Monday, June 16, 2025
Monday, June 16, 2025

ಇತರರನ್ನು ಮೆಚ್ಚಿಸಲು ಮಾಡುವ ಪ್ರವಾಸ ನಿರರ್ಥಕ!

ಲೈಕು ಕಾಮೆಂಟುಗಳ ಕಾಲ್ಪನಿಕ ಜಗತ್ತಿನಲ್ಲಿಯೇ ಬದುಕುತ್ತಿರುವ ಬಹುತೇಕ ಯುವಜನರು ಐಫೆಲ್ ಟವರ್ ಮುಂದೆ ನಿಂತರೂ ಅದನ್ನು ಸುಮ್ಮನೆ ಕಣ್ತುಂಬಿಸಿಕೊಳ್ಳದೇ ತಮ್ಮ ಮೊಬೈಲ್ನಿಂದಲೇ ನೋಡಿ ಮುಗಿಸಿ ಬಿಡುತ್ತಾರೆ!

  • ದೀಪಾ ಹಿರೇಗುತ್ತಿ

ಇದು ಪ್ರವಾಸದ ಯುಗ. ಹಿಂದೆಲ್ಲ ಕೆಲವೇ ಪುಣ್ಯಕ್ಷೇತ್ರಗಳಿಗೆ, ಸಂಬಂಧಿಕರ ಮನೆಗಳಿಗೆ ಮೀಸಲಾಗಿದ್ದ ಪ್ರವಾಸದ ಪರಿಭಾಷೆ ವರ್ಷದಿಂದ ವರ್ಷಕ್ಕೆ ವಿಸ್ತೃತವಾಗುತ್ತ ಸಾಗಿದೆ. ಒಂದಿಷ್ಟು ಸ್ಥಳಗಳನ್ನು ನೋಡಿ ಉಲ್ಲಸಿತರಾಗುವುದು, ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಆಪ್ತರ ಜತೆ ಸಮಯ ಕಳೆಯುವುದು, ದೈನಂದಿನ ದಿನಚರಿಯಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಮಡಿಲಲ್ಲಿ ಹುರುಪು ತುಂಬಿಕೊಳ್ಳುವುದು ಇವೆಲ್ಲವೂ ಪ್ರವಾಸಕ್ಕೆ ಹೋಗುವುದರ ಹಿಂದಿರುವ ಉದ್ದೇಶಗಳು. ಆದರೀಗ ಇದರಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾರಣ ಸಾಮಾಜಿಕ ಜಾಲತಾಣಗಳ ಪ್ರಭಾವ!

ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಪ್ರವಾಸದ ಪ್ರಮಾಣ ಏರುಗತಿಯಲ್ಲಿದೆ. ಅಲ್ಲಿ ಸಿಗುವ ಹೊಸ ಹೊಸ ಪ್ರವಾಸೀ ತಾಣಗಳ ಬಗ್ಗೆ ಮಾಹಿತಿ, ಪ್ರವಾಸ ಏರ್ಪಡಿಸುವ ಏಜೆನ್ಸಿಗಳ ವಿವರ, ಬೇರೆ ಪ್ರವಾಸಿಗರ ಅನುಭವ ಕಥನ ಎಲ್ಲವೂ ಜನರಿಗೆ ಪ್ರವಾಸ ಕೈಗೊಳ್ಳಲು ಸ್ಫೂರ್ತಿ ನೀಡುತ್ತವೆ. ಜನರನ್ನು ಪರಸ್ಪರ ಸಂಪರ್ಕಿಸುವ ಉದ್ದೇಶದಿಂದ ಪ್ರಾರಂಭವಾದ ಸಾಮಾಜಿಕ ಜಾಲತಾಣಗಳು ಗ್ಲೋಬಲ್‌ ವಿಲೇಜ್‌ ಎನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಿವೆ. ಒಂದು ಹಂತದವರೆಗೆ ಇದು ಒಳ್ಳೆಯದೇ. ಆದರೆ ಇದೇ ಸಾಮಾಜಿಕ ಜಾಲತಾಣಗಳ ಕಾರಣದಿಂದ ನಾವು ಪ್ರವಾಸ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆಯೇ ಎಂಬ ಅನುಮಾನ ಬರುತ್ತದೆ. ನಮ್ಮ ಮನಸ್ಸನ್ನು ಹಗುರಗೊಳಿಸಬೇಕಾದ ಪ್ರವಾಸ ಇಂದು ನಮ್ಮಲ್ಲಿ ಒತ್ತಡ ಸೃಷ್ಟಿಸುತ್ತಿದೆ. ವಿದೇಶಗಳಲ್ಲಿ ಸೃಷ್ಟಿಯಾಗಿರುವ ವೀಕೆಂಡ್‌ ಸಂಸ್ಕೃತಿ ನಮ್ಮಲ್ಲೂ ತೀವ್ರಗತಿಯಿಂದ ಹೆಚ್ಚುತ್ತಿದೆ. ಒಬ್ಬರು ಪ್ರವಾಸ ಹೋದರೆಂದು ಮತ್ತೊಬ್ಬರು, ಅವರ್ಯಾರೋ ಕಪ್ಪು ಮರಳಿನ ಸಮುದ್ರದಂಡೆಯಲ್ಲಿ ರೀಲ್ಸ್‌ ಮಾಡಿದರೆಂದು ಇವರು, ಮತ್ಯಾರೋ ಸ್ಕೂಬಾ ಡೈವಿಂಗಿನ ವಿಡಿಯೋ ಹಾಕಿದರೆಂದು ಇನ್ನೊಬ್ಬರು ಹೀಗೆ ನಮಗಿಷ್ಟದ ನಮಗೆ ಪ್ರಿಯವಾದ ಸಂಗತಿಗಳ ಬದಲು ಸುತ್ತಮುತ್ತಲಿನವರು ಕೂಲ್‌ ಅಂದುಕೊಳ್ಳುವ ಥರದ ಪ್ರವಾಸವನ್ನು ಹೆಚ್ಚು ಜನರು ಆಯ್ದುಕೊಳ್ಳುವ ಚಾಳಿ ಶುರುವಾಗಿದೆ. ಪ್ರವಾಸ ನಮಗಾಗಿ, ನಮ್ಮ ಸಂತೋಷಕ್ಕಾಗಿಯೇ ಹೊರತು ಬೇರೆಯವರಿಗಾಗಿ ಅಲ್ಲ ಎಂಬ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಸಾಮಾಜಿಕ ಜಾಲತಾಣದ ಟ್ರೆಂಡ್‌ ಅನ್ನು ಹಿಂಬಾಲಿಸಿ ಪ್ರವಾಸದ ಅರ್ಥವನ್ನೇ ಅಪಾರ್ಥ ಮಾಡಿಕೊಳ್ಳಲಾಗಿದೆ.

travel for impress

ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರು ಹಾಕುವ ಪ್ರವಾಸದ ಮಾಹಿತಿಯನ್ನು ನೋಡಿ ಅವರು ಪರಿಪೂರ್ಣ ಬದುಕನ್ನು ಬದುಕುತ್ತಿದ್ದಾರೆ ಎಂದು ಭ್ರಮಿಸುವವರು ತಾವೂ ಅದೇ ಭ್ರಮಾಲೋಕವನ್ನು ಸೃಷ್ಟಿಸಲು ಹೊರಡುತ್ತಾರೆ. ಈ ಫೊಟೋ, ರೀಲ್ಸ್‌ಗಳು ಎಲ್ಲವೂ ಚೆಂದವೇ. ನಮ್ಮ ಪ್ರವಾಸದ ಮಧುರ ಕ್ಷಣಗಳು ಅವುಗಳಲ್ಲಿ ಸೆರೆಯಾಗಿರುತ್ತವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸುವುದೂ ಸರಿಯೇ. ಸಮಸ್ಯೆ ಏನೆಂದರೆ ಈಗ ಪ್ರವಾಸವನ್ನು ಅನುಭವಿಸುವುದಕ್ಕಿಂತ ಯಾವ ರೀತಿ ಫೊಟೋ ತೆಗೆದರೆ, ಯಾವ ರೀತಿ ರೀಲ್ಸ್‌ ಮಾಡಿದರೆ ಹೆಚ್ಚು ಜನ ನೋಡಬಹುದು ಹೆಚ್ಚು ಮೆಚ್ಚುಗೆ ಬರಬಹುದು ಎಂಬ ಯೋಚನೆಯಲ್ಲಿಯೇ ಬಹಳಷ್ಟು ಪ್ರವಾಸಿಗರು ಇರುತ್ತಾರೆ. ಕ್ಷಣಾರ್ಧದಲ್ಲಿ ಹೊಚ್ಚಹೊಸತೂ ಹಳೆಯದಾಗುವ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಡಿಯೋ ವಿಶೇಷವಾಗಿರಬೇಕೆಂದು ಎಂತೆಂತಹ ಸಾಹಸಕ್ಕೆ ಮುಂದಾಗುತ್ತಾರೆಂಬುದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಸಮುದ್ರ ಜಲಪಾತಗಳ ಬಳಿ ವಿಶೇಷ ಭಂಗಿಯಲ್ಲಿ ನಿಂತು ಕುಳಿತು ವಿಡಿಯೋ ಮಾಡಲು ಹೋಗಿ ಅದೆಷ್ಟು ಮಂದಿ ನೀರು ಪಾಲಾಗಿದ್ದಾರೆ ಎಂಬ ಮಾಹಿತಿಯನ್ನು ಹುಡುಕಿದರೆ ಸಿಗುವ ರಾಶಿ ರಾಶಿ ದುರಂತ ಘಟನೆಗಳು ಪ್ರವಾಸ ಎಂಬುದನ್ನು ಹೇಗೆ ಜನರು ತೋರುಗಾಣಿಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಉದಾಹರಣೆ.

ಈ ತೋರಿಕೆಗಾಗಿಯೇ ತಮಗೆ ಇಷ್ಟದ ಸ್ಥಳಗಳಿಗೆ ಹೋಗುವುದನ್ನು ಬಿಟ್ಟು ಟ್ರೆಂಡ್‌ನಲ್ಲಿರುವ ಪ್ರವಾಸ ಆಯೋಜಿಸಿಕೊಳ್ಳುತ್ತಾರೆ. ಈ ಗಡಿಬಿಡಿಯಲ್ಲಿ ಹೋಗುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳದೇ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಯೋಚಿಸದೇ ಹೊರಟು ಅಪಾಯಕ್ಕೀಡಾಗುತ್ತಾರೆ. ನೀರು ಮತ್ತು ಬೆಟ್ಟ ಇವೆರಡಂತೂ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ದುರ್ಗಮ ಬೆಟ್ಟದಲ್ಲಿ ಚಾರಣ ಹೊರಟು ಹಾದಿ ತಪ್ಪುವ, ವಿಷಮ ವಾತಾವರಣದಿಂದ ಪ್ರಾಣ ಕಳೆದುಕೊಳ್ಳುವ ಅತ್ಯುತ್ಸಾಹಿಗಳಿಗೂ ಕೊರತೆಯಿಲ್ಲ. ಅಷ್ಟೇ ಅಲ್ಲ ಈ ಸ್ಕೂಬಾ ಡೈವಿಂಗ್‌, ಬಂಜೀ ಜಂಪ್‌ ಮುಂತಾದವುಗಳನ್ನು ಮಾಡಿ ವಿಡಿಯೋ ಹಾಕುವ ಒತ್ತಡವೂ ಯುವಜನರಲ್ಲಿರುತ್ತದೆ.

travel clip

ಕೆಲವರಂತೂ ತಾವು ಹೊರಟ ಘಳಿಗೆಯಿಂದ ವಾಪಾಸು ಬರುವವರೆಗೂ ಪ್ರತೀ ಗಂಟೆಯ ಮಾಹಿತಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಲೇ ಇರುತ್ತಾರೆ. ಪ್ರವಾಸದಲ್ಲಿ ಒಳ್ಳೆಯ ಆಹಾರ ಸೇವಿಸಿ, ಒಳ್ಳೆಯ ಸ್ಥಳಗಳನ್ನು ನೋಡಿ ಆನಂದಿಸುವ ಬದಲು ಪ್ರತೀ ಕ್ಷಣ ಅದರ ಡಾಕ್ಯಮೆಂಟೇಶನ್ನಿಗೆ ಕಾತರಿಸುತ್ತಿರುತ್ತಾರೆ. ವಿಮಾನ ಪ್ರಯಾಣವಾದರಂತೂ ಮುಗಿದೇ ಹೋಯಿತು, ವಿಮಾನನಿಲ್ದಾಣದೊಳಗೆ ಹೋಗುವುದರಿಂದ ತಾವು ವಾಪಸಾಗಿದ್ದೇವೆ ಅನ್ನುವವರೆಗೂ ನಿರಂತರವಾಗಿ ತಮ್ಮ ಪ್ರವಾಸದ ಸುದ್ದಿ ಬಿತ್ತರಿಸುತ್ತಿರುತ್ತಾರೆ. ಎಷ್ಟು ಬ್ಯುಸಿ ಇರುತ್ತಾರೆಂದರೆ ಅವರು ಮುಗುಳ್ನಗುವುದು ಫೊಟೋಗಾಗಿ ಪೋಸು ಕೊಡುವಾಗ ಮಾತ್ರ! ಲೈಕು ಕಾಮೆಂಟುಗಳ ಕಾಲ್ಪನಿಕ ಜಗತ್ತಿನಲ್ಲಿಯೇ ಬದುಕುತ್ತಿರುವ ಬಹುತೇಕ ಯುವಜನರು ಐಫೆಲ್‌ ಟವರ್‌ ಮುಂದೆ ನಿಂತರೂ ಅದನ್ನು ಸುಮ್ಮನೆ ಕಣ್ತುಂಬಿಸಿಕೊಳ್ಳದೇ ತಮ್ಮ ಮೊಬೈಲ್‌ನಿಂದಲೇ ನೋಡಿ ಮುಗಿಸಿ ಬಿಡುತ್ತಾರೆ!

ಇನ್ನು ಜನಪ್ರಿಯ ಸ್ಥಳಗಳಿಗೆ ಮಾತ್ರ ಹೋಗುವುದರಿಂದ ಅಲ್ಲಿ ಅಗತ್ಯಕ್ಕಿಂತ ಜಾಸ್ತಿ ಜನ ಬಂದು ಅಲ್ಲಿ ಭದ್ರತೆಯ, ಸೌಲಭ್ಯಗಳ ಸಮಸ್ಯೆಯಾಗುತ್ತದೆ. ಪ್ರವಾಸದ ಖುಷಿಯೇ ಸಿಗದಿರಬಹುದು. ಸ್ವಲ್ಪ ಸಂಶೋಧನೆ ನಡೆಸಿದರೆ ಕೈಗೆಟುಕುವ ಖರ್ಚಿನಲ್ಲಿ ನಮ್ಮ ಸುತ್ತ ಮುತ್ತ ಇರುವ ಸುಂದರ ಜಾಗಗಳಿಗೆ ಹೋಗಿ ಬರಬಹುದು. ಪದೇಪದೆ ಶೋಕಿಗಾಗಿ ಪ್ರವಾಸ ಹೋಗುವುದರಿಂದ ಹಣಕಾಸಿನ ತೊಂದರೆ ಉಂಟಾಗಬಹುದು. ಇದರರ್ಥ ದೂರ ಪ್ರವಾಸ ಬೇಡವೆಂದಲ್ಲ. ಕೊಂಚ ಕೊಂಚ ಹಣ ಕೂಡಿಟ್ಟು ನಮಗಿಷ್ಟದ ಜಾಗಕ್ಕೆ ನಮಗಾಗಿ ಹೋಗಿ ಬರುವ ಪ್ರವಾಸ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಇತರರನ್ನು ಮೆಚ್ಚಿಸಲು ಮಾಡುವ ಪ್ರವಾಸಗಳು ಮನಸ್ಸಿಗೆ ಪ್ರಯಾಸ. ಅಷ್ಟೇ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?