದೆ.

Untitled design (96)

ಶ್ರೀ ಸದಾಶಿವರುದ್ರ ದೇವಾಲಯ

ಇದು ಮತ್ತೆ ಮತ್ತೆ ಮರು ನಿರ್ಮಾಣವಾದ ದೇವಾಲಯ ಗರ್ಭಗುಡಿ, ಪೌಳಿ, ಪ್ರಾಕಾರ ಹೊಂದಿದ್ದು, ಗರ್ಭಗುಡಿಯಲ್ಲಿ ಸ್ಥಾನಿಕ ಭಂಗಿಯಲ್ಲಿರುವ ಸದಾಶಿವ ರುದ್ರ ದೇವರ ಶಿಲ್ಪವಿದೆ. ಸದಾಶಿವ ದೇವರಿಗೆ ನಿತ್ಯ ತ್ರಿಕಾಲ ಪೂಜೆಗಳು ನಡೆಯುತ್ತಿವೆ. ಗರ್ಭಗುಡಿಯ ನೈಋತ್ಯಕ್ಕೆ ಗಣಪತಿಯ ಸಾನಿಧ್ಯವಿದೆ. ಇಲ್ಲಿಯೂ ತ್ರಿಕಾಲ ಪೂಜೆ ನಡೆಯುತ್ತಿದ್ದು, ಪಂಚಪರ್ವ ದಿನಗಳಲ್ಲಿ ವಿಶೇಷ ಪೂಜೆಗಳಿರುತ್ತವೆ. ಹೊರಭಾಗದಲ್ಲಿ ದ್ವಜಸ್ಥಂಭವಿದೆ. ಪೌಳಿಯಲ್ಲಿ ಕೊಡಮಣಿತ್ತಾಯಿ ಮತ್ತು ಪಿಲಿಚಾಮುಂಡಿ ದೈವ ಸಾನಿಧ್ಯಗಳಿವೆ. ಜಾತ್ರೆಯ ಸಮಯದಲ್ಲಿ ದೈವಗಳಿಗೆ ಇಲ್ಲಿ ನೇಮೋತ್ಸವ ನಡೆಯುತ್ತದೆ. ದೇವಾಲಯ ಮುಂದೆ ನಾಗಬನವಿದೆ. ಹರಕೆ ಬನದ ದಾರಿಯಲ್ಲಿ ಸುಂದರವಾದ ಕಲ್ಯಾಣಿ ಇದ್ದು, ಜಾತ್ರೆಯ ಸಮಯದಲ್ಲಿ ಕೆರೆಕಟ್ಟೆ ಉತ್ಸವ ನಡೆಯುತ್ತದೆ.

ದೇವಾಲಯದ ವಿಶೇಷ ಎಂದರೆ ಮಣ್ಣಿನ ಹರಕೆಯ ಸಂಪ್ರದಾಯ. ಇಲ್ಲಿನ ಮೂಲ ದೇವರ ಹರಕೆಯ ಬನದಲ್ಲಿ, ಸಂಕಷ್ಟ ನಿವಾರಣೆಗೆ ಭಕ್ತರು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಪ್ರಾರ್ಥನೆ ಸಿದ್ದಿಯಾದಾಗ ಹರಕೆ ರೂಪದಲ್ಲಿ ಹಾವೆಮಣ್ಣಿನಲ್ಲಿ ಕುಲುಮೆಯಲ್ಲಿ ಬೇಯಿಸಿ ಮಾಡಿದ ಮಣ್ಣಿನ ಗೊಂಬೆಗಳನ್ನು ಅಕ್ಕಿ, ತೆಂಗಿನಕಾಯಿ ಮತ್ತು ದುಡ್ಡನ್ನು ದಕ್ಷಿಣೆ ಸ್ವರೂಪದಲ್ಲಿ ಸದಾಶಿವ ದೇವರಿಗೆ ಅರ್ಪಿಸುಲಾಗುತ್ತದೆ. ಹರಕೆಯ ಗೊಂಬೆಗಳನ್ನು ದೇವರಿಗೆ ಸಮರ್ಪಣೆ ಮಾಡಿದ ನಂತರ ಅರ್ಚಕರು ಮೂಲ ದೇವರ ಬಳಿ ಹರಕೆ ಗೊಂಬೆಗಳನ್ನು ಅರ್ಪಿಸುತ್ತಾರೆ. ಎಲ್ಲಾ ಸಮಸ್ಯೆಗಳಿಗೆ ಅನುಗುಣವಾಗಿ ಮಣ್ಣಿನ ಗೊಂಬೆಗಳಿವೆ. ಸಂತಾನಕ್ಕಾಗಿ ತೊಟ್ಟಿಲು, ಮದುವೆಗೆ ಗಂಡು-ಹೆಣ್ಣು, ವಿದ್ಯಾಭ್ಯಾಸಕ್ಕೆ ಪೆನ್ನು – ಪುಸ್ತಕ, ಆರೋಗ್ಯಕ್ಕೆ ವಿವಿಧ ಅಂಗಾಂಗಳು, ವಾಹನಕ್ಕೆ ವಾಹನ, ಪ್ರಾಣಿಗಳ ಹರಕೆಗೆ ಪ್ರಾಣಿಗಳು, ಬೆಳೆಗಾಗಿ ವಿವಿಧ ಮಾದರಿಗಳು, ಮನೆಗಾಗಿ ಮನೆಯ ಮಾದರಿಗಳನ್ನು ಕೊಡುವುದನ್ನು ಇಲ್ಲಿ ನೋಡಬಹುದು.

2003ರಲ್ಲಿ ಈ ದೇವಾಲಯವನ್ನು ನವೀಕರಣಗೊಳಿಸಿ ಬ್ರಹ್ಮಕಲಶೋತ್ಸವ ಮಾಡಲಾಯಿತು. ಸುರ್ಯಗತ್ತು ಕುಟಂಬದವರು 1911ರಿಂದ ದೇವಾಲಯವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಡಾ. ಸತೀಶ್ಚಂದ್ರ ಸುರ್ಯಗತ್ತು ಅವರು ಮೊಕ್ತೇಸರರಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಿತ್ಯ ಅನ್ನ ಸಂತರ್ಪಣೆ ಇಲ್ಲಿ ಇರುತ್ತದೆ. ವಿಶಾಲವಾದ ವಾಹನ ನಿಲುಗಡೆ ಇದೆ.

ದೇವಾಲಯಕ್ಕೆ ಪ್ರತಿ ವರ್ಷ ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮೀನ ಮಾಸದ ಶುದ್ಧ ನವಮಿಯಂದು ಪ್ರತಿಷ್ಟಾ ವರ್ಧಂತಿ ನಡೆಯುತ್ತದೆ. ದಶಮಿಯಂದು ದ್ವಜಾರೋಹಣದಿಂದ ಆರಂಭವಾಗಿ ಏಕಾದಶಿಯಂದು ವಸಂತಕಟ್ಟೆ ಉತ್ಸವ, ದ್ವಾದಶಿಯಂದು ಕೆರೆಕಟ್ಟೆ ಉತ್ಸವ, ತ್ರಯೋದಶಿಯಂದು ದರ್ಶನ, ಬಲಿ, ಉತ್ಸವ ಮತ್ತು ಚತುರ್ದಶಿಯಂದು ದ್ವಜಾವರೋಹಣ ಮತ್ತು ದೈವಗಳ ನೆಮೋತ್ಸವದೊಂದಿಗೆ ಸಂಪನ್ನಗೊಳ್ಳುತ್ತದೆ. ದೀಪಾವಳಿ ಸಮಯದಲ್ಲಿ ಬಲಿ ಮತ್ತು ಕಾರ್ತೀಕ ಮಾಸದಲ್ಲಿ ಕಾರ್ತೀಕ ದೀಪೋತ್ಸವ, ರಂಗ ಪೂಜೆ ನಡೆಯುತ್ತದೆ. ಯುಗಾದಿ, ಗಣೇಶ ಚತುರ್ಥಿ, ಅನಂತ ಚತುರ್ದಶಿಯ ಸಮಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ದೇವಾಲಯ ಪ್ರತಿದಿನ ಬೆಳಗ್ಗೆ 7:30-2 ಗಂಟೆಯವರೆಗೆ ಮತ್ತು ಸಂಜೆ 4-6:30ರವೆರೆಗೆ ತೆರೆದಿರುತ್ತದೆ.

Untitled design (97)

ಪೆರ್ಮಾಣು ಅನಂತನಾಥ ಬಸದಿ

ಸುರ್ಯದಿಂದ ಕೇವಲ ಒಂದು ಕಿಮೀ ದೂರದಲ್ಲಿನ ಈ ಪುರಾತನ ಬಸದಿ ಈಗ ನವೀಕರಣವಾಗುತ್ತಿದ್ದು ಸದ್ಯ ಅನಂತನಾಥ ತೀರ್ಥಂಕರರ ಲೋಹದ ಬಿಂಬವಿದೆ. ಕಾಣೆಯಾಗಿದ್ದ ಮೂಲ ಕರಿಶಿಲೆಯ ಬಿಂಬವೂ ಈಗ ಸಿಕ್ಕಿದ್ದು, ಬಸದಿ ನವೀಕರಣದ ನಂತರ ಇರಿಸಲಾಗುತ್ತದೆ. ಇಲ್ಲಿದ್ದ ಬಸದಿಯನ್ನು ರಾಣಿ ಭೈರಾದೇವಿ ಜೀರ್ಣೋದ್ದಾರ ಮಾಡುವುದನ್ನು ವಿರೋಧಿಸಿ ಸ್ಥಳೀಯರೇ ಪೂರ್ಣ ಮಾಡಿದರು ಎನ್ನಲಾಗಿದೆ. ಇಲ್ಲಿಂದ ಗಡಾಯಿಕಲ್ಲು ಪರ್ವತದ ನೋಟ ಸುಂದರವಾಗಿರುತ್ತದೆ.

ಗಡಾಯಿಕಲ್ಲು / ನರಸಿಂಹಘಡ

ಸುರ್ಯದಿಂದ ಹತ್ತಿರದಲ್ಲಿರುವ ಇದು ಅತ್ಯಂತ ಸುಂದರವಾದ ಮತ್ತು ಚಾರಣಕ್ಕೆ ಸವಾಲು ಒಡ್ಡುವ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರ ಇರುವ ಈ ಬೆಟ್ಟದಿಂದ ಪಶ್ಚಿಮ ಘಟ್ಟಗಳ ಅತ್ಯಂತ ಸುಂದರ ನೋಟಗಳನ್ನು ನೋಡಬಹುದು. ನರಸಿಂಹವರ್ಮ ಇಲ್ಲಿ ಕೋಟೆ ಕಟ್ಟಿದ ಕಾರಣ ಇದಕ್ಕೆ ನರಸಿಂಹ ಘಡ ಎಂಬ ಹೆಸರು ಬಂದಿದೆ. 1784ರಲ್ಲಿ ಟಿಪ್ಪು ವಶಪಡಿಸಿಕೊಂಡ ನಂತರ ತನ್ನ ತಾಯಿ ಜಮಾಲ್ ಬೀ ಹೆಸರಲ್ಲಿ ಇದನ್ನು ಜಮಲಾಬಾದ್ ಎಂದು ಕರೆದ. ಸುಮಾರು 2000ಕ್ಕೂ ಅಧಿಕ ಮೆಟ್ಟಿಲುಗಳನ್ನು ಕ್ರಮಿಸುವ ದಾರಿಯಲ್ಲಿ ಒಳಸುತ್ತಿನ ಕೋಟೆಗಳು ಪಾಳು ಬಿದ್ದಿವೆ. ಮೇಲಿನ ಭಾಗದಲ್ಲಿ ಬುರುಜ ಇದ್ದು ಟಿಪ್ಪುವಿನ ಕಾಲದ ಫಿರಂಗಿಯೂ ಇದೆ. ಪುರಾತತ್ವ ಇಲಾಖೆ ಅಧೀನದಲ್ಲಿರುವ ಈ ಬೆಟ್ಟಕ್ಕೆ ಬೆಳಗ್ಗೆ 6:30ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಪ್ರವೇಶ ಇರುತ್ತದೆ.