• ಅಂಜಲಿ ರಾಮಣ್ಣ

ಇವತ್ತು ಒಂದು ವಿಭಿನ್ನ ಪ್ರವಾಸಕ್ಕೆ ಹೋಗಿ ಬರೋಣ ಬರ್ತೀರಾ? ಹೌದು, ಅದು ಅವಳು ಶಾಶ್ವತವಾಗಿ ಮಲಗಿರುವ ಜಾಗ. ಕಾಲನ ಮೈದಾನಾದಲ್ಲಿ ಒಂದರ ನಂತರ ಮತ್ತೊಂದು ಆಸೆ ಪೆರೇಡ್ ಮಾಡುತ್ತಾ ಮಾಡುತ್ತಾ, ಪ್ರೀತಿ ಎಂದರೆ ಅವನಲ್ಲ ನಾನು ಎಂದು ಅರ್ಥ ಮಾಡಿಕೊಳ್ಳುವ ವೇಳೆಗೆ ಅವನೂ ಇರಲಿಲ್ಲ ನಾನೂ ಉಳಿದುಕೊಳ್ಳಲಿಲ್ಲ. ಅರಗಿಸಿಕೊಂಡ ಸತ್ಯ ರಕ್ತಗತವಾದಷ್ಟೂ ಚುಚ್ಚುತ್ತಿರುವಾಗಲೇ ಬಂದಳು ನೋಡಿ ಅವಳು ಹಾಡುತ್ತಾ ‘ನಜ಼ರ್ ಜೊ ತೇರಿ ಲಾಗಿ... ಮೇ ದಿವಾನಿ ಹೋಗಯೀ... ಹಾಂ ದಿವಾನೀ ಹೋಗಯೀ’, ನಿಮಗೂ ನೆನಪಿದೆ ತಾನೇ?!

ಅವನ ಕಣ್ಣಲ್ಲಿ ಹೃದಯವಾಗುತ್ತಾ, ದೃಷ್ಟಿಗೆ ಮಿಡಿತವಾಗುತ್ತಾ ‘ಮಷ್ಹೂರ್ ಮೇರೆ ಇಷ್ಕ್ ಕಿ ಕಹಾನೀ ಹೋಗಯೀ...’ ಎಂದವಳು ಅದೆಷ್ಟು ಪ್ರೀತಿ ಮಾಡಿಬಿಟ್ಟಳು ಅವನನ್ನು. ಹಾಡಾಗುತ್ತಿದ್ದಳು ‘ಜೋ ಜಗ್ ನೆ ನ ಮಾನಿ ತೊ ಮೇನೇ ಭೀ ಠಾನಿ… ಕಹಾ ಥಿ ಮೆ ದೇಖೋ ಕಹಾ ಚಲಿ ಆಯೀ...’ ಹೌದಲ್ಲ ಇವಳು ಎಲ್ಲಿಂದ ಬಂದಳು ಎಲ್ಲಿಗೆ ಹೋದಳು? ಸಂಜಯ್ ಲೀಲಾ ಬನ್ಸಾಲಿಯ ವೈಭವಪರದೆಯಲ್ಲಿ ದೀಪಿಕಾ ಪಡುಕೋಣೆಯ ಮೂಲಕ, ನೊರೆ ಹಾಲ್ಗರೆದುಕೊಟ್ಟ ಬಾಜಿರಾಯನ ’ಮಸ್ತಾನಿ’ಯನ್ನು ಹುಡುಕಿ ಹೊರಟೆ. ಹಾಡುತ್ತಿದ್ದೆ ನಾನೂ ‘ಕಹತೆ ಹೆ ಯೇ ದಿವಾನಿ ಮಸ್ತಾನೀ ಹೋಗಯೀ...’

ಇದನ್ನೂ ಓದಿ: ಮಹಿಳೆಯರಿಗಷ್ಟೇ ತೆರೆದಿರುವ ‘ಸೂಪರ್‌ಶೀ’ ದ್ವೀಪ!

ಅವಳು ಇರಲೇ ಇಲ್ಲ, ಅವಳು ಮುಸ್ಲಿಂ ಆಗಿರಲಿಲ್ಲ, ಅವಳು ಬಾಜಿರಾಯನಿಗಿಂತ ಮೊದಲೇ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳು ಎಂದು ಮಾಧ್ಯಮಗಳು ವರದಿ ಮಾಡುತ್ತಿರುವಾಗಲೇ ನಾನು ಹಾಡುತ್ತಿದ್ದೆ ‘ಜ಼ಖಮ್ ಐಸ ತೂನೇ ಲಗಾಯಾ... ಮರ್ಹಮ್ ಐಸ ತೂನೇ ಲಗಾಯಾ... ಮೇ ದಿವಾನಿ ಹೋಗಯೀ... ಹಾಂ ದಿವಾನೀ ಹೋಗಯೀ’

1699 ಆಗಸ್ಟ್ 29ರಂದು ಬುಂದೇಲ್‌ಖಂಡದ ರಾಜ ಛತ್ರಸಾಲ ಬುಂದೇಲನಿಗೆ, ರುಹಾನಿ ಬಾಯಿ ಬೇಗಮ್ ಎನ್ನುವ ಉಪರಾಣಿಯಲ್ಲಿ ಹುಟ್ಟಿದವಳು ಮಸ್ತಾನಿ. ಛತ್ರಸಾಲ ಬುಂದೇಲ ಮಹಾರಾಜ ಪ್ರಣಾಮಿ ಪರಂಪರೆಯ ಮೂಲಕ ಹಿಂದೂ ಧರ್ಮ ಮತ್ತು ಮುಸ್ಲಿಮ್ ಮತಗಳನ್ನು ಒಂದು ಮಾಡಲು ಸಾಕಷ್ಟು ಕೆಲಸ ಮಾಡಿದ್ದನಂತೆ. ಆತನ ಮಗಳು, ರಾಜಕುಮಾರಿ ಮಸ್ತಾನಿ ಆ ಕಾಲಕ್ಕೆ ಅಪ್ರತಿಮ ಸುಂದರಿ ಆಗಿದ್ದಳಂತೆ. ಮಸ್ತಾನಿ ಎಂದರೆ ದೀಪಿಕಾಳೇ ಕಣ್ಮುಂದೆ ಬರುವ ಚಟ ತಾಗಿಸಿಕೊಂಡವರಿಗೆ ಗೂಗಲ್‍ನಲ್ಲಿ ನಿಜದ ಮಸ್ತಾನಿಯ ಚಿತ್ರಪಟ ನೋಡಿದರೆ ʼಏನು? ಇದು ಸೌಂದರ್ಯವೇ?!ʼ ಎನಿಸಿಬಿಡುತ್ತೆ.

Untitled design (39)

ಕುಸುಮ್ ಚೋಪ್ರ ಎಂಬಾಕೆ ಮಸ್ತಾನಿಯ ಬಗ್ಗೆ ವರ್ಷಾನುಕಾಲ ಸಂಶೋಧನೆ ಮಾಡಿ ಬರೆದಿರುವ ಪುಸ್ತಕದಲ್ಲಿ ಹೇಳುತ್ತಾರೆ ʼಮಸ್ತಾನಿ ಅತ್ಯಂತ ಸುಂದರಿ, ವಿಪರೀತ ಬುದ್ಧಿವಂತೆಯಾಗಿದ್ದ ಕ್ಷತ್ರಿಯಳು. ಅವಳು ಕೃಷ್ಣನನ್ನು ಆರಾಧಿಸುತ್ತಿದ್ದಳು. ಪಾಕಶಾಸ್ತ್ರ, ಚಿತ್ರಕಲೆ, ನೃತ್ಯ, ಸಂಗೀತದಲ್ಲಿ ಪ್ರವೀಣೆ ಮಾತ್ರವಲ್ಲ, ಕುದುರೆ ಸವಾರಿ, ಯುದ್ಧ ನೀತಿ ಮತ್ತು ರಾಯಭಾರ ತಂತ್ರಗಳಲ್ಲಿ ಜಗತ್ತನ್ನು ಬೆರಗಾಗಿಸುತ್ತಿದ್ದಳು. ಅವಳು ಎಂದೂ ಇಸ್ಲಾಂ ಧರ್ಮದ ಪದ್ಧತಿಯನ್ನು ಅನುಸರಿಸಲೇ ಇಲ್ಲ ಆದರೆ ಶತ್ರುಗಳು ಅವಳಿಗೆ ಮುಸ್ಲಿಂ ಎನ್ನುವ ಹಣೆಪಟ್ಟಿ ಕಟ್ಟಿ ಅವಳನ್ನು ಎಲ್ಲರಿಂದ ದೂರ ಇರುವಂತೆ ನೋಡಿಕೊಳ್ಳುತ್ತಿದ್ದರುʼ ಎನ್ನುವ ಮಾಹಿತಿ ನೀಡುತ್ತಾರೆ. ʼಪೆಹ್ಚಾನ್ ಮೆರೆ ಇಷ್ಕ್ ಕಿ ಅಬ್ ತೋ... ರವಾನಿ ರವಾನಿ ರವಾನಿ ಹೋಗಯೀ...ʼ ಹಾಡಿಕೊಳ್ಳುತ್ತಲೇ ಹುಡುಕಾಟ ಮುಂದುವರೆಸಿದ್ದೆ.

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಿಂದ 60 ಕಿಮೀ. ದೂರದಲ್ಲಿರುವ ಶಿರೂರು ತಾಲೂಕಿನ ಗ್ರಾಮ ಪಾಬಲ್‍ಗೆ ಬಂದು ನಿಂತೆ. ಬೆಳಗ್ಗೆ 6.30 ಆಗಿತ್ತು. ಎಮ್ಮೆ ಗೊರಸು ನೆಕ್ಕುತ್ತಿತ್ತು, ಸೂರ್ಯ ಇನ್ನೂ ಪೂರ್ತಿ ಎದ್ದಿರಲಿಲ್ಲ. ಮಸ್ತಾನಿಯ ನೆನಪಿನಲ್ಲಿ ಎದ್ದಿದ್ದ ಧೂಳು, ಸಗಣಿಯ ಘಮ ಎಲ್ಲವೂ ಹಿತವೇ ಎನಿಸುತ್ತಿತ್ತು. ಕಪ್ಪು ಮಣ್ಣಿನಲ್ಲಿ ಅಲ್ಲಲ್ಲಿ ಬಿದ್ದಿದ್ದ ಕೊಚ್ಚೆ ಕೂಡ ʼಸಬ್ ನೂರ್ ನೂರ್ ಸಾ ಬಿಖ್ರಾ ಹೇ... ಏಕ್ ತೂ ಹೀ ಖಯಾಲೋಮೆ ಉತ್ರಾ ಹೇ... ಮೇ ದಿವಾನಿ ಹೋಗಯೀ... ಹಾಂ ದಿವಾನೀ ಹೋಗಯೀʼ

ʼಮಸ್ತಾನಿ ಸಮಾಧಿ ಎಲ್ಲಿದೆ?ʼ ಎಂದು ಕೇಳಿದೆ ಒಂದೇ ಪೆಡಲ್‍ನಲ್ಲಿ ಸೈಕಲ್

ಹೊಡೆಯುತ್ತಿದ್ದ ಆ ಹುಡುಗನನ್ನು. ತುಂಬಾ ದೊಡ್ಡ ಮೈದಾನ ಅದಕ್ಕೊಂದು ಅತಿದೊಡ್ಡ ಮರದ ಕಮಾನು ಬಾಗಿಲು ಅದನ್ನು ತೋರಿಸಿ ಅದರ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದರೆ ಕಾಣುತ್ತದೆ ಎಂದ. ಅಲ್ಲಿ ಹಿರಿಯ ಮುಸ್ಲಿಂ ಒಬ್ಬರು ಹಸಿರು ಚಾರದ ಹೊದ್ದ ದರ್ಗಾದ ಸುತ್ತಲು ಗುಡಿಸುತ್ತಿದ್ದರು. ಅವರನ್ನು ಮಾತನಾಡಿಸುತ್ತಲೇ ಒಳ ಹೊಕ್ಕೆ. ಅಲ್ಲಿ ಮಲಗಿದ್ದಳು ಬಾಜಿರಾಯನಿಗಾಗಿ ದಿವಾನಿ ಆಗಿದ್ದ ಮಸ್ತಾನಿ. ಸದ್ದು ಕೂಡ ನಿಶ್ಶಬ್ಧವಾಗಿತ್ತಲ್ಲಿ.

ಅವಳು ಶನಿವಾರ ವಾಡಕ್ಕೆ ಬಂದಾಗಿನಿಂದ ಗುರು ಎಂದು ಪೂಜಿಸುತ್ತಿದ್ದ ಬಾಬುರಾವ್ ಅವರ ಸಮಾಧಿಯ ಪಕ್ಕದಲ್ಲಿ 1740 ಏಪ್ರಿಲ್ 28ರಂದು ತೀರಿಕೊಂಡ ಮಸ್ತಾನಿಯನ್ನು ಸಮಾಧಿ ಮಾಡಲಾಗಿದೆ. ಬೋರ್ಡ್ ಒಂದು ಆ ಜಾಗವನ್ನು ’ಪಕೀಜ ಬಾಬ ದರ್ಗ’ ಎಂದು ಗುರುತಿಸಿತ್ತು. 2000 ಚದರ ಅಡಿ ಜಾಗದಲ್ಲಿ ಬಾಬು ರಾವ್ ಅವರ ಪರಂಪರೆಯ ಎಲ್ಲಾ ಶಿಷ್ಯರನ್ನು ಕಳೆದ 400 – 500 ವರ್ಷಗಳಿಂದ ಇಲ್ಲಿ ಮಣ್ಣು ಮಾಡಲಾಗಿದೆ. ಮೂರು ಮರದ ಬಾಗಿಲುಗಳು ಇರುವ ಅಂಗಳದ ಮತ್ತೊಂದು ಕಡೆ ನಮಾಜ಼್ ಮಾಡಲು ಅನುಕೂಲವಾಗುವಂತೆ, ಮರದ ದಿಮ್ಮಿಗಳನ್ನು ನಿಲ್ಲಿಸಿ, ಸ್ವಲ್ಪ ಎತ್ತರದ ಒಂದು ಹಜಾರ ಇದೆ.

ಮಸ್ತಾನಿ ಸಮಾಧಿಯ ಮೇಲೆ ಹುಲುಸಾಗಿ ತುಳಸಿ ಗಿಡ ಬೆಳೆಸಲಾಗಿತ್ತು. ಮೂಲ ಗುರುವಿನ ಸಮಾಧಿಗೆ ಮಾತ್ರ ಹಸಿರು ಚಾದರ ಹೊದಿಸಲಾಗಿತ್ತು. ಅಲ್ಲೊಂದು ದೀಪದ ಗೂಡು. ನನ್ನೊಡನೆ ಮಾತನಾಡಿದ ಮೊಹಮ್ಮದ್ ಇನಾಮ್ದಾರ್ (ಬಾಬು ರಾವ್ ಪರಂಪರೆಗೆ ಸೇರಿದ ಶಿಷ್ಯ) ಅಲ್ಲಿ ದೀಪ ಬೆಳಗುತ್ತಾರೆ. ಮಸ್ತಾನಿ ಯಾಕೆ ಸತ್ತಳು, ಹೇಗೆ ಸತ್ತಳು ಯಾರಿಗೂ ಗೊತ್ತಿಲ್ಲ ಎಂದ ಮೊಹಮ್ಮದ್

ಕಾಂಪೌಂಡ್‍ನ ಸಣ್ಣ ಮರದ ಗೇಟ್‍ಗೆ ಚಿಲಕ ಹಾಕಿಕೊಂಡು ನನ್ನೊಬ್ಬಳನ್ನೇ ಕುಳಿತಿರಲು ಹೇಳಿ ಎಲ್ಲಿಯೋ ಹೋದರು. ಮಸ್ತಾನಿ ತನ್ನ ಬೆರಳಿನಲ್ಲಿ ಇದ್ದ ವಜ್ರದ ಉಂಗುರ ತಿಂದು ಸತ್ತಳು ಎನ್ನುವ ಗಾಳಿ ಮಾತೊಂದನ್ನು ನಂಬಿ ಪುಂಡರ ಗುಂಪೊಂದು 2009ರಲ್ಲಿ ಮಸ್ತಾನಿಯ ಗೋರಿಯನ್ನು ಪಿಕಾಸಿಗಾರೆಗಳಿಂದ ಕೆದಕಿ ಓಡಿದ್ದರು. ಪಾಬಲ್ ಹಳ್ಳಿಯ ಜನರ ಒತ್ತಡಕ್ಕೆ ಮಣಿದು ಒಂದು ತಿಂಗಳ ಅವಧಿಯಲ್ಲಿ ಪುರಾತತ್ವ ಇಲಾಖೆ ಅದನ್ನು ರಿಪೇರಿ ಮಾಡಿಸಿತು.

ಇವರಿಗೆ ಸಮಾಧಿ ಅವರಿಗೆ ಮಜ಼ರ್ ಆಗಿರುವ ಈ ಜಾಗದ ಉಸ್ತುವಾರಿಯನ್ನು ಬಾಜಿರಾವ್ ಮಸ್ತಾನಿ ಟ್ರಸ್ಟ್ ಈಗ ವಹಿಸಿಕೊಂಡಿದೆ. ಮಸ್ತಾನಿಯ ಮತ್ತಷ್ಟು ಕುರುಹುಗಳನ್ನು ಹುಡುಕಿ ಶನಿವಾರವಾಡೆಕ್ಕೂ ಮೂರನೆಯ ಬಾರಿ ಹೋಗಿದ್ದೆ. ಅಲ್ಲಿ ಅವಳ ಮಹಲ್ ಎಂದೂ ಇರಲಿಲ್ಲ. ಪುಣೆಯ ಬಳಿ ಕೊತ್ರೂಡ್ ಎನ್ನುವ ಜಾಗದಲ್ಲಿ ಪೇಶ್ವೆ ಬಾಜಿರಾಯ ಮಸ್ತಾನಿಗಾಗಿ ಮಹಲನ್ನು ಕಟ್ಟಿಸಿದ್ದನಂತೆ. ಆದರೆ, ಈಗ ಅದೂ ಅಲ್ಲಿಲ್ಲ. ಅಲ್ಲಿಯ ಬಾಗಿಲು ಕಿಟಕಿಗಳನ್ನು ತಂದು ಪುಣೆಯ ರಾಜ ದಿನಕರ್ ಖೇಲ್ಕರ್ ಹೆಸರಿನ ಸಂಗ್ರಹಾಲಯದಲ್ಲಿ ಅದರ ನಮೂನೆಯನ್ನು ಡಾ. ಡಿ. ಜಿ. ಖೇಲ್ಕರ್ (ಸಂಗ್ರಹಾಲಯದ ಸಂಸ್ಥಾಪಕ) ಅವರು ತಯಾರು ಮಾಡಿ ನೋಡಲು ಇಟ್ಟಿದ್ದಾರೆ.

Untitled design (40)

ʼಜೋ ಜಗ್ ನೆ ನ ಮಾನಿ ತೊ ಮೇನೇ ಭೀ ಠಾನಿ...ಕಹಾ ಥಿ ಮೆ ದೇಖೋ ಕಹಾ ಚಲಿ ಆಯೀ...ʼ ಗುನುಗುನಿಸುತ್ತಾ ಪಾಬಲ್ ಹಳ್ಳಿಯಿಂದ ಹೊರಟು ಶಿರೂರು ದಾರಿಯಲ್ಲಿ ಸಿಕ್ಕ ಜನಗಳನ್ನು ಮಾತನಾಡಿಸುತ್ತಾ ಮಳ್‍ಠಣ್ ವಾಡ (ಇದು ಪವಾರ್ ವಂಶಸ್ಥರ ಕೋಟೆ) ನೋಡಿಕೊಂಡು ಮುಂದಿನ ಹಳ್ಳಿಗೆ ಹೊರಟೆ.

ಹಾಂ, ಮೊಹಮ್ಮದ್ ಹಾಗೆ ನನ್ನೊಬ್ಬಳನ್ನೇ, ಭೀಮಾ ನದಿಯ ದಂಡೆಯ ಬಳಿ ಇರುವ ಮಸ್ತಾನಿ ಸಮಾಧಿಯ ಬಳಿ ಕೂರಿಸಿ ಹೋದವರು ಹಿಂದಿರುಗಿದ್ದು ಒಂದೂವರೆ ಗಂಟೆಯ ನಂತರ. ಅಲ್ಲಿಯವರೆಗೂ ತಂಪುಗಾಳಿಯಲ್ಲಿ ಮಸ್ತಾನಿಯ ಬೇಗುದಿಗೆ ಮನಸು ನೀಡಿದ್ದೆ. ಒಂದು ಇಷ್ಕ್‌ನ ಕಹಾನಿ ಮಷ್ಹೂರ್ ಆಗಿ ತಣ್ಣಗೆ ಮಣ್ಣಲ್ಲಿ ಮಣ್ಣಾಗಿದ್ದನ್ನು ಅನುಭವಿಸಿದ್ದೆ. ʼನಜ಼ರ್ ಜೊ ತೇರಿ ಲಾಗಿ... ಮೇ ದಿವಾನಿ ಹೋಗಯೀ... ಹಾಂ ದಿವಾನೀ ಹೋಗಯೀʼ ಎಂದು ಮತ್ತೆ ಮತ್ತೆ ಹಾಡಿಕೊಳ್ಳುತ್ತಾ ಹಿಂತಿರುಗುತ್ತಿದ್ದವಳನ್ನು ಪೂರ್ತಿ ಪ್ರಯಾಣದಲ್ಲಿ ಕಾಡಿದ್ದು ಕುಸುಮ್ ಚೋಪ್ರ ಅವರ ಮಾತು ʼಮಸ್ತಾನಿ ಅತಿಲೋಕ ಸುಂದರಿ ಆಗಿದಿದ್ದೇ ಅವಳಿಗೆ ಮುಳುವಾಯಿತುʼ.