Saturday, March 28, 2026
Saturday, March 28, 2026

ಹೇಳದೇ ಹೋಗು ಕಾರಣ!

ನಾನಂತೂ ಗ್ಯಾಜೆಟ್‌ಗಳಿಲ್ಲದೇ ಬದುಕೋದು ಹೇಗೆ ಅಂತ ಗೊತ್ತಿಲ್ಲದೋನು. 15-20 ವರ್ಷಗಳ ಹಿಂದೆ ಬೆಂಗಳೂರಿನ ಬೀದಿಗಳಲ್ಲಿ ಓಡಾಡುವ ವೇಳೆ ಯಾವುದೇ ಗೂಗಲ್‌ ಮ್ಯಾಪ್ಸ್‌ ಇಲ್ಲದೇ ಸುತ್ತಾಡಿದ್ದು ಈಗ ಬರೀ ನೆನಪು ಮಾತ್ರ. ಈಗಂತೂ ದಾರಿ ಕೇಳಿ ಊರು ಸುತ್ತುವುದು ಅನ್ನುವ ಕಾನ್ಸೆಪ್ಟೇ ಜನರಿಗೆ ಗೊತ್ತಿಲ್ಲದ ವಿಷಯ.

-ಬಡೆಕ್ಕಿಲ ಪ್ರದೀಪ

ಎಲ್ಲೇ ಹೋಗೋದಿದ್ದರೂ ಒಂದಷ್ಟು ಪ್ಲಾನಿಂಗ್‌ ಇರಬೇಕು. ನಾಳೆ ಏನು ಎನ್ನುವುದನ್ನು ಯೋಚಿಸಿಯೇ ನಾವು ಇಂದಿನ ದಿನವನ್ನು ಮುಗಿಸುತ್ತಿರುತ್ತೇವೆ. ನಿದ್ದೆಗೆ ಜಾರುತ್ತಿರುತ್ತೇವೆ. ಇನ್ನು, ಪಯಣಿಗನಾಗಿ ಹೋಗುವ ವೇಳೆ ಅದಕ್ಕಿರುವ ತಯಾರಿಯ ಭಾರ ಎಷ್ಟು ಎನ್ನುವುದನ್ನು ಪ್ಲಾನಿಂಗ್‌ ಮಾಡಿದವರೇ ಬಲ್ಲರು.

ಆದರೆ, ಕೈಯಲ್ಲೊಂದು ಮ್ಯಾಪೇ ಇಲ್ಲದೇ, ಮೊಬೈಲ್‌ನ ಇಂಟರ್ ನೆಟ್‌ ಆಫ್‌ ಮಾಡಿ ಊರು ಸುತ್ತಿ ಬರುವುದು ಅಂದರೆ?

ಇದನ್ನೂ ಓದಿ: ಠೀವಿಯಿಂದ ಇವಿ ಟ್ರಾವೆಲ್‌ ಮಾಡೋದು ಹೇಗೆ?

ಆ ಒಂದು ಪ್ರಯಾಣದಲ್ಲಿ ಹೋಗಿ ಬರೋಣ ಬನ್ನಿ. ಅಂದರೆ ಹತ್ತಿಪ್ಪತ್ತು ವರ್ಷ ಹಿಂದೆ, ಕೇವಲ ದಾರಿ ಬದಿಯವರನ್ನೇ ಹಾದಿ ಕೇಳಿ ಊರು ಸುತ್ತುವ ʼಮಜಾʼ ಹೇಗೆ ಅನ್ನುವುದರ ಒಂದು ಇಮ್ಯಾಜಿನೇಶನ್‌ ಮಾಡೋಣ!

ನಾನಂತೂ ಗ್ಯಾಜೆಟ್‌ಗಳಿಲ್ಲದೇ ಬದುಕೋದು ಹೇಗೆ ಅಂತ ಗೊತ್ತಿಲ್ಲದೋನು. 15-20 ವರ್ಷಗಳ ಹಿಂದೆ ಬೆಂಗಳೂರಿನ ಬೀದಿಗಳಲ್ಲಿ ಓಡಾಡುವ ವೇಳೆ ಯಾವುದೇ ಗೂಗಲ್‌ ಮ್ಯಾಪ್ಸ್‌ ಇಲ್ಲದೇ ಸುತ್ತಾಡಿದ್ದು ಈಗ ಬರೀ ನೆನಪು ಮಾತ್ರ. ಈಗಂತೂ ದಾರಿ ಕೇಳಿ ಊರು ಸುತ್ತುವುದು ಅನ್ನುವ ಕಾನ್ಸೆಪ್ಟೇ ಜನರಿಗೆ ಗೊತ್ತಿಲ್ಲದ ವಿಷಯ.

New Project (32)

ಇನ್ನು ಈ ಪ್ರಯಾಣ ಅಂದರೇನು? ನಮ್ಮೊಳಗೆ ನಾವಿಳಿದು ಹೋಗುವುದು ಮುಖ್ಯ. ಹೊರಗಿನ ಪಯಣಕ್ಕೆ ಹಾಗೂ ಒಳಗಿನ ಪಯಣಕ್ಕೆ ಒಂದು ಕೊಂಡಿಯಿದೆ ಅನ್ನುವುದನ್ನೂ ನೋಡಿದ್ದೇವೆ. ಹಾಗಿರುವಾಗ ಈ ಮ್ಯಾಪಿಲ್ಲದ ಟ್ರಿಪ್ಪು ಕೂಡ, ನಮ್ಮೊಳಗಿನ ಜಿಪಿಎಸ್‌ ಅನ್ನು ಬಡಿದೆಬ್ಬಿಸುತ್ತದೆ. ಜಿಡ್ಡು ಹಿಡಿದ ಮನಸನ್ನು, ನಮ್ಮ ಪಂಚೇಂದ್ರಿಯಗಳನ್ನು ಚುರುಕು ಮಾಡುತ್ತದೆ.

ಎಲ್ಲೋ ಒಂದೂರಿನ ಟೂರು ಮಾಡುತ್ತಿರುವಾಗ ಎಲ್ಲೋ ಕೇಳಿದ ಘಂಟಾನಾದ ನಿಮ್ಮನ್ನು ಅಲ್ಲಿಗೆ ಸೆಳೆಯುತ್ತದೆ. ಕವಲುದಾರಿಯಲ್ಲಿ ಸಿಕ್ಕ ಕಾಲುದಾರಿಯಲ್ಲಿ ಸಾಗಿ ಆ ಘಂಟೆಯ ಸದ್ದಿನ ಜಾಡನ್ನು ಹಿಡಿಯುತ್ತಾ ಅಲ್ಲಿಗೆ ತಲುಪುವ ಥ್ರಿಲ್ಲು ಬೇರೆಯದೇ ಲೋಕವನ್ನು ಸೃಷ್ಟಿಸುತ್ತದೆ. ಹಾಗೆ ಸಾಗುವಾಗ ಸಿಕ್ಕ ಕಾಲುದಾರಿಯ ಪಪಕ್ಕದ ಕೊಳದಲ್ಲೋ, ತೊರೆಯಲ್ಲೋ ಇರುವ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆದುಕೊಂಡು, ಶುದ್ಧ ಸ್ಫಟಿಕ ನೀರಿದ್ದರೆ ಒಂದೆರಡು ಗುಟುಕೇರಿಸಿಕೊಂಡು ಮುಂದೆ ಹೋಗುವಾಗ ಆಗುವ ಆನಂದ ಯಾವ ಮಿನರಲ್‌ ವಾಟರ್‌ನಿಂದಲೂ ಸಿಗುವುದಿಲ್ಲ.

ಅದೇ ಹಾದಿಯಲ್ಲಿ ನಡೆದು ಬರುತ್ತಿರುವ ಹಳ್ಳಿಯ ವೃದ್ಧರೋ, ಕೂಲಿ ಮಾಡಿ ಮನೆಗೆ ಮರಳುತ್ತಿರುವವರೋ ಸಿಕ್ಕಾಗ ಅವರೊಂದಿಗೆ ಎರಡು ನಿಮಿಷ ಮಾತನಾಡುವುದು, ಅವರಲ್ಲಿ ಆ ದೇವಸ್ಥಾನದ ದಾರಿ ಕೇಳುವ ನೆಪದಲ್ಲಿ ಒಂದಿಷ್ಟು ಮಾತು-ಕಥೆ, ಅವರ ಜೀವನದ ತುಣುಕನ್ನು ಕಿಸಿಗೇರಿಸಿಕೊಂಡು ಮುಂದೆ ಸಾಗುವಾಗ ಸಿಗುವ ಸಂತೋಷ, ಅದೊಂಥರಾ ಬೇರೇನೇ ಬಿಡಿ.

ನಕಾಶೆಯಿಲ್ಲದ ಹಾದಿಯಲ್ಲಿ ದಾರಿ ತಪ್ಪೋದು ಕಷ್ಟ, ಯಾಕೆಂದರೆ, ಅಲ್ಲಿ ಪ್ರತಿ ಹಾದಿಯಲ್ಲೂ ಹೊಸ ಗಮ್ಯ ಸ್ಥಾನದ ಟಿಸಿಲೊಡೆಯುತ್ತದೆ.

ಹೀಗೆ ಮಾಡಿ ನೋಡಿ

ಪಾದಚಾರಿ ಹಾಡುವ ದಾರಿ ಹಾಡ ಕೇಳಮ್ಮ..

ನಿಮ್ಮ ಒಂದು ಪೂರ್ತಿ ದಿನವನ್ನು ನೋ ಗ್ಯಾಜೆಟ್‌, ನೋ ಮ್ಯಾಪ್‌ ದಿನವನ್ನಾಗಿ ಮಾಡಬಹುದೇನೋ. ಆದರೆ ಹಾಗೆ ಸೀದಾ ಸಮುದ್ರೋಲ್ಲಂಘನ ಮಾಡುವುದಕ್ಕೂ ಮೊದಲು, ಒಂದು ಟ್ರಯಲ್‌ ಮಾಡಿ.

ಸುಮಾರು ಒಂದೋ, ಎರಡೋ ಗಂಟೆ ನಿಮ್ಮ ಕಾರನ್ನು ಪಕ್ಕಕ್ಕಿಟ್ಟೋ, ಅಥವಾ ನಿಮ್ಮವರನ್ನು ರೂಮಲ್ಲಿ ಬಿಟ್ಟು, ಫೋನನ್ನು ಆಫ್‌ ಮಾಡಿ, ಸೇಫ್ಟಿಗೆ ಜೇಬಲ್ಲೇ ಇಟ್ಟು ಊರು ಸುತ್ತಿ ಬನ್ನಿ. ಒಂದೇ ರೂಲ್‌ ಅಂದರೆ ಅದೆಷ್ಟೇ ಕಷ್ಟ ಆದರೂ, ನಿಮ್ಮ ಫೋನಿನ ಬದಲು, ಊರಿನ ಯಾರಾದರೂ ಸಿಕ್ಕರೆ ಅವರಲ್ಲಿ ಮುಂದಿನ ದಾರಿ ಕೇಳಿ.

New Project (33)

ಮತ್ತೆ ಬಂದ ದಾರಿಗೆ ತಲುಪುವುದು ಹೇಗೆ ಎಂದು ಕೇಳುವ ಬದಲು, ಹಿಂದೆ ಹೇಳಿದ ಹಾಗೆ, ಊರಿನ ಯಾವುದಾದರೂ ಮುದ ನೀಡುವ ತಾಣದ ಹಾದಿ ಕೇಳಿ, ಅದರೆಡೆಗೆ ಅಡಿಯಿಡಿ. ನಿಮ್ಮ ರೂಟ್‌ ಮ್ಯಾಪ್‌ಗೆ ಸಿಗದೇ ಇರುವ, ಯಾವುದೇ ಇಂಟರ್ ನೆಟ್‌ನ ಜಾಲತಾಣದಲ್ಲಿ ಕಾಣಿಸದೇ ಇರುವ ಅನೂಹ್ಯ ಅನುಭವದ ಬುತ್ತಿಯೂಟ ನಿಮಗೆ ನೆಮ್ಮದಿಯ ಮೃಷ್ಟಾನ್ನವನ್ನು ನೀಡೀತು.

ಏನೇನೆಲ್ಲಾ ಸಿಕ್ಕೀತು ಗೊತ್ತಾ?

ಗೂಗಲ್ ಮ್ಯಾಪ್‌ಗೆ ಸಿಗದ ರಹಸ್ಯ ತಾಣಗಳು: ಇತಿಹಾಸದ ಮೌನ ಸಾಕ್ಷಿಗಳು

ಇನ್ನೊಬ್ಬರು ಬರೆದು ಹಾಕಿದ, ರೀಲ್ಸ್‌ಗಳಲ್ಲಿ ಪೋಸ್ಟ್‌ ಮಾಡಿದ ಯಾವುದೋ ಪಿಕ್‌ನಿಕ್‌ ಸ್ಪಾಟಿನ ನೋಟವನ್ನು ಮತ್ತೆ ನಿಮ್ಮ ಕಣ್ಣಿಂದ ಅಚ್ಚು ಹಾಕಿಸಿಕೊಳ್ಳುವುದಕ್ಕಿಂತ, ಈ ಮ್ಯಾಪಿಲ್ಲದ ಟ್ರಿಪ್ಪಿನಲ್ಲಿ ನಿಮ್ಮದೇ ಹೊಸ ಅನುಭವದ ಬುತ್ತಿಯನ್ನು ಕಟ್ಟಿಕೊಳ್ಳಬಹುದು.

ಯಾವುದನ್ನೂ ದಾಖಲಿಸದೇ ಇರುವುದೂ ಒಂದು ಹೊಸತನವೇ. ಸಿಕ್ಕಿದ್ದೆಲ್ಲವನ್ನೂ ಕೇಜಿಗಟ್ಟಲೆ ಪೋಸ್ಟನ್ನು ಇನ್ ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುವುದರ ಬದಲು, ಮನಸಿನ ಬುಟ್ಟಿಯಲ್ಲಿ ತುಂಬಿಕೊಳ್ಳುವುದರ ಖುಷಿಯನ್ನು ಅನುಭವಿಸಬಹುದು.

ಯಾವುದೋ ಕಾಡುದಾರಿಯಲ್ಲಿ ಹೋಗುವಾಗ ಹುಡುಕಿಹೋದ ಜಲಧಾರೆ ಸಿಗುವುದೋ ಇಲ್ಲವೋ, ಯಾರದೋ ಹಳ್ಳಿ ಮನೆಯ ಭೋಜನದ ಸವಿ, ಕಾಡು ಜೇನಿನ ರುಚಿ ಉಣ್ಣೋದಕ್ಕೆ ಸಿಕ್ಕೀತು.

ನಾವೇನೇ ಪ್ಲಾನ್‌ ಮಾಡಿದರೂ ನಿಯಾಮಕನ ಯೋಚನೆಯೇ ಬೇರೆ, ಅವನು ಹಾಕಿಕೊಡುವ ದಾರಿಯೇ ಬೇರೆ. ಮತ್ತು ಅವನ ಪ್ಲಾನ್‌ ಇನ್ನಷ್ಟು ಅದ್ಭುತವಾದುದೇ ಆಗಿರುತ್ತದೆ ಎನ್ನುವ ಜೀವನದ ಸತ್ಯ ದರ್ಶನಕ್ಕೆ ನಾಂದಿಯಾದೀತು.

ಒಟ್ಟಾರೆಯಾಗಿ ನಿಮ್ಮನ್ನು ಪ್ರತಿ ಕ್ಷಣವೂ ತಿಳಿಯಲು ಹವಣಿಸುವ ಮೊಬೈಲ್‌ ಹಾಗೂ ಇಂಟರ್ ನೆಟ್‌ ಲೋಕ ನಿಮ್ಮನ್ನು ಕಂಟ್ರೋಲ್‌ ಮಾಡುವ ಬದಲು, ಪ್ರಕೃತಿಗೇ ನಿಮ್ಮ ಕಂಟ್ರೋಲ್‌ ನೀಡಿ ನೋಡಿ. ಅದು ನೀಡುವ ಅಭೂತಪೂರ್ವ ಅನುಭೂತಿಗೆ ಮೈಯೊಡ್ಡಿ ನೋಡಿ.

ಪಂಚ್‌-ರ್‌ ಶಾಪ್‌

ಗೂಗಲ್‌ ಮ್ಯಾಪ್‌ ಹಾಕಿ ಸಿಟಿ ಮಧ್ಯದಲ್ಲೇ ದಾರಿ ತಪ್ಪುವುದು ಕೊಡೋ ಥ್ರಿಲ್‌ ಕೂಡ ಒಂದು ರೀತಿಯ ಜಿಪಿಎಸ್‌ (ಗಾಬರಿ ಪೊಸಿಶನಿಂಗ್‌ ಸಿಸ್ಟಂ) ಅಂದ್ರೂ ತಪ್ಪಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!