• ಅನಂತ್‌ ಹರಿತ್ಸ

ಕ್ಯಾಮೆರಾವನ್ನು ತೆಗೆದು ಕೊಂಡು ಕ್ಲಿಕ್ ಮಾಡುವ ಮೊದಲು ಬಹಳಷ್ಟು ತಾಂತ್ರಿಕ ವಿಚಾರಗಳನ್ನು ತಿಳಿದಿರಬೇಕಾಗುತ್ತದೆ. ಚಿತ್ರವನ್ನು ಸಹಜವಾದ ಬಣ್ಣದಲ್ಲಿ ಮೂಡಿಸಲು ಇರುವ ಮುಖ್ಯ ಸೆಟ್ಟಿಂಗ್ ʼವೈಟ್ ಬ್ಯಾಲೆನ್ಸ್ʼ. ಕ್ಯಾಮೆರಾದ ಫಂಕ್ಷನ್ ಕೀಯನ್ನು ಒತ್ತಿದಾಗ ಈ ಸೆಟ್ಟಿಂಗ್ ಕಾಣುತ್ತವೆ. ಇದು ನಾವು ಸೆರೆಹಿಡಿಯುವ ಸ್ಥಳದ/ವ್ಯಕ್ತಿಯ ದೇಹದ ಬಣ್ಣದ ಉಷ್ಣಾಂಶ ಎಷ್ಟು ಎನ್ನುವುದನ್ನು ಕ್ಯಾಮೆರಾಕ್ಕೆ ತಿಳಿಸುವುದು. ಸ್ಥಳದ ಬಣ್ಣ ಎಂದರೆ ಉದಾಹರಣೆಗೆ ನಾವು ಒಂದು ಸ್ಥಳದಲ್ಲಿ ಚಿತ್ರ ಸೆರೆ ಹಿಡಿಯುವಾಗ ಅಲ್ಲಿನ ದೀಪಗಳು ಹಳದಿ ಬಣ್ಣದ್ದಾಗಿದ್ದರೆ ಆ ಸ್ಥಳದ ಕಲರ್‌ ಟೆಂಪರೇಚರನ್ನು ವಾರ್ಮ್‌ ವೈಟ್ ಎಂದು ಕರೆಯುತ್ತೇವೆ. ಅದೇ ಜಾಗದಲ್ಲಿ ಟ್ಯೂಬ್ ಲೈಟ್ ನಂಥ ಬೆಳಕಿದ್ದರೆ ಅದನ್ನು ಕೂಲ್ ವೈಟ್ ಎನ್ನುತ್ತೇವೆ. ಅಂಥ ಸ್ಥಳಕ್ಕೆ ಸರಿಯಾಗಿ ನಾವು ವೈಟ್ ಬ್ಯಾಲೆನ್ಸ್ ಸೆಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಆಕ್ಷನ್ ಕ್ಯಾಮೆರಾ- ನಿಮ್ಮ ಪ್ರಯಾಣದ ಸಂಗಾತಿ

ಕಲರ್ ಟೆಂಪರೇಚರ್ 1000 ದಿಂದ 10000 ಕೆಲ್ವಿನ್‌ವರೆಗೆ ವಿವಿಧ ಸಂಖ್ಯೆಯಲ್ಲಿರುತ್ತದೆ. 2000 ಬಂಗಾರ ಹಳದಿ ಬಣ್ಣವಾಗಿದ್ದರೆ 10000 ಕೆಲ್ವಿನ್ ನೀಲಿಯ ಬಣ್ಣದ್ದಾಗಿರುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ನಾವು ಕಲರ್ ಟೆಂಪರೇಚರನ್ನು ಸೆಟ್ ಮಾಡಿಕೊಳ್ಳಬೇಕಾಗುತ್ತದೆ.

Untitled Design - 2026-11-24T122709.855

ಸಾಮಾನ್ಯವಾಗಿ ಬರಿಯ ಟ್ಯೂಬ್ ಲೈಟ್ ನಂಥ ಬೆಳಕು (ಕೂಲ್‌ ವೈಟ್) ಇರುವ ಪ್ರದೇಶದಲ್ಲಿ ಚಿತ್ರ ಸೆರೆಹಿಡಿಯುವಾಗ 4500- 4700 ಕೆಲ್ವಿನ್‌ನಿಂದ ಸೆಟ್ಟಿಂಗ್ ಮಾಡಬಹುದು. ಅದು ಅಲ್ಲಿನ ಬೆಳಕಿನ ತೀವ್ರತೆಯ ಮೇಲೆ ನಿರ್ಧಾರವಾಗುತ್ತದೆ. ನೀವು ಕ್ಯಾಮೆರಾಗೆ ಸ್ಥಳದ ಕಲರ್ ಏನಿದೆ ಎಂಬುದನ್ನು ತಿಳಿಸಬೇಕು. ಸ್ಥಳದ ಬಣ್ಣ 4700 ಕೆಲ್ವಿನ್ ಇದೆ ಅಂದುಕೊಳ್ಳೋಣ. ಆಗ 4700 ಕೆಲ್ವಿನ್ ಸೆಟ್ ಮಾಡಿದರೆ ಮಾತ್ರ ನೀವು ಸೆರೆಹಿಡಿಯುವ ಚಿತ್ರ ಸಹಜ ಬಣ್ಣದಲ್ಲಿ ಮೂಡಿ ಬರುತ್ತದೆ. ನೀವು ಕೆಲ್ವಿನ್ ಸಂಖ್ಯೆಯನ್ನು ಕಡಿಮೆ ಮಾಡುತ್ತ ಬಂದಷ್ಟು ಕ್ಯಾಮೆರಾದಲ್ಲಿ ಸ್ಥಳದ ಚಿತ್ರ ನೀಲಿ ಬಣ್ಣದಲ್ಲಿ ಕಾಣುತ್ತದೆ. ಜಾಸ್ತಿ ಮಾಡಿದಷ್ಟು ಸ್ಥಳದ ಬಣ್ಣ ಹಳದಿಯಾಗಿ ಕ್ಯಾಮೆರಾದಲ್ಲಿ ಕಾಣುತ್ತದೆ. ಬಹಳ ಸಿಂಪಲ್ ಆಗಿ ಹೇಳಬೇಕೆಂದರೆ ಹಳದಿ ದೀಪಗಳು ಇರುವ ಜಾಗದಲ್ಲಿ ಬಿಳಿಯ ಕಾಗದ ಹಳದಿಯಾಗಿಯೇ ಕಾಣುತ್ತದೆಯಲ್ಲವೇ? ಆಗ ನಾವು ಕ್ಯಾಮೆರಾಗೆ ಅದು ಹಳದಿ ಕಾಗದವಲ್ಲ ಬಿಳಿಯ ಕಾಗದವೆಂದು ಹೇಳಬೇಕು. ಅದುವೆ ವೈಟ್ ಬ್ಯಾಲೆನ್ಸ್. ಇದನ್ನು ಸ್ಥಳಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ಅಂದರೆ ನೀವು ಒಂದೇ ಕಾರ್ಯಕ್ರಮದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರ ಸೆರೆಹಿಡಿಯಬೇಕಾದಾಗ ಪ್ರತಿ ಸ್ಥಳದ ದೀಪಗಳ ಬಣ್ಣಕ್ಕೆ ವೈಟ್ ಬ್ಯಾಲೆನ್ಸ್ ಸೆಟ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಒಂದು ಚಿತ್ರವು ಹಳದಿಯಾಗಿ, ಇನ್ನೊಂದು ನೀಲಿಯಾಗಿ ಬರುತ್ತದೆ. ‌

ವೈಟ್‌ ಬ್ಯಾಲೆನ್ಸ್‌ ಸೆಟ್ಟಿಂಗ್‌ನಲ್ಲಿ ಬೇರೆ ಬೇರೆ ಕೆಲ್ವಿನ್‌ ಸಂಖ್ಯೆಯಲ್ಲಿ ಇದನ್ನು ಪ್ರಯೋಗಿಕವಾಗಿ ಪದೇಪದೆ ಮಾಡಿದಷ್ಟೂ ನಿಮಗೆ ಅದರ ಹಿಡಿತ ಸಿಗುತ್ತದೆ.

ಕ್ಯಾಮೆರಾದಲ್ಲಿ ಇದರ ಪ್ರೀ ಸೆಟ್ಟಿಂಗ್‌ಗಳು ಇದೆ. AWB (Auto White Balance) ಡೇ ಲೈಟ್, ಶೇಡ್, ಕ್ಲೌಡಿ, ಟಂಗ್‌ಸ್ಟನ್ – ಇನ್ಕ್ಯಾಂಡಿಸೆಂಟ್ (ಹಳದಿ ದೀಪ), ವಾರ್ಮ್ ವೈಟ್, ಕೂಲ್ ವೈಟ್, ಡೇ ಲೈಟ್ ಇತ್ಯಾದಿ. ವೈಟ್ ಬ್ಯಾಲೆನ್ಸ್ ಜಾಸ್ತಿ ತಿಳಿಯದವರು ಇವುಗಳನ್ನು ಉಪಯೋಗಿಸಬಹುದು.

ವೈಟ್‌ ಬ್ಯಾಲೆನ್ಸ್‌ ಅನ್ನು ಸರಳವಾಗಿ ಸೆಟ್‌ ಮಾಡಲು ಲೆನ್ಸ್‌ನ ಹಿಂಬದಿಯ ಬೂದು ಬಣ್ಣದ ಕ್ಯಾಪ್‌ ಉಪಯೋಗಿಸಬಹುದು. ಕ್ಯಾಮೆರಾದಲ್ಲಿನ ವೈಟ್‌ ಬ್ಯಾಲೆನ್ಸ್‌ ಸೆಟ್ಟಿಂಗ್‌ನಲ್ಲಿಯ ಕಸ್ಟಮ್‌ ಸೆಟಪ್‌ನಿಂದ ಲೆನ್ಸ್‌ ಕ್ಯಾಪನ್ನು ಕ್ಲಿಕ್‌ ಮಾಡಿದರೆ ಸಾಕು. ಕ್ಯಾಮೆರಾ ತನ್ನಷ್ಟಕ್ಕೆ ತಾನೇ ಸ್ಥಳದ ಬಣ್ಣಕ್ಕೆ ಬ್ಯಾಲೆನ್ಸ್‌ ಮಾಡಿಕೊಳ್ಳುತ್ತದೆ.

ಒಂದೊಂದು ಕಂಪನಿಯ ಕ್ಯಾಮೆರಾದಲ್ಲೂ ಸೆಟ್ಟಿಂಗ್‌ ವಿಭಿನ್ನವಾಗಿದ್ದರೂ ಮೂಲ ತತ್ವ ಇದೇ ಆಗಿರುತ್ತದೆ. ವೈಟ್ ಬ್ಯಾಲೆನ್ಸ್‌ನಲ್ಲಿ ನೀವು ಎಕ್ಸ್‌ಪರ್ಟ್ ಆದಲ್ಲಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಬಹುದು.‌