- ಆಫ್ರೀನ್‌ ಶ್ರೀಕಾಂತ್ ಹೆಮ್ಮಾಡಿ

ಕಳೆದ ಶನಿವಾರ ನಾನು, ನನ್ನ ಪತಿ, ಅವರ ಗೆಳೆಯ ಮತ್ತು ಪತ್ನಿ, ಮತ್ತೊಬ್ಬ ಗೆಳೆಯ ಸೇರಿ ಒಟ್ಟು ಐವರು ಊಟಿ ಪ್ರವಾಸಕ್ಕೆ ತೆರಳಿದ್ದೆವು. ಬಂಡೀಪುರ ಅಭಯಾರಣ್ಯದ ತಮಿಳುನಾಡು ಪ್ರವೇಶದ ಚೆಕ್‌ಪೋಸ್ಟ್‌ನಲ್ಲಿ ಎದುರಾದ ಅನುಭವ ನಮ್ಮ ಪ್ರವಾಸದ ಉತ್ಸಾಹವನ್ನೇ ಮಂಕಾಗಿಸಿತು. ಮೂರು ದಿನದ ಪ್ರವಾಸ ಕೇವಲ‌ ಒಂದೇ ದಿನಕ್ಕೆ ಮೊಟಕುಗೊಳಿಸಿ ವಾಪಸ್ಸಾದೆವು.‌

ಬಂಡೀಪುರ ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡು ಪೊಲೀಸರು ನಮ್ಮ ಕಾರನ್ನು ತಡೆದು, ಮದ್ಯ ಇದೆಯೇ? ಎಂದು ಪ್ರಶ್ನಿಸಿದರು. ಇಲ್ಲ ಸರ್, ನಾವು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದರೂ ಕಾರನ್ನು ಬದಿಗೆ ನಿಲ್ಲಿಸಲು ಸೂಚಿಸಿದರು. ನಂತರ ಆರಂಭವಾದ ತಪಾಸಣೆ ಸಾಮಾನ್ಯ ಪರಿಶೀಲನೆಯ ಮಿತಿಯನ್ನು ಮೀರಿ ಪೊಲೀಸ್ ಸಿಬ್ಬಂದಿ ವರ್ತಿಸಿದ ರೀತಿ ಅನಾಗರಿಕ ಅನಿಸಿತು‌.

ಇದನ್ನೂ ಓದಿ: ಮನರಂಜನೆಯ ಹೆಸರಲ್ಲಿ ಮನುಷ್ಯತ್ವ ಮಾಯವಾಗದಿರಲಿ

ಕಾರಿನ ಡ್ಯಾಶ್‌ಬೋರ್ಡ್‌, ಸೀಟುಗಳ ಕೆಳಭಾಗ, ಮ್ಯಾಟ್‌ಗಳು, ಕ್ಯಾಮೆರಾ ಬ್ಯಾಟರಿ ಇಟ್ಟಿದ್ದ ಪುಟ್ಟ ಪೌಚ್‌ವರೆಗೂ ಪರಿಶೀಲಿಸಲಾಯಿತು. ಬಳಿಕ ಡಿಕ್ಕಿಯಲ್ಲಿದ್ದ ನಾಲ್ಕು ಸೂಟ್‌ಕೇಸ್‌ಗಳು ಮತ್ತು ಬ್ಯಾಗ್‌ಗಳನ್ನು ರಸ್ತೆಯ ಮೇಲೆಯೇ ತೆರೆಯಿಸಿ, ಅವುಗಳಲ್ಲಿದ್ದ ಬಟ್ಟೆಗಳನ್ನು ಒಂದೊಂದಾಗಿ ಹೊರತೆಗೆದು ತಪಾಸಣೆ ನಡೆಸಲಾಯಿತು. ನನ್ನ ಪತಿ ಹಾಗೂ ಅವರ ಗೆಳೆಯನ ಪತ್ನಿಯ ವೈಯಕ್ತಿಕ ಬ್ಯಾಗ್‌ಗಳನ್ನು ಯಾವುದೇ ಸಂವೇದನೆ, ಗೌರವವಿಲ್ಲದೆ ಕಾನ್‌ಸ್ಟೆಬಲ್ ಒಬ್ಬರು ಪರಿಶೀಲಿಸಿದ ರೀತಿ ನನಗೆ ಅತ್ಯಂತ ನೋವು ಮತ್ತು ಮುಜುಗರ ಉಂಟುಮಾಡಿತು. ಮಹಿಳೆಯರ ಖಾಸಗಿ ವಸ್ತುಗಳಿದ್ದ ಬ್ಯಾಗ್‌ಗಳನ್ನು ತೆರೆಯಿಸಿ, ಅವುಗಳನ್ನು ಮೇಲಕ್ಕೆತ್ತಿ ತೋರಿಸುವಂತೆ ಸೂಚಿಸಿದ್ದು ಕೇವಲ ತಪಾಸಣೆಯಲ್ಲ; ಅದು ಮಹಿಳೆಯ ಖಾಸಗೀತನ ಮತ್ತು ಆತ್ಮಗೌರವಕ್ಕೆ ಉಂಟುಮಾಡಿದ ಧಕ್ಕೆ. ಪೊಲೀಸರ ಈ ವರ್ತನೆಯಿಂದ ಕೆರಳಿದ ನಾವು 'ತಪಾಸಣೆ ನಡೆಸುವುದು ನಿಮ್ಮ ಕರ್ತವ್ಯ. ಆದರೆ ಅದನ್ನು ಗೌರವಯುತವಾಗಿ ನಡೆಸಲು ಸಾಧ್ಯವಿಲ್ಲವೇ? ಮಹಿಳೆಯರ ವೈಯಕ್ತಿಕ ಬ್ಯಾಗ್‌ಗಳನ್ನು ಪರಿಶೀಲಿಸುವಾಗ ಕನಿಷ್ಠ ಸಂವೇದನೆ ಇರಬಾರದೆ'? ಎಂದು ನಾನು ಮತ್ತು ನನ್ನ ಪತಿ ಪ್ರಶ್ನಿಸಿದೆವು. ಆದರೆ ಆ ಪೊಲೀಸ್ ಸಿಬ್ಬಂದಿಗೆ ತಮಿಳು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲವಾದ್ದರಿಂದ ನಾವು ಅವರೊಂದಿಗೆ ವಾಗ್ವಾದಕ್ಕಿಳಿಯಲು ಸಾಧ್ಯವಾಗಿಲ್ಲ.

gudalur-trip2

ಇನ್ನು ಕಾರು ಪರಿಶೀಲನೆ ವೇಳೆ ಕಾರಿನಲ್ಲಿದ್ದ ನನ್ನ ಪತಿಯ ಮೀಡಿಯಾ ಗುರುತಿನ ಚೀಟಿಯನ್ನು ಸಿಬ್ಬಂದಿ ಗಮನಿಸಿದರು. ಆದರೂ ಯಾವುದೇ ವಿವರಣೆ ಕೇಳದೆ, ಮತ್ತಷ್ಟು ಅನುಮಾನದ ದೃಷ್ಟಿಯಿಂದ ನೋಡಿ ತಪಾಸಣೆಯನ್ನು ಮುಂದುವರಿಸಿದರು. ಮಾಧ್ಯಮದ ಗುರುತಿನ ಚೀಟಿ ಇದೆ ಎಂಬ ಕಾರಣಕ್ಕೆ ಅವರನ್ನಾಗಲೀ ನನ್ನನ್ನಾಗಲೀ ವಿಶೇಷವಾಗಿ ಸತ್ಕರಿಸಬೇಕೆಂಬ ಯಾವುದೇ ನಿರೀಕ್ಷೆಯೂ ನನಗಿಲ್ಲ. ಆದರೆ ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕಾದ ಕನಿಷ್ಠ ಗೌರವ ಮತ್ತು ಸೌಜನ್ಯ ದೊರೆಯಬೇಕು ಎಂಬ ನಿರೀಕ್ಷೆ ಖಂಡಿತ ಇದೆ.

ಆ ಸಮಯದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಬಹುತೇಕ ಕಾರುಗಳನ್ನು ಹಾಗೆಯೇ ಬಿಟ್ಟು ಕೇವಲ ಕಪ್ಪು ಬಣ್ಣದ ಕಾರುಗಳನ್ನೇ ಅಡ್ಡಗಟ್ಟಿ ತಪಾಸಣೆ ಮಾಡಲಾಗುತ್ತಿತ್ತು. ಇದೇ ರೀತಿಯ ಅನುಭವ ನಮಗೆ ಹಿಂದೆ ಗೋವಾ ಪ್ರವಾಸದ ಸಂದರ್ಭದಲ್ಲಿಯೂ ಆಗಿದೆ. ಹೊರರಾಜ್ಯದ ಪೊಲೀಸರಿಗೆ ಈ ಕಪ್ಪು ಬಣ್ಣದ ಕಾರುಗಳ ಮೇಲೆಯೇ ಏಕೆ ಇಂಥ ವಿಶೇಷ ಅನುಮಾನ ಎಂಬ ಪ್ರಶ್ನೆ ನಮ್ಮನ್ನು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಮತ್ತೊಂದು ಹಾಸ್ಯಾಸ್ಪದ‌ ಸಂಗತಿಯೆಂದರೆ ನನ್ನ ಪತಿಯ ಗೆಳೆಯನ ಪತ್ನಿಯ ಬ್ಯಾಗ್ ಪರಿಶೀಲಿಸುವಾಗ ಅದರೊಳಗೆ ಎರಡು ಜೋಡಿ ಶೂಗಳು ಇದ್ದವು. ಆಗ ಎಎಸ್‌ಐ ಒಬ್ಬರು ಎರಡು ಶೂಗಳು ಯಾಕೆ? ಎಂದು ಪ್ರಶ್ನಿಸಿದರು. ಅದಕ್ಕೆ ಒಂದು ನನ್ನದು, ಇನ್ನೊಂದು ನನ್ನ ಪತಿಯದು ಎಂದು ಆಕೆ ಉತ್ತರಿಸಿದರು. ವೈಯಕ್ತಿಕ ಬಳಕೆಯ ಇಂಥ ಸಾಮಾನ್ಯ ವಸ್ತುಗಳ ಬಗ್ಗೆಯೂ ಈ ರೀತಿಯ ಪ್ರಶ್ನೆಗಳು ಕೇಳುವ ಅಗತ್ಯವೇನು ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ.

ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದು ಪೊಲೀಸರ ಕರ್ತವ್ಯ ಎಂಬುದನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಆದರೆ ಪ್ರತಿಯೊಬ್ಬ ಪ್ರಯಾಣಿಕನನ್ನೂ ಮೊದಲೇ ಅಪರಾಧಿಯಂತೆ ಕಾಣುವುದು, ಅವರ ವೈಯಕ್ತಿಕ ಗೌಪ್ಯತೆಯನ್ನು ನಿರ್ಲಕ್ಷಿಸುವುದು ಹಾಗೂ ಆತ್ಮಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುವುದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಶೋಭೆಯಲ್ಲ.

ಪ್ರತಿದಿನ ಸಾವಿರಾರು ತಮಿಳುನಾಡಿನ ಭಕ್ತರು ಕೊಲ್ಲೂರು ಸೇರಿದಂತೆ ಕರ್ನಾಟಕದ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಬರುತ್ತಾರೆ. ನಮ್ಮ ಕರ್ನಾಟಕ ಪೊಲೀಸರು ಅವರನ್ನು ಇದೇ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಅವರು ಗೌರವದಿಂದ, ಸೌಜನ್ಯದಿಂದ ಮತ್ತು ಮಾನವೀಯತೆಯಿಂದ ವರ್ತಿಸುತ್ತಾರೆ. ಅದೇ ರೀತಿಯ ಗೌರವವನ್ನು ಕರ್ನಾಟಕದ ನಾಗರಿಕರು ತಮಿಳುನಾಡಿಗೆ ಭೇಟಿ ನೀಡಿದಾಗ ನಿರೀಕ್ಷಿಸುವುದು ತಪ್ಪೇ?

ಇದನ್ನೂ ಓದಿ: ಸಮುದ್ರ ಯಾನದ ಧ್ಯಾನ ಇದ್ದರೆ ಮೊಂಬಾಸಾ ಪ್ರವಾಸ ಮಾಡಿ

ಅಧಿಕಾರಕ್ಕೆ ಮಾನವೀಯತೆ, ಸಂವೇದನಾಶೀಲತೆ, ವೃತ್ತಿಪರತೆ ಮತ್ತು ನಾಗರಿಕಸ್ನೇಹಿ ಮನೋಭಾವ ಸೇರಿಕೊಂಡಾಗ ಮಾತ್ರ ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತದೆ. ಆದ್ದರಿಂದ ಈ ಘಟನೆಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಚೆಕ್‌ಪೋಸ್ಟ್ ಸಿಬ್ಬಂದಿಗೆ ನಾಗರಿಕಸ್ನೇಹಿ ವರ್ತನೆ, ಮಹಿಳೆಯರ ಗೌರವ, ವೈಯಕ್ತಿಕ ಗೌಪ್ಯತೆಯ ರಕ್ಷಣೆ, ಮಾನವ ಹಕ್ಕುಗಳು ಹಾಗೂ ವೃತ್ತಿಪರ ಸಂವಹನದ ಕುರಿತು ಸೂಕ್ತ ಮಾರ್ಗಸೂಚಿ ಮತ್ತು ತರಬೇತಿ ನೀಡುವಂತೆ ವಿನಮ್ರವಾಗಿ ಮನವಿ ಮಾಡುತ್ತೇನೆ.

ಭದ್ರತೆ ಅಗತ್ಯವೇ ಸರಿ.. ಆದರೆ ಭದ್ರತೆಯ ಹೆಸರಿನಲ್ಲಿ ನಾಗರಿಕರ ಆತ್ಮಗೌರವವನ್ನು ಬಲಿಕೊಡುವಂತಾಗಬಾರದು. ಪ್ರಜಾಪ್ರಭುತ್ವದಲ್ಲಿ ಭದ್ರತೆಯಷ್ಟೇ ಮಾನವೀಯತೆಯೂ ಮುಖ್ಯ. Disgusting.