ಮೂರು ಭೂಖಂಡಗಳು,ಇಪ್ಪತ್ಮೂರು ದೇಶಗಳನ್ನು ಸುತ್ತಿಸುವ ಕಥನ
ಫಿನ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಜರ್ಮನಿ, ಸಿಂಗಾಪುರ, ರಷ್ಯಾ, ಅಮೇರಿಕ ಹೀಗೆ ಇಡೀ ವಿಶ್ವದ ಇತಿಹಾಸ, ಭೌಗೋಳಿಕ ವಿನ್ಯಾಸ, ಜನ ಜೀವನದ ಕಥೆಯನ್ನು ನಾವು ಈ ಪುಸ್ತಕದಲ್ಲಿ ಸವಿಯಬಹುದು. ಜಯಶ್ರೀ ಅವರದು ಮೂರು ಭೂಖಂಡಗಳ ಇಪ್ಪತ್ಮೂರು ದೇಶಗಳಲ್ಲಿ ಪ್ರತ್ಯೇಕವಾಗಿ ಮಾಡಿರುವ ದೀರ್ಘ ಪ್ರವಾಸಗಳ ಕಥನ ಈ ಕೃತಿ.
- ನಯನ ಬಜಕೂಡ್ಲು
ಖ್ಯಾತ ಬರಹಗಾರ್ತಿ, ಲೇಖಕಿಯೂ ಆಗಿರುವ ಜಯಶ್ರೀ ದೇಶಪಾಂಡೆಯವರ ಪ್ರವಾಸ ಕಥನ ‘ಹಲವು ನಾಡು ಹೆಜ್ಜೆ ಹಾಡು’. ಪ್ರವಾಸ ಕಥನದ ಆರಂಭದಲ್ಲಿಯೇ ‘ನನ್ನ ಮಾತುಗಳು’ ಮೂಲಕ ಇವರು – ‘ಬೇರೆ ಬೇರೆ ದೇಶಗಳ ಕುರಿತಾದ ಮಾಹಿತಿ ಇಂದು ಗೂಗಲ್‌ನಲ್ಲಿ ಬಹಳಷ್ಟು ಲಭ್ಯವಾದರೂ ನಾನು ಈ ಪ್ರವಾಸ ಕಥನದಲ್ಲಿ ದಾಖಲಿಸಿರುವುದು ಪ್ರವಾಸದಲ್ಲಿ ನನಗಾದ ಅನುಭವಗಳನ್ನುʼ ಅಂತ ಮುಕ್ತವಾಗಿ ಹೇಳುತ್ತಾರೆ.
ವಿಶ್ವವು ವಿಸ್ಮಯಗಳ ಆಗರ. ಸವಿಯುವ ಮನಸ್ಸಿದ್ದಾಗ, ನೋಡಲು ಕಾತರಿಸುವ ಕಣ್ಣುಗಳು ಇದ್ದಾಗ ಇಂಥ ವಿಸ್ಮಯಗಳನ್ನು ಕಾಣುವ ಹಂಬಲ ಹೃನ್ಮನದಲ್ಲಿ ಮೊಳೆಯತೊಡಗುತ್ತದೆ. ನನ್ನಂಥ ದಿನನಿತ್ಯದ ಜೀವನಕ್ಕಾಗಿ ದುಡಿಮೆಯ ಹೋರಾಟದಲ್ಲಿ ತೊಡಗಿರುವವರು ಪ್ರಪಂಚದ ವಿಸ್ಮಯಗಳನ್ನು ಖುದ್ದಾಗಿ ಭೇಟಿ ನೀಡಿ ಸವಿಯುವುದು ಅಸಾಧ್ಯವೇ ಸರಿ. ಆದರೆ ʼಹಲವು ನಾಡು ಹೆಜ್ಜೆ ಹಾಡಿʼನಂಥ ಪ್ರವಾಸ ಕಥನಗಳು ಇಡೀ ಜಗತ್ತನ್ನೇ ನಮ್ಮ ಮುಂದೆ ಕುಳಿತಲ್ಲಿಯೇ ತೆರೆದಿಡುತ್ತದೆ. ಇದು ಸಾಧ್ಯವಾಗುವುದು ಬೇರೆ ಬೇರೆ ಸುಂದರ ಪ್ರದೇಶಗಳಿಗೆ ಭೇಟಿ ನೀಡಿದವರು ತಮ್ಮ ಪ್ರವಾಸದ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಮಾತ್ರ.
ಇದನ್ನೂ ಓದಿ: ಪ್ರಕೃತಿಯೊಡನೆ ಲಯವಾಗುವ ಪ್ರಬಂಧಗಳು
ಸ್ನೇಹಕ್ಕೆ ದೇಶ, ಕಾಲ, ಭಾಷೆಯ ಹಂಗಿಲ್ಲ. ಭಾಷೆ ಯಾವುದೇ ಇರಲಿ ನಾವು ವ್ಯಕ್ತಪಡಿಸುವ ಭಾವವನ್ನು ಸ್ನೇಹ ತುಂಬಿದ ಮನಸುಗಳು ಬಹುಬೇಗ ಅರ್ಥೈಸಿಕೊಳ್ಳುತ್ತವೆ. ಸ್ನೇಹಕ್ಕೆ ಸ್ನೇಹ ಭಾವವನ್ನು ಹೊಮ್ಮುವ ಕಣ್ಣುಗಳು ಹಾಗೂ ತುಟಿಯಂಚಿನ ನಗು ಸಾಕು, ಗೆಳೆತನ ತನ್ನಿಂದ ತಾನೇ ಬೆಸೆಯುತ್ತದೆ. ಭಾಷೆ ಅರಿಯದ ಫಿನ್ ಲ್ಯಾಂಡಿನ ನೆಲದಲ್ಲಿ ಬೆಸೆದ ಸುಂದರ ಸ್ನೇಹವನ್ನು ಅನಾವರಣಗೊಳಿಸುವ, ಮನಸಿಗೆ ಮುದ ನೀಡುವ ಒಂದು ಬರಹ. ಯಾವುದೇ ಸಂಬಂಧವಿರಲಿ ಅದರಲ್ಲಿ ವೈಯಕ್ತಿಕ ವಿಚಾರವನ್ನು ಬಹಳ ಆಳವಾಗಿ ಕೆದಕಲು ಹೋಗಬಾರದು ಅನ್ನುವ ಅರ್ಥ ಬರುವ ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಅವು ತುಂಬಾ ಗಹನ ಹಾಗೂ ಸುಂದರವಾಗಿವೆ.

ಎತ್ತರೆತ್ತರದ ಮರಗಳು, ಸುತ್ತಲೂ ಹಸಿರು, ರಸ್ತೆಯ ಇಕ್ಕೆಲಗಳನ್ನು ಅಲಂಕರಿಸಿರುವ ಸಹಜ ಪ್ರಕೃತಿ ಸೌಂದರ್ಯ, ಸರೋವರಗಳು, ಆ ಸರೋವರಗಳಲ್ಲಿ ನಡೆಸಿದ ದೋಣಿ ವಿಹಾರ ಹೀಗೆ ಈ ಪ್ರವಾಸ ಕಥನವಂತೂ ಕನಸಿನ ಲೋಕವನ್ನೇ ಓದುಗರ ಮನದಲ್ಲಿ ಸೃಷ್ಟಿಸುತ್ತದೆ. ನಮಗಷ್ಟೇ ಕನಸಿನ ಲೋಕ ಆದರೆ ಲೇಖಕಿ ಕಣ್ಣಾರೆ ಕಂಡ ಸ್ವರ್ಗ.
ಫಿನ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಜರ್ಮನಿ, ಸಿಂಗಾಪುರ, ರಷ್ಯಾ, ಅಮೇರಿಕ ಹೀಗೆ ಇಡೀ ವಿಶ್ವದ ಇತಿಹಾಸ, ಭೌಗೋಳಿಕ ವಿನ್ಯಾಸ, ಜನ ಜೀವನದ ಕಥೆಯನ್ನು ನಾವು ಈ ಪುಸ್ತಕದಲ್ಲಿ ಸವಿಯಬಹುದು. ಜಯಶ್ರೀ ಅವರದು ಮೂರು ಭೂಖಂಡಗಳ ಇಪ್ಪತ್ಮೂರು ದೇಶಗಳಲ್ಲಿ ಪ್ರತ್ಯೇಕವಾಗಿ ಮಾಡಿರುವ ದೀರ್ಘ ಪ್ರವಾಸಗಳ ಕಥನ ಈ ಕೃತಿ.
ಇತಿಹಾಸದ ಪುಟಗಳನ್ನು ಸೇರಿರುವ, ಹಡಗುಗಳನ್ನು ತನ್ನ ಒಡಲೊಳಗೆ ಸೇರಿಸಿಕೊಂಡಿರುವ ಸಮುದ್ರ, ದ್ವೀಪಗಳ ಕತೆಯೂ ಇಲ್ಲಿ ಕಾಣಸಿಗುತ್ತದೆ. ಹಡಗಿನ ಕ್ಯಾಪ್ಟನ್ ಜತೆ ಜಯಶ್ರೀಯವರ ಕುತೂಹಲಭರಿತ ಸಂಭಾಷಣೆ, ಮಾಹಿತಿ ಸಂಗ್ರಹ ಓದುಗರಲ್ಲೂ ಕುತೂಹಲ ಕೆರಳಿಸುತ್ತದೆ. ಹಲವಾರು ದೇಶಗಳ ಚರಿತ್ರೆ ಗತಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಪರಿ ಓದುಗರ ಮನಸ್ಸನ್ನು ಸೆರೆ ಹಿಡಿಯುವುದು ಖಚಿತ.
ಪ್ರವಾಸವೆಂಬುವುದು ಎಲ್ಲರ ಕನಸು. ಆದರೆ ಇದನ್ನು ನನಸಾಗಿಸಿಕೊಳ್ಳುವುದು ಕೆಲವರಿಗಷ್ಟೇ ಸಾಧ್ಯ. ಇಂಥ ವಿಸ್ತಾರವಾದ ಪ್ರವಾಸ ಕಥನಗಳು ನಮ್ಮನ್ನ ಕುಳಿತಲ್ಲಿಯೇ ಸುತ್ತಾಡಿಸಿ ಒಂದು ಹೊಸ ಲೋಕದಲ್ಲಿ ತೇಲಾಡಿಸಿ ಪ್ರವಾಸದ ಕನಸನ್ನ ಸ್ವಲ್ಪಮಟ್ಟಿಗೆ ನನಸಾಗಿಸುತ್ತವೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಜಯಶ್ರೀ ದೇಶಪಾಂಡೆಯವರ ʼಹಲವು ನಾಡು ಹೆಜ್ಜೆ ಹಾಡುʼ ಕೃತಿ. ಪುಸ್ತಕದ ಕೊನೆಯಲ್ಲಿ ಅಚ್ಚಾಗಿರುವ ಬಣ್ಣ ಬಣ್ಣದ ಚಿತ್ರಗಳು ಈ ಪುಸ್ತಕದಲ್ಲಿ ಇರುವ ಮತ್ತೊಂದು ಆಕರ್ಷಣೆ.
ಒಟ್ಟಿನಲ್ಲಿ ಒಂದು ಸುಂದರ ಪ್ರವಾಸದ ಅನುಭವವನ್ನು ಓದುಗರಿಗೆ ಪರಿಚಯಿಸಿ ಆ ಅನುಭೂತಿಯನ್ನು ಓದುಗರೂ ಸವಿಯುವಂತೆ ಮಾಡುವ ಪ್ರವಾಸ ಕಥನ ʼಹಲವು ನಾಡು ಹೆಜ್ಜೆ ಹಾಡು ʼ.
ಪುಸ್ತಕ :- ಹಲವು ನಾಡು ಹೆಜ್ಜೆ ಹಾಡು
ಲೇಖಕರು :- ಜಯಶ್ರೀ ದೇಶಪಾಂಡೆ
ಪ್ರಕಾಶಕರು :- ವಿಕಾಸ ಪ್ರಕಾಶನ
ಬೆಲೆ :- ರೂ. 260/-
ಫೋನ್ :- 9900095204
ಲೇಖನ: ನಯನ ಬಜಕೂಡ್ಲು