Thursday, March 19, 2026
Thursday, March 19, 2026

ಟೂರು ಕೇರಿಯ ನೂರು ಕಥೆಗಳು

ಪ್ರವಾಸದಲ್ಲಿ ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದಕ್ಕೆ ದಾರಿದೀಪವಾಗಿಯೂ ಈ ಪುಸ್ತಕದಲ್ಲಿರುವ ವಿವರಗಳು ನೆರವಾಗಬಹುದು. ತಾವು ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿಗೂ ಸಹಾಯವಾದೀತು.

  • ರವಿಶಂಕರ ಶಾಸ್ತ್ರಿ

'ಪ್ರವಾಸ' ಹೋಗುವುದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ ಇರಬಹುದು. ಹಾಗೆಯೇ ಪ್ರವಾಸವನ್ನು ಅನುಭವಿಸುವ ರೀತಿಯೂ ಒಬ್ಬರಿಂದ ಒಬ್ಬರಿಗೆ ಭಿನ್ನವಿರಬಹುದು. ತಾವು ಪ್ರವಾಸ ಹೋದ ಸ್ಥಳಗಳ ಬಗ್ಗೆ ವಿವರವಾಗಿ ತಿಳಿಸುತ್ತಾ ಓದುಗರನ್ನು ಕೂಡಾ ಪ್ರವಾಸಕ್ಕೆ ಹೊರಡುವಂತೆ ಮಾಡುವ ಅನೇಕ ಪುಸ್ತಕಗಳು ಬಂದಿವೆ. ಆದರೆ ಈಗ ಹೇಳಲು ಹೊರಟಿರುವ ಪುಸ್ತಕ ಅವೆಲ್ಲಕ್ಕಿಂತ ಭಿನ್ನ ಎಂದು ಹೇಳಬಹುದು. ಭಾರತಿ ಬಿ.ವಿ ಅವರು ತಮ್ಮ ಇತ್ತೀಚಿನ 'ಸೊಂಟಕ್ ಬೆಲ್ಟು ಕಟ್ಟಿಕೊಂಡು' ಪುಸ್ತಕದಲ್ಲಿ, ತಾವು ಪ್ರವಾಸ ಹೋದಾಗ ತಮಗೆದುರಾದ ಅನೇಕ ಸನ್ನಿವೇಶಗಳನ್ನು ತಮ್ಮದೇ ಆದ ಧಾಟಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆಗಸ್ಟ್ 2025ರಲ್ಲಿ ಸಾವಣ್ಣ ಪುಸ್ತಕ ಪ್ರಕಾಶನದಿಂದ ಪ್ರಕಟವಾಗಿರುವ ಈ ಪುಸ್ತಕದಲ್ಲಿ 31 ವೈವಿಧ್ಯಮಯ ಲೇಖನಗಳಿವೆ.

ಇದನ್ನೂ ಓದಿ: ನೀವು ಕೋಟ್ಯಧಿಪತಿಗಳಾಗಬೇಕಾ? ಈ ದೇಶಕ್ಕೆ ಹೋಗಿಬನ್ನಿ!

ತಡವಾಗಿ ಬರುವುದು ತಮ್ಮ ಜನ್ಮ ಸಿದ್ಧ ಹಕ್ಕೇನೋ ಎಂಬಂತೆ ವರ್ತಿಸುವ ಜತೆಗಾರರ ಚಾಳಿಯಿಂದ, ತಮ್ಮ ವ್ಯಾಟಿಕನ್ ಸಿಟಿ ಪ್ರವಾಸದಲ್ಲಿ ಎದುರಿಸಿದ ತಲ್ಲಣಗಳನ್ನು, ಅನ್ಯರ ಮುಂದೆ ಅನುಭವಿಸಬೇಕಾದ ಮುಜುಗರವನ್ನು ವಿವರಿಸುವ ಬರಹದೊಂದಿಗೆ ಪುಸ್ತಕವು ಆರಂಭವಾಗುತ್ತದೆ.

ದೂರದ ಇಟಲಿಯಲ್ಲಿ ಪ್ರವಾಸದ ಸಂದರ್ಭದಲ್ಲಿ ತೊಂದರೆ ಉಂಟಾದಾಗ, ಅಕ್ಕಪಕ್ಕದ ಜನರು ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದನ್ನು ಲೇಖಕಿಯು ಅಚ್ಚರಿಯಿಂದ ಬರೆಯುತ್ತಾರೆ ಹಾಗೂ ಭಾರತದಲ್ಲಿ ಜನರ ಸಹಾಯಮಾಡುವ ಬುದ್ಧಿಯ ಜೊತೆಗೆ ಹೋಲಿಸಿ, ಎಲ್ಲೇ ಹೋದರೂ ಕೊನೆಗೆ ನಮ್ಮೂರೇ ನಮಗೆ ಮೇಲು ಎಂದು ಷರಾ ಬರೆಯುತ್ತಾರೆ.

New Project (20)

ಡೆಡ್ ಸೀಯಲ್ಲಿ ಮಲಗಿ ತೇಲುತ್ತಾ ಪೇಪರ್ ಓದುವ ಕನಸು ಕಂಡು, ಅದನ್ನು ನನಸಾಗಿಸಲು ಹೋಗಿ ಫಜೀತಿ ಪಟ್ಟದ್ದು, ವೀಲ್ ಚೇರ್ ಪ್ರಯಾಣದಲ್ಲಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಜನರು ವಿಭಿನ್ನ ರೀತಿಯಲ್ಲಿ ವರ್ತಿಸಿದ್ದು ಮುಂತಾದುವನ್ನು ಸರಳವಾಗಿ ವಿವರಿಸುತ್ತಾ ಪುಸ್ತಕವು ಓದುಗನನ್ನು ಹಿಡಿದಿಡುತ್ತದೆ.

ವಾರದ ಲೆಕ್ಕದಲ್ಲಿ ವೆಜ್-ನಾನ್ ವೆಜ್ ಆಗಿ ಬದಲಾಗುವ ಅದೇ ಜನರ ಬಗ್ಗೆ ರಷ್ಯಾದಲ್ಲಿ ಗೈಡ್ ತಲೆಕೆಡಿಸಿಕೊಂಡಿದ್ದು, ಹುಮನಾಬಾದಿನಲ್ಲಿ ಗಂಡಸರು ಮಾತ್ರವೇ ಹೋಗುತ್ತಿದ್ದ ಲೈಬ್ರರಿಗೆ ಹುಡುಗಿಯರು ಹೋಗಿ 'ಕ್ರಾಂತಿ' ಸೃಷ್ಟಿಸಿದ್ದು, ಸಂಡೂರಿನಲ್ಲೊಂದು ವಿಶೇಷ ವ್ಯೂ ಪಾಯಿಂಟ್ ನೋಡಲೆಂದು ಹೊರಟು ರೈಲ್ವೇ ಬ್ರಿಡ್ಜ್ ಮೇಲೆ ಸಿಲುಕಿಕೊಂಡು ಪ್ರಾಣಭಯದಿಂದ ಒದ್ದಾಡಿದ್ದು ಹಾಗೂ ಕಪಿಗಳಿಂದ ಅನುಭವಿಸಿದ ಫಜೀತಿ, ಸಿಯಾಟೆಲ್ ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಗಾಬರಿಯಾದರೂ ಜತೆಗಿದ್ದ ಮಹಿಳೆಯು ಇದೆಲ್ಲ ಮಾಮೂಲು ಎಂಬಂತೆ ಆರಾಮವಾಗಿದ್ದುದು, ಕಾಶ್ಮೀರ ಪ್ರವಾಸದಲ್ಲಿ ಅಮ್ಮನ ಚಿನ್ನದ ತಾಳಿ ಸರ ಕಾಣೆಯಾಗಿದ್ದು, ಕಳಸಕ್ಕೆ ಡ್ರೈವ್ ಮಾಡುತ್ತಾ ಹೊರಟು, ದಾರಿತಪ್ಪಿ, ಸುತ್ತಿ ಕೊನೆಗೆ ಹೇಗೋ ಗಮ್ಯ ತಲುಪಿದ್ದು, ಜೋಗದ ಸಮೀಪದಲ್ಲಿ ನರಭಕ್ಷಕರಂಥ ಇರುವೆಗಳಿಂದ ತೊಂದರೆಗೆ ಒಳಗಾದದ್ದು, ರಾಜಸ್ಥಾನ ಪ್ರವಾಸದಲ್ಲಿ ಮಂಚಕ್ಕಾಗಿ ಪರದಾಡಿದ ಪ್ರಸಂಗ, ಕೊಚ್ಚಿನ್ ಗೆ ಹೋದಾಗ mix vegetable pulao ಎನ್ನುತ್ತಾ ಬಸವನ ಹುಳುಗಳನ್ನೂ ತಿನ್ನಬೇಕಾಗಿ ಬಂದದ್ದು ಹೀಗೆ ಬೇರೆ ಬೇರೆ ಊರಿನಲ್ಲಿ ತಮ್ಮ ಪ್ರವಾಸದಲ್ಲಾದ ಅನುಭವಗಳನ್ನು ಲೇಖಕಿಯು ಸುಂದರವಾಗಿ ವರ್ಣಿಸಿದ್ದಾರೆ.

New Project (21)

ತಾವು ಹೋದ ಸ್ಥಳಗಳ ವರ್ಣನೆಯನ್ನು ಮಾಡುತ್ತಾ, ಅದರ ಜತೆಗೆ ಅಲ್ಲಿನ ಜನರೊಂದಿಗೆ ಒಡನಾಡಿದ ನೆನಪುಗಳನ್ನು ಒಂದೆಡೆ ಹಿಡಿದಿಡುವ ಲೇಖಕಿಯ ಪ್ರಯತ್ನ ಮೆಚ್ಚುವಂಥದ್ದು. ಇವೆಲ್ಲ, ಬೇರೆ ಪ್ರಯಾಣಿಕರಿಗೆ ಮುಂದೊಮ್ಮೆ ಅವರವರು ಪ್ರವಾಸಕ್ಕೆ ಹೋಗುವಾಗ ಸಹಾಯಕ್ಕೆ ಬರಬಹುದು. ಇಂಥದ್ದೇ ಸನ್ನಿವೇಶಗಳು ಎದುರಾದರೆ ಹೇಗೆ ಆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದಕ್ಕೆ ದಾರಿದೀಪವಾಗಿಯೂ ಈ ಪುಸ್ತಕದಲ್ಲಿರುವ ವಿವರಗಳು ನೆರವಾಗಬಹುದು. ತಾವು ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿಗೂ ಸಹಾಯವಾದೀತು.

ಪ್ರವಾಸ ಹೋಗುವಾಗ ಎಷ್ಟೇ ಪ್ಲಾನ್ ಮಾಡಿದರೂ ಕೆಲವೊಮ್ಮೆ ಅನಿರೀಕ್ಷಿತವಾದ ಪ್ರಸಂಗಗಳು ಎದುರಾಗಬಹುದು. ಪ್ರವಾಸವೆಂದರೆ ಬರಿಯ ಸ್ಥಳಗಳನ್ನು ನೋಡುವುದು, ಫೊಟೋ ತೆಗೆಯುವುದು ಅಷ್ಟೇ ಅಲ್ಲವಲ್ಲ. ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ ಅಲ್ಲಿನ ವಿಭಿನ್ನ ಜನರು, ಅವರ ಸಂಸ್ಕೃತಿ, ನಡವಳಿಕೆ ಎಲ್ಲವೂ ಬೇರೆ ಬೇರೆಯೇ ಇರುತ್ತದೆ. ಎಲ್ಲರೂ, ಯಾವಾಗಲೂ, ಎಲ್ಲ ಕಡೆಯೂ ಒಂದೇ ಥರ ಇರುವುದಿಲ್ಲವಲ್ಲ. ಪ್ರವಾಸದ ಸಂದರ್ಭದಲ್ಲಿ ಒದಗಿ ಬರುವ ನೂರಾರು ಅನುಭವಗಳೇ ನಮ್ಮನ್ನು ಮತ್ತಷ್ಟು ಚಿಂತನೆಗೆ ಒಡ್ಡುತ್ತವೆ. ಪ್ರವಾಸವನ್ನು ಇಷ್ಟಪಡುವವರಿಗೆ ಈ ಪುಸ್ತಕವೂ ಇಷ್ಟವಾಗದಿರಲು ಕಾರಣವಿಲ್ಲ.

ಪುಸ್ತಕ: ಸೊಂಟಕ್ ಬೆಲ್ಟು ಕಟ್ಟಿಕೊಂಡು - ಅಲೆಮಾರಿ ಅನುಭವಗಳು

ಲೇಖಕಿ: ಭಾರತಿ ಬಿ.ವಿ

ಪ್ರಕಾಶಕರು: ಸಾವಣ್ಣ ಎಂಟರ್ ಪ್ರೈಸಸ್

ಪುಟಗಳು: 148

ಬೆಲೆ: ₹200

ಮೊದಲನೇ ಮುದ್ರಣ: ಆಗಸ್ಟ್ 2025

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?