ಎಂಜಿನ್‌ಗೆ ನಾಣ್ಯ ಎಸೆಯಬಹುದೇ ?
ಚೀನಾ ಸದರ್ನ್ ವಿಮಾನದಲ್ಲಿ ಗುವಾಂಗ್ಝೌಗೆ ಹೊರಟಿದ್ದ ಈಕೆ, ಸುಖ ಮತ್ತು ಸುರಕ್ಷಿತ ಪ್ರಯಾಣಕ್ಕೆ ದೇವರಲ್ಲಿ ಪ್ರಾರ್ಥಿಸಿ, ಎಂಜಿನ್ ಕಡೆಗೆ ಒಂದು ಮುಷ್ಟಿ ನಾಣ್ಯಗಳನ್ನು ಎಸೆದಳು. ಇದು ಸುರಕ್ಷಿತ ಪ್ರಯಾಣಕ್ಕೆ ದೇವರಿಗೆ ಸಲ್ಲಿಸುವ ಕಾಣಿಕೆ ಎಂದು ಆಕೆ ಭಾವಿಸಿದ್ದಳು. ಆ ನಾಣ್ಯಗಳಲ್ಲೊಂದು ನಿಜಕ್ಕೂ ಎಂಜಿನ್ ಒಳಗೆ ಹೋಗಿ ಬಿಟ್ಟಿತು. ಈ ಘಟನೆ ಸಣ್ಣದಾಗಿ ಕಂಡರೂ, ಪರಿಣಾಮಗಳು ದೊಡ್ಡದಾಗಿದ್ದವು. ಅದನ್ನು ಉಪೇಕ್ಷಿಸುವಂತಿರಲಿಲ್ಲ. ಇದನ್ನು ನೋಡಿದ ಗ್ರೌಂಡ್ ಸ್ಟಾಫ್, ತುರ್ತುಸ್ಥಿತಿಯನ್ನು ಘೋಷಿಸಿದೆ.
ನಮ್ಮ ದೇಶದಂದೇ ಅಲ್ಲ, ಬೇರೆ ದೇಶಗಳಲ್ಲೂ ಈ ನಂಬಿಕೆ ಇದೆ. ಅದೇನೆಂದರೆ, ಜನ ಕೆಲವು ಸ್ಥಳಗಳಲ್ಲಿ ತಮಗೆ ಒಳ್ಳೆಯದಾಗಲಿ ಎಂದು ನಾಣ್ಯಗಳನ್ನು ಎಸೆಯುತ್ತಾರೆ. ನಮ್ಮ ದೇಶದಲ್ಲಿ ಜನ ಕೆರೆ, ಬಾವಿ ಸೇರಿದಂತೆ ಪವಿತ್ರ ಸ್ಥಳಗಳಲ್ಲಿ ನಾಣ್ಯಗಳನ್ನು ಎಸೆಯುತ್ತಾರೆ. ಈ ಪದ್ಧತಿ ವಿದೇಶಗಳಲ್ಲೂ ಇದೆ. ತಾವು ದೇವರಿಗೆ ಕಾಣಿಕೆ ಅರ್ಪಿಸುತ್ತಿರುವುದಾಗಿ ಭಾವಿಸುತ್ತಾರೆ.

ನಮ್ಮ ದೇಶದಲ್ಲಿ ಸಾಕ್ಷಾತ್ ಹನುಮಂತನ ಅಪರವತಾರ ಎಂದು ಕೋತಿಗಳಿಗೆ ನಾಣ್ಯ ಎಸೆಯುವುದುಂಟು. ಕೋತಿ ಸತ್ತಾಗಲೂ ಜನ ಮೃತದೇಹಕ್ಕೆ ನಾಣ್ಯ ಬಿಸಾಡುವುದುಂಟು. ಇಂದಿಗೂ ತಮ್ಮ ಇಷ್ಟದ ನಾಯಕ ನಟನ ಸಿನಿಮಾ ನೋಡಲು ಹೋದಾಗ, ಆತ ಪರದೆ ಮೇಲೆ ಮೊದಲ ಬಾರಿಗೆ ಬರುತ್ತಿರುವಂತೆ ಅಭಿಮಾನಿಗಳು ಕೇಕೆ ಹಾಕಿ ಪರದೆಯ ಕಡೆಗೆ ನಾಣ್ಯ ಬಿಸಾಡುವುದುಂಟು.
ನಾನು ಏಸುಕ್ರಿಸ್ತನ ಜನ್ಮಸ್ಥಳವಾದ ಬೆತ್ಲಹಮ್‌ಗೆ ಹೋದಾಗಲೂ ಏಸುವಿನ ಪ್ರತಿಮೆ ಎದುರು ನಾಣ್ಯಗಳ ರಾಶಿಯೇ ಇತ್ತು. ಬಂದವರೆಲ್ಲ ನಾಣ್ಯ ಚೆಲ್ಲಿ ಹೋಗುವುದು ಅಲ್ಲಿನ ಸಂಪ್ರದಾಯ. ದೇವರ ಮೂರ್ತಿಗೆ, ಫೊಟೋಕ್ಕೆ ನಾಣ್ಯ ಎಸೆಯುವುದು ಸಾಮಾನ್ಯ ಬಿಡಿ. ಆದರೆ ವಿಮಾನದ ಎಂಜಿನ್‌ಗೆ ನಾಣ್ಯ ಎಸೆಯುವುದನ್ನು ನೋಡಿದ್ದೀರಾ? ಕೆಲ ದಿನಗಳ ಹಿಂದೆ, ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ 80ರ ವೃದ್ಧೆಯೊಬ್ಬಳು ವಿಮಾನದ ಜೆಟ್ ಎಂಜಿನ್‌ಗೆ ನಾಣ್ಯಗಳನ್ನು ಎಸೆದು ಬಿಟ್ಟಳು. ಈ ಘಟನೆ ಅಲಕಲವನ್ನುಂಟು ಮಾಡಿತು. ಚೀನಾ ಸದರ್ನ್ ವಿಮಾನದಲ್ಲಿ ಗುವಾಂಗ್ಝೌಗೆ ಹೊರಟಿದ್ದ ಈಕೆ, ಸುಖ ಮತ್ತು ಸುರಕ್ಷಿತ ಪ್ರಯಾಣಕ್ಕೆ ದೇವರಲ್ಲಿ ಪ್ರಾರ್ಥಿಸಿ, ಎಂಜಿನ್ ಕಡೆಗೆ ಒಂದು ಮುಷ್ಟಿ ನಾಣ್ಯಗಳನ್ನು ಎಸೆದಳು. ಇದು ಸುರಕ್ಷಿತ ಪ್ರಯಾಣಕ್ಕೆ ದೇವರಿಗೆ ಸಲ್ಲಿಸುವ ಕಾಣಿಕೆ ಎಂದು ಆಕೆ ಭಾವಿಸಿದ್ದಳು. ಆ ನಾಣ್ಯಗಳಲ್ಲೊಂದು ನಿಜಕ್ಕೂ ಎಂಜಿನ್ ಒಳಗೆ ಹೋಗಿ ಬಿಟ್ಟಿತು. ಈ ಘಟನೆ ಸಣ್ಣದಾಗಿ ಕಂಡರೂ, ಪರಿಣಾಮಗಳು ದೊಡ್ಡದಾಗಿದ್ದವು. ಅದನ್ನು ಉಪೇಕ್ಷಿಸುವಂತಿರಲಿಲ್ಲ. ಇದನ್ನು ನೋಡಿದ ಗ್ರೌಂಡ್ ಸ್ಟಾಫ್, ತುರ್ತುಸ್ಥಿತಿಯನ್ನು ಘೋಷಿಸಿದ. ತಕ್ಷಣ ಮುಖ್ಯ ಸೇಫ್ಟಿ ಎಂಜಿನಿಯರ್‌ಗೆ ವಿಷಯವನ್ನು ತಲುಪಿಸಲಾಯಿತು. ತಕ್ಷಣ ಭದ್ರತಾ ಸಿಬ್ಬಂದಿ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದುಕೊಂಡರು.
ಎಂಜಿನ್ ನಿರ್ವಹಣಾ ತಂಡ ಆಗಮಿಸಿ ಇನ್ನೇನು ಹಾರಲುರನ್ ವೇಗೆ ತೆರಳಬೇಕಾಗಿದ್ದ ವಿಮಾನವನ್ನು ನಿಲ್ಲಿಸಿತು. ಇಡೀ ಪ್ರಕರಣದ ವಿಚಾರಣೆ ಆಗದೇ ವಿಮಾನ ಹಾರುವಂತಿಲ್ಲ ಎಂದು ಏರ್‌ಲೈಗೆ ಸೂಚಿಸಲಾಯಿತು. ಪರಿಣಾಮ, ವಿಮಾನ 5 ಗಂಟೆ ವಿಳಂಬವಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು.
ವಿಮಾನದಲ್ಲಿದ್ದ 150 ಪ್ರಯಾಣಿಕರನ್ನು ಕೆಳಕ್ಕಿಳಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಾಯಿತು. ಎಂಜಿನ್ ಅನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲು ವಿಮಾನಯಾನ ಸಂಸ್ಥೆಯ ಮೆಕ್ಯಾನಿಕ್ ಗಳಿಗೆ ಆದೇಶಿಸಲಾಯಿತು. ಎಂಜಿನ್‌ಗೆ ಹಾನಿಯಾಗಿದೆಯೇ ಅಥವಾ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಬಹುದೇ ಎಂದು ಖಚಿತಪಡಿಸಿಕೊಳ್ಳಲು ಇದು ಅವಶ್ಯವಾಗಿತ್ತು.

ಎಸೆದ ನಾಣ್ಯಗಳ ಒಟ್ಟು ಮೌಲ್ಯ ಒಂದು ಡಾಲರ್ ಸಹ ಆಗಿರಲಿಲ್ಲ. ಆದರೆ ಇದರಿಂದಾದ ಸಮಯ, ಹಣ ಮತ್ತು ಸುರಕ್ಷತೆಯ ಅಪಾಯದ ವೆಚ್ಚ ಮಾತ್ರ ಅಳೆಯಲಾಗದಷ್ಟು. ಮಹಿಳೆಯ ವಯಸ್ಸು ಮತ್ತು ಅವಳ ಉದ್ದೇಶ ಕೆಟ್ಟದ್ದಾಗಿರಲಿಲ್ಲ ಎಂದು ಪರಿಗಣಿಸಿ, ಅವಳ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲಿಸಲಿಲ್ಲ. ಆದರೆ ಈ ಘಟನೆ ವಿಮಾನದ ಎಂಜಿನ್‌ಗಳು ಪ್ರಾರ್ಥನಾ ಸ್ಥಳ ಅಲ್ಲ ಎಂಬುದನ್ನು ನೆನಪಿಸುತ್ತದೆ.
ವಿಮಾನದ ಎಂಜಿನ್‌ಗಳು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣ ಯಂತ್ರಗಳಾಗಿವೆ. ಅವುಗಳ ಕಾರ್ಯ ನಿರ್ವಹಣೆಗೆ ಸಣ್ಣ ಅಡಚಣೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಹೀಗಾಗಿ ಇಂಥ ವಿಷಯವನ್ನು ಉದಾಸೀನ ಮಾಡುವಂತಿಲ್ಲ. ವಿಮಾನ ಪ್ರಯಾಣವು ಆಧುನಿಕ ತಂತ್ರಜ್ಞಾನದ ಅದ್ಭುತಗಳಲ್ಲಿ ಒಂದಾಗಿದೆ. ಪ್ರತಿ ವಿಮಾನಕ್ಕೂ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು, ಕಾರ್ಯ ವಿಧಾನಗಳಿವೆ.
ಇವುಗಳನ್ನು ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ. ಎಂಜಿನ್‌ಗೆ ನಾಣ್ಯಗಳನ್ನು ಎಸೆಯುವಂತಿಲ್ಲ, ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಹೇಳಿದಾಗಲೂ ಅಂಥ ಸುರಕ್ಷತಾ ಸೂಚನೆಗಳನ್ನು ನಿರ್ಲಕ್ಷಿಸುವುದು ವಿಮಾನದ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು. ಅದೃಷ್ಟಕ್ಕಾಗಿ, ಪ್ರಾರ್ಥನೆಗಾಗಿ ನಾಣ್ಯಗಳನ್ನು ಬಾವಿ ಅಥವಾ ಕಾರಂಜಿಗಳಿಗೆ ಎಸೆಯುವುದು ಸೂಕ್ತ. ಆದರೆ ಜೆಟ್ ಟರ್ಬೈನ್‌ಗಳ ಸುರಕ್ಷತೆಯೊಂದಿಗೆ ಆಟವಾಡುವುದು ಸರ್ವಥಾ ಸರಿಯಲ್ಲ.