ಕನಸಿನ ಲೋಕಕ್ಕೆ ಕಡಲ ಹಾದಿ: ಕ್ರೂಸ್ ಶಿಪ್ ಟೂರಿಸಂ..!
ಆಧುನಿಕ ಕ್ರೂಸ್ ಹಡಗುಗಳು ಕೇವಲ ಸಾರಿಗೆ ಸಾಧನಗಳಲ್ಲದೆ, ಸಕಲ ಸೌಲಭ್ಯಗಳನ್ನು ಹೊಂದಿರುವ 'ತೇಲುವ ನಗರ' ಅಥವಾ 'ಐಷಾರಾಮಿ ಅರಮನೆ'ಗಳಾಗಿವೆ. 10 ರಿಂದ 20 ಅಂತಸ್ತುಗಳ ಈ ಬೃಹತ್ ಹಡಗುಗಳು ಸಾವಿರಾರು ಜನರನ್ನು ಹೊತ್ತೊಯ್ಯುತ್ತಾ, ಭೂಮಿಯ ಗದ್ದಲದಿಂದ ದೂರಾಗಿ ಸಮುದ್ರದ ನೀಲಿ ಜಲರಾಶಿಯ ಮಧ್ಯೆ ರಾಜವೈಭೋಗದ ಅನುಭವವನ್ನು ನೀಡುತ್ತವೆ.
-ಹೊಸ್ಮನೆ ಮುತ್ತು
ನಿಮ್ಮ ಪ್ರವಾಸವು ನೀವು ತಲುಪಬೇಕಾದ ತಾಣಕ್ಕೆ ಹೋದ ಮೇಲೆ ಆರಂಭವಾಗುವ ಬದಲು, ನಿಮ್ಮ ಪಯಣದಿಂದಲೇ ಆರಂಭವಾದರೆ ಹೇಗಿರಬಹುದು? ಖಂಡಿತವಾಗಿಯೂ ಅದು ಅದ್ಭುತ. ಅಂಥ ಒಂದು ಸುಂದರ ಅನುಭವದ ಕಲ್ಪನೆ ಮಾಡಿಕೊಳ್ಳಿ. ಕಣ್ಣಿಗೆ ಎಟುಕದ ದಿಗಂತದವರೆಗೂ ಹರಡಿಕೊಂಡಿರುವ ನೀಲಿ ಸಮುದ್ರ, ಮುಖಕ್ಕೆ ಅಪ್ಪಳಿಸುವ ಉಪ್ಪಿನ ಗಾಳಿ, ಹಡಗಿನ ಡೆಕ್ ಮೇಲೆ ನಿಂತು ನೋಡುವ ಸೂರ್ಯೋದಯ–ಸೂರ್ಯಾಸ್ತಗಳ ಮನೋಹರ ದೃಶ್ಯ; ಇವೆಲ್ಲವೂ ಒಂದು ವಿಶಿಷ್ಟ ಅನುಭವ. ರಾತ್ರಿ ಅಲೆಗಳ ಸಂಗೀತಕ್ಕೆ ತಾಳ ಹಾಕುತ್ತಾ ನಕ್ಷತ್ರಗಳ ಅಡಿಯಲ್ಲಿ ಕಳೆಯುವ ಕ್ಷಣಗಳು ಕೇವಲ ಸಿನಿಮಾ ದೃಶ್ಯಗಳಲ್ಲ; ಇಂದು ಲಕ್ಷಾಂತರ ಪ್ರವಾಸಿಗರ ಪಾಲಿಗೆ ಇದು ನನಸಾಗುತ್ತಿರುವ ಕನಸು! ಇಂಥ ರೋಮಾಂಚಕ ಅನುಭವಗಳು ಪ್ರವಾಸದ ಬಗ್ಗೆ ನಮಗಿರುವ ಹಳೆಯ ಕಲ್ಪನೆಗಳನ್ನ ಬದಲಿಸುತ್ತಿವೆ.
ಸಾಮಾನ್ಯವಾಗಿ ಪ್ರವಾಸ ಎಂದರೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದಷ್ಟೇ ಎಂದು ನಾವು ಭಾವಿಸುತ್ತೇವೆ. ಇಲ್ಲಿ ರೈಲು, ಬಸ್ ಅಥವಾ ವಿಮಾನದ ಪಯಣ ನಮಗೆ ಕೇವಲ ಗುರಿ ತಲುಪುವ ಮಾಧ್ಯಮಗಳಾಗಿದ್ದು, ತಲುಪಬೇಕಾದ ತಾಣವೇ ಪ್ರವಾಸದ ಕೇಂದ್ರಬಿಂದುವಾಗಿರುತ್ತದೆ. ಆದರೆ, ಈ ಸಾಂಪ್ರದಾಯಿಕ ಕಲ್ಪನೆಯನ್ನು ಮೀರಿ, ಸ್ವತಃ ಆ ಪಯಣವನ್ನೇ ಒಂದು ಅದ್ಭುತ ಗಮ್ಯಸ್ಥಾನವನ್ನಾಗಿ ಪರಿವರ್ತಿಸುವ ಒಂದು ವಿಶಿಷ್ಟ ಪಯಣವಿದೆ, ಆ ಸುಂದರ ಪಯಣವೇ 'ಕ್ರೂಸ್ ಶಿಪ್ ಟೂರಿಸಂ' (Cruise Tourism)ಅಥವಾ ‘ಸಾಗರಯಾನ ಪ್ರವಾಸೋದ್ಯಮ’.

ಆಧುನಿಕ ಕ್ರೂಸ್ ಹಡಗುಗಳು ಕೇವಲ ಸಾರಿಗೆ ಸಾಧನಗಳಲ್ಲದೆ, ಸಕಲ ಸೌಲಭ್ಯಗಳನ್ನು ಹೊಂದಿರುವ 'ತೇಲುವ ನಗರ' ಅಥವಾ 'ಐಷಾರಾಮಿ ಅರಮನೆ'ಗಳಾಗಿವೆ. 10 ರಿಂದ 20 ಅಂತಸ್ತುಗಳ ಈ ಬೃಹತ್ ಹಡಗುಗಳು ಸಾವಿರಾರು ಜನರನ್ನು ಹೊತ್ತೊಯ್ಯುತ್ತಾ, ಭೂಮಿಯ ಗದ್ದಲದಿಂದ ದೂರಾಗಿ ಸಮುದ್ರದ ನೀಲಿ ಜಲರಾಶಿಯ ಮಧ್ಯೆ ರಾಜವೈಭೋಗದ ಅನುಭವವನ್ನು ನೀಡುತ್ತವೆ. ಅತ್ಯಾಧುನಿಕ ಸೌಲಭ್ಯಗಳು, ವೈವಿಧ್ಯಮಯ ಆಹಾರ ಮತ್ತು ಮನರಂಜನೆಯನ್ನು ಒಳಗೊಂಡ ಈ ಪಯಣವು ಪ್ರಕೃತಿ ಮತ್ತು ತಂತ್ರಜ್ಞಾನದ ಸುಂದರ ಸಮನ್ವಯವಾಗಿದ್ದು, ಪ್ರವಾಸಿಗರಿಗೆ ಹೊಸ ಲೋಕವನ್ನೇ ಪರಿಚಯಿಸುತ್ತದೆ.
ಹಡಗಿನ ಒಳಭಾಗದ ವಿನ್ಯಾಸ
ಕ್ರೂಸ್ ಹಡಗುಗಳಲ್ಲಿ ಪ್ರವಾಸಿಗರಿಗಾಗಿ ವಿವಿಧ ರೀತಿಯ ವಸತಿ ಸೌಲಭ್ಯಗಳು ಲಭ್ಯವಿರುತ್ತವೆ. ಬಜೆಟ್ ಪ್ರವಾಸಿಗರಿಗಾಗಿ ಇಂಟೀರಿಯರ್ ರೂಮ್ಸ್ ಇದ್ದರೆ, ಸಮುದ್ರದ ನೇರ ನೋಟ ಬಯಸುವವರಿಗೆ ‘ಓಷನ್ ವ್ಯೂ’ ಮತ್ತು ಖಾಸಗಿ ಬಾಲ್ಕನಿ ಹೊಂದಿರುವ ಐಷಾರಾಮಿ ‘ಬಾಲ್ಕನಿ ಸೂಟ್’ಗಳು ಲಭ್ಯವಿರುತ್ತವೆ. ಅಂತಾರಾಷ್ಟ್ರೀಯ ಪ್ರಯಾಣವಾದ್ದರಿಂದ ಆಹಾರದ ಬಗ್ಗೆ ಚಿಂತೆ ಮಾಡುವ ಅಗತ್ಯವೂ ಇಲ್ಲ. ಇಲ್ಲಿನ ಪಾಕಶಾಲೆಯಲ್ಲಿ ಇಟಾಲಿಯನ್, ಮೆಕ್ಸಿಕನ್, ಚೈನೀಸ್ ಹಾಗೂ ಭಾರತೀಯ ಸಸ್ಯಾಹಾರ ಸೇರಿದಂತೆ 20ಕ್ಕೂ ಹೆಚ್ಚು ವಿಭಿನ್ನ ಆಹಾರ ಮಳಿಗೆಗಳಿರುತ್ತವೆ.
ಮನರಂಜನೆ ಮತ್ತು ಕ್ರೀಡೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಸ್ವಿಮ್ಮಿಂಗ್ ಪೂಲ್‌ಗಳು, ವಾಟರ್ ಸ್ಲೈಡ್‌ಗಳು ಹಾಗೂ ಯೋಗ ಕೇಂದ್ರಗಳಿವೆ. ರಂಗಮಂದಿರಗಳು, ಲೈವ್ ಮ್ಯೂಸಿಕ್, ಹಾಸ್ಯ ಕ್ಲಬ್‌ಗಳು ಮತ್ತು ನೃತ್ಯ ಪ್ರದರ್ಶನಗಳ ಜತೆಗೆ ಜಿಮ್, ಸ್ಪಾ ಹಾಗೂ ಕ್ಯಾಸಿನೊಗಳು ಪ್ರವಾಸಿಗರನ್ನು ಸೆಳೆಯುತ್ತವೆ. ʼಸಾಹಸಪ್ರಿಯರಿಗಾಗಿ ಐಸ್ ಸ್ಕೇಟಿಂಗ್ ರಿಂಕ್, ರಾಕ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಸಿಮ್ಯುಲೇಟರ್‌ಗಳ ಸೌಲಭ್ಯವಿದೆʼ. ಇದರೊಂದಿಗೆ ವಿವಿಧ ವಯೋಮಾನದ ಮಕ್ಕಳಿಗಾಗಿ ಪ್ರತ್ಯೇಕ ಆಟದ ಮೈದಾನಗಳು ಹಾಗೂ ವಿಶೇಷ ಕಾರ್ಯಕ್ರಮಗಳ ವ್ಯವಸ್ಥೆಯೂ ಇದ್ದು, ಇಲ್ಲಿನ ಆಕರ್ಷಣೆಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ಮುಗಿಯದ ಖಜಾನೆ! ಒಟ್ಟಾರೆಯಾಗಿ, ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡ ಈ ಪಯಣವು ಪ್ರವಾಸಿಗರಿಗೆ ಒಂದು ಅಪರೂಪದ ಅನುಭೂತಿಯನ್ನು ನೀಡುತ್ತದೆ.

ಸಮುದ್ರಯಾನದ ವಿವಿಧ ವಿಧಗಳು
ಸಾವಿರಾರು ಪ್ರವಾಸಿಗರೊಂದಿಗೆ ವಿಶಾಲ ಸಮುದ್ರಗಳಲ್ಲಿ 5 ರಿಂದ 15 ದಿನಗಳ ಕಾಲ ಸಾಗುವ ಬೃಹತ್ 'ಸಾಗರಯಾನ' ಒಂದೆಡೆಯಾದರೆ, ಗಂಗಾ, ಬ್ರಹ್ಮಪುತ್ರ ಅಥವಾ ಯುರೋಪ್‌ನ ಡ್ಯಾನ್ಯೂಬ್‌ನಂಥ ನದಿಗಳ ಎರಡೂ ತೀರದ ಹಸಿರು ಮತ್ತು ಗ್ರಾಮೀಣ ಸೌಂದರ್ಯ, ಪ್ರಶಾಂತತೆಯನ್ನು ಸವಿಯಲು 'ನದಿಯಾನ' ಅತ್ಯಂತ ಸೂಕ್ತವಾಗಿದೆ. ಐಷಾರಾಮಿ ಜೀವನಶೈಲಿಯನ್ನು ಬಯಸುವವರಿಗಾಗಿ, ಕಡಿಮೆ ಪ್ರವಾಸಿಗರನ್ನು ಮತ್ತು ಗರಿಷ್ಠ ಸೌಲಭ್ಯಗಳನ್ನು ಹೊಂದಿರುವ 'ಐಷಾರಾಮಿ ಯಾನ' (Luxury Cruises) ಲಭ್ಯವಿದ್ದರೆ, ವಿಭಿನ್ನ ತಾಣಗಳ ಅನ್ವೇಷಣೆಯಲ್ಲಿ ಆಸಕ್ತಿಯಿದ್ದವರು ಅಂಟಾರ್ಕ್ಟಿಕಾ ಅಥವಾ ಅಲಾಸ್ಕಾದಂಥ ತಾಣಗಳಿಗೆ ಕರೆದೊಯ್ಯುವ 'ಸಾಹಸಮಯ ಕ್ರೂಸ್' (Adventure Cruises) ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲದೆ ಸಂಗೀತ, ಆಹಾರ ಅಥವಾ ಸಾಂಸ್ಕೃತಿಕ ಆಸಕ್ತಿಗಳಿಗೆ ಮೀಸಲಾದ 'ವಿಷಯಾಧಾರಿತ ನೌಕಾಯಾನಗಳು' (Theme-based Cruises) ಸಹ ಇಂದಿನ ಆಕರ್ಷಣೆಯಾಗಿದ್ದು, ಇದರಲ್ಲಿ 'ಬಿಗ್ ನ್ಯೂಡ್ ಬೋಟ್'ನಂಥ ವಿಭಿನ್ನ ಮತ್ತು ವಿವಾದಾತ್ಮಕ ಪ್ರಯೋಗಗಳೂ ಸೇರಿರುವುದು ವಿಶೇಷ.
ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು
ಕಣ್ಣಿಲ್ಲದಿದ್ದರೂ ಸಮುದ್ರವನ್ನು ಫೀಲ್ ಮಾಡಬಹುದು; ಅಬುಧಾಬಿಯಿಂದ ದೃಷ್ಟಿಹೀನ ಸ್ನೇಹಿ ಬೀಚ್
ಸಮುದ್ರಯಾನ ಪ್ರವಾಸೋದ್ಯಮವು ಕೇವಲ ಐಷಾರಾಮಿ ಮನರಂಜನಾ ಕ್ಷೇತ್ರವಾಗಿ ಉಳಿಯದೆ, ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಒಂದು ಬೃಹತ್ ಕ್ರೂಸ್ ಬಂದರಿಗೆ ಬಂದಿಳಿದಾಗ, ಸಾವಿರಾರು ಪ್ರವಾಸಿಗರು ಮತ್ತು ಸಿಬ್ಬಂದಿಯ ಕಾರಣ ವಸತಿ, ಸಾರಿಗೆ ಹಾಗೂ ಹೊಟೇಲ್ ಉದ್ಯಮಗಳಲ್ಲಿ ವ್ಯಾಪಾರ ವಹಿವಾಟು ವೃದ್ಧಿಸಿ, ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ವಿವಿಧ ದೇಶ, ಭಾಷೆ ಮತ್ತು ಸಂಪ್ರದಾಯಗಳ ಪ್ರವಾಸಿಗರು ಒಂದೇ ಸೂರಿನಡಿ ಪ್ರಯಾಣಿಸುವುದರಿಂದ ಪರಸ್ಪರರ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಾಂಸ್ಕೃತಿಕ ವಿನಿಮಯವು ಜಾಗತಿಕ ಸೌಹಾರ್ದತೆಯನ್ನು ಬೆಳೆಸಲು ಪ್ರಮುಖ ವೇದಿಕೆಯಾಗಿದೆ.
ನಡುಗಡಲ ಪಯಣದ ಅಚ್ಚರಿಯ ವಾಸ್ತವ

ಕ್ರೂಸ್ ಹಡಗಿನ ಪ್ರಯಾಣವು ಕೇವಲ ಶ್ರೀಮಂತರಿಗೆ ಅಥವಾ ವಿಲಾಸಿ ಜೀವನ ನಡೆಸುವವರಿಗೆ ಮಾತ್ರ ಸೀಮಿತ ಎಂಬುದು ಅನೇಕರ ತಪ್ಪು ಕಲ್ಪನೆ. ಆದರೆ ವಾಸ್ತವದಲ್ಲಿ, ಇಂದಿನ ದಿನಗಳಲ್ಲಿ ಸಾಮಾನ್ಯ ಜನರ ಬಜೆಟ್‌ಗೆ ಹೊಂದುವಂಥ ಮೂರು ದಿನಗಳ ವೀಕೆಂಡ್ ಕ್ರೂಸ್‌ಗಳು ಸುಲಭವಾಗಿ ಲಭ್ಯವಿವೆ. ನಾವು ಪ್ರತ್ಯೇಕವಾಗಿ ಹೊಟೇಲ್ ಬುಕಿಂಗ್, ಗುಣಮಟ್ಟದ ಊಟ, ನಗರದಿಂದ ನಗರಕ್ಕೆ ಸಾರಿಗೆ ಮತ್ತು ಮನರಂಜನೆಯ ವೆಚ್ಚಗಳನ್ನು ಲೆಕ್ಕ ಹಾಕಿದರೆ, ಕ್ರೂಸ್ ಪ್ಯಾಕೇಜ್‌ಗಳು ಅತ್ಯಂತ ಕೈಗೆಟುಕುವ ದರದಲ್ಲಿರುವುದು ಗಮನಾರ್ಹ. ಹಡಗಿನ ಒಳಗೆ ದೀರ್ಘಕಾಲ ಇರುವುದು ಬೇಸರ ತರಿಸಬಹುದು ಎಂಬ ಆತಂಕ ಕೆಲವರಿಗಿದ್ದರೆ, ಇನ್ನು ಕೆಲವರಿಗೆ ಕ್ರೂಸ್ ಪ್ರಯಾಣ ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಆದರೆ ಸತ್ಯವೇನೆಂದರೆ, ಆಧುನಿಕ ಕ್ರೂಸ್ ಹಡಗುಗಳಲ್ಲಿ ಎಷ್ಟು ವೈವಿಧ್ಯಮಯ ಚಟುವಟಿಕೆಗಳಿರುತ್ತವೆ ಎಂದರೆ, ಒಂದು ವಾರದ ಪ್ರಯಾಣದಲ್ಲೂ ಅಲ್ಲಿನ ಎಲ್ಲಾ ಸೌಲಭ್ಯಗಳನ್ನು ಪೂರ್ಣವಾಗಿ ನೋಡಿ ಮುಗಿಸಲು ಸಾಧ್ಯವಾಗುವುದಿಲ್ಲ! ಅಲ್ಲದೆ, ಇಂದಿನ ಹಡಗುಗಳಲ್ಲಿ ಯುವಜನರು ಹಾಗೂ ಮಕ್ಕಳಿಗಾಗಿ ವಿಶೇಷ ಗೇಮಿಂಗ್ ವಲಯಗಳಿದ್ದು, ಇದು ಎಲ್ಲಾ ವಯೋಮಾನದವರಿಗೂ ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕ್ರೂಸ್ ಪ್ರಯಾಣ ಎಂಬುದು ಕೇವಲ ಕನಸಲ್ಲ, ಬದಲಿಗೆ ಪ್ರತಿಯೊಬ್ಬರೂ ಅನುಭವಿಸಬಹುದಾದ ಒಂದು ಅದ್ಭುತ ಪ್ರವಾಸವಾಗಿದೆ.
ಕ್ರೂಸ್ ಶಿಪ್ ಟೂರಿಸಂ ಕೇವಲ ಐಷಾರಾಮಿ ಪ್ರವಾಸವಲ್ಲ; ಅದು ವಿಶ್ರಾಂತಿ, ಸಾಹಸ ಮತ್ತು ವೈಭವಗಳ ಸಂಗಮ. ದೈನಂದಿನ ಜಂಜಾಟಗಳಿಂದ ದೂರವಾಗಿ ಸಮುದ್ರದ ಅಗಾಧತೆಯನ್ನು ಆಸ್ವಾದಿಸಲು ಇದೊಂದು ಅತ್ಯುತ್ತಮ ಮಾರ್ಗ. ಆಧುನಿಕ ತಂತ್ರಜ್ಞಾನ ಹಾಗೂ ಪರಿಸರ ಸ್ನೇಹಿ ಕ್ರಮಗಳೊಂದಿಗೆ ಈ ಕ್ಷೇತ್ರವು ಜಾಗತಿಕ ಪ್ರವಾಸೋದ್ಯಮದ ಭವಿಷ್ಯವನ್ನೇ ಬದಲಿಸಲಿದೆ.ʼಹಡಗು ಬಂದರಿನಲ್ಲಿದ್ದಾಗ ಸುರಕ್ಷಿತವೆನ್ನುವುದೇನೋ ನಿಜ; ಆದರೆ ಅದು ನಿರ್ಮಾಣವಾಗಿರುವುದು ಅಲ್ಲಿ ನಿಲ್ಲುವುದಕ್ಕಲ್ಲ, ಅಲೆಗಳನ್ನು ಸೀಳಿಕೊಂಡು ಸಾಗುವುದಕ್ಕೆ!ʼ ಹಾಗೆಯೇ ನಮ್ಮ ಜೀವನವೂ ಹೊಸ ಅನುಭವಗಳತ್ತ ಸಾಗಿದಾಗ ಮಾತ್ರ ಅರ್ಥಪೂರ್ಣವಾಗುತ್ತದೆ.