ಸುಮಾರು ಹದಿನೈದು-ಇಪ್ಪತ್ತು ವರ್ಷಗಳ ಹಿಂದಿನ ಕಾಲವನ್ನು ನೆನಪಿಸಿಕೊಂಡರೆ, ಅಂದು ಫೊಟೋಗ್ರಫಿ ಎಂಬುದು ಒಂದು ಕಲೆ ಅಥವಾ ಹವ್ಯಾಸವಾಗಿತ್ತು. ಕೊರಳಲ್ಲಿ ಕ್ಯಾಮೆರಾ ನೇತುಹಾಕಿಕೊಂಡವರು ಮಾತ್ರ 'ಫೊಟೋಗ್ರಾಫರ್' ಎಂದು ಕರೆಯಿಸಿಕೊಳ್ಳುತ್ತಿದ್ದರು. ಒಂದು ಫೊಟೋ ತೆಗೆಯಬೇಕೆಂದರೆ ಫಿಲ್ಮ್ ರೋಲ್ ಖಾಲಿಯಾಗುವ ತನಕ ಕಾಯಬೇಕಾಗಿತ್ತು. ಫೊಟೋ ಸರಿಯಾಗಿ ಬಂದಿದೆಯೇ ಇಲ್ಲವೇ ಎಂದು ತಿಳಿಯಲು ಸ್ಟುಡಿಯೋಗೆ ಹೋಗಿ ‘ವಾಶ್’ ಮಾಡಿಸಿ ತರುವವರೆಗೆ ಕುತೂಹಲವನ್ನು ಅದುಮಿಟ್ಟುಕೊಳ್ಳಬೇಕಿತ್ತು. ಇವೆಲ್ಲವೂ ಅಂದಿನ ದಿನಗಳ ಅನಿವಾರ್ಯತೆಯಾಗಿತ್ತು. ಆದರೆ ಇಂದು ಕಾಲಚಕ್ರ ವೇಗವಾಗಿ ಉರುಳಿದೆ. ತಂತ್ರಜ್ಞಾನದ ಕ್ರಾಂತಿ ನಮ್ಮ ಕೈಯಲ್ಲಿದ್ದ ಮೊಬೈಲ್ ಫೋನ್‌ಗಳನ್ನು 'ಸ್ಮಾರ್ಟ್' ಆಗಿಸಿದೆ. ಇಂದು ಸ್ಮಾರ್ಟ್ ಫೋನ್ ಇಲ್ಲದವರೇ ಇಲ್ಲ, ಅಂದರೆ ಫೊಟೋಗ್ರಾಫರ್ ಅಲ್ಲದವರೂ ಯಾರೂ ಇಲ್ಲ!

ಒಂದು ಕಾಲದಲ್ಲಿ ಫೊಟೋ ತೆಗೆಯುವುದು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿತ್ತು. ಹುಟ್ಟುಹಬ್ಬ, ಮದುವೆ ಅಥವಾ ಪ್ರವಾಸದ ಸಮಯದಲ್ಲಿ ಮಾತ್ರ ಕ್ಯಾಮೆರಾಗಳು ಹೊರಬರುತ್ತಿದ್ದವು. ಆದರೆ ಈಗ ಚಿತ್ರಣವೇ ಬೇರೆ. ಬೆಳಗ್ಗೆ ಎದ್ದ ತಕ್ಷಣ ಕುಡಿಯುವ ಕಾಫಿಯಿಂದ ಹಿಡಿದು, ರಾತ್ರಿ ಮಲಗುವ ಮುನ್ನ ಆಕಾಶದಲ್ಲಿ ಕಾಣುವ ಚಂದಿರನವರೆಗೆ ಎಲ್ಲವೂ ಫೊಟೋಗೆ ಫ್ರೇಮ್ ಆಗುತ್ತವೆ. ಸ್ಮಾರ್ಟ್ ಫೋನ್ ಪ್ರತಿಯೊಬ್ಬರಿಗೂ ಒಬ್ಬ 'ಡಿಜಿಟಲ್ ಫೊಟೋಗ್ರಾಫರ್' ಆಗುವ ಅವಕಾಶ ನೀಡಿದೆ. ದಾರಿ ಬದಿಯ ಹೂವು, ಹೊಟೇಲಿನ ಊಟದ ತಟ್ಟೆ, ಆಕಸ್ಮಿಕವಾಗಿ ಕಂಡ ಸುಂದರ ದೃಶ್ಯ - ಹೀಗೆ ಯಾವುದನ್ನೂ ಬಿಡದೇ ಸೆರೆಹಿಡಿಯುವ ಉತ್ಸಾಹ ಎಲ್ಲರಲ್ಲೂ ಮನೆಮಾಡಿದೆ.

ಇದನ್ನೂ ಓದಿ: ಪೆಟ್ರಾ : ಮರಳುಗಾಡಿನ ಮಹಾಶಿಲ್ಪ, ಕಾಲದ ಪದರದೊಳಗೆ ಇತಿಹಾಸದ ಸಲ್ಲಾಪ

ಈ ಬದಲಾವಣೆಯಲ್ಲಿ ಒಂದು ವಿಷಾದನೀಯ ಸಂಗತಿಯೂ ಇದೆ. ಹಿಂದೆ ನಾವು ಪ್ರಕೃತಿಯ ಸೌಂದರ್ಯವನ್ನು ಅಥವಾ ಒಂದು ಸನ್ನಿವೇಶವನ್ನು ನಮ್ಮ ಬರಿಗಣ್ಣಿನಿಂದ ನೋಡಿ ಆನಂದಿಸುತ್ತಿದ್ದೆವು. ಆ ಕ್ಷಣದ ತನ್ಮಯತೆ ನಮ್ಮ ಮನಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಿತ್ತು. ಆದರೆ ಈಗ ನಾವೇನನ್ನೇ ನೋಡಿದರೂ ಅದನ್ನು ಮೊದಲು ಮೊಬೈಲ್ ಮೂಲಕ ನೋಡಲು ಬಯಸುತ್ತೇವೆ. ಸುಂದರವಾದ ಸೂರ್ಯಾಸ್ತವಾಗಲಿ, ಅದ್ಭುತ ಸಂಗೀತ ಕಚೇರಿಯಾಗಲಿ, ಅದನ್ನು ನೇರವಾಗಿ ನೋಡಿ ಅನುಭವಿಸುವ ಬದಲು, ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವುದರಲ್ಲೇ ಹೆಚ್ಚು ತಲ್ಲೀನರಾಗುತ್ತಿದ್ದೇವೆ. ಜಗತ್ತನ್ನು ಮೊಬೈಲ್ ಲೆನ್ಸ್ ಮೂಲಕ ನೋಡುವುದರಿಂದ, ನಾವು ಆ ಕ್ಷಣದ ನಿಜವಾದ ಅನುಭವವನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹತ್ತಿರದಲ್ಲಿರುವ ವ್ಯಕ್ತಿಯ ಮುಖವನ್ನು ನೋಡಿ ಮಾತಾಡುವುದಕ್ಕಿಂತ, ಅವರ ಫೊಟೋ ತೆಗೆದು 'ಸ್ಟೇಟಸ್' ಹಾಕುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದೇವೆ.

Untitled design (80)

ಇಂದು ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಕೈಯಲ್ಲೂ ಒಂದು ಶಕ್ತಿಯುತ ಆಯುಧದಂತೆ ಕೆಲಸ ಮಾಡುತ್ತಿದೆ. ಈ ಹಿಂದೆ ಫೊಟೋಗ್ರಫಿ ಎಂಬುದು ಶಿಸ್ತು ಮತ್ತು ಸಮಯಪ್ರಜ್ಞೆಯ ಕಲೆಯಾಗಿತ್ತು. ಆದರೆ ಈಗ, ‘ಕ್ಲಿಕ್’ ಮಾಡುವುದು ಸುಲಭವಾದಂತೆಲ್ಲ ನಡತೆ ಮತ್ತು ವಿವೇಚನೆಗಳು ಹಿನ್ನೆಲೆಗೆ ಸರಿಯುತ್ತಿವೆಯೇ ಎಂಬ ಆತಂಕ ಎದುರಾಗಿದೆ. ಎಲ್ಲವನ್ನೂ ಫೊಟೋ ತೆಗೆಯುವ ಆತುರದಲ್ಲಿ ನಾವು ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದ್ದೇವೆ. ರಸ್ತೆಯಲ್ಲಿ ಅಪಘಾತವಾದಾಗ, ಯಾರಿಗಾದರೂ ತೊಂದರೆಯಾದಾಗ ಸಹಾಯ ಮಾಡುವ ಬದಲು ಮೊಬೈಲ್ ಕ್ಯಾಮೆರಾ ಹಿಡಿದು ನಿಲ್ಲುವ 'ವಿಕೃತ ಕುತೂಹಲ' ಇಂದು ಹೆಚ್ಚಾಗಿದೆ. ಸಂತ್ರಸ್ತರ ನೋವನ್ನು ಸೆರೆಹಿಡಿದು ಅದನ್ನು ವೈರಲ್ ಮಾಡುವ ಭರದಲ್ಲಿ, ಮಾನವೀಯತೆ ಸೊರಗುತ್ತಿದೆ. ಇದು ಕೇವಲ ಚಿತ್ರವಲ್ಲ, ಒಬ್ಬ ವ್ಯಕ್ತಿಯ ಖಾಸಗಿತನ ಮತ್ತು ಘನತೆಯ ಪ್ರಶ್ನೆ ಎಂಬುದು ನಮಗೆ ಮರೆತುಹೋಗುತ್ತಿದೆ.

ಮದುವೆ ಮನೆ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರೊಫೆಷನಲ್ ಫೊಟೋಗ್ರಾಫರ್‌ಗಳಿಗಿಂತ ಹೆಚ್ಚಾಗಿ ಮೊಬೈಲ್ ಹಿಡಿದವರೇ ವೇದಿಕೆಯನ್ನು ಆವರಿಸಿ, ಮುಖ್ಯ ಘಟನೆಗಳನ್ನು ನೋಡಲು ಬಂದವರಿಗೆ ಅಡ್ಡಿಪಡಿಸುವುದು ಇತ್ತೀಚಿನ ಸಾಮಾನ್ಯ ದೃಶ್ಯ. ಅಂದರೆ ಎಲ್ಲರೂ, ಎಲ್ಲವೂ ಫೊಟೋಗಳಿಗೆ ವಸ್ತುಗಳಾಗುತ್ತಿವೆ. ಈ ಫೊಟೋ ತೆಗೆಯುವ ಆತುರದಲ್ಲಿ ನಮ್ಮ ನಡತೆ ಹೇಗಿರಬೇಕು? ನಾವು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದೇವಾ? ಸ್ಮಾರ್ಟ್ ಫೋನ್ ಫೊಟೋಗ್ರಾಫರುಗಳಿಗೆ ಒಂದು ಸಂಹಿತೆ ಇರಬೇಡವೇ? ಎಂಬ ಪ್ರಶ್ನೆಗಳು ಈ ದಿನಗಳಲ್ಲಿ ಚರ್ಚಿತವಾಗುತ್ತಿವೆ. ಒಬ್ಬ 'ಜವಾಬ್ದಾರಿಯುತ' ಪ್ರವಾಸ ಛಾಯಾಗ್ರಾಹಕನಿಗೂ ಮತ್ತು ಸಾಮಾನ್ಯ ಪ್ರವಾಸಿಗನಿಗೂ ಇರುವ ವ್ಯತ್ಯಾಸವೆಂದರೆ 'ಗೌರವ' ಮತ್ತು 'ಪ್ರಜ್ಞೆ'. 'ಒಂದು ಫೊಟೋ ಸಾವಿರ ಪದಗಳಿಗೆ ಸಮ' ಎನ್ನುವುದೇನೋ ನಿಜ. ಆದರೆ ಆ ಒಂದು ಫೊಟೋ ತೆಗೆಯುವ ಭರದಲ್ಲಿ ನಾವು ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದ್ದೇವೆಯೇ? ಪ್ರಕೃತಿಗೆ ಹಾನಿ ಮಾಡುತ್ತಿದ್ದೇವೆಯೇ? ಎಂಬುದನ್ನು ಯೋಚಿಸುವುದು ಅತ್ಯಗತ್ಯ.

ಪ್ರವಾಸಿ ತಾಣಗಳಲ್ಲಿ ಅನೇಕ ಛಾಯಾಗ್ರಾಹಕರು ಮಾಡುವ ದೊಡ್ಡ ತಪ್ಪು ಎಂದರೆ ಜನರ ಮುಖಕ್ಕೆ ನೇರವಾಗಿ ಕ್ಯಾಮೆರಾ ಹಿಡಿಯುವುದು. ಇದು ಅವರ ಖಾಸಗಿತನದ ಉಲ್ಲಂಘನೆ ಎಂಬ ಸಾಮಾನ್ಯ ಸಂಗತಿಯನ್ನೂ ಅರ್ಥ ಮಾಡಿಕೊಳ್ಳದಿರುವುದು. ನೀವು ರಾಜಸ್ಥಾನದ ಹಳ್ಳಿಯೊಂದರಲ್ಲಿ ಓಡಾಡುತ್ತಿದ್ದೀರಿ ಎಂದು ಭಾವಿಸೋಣ. ಅಲ್ಲಿನ ವೃದ್ಧರೊಬ್ಬರು ಸುಂದರವಾದ ಪೇಟ ತೊಟ್ಟು ಕುಳಿತಿದ್ದಾರೆ. ತಕ್ಷಣ ಕ್ಯಾಮೆರಾ ತೆಗೆದು ಕ್ಲಿಕ್ಕಿಸುವ ಬದಲು, ಅವರ ಬಳಿ ಹೋಗಿ ನಗುಮುಖದಿಂದ ಮಾತಾಡಿಸಿ, 'ನಿಮ್ಮ ಫೊಟೋ ತೆಗೆಯಬಹುದೇ?' ಎಂದು ಸವಿನಯದಿಂದ ಕೇಳಬೇಕು. ಅವರು ಬೇಡವೆಂದರೆ ಗೌರವಯುತವಾಗಿ ಅಲ್ಲಿಂದ ನಿರ್ಗಮಿಸುವುದು ಅವರಿಗೆ ಕೊಡುವ ಗೌರವ. ನಿಮ್ಮ 'ಪರ್ಫೆಕ್ಟ್ ಶಾಟ್'ಗಿಂತ ಅವರ 'ಸಮ್ಮತಿ' ಮುಖ್ಯ.

ಪ್ರತಿಯೊಂದು ದೇಶ ಅಥವಾ ಪ್ರದೇಶಕ್ಕೆ ತನ್ನದೇ ಆದ ಸಂಪ್ರದಾಯಗಳಿರುತ್ತವೆ. ಕೆಲವು ಕಡೆ ಕ್ಯಾಮೆರಾ ಬಳಕೆಯನ್ನು ನಿಷೇಧಿಸಿರುತ್ತಾರೆ ಅಥವಾ ಅಪಶಕುನ ಎಂದು ಭಾವಿಸುತ್ತಾರೆ. ಉದಾಹರಣೆಗೆ, ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಶವ ಸಂಸ್ಕಾರ ನಡೆಯುವಾಗ ಫೊಟೋ ತೆಗೆಯುವುದು ಅತ್ಯಂತ ಅಮಾನವೀಯ ಮತ್ತು ಬೇಜವಾಬ್ದಾರಿತನದ ಪರಮಾವಧಿ. ಅದು ಯಾರದೋ ಮನೆಯವರ ಅಗಲಿಕೆಯ ದುಃಖದ ಸಮಯ. ಅದನ್ನು ಕಲೆ ಎಂದು ನೋಡುವುದು ತಪ್ಪು. ಅಲ್ಲಿನ ಚಿತೆಗಳ ಉರಿಯನ್ನು 'ಕಲೆ'ಯಂತೆ ಬಿಂಬಿಸಲು ಕ್ಯಾಮೆರಾ ಹಿಡಿಯುವುದು ಸರಿಯಲ್ಲ. ಅದು ಮೃತರ ಘನತೆಗೆ ಮತ್ತು ಅವರ ಕುಟುಂಬಕ್ಕೆ ಅಪಚಾರವೆಸಗಿದಂತೆ. ಕೇವಲ ಒಂದು 'ಲೈಕ್', ಶೇರ್ ಅಥವಾ ಪ್ರಶಸ್ತಿಗಾಗಿ ಯಾರದೋ ಅಗಲಿಕೆಯ ನೋವನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಸರಿ.

ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಮಂದಿರಗಳು ಅಥವಾ ಪವಿತ್ರ ಆಚರಣೆಗಳ ಸಮಯದಲ್ಲಿ ಅಲ್ಲಿನ ನಿಯಮಗಳನ್ನು ಪಾಲಿಸುವುದು ಶಿಷ್ಟಾಚಾರ. 'ಫೊಟೋಗ್ರಫಿ ನಿಷೇಧಿಸಲಾಗಿದೆ' ಎಂಬ ಫಲಕ ಇದ್ದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅಂಥ ಕಡೆಗಳಲ್ಲಿ ಕೆಲವರು ತಮ್ಮ ಜಾಣ್ಮೆ ಪ್ರದರ್ಶಿಸಿ ರಹಸ್ಯವಾಗಿ ಫೊಟೋ ತೆಗೆಯಲು ಪ್ರಯತ್ನಿಸುತ್ತಾರೆ. ಈ ನಿಯಮಗಳ ಹಿಂದೆ ಸುರಕ್ಷತೆಯ ಜತೆಗೆ ಆ ಸ್ಥಳದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶವಿರುತ್ತದೆ. ಕ್ಯಾಮೆರಾದ 'ಕ್ಲಿಕ್' ಸದ್ದು ಅಥವಾ ಫ್ಲ್ಯಾಶ್‌ನ ಬೆಳಕು ಪ್ರಾರ್ಥನೆಯಲ್ಲಿ ಮಗ್ನರಾಗಿರುವವರ ಏಕಾಗ್ರತೆಗೆ ಭಂಗ ತರಬಹುದು. ನಾವು ಒಂದು ಸಂಸ್ಕೃತಿಯನ್ನು ಸೆರೆಹಿಡಿಯುವ ಮೊದಲು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅಲ್ಲಿನ ಜನರೊಂದಿಗೆ ಬೆರೆತು, ಅವರ ಆಚರಣೆಯ ಮಹತ್ವವನ್ನರಿತು, ಅವರ ಅನುಮತಿಯೊಂದಿಗೆ ಫೊಟೋ ತೆಗೆದಾಗ ಆ ಚಿತ್ರಕ್ಕೆ ಜೀವ ಬರುತ್ತದೆ. ಅನುಮತಿ ಇಲ್ಲದೇ ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ತೆಗೆದ ಚಿತ್ರವು ಅನೈತಿಕವೆನಿಸಿಕೊಳ್ಳುತ್ತದೆ.

ಪ್ರವಾಸಿ ತಾಣಗಳಲ್ಲಿ ನಾವು ಸಾಮಾನ್ಯವಾಗಿ ಕಾಣುವ ಒಂದು ದೃಶ್ಯವೆಂದರೆ, ಸುಂದರವಾದ ಸ್ಥಳೀಯ ಉಡುಗೆ ತೊಟ್ಟ ಮಕ್ಕಳು ಅಥವಾ ಜನರು ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ನೀಡಲು ಮುಂದೆ ಬರುತ್ತಾರೆ. ಫೊಟೋ ತೆಗೆದ ನಂತರ ಅವರು ಹಣಕ್ಕಾಗಿ ಕೈ ಚಾಚುತ್ತಾರೆ. ಪ್ರವಾಸಿಗರು ಕೂಡ ಮಾನವೀಯತೆಯ ದೃಷ್ಟಿಯಿಂದಲೋ ಅಥವಾ ಕೇವಲ ಕೆಲವು ರುಪಾಯಿಗಳಲ್ಲವೇ ಎಂಬ ಉದಾಸೀನತೆಯಿಂದಲೋ ಹಣ ನೀಡುತ್ತಾರೆ. ಆದರೆ, ಈ ಸಣ್ಣ ನಡೆ ಆ ಸಮುದಾಯದ ಭವಿಷ್ಯದ ಮೇಲೆ ಎಂಥ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿಯುವುದಿಲ್ಲ. ಯಾವಾಗ ಪ್ರವಾಸಿಗರು ಫೊಟೋಗಾಗಿ ಸುಲಭವಾಗಿ ಹಣ ನೀಡುತ್ತಾರೋ, ಆಗ ಆ ಮಕ್ಕಳಿಗೆ ಶಿಕ್ಷಣಕ್ಕಿಂತ 'ಪೋಸ್' ನೀಡುವುದೇ ಸುಲಭದ ಸಂಪಾದನೆಯ ಮಾರ್ಗವಾಗಿ ಕಾಣತೊಡಗುತ್ತದೆ. ಶಾಲೆಗೆ ಹೋಗಿ ಅಕ್ಷರ ಕಲಿಯುವ ಬದಲು, ದಿನವಿಡೀ ಪ್ರವಾಸಿ ತಾಣಗಳಲ್ಲಿ ಅಲೆದಾಡಿ ಹಣ ಸಂಗ್ರಹಿಸುವುದು ಅವರಿಗೆ ಲಾಭದಾಯಕ ಎನಿಸುತ್ತದೆ. ಇದು ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯ ಇನ್ನೊಂದು ಕೂಪಕ್ಕೆ ತಳ್ಳುತ್ತದೆ. ತಲೆತಲಾಂತರದಿಂದ ಬರಬೇಕಾದ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ಇಲ್ಲಿ ಕುಂಠಿತವಾಗಿ, ಆ ಇಡೀ ಸಮುದಾಯವು ಪ್ರವಾಸಿಗರ ದಯೆಯ ಮೇಲೆ ಬದುಕುವ ಅನಿವಾರ್ಯತೆಗೆ ಸಿಲುಕುತ್ತದೆ. ಇದು ಸಮುದಾಯದ ನೈಜ ಬೆಳವಣಿಗೆಗೆ ಮಾರಕವಾದ ಬೆಳವಣಿಗೆ. ಪ್ರವಾಸ ಎಂದರೆ ಕೇವಲ ಫೊಟೋಗಳನ್ನು ಸಂಗ್ರಹಿಸುವುದಲ್ಲ, ಅದು ಒಂದು ಪ್ರದೇಶದ ಸಂಸ್ಕೃತಿಯನ್ನು ಗೌರವಿಸುವುದು ಕೂಡ ಹೌದು. ನಮ್ಮ ಒಂದು ಸಣ್ಣ ಆತುರದ ನಿರ್ಧಾರ (ಹಣ ನೀಡುವುದು) ಒಂದು ಮಗುವಿನ ಶಾಲೆಯ ಹಾದಿಯನ್ನು ತಪ್ಪಿಸಬಾರದು. ಸಮಾಜವನ್ನು ಕ್ಯಾಮೆರಾ ಕಣ್ಣಿನಿಂದ ಮಾತ್ರವಲ್ಲದೇ, ದೂರದೃಷ್ಟಿಯ ಜವಾಬ್ದಾರಿಯುತ ಕಣ್ಣುಗಳಿಂದಲೂ ನೋಡುವುದು ಇಂದಿನ ಅಗತ್ಯ.

ಇಂದಿನ ಡಿಜಿಟಲ್ ಯುಗದಲ್ಲಿ, ನಾವು ಕಂಡ ಸುಂದರ ದೃಶ್ಯ ಅಥವಾ ತಾಣವನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಒಂದು ಹವ್ಯಾಸವಾಗಿ ಬೆಳೆದಿದೆ. ಪ್ರವಾಸದ ಫೊಟೋಗಳ ಜತೆಗೆ 'ಜಿಯೋಟ್ಯಾಗ್' (Geotag) ಅಥವಾ ನಿಖರವಾದ ಸ್ಥಳದ ಮಾಹಿತಿಯನ್ನು ನೀಡುವುದು ನಮಗೆ ಹೆಮ್ಮೆಯ ವಿಷಯವಾಗಿರಬಹುದು. ಆದರೆ, ಈ ಒಂದು ಸಣ್ಣ 'ಕ್ಲಿಕ್' ಪ್ರಕೃತಿಯ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ ಎಂಬುದು ಕಹಿ ಸತ್ಯ. ನಾವೊಂದು ಕಾಡಿನ ಮಧ್ಯೆ ಯಾರಿಗೂ ಗೊತ್ತಿರದ ಜಲಪಾತ ಅಥವಾ ಜನರಿಲ್ಲದ ಕೆರೆ,ಕೊಳ, ಸರೋವರ, ಹಕ್ಕಿಗಳು ಗೂಡು ಕಟ್ಟಿರುವ ಮರವನ್ನು ಪತ್ತೆಹಚ್ಚಿ ಅದರ ನಿಖರ ಲೊಕೇಶನ್ ಹಾಕುತ್ತೇವೆ ಎಂದುಕೊಳ್ಳಿ. ಸಾಮಾಜಿಕ ಜಾಲತಾಣದ ವೇಗಕ್ಕೆ ಆ ಜಾಗ ಕ್ಷಣಾರ್ಧದಲ್ಲಿ 'ವೈರಲ್' ಆಗುತ್ತದೆ. ಅದರ ಬೆನ್ನಲ್ಲೇ ಮುಂದಿನ ವಾರ ಅಲ್ಲಿ ಸಾವಿರಾರು ಪ್ರವಾಸಿಗರು ಜಮಾಯಿಸುತ್ತಾರೆ.

ಅತೀ ಕಡಿಮೆ ಸಮಯದಲ್ಲಿ ಅತಿಯಾದ ಪ್ರವಾಸಿಗರು ದಾಂಗುಡಿಯಿಡುತ್ತಾರೆ. ಅಲ್ಲಿನ ಪರಿಸರಕ್ಕೆ ಪ್ಲಾಸ್ಟಿಕ್ ಬಾಟಲಿ, ಕಸಗಳನ್ನು ಎಸೆದು ಆ ಸುಂದರ ತಾಣವನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತಾರೆ. ನೋಡನೋಡುತ್ತಿದ್ದಂತೆ ಕಾಡಿನ ಮೌನ, ಪಕ್ಷಿಗಳ ಕಲರವ ಮರೆಯಾಗಿ ಮನುಷ್ಯರ ಗದ್ದಲ ಮತ್ತು ವಾಹನಗಳ ಹೊಗೆ ಆವರಿಸುತ್ತದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮನುಷ್ಯರ ಅತಿಯಾದ ಸಂಚಾರದಿಂದ ಅಲ್ಲಿನ ಅಪರೂಪದ ಗಿಡಮೂಲಿಕೆಗಳು ಅಥವಾ ಪ್ರಾಣಿ ಸಂಕುಲದ ನೆಮ್ಮದಿಗೆ ಭಂಗ ಬರುತ್ತದೆ. ನಿಸರ್ಗದ ಸುಂದರ ತಾಣಗಳನ್ನು ನಾವು ಆನಂದಿಸಬೇಕು, ಆದರೆ ಅವುಗಳನ್ನು ನಾಶಪಡಿಸುವ ಹಾದಿಯನ್ನು ಸುಗಮಗೊಳಿಸಬಾರದು. ಅಪರೂಪದ ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳ ಫೊಟೋ ಹಂಚಿಕೊಳ್ಳುವಾಗ ನಿಖರವಾದ ಲೊಕೇಶನ್ ನೀಡುವ ಬದಲು ಕೇವಲ ಜಿಲ್ಲೆ ಅಥವಾ ರಾಜ್ಯದ ಹೆಸರನ್ನು ಉಲ್ಲೇಖಿಸಿ. ಉದಾಹರಣೆಗೆ, 'ಪಶ್ಚಿಮ ಘಟ್ಟದ ಒಂದು ಸುಂದರ ತಾಣ' ಎಂದು ಹಾಕಬಹುದು. ತಂತ್ರಜ್ಞಾನವು ಪ್ರಕೃತಿಯನ್ನು ಅನ್ವೇಷಿಸಲು ನೆರವಾಗಬೇಕೇ ಹೊರತು ಅದನ್ನು ಆಕ್ರಮಿಸಲು ಅಥವಾ ನಾಶಪಡಿಸಲು ಅಲ್ಲ. ಒಂದು ಲೊಕೇಶನ್ ಟ್ಯಾಗ್ ಮಾಡುವ ಮುನ್ನ, ಆ ಜಾಗದ ಸುರಕ್ಷತೆಯ ಬಗ್ಗೆ ಯೋಚಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರವಾಸಿಯ ಕರ್ತವ್ಯ.

ultimate-guide-to-travel-photogr

ಒಬ್ಬ ಜವಾಬ್ದಾರಿಯುತ ಛಾಯಾಗ್ರಾಹಕ ಕೇವಲ 'ಚಿತ್ರ'ವನ್ನು ಸೆರೆಹಿಡಿಯುವುದಿಲ್ಲ, ಆ ಚಿತ್ರದ ಹಿಂದಿನ 'ಕಥೆ'ಯನ್ನು ಗೌರವಿಸುತ್ತಾನೆ. ನೀವು ಒಬ್ಬ ಕುಂಬಾರನ ಫೊಟೋ ತೆಗೆದರೆ, ಅವರ ವೃತ್ತಿಯ ಕಷ್ಟ-ಸುಖಗಳನ್ನು ಕೇಳಿ ತಿಳಿಯಬೇಕು. ನಿಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅವರ ಕಲೆಯ ಬಗ್ಗೆ ಬರೆದರೆ, ಅವರಿಗೆ ಕೇವಲ ಒಂದು 'ಫೊಟೋ ಸಬ್ಜೆಕ್ಟ್' ಎಂಬ ಭಾವನೆ ಬರುವುದಿಲ್ಲ. ಅವರ ಕಲೆಯ ವಿಶೇಷ ಅಥವಾ ನೀವು ಅವರಿಂದ ತಿಳಿದುಕೊಂಡ ಒಂದು ಸಣ್ಣ ಕತೆಯನ್ನು ಬರೆದರೆ. ನಿಮ್ಮ ಫಾಲೋವರ್ಸ್‌ಗಳಿಗೆ ಕೇವಲ ಒಂದು ದೃಶ್ಯ ಮಾತ್ರವಲ್ಲದೇ, ಆ ಕಲೆಯ ಮೌಲ್ಯದ ಅರಿವಾಗುತ್ತದೆ. ಈ ರೀತಿಯ ಬರಹವು ಆ ಕಲಾವಿದನಿಗೆ ಗೌರವ ತಂದುಕೊಡುವುದಲ್ಲದೇ, ಆ ಕಲೆಗೆ ಒಂದು ಹೊಸ ಮನ್ನಣೆಯನ್ನು ದೊರಕಿಸಿಕೊಡುತ್ತದೆ. ಛಾಯಾಗ್ರಹಣವು ಕೇವಲ ಬೆಳಕು ಮತ್ತು ನೆರಳಿನ ಆಟವಲ್ಲ, ಅದು ಮನುಷ್ಯ ಮನುಷ್ಯರ ನಡುವಿನ ಸಂವಹನವೂ ಹೌದು. ಕ್ಯಾಮೆರಾಲೆನ್ಸ್ ಮತ್ತು ಮನುಷ್ಯನ ನಡುವೆ ಇರುವ 'ಅಂತರ'ವನ್ನು ಮಾನವೀಯತೆಯಿಂದ ಅಳಿಸುವುದು ಮುಖ್ಯ. ನಾವು ತೆಗೆಯುವ ಚಿತ್ರಗಳು ಜನರ ಘನತೆಯನ್ನು ಹೆಚ್ಚಿಸುವಂತಿರಲಿ ಹೊರತು, ಅವರನ್ನು ಕೇವಲ ಪ್ರದರ್ಶನದ ವಸ್ತುವನ್ನಾಗಿ ಮಾಡಬಾರದು. ಆಗ ಮಾತ್ರ ಆ ಚಿತ್ರಕ್ಕೆ ನಿಜವಾದ ಜೀವ ಬರುತ್ತದೆ.

ನಿಸರ್ಗದ ಮಡಿಲಿಗೆ ಪ್ರವೇಶಿಸಿದಾಗ ನಾವು ಅಲ್ಲಿನ ಅನ್ವೇಷಕರೇ ಹೊರತು ಆ ಜಾಗದ ಮಾಲೀಕರಲ್ಲ ಎಂಬ ಪ್ರಜ್ಞೆ ಪ್ರತಿಯೊಬ್ಬ ಛಾಯಾಗ್ರಾಹಕನಿಗೂ ಇರಬೇಕು. ವಿಶೇಷವಾಗಿ ಪಶ್ಚಿಮ ಘಟ್ಟದಂಥ ಜೀವವೈವಿಧ್ಯದ ತಾಣಗಳಲ್ಲಿ ನಮಗೆ ಕಾಣಸಿಗುವ ಅಪರೂಪದ ಕಪ್ಪೆಗಳು, ಹಾವುಗಳು ಅಥವಾ ಬಣ್ಣ ಬಣ್ಣದ ಕೀಟಗಳು ಆ ಪರಿಸರದ ಅವಿಭಾಜ್ಯ ಅಂಗಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು 'ಪರ್ಫೆಕ್ಟ್ ಶಾಟ್' ಪಡೆಯುವ ಹಪಾಹಪಿಯಲ್ಲಿ ನಾವು ಪ್ರಕೃತಿಯ ನಿಯಮಗಳನ್ನೇ ಮೀರುತ್ತಿದ್ದೇವೆ. ಒಂದು ಪುಟ್ಟ ಕಪ್ಪೆ ಅಥವಾ ಕೀಟವು ಗಿಡದ ಎಲೆಯ ಕೆಳಗೆ ಅಥವಾ ಪೊದೆಯ ಮರೆಯಲ್ಲಿ ಕುಳಿತಿದೆ ಎಂದರೆ, ಅದು ಕೇವಲ ವಿಶ್ರಾಂತಿ ಪಡೆಯುತ್ತಿಲ್ಲ; ಬದಲಾಗಿ ಹದ್ದು ಅಥವಾ ಇತರ ಪರಭಕ್ಷಕ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಉತ್ತಮ ಬೆಳಕು ಅಥವಾ ವಿಶಿಷ್ಟ 'ಆಂಗಲ್' ಸಿಗಲಿ ಎಂಬ ಕಾರಣಕ್ಕೆ ಆ ಪ್ರಾಣಿಯ ಸುತ್ತಲಿರುವ ಗಿಡಗಂಟಿಗಳನ್ನು ಕತ್ತರಿಸುವುದು ಅಥವಾ ರೆಂಬೆಗಳನ್ನು ಮುರಿಯುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಆ ಜೀವಿಯ ನೈಸರ್ಗಿಕ ರಕ್ಷಾಕವಚವನ್ನು ನಾವು ಕಿತ್ತೆಸೆದಂತಾಗುತ್ತದೆ. ನಮ್ಮ ಒಂದು ಫೊಟೋದ ಆತುರವು ಆ ಜೀವಿಯನ್ನು ಬೇರೆ ಪ್ರಾಣಿಗಳಿಗೆ ಸುಲಭ ತುತ್ತಾಗುವಂತೆ ಮಾಡುತ್ತದೆ. 'ಫೊಟೋಗಾಗಿ ಪ್ರಕೃತಿಗೆ ಧಕ್ಕೆಯನ್ನುಂಟು ಮಾಡಬಾರದು, ಪ್ರಕೃತಿ ಹೇಗಿದೆಯೋ ಹಾಗೆಯೇ ಸೆರೆಹಿಡಿಯಬೇಕು' ಎಂಬುದು ವನ್ಯಜೀವಿ ಛಾಯಾಗ್ರಹಣದ ಮೂಲ ಮಂತ್ರವಾಗಬೇಕು.

ಇದನ್ನೂ ಓದಿ: ಸ್ಕಾಚ್ ಬಾಟಲಿಗಳ ಮೆರುಗು: ಪ್ರವಾಸೋದ್ಯಮದ ಗೆಲುವಿನ ನಗು!

ಛಾಯಾಗ್ರಹಣ ಎನ್ನುವುದು ಕೇವಲ ಕಣ್ಣಿಗೆ ಕಾಣುವ ದೃಶ್ಯವಲ್ಲ, ಅದು ಹೃದಯಕ್ಕೆ ಮುಟ್ಟುವ ಕಥೆಯಾಗಬೇಕು. ಎದುರಿಗಿರುವ ವ್ಯಕ್ತಿಯನ್ನು ಗೌರವದೊಂದಿಗೆ ಕಂಡು, ಅವರ ಬದುಕಿನ ಕಥೆಯನ್ನು ಜಗತ್ತಿಗೆ ಪ್ರಾಮಾಣಿಕವಾಗಿ ತಲುಪಿಸಿದಾಗ ಮಾತ್ರ ನೀವು

ಒಬ್ಬ ಪರಿಪೂರ್ಣ ಛಾಯಾಗ್ರಾಹಕನಾಗಲು ಸಾಧ್ಯ. ಒಬ್ಬ ಜವಾಬ್ದಾರಿಯುತ ಛಾಯಾಗ್ರಾಹಕ ತನ್ನ ಚಿತ್ರಗಳ ಮೂಲಕ ಪ್ರಕೃತಿಯನ್ನು ರಕ್ಷಿಸಬೇಕೇ ಹೊರತು ಅದನ್ನು ಸಂಕಷ್ಟಕ್ಕೆ ತಳ್ಳಬಾರದು. ಪರಿಸರ ಸ್ನೇಹಿ ಛಾಯಾಗ್ರಹಣ ಎಂದರೆ ಪ್ರಕೃತಿಯ ಮೌನವನ್ನು ಗೌರವಿಸುವುದು. ನಮ್ಮ ಒಂದು ಫೊಟೋ ಪ್ರಕೃತಿಗೆ ಮಾರಕವಾಗಬಾರದು. ಮುಂದಿನ ಪೀಳಿಗೆಗೂ ಈ ಸುಂದರ ಕಾಡುಗಳು ಉಳಿಯಬೇಕೆಂದರೆ, ನಾವು ಇಂದು ಕ್ಯಾಮೆರಾ ಹಿಡಿದಾಗ ಜವಾಬ್ದಾರಿಯಿಂದ ವರ್ತಿಸುವುದು ಅತ್ಯಗತ್ಯ. ಒಬ್ಬ ಜವಾಬ್ದಾರಿಯುತ ಛಾಯಾಗ್ರಾಹಕನಿಗೆ ಕ್ಯಾಮೆರಾ ಒಂದು ಆಯುಧವಲ್ಲ, ಅದು ಗೌರವದ ಸಂಕೇತವಾಗಬೇಕು. ನಾವು ಹೋದ ಸ್ಥಳಗಳಲ್ಲಿ ನಮ್ಮ ಹೆಜ್ಜೆಗುರುತುಗಳನ್ನು ಮಾತ್ರ ಬಿಟ್ಟು ಬರಬೇಕು ಮತ್ತು ಅಲ್ಲಿನ ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯಬೇಕು. ಸೌಂದರ್ಯಕ್ಕಿಂತಲೂ 'ಸಂವೇದನೆ' ಮುಖ್ಯವಾದಾಗ ಮಾತ್ರ ನಾವು ಜವಾಬ್ದಾರಿಯುತ ಛಾಯಾಗ್ರಾಹಕರಾಗಲು ಸಾಧ್ಯ.