ಕಾಲಕಾಲಕ್ಕೂ ಹೊಸ ಅಲೆ ಬರುತ್ತದೆ. ಹೊಸ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಹೊಸ ಪೀಳಿಗೆ ಬಂದಾಗ ಹೊಸ ಆಲೋಚನೆಗಳು ಬರುವುದು ಸಹಜ. ಹಾಗಾದಾಗ ಅದರ ಹಿಂದಿನ ಪೀಳಿಗೆಯವರಿಗೆ ಭಯ ಆಗುವುದು ಅಥವಾ ಏನೋ ವಿಚಿತ್ರ ಇನ್‌ಸೆಕ್ಯುರಿಟಿ ಕಾಡುವುದು ಕೂಡ ಸಹಜ. ಹಾಗಂತ ನದಿ ಹರಿಯುವುದನ್ನು ನಿಲ್ಲಿಸುತ್ತದೆಯೇ? ಕಾಲವೂ ಹಾಗೆ ಹೊಸತೇನನ್ನೋ ಹೊತ್ತುಕೊಂಡು ಮುಂದೆ ಹೋಗುತ್ತಿರುತ್ತದೆ. ಅದೇ ರೀತಿ ಈಗ ಬಹಳ ಚರ್ಚೆಯಲ್ಲಿರುವ ವಿಷಯ ಎಂದರೆ ಜನ್‌ ಜಿ. ಈ ಪೀಳಿಗೆ ಏನು ಮಾಡುತ್ತದೆ? ಏನು ಮಾಡಬಹುದು? ಎಂಬ ಚಿಂತೆ ಅವರಿಗಿಲ್ಲದಿದ್ದರೂ ಹಿಂದಿನ ಎಲ್ಲ ಪೀಳಿಗೆಗೂ ಇದೆ. ಯಾವುದೇ ವಿಷಯ ತೆಗೆದುಕೊಂಡರೂ ಅದರ ಬಗ್ಗೆ ಜನ್‌ ಜಿ ಆಲೋಚನೆ ಏನು ಎನ್ನುವುದು ಈಗ ಚರ್ಚೆ ಆಗುತ್ತಿರುತ್ತದೆ. ಅದೇ ರೀತಿ ಪ್ರವಾಸೋದ್ಯಮದ ವಿಷಯದಲ್ಲೂ ಜನ್‌ ಜಿ ಆಲೋಚನೆ ಎನ್ನುವುದು ಚರ್ಚೆಯಲ್ಲಿರುವ ವಿಷಯ.

ಇದನ್ನೂ ಓದಿ: ನನ್ನನ್ನೇ ಜಾಸ್ತಿ ನಂಬ್ಕೋಬೇಡಿ ಪ್ಲೀಸ್‌ : ಎಐ

ಜನರೇಷನ್ ಜಿ಼ ಅಥವಾ 'ಜೆನ್ ಜಿ಼' ಕೇವಲ ಪ್ರವಾಸೋದ್ಯಮದಲ್ಲಿ ಭಾಗವಹಿಸುತ್ತಿಲ್ಲ. ದಶಕಗಳಿಂದ ಬೆಳೆದು ಬಂದಿದ್ದ ಉದ್ಯಮದ ಸಿದ್ಧಸೂತ್ರಗಳನ್ನೇ ಅವರು ಸವಾಲು ಮಾಡುತ್ತಿದ್ದಾರೆ. ಸರಿಸುಮಾರು 1997ರಿಂದ 2010ರ ಆರಂಭದ ನಡುವೆ ಜನಿಸಿದ ಈ ಪೀಳಿಗೆಯು, ಹುಟ್ಟಿನಿಂದಲೇ ಡಿಜಿಟಲ್ ಲೋಕದ ಸಂಪರ್ಕದಲ್ಲೇ ಬೆಳೆದವರು. ಇದರ ಪರಿಣಾಮವಾಗಿ, ಅವರ ಪ್ರವಾಸದ ದೃಷ್ಟಿಕೋನವು ವಿಭಿನ್ನ. ಅವರಿಗೆ ಪ್ರವಾಸ ಎಂದರೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಮತ್ತು ತಮ್ಮ ಮೌಲ್ಯಗಳನ್ನು ಜಗತ್ತಿಗೆ ತೋರಿಸುವ ಮಾಧ್ಯಮ ಎಂದು ಹೇಳುತ್ತದೆ ಒಂದು ವರದಿ. ಈ ಹಿಂದಿನ ಪೀಳಿಗೆಯವರು ಪ್ರವಾಸವನ್ನು ಒಂದು ಐಷಾರಾಮಿ ಅಥವಾ ಸಾಂದರ್ಭಿಕ ವಿಶ್ರಾಂತಿ ಎಂದು ಪರಿಗಣಿಸುತ್ತಿದ್ದರು. ಆದರೆ ಜೆನ್ ಜಿ ಪಾಲಿಗೆ ಪ್ರವಾಸವು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ಹೊಸ ಹೊಸ ಪ್ರಯತ್ನಗಳು ನಡೆದಿವೆ. ವೆಕೇಶನ್‌ ಹಾಗೂ ಕೆಲಸ ಎರಡೂ ಬೆಸೆದು ʼವರ್ಕೇಶನ್‌ʼ ಮಾಡುತ್ತಾರೆ.

Untitled design (86)

ಜನ್ ಜಿ಼ ಪ್ರವಾಸದ ಶೈಲಿಯ ಪ್ರಮುಖ ಅಂಶವೆಂದರೆ ಡಿಜಿಟಲ್ ಸಂಸ್ಕೃತಿಯೊಂದಿಗಿರುವ ಗಾಢವಾದ ಸಂಬಂಧ. ಇನ್‌ಸ್ಟಾಗ್ರಾಮ್‌ನಂಥ ವೇದಿಕೆಗಳು ಪ್ರವಾಸವನ್ನು ಒಂದು ದೃಶ್ಯ ಕಾವ್ಯವನ್ನಾಗಿ ಪರಿವರ್ತಿಸಿವೆ. ಇಂದು ಒಂದು ಜಾಗ ಪ್ರಸಿದ್ಧಿಯಾಗಲು ದಶಕಗಳ ಕಾಲ ಬೇಕಿಲ್ಲ. ಈ ಹಿಂದೆ ಯಾರಿಗೂ ತಿಳಿಯದ ಜಾಗಗಳು ಇಂದು ರಾತ್ರೋರಾತ್ರಿ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತವಾಗುತ್ತಿವೆ. ಇದು ಅಪರಿಚಿತ ತಾಣಗಳಿಗೆ ಆರ್ಥಿಕವಾಗಿ ಲಾಭ ತಂದರೂ, ಅಲ್ಲಿನ ಪರಿಸರ ಮತ್ತು ಸಮುದಾಯಗಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತಿದೆ. ಉದಾಹರಣೆಗೆ, ವಿಯೆಟ್ನಾಂನ 'ಬನಾ ಹಿಲ್ಸ್'ನಲ್ಲಿರುವ ಗೋಲ್ಡನ್ ಬ್ರಿಡ್ಜ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ನಂತರ ಜಗತ್ತಿನಾದ್ಯಂತ ಪ್ರವಾಸಿಗರನ್ನು ಸೆಳೆಯಿತು. ಜೆನ್ ಜಿ ಪ್ರವಾಸಿಗರು ಇಂಥ ʼಇನ್‌ಸ್ಟಾಗ್ರಾಮ್ ಯೋಗ್ಯʼ ತಾಣಗಳನ್ನು ಹುಡುಕುತ್ತಾ ಹೋಗುತ್ತಾರೆ. ಆದರೆ, ಇದರ ಕರಾಳ ಮುಖವೆಂದರೆ ಇಟಲಿಯ ವೆನಿಸ್ ಅಥವಾ ಗ್ರೀಸ್‌ನ ಸ್ಯಾಂಟೊರಿನಿ. ಇಲ್ಲಿನ ಸ್ಥಳೀಯರಿಗಿಂತ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗಿ, ಪರಿಸರ ಹದಗೆಡುತ್ತಿದೆ. ಜೆನ್ ಜಿ ಈ ಸಮಸ್ಯೆಯನ್ನು ಅರಿತಿದ್ದರೂ, ಅದೇ ಫೊಟೋಗಳಿಗಾಗಿ ಅಲ್ಲಿಗೆ ಹೋಗುವುದು ಒಂದು ದೊಡ್ಡ ವಿರೋಧಾಭಾಸ. ಇಂದು ಒಂದು ಪ್ರವಾಸಿ ತಾಣವನ್ನು ಆಯ್ಕೆ ಮಾಡುವಾಗ ಅದರ ನೈಸರ್ಗಿಕ ಸೌಂದರ್ಯಕ್ಕಿಂತಲೂ, ಅಲ್ಲಿ ತೆಗೆದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಶೇರ್ ಆಗಬಲ್ಲವು ಎಂಬುದು ಮುಖ್ಯವಾಗುತ್ತಿದೆ. ಇದು ʼವೈರಲ್ ಡೆಸ್ಟಿನೇಶನ್ʼ ಎಂಬ ಹೊಸ ಟ್ರೆಂಡ್‌ಗೆ ಕಾರಣವಾಗಿದೆ.

ಜನ್ ಜಿ಼ 'ಸ್ಲೋ ಟ್ರಾವೆಲ್' ಅನ್ನು ಕೂಡ ಇಷ್ಟಪಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಇಂಡೋನೇಷ್ಯಾದ ಬಾಲಿ. ಇಲ್ಲಿ ಸಾವಿರಾರು ಯುವಕರು ತಿಂಗಳುಗಟ್ಟಲೆ ಉಳಿದುಕೊಂಡು ಕೆಲಸ ಮಾಡುತ್ತಾ ಪ್ರವಾಸ ಮಾಡುತ್ತಾರೆ. ಇವರನ್ನು 'ಡಿಜಿಟಲ್ ನೋಮ್ಯಾಡ್ಸ್' ಎನ್ನಲಾಗುತ್ತದೆ. ಅವರು ಸ್ಟಾರ್ ಹೊಟೇಲ್‌ಗಳ ಬದಲು ಸ್ಥಳೀಯರೊಂದಿಗೆ ಬೆರೆತು, ಅಲ್ಲಿನ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯಲು ಬಯಸುತ್ತಾರೆ. ಪ್ರವಾಸವೂ ಇವರಿಗೊಂದು ಬದುಕುವ ಶೈಲಿ. ಕೆಲಸ ಮತ್ತು ಮೋಜನ್ನು ಸಮನಾಗಿ ತೂಗುವ ಈ ಪದ್ಧತಿ ಉದ್ಯಮದಲ್ಲಿ ದೊಡ್ಡ ಬದಲಾವಣೆ ತಂದಿದೆ. ಇತ್ತೀಚೆಗೆ ಶ್ರೀಲಂಕಾ ಹೊಸದಾಗಿ ʼಡಿಜಿಟಲ್‌ ನೊಮ್ಯಾಡ್ಸ್‌ ವೀಸಾʼ ಕೂಡ ನೀಡಲು ಶುರು ಮಾಡಿದೆ. ಜೆನ್ ಜಿ ಪ್ರವಾಸಿಗರಲ್ಲಿ ಒಂದು ವಿರೋಧಾಭಾಸ ಕಾಣುತ್ತದೆ. ಅವರು ಒಂದೆಡೆ ಅಪ್ಪಟ ಸ್ಥಳೀಯ ಅನುಭವಗಳನ್ನು ಬಯಸುತ್ತಾರೆ. ಹೋಂ ಸ್ಟೇಗಳು, ಫೈನ್ ಡೈನಿಂಗ್ ಬದಲು ರಸ್ತೆ ಬದಿಯ ಆಹಾರ ಮತ್ತು ಸಿದ್ಧ ಪ್ರವಾಸದ ಬದಲು ಹೊಸ ಅನುಭವಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ಮತ್ತೊಂದೆಡೆ ಈ ನೈಜ ಅನುಭವಗಳನ್ನು ಆನ್‌ಲೈನ್ ಟ್ರೆಂಡ್‌ಗಳಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ. ಅಂದರೆ, ಒಬ್ಬ ಸ್ಥಳೀಯನಂತೆ ಬದುಕುವುದು ಕೂಡ ಇಂದು ಒಂದು ಏಸ್ಥೆಟಿಕ್‌ ಆಗಿ ಮಾರ್ಪಟ್ಟಿದೆ. ಪ್ರವಾಸದ ನೈಜ ಸೌಂದರ್ಯವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಅದನ್ನು ದಾಖಲಿಸಿ ಜಗತ್ತಿಗೆ ತೋರಿಸುವ ಹಂಬಲವು ಇಲ್ಲಿ ಎದ್ದು ಕಾಣುತ್ತಿದೆ.

ಹಣಕಾಸಿನ ವಿಷಯಕ್ಕೆ ಬಂದರೆ, ಜೆನ್ ಜಿ ಹಿಂದಿನವರಿಗಿಂತ ಹೆಚ್ಚು ಮಿತವ್ಯಯಿಗಳು. ಅವರು ಐಷಾರಾಮಿ ಸೌಲಭ್ಯಗಳಿಗಿಂತ ಕೈಗೆಟುಕುವ ದರ ಇಷ್ಟಪಡುತ್ತಾರೆ. ಇದರಿಂದಾಗಿ ಬಜೆಟ್ ಏರ್‌ಲೈನ್ಸ್, ಹಾಸ್ಟೆಲ್‌ಗಳು ಮತ್ತು ಡಿಜಿಟಲ್ ನೋಮ್ಯಾಡ್ ಜೀವನಶೈಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ ಅವರು ಎಲ್ಲದಕ್ಕೂ ಹಣ ಉಳಿಸುವುದಿಲ್ಲ. ತಮಗೆ ಅರ್ಥಪೂರ್ಣ ಎನಿಸುವ ಸಾಹಸಮಯ ಚಟುವಟಿಕೆಗಳು ಅಥವಾ ವಿಶಿಷ್ಟ ಸಾಂಸ್ಕೃತಿಕ ಅನುಭವಗಳಿಗಾಗಿ ಅವರು ಅತಿ ಹೆಚ್ಚು ಹಣ ವ್ಯಯಿಸಲು ಸಿದ್ಧರಿರುತ್ತಾರೆ. ಇದು ಪ್ರವಾಸೋದ್ಯಮವು ತನ್ನ ಪ್ಯಾಕೇಜ್ ಮಾದರಿಯನ್ನು ಬದಲಿಸಿ, ಅನುಭವ ಆಧಾರಿತ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಮಾಡಿದೆ. ತಮಗೆ ಬೇಕಾದ ವಿಷಯಕ್ಕೆ ಹಣ ವ್ಯಯಿಸಲು ಯಾವುದೇ ಹಿಂದೇಟು ಹಾಕುವುದಿಲ್ಲ.

ಇನ್ನೊಂದು ಖುಷಿಯ ವಿಷಯ ಎಂದರೆ ಜೆನ್ ಜಿ ಪ್ರವಾಸಿಗರು ಪರಿಸರ ಸುಸ್ಥಿರತೆಗೆ ಅತಿ ಹೆಚ್ಚು ಒತ್ತು ನೀಡುತ್ತಾರೆ ಎಂದು ಹೇಳಲಾಗುತ್ತದೆ. ಅವರು ಹವಾಮಾನ ಬದಲಾವಣೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಪರಿಸರ ಸ್ನೇಹಿ ವಸತಿಗಳನ್ನು ಬೆಂಬಲಿಸುತ್ತಾರೆ. ಪರಿಸರದ ಬಗ್ಗೆ ಜೆನ್ ಜಿ ಕಾಳಜಿ ವಹಿಸುತ್ತದೆ ಎಂಬುದಕ್ಕೆ 'ಫ್ಲೈಟ್‌ಶೇಮ್' ಚಳುವಳಿ ಒಂದು ನಿದರ್ಶನ. ಸ್ವೀಡನ್‌ನ ಗ್ರೇಟಾ ಥನ್ಬರ್ಗ್ ಅಂಥ ಯುವ ನಾಯಕಿಯರಿಂದ ಪ್ರೇರಿತರಾದ ಇವರು, ವಿಮಾನದ ಬದಲು ರೈಲು ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಯುರೋಪ್‌ನಲ್ಲಿ ಅನೇಕ ಯುವಕರು ವಿಮಾನ ಪ್ರಯಾಣವನ್ನು ತ್ಯಜಿಸಿ ರೈಲಿನಲ್ಲಿ ಸುತ್ತುತ್ತಿದ್ದಾರೆ. ಆದರೆ, ಅನೇಕ ಪ್ರವಾಸಿ ಸಂಸ್ಥೆಗಳು 'ಗ್ರೀನ್‌ವಾಶಿಂಗ್' (ಪರಿಸರ ಸ್ನೇಹಿ ಎಂದು ಸುಳ್ಳು ಹೇಳುವುದು) ಮೂಲಕ ಇವರನ್ನು ಸೆಳೆಯುತ್ತಿವೆ. ಜೆನ್ ಜಿ ಇಂಥ ಮೋಸಗಳನ್ನು ಪತ್ತೆಹಚ್ಚುವಲ್ಲಿಯೂ ಅಷ್ಟೇ ಚುರುಕಾಗಿದ್ದು, ನಿಜವಾದ ಪರಿಸರ ಕಾಳಜಿ ಇರುವ ಸಂಸ್ಥೆಗಳನ್ನೇ ಹುಡುಕುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸುಸ್ಥಿರತೆ ಎಂಬುದು ಕೇವಲ ಒಂದು 'ಬ್ರ್ಯಾಂಡಿಂಗ್' ಸಾಧನವಾಗಿ ಉಳಿದುಬಿಡುವ ಅಪಾಯವೂ ಇದೆ.

ಈ ಪೀಳಿಗೆಯು ಸಾಂಪ್ರದಾಯಿಕ ರಜಾದಿನಗಳಲ್ಲಿ ಮಾತ್ರ ಪ್ರವಾಸ ಹೋಗುವುದು ಎಂಬ ಸಿದ್ಧ ಮಾದರಿಯನ್ನು ಮುರಿದು ಹಾಕಿದೆ. ರಿಮೋಟ್ ಕೆಲಸ ಮತ್ತು ಫ್ರೀಲ್ಯಾನ್ಸ್ ಸಂಸ್ಕೃತಿಯು ಅವರು ಯಾವಾಗ ಬೇಕಾದರೂ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ಪ್ರಮುಖ ಪ್ರವಾಸಿ ತಾಣಗಳ ಮೇಲಿನ ಒತ್ತಡ ಕಡಿಮೆಯಾಗಿ, ಹೊಸ ಮತ್ತು ಅಪರಿಚಿತ ಜಾಗಗಳಿಗೆ ಜನ ಹೋಗುತ್ತಿದ್ದಾರೆ. ಆದರೆ, ಈ ರೀತಿಯ ಬದಲಾವಣೆಗಳಿಂದ ಪ್ರವಾಸೋದ್ಯಮದ ಬೇಡಿಕೆಯನ್ನು ಅಂದಾಜಿಸುವುದು ಕಷ್ಟಕರವಾಗುತ್ತಿದೆ. ಒಂದು ಸಣ್ಣ ಜಾಗವೂ ಕೂಡ ಕ್ಷಣಾರ್ಧದಲ್ಲಿ ಪ್ರಸಿದ್ಧವಾಗಿ, ಅಲ್ಲಿನ ಶಾಂತಿ ಕಣ್ಮರೆಯಾಗುವ ಸಾಧ್ಯತೆ ಇರುತ್ತದೆ. ಹಿಂದೆ ಜನರು ಗುಂಪಿನಲ್ಲಿ ಹೋಗುವ 'ಟೂರ್ ಪ್ಯಾಕೇಜ್' ಇಷ್ಟಪಡುತ್ತಿದ್ದರು. ಆದರೆ ಈಗಿನ ಜೆನ್ ಜಿ ಯುವಕರಿಗೆ ಅದು ಇಷ್ಟವಿಲ್ಲ. ಅವರಿಗೆ ತಮ್ಮದೇ ಆದ ದಾರಿ ಬೇಕು. ಉದಾಹರಣೆಗೆ, ಅಮೆಜಾನ್ ಕಾಡುಗಳಲ್ಲಿ ಬುಡಕಟ್ಟು ಜನರೊಂದಿಗೆ ಉಳಿಯುವುದು ಅಥವಾ ದಕ್ಷಿಣ ಕೊರಿಯಾದಲ್ಲಿ 'ಕೆ-ಪಾಪ್' ಸಂಸ್ಕೃತಿಯನ್ನು ಹುಡುಕುತ್ತಾ ಹೋಗುವುದು ಇವರಿಗೆ ಇಷ್ಟ. ಈ ಪೀಳಿಗೆಯವರು ತಮಗೆ ಇಷ್ಟ ಬಂದಂತೆ ಪ್ರವಾಸವನ್ನು ರೂಪಿಸಿಕೊಳ್ಳಲು ಇಷ್ಟಪಡುತ್ತಾರೆ.

ಸಾಂಸ್ಕೃತಿಕವಾಗಿ ಹೇಳುವುದಾದರೆ, ಜೆನ್ ಜಿ ಪ್ರವಾಸವನ್ನು ತಮ್ಮ ವ್ಯಕ್ತಿತ್ವದ ವಿಸ್ತರಣೆಯಾಗಿ ನೋಡುತ್ತಾರೆ. ಒಬ್ಬ ಸಾಹಸಿ ಅಥವಾ ಜಾಗತಿಕ ಪ್ರಜೆಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವುದು, ವೈಯಕ್ತಿಕ ಬೆಳವಣಿಗೆ ಮತ್ತು ಸೊಷಿಯಲ್‌ ಮಿಡಿಯಾದಲ್ಲಿ ಉತ್ತಮ ಸ್ಟೋರಿ ಟೆಲ್ಲಿಂಗ್‌ ಮೂಲಕ ಗಮನ ಸೆಳೆಯುವುದು ಇಲ್ಲಿ ಕೇಂದ್ರಬಿಂದು. ಇದು ಪ್ರವಾಸಿ ತಾಣದೊಂದಿಗಿನ ಬಾಂಧವ್ಯವನ್ನು ಹೆಚ್ಚಿಸಿದರೂ, ಕೆಲವೊಮ್ಮೆ ಗಮನವು ಕೇವಲ 'ತನ್ನ' ಕಡೆಗೆ ಮಾತ್ರ ಇರುತ್ತದೆ. ಇದರಿಂದಾಗಿ ಪ್ರವಾಸಿ ತಾಣಗಳು ಕೇವಲ ತಮ್ಮ ವೈಯಕ್ತಿಕ ಬ್ರ್ಯಾಂಡಿಂಗ್‌ಗಾಗಿ ಬಳಸುವ ಒಂದು ಬ್ಯಾಕ್‌ಡ್ರಾಪ್‌ ಆಗಿರುತ್ತವೆ ಅಷ್ಟೇ.

Gen-Z-Places-High-Value-on-Trave

ಪ್ರವಾಸೋದ್ಯಮದ ಮೇಲೆ ಜೆನ್ ಜಿ ಪ್ರಭಾವವು ಸೃಜನಾತ್ಮಕವೂ ಹೌದು ಮತ್ತು ಸವಾಲಿನದ್ದೂ ಹೌದು. ಒಳ್ಳೆಯ ವಿಷಯವೆಂದರೆ, ಅವರು ಪ್ರವಾಸೋದ್ಯಮದಲ್ಲಿ ಪಾರದರ್ಶಕತೆ, ಸಮಾನತೆ, ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ತರುತ್ತಿದ್ದಾರೆ. ಸ್ಥಳೀಯ ಉದ್ಯಮಗಳಿಗೆ ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೆ ಅವರು ಬೆಂಬಲ ನೀಡುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಬಳಕೆಯು ಬುಕಿಂಗ್ ಸಿಸ್ಟಮ್ ಮತ್ತು ಶಿಫಾರಸುಗಳನ್ನು ಸುಲಭಗೊಳಿಸಿದೆ. ವಿಭಿನ್ನ ಸಂಸ್ಕೃತಿಗಳನ್ನು ಅಪ್ಪಿಕೊಳ್ಳುವ ಅವರ ಮನಸ್ಥಿತಿಯು ಜಾಗತಿಕ ಒಗ್ಗಟ್ಟನ್ನು ಹೆಚ್ಚಿಸುತ್ತಿದೆ.

ಆದರೆ, ಈ ಬದಲಾವಣೆಗಳು ತರುವ ಸವಾಲುಗಳನ್ನು ಕಡೆಗಣಿಸುವಂತಿಲ್ಲ. ಸಾಮಾಜಿಕ ಮಾಧ್ಯಮದ ಟ್ರೆಂಡ್‌ಗಳು ಸ್ಥಳೀಯ ಪರಿಸರ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಬಹುದು. ಸಾಂಪ್ರದಾಯಿಕ ಪ್ರವಾಸೋದ್ಯಮ ಮೂಲಸೌಕರ್ಯಗಳು ಈ ಹೊಸ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಹೆಣಗಾಡಬೇಕಾಗಬಹುದು. ಅವರು ತಂತ್ರಜ್ಞಾನವನ್ನು ಬಳಸುತ್ತಲೇ ನೈಜತೆಯನ್ನು ಹುಡುಕುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಪ್ರಕೃತಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಡಿಜಿಟಲ್ ಪ್ರದರ್ಶನಕ್ಕಿಂತ ನಿಜವಾದ ಅನುಭವಕ್ಕೆ ಬೆಲೆ ನೀಡುವುದು ಈ ಪೀಳಿಗೆಯ ಮುಂದಿರುವ ಅತಿದೊಡ್ಡ ಸವಾಲಾಗಿದೆ.

ಪ್ರವಾಸೋದ್ಯಮದ ಭವಿಷ್ಯವು ಈ ಪೀಳಿಗೆಯ ಇಷ್ಟಕಷ್ಟಗಳ ಮೇಲೆ ನಿರ್ಧಾರವಾಗಲಿದೆ. ಈ ಪರಿವರ್ತನೆಯು ಪ್ರವಾಸೋದ್ಯಮವನ್ನು ಹೆಚ್ಚು ಸುಸ್ಥಿರ ಮತ್ತು ಸಮಾನವಾಗಿ ರೂಪಿಸುತ್ತದೆಯೇ ಅಥವಾ ಈಗಿರುವ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ ಎಂಬುದು ಈ ಹೊಸ ಬದಲಾವಣೆಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.