ವಯಸ್ಸಿನ ಜತೆಗೆ ಪಯಣದ ನಡೆ
ಗರ್ಲ್‌ಫ್ರೆಂಡ್, ಹೆಂಡತಿ, ಮಕ್ಕಳ, ಕುಟುಂಬದ ಜತೆಗೆ ಪ್ರಯಾಣಗಳು ವಿಭಿನ್ನ ರೀತಿಯವಾಗಿರುತ್ತವೆ. ಪ್ರಣಯದ ಮಧ್ಯೆ ತಿರುಗುವುದನ್ನೇ ಮರೆತ ಕಪಲ್‌ಗಳು ಒಂದೆಡೆಯಾದರೆ, ಪ್ರಯಾಣದ ಬಿಲ್‌ಗಳು ತಲೆತಿರುಗಿಸಿದರೂ ಮಕ್ಕಳೊಂದಿಗೆ ಪ್ರಯಾಣದ ಮಜಾ ಅನುಭವಿಸುವ ಅಪ್ಪ ಅಮ್ಮ ಒಂದೆಡೆ. ಬದುಕು ಸಾಗುತ್ತಿರುತ್ತದೆ. ಪ್ರಯಾಣ ಮುಂದುವರೆಯುತ್ತಿರುತ್ತದೆ.
- ಬಡೆಕ್ಕಿಲ ಪ್ರದೀಪ
ವಯಸ್ಸಾಗ್ತಾ ಆಗ್ತಾ, ನಮ್ಮ ದೃಷ್ಟಿಕೋನ ಬದಲಾಗುತ್ತಾ ಸಾಗುತ್ತದೆ. ದೃಷ್ಟಿಕೋನದ ಜತೆಗೆ ಪ್ರಯಾಣದ ಧಾಟಿಯೂ ಬದಲಾಗುವುದು ಸಹಜ. ಇಲ್ಲಿ ಪುಟ್ಟ ಮಗುವಿನಿಂದ ಬದುಕು ಪೂರ್ತಿ ಸವೆಸಿದ ವೃದ್ಧರ ಪ್ರಯಾಣದ ಬಗ್ಗೆ ನೋಡುತ್ತಾ ಸಾಗೋಣ.
ಬದುಕು ಒಂದೇ ಥರ ಇರೋದಿಲ್ಲ ಈ ವಿಷಯ ಎಲ್ಲರಿಗೂ ಗೊತ್ತಿರೋದೆ. ಅದೊಂದು ನಿರಂತರ ಪಯಣ. ನಾನ್‌ಸ್ಟಾಪ್ ಬಸ್ ಕೂಡ ಒಂದೊಂದು ಸ್ಟಾಪ್‌ಗಳಲ್ಲಿ ನಿಲ್ಲುತ್ತದೆ. ಆದರೆ, ಜೀವನದ ಬಂಡಿಗೆ ಒಂದೇ ನಿಲ್ದಾಣ. ಆ ನಿಲ್ದಾಣ ಬರುವುದಕ್ಕೂ ಮೊದಲು ನಮ್ಮ ಪ್ರಯಾಣದಲ್ಲಿ, ಅದನ್ನು ನೋಡುವ ರೀತಿಯಲ್ಲಿ ನಿರಂತರ ಓಟ ಇದ್ದೇ ಇರುತ್ತದೆ.
ಇದನ್ನೂ ಓದಿ: 5,4,3,2,1… ಪ್ಯಾಕ್ ಯುವರ್ ಬ್ಯಾಗ್ಸ್, ಗೆಟ್ ಸೆಟ್…. ಗೋ!
ಪುಟ್ಟ ಮಗುವೊಂದು ನೋಡುವ ರೀತಿಗೂ, ವಯಸ್ಕರು ನೋಡುವ ರೀತಿಗೂ ವ್ಯತ್ಯಾಸ ಇದ್ದೇ ಇರುತ್ತದೆ. ಕಲಿಕೆ ನಿಂತ ನೀರಲ್ಲ. ಆದರೆ ಕಲಿಯುವ ಧಾಟಿ ಮಾತ್ರ ಬದಲಾಗುವುದು ಸಹಜ. ನಾವು ಕಲಿತಿರುವುದು ನಮಗೆ ಕಲಿಯುವ ರೀತಿಯನ್ನು ಬದಲಾಯಿಸಲು ಕಲಿಸುತ್ತದೆ. ನಾವು ನಾನ್‌ಸ್ಟಾಪ್ ಬದಲಾವಣೆಯ ಹಾದಿಯಲ್ಲೇ ಸಾಗುತ್ತಿರುತ್ತೇವೆ.

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮಕ್ಕಳು ಏನು ಮಾಡಿದರೂ ಚೆಂದ. ಆದರೆ, ಅದೇ ಮಗು ಏನು ನೋಡಿದರೂ ಚೆಂದ ಅಂತ ಅವುಗಳನ್ನು ತನ್ನ ಬೊಗಸೆ ಕಣ್ಣುಗಳಿಂದ ತುಂಬಿಕೊಳ್ಳುತ್ತಾ ಸಾಗುತ್ತದೆ. ನಾವು ಐದಾರು ಅಡಿ ಎತ್ತರ ಬೆಳೆದ ಮೇಲೆ ನೋಡುವ ಲೋಕಕ್ಕೂ ಎರಡೋ ಮೂರೋ ಅಡಿಯ ಆ ಮಗು ಕಾಣುವ ಲೋಕಕ್ಕೂ ಬಹಳ ವ್ಯತ್ಯಾಸವಿದೆ. ಆ ಪುಟ್ಟ ಹೆಜ್ಜೆಗಳನ್ನಿಟ್ಟು ಅದು ಒಂದು ಹೊಸ ಊರನ್ನು ನೋಡುವ ರೀತಿಯೇ ಬೇರೆಯದು. ಬೆಳೆದ ಮೇಲೆ ನಾವು ನೋಡುವಾಗ ನಮ್ಮ ಕಣ್ಣುಗಳಿಂದ, ನಮ್ಮ ಬುದ್ಧಿಯಿಂದ ನಾವು ಯಾವುದನ್ನೇ ಆದರೂ ನೋಡುತ್ತಿದ್ದರೆ, ಪುಟ್ಟ ಮಗು, ಎಲ್ಲವನ್ನೂ ಮುಟ್ಟಿ ನೋಡುವ, ಅದನ್ನು ಸಂಪೂರ್ಣವಾಗಿ ಅರಿಯುವ ರೀತಿ ಇದೆಯಲ್ಲಾ ಅದು ಆ ಮಗುವನ್ನು ಕ್ಷಣಕ್ಷಣಕ್ಕೂ ಹೊಸ ಥ್ರಿಲ್‌ಗೆ ದೂಡುತ್ತಿರುತ್ತದೆ. ಬೇಲೂರು ಶಿಲ್ಪವೇ ಇರಲಿ, ಜೋಗದ ಗುಂಡಿಯೇ ಇರಲಿ, ಅದನ್ನು ಮಗು ಬೇರೆಯದೇ ಕಣ್ಣುಗಳಿಂದ ಕಾಣುತ್ತಿರುತ್ತದೆ. ನಮಗೆ ಜೋಗದ ಜಲಪಾತದ ಬೆರಗು ಅಚ್ಚರಿ ಮೂಡಿಸಿದರೆ, ಆ ಮಗು ಅದನ್ನು ನೋಡುವುದರ ಜತೆಗೆ ಅಲ್ಲೇ ಹಾರುತ್ತಿರುವ ಚಿಟ್ಟೆಯ ಹಿಂದೆ ಓಡುತ್ತಿರುತ್ತದೆ. ಅಲ್ಲೇ ಸಿಕ್ಕ ಇನ್ಯಾರದೋ ಮಗುವಿನ ಜತೆಗೆ ಆಡುವುದೂ ಅದಕ್ಕೆ ಮುದ ನೀಡುತ್ತದೆ.

ಯುವ ಮನಸಿನ ಪಯಣ
ಮಗು ಬೆಳೆದು ದೊಡ್ಡದಾಗಿದೆ, ಯುವ ಮನಸಿಗೆ ಒಂದಿಷ್ಟು ಗೊತ್ತಾಗಿದೆ. ಇನ್ನೊಂದಷ್ಟನ್ನು ತಿಳಿಯುವ, ತನಗೆಲ್ಲಾ ಗೊತ್ತಿದೆ ಎನ್ನುವುದು ತಪ್ಪು ಎನ್ನುವುದನ್ನು ಅರಿಯುವ ಹಾದಿ ತನ್ನ ಪ್ರತಿ ಟ್ರಿಪ್‌ನಲ್ಲೂ ಅದಕ್ಕೆ ಕಾಣಸಿಗುತ್ತದೆ.
ಹಿಂದೆ ಮಗುವಾಗಿದ್ದಾಗ ಹೋದ ಜಾಗ ಯುವ ಮನಸಿಗೆ ಬೇರೆಯದೇ ಲೋಕವಾಗಿ ಗೋಚರಿಸುತ್ತದೆ. ಅದನ್ನು ಅದು ಕ್ರಮಿಸುವ ರೀತಿಯೂ ಬೇರೆಯದೇ ಆಗಿರುತ್ತದೆ. ಮಗುವಿನ ಮನಸಿಗೆ ದಕ್ಕದ್ದು ಈಗ ಈ ಯುವಕನಿಗೆ ಕಾಣುತ್ತದೆ.
ಹಿಂದೆ ಅಪ್ಪ ಅಮ್ಮನ ಜತೆಗೆ ಹೋದ ಜಾಗಕ್ಕೆ ಯುವಕರು ಏಕಾಂಗಿಯಾಗೋ ಗೆಳೆಯರ ಜತೆಗೋ ಹೋಗುವಾಗ ಬೇರೆಯದೇ ಮಜಾ ಸಿಗುತ್ತದೆ. ತಾನು ಒಂದು ರೀತಿಯ ಫ್ರೀ ಬರ್ಡ್ ಅನ್ನುವುದನ್ನು ಪ್ರೂವ್ ಮಾಡುವುದೂ ಅಲ್ಲಿ ಬೇಕಿರುತ್ತದೆ. ಸೋಲೋ ಟ್ರಿಪ್‌ನಲ್ಲಿರುವ ಮಜಾಕ್ಕಿಂತ ಹೆಚ್ಚು, ಬರುವ ಚ್ಯಾಲೆಂಜ್‌ಗಳನ್ನು ಸ್ವೀಕರಿಸುವುದು ಯುವ ಮನಸುಗಳಿಗೆ ಖುಷಿ ನೀಡುತ್ತದೆ. ಕೈಯಲ್ಲಿರುವ ಕಾಸಲ್ಲೇ ಹೇಗೆ ಬಜೆಟ್ ಪ್ರಯಾಣ ಮಾಡುವುದು ಎನ್ನುವುದನ್ನೂ ಅದು ತಿಳಿದುಕೊಡುತ್ತದೆ. ಮುಂದೆ ತಾನೂ ಒಂದು ಸಂಸಾರ ನಡೆಸುವುದು ಹೇಗೆ ಅನ್ನುವುದನ್ನು ಅದು ಕಲಿಸಿಕೊಡುತ್ತದೆ.
ಗರ್ಲ್‌ಫ್ರೆಂಡ್, ಹೆಂಡತಿ, ಮಕ್ಕಳ, ಕುಟುಂಬದ ಜತೆಗೆ ಪ್ರಯಾಣಗಳು ವಿಭಿನ್ನ ರೀತಿಯವಾಗಿರುತ್ತವೆ. ಪ್ರಣಯದ ಮಧ್ಯೆ ತಿರುಗುವುದನ್ನೇ ಮರೆತ ಕಪಲ್‌ಗಳು ಒಂದೆಡೆಯಾದರೆ, ಪ್ರಯಾಣದ ಬಿಲ್‌ಗಳು ತಲೆತಿರುಗಿಸಿದರೂ ಮಕ್ಕಳೊಂದಿಗೆ ಪ್ರಯಾಣದ ಮಜಾ ಅನುಭವಿಸುವ ಅಪ್ಪ ಅಮ್ಮ ಒಂದೆಡೆ. ಬದುಕು ಸಾಗುತ್ತಿರುತ್ತದೆ. ಪ್ರಯಾಣ ಮುಂದುವರೆಯುತ್ತಿರುತ್ತದೆ.
ಪೇರೆಂಟ್ ಅಂದರೆ, ಪೇ ರೆಂಟ್ ಅಂತಲೂ ಹೌದು, ಸಾಲು ಸಾಲು ರೆಂಟ್‌ಗಳು, ಬಿಲ್ಲುಗಳನ್ನು ಕಟ್ಟುತ್ತಾ ಹೋಗುವವರಿಗೆ ಕೈಯಲ್ಲಿ ಒಂದಿಷ್ಟು ಕೂಡಿಟ್ಟು, ಅದರಲ್ಲೇ ಪ್ರಯಾಣ ಮಾಡುವಾಗ, ಸೋಲೋ ಟ್ರಿಪ್ ಅಥವಾ ಗೆಳೆಯರೊಂದಿಗೆ ಹೋದಾಗ ಸಿಕ್ಕ ಅನುಭವಗಳು ಬಳಕೆಗೆ ಬರುತ್ತವೆ.
ಬದುಕಿನ ಜಂಜಡ ಮುಗಿಯದ್ದು. ಅದು ಅರಿವಿಗೆ ಬರುತ್ತಲೇ ಒಂದಷ್ಟು ದಿನ ಒಂದಷ್ಟು ಜಾಗಗಳನ್ನು ಸುತ್ತಿ ಮತ್ತೆ ರೀಚಾರ್ಜ್ ಆಗಬೇಕು. ಈ ತವಕ ಅವರಲ್ಲಿ ಎದ್ದು ಕಾಣುತ್ತದೆ. ಚಿಕ್ಕವರಿದ್ದಾಗ ತಾವು ಕಾಣಬೇಕು ಅಂದುಕೊಂಡಿದ್ದನ್ನು ತಮ್ಮ ಮಕ್ಕಳಿಗೆ ತೋರಿಸುತ್ತಾ, ತಾವೂ ಆ ಕನಸನ್ನು ಪೂರೈಸುತ್ತಾ ಹೋಗುತ್ತಿರುತ್ತಾರೆ.
ವಯಸ್ಸು ಆಗ್ತಾ, ಪ್ರಯಾಣದ ಕಾರಣಗಳು ಸ್ಪಷ್ಟವಾಗುತ್ತವೆ. ಬದುಕಿನಲ್ಲಿ ನೋಡಿದಷ್ಟೂ ಮುಗಿಯದ್ದಿದೆ ಎನ್ನುವುದನ್ನು ಮನಸು ಅರಿತಿರುತ್ತದೆ. ಕಂಡಿದ್ದೆಲ್ಲವನ್ನೂ ಆಸ್ವಾದಿಸುತ್ತಾ ಸಾಗುವ, ಬದುಕು ಇಷ್ಟು ಕೊಟ್ಟಿದೆ, ಇದನ್ನೆಲ್ಲಾ ಸಂಪೂರ್ಣ ಶರಣಾಗತಿಯಿಂದ ಸ್ವೀಕರಿಸಿ ಮುಂದುವರೆಯಬೇಕು ಅನ್ನುವ ಭಾವ ಮನಸನ್ನು ತುಂಬಿಕೊಳ್ಳುತ್ತದೆ.
ಬದುಕು ಹೀಗೇ
ಪುಟ್ಟ ಮಗು ಚಿಟ್ಟೆ ಹಿಂದೆ ಓಡುವಾಗ ಅಪ್ಪನಿಗೆ ಹೊಟೇಲಿಗೆ ತಲುಪುವುದಕ್ಕೆ ತಡವಾಗಿದೆ ಎನ್ನುವ ಆತಂಕ, ಆದರೆ ತಾತ ಮಾತ್ರ ಹೊಟೇಲ್ ಎಲ್ಲೂ ಓಡಿ ಹೋಗೋದಿಲ್ಲ. ಆ ಚಿಟ್ಟೆ ನಾಳೆಗೆ ಇರೋದಿಲ್ಲ ಎನ್ನುತ್ತಾರೆ. ವಯಸ್ಸು ಪಕ್ವವಾದಂತೆ ಮತ್ತೆ ಮಗುವಿನ ಮನಸು ಮೂಡುತ್ತದೆ. ಆ ಮಗುವಿನ ಮನಸು ಕಾಣಲು ಬಯಸುವುದನ್ನು ವೃದ್ಧರ ಮಾಗಿದ ಮನಸು ಮಾತ್ರ ಅರಿಯಬಲ್ಲದು.
ಪಂಚ್-ರ್ ಶಾಪ್
ಯುವಕರ ಬ್ಯಾಗ್‌ನ ಬ್ಯಾಗ್, ಪೇರೆಂಟ್‌ಗಳ ಬ್ಯಾಗ್ ಬೇರೆ ಬೇರೆ ರೀತಿಯ ಸರ್ವೈವಲ್ ಕಿಟ್‌ಗಳನ್ನು ಹೊಂದಿರುತ್ತದೆ. ವೃದ್ಧರಿಗೆ ಮಾತ್ರ ಇದರ ಅಗತ್ಯವೇ ಇಲ್ಲ, ಯಾಕಂದರೆ, ಅವರೇ ದೊಡ್ಡ ಸರ್ವೈವರ್‌ಗಳು!