ಹಕ್ಕಿಗಳ ವಲಸೆ
ಮನುಷ್ಯನಿಗೆ ಪ್ರವಾಸವೆಂದರೆ ಹೊಸ ಜಗತ್ತನ್ನು ಕಾಣುವ ಸಾಹಸ; ಆದರೆ ಹಕ್ಕಿಗಳಿಗೆ ಪ್ರತಿವರ್ಷ ನಡೆಯುವ ವಲಸೆ ಬದುಕಿನ ಅನಿವಾರ್ಯ ಪಯಣ. ದೇಶಗಳ ಗಡಿ, ಸಮುದ್ರ, ಮರುಭೂಮಿ, ಹಿಮಾಲಯ, ಯಾವುದನ್ನೂ ಲೆಕ್ಕಿಸದೆ ಸಾವಿರಾರು ಕಿಲೋಮೀಟರ್ಗಳನ್ನು ಹಾರುವ ಈ ಪುಟ್ಟ ಪ್ರವಾಸಿಗರ ಕಥೆ ನಿಜಕ್ಕೂ ವಿಸ್ಮಯಕಾರಿ. ರೆಕ್ಕೆಗಳನ್ನೇ ವಿಮಾನವಾಗಿಸಿಕೊಂಡು, ಆಕಾಶವನ್ನೇ ಹೆದ್ದಾರಿಯಾಗಿಸಿಕೊಂಡು ಸಾಗುವ ಹಕ್ಕಿಗಳ ಈ ಮಹಾಪಯಣ ಪ್ರಕೃತಿಯ ಅದ್ಭುತ ನಕ್ಷೆಯೊಂದನ್ನು ನಮ್ಮ ಮುಂದೆ ತೆರೆದಿಡುತ್ತದೆ.
- ಜಿ. ಆರ್. ಪಂಡಿತ್, ಸಾಗರ
ಮನುಷ್ಯರು ಮಾತ್ರ ಪ್ರವಾಸ ಮಾಡುತ್ತಾರೆಯೇ? ಒಂದು ಬೆಳಗಿನ ಜಾವ ಮನೆಯ ಹಿತ್ತಲಿನ ಮರದ ಮೇಲೆ ಕುಳಿತಿದ್ದ ಹಕ್ಕಿಯೊಂದನ್ನು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾಗ ಈ ಪ್ರಶ್ನೆ ನನ್ನೊಳಗೆ ಮೂಡಿತು. ನಿಜ, ನಾವು ಪ್ರವಾಸಕ್ಕೆ ಹೊರಡುತ್ತೇವೆ. ಹೊಸ ಊರು, ಹೊಸ ಜನ, ಹೊಸ ಸಂಸ್ಕೃತಿ, ಹೊಸ ಭೂದೃಶ್ಯಗಳನ್ನು ನೋಡುತ್ತೇವೆ. ಕೆಲವು ದಿನಗಳ ನಂತರ ಮನೆಗೆ ಮರಳುತ್ತೇವೆ. ಪ್ರವಾಸದ ನೆನಪುಗಳನ್ನು ಛಾಯಾಚಿತ್ರಗಳಲ್ಲಿ, ಬರಹಗಳಲ್ಲಿ, ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇವೆ.
ಆದರೆ, ನಮ್ಮ ಸುತ್ತಲಿನ ಹಕ್ಕಿಗಳನ್ನೊಮ್ಮೆ ಗಮನಿಸಿ. ಕೆಲವು ಹಕ್ಕಿಗಳು ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತವೆ. ಕೆಲವು ಹಕ್ಕಿಗಳು ತಮ್ಮ ವ್ಯಾಪ್ತಿಯೊಳಗೆ ಆಹಾರಕ್ಕಾಗಿ ಅಲೆದಾಡುತ್ತವೆ. ಆದರೆ, ಇನ್ನೂ ಕೆಲವು ಹಕ್ಕಿಗಳು...ಸಾವಿರಾರು ಕಿಲೋಮೀಟರ್ ದೂರ ಪ್ರಯಾಣಿಸುತ್ತವೆ. ದೇಶಗಳನ್ನು ದಾಟುತ್ತವೆ. ಸಮುದ್ರಗಳನ್ನು ದಾಟುತ್ತವೆ. ಮರುಭೂಮಿಗಳನ್ನು ದಾಟುತ್ತವೆ. ಹಿಮಾಲಯದಂಥ ಪರ್ವತ ಶ್ರೇಣಿಗಳ ಮೇಲಿಂದ ಹಾರುತ್ತವೆ. ಮತ್ತೆ ಒಂದು ದಿನ, ಅದೇ ದಾರಿಯನ್ನು ಹಿಡಿದು ತಮ್ಮ ಮೂಲ ನೆಲೆಗೆ ಮರಳುತ್ತವೆ. ಅವುಗಳ ಕೈಯಲ್ಲಿ ಪ್ರವಾಸದ ಬ್ಯಾಗಿಲ್ಲ. ಪಾಸ್ಪೋರ್ಟ್ ಇಲ್ಲ. ವಿಮಾನದ ಟಿಕೆಟ್ ಇಲ್ಲ. ದಾರಿಯಲ್ಲಿ ಹೊಟೇಲ್ ಕಾಯ್ದಿರಿಸಿಲ್ಲ. ಅವುಗಳಿಗೆ ರೆಕ್ಕೆಗಳಿವೆ. ದಿಕ್ಕುಗಳ ಅರಿವಿದೆ. ಪ್ರಕೃತಿಯ ಮೇಲೆ ನಂಬಿಕೆಯಿದೆ. ರೆಕ್ಕೆಗಳೇ ಅವುಗಳ ವಿಮಾನ, ಆಕಾಶವೇ ಹೆದ್ದಾರಿ, ನಕ್ಷತ್ರಗಳೇ ದಾರಿದೀಪ, ಭೂಮಿಯ ನದಿಗಳು- ಪರ್ವತಗಳು-ಸಮುದ್ರ ತೀರಗಳೇ ಮಾರ್ಗಸೂಚಿಗಳು. ಸಾವಿರಾರು ಕಿಲೋಮೀಟರ್ ದೂರ ಹಾರುತ್ತವೆ. ಹೀಗಾಗಿ ಹಕ್ಕಿಗಳ ವಲಸೆಯೂ ಒಂದು ರೀತಿಯ ಪ್ರವಾಸವೇ. ಆದರೆ, ಅದು ಮನುಷ್ಯನ ಪ್ರವಾಸಕ್ಕಿಂತ ಎಷ್ಟೋ ಪಟ್ಟು ಸಾಹಸಮಯವಾದ ಪ್ರವಾಸ!
ಇದನ್ನೂ ಓದಿ: ಪೆಟ್ ಫ್ರೆಂಡ್ಲಿ ಟೂರಿಸಂ - ಸಾಕು ಪ್ರಾಣಿಗಳೊಡನೆ ಪ್ರವಾಸ
ಚಳಿಗಾಲದ ಬೆಳಗ್ಗೆ. ಮಂಜಿನ ತೆಳುವಾದ ಪರದೆ ಇನ್ನೂ ಸಂಪೂರ್ಣವಾಗಿ ಸರಿದಿರಲಿಲ್ಲ. ಹತ್ತಿರದ ಜಲಮೂಲವೊಂದರ ಬಳಿ ಕ್ಯಾಮೆರಾ ಹಿಡಿದು ನಿಂತಿದ್ದೆ. ನೀರಿನ ಅಂಚಿನಲ್ಲಿ ಕೆಲವು ಕೊಕ್ಕರೆಗಳು. ಸ್ವಲ್ಪ ದೂರದಲ್ಲಿ ಬಾತುಕೋಳಿಗಳ ಗುಂಪು. ಕೆಲವು ಸಣ್ಣ ನೀರುಹಕ್ಕಿಗಳು ಕೆಸರಿನಲ್ಲಿ ತಮ್ಮ ಉದ್ದನೆಯ ಕೊಕ್ಕಿನಿಂದ ಆಹಾರ ಹುಡುಕುತ್ತಿದ್ದವು. ಅವುಗಳಲ್ಲಿ ಕೆಲವು ನಮ್ಮ ಸ್ಥಳೀಯ ಹಕ್ಕಿಗಳಲ್ಲ ಎಂಬುದು ಅನುಭವದಿಂದಲೇ ತಿಳಿಯುತ್ತಿತ್ತು. ʼಇವು ಎಲ್ಲಿಂದ ಬಂದಿರಬಹುದು?ʼ ಆ ಪ್ರಶ್ನೆಯ ಹಿಂದೆ ಮತ್ತೊಂದು ಪ್ರಶ್ನೆ.`ಇಷ್ಟು ದೂರದಿಂದ ಬಂದಿದ್ದರೆ, ಎಷ್ಟು ದೂರ ಹಾರಿರಬಹುದು?ʼ

ಉತ್ತರದ ದೇಶಗಳಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ಬದಲಾಗುತ್ತದೆ. ಸೈಬೀರಿಯಾ, ರಷ್ಯಾ, ಮಂಗೋಲಿಯಾ, ಮಧ್ಯ ಏಷ್ಯಾ ಮತ್ತು ಉತ್ತರ ಯುರೋಪಿನ ಅನೇಕ ಪ್ರದೇಶಗಳಲ್ಲಿ ತಾಪಮಾನ ತೀವ್ರವಾಗಿ ಕುಸಿಯುತ್ತದೆ. ಜಲಮೂಲಗಳು ಹೆಪ್ಪುಗಟ್ಟುತ್ತವೆ. ಆಹಾರದ ಲಭ್ಯತೆ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ ಭಾರತದಂಥ ಉಷ್ಣ ಪ್ರದೇಶಗಳಲ್ಲಿ ಹವಾಮಾನ ಹೆಚ್ಚು ಅನುಕೂಲಕರವಾಗಿರುತ್ತದೆ. ಹೀಗಾಗಿ ಉತ್ತರದ ಅನೇಕ ಹಕ್ಕಿಗಳು ದಕ್ಷಿಣದತ್ತ ಹೊರಡುತ್ತವೆ. ಕೆಲವು ಭಾರತಕ್ಕೆ ಬರುತ್ತವೆ. ಕೆಲವು ಆಫ್ರಿಕಕ್ಕೆ. ಕೆಲವು ಆಗ್ನೇಯ ಏಷ್ಯಾಕ್ಕೆ. ಮತ್ತಷ್ಟು ದೂರದ ಹಕ್ಕಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ವರೆಗೂ ತೆರಳುತ್ತವೆ.
ವಸಂತಕಾಲ ಮರಳಿದಾಗ ಮತ್ತೆ ಪ್ರಯಾಣದ ದಿಕ್ಕು ಬದಲಾಗುತ್ತದೆ. ಅವು ಮತ್ತೆ ಉತ್ತರದತ್ತ ಹೊರಡುತ್ತವೆ. ಇದು ಪ್ರಕೃತಿಯ ಕ್ಯಾಲೆಂಡರ್ನಲ್ಲಿ ವರ್ಷಂಪ್ರತಿ ನಡೆಯುವ ಮಹಾ ಪ್ರವಾಸ. ಅಚ್ಚರಿಯ ಸಂಗತಿಯೆಂದರೆ, ಜಗತ್ತಿನ ಸುಮಾರು ಐದು ಹಕ್ಕಿ ಪ್ರಭೇದಗಳಲ್ಲಿ ಒಂದು ವಲಸೆ ಹೋಗುತ್ತದೆ ಎಂದು Bird Life International ತಿಳಿಸುತ್ತದೆ. ಅಂದರೆ, ನಾವು ನಮ್ಮ ಸುತ್ತಲೂ ಕಾಣುವ ಹಕ್ಕಿಗಳ ಜಗತ್ತಿನಲ್ಲಿಯೇ ಒಂದು ದೊಡ್ಡ ಸಮುದಾಯ ಸದಾ ಪ್ರಯಾಣದಲ್ಲಿ/ ಪ್ರವಾಸದಲ್ಲಿ ಇರುತ್ತವೆ.
ಹಕ್ಕಿಗಳಿಗೂ ಆಕಾಶದಲ್ಲಿ ಹೆದ್ದಾರಿಗಳಿವೆ. ಅವುಗಳನ್ನು Flyways- ವಲಸೆ ಮಾರ್ಗಗಳು ಎಂದು ಕರೆಯುತ್ತಾರೆ. ಭಾರತಕ್ಕೆ ಅತ್ಯಂತ ಮಹತ್ವದ್ದಾಗಿರುವುದು Central Asian Flyway- ಮಧ್ಯ ಏಷ್ಯಾ ವಲಸೆ ಮಾರ್ಗ. ಇದು ಉತ್ತರದ ಆರ್ಕ್ಟಿಕ್ ಪ್ರದೇಶಗಳಿಂದ ಮಧ್ಯ ಏಷ್ಯಾ ಮೂಲಕ ಭಾರತೀಯ ಉಪಖಂಡದವರೆಗೆ ಹರಡಿರುವ ವಿಶಾಲ ವಲಸೆ ಜಾಲ. ಸುಮಾರು 30 ದೇಶಗಳನ್ನು ಸಂಪರ್ಕಿಸುವ ಈ ಮಾರ್ಗವನ್ನು 600ಕ್ಕೂ ಹೆಚ್ಚು ವಲಸೆ ಹಕ್ಕಿ ಪ್ರಭೇದಗಳು ಬಳಸುತ್ತವೆ.
ಒಂದು ಚಳಿಗಾಲದ ಬೆಳಗ್ಗೆ ನಮ್ಮ ಸುತ್ತಲಿನ ಕೆರೆಯಲ್ಲಿ ಕಾಣಿಸಿಕೊಂಡ ಅಪರಿಚಿತ ಹಕ್ಕಿಯನ್ನು ನೋಡಿದಾಗ, ಅದು ಕೆಲವೇ ದಿನಗಳ ಹಿಂದೆ ಸಾವಿರಾರು ಕಿಲೋಮೀಟರ್ ದೂರದ ಸೈಬೀರಿಯಾದ ನೆಲದಲ್ಲಿ ಇರಬಹುದೆಂಬ ಕಲ್ಪನೆಯೇ ರೋಮಾಂಚನ ಮೂಡಿಸುತ್ತದೆ. ನಮ್ಮ ಕಣ್ಣಿಗೆ ಅದು ಒಂದು ಪುಟ್ಟ ಹಕ್ಕಿ. ಬಹುಶಃ ಅದು ತನ್ನ ಜನ್ಮಭೂಮಿಯಿಂದ ಹೊರಟಿರಬಹುದು. ದಾರಿಯಲ್ಲಿ ಒಂದು ಜಲಮೂಲದಲ್ಲಿ ಇಳಿದಿರಬಹುದು. ಆಹಾರ ಹುಡುಕಿರಬಹುದು. ಬಿರುಗಾಳಿಯನ್ನು ಎದುರಿಸಿರಬಹುದು. ಮತ್ತೆ ಹಾರಿರಬಹುದು. ಮಧ್ಯ ಏಷ್ಯಾದ ವಿಶಾಲ ಪ್ರದೇಶಗಳನ್ನು ದಾಟಿ ಭಾರತಕ್ಕೆ ಬಂದಿರಬಹುದು. ಇಲ್ಲಿ ಕೆಲವು ತಿಂಗಳು ಕಳೆದ ನಂತರ ಮತ್ತೆ ಅದೇ ದಿಕ್ಕಿನಲ್ಲಿ ಹಿಂತಿರುಗಬಹುದು. ಆ ಹಕ್ಕಿಯ ದೃಷ್ಟಿಯಲ್ಲಿ ಭಾರತ ಪ್ರವಾಸದ ಅಂತಿಮ ಗಮ್ಯಸ್ಥಾನವಲ್ಲ. ಅದು ವಾರ್ಷಿಕ ಪ್ರವಾಸದ ಒಂದು ಅಧ್ಯಾಯ ಮಾತ್ರ. ಹಕ್ಕಿಗಳ ವಲಸೆಯ ದಾಖಲೆಗಳನ್ನು ನೋಡಿದಾಗ ಪ್ರಕೃತಿಯ ಸಾಮರ್ಥ್ಯದ ಬಗ್ಗೆ ನಮ್ಮ ಕಲ್ಪನೆಗಳೇ ಬದಲಾಗುತ್ತವೆ.

ಅತಿ ದೂರದ ವಾರ್ಷಿಕ ವಲಸೆಯ ಮಾತು ಬಂದಾಗ Arctic Tern ಅನಿವಾರ್ಯವಾಗಿ ನೆನಪಾಗುತ್ತದೆ. ಉತ್ತರ ಧ್ರುವದ ಸಮೀಪದ ಆರ್ಕ್ಟಿಕ್ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿ ಚಳಿಗಾಲ ಬಂದಾಗ ದಕ್ಷಿಣ ಧ್ರುವದ ಸಮೀಪದ ಅಂಟಾರ್ಕ್ಟಿಕ್ ಪ್ರದೇಶಗಳಿಗೆ ತೆರಳುತ್ತದೆ. ಅಂದರೆ, ಧ್ರುವದಿಂದ ಧ್ರುವಕ್ಕೆ! ಉಪಗ್ರಹ ಟ್ರ್ಯಾಕಿಂಗ್ ಅಧ್ಯಯನಗಳಲ್ಲಿ ಕೆಲವು Arctic Ternಗಳು ವರ್ಷಕ್ಕೆ ಸುಮಾರು 70,000 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರ ಪ್ರಯಾಣಿಸುವುದು ದಾಖಲಾಗಿದೆ. ಕೆಲವು ಹಕ್ಕಿಗಳ ವಾರ್ಷಿಕ ಪ್ರಯಾಣ ಸುಮಾರು 96,000 ಕಿಮೀ. ಗಳ ವರೆಗೆ ದಾಖಲಾಗಿದೆ. ಒಂದು ಸಣ್ಣ ಹಕ್ಕಿ ವರ್ಷಕ್ಕೆ ಭೂಮಿಯ ಸುತ್ತ ಎರಡು ಬಾರಿ ಹೋಗಿಬರುವಷ್ಟು ದೂರ ಪ್ರಯಾಣಿಸುತ್ತದೆ ಎಂಬ ಕಲ್ಪನೆಯೇ ಅಚ್ಚರಿ ಮೂಡಿಸುತ್ತದೆ. ಆದರೆ, ಒಂದೇ ಬಾರಿಗೆ ನಿಲ್ಲದೆ ಅತ್ಯಂತ ದೂರ ಹಾರುವ ಹಕ್ಕಿಗಳ ವಿಷಯ ಬಂದಾಗ Bar-tailed Godwit ಅದ್ಭುತ ಉದಾಹರಣೆ. ಅಲಾಸ್ಕಾದಿಂದ ದಕ್ಷಿಣ ಪೆಸಿಫಿಕ್ ಭಾಗದತ್ತ ವಲಸೆ ಹೋಗುವ ಈ ಹಕ್ಕಿಗಳಲ್ಲಿ ಒಂದು ಉಪಗ್ರಹ- ಟ್ಯಾಗ್ ಮಾಡಲಾದ ಹಕ್ಕಿ ಸುಮಾರು 13,560 ಕಿಲೋಮೀಟರ್ ದೂರವನ್ನು ನಿಲ್ಲದೆ ಕ್ರಮಿಸಿರುವ ದಾಖಲೆ ಇದೆ. ಸುಮಾರು 11 ದಿನಗಳಿಗೂ ಹೆಚ್ಚು ಕಾಲ ಅದು ಆಹಾರಕ್ಕಾಗಿ ಎಲ್ಲಿಯೂ ಇಳಿಯದೆ ಹಾರಿತು. ಕೆಳಗೆ ಅಂತ್ಯವಿಲ್ಲದ ಪೆಸಿಫಿಕ್ ಸಾಗರ, ಮೇಲೆ ಆಕಾಶ. ಮಧ್ಯದಲ್ಲಿ ಕೆಲವೇ ನೂರಾರು ಗ್ರಾಂ ತೂಕದ ಒಂದು ಹಕ್ಕಿ! ಆದರೂ ಅದು ತನ್ನ ಗಮ್ಯಸ್ಥಾನ ತಲುಪುತ್ತದೆ.
ಭಾರತಕ್ಕೆ ಬರುವ ವಲಸೆ ಹಕ್ಕಿಗಳಲ್ಲಿ ನನ್ನನ್ನು ಹೆಚ್ಚು ಆಶ್ಚರ್ಯಗೊಳಿಸುವ ಮತ್ತೊಂದು ಹಕ್ಕಿ Bar-headed Goose. ಮಧ್ಯ ಏಷ್ಯಾದ ಸಂತಾನೋತ್ಪತ್ತಿ ಪ್ರದೇಶಗಳಿಂದ ಭಾರತೀಯ ಉಪಖಂಡದತ್ತ ಬರುವ ಈ ಹಕ್ಕಿ ಹಿಮಾಲಯದಂಥ ಮಹಾಪರ್ವತ ಶ್ರೇಣಿಯನ್ನು ದಾಟಬಲ್ಲದು. ನಾವು ಹಿಮಾಲಯವನ್ನು ನೋಡಿದಾಗ ಅದರ ಎತ್ತರ, ಹಿಮ, ಕಣಿವೆಗಳು, ಕಠಿಣ ವಾತಾವರಣ ನೆನಪಾಗುತ್ತದೆ. ಹಿಮಾಲಯವನ್ನು ದಾಟುವಾಗ ಗಾಳಿ ತೆಳುವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಕಡಿಮೆ. ತಾಪಮಾನ ತೀವ್ರವಾಗಿ ಇಳಿಯುತ್ತದೆ. ಆದರೂ Bar-headed Goose ಹಾರುತ್ತದೆ. ಅದರ ದೇಹವೇ ಎತ್ತರ ಪ್ರದೇಶದ ಜೀವನಕ್ಕೆ ಹೊಂದಿಕೊಂಡಿದೆ. ಕೆಲವು ಅಧ್ಯಯನಗಳು ಈ ಹಕ್ಕಿಗಳಲ್ಲಿ ಆಮ್ಲಜನಕವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಶಿಷ್ಟ ಶಾರೀರಿಕ ಹೊಂದಾಣಿಕೆಗಳಿರುವುದನ್ನು ತೋರಿಸಿವೆ.
ಇನ್ನೊಂದು ಅದ್ಭುತ ಪ್ರವಾಸಿ Amur Falcon ಎಂಬ ಪಕ್ಷಿ. ಪೂರ್ವ ಸೈಬೀರಿಯಾ ಮತ್ತು ಉತ್ತರ ಚೀನಾದ ಸಂತಾನೋತ್ಪತ್ತಿ ಪ್ರದೇಶಗಳಿಂದ ಹೊರಡುವ ಈ ಪುಟ್ಟ ಬೇಟೆಗಾರ ಹಕ್ಕಿ ದಕ್ಷಿಣದತ್ತ ಪ್ರಯಾಣಿಸುತ್ತದೆ. ಭಾರತದ ಈಶಾನ್ಯ ಭಾಗ, ವಿಶೇಷವಾಗಿ ನಾಗಾಲ್ಯಾಂಡ್ ಪ್ರದೇಶ, ಇದರ ಪ್ರಮುಖ ತಂಗುದಾಣಗಳಲ್ಲಿ ಒಂದು. ಅಲ್ಲಿಂದ ಮುಂದೆ ಆಫ್ರಿಕದ ದಕ್ಷಿಣ ಭಾಗದತ್ತ ಸಾಗುತ್ತದೆ. ಇದರ ಒಟ್ಟು ವಾರ್ಷಿಕ ವಲಸೆ ಸುಮಾರು 20,000 ಕಿಲೋಮೀಟರ್ಗಳಷ್ಟು ಆಗಬಹುದು.
Common Crane ಕೂಡ ಭಾರತದ ಚಳಿಗಾಲದ ಪ್ರವಾಸಿಗ. ಭಾರತದಲ್ಲಿ ಚಳಿಗಾಲ ಕಳೆದ ನಂತರ ಕೆಲವು Common Cranes ಉತ್ತರದ ಸಂತಾನೋತ್ಪತ್ತಿ ಪ್ರದೇಶಗಳತ್ತ ಮರಳುತ್ತವೆ. ಉಪಗ್ರಹ ಟ್ಯಾಗಿಂಗ್ ಅಧ್ಯಯನಗಳು ಅವುಗಳ ಮಾರ್ಗವು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ತುರ್ಕ್ಮೆನಿಸ್ತಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಸೇರಿದಂತೆ ಹಲವು ಪ್ರದೇಶಗಳ ಮೂಲಕ ಸಾಗುವುದನ್ನು ತೋರಿಸಿವೆ. ವಲಸೆ ಹಕ್ಕಿಗೆ ಆಕಾಶವೇ ಒಂದೇ ದೇಶ.
ಭಾರತದ ಪಕ್ಷಿ ಇತಿಹಾಸದಲ್ಲಿ Siberian Crane ಒಂದು ಭಾವುಕ ಅಧ್ಯಾಯ. ಒಮ್ಮೆ ರಷ್ಯಾದ ಆರ್ಕ್ಟಿಕ್ ಪ್ರದೇಶಗಳಿಂದ ಭಾರತಕ್ಕೆ, ವಿಶೇಷವಾಗಿ ರಾಜಸ್ಥಾನದ ಭರತ್ಪುರ್ ದ ಕೇವಲದೇವ ಪಕ್ಷಿಧಾಮಕ್ಕೆ, ಇವು ಚಳಿಗಾಲದಲ್ಲಿ ಬರುತ್ತಿದ್ದವು. ಬಿಳಿಯ ಮೈ, ಕಪ್ಪು ಮುಖದ ಭಾಗ, ಉದ್ದನೆಯ ಕಾಲುಗಳು — ಕೆರೆಗಳ ನಡುವೆ ನಿಧಾನವಾಗಿ ನಡೆಯುತ್ತಿದ್ದ ಈ ಹಕ್ಕಿಗಳ ಗುಂಪು ಪಕ್ಷಿವೀಕ್ಷಕರಿಗೆ ಅಪೂರ್ವ ದೃಶ್ಯವಾಗಿತ್ತು. ಆದರೆ, ಕ್ರಮೇಣ ಅವುಗಳ ಸಂಖ್ಯೆ ಕುಸಿಯಿತು. ವಲಸೆ ಮಾರ್ಗಗಳಲ್ಲಿನ ಜಲಭೂಮಿಗಳ ನಾಶ, ಬೇಟೆ ಮತ್ತು ಪರಿಸರ ಬದಲಾವಣೆಗಳು ಇಂಥ ಹಕ್ಕಿಗಳ ಬದುಕಿಗೆ ದೊಡ್ಡ ಸವಾಲುಗಳಾದವು. ಒಂದು ಕಾಲದಲ್ಲಿ ನಮ್ಮ ದೇಶಕ್ಕೆ ಬಂದಿದ್ದ ಪ್ರವಾಸಿ ಪಕ್ಷಿಗಳು ಇಂದು ಕಾಣಿಸದಿರುವುದು ಕೇವಲ ಪಕ್ಷಿವೀಕ್ಷಕರಿಗೆ ಆದ ನಷ್ಟವಲ್ಲ. ಅದು ಪ್ರಕೃತಿಯ ಬದಲಾಗುತ್ತಿರುವ ಸಮತೋಲನದ ಎಚ್ಚರಿಕೆಯೂ ಹೌದು.
ಹಕ್ಕಿಗಳಿಗೆ ದಾರಿ ತೋರಿಸುವರು ಯಾರು? ಅವು ಸಾವಿರಾರು ಕಿಲೋಮೀಟರ್ ದೂರದ ಗಮ್ಯಸ್ಥಾನವನ್ನು ಹೇಗೆ ತಲುಪುತ್ತವೆ? ಪ್ರಕೃತಿಯೇ ಅವುಗಳಿಗೆ ನ್ಯಾವಿಗೇಷನ್ ವ್ಯವಸ್ಥೆಯನ್ನು ಕೊಟ್ಟಿದೆ. ಸೂರ್ಯನ ಸ್ಥಾನ. ನಕ್ಷತ್ರಗಳು. ಭೂಮಿಯ ಚುಂಬಕೀಯ ಕ್ಷೇತ್ರ. ಭೂದೃಶ್ಯದ ಗುರುತುಗಳು. ಗಾಳಿಯ ದಿಕ್ಕು. ವಾಸನೆ. ಹಿಂದಿನ ಅನುಭವ. ಇವೆಲ್ಲವೂ ಅವುಗಳ ದಿಕ್ಕು ಗುರುತಿಸುವಿಕೆಯಲ್ಲಿ ಪಾತ್ರವಹಿಸುತ್ತವೆ. ಭೂಮಿಯ ಮೇಲೆ ಹಾರುವಾಗ ಹಕ್ಕಿಗಳಿಗೆ ಮರಗಳು, ನದಿಗಳು, ಪರ್ವತಗಳು, ಕರಾವಳಿ, ನಗರಗಳು ಮುಂತಾದ ಗುರುತುಗಳು ಸಿಗುತ್ತವೆ. ಆದರೆ, ಸಮುದ್ರ? ಅಲ್ಲಿ ಎಲ್ಲೆಡೆ ನೀರು. ಆದರೂ ಕೆಲವು ಹಕ್ಕಿಗಳು ಸಾವಿರಾರು ಕಿಲೋಮೀಟರ್ಗಳಷ್ಟು ಸಮುದ್ರದ ಮೇಲೆ ಹಾರುತ್ತವೆ.
ದೀರ್ಘ ಪ್ರಯಾಣಕ್ಕೂ ಮೊದಲು ಕೆಲವು ಹಕ್ಕಿಗಳು ಅಪಾರ ಪ್ರಮಾಣದಲ್ಲಿ ಆಹಾರ ಸೇವಿಸಿ ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಿಕೊಳ್ಳುತ್ತವೆ. ಅದೇ ಅವುಗಳ ಇಂಧನ. ದೀರ್ಘ ಹಾರಾಟದ ಸಂದರ್ಭದಲ್ಲಿ ಆ ಕೊಬ್ಬು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಕೆಲವು ಹಕ್ಕಿಗಳಲ್ಲಿ ಪ್ರಯಾಣದ ಅವಧಿಗೆ ಅನುಗುಣವಾಗಿ ದೇಹದ ಕೆಲವು ಅಂಗಗಳ ಗಾತ್ರದಲ್ಲಿಯೂ ಬದಲಾವಣೆಗಳು ಕಂಡುಬರುತ್ತವೆ. ಪ್ರಕೃತಿಯ ಈ ಹೊಂದಾಣಿಕೆಗಳು ನಮ್ಮ ವಿಜ್ಞಾನಕ್ಕೂ ಅಚ್ಚರಿ ಮೂಡಿಸುತ್ತವೆ.

ಪಕ್ಷಿ ಛಾಯಾಗ್ರಾಹಕನಾಗಿ ನಾನು ಹಕ್ಕಿಯ ಚಿತ್ರವನ್ನು ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ಬೆಳಕು, ಹಿನ್ನೆಲೆ, ಭಂಗಿ, ಫ್ರೇಮ್, ಶಟರ್ ವೇಗ — ಇವೆಲ್ಲವನ್ನೂ ಯೋಚಿಸುತ್ತೇನೆ. ಆದರೆ ವಲಸೆ ಹಕ್ಕಿಯೊಂದು ಲೆನ್ಸ್ ಮುಂದೆ ಕಾಣಿಸಿಕೊಂಡಾಗ, ನನ್ನ ದೃಷ್ಟಿಕೋನವೇ ಬದಲಾಗುತ್ತದೆ. ನಾನು ಕೇವಲ ಒಂದು ಚಿತ್ರವನ್ನು ನೋಡುತ್ತಿಲ್ಲ. ಒಂದು ಪ್ರಯಾಣವನ್ನು ನೋಡುತ್ತಿದ್ದೇನೆ. ಆ ಹಕ್ಕಿಯ ಹಿಂದೆ ಸಾವಿರಾರು ಕಿಲೋಮೀಟರ್ಗಳ ಕಥೆಯಿದೆ. ಅದರ ರೆಕ್ಕೆಗಳಲ್ಲಿ ಸಾವಿರ ನೆನಪುಗಳಿವೆ. ಅದರ ಕಣ್ಣಿನಲ್ಲಿ ದೂರದ ನೆಲದ ಗುರುತುಗಳಿವೆ. ಅದರ ದೇಹದಲ್ಲಿ ಮುಂದಿನ ಪ್ರಯಾಣದ ಶಕ್ತಿ ಇದೆ. ಅದು ನನ್ನ ಕ್ಯಾಮೆರಾದ ಮುಂದೆ ಕೆಲವು ಕ್ಷಣ ಮಾತ್ರ ನಿಂತಿರಬಹುದು. ಆದರೆ ನನ್ನ ಮನಸಿನಲ್ಲಿ ಅದು ಒಂದು ದೀರ್ಘ ಪ್ರವಾಸದ ಕಥೆಯನ್ನು ಬಿಟ್ಟು ಹೋಗುತ್ತದೆ.
ಮುಂದಿನ ಬಾರಿ ಚಳಿಗಾಲದ ಬೆಳಗ್ಗೆ ಯಾವುದಾದರೂ ಕೆರೆಯ ಬಳಿ ನಿಂತಾಗ, ದೂರದ ದೇಶದಿಂದ ಬಂದಿರುವ ಅಪರಿಚಿತ ಹಕ್ಕಿಯೊಂದನ್ನು ನೋಡಿದರೆ ಸ್ವಲ್ಪ ಹೊತ್ತು ಅದರತ್ತ ಗಮನ ಹರಿಸಿ. ಅದು ಕೇವಲ ಒಂದು ಹಕ್ಕಿಯಲ್ಲ. ಬಹುಶಃ ಅದು ಸೈಬೀರಿಯಾದ ಪ್ರವಾಸಿಗನಾಗಿರಬಹುದು, ಮಧ್ಯ ಏಷ್ಯಾದಿಂದಲೋ, ಯುರೋಪಿನ ಯಾವುದೋ ಜಲಭೂಮಿಯಿಂದಲೋ, ಹಿಮಾಲಯದಾಚೆಯಿಂದಲೋ ಅಥವಾ ಇನ್ನೂ ದೂರದ ಆರ್ಕ್ಟಿಕ್ ಪ್ರದೇಶದಿಂದಲೋ ಬಂದಿರಬಹುದು. ಅದರ ಪ್ರವಾಸದ ದೂರವನ್ನು ನಾವು ಊಹಿಸಲೂ ಸಾಧ್ಯವಾಗದಿರಬಹುದು. ಆದರೆ ಅದು ನಮ್ಮ ಊರಿನ ಒಂದು ಸಣ್ಣ ಕೆರೆಯನ್ನು ತನ್ನ ಬದುಕಿನ ನಕ್ಷೆಯಲ್ಲಿ ಗುರುತಿಸಿಕೊಂಡಿದೆ. ಆ ಕೆರೆ ಉಳಿಯಬೇಕು. ಜಲಭೂಮಿ ಉಳಿಯಬೇಕು. ಮಾರ್ಗ ಉಳಿಯಬೇಕು. ಆಕಾಶ ಉಳಿಯಬೇಕು. ಆಗ ಮಾತ್ರ ಮುಂದಿನ ಚಳಿಗಾಲದಲ್ಲೂ ಆ ಪ್ರವಾಸಿಗ ಮರಳಿ ಬರಬಹುದು. ಅವರ ಪ್ರವಾಸ ಮುಂದುವರಿಯುತ್ತಲೇ ಇರುತ್ತದೆ. ನಾವು ನೋಡುತ್ತಲೇ ಇರುತ್ತೇವೆ. ಪ್ರಕೃತಿ ತನ್ನ ಮಹಾಕಾವ್ಯವನ್ನು ಆಕಾಶದ ಮೇಲೆ ಬರೆಯುತ್ತಲೇ ಇರುತ್ತದೆ.