ಕತ್ತಲ ಕನ್ನಡಿಗಳು ಎಂಬ ಕತ್ತಲೆಯ ಕೂಪ; ಮಾನವೀಯತೆ ಮೆರೆಯಲು ಪಯಣ ಆರಂಭವಾಗಬೇಕು
ಧರ್ಮದ್ರೋಹಿಗೆ, ಆಡಳಿತದ ವಿರುದ್ಧ ತಲೆಎತ್ತಿ ನಿಂತವನಿಗೆ ವರ್ಗಬೇಧವಿಲ್ಲದೆ, ಮಹಿಳೆಯರು ಮಕ್ಕಳು ಎನ್ನುವ ಸೂಕ್ಷ್ಮತೆಯನ್ನೂ ಮೀರಿ ಮನುಷ್ಯನ ಅಹಂ ಹಿಂಸೆಯನ್ನು ಜಾರಿಗೊಳಿಸುತ್ತಿತ್ತು. ಆಗೆಲ್ಲಾ ಸಜೆ ಅಥವಾ ಹಿಂಸೆ ಎನ್ನುವುದು ಸಾರ್ವಜನಿಕವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಬೀದಿ ನಾಟಕದಂತೆ ಇರುತ್ತಿತ್ತು. ಇದರ ತುಣುಕುಗಳನ್ನೂ ಈ ಸಂಗ್ರಹಾಲಯಗಳಲ್ಲಿ ತೋರಿಸುತ್ತಾರೆ. ನೋಡುವ ಎಷ್ಟೋ ಪ್ರವಾಸಿಗರು ಹೊಟ್ಟೆ ತೊಳೆಸಿನಿಂದ ಬಾಯಿಗೆ ಕೈಯನ್ನು ಅಡ್ಡವಿಟ್ಟು ಹೊರಬರುತ್ತಾರೆ.
- ಅಂಜಲಿ ರಾಮಣ್ಣ
ಜಗತ್ತು ಯುದ್ಧದಿಂದಾಗಿ ಕತ್ತಲೆಯ ಕಡೆಗೆ ಹೊರಟಿರುವಾಗ ಯುರೋಪಿನ ‘ಕತ್ತಲ ಕನ್ನಡಿಗಳು’ ನೆನಪಾಗುವುದು ಸಹಜ. ಶತಶತಮಾನಗಳಿಂದ ಮನುಷ್ಯ ಮನುಷ್ಯನನ್ನು ಯಾವೆಲ್ಲಾ ರೀತಿಯಲ್ಲಿ ಹಿಂಸಿಸಿದ, ಮೂಲಭೂತವಾಗಿ ಒಬ್ಬನ ಮೇಲೆ ಮತ್ತೊಬ್ಬ ಹಿಡಿತ ಸಾಧಿಸುವ ತನ್ನ ಸ್ವಭಾವದ ಜಾರಿಗೆಗಾಗಿ ಯಾವೆಲ್ಲಾ ಪಟ್ಟು ಹೊಸೆದ, ಹಲ್ಲು ಮಸೆದ, ಇನ್ನೊಬ್ಬನ ದೇಹ ಮತ್ತು ಮನಸನ್ನು ಮುರಿದು ಹಾಕಲು ಯಾವ್ಯಾವ ಆಯುಧಗಳನ್ನು ಬಳಸಿದ ಎನ್ನುವುದರ ಇತಿಹಾಸವನ್ನು ಇಂದಿಗೂ ಜೀವಂತವಾಗಿ ಹೇಳುತ್ತಿವೆ ಈ ‘ಕತ್ತಲ ಕನ್ನಡಿಗಳು’.
Dark Mirrors ಅನ್ನು ನೋಡುವ ಪ್ರವಾಸ ಯುರೋಪಿನ ಪ್ರವಾಸೋದ್ಯಮದ ಆದಾಯದ ಒಂದು ಭಾಗವಾಗಿದೆ. 2024ರ ವೇಳೆಗೆ 32.6 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಹಣಗಳಿಸಿದ್ದ ಈ ವಹಿವಾಟು ವರ್ಷವೊಂದಕ್ಕೆ ಶೇಕಡಾ 6ರಷ್ಟು ಹೆಚ್ಚಳವನ್ನು ಕಾಣುತ್ತಿದೆ ಎಂದಮೇಲೆ ‘ಕತ್ತಲ ಕನ್ನಡಿಗಳು’ ವಾಸ್ತವಕ್ಕೆ ಹತ್ತಿರವೇ ಇದ್ದಿರಬೇಕು.
ಇದನ್ನೂ ಓದಿ: ಜಗತ್ತಿನಲ್ಲಿ ಯುದ್ಧವೇ ಇಲ್ಲದೆ ಹೋದರೆ ನಲಿವಿನ ಪ್ರವಾಸ ಸಾಧ್ಯ!..
ಮನುಷ್ಯ ಮೂಲತಃ ಹಿಂಸೆಯ ಪ್ರವೃತ್ತಿಯವನು. ಅದಕ್ಕೇ ಇರಬೇಕು ಭೂಮಿಯ ಮೇಲೆ ಅಹಿಂಸೆಯನ್ನು ಪದೇಪದೆ ಜಾಗೃತಗೊಳಿಸುವ ಪ್ರಯತ್ನಗಳು ಆಗುತ್ತಿರುತ್ತವೆ. ಅಂಥ ಕೆಲಸ ಮಾಡುತ್ತಿರುವಲ್ಲಿ ‘ಕತ್ತಲ ಕನ್ನಡಿಗಳು’ ಎಂದು ಕರೆಯಿಸಿಕೊಳ್ಳುತ್ತಿರುವ Torture Houseಗಳದ್ದು ವಿಚಿತ್ರವೆನಿಸಿದರೂ ವಿಶೇಷ ಪಾತ್ರವಿದೆ. ಉತ್ತರ ಅಮೆರಿಕ, ಕೆನಡಾ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಒಂದೆರಡು ಕಡೆ ಈ ಸಂಗ್ರಹಾಲಯಗಳು ಇದ್ದರೆ ಯುರೋಪಿನ ತುಂಬೆಲ್ಲಾ ತುಳುಕುತ್ತಿವೆ ‘ಕತ್ತಲ ಕನ್ನಡಿಗಳು’.
ಜರ್ಮನಿ, ಸ್ಪೇನ್, ಇಟಲಿ, ನೆದರ್ಲ್ಯಾoಡ್ಸ್, ಆಸ್ಟ್ರಿಯಾ, ಬೆಲ್ಜಿಯಂ, ಕ್ರೋಯೆಶಿಯಾ, ಝೆಕ್ ರಿಪಬ್ಲಿಕ್, ಪೋಲ್ಯಾಂಡ್, ರೂಮೇನಿಯಾ, ಫ್ರಾನ್ಸ್, ಇಂಗ್ಲೆಂಡ್ ಹೀಗೆ ಬರೆಯುತ್ತಾ ಹೋದಂತೆ ಇನ್ನೂ ಇನ್ನೂ ಬೆಳೆಯುತ್ತದೆ ದೇಶಗಳ ಸಾಲು.

ನಮ್ಮ ದೇಶದ ದೊಡ್ಡ ದೊಡ್ಡ ಮಾಲ್ ಗಳಿಗೆ ಹೋದಾಗ ಹಾರಾರ್ ಹೌಸ್ ಎನ್ನುವ ಮನೋರಂಜನೆಯ ಕೋಣೆಯೊಂದನ್ನು ನೋಡಿರಬಹುದು. ಕತ್ತಲೆಯ ಕನ್ನಡಿಗಳು ಹಾರಾರ್ ಹೌಸ್ ಎನಿಸಿಕೊಂಡರೂ ಎರಡರ ನಡುವೆ ಅಜಗಜಾಂತರವಿದೆ. ಇವುಗಳನ್ನು ಹಿಂಸಾ ವಸ್ತುಸಂಗ್ರಹಾಲಯ ಎಂತಲೂ ಹೇಳುತ್ತಾರೆ. ಇಲ್ಲಿ ಹಿಂಸೆಯ ವೈಭವೀಕರಣವಾಗುವುದಿಲ್ಲ ಬದಲಿಗೆ ಒಂದೊಮ್ಮೆ ಮನುಷ್ಯ ಜಗತ್ತು ಉತ್ಪಾದಿಸುತ್ತಿದ್ದ ಕ್ರೂರ ಆಯುಧಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಿಗೆ ತಾಂತ್ರಿಕತೆಯ ಸಹಾಯದಿಂದ ಚಲನೆಯನ್ನೂ ನೀಡಲಾಗಿದೆ. ಕೆಂಪು ಬಣ್ಣದ ದೀಪದ ಬೆಳಕಿನಲ್ಲಿ ಒಬ್ಬೊಬ್ಬರೇ ನಿಂತು ಇವುಗಳನ್ನು ನೋಡುವಾಗ ಹೃದಯ ಬಾಯಿಗೆ ಬಂದಂತಾಗುತ್ತದೆ.
ನೋಯುವವನು ಕಿರುಚುವಾಗ ಹೊರಡುವ ವಿವಿಧ ದನಿ ಮುದ್ರಿಕೆಯನ್ನೂ ಇಲ್ಲಿ ಕೇಳಿಸಲಾಗುತ್ತದೆ. ಅಳ್ಳಕ ಹೃದಯದವರು ಮೂರ್ಛೆ ಕೂಡ ಹೋಗುತ್ತಾರೆ. ರೊಮ್ಯಾನ್ಸ್ ಮಾತ್ರವಲ್ಲ ಹಿಂಸೆಯ ವಿಧಗಳೂ ಕಲ್ಪನಾತೀತವಾಗಿಯೇ ಇರುತ್ತವೆ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತದೆ ಈ ಸ್ಥಳಗಳು.
ಶಿಕ್ಷೆಯ ವಿಧಾನದಲ್ಲಿ ಲಜ್ಜಾ ಮುಖವಾಡಗಳದ್ದು ದೊಡ್ಡ ಪಾತ್ರ. ಲೋಹದಿಂದ ತಯಾರಾದ ಬಗೆಬಗೆಯ ಮುಖ ಗವಸುಗಳನ್ನು ಕಡ್ಡಾಯವಾಗಿ ಶಿಕ್ಷೆ ಎದುರಿಸುವವನು ತೊಡಲೇ ಬೇಕಿತ್ತು. ಅದರಲ್ಲೂ ಮಹಿಳೆಯರ ಮೇಲೆ ಇದನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಉಸಿರು ಸರಾಗವಿಲ್ಲ, ಕಣ್ಣು ರೆಪ್ಪೆಗೆ ತಾಕುವ ಕಬ್ಬಿಣದ ಪರದೆ, ಕಿವಿಗಳನ್ನು ಅಮುಕಿ ಹಿಡಿದಿಡುವ ಅದರ ಸರಪಳಿಗಳು ಅಬ್ಬಾ, ಹಿಂಸಾ ಲೋಕವೇ ಏನು ನಿನ್ನ ವಿಧಗಳ ಮೆರವಣಿಗೆ!
ಕೈ ಕಾಲುಗಳನ್ನು ಕತ್ತರಿಸಲು, ಬೆರಳುಗಳನ್ನು ಕುಯ್ಯಲು, ಗಂಟಲು ಒತ್ತಿ ಹಿಡಿಯಲು, ಚರ್ಮ ಚುಚ್ಚಿ ರಕ್ತ ಬಸಿಯಲು, ಮರ್ಮಾಂಗಗಳು ಅಲುಗಾಡದಂತೆ ಬಿಗಿಯಲು, ಕಣ್ಣು ಗುಡ್ಡೆಗಳನ್ನು ಕೀಳಲು, ರೆಪ್ಪೆಗಳನ್ನು ಹೆಕ್ಕಲು, ಕಿವಿಗಳನ್ನು ತಿವಿಯಲು, ಮೈಮೇಲಿನ ಕೂದಲನ್ನು ಒಂದೊಂದಾಗಿ ಸುಡಲು, ನಾಭಿಯನ್ನು ತಿರುಚಲು, ತಲೆ ಬುರುಡೆ ಕೊರೆಯಲು, ಒಡೆಯಲು, ಮೂಳೆಗಳನ್ನು ಜೀವಂತ ದೇಹದೊಳಗೆ ಪುಡಿಗಟ್ಟಲು ಎಷ್ಟೆಲ್ಲಾ ಬಗೆಯ ಆಯುಧಗಳನ್ನು ಇಟ್ಟುಕೊಂಡಿದ್ದ ಮನುಷ್ಯನ ಕ್ರಿಯಾಶೀಲತೆಯ ಬಗ್ಗೆ ಹೇವರಿಕೆ ಬರುತ್ತದೆ ಈ ಕತ್ತಲ ಕನ್ನಡಿಗಳನ್ನು ನೋಡುವಾಗ.
ಧರ್ಮದ್ರೋಹಿಗೆ, ಆಡಳಿತದ ವಿರುದ್ಧ ತಲೆಎತ್ತಿ ನಿಂತವನಿಗೆ ವರ್ಗಬೇಧವಿಲ್ಲದೆ, ಮಹಿಳೆಯರು ಮಕ್ಕಳು ಎನ್ನುವ ಸೂಕ್ಷ್ಮತೆಯನ್ನೂ ಮೀರಿ ಮನುಷ್ಯನ ಅಹಂ ಹಿಂಸೆಯನ್ನು ಜಾರಿಗೊಳಿಸುತ್ತಿತ್ತು. ಆಗೆಲ್ಲಾ ಸಜೆ ಅಥವಾ ಹಿಂಸೆ ಎನ್ನುವುದು ಸಾರ್ವಜನಿಕವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಬೀದಿ ನಾಟಕದಂತೆ ಇರುತ್ತಿತ್ತು. ಇದರ ತುಣುಕುಗಳನ್ನೂ ಈ ಸಂಗ್ರಹಾಲಯಗಳಲ್ಲಿ ತೋರಿಸುತ್ತಾರೆ. ನೋಡುವ ಎಷ್ಟೋ ಪ್ರವಾಸಿಗರು ಹೊಟ್ಟೆ ತೊಳೆಸಿನಿಂದ ಬಾಯಿಗೆ ಕೈಯನ್ನು ಅಡ್ಡವಿಟ್ಟು ಹೊರಬರುತ್ತಾರೆ.
ಇಂಥ ಸಂಗ್ರಹಾಲಯಗಳನ್ನು ಸಾಧಾರಣವಾಗಿ ಪಾಳು ಬಿದ್ದ ಕೋಟೆಯಲ್ಲಿ, ಚರ್ಚಿನೊಳಗಿರುವ ಸ್ಮಶಾನದ ನಟ್ಟ ನಡುವೆ ವಿಕಾರಾಕೃತಿಯ ಕಲ್ಲು ಕಟ್ಟಡಗಳ ಒಳಗೆ, ತಲೆಗೆ ತಾಕಿ, ಹಣೆಗೆ ಬಡಿಯುವಂಥ ಒರಟೊರಟಾದ ಮೇಲ್ಛಾವಣಿಯ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಇದನ್ನು Dark Architecture ಎನ್ನಲಾಗುತ್ತದೆ.

ಕಟ್ಟಡಗಳ ಒಳಗೆ ಮಿಣುಕು ದೀಪ, ಕತ್ತಲು, ದೃಷ್ಟಿ ಮಬ್ಬಾಗಿಸುವ ತೆಳು ಹೊಗೆ ಮತ್ತು ಹೆಣ ಸುಡುವಾಗ ಏಳುವ ಕಮಟು ವಾಸನೆ. ಉಬ್ಬು ತಗ್ಗಿನ ನೆಲ, ಕಿರಿದಾದ ಓಣಿಗಳು. ಇವುಗಳು ನೀಡುವ ಭಯಾನಕ ಚಿತ್ರಣದಿಂದ ಪ್ರೇರಿತಗೊಂಡು ಮನುಷ್ಯ ಅಹಿಂಸೆಯನ್ನು ಧರಿಸಲಿ ಎನ್ನುವುದು ಇವುಗಳ ಉದ್ದೇಶ.
ಜರ್ಮನಿಯ ರೋಥನ್‌ಬರ್ಗ್ ಒಬ್ಡೆರ್ ಟೌಬರ್‌ನಲ್ಲಿರುವ ‘ಮಿಟ್ಟೆಲಾಲ್ಟರ್ಲಿಚೆಸ್ ಕ್ರಿಮಿನಲ್ ಮ್ಯೂಸಿಯಂ’ ಅನ್ನು 1950ರಲ್ಲಿ ನ್ಯಾಯಶಾಸ್ತ್ರಜ್ಞ-ಸಂಗ್ರಹಕಾರ ಕಾರ್ಲ್ ಗ್ರೋಬರ್ ಸ್ಥಾಪಿಸಿದ್ದಾನೆ. ಈ ವಸ್ತುಸಂಗ್ರಹಾಲಯದಲ್ಲಿ ಮಧ್ಯಕಾಲೀನ ಸುಮಾರು 1,000 ವಿವಿಧ ರೀತಿಯ ಹಿಂಸೆಗಳನ್ನು ನೀಡಲು ಉಪಯೋಗಿಸುತ್ತಿದ್ದ ಆಯುಧಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಅವುಗಳ ಬಳಕೆಯ ಬಗೆಗಿನ ವಿವರಗಳಿರುವ ಟಿಪ್ಪಣಿಗಳ ಹಾಳೆಗಳನ್ನೂ ಅಲ್ಲಿ ಇಡಲಾಗಿದೆ. ವರ್ಷಕ್ಕೆ 9 ರಿಂದ 12 ಸಾವಿರ ಪ್ರವಾಸಿಗಳು ಈ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ. ಅದಕ್ಕಾಗಿಯೇ ಅತೀ ಹೆಚ್ಚು ಜನಗಳು ನೋಡಿಕೊಳ್ಳುವ ‘ಕತ್ತಲ ಕನ್ನಡಿ’ ಎಂದು ಇದನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಟಿಕೆಟ್ ಕೊಂಡು ಟಾರ್ಚರ್ ಹೌಸ್ ಭೇಟಿ ಕೊಡುವ ಮನುಷ್ಯನ ಮನಸು ಮತ್ತೂ ಸೋಜಿಗ.
ಭಾರತದಲ್ಲಿ ಯುರೋಪ್‌ನಲ್ಲಿರುವಂಥ ʼಮಧ್ಯಕಾಲೀನ ಹಿಂಸಾ ವಸ್ತುಸಂಗ್ರಹಾಲಯʼಗಳು ಇಲ್ಲ. ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಡೆದ ಹಿಂಸೆಯನ್ನು ದಾಖಲಿಸುವ ಜೈಲು‑ಮ್ಯೂಸಿಯಂಗಳು ಮಾತ್ರ ಇವೆ. ಕೋಲ್ಕತ್ತಾದ ಅಲಿಪುರ ಜೈಲಿನಲ್ಲಿ ‘ಅಲಿಪುರ್ ಜೈಲ್ ಮ್ಯೂಸಿಯಂ’ ಮಾಡಲಾಗಿದೆ. ಇದೊಂದು ಸ್ವಾತಂತ್ರ್ಯ ಸಂಗ್ರಹಾಲಯ/ಸ್ಮಾರಕವಾಗಿದೆ. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಹಿಂಸೆ, ಶಿಕ್ಷೆ ಕೋಣೆಗಳು, ಗಲ್ಲಿಗೇರಿಸುವ ಸ್ಥಳಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ವರ್ಣಿಸುವ ಪ್ರದರ್ಶನಗಳು ಇವೆ.
ಇದನ್ನೂ ಓದಿ: ಡಾರ್ಕ್ ಟೂರಿಸಂ ಸೃಷ್ಟಿಗಾಗಿ ಯುದ್ಧ ಬಯಸಬೇಕೇ?
ದೆಹಲಿಯಲ್ಲಿ 2024‑25ರಲ್ಲಿ ಸಂಸದ ಪ್ರವೀಣ್ ಖಂಡೇಲ್ವಾಲ್ ಕೆಂಪು ಕೋಟೆಯಲ್ಲಿ ʼಹಿಂಸಾ ಮ್ಯೂಸಿಯಂʼ ಸ್ಥಾಪಿಸಲು ಕೇಳಿದ್ದಾರೆ, ಆದರೆ ಇದು ಇನ್ನೂ ಪ್ರಸ್ತಾಪ ಮಾತ್ರ, ನಿರ್ಮಾಣವಾಗಿಲ್ಲ.
ಜೈಪುರದ ಕೋಟೆಯಲ್ಲಿ ಪುರಾತನ ತುಪಾಕಿಯೊಂದನ್ನು ಪ್ರದರ್ಶನಕ್ಕೆ ಇಡಲಾಗಿದೆ. ಭಾರತ ಪಾಕಿಸ್ತಾನದ ಮೊದಲ ಯುದ್ಧವಾದಾಗ ಸಿಡಿಯದೆ ಉಳಿದ ಬಾಂಬ್ ಒಂದನ್ನು ಜೈಸಲ್ಮೇರಿನ ತನ್ನೋಟಿ ಮಾತಾ ದೇವಸ್ಥಾನದಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಅಂಡಮಾನಿನ ಜೈಲಿನಲ್ಲಿ ಭಗತ್ ಸಿಂಗ್ ಇದ್ದರು ಎನ್ನಲಾದ ಕಿರಿದಾದ ಕೋಣೆಯನ್ನು ಪ್ರವಾಸಿ ನೋಡಬಹುದು. ಗಲ್ಲಿಗೇರಿಸುತ್ತಿದ್ದ ಉಪಕರಣಗಳನ್ನು ಕೂಡ ಕಾಣಬಹುದು.ಆದರೆ ಯುರೋಪಿನ ಹಿಂಸಾ ಗೃಹಗಳ ಉದ್ದೇಶವೇ ಬೇರೆ, ಬಗೆಯೇ ಬೇರೆ.
ಈಟಿ, ಭರ್ಜಿ, ಕತ್ತಿ, ಚುಚ್ಚು ಗುಬೂಟು ಇಂಥವುಗಳಿಂದ ಈಗ ಆಯುಧಗಳು ಅಣುಬಾಂಬ್ ಆಗಿ ಪರಿವರ್ತಿತ ಗೊಂಡಿವೆಯೇ ಹೊರತು ಮನುಷ್ಯನ ಅಧಿಕಾರದಾಹ, ಅಹಂ ಮತ್ತು ಅವುಗಳಿಂದ ಹುಟ್ಟುವ ಹಿಂಸೆಯ ಸ್ವಭಾವ ಮಾತ್ರ ಬದಲಾಗಿಲ್ಲ. ಇಂದು ಯುದ್ಧ ಸಾರಿರುವವರು ಈ Torture Houseಗಳ ಅಂಜಿಕೆಯನ್ನೂ ಮೀರಿದವರಾಗಿದ್ದಾರೆ ಎನ್ನುವುದೇ ನಾಗರೀಕತೆಯ ಅಂತಿಮ ದುರಂತ. ಮನ ಮತ್ತೊಮ್ಮೆ ಮಿಡಿಯುವುದಕ್ಕಾಗಿ, ಮಾನವೀಯತೆ ಮೆರೆಯುವುದಕ್ಕಾಗಿ ಪಯಣ ಆರಂಭವಾಗಬೇಕಿದೆ ಈಗಲೇ ಮತ್ತೀಗಲೇ.