ತಾವಾಗಿಯೇ ಲ್ಯಾಂಡ್ ಆಗಬಲ್ಲವು?
ವಿಮಾನಗಳು ತಾವಾಗಿಯೇ ಲ್ಯಾಂಡ್ ಆಗಬಲ್ಲವು ಅಂದ್ರೆ ಅಚ್ಚರಿ ತರಬಹುದು. ಆದರೆ, ಈ ತಂತ್ರಜ್ಞಾನವು ಕಳೆದ ಹಲವಾರು ದಶಕಗಳಿಂದ ಅತ್ಯಂತ ಸದ್ದಿಲ್ಲದೆ ವಿಮಾನಯಾನ ಕ್ಷೇತ್ರ ದಲ್ಲಿ ಬಳಕೆಯಾಗುತ್ತಿದೆ. ದಟ್ಟವಾದ ಮಂಜು ಮುಸುಕಿದಾಗ ಅಥವಾ ಕಣ್ಣಿಗೆ ಏನೂ ಕಾಣಿಸ ದಂಥ ಪರಿಸ್ಥಿತಿಗಳಲ್ಲಿ ವಿಮಾನಗಳು ಹೇಗೆ ಸುರಕ್ಷಿತವಾಗಿ ಇಳಿಯುತ್ತವೆ? ಇದಕ್ಕೆ ಉತ್ತರವೇ ‘ಆಟೋಲ್ಯಾಂಡ್’ ಸಿಸ್ಟಮ್.
ವಿಮಾನಗಳು ತಾವಾಗಿಯೇ ಲ್ಯಾಂಡ್ ಆಗಬಲ್ಲವು ಅಂದ್ರೆ ಅಚ್ಚರಿ ತರಬಹುದು. ಆದರೆ, ಈ ತಂತ್ರಜ್ಞಾನವು ಕಳೆದ ಹಲವಾರು ದಶಕಗಳಿಂದ ಅತ್ಯಂತ ಸದ್ದಿಲ್ಲದೆ ವಿಮಾನಯಾನ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ದಟ್ಟವಾದ ಮಂಜು ಮುಸುಕಿದಾಗ ಅಥವಾ ಕಣ್ಣಿಗೆ ಏನೂ ಕಾಣಿಸದಂಥ ಪರಿಸ್ಥಿತಿಗಳಲ್ಲಿ ವಿಮಾನಗಳು ಹೇಗೆ ಸುರಕ್ಷಿತವಾಗಿ ಇಳಿಯುತ್ತವೆ? ಇದಕ್ಕೆ ಉತ್ತರವೇ ‘ಆಟೋಲ್ಯಾಂಡ್’ ಸಿಸ್ಟಮ್.
ಆಟೋಲ್ಯಾಂಡ್ ಎಂದರೇನು? ಆಟೋಲ್ಯಾಂಡ್ ಎಂಬುದು ಆಧುನಿಕ ವಿಮಾನಗಳಲ್ಲಿರುವ ಒಂದು ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಇದು ಪೈಲಟ್‌ನ ನೇರ ಹಸ್ತಕ್ಷೇಪವಿಲ್ಲದೆಯೇ ವಿಮಾನವನ್ನು ರನ್‌ವೇ ಮೇಲೆ ಇಳಿಸಲು ಅನುವು ಮಾಡಿಕೊಡುತ್ತದೆ. ಏರ್ ಬಸ್ A320 ಅಥವಾ ಬೋಯಿಂಗ್ 787 ಡ್ರೀಮ್‌ಲೈನರ್‌ನಂಥ ಆಧುನಿಕ ಜೆಟ್‌ಗಳು ಈ ವ್ಯವಸ್ಥೆಯನ್ನು ಹೊಂದಿವೆ.
ಇದು ಕೇವಲ ವಿಮಾನವನ್ನು ಕೆಳಕ್ಕೆ ಇಳಿಸುವುದಲ್ಲ, ಬದಲಿಗೆ ರನ್‌ವೇ ಮೇಲೆ ಸರಿಯಾದ ಜಾಗದಲ್ಲಿ ಚಕ್ರಗಳು ಸ್ಪರ್ಶಿಸುವಂತೆ ಮಾಡುವುದು ಮತ್ತು ವಿಮಾನವು ರನ್‌ವೇ ಮಧ್ಯದ ಇರುವಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ? ಆಟೋಲ್ಯಾಂಡ್ ಸಿಸ್ಟಮ್ ತನ್ನ ಕೆಲಸ ಮಾಡಲು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಎಂಬ ನೆಲದ ಮೇಲಿನ ರೇಡಿಯೋ ಬೀಕನ್‌ಗಳನ್ನು ಅವಲಂಬಿಸಿದೆ.
ಇದನ್ನೂ ಓದಿ: ವಿಮಾನದ ಹಿಂಭಾಗ ನೆಲಕ್ಕಪ್ಪಳಿಸಿದರೆ ?
ವಿಮಾನವು ರನ್‌ವೇಯ ಮಧ್ಯಭಾಗಕ್ಕೆ ಸರಿಯಾಗಿ ನೇರವಾಗಿದೆಯೇ ಎಂಬುದನ್ನು ಲೋಕ ಲೈಸರ್ ಖಚಿತಪಡಿಸುತ್ತದೆ. ವಿಮಾನವು ಯಾವ ಕೋನದಲ್ಲಿ ಮತ್ತು ಎಷ್ಟು ವೇಗದಲ್ಲಿ ಕೆಳಕ್ಕೆ ಇಳಿಯಬೇಕು ಎಂಬುದನ್ನು ಗ್ಲೈಡ್ ಸ್ಲೋಪ್ ನಿರ್ಧರಿಸುತ್ತದೆ. ವಿಮಾನವು ನೆಲದಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ರೇಡಿಯೋ ಅಲ್ಟಿಮೀಟರ್ ನಿಖರವಾಗಿ ಅಳೆಯುತ್ತಾ, ಇಳಿಯುವ ಕೊನೆಯ ಕ್ಷಣದಲ್ಲಿ ವೇಗವನ್ನು ಕಡಿಮೆ ಮಾಡುತ್ತದೆ.
ನಿಮ್ಮ ಕಾರನ್ನು ದಟ್ಟವಾದ ಮಂಜಿನಲ್ಲಿ, ಅತಿ ವೇಗವಾಗಿ ಹೋಗುತ್ತಿರುವಾಗ ಪಾರ್ಕಿಂಗ್ ಮಾಡುವುದನ್ನು ಕಲ್ಪಿಸಿಕೊಳ್ಳಿ. ನಿಮಗೆ ರಸ್ತೆ ಕಾಣಿಸದಿದ್ದರೂ ಕಾರು ತಾನಾಗಿಯೇ ಪಾರ್ಕ್ ಆದರೆ ಹೇಗಿರುತ್ತದೆ? ಆಟೋಲ್ಯಾಂಡ್ ಕೂಡ ಇದೇ ರೀತಿ ಕೆಲಸ ಮಾಡುತ್ತದೆ. ದಟ್ಟವಾದ ಮಂಜು ಅಥವಾ ಮಳೆಯ ಕಾರಣದಿಂದ ಪೈಲಟ್‌ಗಳಿಗೆ ರನ್‌ವೇ ಕಾಣಿಸದಿದ್ದಾಗ, ಈ ಸಿಸ್ಟಮ್ ವಿಮಾನವನ್ನು ಸುರಕ್ಷಿತವಾಗಿ ನೆಲಕ್ಕೆ ತರುತ್ತದೆ.
ವಿಮಾನವು ರನ್‌ವೇ ಮೇಲೆ ಇಳಿದ ತಕ್ಷಣ ‘ಆಟೋಬ್ರೇಕ್’ ವ್ಯವಸ್ಥೆಯು ಕಾರ್ಯಾರಂಭ ಮಾಡಿ ವಿಮಾನವನ್ನು ನಿಧಾನಗೊಳಿಸುತ್ತದೆ. ವಿಮಾನ ತಾನಾಗಿಯೇ ಇಳಿಯುತ್ತದೆ ಎಂದಾಕ್ಷಣ ಪೈಲಟ್‌ಗಳು ಸುಮ್ಮನೆ ಕುಳಿತಿರುತ್ತಾರೆ ಎಂದು ಭಾವಿಸಬೇಡಿ.

ಆಟೋಲ್ಯಾಂಡ್ ಸಮಯದಲ್ಲಿ ಪೈಲಟ್‌ಗಳ ಜವಾಬ್ದಾರಿ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಪೈಲಟ್‌ಗಳು ಪ್ರತಿಯೊಂದು ಕಂಪ್ಯೂಟರ್ ಮತ್ತು ಸಂವೇದಕಗಳ (ಸೆನ್ಸರ್) ಮೇಲೆ ಕಣ್ಣಿಟ್ಟಿರುತ್ತಾರೆ. ಆಟೋಲ್ಯಾಂಡ್ ಕೆಲಸ ಮಾಡಬೇಕಾದರೆ ವಿಮಾನದ ಕನಿಷ್ಠ 3 ಕಂಪ್ಯೂಟರ್ ಗಳು ಮತ್ತು ಸಂವೇದಕಗಳು ಒಂದೇ ರೀತಿಯ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಒಂದು ಕಂಪ್ಯೂಟರ್ ಸ್ವಲ್ಪ ಭಿನ್ನವಾದ ಮಾಹಿತಿ ನೀಡಿದರೂ, ಆಟೋ ಲ್ಯಾಂಡ್ ಸಿಸ್ಟಮ್ ತಕ್ಷಣವೇ ಆಫ್ ಆಗುತ್ತದೆ.
ಅಂಥ ಸಮಯದಲ್ಲಿ ಪೈಲಟ್ʼಗಳು ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಉತ್ತಮವೇ? ಪೈಲಟ್‌ಗಳು ಸೋಮಾರಿಗಳಾದ ಕಾರಣ ಆಟೋಲ್ಯಾಂಡ್ ಮಾಡಿಸುವುದಿಲ್ಲ.
ಬದಲಿಗೆ, ಕೆಲವು ಸನ್ನಿವೇಶಗಳಲ್ಲಿ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ನಿಖರವಾಗಿ ಕೆಲಸ ಮಾಡುತ್ತವೆ. ಮನುಷ್ಯರಿಗೆ ದೃಷ್ಟಿ ಭ್ರಮೆಯಾಗಬಹುದು (Visual illusions). ಆದರೆ ಕಂಪ್ಯೂಟರ್‌ಗಳಿಗೆ ಡೇಟಾ ಮುಖ್ಯ. ಒಂದೇ ರೀತಿಯ ಕೆಲಸವನ್ನು ಸಾವಿರಾರು ಬಾರಿ ಯಾವುದೇ ತಪ್ಪಿಲ್ಲದೆ ಮಾಡಲು ಕಂಪ್ಯೂಟರ್‌ಗಳು ಹೆಚ್ಚು ಸಮರ್ಥವಾಗಿವೆ.
ತೀವ್ರವಾದ ಗಾಳಿ ಅಥವಾ ಅತಿ ಕಡಿಮೆ ಬೆಳಕು ಇದ್ದಾಗ, ಆಟೋಲ್ಯಾಂಡ್ ವ್ಯವಸ್ಥೆಯು ವಿಮಾನದ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಆಟೋಲ್ಯಾಂಡ್ ಯಾವಾಗ ಬಳಸುತ್ತಾರೆ? ಎಲ್ಲ ಲ್ಯಾಂಡಿಂಗ್‌ಗಳೂ ಆಟೋಲ್ಯಾಂಡ್ ಆಗಿರುವುದಿಲ್ಲ.
ಶೇ.90ಕ್ಕೂ ಹೆಚ್ಚು ಬಾರಿ ಪೈಲಟ್‌ಗಳೇ ವಿಮಾನವನ್ನು ಮ್ಯಾನುಯಲ್ ಆಗಿ ಇಳಿಸುತ್ತಾರೆ. ಹವಾಮಾನ ತೀರಾ ಹದಗೆಟ್ಟಾಗ ಅಥವಾ ವಿಮಾನ ನಿಲ್ದಾಣದ ನಿಯಮಗಳ ಪ್ರಕಾರ ಮಾತ್ರ ಇದನ್ನು ಬಳಸಲಾಗುತ್ತದೆ. ಅಲ್ಲದೇ, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಇರುವುದಿಲ್ಲ; ಅತ್ಯಾಧುನಿಕ ಸೌಲಭ್ಯವಿರುವ ನಿಲ್ದಾಣಗಳಲ್ಲಿ ಮಾತ್ರ ಇದು ಸಾಧ್ಯ. ವಿಮಾನ ಯಾನದ ಅದ್ಭುತಗಳಲ್ಲಿ ಆಟೋಲ್ಯಾಂಡ್ ಕೂಡ ಒಂದು. ಇದು ಮನುಷ್ಯನ ಬುದ್ಧಿವಂತಿಕೆ ಮತ್ತು ಕಂಪ್ಯೂಟರ್‌ನ ನಿಖರತೆಯ ಸಮ್ಮಿಶ್ರಣವಾಗಿದೆ.