• ರಂಗಸ್ವಾಮಿ ಮೂಕನಹಳ್ಳಿ

ಕೈರೋ ನಗರದಿಂದ ಲಕ್ಸರ್ ನಗರಕ್ಕೆ ಕಾರಿನಲ್ಲಿ ಹೋಗಿಬಿಡೋಣ ಎಂದು ನಾಗೇಂದ್ರ ಹೇಳಿದಾಗ ನಾನು ಎರಡನೆಯ ಯೋಚನೆ ಮಾಡದೆ ಯೆಸ್ ಅಂದುಬಿಟ್ಟಿದ್ದೆ. ಈ ವೇಳೆಗಾಗಲೇ ನಾಗೇಂದ್ರ ಅವರ ಚಾಲನೆಯ ಶಕ್ತಿ ಕಂಡಿದ್ದ ನನಗೆ ಬೇಡ ಅನ್ನಲು ಕಾರಣವೇ ಸಿಕ್ಕಿರಲಿಲ್ಲ. ಎಂಟು ಗಂಟೆಯ ಕಾರು ಪ್ರಯಾಣ, ಹೊಸ ಅನುಭವವಾಗುತ್ತೆ. ಈ ದೇಶದ ಉದ್ದಗಲ ಸುತ್ತಿದ ಅನುಭವ ನಿತ್ಯ ಸಿಗುವುದಲ್ಲ ಹೀಗಾಗಿ ಹೊರಟೇ ಬಿಡೋಣ ಎಂದು ತೀರ್ಮಾನಿಸಿಬಿಟ್ಟೆವು. ನಾಲ್ಕೈದು ಸ್ಟಾಪ್ ಕೊಟ್ಟರೂ ಕೂಡ 9/10 ಗಂಟೆಯಲ್ಲಿ ಲಕ್ಸರ್ ತಲುಪಿಬಿಡಬಹುದು ಎನ್ನುವ ಲೆಕ್ಕಾಚಾರ ನಮ್ಮದು. ಕೆಲವೊಮ್ಮೆ ಹೆಚ್ಚು ವಿಚಾರ ಮಾಡಬಾರದು! ಹೆಚ್ಚು ತಿಳಿದುಕೊಳ್ಳುತ್ತಾ ಹೋದರೆ ನಾವು ಹೆಚ್ಚಿನದನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಬದುಕು ನನಗೆ ಕಲಿಸಿರುವ ಪಾಠ. ಆದರೂ ಬೇರೆ ದೇಶಗಳಲ್ಲಿ ಇದ್ದಾಗ ಒಂದಷ್ಟು ಆ ದೇಶದ ರೀತಿನೀತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆದಷ್ಟೂ ಅವರು ಎಳೆದಿರುವ ಆ ಲಕ್ಷ್ಮಣ ರೇಖೆಯಲ್ಲಿ ಬದುಕಲು ಪ್ರಯತ್ನಪಡುತ್ತೇನೆ. ನಾಗೇಂದ್ರ ನಿಯಮಗಳನ್ನು ಮುರಿಯದ ಪ್ರಜ್ಞಾವಂತ ನಾಗರಿಕ. ಆದರೆ ನನ್ನಷ್ಟು ಹಳೆಯಕಾಲದವರಲ್ಲ. ಅವರೊಬ್ಬ ಗೋ ಗೆಟ್ಟರ್! ಖಾನ್ ಎಲ್ ಖಲೀಲಿ ಮಾರುಕಟ್ಟೆಯಲ್ಲಿ ಅವರ ಹಾವಭಾವ ನೋಡಿ ಅಲ್ಲಿನ ಸ್ಥಳೀಯರು ಬಿಗ್ ಬಾಸ್ ಎಂದು ಸೆಲ್ಯೂಟ್ ಹೊಡೆದದ್ದು ಮರೆಯುವುದಾದರೂ ಹೇಗೆ? ಅವರಿಗೆ ಖಡಕ್ ಪೊಲೀಸ್ ಆಫೀಸರ್ ಲುಕ್ ಇದೆ. ನಗರದಲ್ಲಿ, ಮರುಭೂಮಿಯ ಚೆಕ್ ಪೋಸ್ಟುಗಳಲ್ಲಿ ಪೊಲೀಸರೇ ಅವರಿಗೆ ಸೆಲ್ಯೂಟ್ ಹೊಡೆದದ್ದಕ್ಕೆ ಸಾಕ್ಷಿಯಾದೆ! ಸರಳವಾಗಿ ಹೇಳಬೇಕೆಂದರೆ ಈ ರಸ್ತೆ ಬಹಳ ಖತರ್ನಾಕ್ ಅಂತೆ. ಇಂಟರ್ ನೆಟ್ ತುಂಬಾ ಇಂಥ ಕಥೆಗಳು ಸಾವಿರ ಇವೆ. ನಾವು ಯಾವುದನ್ನೂ ಓದದ ಕಾರಣ ಈ ರಸ್ತೆ ಪ್ರಯಾಣವನ್ನು ಕೈಗೊಂಡೆವು.
ಇದನ್ನೂ ಓದಿ: ವಿರೋಧಾಭಾಸಗಳೇ ಈಜಿಪ್ಟ್‌ನ ಕೈರೋ ನಗರದ ಆತ್ಮ!

ಕೈರೋದಿಂದ ಲಕ್ಸರ್‌ಗೆ ಹೋಗುವ ಪ್ರಯಾಣ ಕೇವಲ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುವ ಪಯಣವಲ್ಲ; ಅದು ಈಜಿಪ್ಟ್‌ನ ಆತ್ಮದೊಳಗೆ ಪ್ರವೇಶಿಸುವ ಅನುಭವ. ಸುಮಾರು 650 ಕಿಲೋಮೀಟರ್ ದೂರದ ಈ ರಸ್ತೆ, ನಮ್ಮ ಕಣ್ಣೆದುರು ಸಾವಿರಾರು ವರ್ಷಗಳ ಇತಿಹಾಸ, ಮರುಭೂಮಿಯ ಮೌನ ಮತ್ತು ನೈಲ್ ನದಿಯ ಜೀವಂತಿಕೆಯನ್ನು ಒಟ್ಟಾಗಿ ತೋರಿಸಿತು.

Untitled design (49)

ರಸ್ತೆ ಆರಂಭವಾಗುತ್ತಿದ್ದಂತೆ, ನಗರ ಗದ್ದಲ ನಿಧಾನವಾಗಿ ಹಿಂದೆ ಉಳಿಯುತ್ತದೆ. ರಸ್ತೆಯ ಇಕ್ಕೆಲಗಳಲ್ಲೂ ಹರಡಿಕೊಂಡಿರುವುದು ಅಂತ್ಯವಿಲ್ಲದ ಮರುಭೂಮಿ. ಸೂರ್ಯನ ಬೆಳಕಿನೊಂದಿಗೆ ಮರಳುಗಾಡಿನ ಬಣ್ಣಗಳು ಬದಲಿಸುತ್ತಾಹೋಗುವುದಕ್ಕೆ ನಾನು ಮತ್ತು ನಾಗೇಂದ್ರ ಸಾಕ್ಷಿಯಾದೆವು. ಬೆಳಗ್ಗೆ ಹಳದಿ, ಮಧ್ಯಾಹ್ನ ಬಂಗಾರದ ಛಾಯೆ, ಸಂಜೆ ಕಂದು-ಕಿತ್ತಳೆ ಮಿಶ್ರಣದ ಬಣ್ಣಕ್ಕೆ ಮರಳು ತಿರುಗುತ್ತಿತ್ತು. ಬೆಳಗ್ಗೆ ಚುಮುಗುಟ್ಟುವ ಚಳಿ ಮಧ್ಯಾಹ್ನವಾಗುತ್ತಿದ್ದಂತೆ ಸುಡು ಬಿಸಿಲು, ಸಂಜೆ ನಾಲ್ಕು, ನಾಲ್ಕೂವರೆಗೆ ಮುಳುಗುವ ಸೂರ್ಯ, ಕತ್ತಲು ಹೆಚ್ಚಾಗುತ್ತಾ ಹೋದಂತೆ ಹೆಚ್ಚುವ ಚಳಿ! ಒಂದು ದಿನದಲ್ಲಿ ಬಣ್ಣ ಬದಲಾಯಿಸುವುದು ಮಾತ್ರವಲ್ಲ, ಮರುಭೂಮಿ ವಾತಾವರಣವನ್ನು ಕೂಡ ಬದಲಾಯಿಸಿಕೊಂಡು ಬಿಡುತ್ತದೆ. ಅಚ್ಚರಿ ಎಂದರೆ ನಗರ ಪ್ರದೇಶಕ್ಕಿಂತ ಇಲ್ಲಿಯೇ ಚಳಿ ಹೆಚ್ಚು. ಬಿಸಿಲ ಧಗೆ ಕೂಡ ಅಷ್ಟೇ! ಒಟ್ಟಾರೆ ಈ ಪ್ರಯಾಣ ಮನಸ್ಸಿಗೆ ವಿಚಿತ್ರ ಶಾಂತಿಯನ್ನು ನೀಡಿದ್ದು ಸುಳ್ಳಲ್ಲ. ಇಲ್ಲಿ ಮೌನವೇ ಸಂಗೀತ. ಆದರೆ ನಾಗೇಂದ್ರ ಹೇಳಿಕೇಳಿ ಸಂಗೀತ ಪ್ರೇಮಿ. ಹೀಗಾಗಿ ಹಳೆಯ ಕನ್ನಡ ಹಾಡುಗಳ ಜತೆಜತೆಗೆ ಇತ್ತೀಚಿನ ಕನ್ನಡ ಪ್ರಸಿದ್ಧ ಹಾಡುಗಳು ಕೂಡ ಮರುಭೂಮಿಯಲ್ಲಿ ಮೆರೆದವು. ಶಾಸ್ತ್ರೀಯ ಸಂಗೀತ, ರುದ್ರ, ಗಮಕ ಇತ್ಯಾದಿಗಳು ಕೂಡ ಜತೆಯಾದವು. ನಾಗೇಂದ್ರನ ಕನ್ನಡ ಪ್ರೇಮ ಅನುಕರಣೀಯ. ಹೀಗಾಗಿ ಕನ್ನಡ ಹಾಡುಗಳು ತೊಂಬತ್ತು ಭಾಗವಾದರೆ, ಇನ್ನೊಂದು ಹತ್ತು ನನಗಾಗಿ ಸ್ಪ್ಯಾನಿಷ್ ಹಾಡುಗಳನ್ನೂ ಅವರು ಕೇಳಿದರು.

ರಸ್ತೆ ಬಹುತೇಕ ನೇರ ಮತ್ತು ವಿಶಾಲ. ದೂರದಲ್ಲಿ ಕೆಲವೊಮ್ಮೆ ಕಾಣಿಸುವ ಚೆಕ್‌ಪೋಸ್ಟ್‌ಗಳು ಈ ಪ್ರದೇಶದಲ್ಲಿ ಭದ್ರತೆಯ ಬಗ್ಗೆ ಒಂದಷ್ಟು ಭಯವನ್ನು ಹುಟ್ಟುಹಾಕಿತು. ರಾತ್ರಿ ಪ್ರಯಾಣದಲ್ಲಿ ಆಕಾಶ ತುಂಬಾ ನಕ್ಷತ್ರಗಳು! ನಗರದ ಬೆಳಕಿನಿಂದ ದೂರ ಇರುವುದರಿಂದ, ಆಕಾಶವೇ ಒಂದು ಜ್ಯೋತಿಷ್ಯಶಾಸ್ತ್ರ ಪಾಠ ಹೇಳಿಕೊಡಲು ತರಗತಿ ಆರಂಭಿಸಿದೆ ಅನಿಸುತ್ತಿತ್ತು.

Untitled design (47)

ಲಕ್ಸರ್ ಸಮೀಪಿಸುತ್ತಿದ್ದಂತೆ, ಮನಸ್ಸಿನಲ್ಲಿ ಒಂದು ವಿಶಿಷ್ಟ ಭಾವನೆ. ಇದೇ ಭೂಮಿಯಲ್ಲಿ ಫರೋಗಳು ನಡೆದಾಡಿದ್ದರು. ದೇವಸ್ಥಾನಗಳನ್ನು ಕಟ್ಟಿಸಿದರು, ಇತಿಹಾಸ ರೂಪುಗೊಂಡಿತು ಎಂಬ ಅರಿವಾಗುತ್ತಿದಂತೆ ಮೈ ಪುಳಕಗೊಳ್ಳುತ್ತದೆ. ಕಾರ್ನಾಕ್, ಲಕ್ಸರ್ ಟೆಂಪಲ್, ವ್ಯಾಲಿ ಆಫ್ ದ ಕಿಂಗ್ಸ್, ಇವೆಲ್ಲವನ್ನೂ ನೋಡಲಿದ್ದೇವೆ ಎನ್ನುವುದು ಹೊಸ ಉತ್ಸಾಹ ತುಂಬುತ್ತಿತ್ತು.

ಕೆಲವು ಪ್ರಯಾಣಗಳಲ್ಲಿ ಗಮ್ಯಸ್ಥಾನಕ್ಕಿಂತಲೂ ರಸ್ತೆಯೇ ಕಥೆಯಾಗುತ್ತದೆ. ಕೈರೋದಿಂದ ಲಕ್ಸರ್‌ಗೆ ಹೋಗುವ ಈಜಿಪ್ಟ್‌ನ ಮರುಭೂಮಿ ರಸ್ತೆ ಅಂಥದ್ದೇ ಒಂದು ಅನುಭವ. ನಕ್ಷೆಯಲ್ಲಿ ಇದು ಸುಮಾರು 650 ಕಿಲೋಮೀಟರ್ ದೂರ. ಆದರೆ ನಮ್ಮ ಹೃದಯದಲ್ಲಿ ಇದು ಎಂದೆಂದಿಗೂ ಮರೆಯಲಾಗದ ಪಯಣ. ಕೈರೋ ನಗರದ ಗದ್ದಲ, ಟ್ರಾಫಿಕ್, ಶಬ್ದ,ಇವೆಲ್ಲವೂ ನಿಧಾನವಾಗಿ ಹಿಂದುಳಿಯುತ್ತವೆ. ಕಾರು ಮರುಭೂಮಿಯೊಳಗೆ ಪ್ರವೇಶಿಸಿದ ಕ್ಷಣದಿಂದಲೇ ಪರಿಸರ ಬದಲಾಗುತ್ತದೆ. ಎಲ್ಲಿ ನೋಡಿದರೂ ಅಂತ್ಯವಿಲ್ಲದ ಮರಳು, ಕೆಲವೆಡೆ ಕಲ್ಲಿನ ಗುಡ್ಡಗಳು. ಇಲ್ಲಿ ಮಾತಿಗಿಂತ ಮೌನವೇ ಹೆಚ್ಚು ಮಾತನಾಡುತ್ತದೆ. ಕೆಲವೊಂದು ತಿರುವುಗಳು ಜೇಮ್ಸ್ ಬಾಂಡ್ ಚಿತ್ರಗಳನ್ನು ನೆನಪಿಗೆ ತಂದವು.

ಮೊದಲ ನೂರು ಕಿಲೋಮೀಟರ್ ದೂರದಲ್ಲಿ ನಮಗೆ ಪೆಟ್ರೋಲ್ ಬಂಕ್ ಸಿಕ್ಕಿತು. ಟ್ಯಾಂಕ್ ಪೂರ್ಣ ತುಂಬಿಸಿಕೊಂಡು ಹೊರಟೆವು. ಅದು ಐನೂರು ಕಿಲೋಮೀಟರ್ ಬರುತ್ತದೆ ಎಂದು ಹೇಳುತ್ತಿತ್ತು. ಆದರೆ ಇನ್ನೂರು ಹೋಗುವಷ್ಟರಲ್ಲಿ ಟ್ಯಾಂಕ್ ಖಾಲಿ! ಅದಕ್ಕೆ ಕಾರಣ ನಾಗೇಂದ್ರ! ಹೌದು, 180 ಕಿಲೋಮೀಟರ್ ವೇಗದಲ್ಲಿ ನಾಗೇಂದ್ರ ಕಾರನ್ನು ಚಲಾಯಿಸುತ್ತಿದ್ದರು. ಇದು ಹೇಳಿಕೇಳಿ ಫ್ರೀ ವೇ. ಅಂದರೆ ಇಲ್ಲಿ ಯಾವ ನಿಯಮಗಳು ಇಲ್ಲ. ವೇಗಮಿತಿ ಕೂಡ ಇಲ್ಲ. ನೂರಾರು ಕಿಲೋಮೀಟರ್ ಸಾಗಿದರೂ ಒಂದು ಪೆಟ್ರೋಲ್ ಬಂಕ್ ಸಿಗುವುದಿಲ್ಲ. ಚೆಕ್ ಪೋಸ್ಟ್ ಗಳಲ್ಲಿ ಸಿಗುವ ಪೊಲೀಸರಿಗೆ ಇಂಗ್ಲಿಷ್ ಗಂಧಗಾಳಿ ಇಲ್ಲ. ಹೀಗಾಗಿ ನಾನು ಮತ್ತು ನಾಗೇಂದ್ರ ಆತಂಕಕ್ಕೆ ಒಳಗಾದೆವು. ರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾದರೆ, ಪಂಚರ್ ಆದರೆ, ಗಾಡಿ ಕೆಟ್ಟು ನಿಂತರೆ ಅಲ್ಲಿಗೆ ನಮ್ಮ ಕಥೆ ಮುಗಿದಂತೆ ಎನ್ನುವುದು ಚೆನ್ನಾಗಿ ಅರ್ಥವಾಯ್ತು. ಗಂಟೆಗಳು ಕಳೆದರೂ ಒಂದು ವಾಹನ ಹಿಂದೆ ಅಥವಾ ಮುಂದೆ ಕಾಣಿಸುತ್ತಿರಲಿಲ್ಲ. ನಮ್ಮ ಪುಣ್ಯಕ್ಕೆ, ಸ್ವಲ್ಪ ದೂರದಲ್ಲಿ ಪೆಟ್ರೋಲ್ ಬಂಕ್ ಸಿಕ್ಕಿತು. ಇಲ್ಲಿ ಗೂಗಲ್ ನಲ್ಲಿ ಕೂಡ ಯಾರೂ ಸರಿಯಾಗಿ ಇವುಗಳನ್ನು ಮಾರ್ಕ್ ಮಾಡಿಲ್ಲ. ಮುಂದೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ನಾಗೇಂದ್ರ ಅವುಗಳನ್ನು ಅಲ್ಲಲ್ಲೇ ಗೂಗಲ್ ಮಾರ್ಕ್ ಮಾಡಿದರು. ಅಂದಹಾಗೆ ಪೂರ್ಣ ಪ್ರಯಾಣದಲ್ಲಿ ನಮ್ಮನ್ನು ಕಾಪಾಡಿದ್ದು ಹಣ್ಣುಗಳು. ಇಲ್ಲಿನ ಪೆಟ್ರೋಲ್ ಬಂಕ್ ಗಳಲ್ಲಿ ನಾವು ತಿನ್ನಲು ಆಗುವಂಥ ಖಾದ್ಯಗಳು ಸಿಗುತ್ತಿರಲಿಲ್ಲ. ಬಿಸ್ಕತ್, ಕಡಲೆಬೀಜ, ಪಿಸ್ತಾ ಜತೆಗೆ ಸೀಬೆಹಣ್ಣು, ಸೇಬು ಮೊದಲೇ ಕೊಂಡುಕೊಂಡಿದ್ದೆವು. ಅವುಗಳು ನಮ್ಮ ಪ್ರಯಾಣಕ್ಕೆ ಇಂಧನವಾದವು.

Untitled design (46)

ಲಕ್ಸರ್ ನಗರವನ್ನು ತಲುಪಿದೆವು. ಆದರೆ ಲಕ್ಸರ್ ನಗರದಲ್ಲಿ ಎರಡು ಭಾಗವಿದೆ. ಒಂದು ಹಳೆಯ ನಗರ. ಇನ್ನೊಂದು ಹೊಸ ಅಂದರೆ ಮಾಡರ್ನ್ ನಗರ ಪ್ರದೇಶ. ನಾವು ಏರ್ ಬಿ ಎನ್ ಬಿ ಮೂಲಕ ಮಾಡಿದ್ದ ಮನೆ ನಮ್ಮನ್ನು ಹಳೆಯ ನಗರಕ್ಕೆ ಕರೆದುಕೊಂಡು ಹೋಯ್ತು. ನೀವು ನಂಬುವುದಿಲ್ಲ, 21ನೆಯ ಶತಮಾನದಲ್ಲಿ 16ನೆಯ ಶತಮಾನಕ್ಕೆ ಹೋದಂತಾಯ್ತು! ಆ ಮನೆಯ ಓನರ್ ಒಳ್ಳೆಯವನು. ನಮಗೆ ಹೇಗೆ ಬರಬೇಕು ಎನ್ನುವುದನ್ನು ತನಗೆ ಬಂದ ಇಂಗ್ಲಿಷಿನಲ್ಲಿ ಹೇಳುತ್ತಿದ್ದ. ಇಲ್ಲಿ ಗೂಗಲ್ ಗುರುಗಳು ಬಹಳ ಸಲ ಕೈ ಕೊಟ್ಟುಬಿಟ್ಟರು. ಸ್ಥಳೀಯರ ಸಹಕಾರ ಬೇಕಾಗುತ್ತದೆ. ಮನೆಯೇನೋ ಚೆನ್ನಾಗಿತ್ತು. ಆದರೆ ಅದು ಇದ್ದ ಜಾಗ ನಮ್ಮ ಮನಸಿಗೆ ಅಷ್ಟೊಂದು ಹಿಡಿಸಲಿಲ್ಲ.

ಇದನ್ನೂ ಓದಿ: ಸಿಟಿ ಆಫ್‌ ಡೆಡ್‌ ಮತ್ತು ಬೆರಗುಗಣ್ಣಿನ ನಾನು!

ನಾಗೇಂದ್ರ ನನ್ನ ಮುಖಭಾವವನ್ನು ನೋಡಿ ಅರಿತುಕೊಂಡು ಬಿಟ್ಟರು. ಜತೆ ಪ್ರಯಾಣದಲ್ಲಿ ಇದು ಬಹಳ ಮುಖ್ಯ. ಇನ್ನೊಬ್ಬರ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ಗ್ರಹಿಸಬೇಕಾಗುತ್ತದೆ. ಒಬ್ಬರಿಗೊಬ್ಬರು ಜೊತೆಯಾಗಬೇಕು. ಒಬ್ಬರ ಭಾವನೆ ಇನ್ನೊಬ್ಬರು ಗೌರವಿಸಬೇಕು. ಆಗ ಮಾತ್ರ ಇಂಥ ಪ್ರಯಾಣಗಳು ಮನಸ್ಸಿನಲ್ಲಿ ಹಸಿರಾಗಿ ಉಳಿಯುತ್ತವೆ. ಈ ಬುಕಿಂಗ್ ಹಣ ಹೋದರೆ ಹೋಯ್ತು ಬೇರೆ ಕಡೆ ಹೋಗೋಣ ಎನ್ನುವ ಮಾತನ್ನು ನಾಗೇಂದ್ರ ಹೇಳಿದರು. ತಕ್ಷಣ ಹದಿನಾರನೆಯ ಶತಮಾನಕ್ಕೆ ಹೋಗಿದ್ದೆವಲ್ಲ, ಹೀಗಾಗಿ ಸ್ವಲ್ಪ ಶಾಕ್ ಆಗಿದ್ದು ನಿಜ. ಆದರೆ ಮನೆ 21ನೆಯ ಶತಮಾನದಾಗಿತ್ತು. ನಮಗೆ ಬೇಕಾಗಿದ್ದ ಎಲ್ಲಾ ವ್ಯವಸ್ಥೆಗಳು ಕೂಡ ಚೆನ್ನಾಗಿದ್ದವು. ರಾತ್ರಿ ಆರೇಳು ಗಂಟೆ ಮಲಗುವುದು ಬಿಟ್ಟು ನಾವು ಅಲ್ಲಿರುವುದಿಲ್ಲ, ಅಲ್ಲದೆ ಅವೇಳೆಯಲ್ಲಿ ಹೊಸ ಜಾಗ ಹುಡುಕುವ ಶಕ್ತಿ ಕೂಡ ಇರಲಿಲ್ಲ. ದೇವರ ಮೇಲೆ ಭಾರ ಹಾಕಿ ಮಲಗಿದೆವು. ತುಂಬಾ ಚೆನ್ನಾಗಿ ನಿದ್ದೆ ಬಂತು. ನೀವು ಲಕ್ಸರ್ ಹೋಗುವರಿದ್ದರೆ ಹುಷಾರು! ಬುಕಿಂಗ್ ಮಾಡುವ ಮುನ್ನ ಎಚ್ಚರ.

ಮುಂದಿನವಾರ ಇನ್ನಷ್ಟು ಅನುಭವಗಳೊಂದಿಗೆ ಹಾಜರಾಗುವೆ.