ಪ್ರವಾಸದಲ್ಲೂ ಮೊಬೈಲ್ ಮೇನಿಯಾ
ನೀವು ಪ್ರವಾಸದಲ್ಲಿ ಮೊಬೈಲ್ ಫೋನನ್ನು ಎಷ್ಟು ದೂರ ಇಡುತ್ತೀರೋ ಅಷ್ಟು ಪ್ರವಾಸದ ಸಂತಸಕ್ಕೆ ಹತ್ತಿರವಾಗುತ್ತೀರಿ. ಪ್ರವಾಸ ಸ್ಥಳಗಳಿಗೆ ಹೆಚ್ಚು ಕನೆಕ್ಟ್ ಆಗುತ್ತೀರಿ. ಜಾಗದ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಆಸಕ್ತಿ ತೋರುತ್ತೀರಿ. ಜೊತೆಗಿರುವ ಜನರ ಜೊತೆ ಹೆಚ್ಚು ಬೆರೆಯುತ್ತೀರಿ. ಆಹಾರವನ್ನು ವಿಹಾರವನ್ನು ಹೆಚ್ಚು ಆಸ್ವಾದಿಸುತ್ತೀರಿ.
ಇಂದಿನ ಜಗತ್ತಿನಲ್ಲಿ ಫೋನ್ ಇಲ್ಲದೇ ಬದುಕುವುದು ಅತಿ ದೊಡ್ಡ ಸವಾಲು. ಇನ್ನು ಫೋನ್ ಇಲ್ಲದೇ ಪ್ರಯಾಣ ಮಾಡೋದು ಅಂದ್ರೆ? ಇಂಪಾಸಿಬಲ್ ಅಂದುಬಿಡ್ತೀರಿ ಅಲ್ವಾ?
ಆದರೆ ಪ್ರವಾಸದ ಅಥವಾ ಪ್ರಯಾಣದ ಅಸಲೀ ಮಜ ಅನುಭವಿಸಬೇಕು ಅಂದ್ರೆ ಫೋನ್ ಇಲ್ಲದೆ ಹೊರಡಬೇಕು. ಮೊಬೈಲ್ ಫೋನ್ ಇಂದು ಮನುಷ್ಯನ ಜೀವಜಲ. ಅದನ್ನೇ ಬಿಟ್ಟು ಪ್ರವಾಸ ಹೋಗೋದಂದ್ರೆ ಹೇಗೆ? ಪರ್ಯಾಯ ಏನು? ಎಮರ್ಜೆನ್ಸಿಗೆ ಏನು ಮಾಡಬೇಕು? ದಾರಿ ತಪ್ಪಿದರೆ ಮ್ಯಾಪ್ ನೋಡೋಕೆ ಏನು ಮಾಡೋದು? ಎಲ್ಲಾದ್ರೂ ಪೇಮೆಂಟ್ ಮಾಡೋದಿದ್ರೆ ಆನ್ ಲೈನ್ ಪೇಮೆಂಟಿಗೆ ಏನು ಮಾಡೋದು? ಫೊಟೋ ವಿಡಿಯೋ ತೆಗೆಯದೇ ಪ್ರವಾಸ ಮಾಡೋದಾದ್ರೂ ಹೇಗೆ? ಜರ್ನಿಯಲ್ಲಿ ಹಾಡು ಕೇಳಬೇಕು ಅನಿಸಿದ್ರೆ ಏನು ಮಾಡ್ಬೇಕು? ಹೊಟೇಲ್ ಬುಕಿಂಗ್, ಫ್ಲೈಟ್ ಟಿಕೆಟ್ ಪ್ರತಿಯೊಂದಕ್ಕೂ ಮೊಬೈಲನ್ನೇ ಅವಲಂಬಿಸಿರುವಾಗ ಮೊಬೈಲ್ ಇಲ್ಲದೇ ಪ್ರವಾಸ ಹೇಗೆ ಸಾಧ್ಯ? ಮನೆಯಿಂದ, ಆಫೀಸಿಂದ ಅಥವಾ ಗೆಳೆಯರಿಂದ ಕಾಲ್ ಬಂದರೆ ಏನು ಮಾಡೋದು?
ಇಂಥ ಹಲವಾರು ಪ್ರಶ್ನೆಗಳಿಗೆ ಒಂದೇ ಮರುಪ್ರಶ್ನೆ ಹಾಕುತ್ತೇನೆ.
ಮೊಬೈಲ್ ಜನಿಸೋದಕ್ಕಿಂತ ಮೊದಲು ನೀವು ಪ್ರಯಾಣ ಮಾಡಿಯೇ ಇಲ್ವಾ?
ಒಂದು ಮಾತು ತಿಳಿದುಕೊಳ್ಳಿ. ನೀವು ಪ್ರವಾಸದಲ್ಲಿ ಮೊಬೈಲ್ ಫೋನನ್ನು ಎಷ್ಟು ದೂರ ಇಡುತ್ತೀರೋ ಅಷ್ಟು ಪ್ರವಾಸದ ಸಂತಸಕ್ಕೆ ಹತ್ತಿರವಾಗುತ್ತೀರಿ. ಪ್ರವಾಸ ಸ್ಥಳಗಳಿಗೆ ಹೆಚ್ಚು ಕನೆಕ್ಟ್ ಆಗುತ್ತೀರಿ. ಜಾಗದ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಆಸಕ್ತಿ ತೋರುತ್ತೀರಿ. ಜೊತೆಗಿರುವ ಜನರ ಜೊತೆ ಹೆಚ್ಚು ಬೆರೆಯುತ್ತೀರಿ. ಆಹಾರವನ್ನು ವಿಹಾರವನ್ನು ಹೆಚ್ಚು ಆಸ್ವಾದಿಸುತ್ತೀರಿ.

ಓಕೆ.. ಆದರೆ ಮೊಬೈಲ್ ಫೋನ್ ಬಿಟ್ಟಿರುವುದು ಹೇಗೆ? ಪರ್ಯಾಯ ವ್ಯವಸ್ಥೆ ಏನು ಅಂತ ಕೇಳುತ್ತೀರಾ?
ಅದಕ್ಕಾಗಿಯೇ ಈ ಕಿವಿಮಾತಿನ ಲೇಖನ.
ಮೊಬೈಲ್ ಬಿಟ್ಟು ಹೋಗಿ ಎಂಬುದರ ಅರ್ಥ ಅಕ್ಷರಶಃ ಬಿಟ್ಟು ಹೋಗಿ ಅಂತಲ್ಲ. ಅದಕ್ಕೊಂದು ಪವರ್ ಆಫ್ ಬಟನ್ ಇರುತ್ತದೆ ಎಂಬುದು ನಿಮಗೆ ಗೊತ್ತಿದ್ದರೂ ಸಾಕು. ಅರ್ಧ ಗೆದ್ದುಬಿಡುತ್ತೀರಿ. ಅದರಲ್ಲಿ ಇಂಟರ್ನೆಟ್ ಆಫ್, ಬ್ಲೂಟೂತ್ ಇವೆಲ್ಲವನ್ನೂ ಆಫ್ ಮಾಡಲು ನಿಮಗೆ ಗೊತ್ತಿದೆಯೆಂದರೆ ಇನ್ನೂ ಅರ್ಧ ಯುದ್ಧ ಗೆದ್ದಂತೆ. ಅಲ್ಲಿಗೆ ನಿಮ್ಮ ಕೈಲಿ ಮೊಬೈಲ್ ಇದ್ದರೂ ಅದೊಂದು ಖಾಲಿ ನಶ್ಯದ ಡಬ್ಬಿಗೆ ಸಮವಾಗಿಬಿಡುತ್ತೆ. ಇದ್ದರೆಷ್ಟು ಬಿಟ್ಟರೆಷ್ಟು ಎಂಬಂತೆ!
ಈಗ ಮೊಬೈಲ್ ಇಲ್ಲದೆ ಮ್ಯಾನೇಜ್ ಮಾಡೋದು ಹೇಗೆ ಅಂತ ನೋಡೋಣ.
ಅಗತ್ಯದ ಕೆಲಸಕ್ಕೆ ನೀವು ಲ್ಯಾಪ್ ಟಾಪ್ ಅಥವಾ ಟ್ಯಾಬ್ ಬಳಸಬಹುದು. ನಿಮ್ಮ ಫೋನ್ ಮಾಡುವ ಎಲ್ಲ ಕೆಲಸವನ್ನೂ ಲ್ಯಾಪ್ ಟಾಪ್ ಅಥವಾ ಟ್ಯಾಬ್ ಮಾಡುತ್ತದೆ. ನೀವು ಊಟಕ್ಕೋ ಶೌಚಕ್ಕೋ ಹೋದಾಗ ಒಂದು ಕೈಯಲ್ಲಿ ಮೊಬೈಲ್ ಥರ ಸ್ಕ್ರೋಲ್ ಮಾಡೋಕಾಗಲ್ಲ ಅನ್ನೋದೊಂದೇ ಕೊರತೆ!
ನೀವೇ ಒಂದು ರೂಲ್ ಬುಕ್ ರೆಡಿ ಮಾಡ್ಕೊಳಿ
- ಪ್ರವಾಸದಲ್ಲಿ ಮನರಂಜನೆಗಾಗಿ ನಾನು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಬಳಸುವುದಿಲ್ಲ
- ಟ್ಯಾಕ್ಸಿ ಬುಕಿಂಗ್ ಅಥವಾ ಹೊಟೇಲ್ ಬುಕಿಂಗ್ ಗೆ ಲ್ಯಾಪ್ ಟಾಪ್ ಬಳಸುತ್ತೇನೆ
- ತೀರಾ ಅಗತ್ಯದ ಟ್ರಾವೆಲ್ ಸಂಬಂಧಿ ಇಡೀ ದಿನದಲ್ಲಿ ಅರ್ಧಗಂಟೆ ಟ್ಯಾಬ್ ಬಳಸಿ ಎತ್ತಿಡುತ್ತೇನೆ.
ಇಂಥ ಸಂಕಲ್ಪಗಳನ್ನು ಮೊಬೈಲ್ ಇಟ್ಟುಕೊಂಡೇ ಮಾಡಬಹುದಲ್ಲ ಅಂತೀರಾ?
ನಿಮ್ಮಲ್ಲಿ ಲ್ಯಾಪ್ ಟಾಪ್ ಟ್ಯಾಬ್ ಯಾವುದೂ ಇಲ್ಲ. ಮೊಬೈಲಲ್ಲೇ ಕೆಲಸ ಆಗಬೇಕು ಅಂದ್ರೆ, ನಿಮ್ಮ ಮೊಬೈಲಿನಲ್ಲಿರೋ ಅನಗತ್ಯ ಟೈಮ್ ಕಿಲ್ಲಿಂಗ್ ಅಪ್ಲಿಕೇಶನ್ ಗಳನ್ನು ಬ್ಲಾಕ್ ಮಾಡಿಬಿಡಿ. ಫ್ರೀಡಮ್, ಸ್ಕ್ರೀನ್ ಜೆನ್, ಓಪಲ್ ಥರದ ಬ್ಲಾಕಿಂಗ್ ಅಪ್ಲಿಕೇಶನ್ ಬಳಸಿ ಯೂಟ್ಯೂಬ್, ಫೇಸ್ ಬುಕ್ ಇನ್ ಸ್ಟಾ ಗ್ರಾಮ್, ಟ್ವಿಟರ್ ಎಲ್ಲವನ್ನೂ ನಿಷ್ಕ್ರಿಯಗೊಳಿಸಿಬಿಡಬಹುದು. ನಿಮ್ಮ ಮನಸು ಅವುಗಳನ್ನು ನೋಡೋಣ ಎಂದು ಹಾತೊರೆದರೂ ಓಪನ್ ಆಗುವುದಿಲ್ಲ. ವಾಪಸ್ ನೀವು ಪ್ರವಾಸಿ ಜಗತ್ತಿಗೆ ಬರುತ್ತೀರಿ. ತಾತ್ಕಾಲಿಕವಾಗಿ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನು ಡಿಲೀಟೇ ಮಾಡಿದರೂ ಜಗತ್ತು ಮುಳುಗಿಹೋಗುವುದಿಲ್ಲ.
ಇದೆಲ್ಲ ಲಕ್ಸುರಿ ವಿಷಯ ಆಯ್ತು. ನಾವು ಏರ್ ಪೋರ್ಟಲ್ಲಿ ಟಿಕೆಟ್ ಬುಕಿಂಗು, ಕ್ಯಾನ್ಸಲೇಶನ್ನು, ಸ್ಟೇಟಸ್ಸು ಇವೆಲ್ಲ ತಿಳ್ಕೊಳೋದು ಹೇಗೆ? ಫೋನ್ ಬೇಕೇ ಬೇಕಲ್ವಾ?

ಖಂಡಿತ ಬೇಡ. ಪೇಪರ್ ಲೆಸ್ ವಹಿವಾಟು ಸ್ವಾಗತಾರ್ಹವೇ. ಆದರೆ ಕೆಲವೊಮ್ಮೆ ಮೊಬೈಲ್ ನಿರ್ಮೋಹವನ್ನು ಬೆಳೆಸಿಕೊಳ್ಳಲು ಹಳೆಯ ಪದ್ಧತಿಗಳ ಮೊರೆಹೊಗಬೇಕಾಗುತ್ತದೆ.
ಪ್ರಿಂಟೆಡ್ ಟಿಕೆಟ್, ಬೋರ್ಡಿಂಗ್ ಪಾಸ್ ಇವುಗಳನ್ನು ಕೈಗಳಲ್ಲಿ ಇಟ್ಟುಕೊಂಡು ಅನುಭವಿಸಿನೋಡಿ. ಸಿಬ್ಬಂದಿಯ ಜತೆ ಮಾತನಾಡಿ ನೋಡಿ. ಮೊಬೈಲ್ ಜತೆಗಿನ ಮಾತಿಗಿಂತ ಚೆನ್ನಾಗಿರುತ್ತದೆ. ತಲೆ ಎತ್ತಿ ಅಲ್ಲಿನ ಸೂಚನಾಫಲಕಗಳತ್ತ ಕಣ್ಣಿಟ್ಟಿರಿ. ನಿಮ್ಮ ಮೊಬೈಲಲ್ಲಿ ಸಿಗುವುದೆಲ್ಲವೂ ಅಲ್ಲಿಯೂ ಸಿಗುತ್ತಿರುತ್ತದೆ.
ಆಯ್ತು. ದಾರಿ ಹುಡುಕಾಟಕ್ಕಾದರೂ ಮೊಬೈಲ್ ಮುಟ್ಟಬಹುದಾ ಅಂತ ಅಂಗಲಾಚುತ್ತಿದ್ದೀರಾ?
ಅದಕ್ಕೆ ಮೊಬೈಲ್ ಯಾಕೆ ಬೇಕು? ಕೈಯಲ್ಲಿ ಪೇಪರ್ ನಕ್ಷೆ ಇಟ್ಟುಕೊಳ್ಳಿ, ರಸ್ತೆ ಬದಿಗೆ ಹಾಕಿರೋ ಸೂಚನಾಫಲಕಗಳನ್ನು, ದಿಕ್ಕುಗಳನ್ನು ಗಮನಿಸಿ. ದಾರಿಹೋಕರನ್ನು ಮಾತಾಡಿಸಿ ದಾರಿ ಕೇಳಿ. ಅದರಲ್ಲಿರೋ ಖುಷಿಯೇ ಬೇರೆ. ನಿಮಗೂ ಅನಿಸದೇ ಇದ್ದರೆ ಹೇಳಿ. ಮೊಬೈಲ್ ಲೊಕೇಶನ್ ಹಾಕಿಕೊಂಡು ತಲುಪಿದ ಜಾಗ ಮತ್ತೊಮ್ಮೆ ಹೋಗುವಾಗ ನೆನಪೇ ಇರುವುದಿಲ್ಲ. ಆದರೆ ಮೊಬೈಲ್ ಸಹಾಯ ಇಲ್ಲದೇ ಹುಡುಕಿಕೊಂಡು ಹೋದ ಜಾಗ ಇನ್ನು ಹತ್ತು ವರ್ಷ ಬಿಟ್ಟು ಹೋದರೂ ನೆನಪಿರುತ್ತದೆ.
ಲಾಡ್ಜಲ್ಲಿ ಐಡಿ ಕಾರ್ಡ್ ಇತ್ಯಾದಿ ಕೇಳಿದಾಗ ಏನು ಮಾಡೋದು?
ಆಗಲೂ ಮೊಬೈಲ್ ಬೇಕಿಲ್ಲ. ನಿಮ್ಮ ಕಾರ್ಡ್ ಗಳ ಜೆರಾಕ್ಸ್ ಕಾಪಿ ತೋರಿಸಬಹುದು.
ಪೇಮೆಂಟ್ ಗಾಗಿ ಮೊಬೈಲ್ ಬೇಕೇ ಬೇಕಲ್ಲ. ಈಗಾದ್ರೂ ಬಳಸಬಹುದಾ?
ನೋ. ಹಣಪಾವತಿಗೆ ಕಾರ್ಡ್ ಬಳಸಿ, ಕ್ಯಾಶ್ ಬಳಸಿ. ಪೇಮೆಂಟ್ ಒಂದಕ್ಕೋಸ್ಕರ ಮೊಬೈಲ್ ಬಳಸೋಕೆ ಅಂತ ತೆಗೆದರೆ, ನಂತರ ಮತ್ತೆ ಮೊಬೈಲ್ ನಿಮ್ಮನ್ನು ಬಳಸಲಾರಂಭಿಸುತ್ತದೆ. ಅವಕಾಶ ಕೊಡಬೇಡಿ.
ಸರಿ ಸ್ವಾಮಿ.. ಇದ್ಯಾವುದೂ ಬೇಡ. ಕಡೇಪಕ್ಷ ಸೆಲ್ಫೀಗೆ, ಫೊಟೋ ತೆಗೆಯೋಕಾದರೂ ಮೊಬೈಲ್ ಬಳಸೋಕೆ ಅವಕಾಶ ಕೊಡಿ ಅಂತ ಗೋಗರೀತಾ ಇದೀರಿ ಅಲ್ವಾ?
ಇಲ್ಲ. ಮೊಬೈಲ್ ಫೋನ್ ಬದಿಗಿರಲಿ. ಪ್ರವಾಸದ ಫೊಟೋಗ್ರಫಿಗೆ ಡಿಜಿಟಲ್ ಕೆಮೆರಾ ಬಳಸಿ. ಸೆಲ್ಫೀ ತುಂಬ ಮೋಸ, ಯಾರಿಗಾದ್ರೂ ಕೆಮೆರಾ ಕೊಟ್ಟು ನಿಮ್ಮ ಫೊಟೋ ಕ್ಲಿಕ್ ಮಾಡಿಸಿಕೊಳ್ಳಿ ಸೆಲ್ಫೀಯಲ್ಲಿ ನಿಮ್ಮ ಹಿಂದಿರುವ ಪ್ರಕೃತಿ, ಪ್ರವಾಸಿ ಜಾಗ ಕಾಣುವುದೇ ಇಲ್ಲ. ಅದು ಬಾತ್ರೂಮಲ್ಲಿ ಕ್ಲಿಕ್ ಮಾಡಿದ್ರೂ ಒಂದೇ ಬರ್ಲಿನ್ನಲ್ಲಿ ಕ್ಲಿಕ್ ಮಾಡಿದ್ರೂ ಒಂದೇ. ನೀವಿರೋ ಜಾಗ ಕವರ್ ಆಗಬೇಕು ಅಂದ್ರೆ ವೈಡ್ ಆಂಗಲ್ಲಲ್ಲಿ ಫೊಟೋ ಕ್ಲಿಕ್ ಮಾಡಿಸಿಕೊಳ್ಳಬೇಕು.
ಇನ್ನು ಫೊಟೋ ಹುಚ್ಚು ತೀರಾ ಹೆಚ್ಚಾದರೆ, ಎದುರು ನೇರವಾಗಿ ನೋಡೋ ಸುಖ ಮರೆತು ಫೊಟೋ ಕ್ಲಿಕ್ ಮಾಡಿ ಅದರಲ್ಲಿ ನೋಡತೊಡಗುತ್ತೀರಿ. ಅದಕ್ಕಾಗಿ ಪ್ರವಾಸ ಯಾಕೆ ಬೇಕು ಹೇಳಿ?
ಮೊಬೈಲ್ ನಿಮ್ಮ ನೆನಪಿನ ಶಕ್ತಿಗೆ ಮಾರಕ. ಮೊಬೈಲ್ ಎಲ್ಲವನ್ನೂ ಫಿಂಗರ್ ಟಿಪ್ಸ್ ನಲ್ಲಿ ಕೊಟ್ಟು ನಿಮ್ಮ ಪ್ರಯಾಣ ಸವಾಲುರಹಿತ ಮಾಡಿ ಮಜ ಕಿತ್ತುಕೊಳ್ಳುತ್ತದೆ. ಮೊಬೈಲ್ ನಿಮ್ಮನ್ನು ಪ್ರವಾಸದೊಂದಿಗೆ ಪ್ರತಿಶತ ನೂರರಷ್ಟು ಕನೆಕ್ಟ್ ಆಗಲು ಬಿಡುವುದಿಲ್ಲ. ಸಹಚರರಿಂದ ದೂರವಾಗಿಸುತ್ತದೆ.

ಹಾಗಾದ್ರೆ ಎಮರ್ಜೆನ್ಸಿ ಇದ್ದಾಗ ಏನು ಮಾಡಬೇಕು?
ನಾವು ಇಳಿದುಕೊಳ್ಳುವ ಹೊಟೇಲ್ ಲ್ಯಾಂಡ್ ಲೈನ್ ಅಥವಾ ಸ್ಥಳೀಯ ಕಾಂಟ್ಯಾಕ್ಟ್ ನಂಬರ್ ನೀಡಬಹುದು. ಒಂದು ಚಿಕ್ಕ ಫೋನ್ ಬುಕ್ ಇಟ್ಟುಕೊಂಡು ಅದರಲ್ಲಿ ಎಮರ್ಜೆನ್ಸಿ ನಂಬರ್ ಗಳನ್ನು ಬರೆದಿಟ್ಟುಕೊಳ್ಳಬಹುದು. ಮತ್ತೊಮ್ಮೆ ಹೇಳುತ್ತಿದ್ದೇನೆ. ಮೊಬೈಲ್ ಆವಿಷ್ಕಾರ ಆಗುವ ಮೊದಲು ಈ ಜಗತ್ತಿನಲ್ಲಿ ಮಹಾನ್ ಪ್ರವಾಸಗಳು ಜರುಗಿವೆ. ವರ್ಷಗಟ್ಟಲೆ ಪ್ರವಾಸ ಮಾಡಿರುವ ಉದಾಹರಣೆಗಳಿವೆ. ನಿಜ ಹೇಳುವುದಾದರೆ ಮೊಬೈಲ್ ಫೋನ್ ಪ್ರವಾಸಿಯ ಶತ್ರು. ಆದರೆ ಕೆಲವೊಮ್ಮೆ ಶತ್ರುವಿನ ಜತೆ ಸಂಸಾರ ನಡೆಸುವ ಅನಿವಾರ್ಯತೆ ಸೃಷ್ಟಿಸಿಕೊಂಡುಬಿಟ್ಟಿರುತ್ತೇವೆ.
ಒಮ್ಮೆ ಮೊಬೈಲ್ ದೂರ ಇಟ್ಟು ಪ್ರವಾಸ ಹೋಗಿ ಬನ್ನಿ. ನಿಮ್ಮ ಅನುಭವ ಹಂಚಿಕೊಳ್ಳಿ. ಅದ್ಭುತ ಅನಿಸದಿದ್ದರೆ ಹೇಳಿ.