ಮರೆತುಹೋದ ವೈಭವಕ್ಕೆ ಸಾಕ್ಷಿಯಾಗಿರುವ ಬಸದಿ
ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಈ ಬಸದಿ, ತನ್ನ ನಾಲ್ಕು ದಿಕ್ಕುಗಳಿಗೆ ತೆರೆಯುವ ಪ್ರವೇಶದ್ವಾರಗಳಿಂದ ವಿಶಿಷ್ಟವಾಗಿದೆ. ಇದು ಸಮಾನತೆಯನ್ನು ಸಾರುವ ಜೈನ ತತ್ತ್ವದ ಸಂಕೇತವಾಗಿದೆ. ನೀವು ಯಾವ ದಿಕ್ಕಿನಿಂದ ಪ್ರವೇಶಿಸಿದರೂ, ದೇವರ ದರ್ಶನ ದೊರೆಯುವುದು ಈ ಬಸಿದಿಯ ವೈಶಿಷ್ಟ್ಯ.
- ಕೆ.ಎಂ. ಪವಿತ್ರಾ
ಉತ್ತರ ಕನ್ನಡ ಜಿಲ್ಲೆಯು ನೈಸರ್ಗಿಕ ಸಂಪನ್ಮೂಲ ಮತ್ತು ನಿಸರ್ಗ ಸೌಂದರ್ಯತೆಗೆ ಮಾತ್ರ ಹೆಸರುವಾಸಿಯಾಗದೇ ಅಲ್ಲಿನ ವೈವಿಧ್ಯಮಯ ಸಾಂಸ್ಕೃತಿಕ ಸೊಗಡು, ರಾಜಮನೆತನದ ಆಳ್ವಿಕೆ, ಪುರಾತನ ದೇವಾಲಯ, ಬಸದಿ, ಐತಿಹಾಸಿಕ ಸ್ಮಾರಕಕ್ಕೂ ಪ್ರಸಿದ್ಧತೆಯನ್ನು ಪಡೆದಿದೆ. ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ಗೇರುಸೊಪ್ಪ ಜೈನ ಧರ್ಮ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿ ಬೆಳೆಯಿತು. ಆ ವೈಭವದ ಜ್ವಲಂತ ಸಾಕ್ಷಿ ಎಂದರೆ ಅಲ್ಲಿರುವ ಚತುರ್ಮುಖ ಬಸದಿ.
ಇದನ್ನೂ ಓದಿ: ದ್ವಾರಕಾನಾಥನ ದರ್ಶನ ಭಾಗ್ಯ
ಚೆನ್ನಭೈರಾದೇವಿಯ ಚರಿತ್ರೆ
ಗೇರುಸೊಪ್ಪ ಹಾಗೂ ಚತುರ್ಮುಖ ಬಸದಿಯ ಬಗ್ಗೆ ಹೇಳಬೇಕೆಂದರೆ ಅದರ ಜತೆಗೆ ರಾಣಿ ಚೆನ್ನಭೈರಾದೇವಿ ಬಗ್ಗೆಯೂ ಹೇಳಬೇಕಾಗುತ್ತದೆ. ಒಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಪ್ರದೇಶವು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಮೆಣಸು ವ್ಯಾಪಾರದಿಂದಲೇ ಪ್ರಸಿದ್ಧಿ ಪಡೆದ ರಾಣಿ ಚೆನ್ನಾಭೈರದೇವಿ ಈ ಪ್ರದೇಶವನ್ನು 1552-160೦ರವರೆಗೆ ಸುಮಾರು ಐದು ದಶಕಗಳ ಕಾಲ ಅತ್ಯಂತ ದಕ್ಷವಾಗಿ ಆಡಳಿತ ನಡೆಸಿದರು. ಅವರ ಆಳ್ವಿಕೆ ಕಾಲದಲ್ಲಿ ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಗಿ ರಾಜ್ಯವನ್ನು ನಿರ್ವಹಿಸಿದರು. ರಾಣಿ ಚೆನ್ನಭೈರಾದೇವಿಯವರು ವ್ಯಾಪಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಅದರಲ್ಲಿ ಪ್ರಮುಖವಾಗಿ ಮೆಣಸಿನ ವ್ಯಾಪಾರದಲ್ಲಿ ಅವರ ಪ್ರಾಬಲ್ಯದಿಂದ ಅರೇಬಿಯ ಮತ್ತು ಯೂರೋಪಿನ ವ್ಯಾಪಾರಗಳು ಕೂಡ ಮಾರುಹೋದರು. ಹಾಗಾಗಿ ಅವರನ್ನು 'ಭಾರತ ಕಾಳುಮೆಣಸಿನ ರಾಣಿ ' ಎಂದು ಪ್ರಖ್ಯಾತರಾದರು. ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಕೇವಲ ವ್ಯಾಪಾರಕ್ಕೆ ಅಷ್ಟೇ ಮಹತ್ವ ನೀಡದೇ ದೇವಾಲಯ, ಪರಂಪರೆಗೂ ಆದ್ಯತೆಯನ್ನು ನೀಡಿದರು. ವಿಶೇಷವಾಗಿ ಜೈನ ತತ್ತ್ವಗಳನ್ನು ಬೆಳೆಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ದೇವಾಲಯಗಳು, ಬಸದಿಗಳ ನಿರ್ಮಾಣದಲ್ಲಿ ವಿಶೇಷವಾಗಿ ವಾಸ್ತುಶಿಲ್ಪದ ವೈಶಿಷ್ಟ್ಯಕ್ಕೆ, ಚಾಲುಕ್ಯ ವಾಸ್ತುಶಿಲ್ಪದ ಶೈಲಿಗೆ ಒತ್ತನ್ನು ನೀಡಿದ್ದಾರೆ.

ನಾಲ್ಕು ದಿಕ್ಕುಗಳಲ್ಲಿರುವ ದ್ವಾರ
ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಈ ಬಸದಿ, ತನ್ನ ನಾಲ್ಕು ದಿಕ್ಕುಗಳಿಗೆ ತೆರೆಯುವ ಪ್ರವೇಶದ್ವಾರಗಳಿಂದ ವಿಶಿಷ್ಟವಾಗಿದೆ. ಇದು ಸಮಾನತೆಯನ್ನು ಸಾರುವ ಜೈನ ತತ್ತ್ವದ ಸಂಕೇತವಾಗಿದೆ. ನೀವು ಯಾವ ದಿಕ್ಕಿನಿಂದ ಪ್ರವೇಶಿಸಿದರೂ, ದೇವರ ದರ್ಶನ ದೊರೆಯುವುದು ಈ ಬಸಿದಿಯ ವೈಶಿಷ್ಟ್ಯ.
ಮಧ್ಯದಲ್ಲಿ ನಾಲ್ಕು ದಿಕ್ಕುಗಳಿಗೆ ಮುಖಮಾಡಿ ನಿಂತಿರುವ ಋಷಭನಾಥ, ಅಜಿತಾನಾಥ, ಸಂಭವನಾಥ ಮತ್ತು ಅಭಿನಂದನನಾಥರ ವಿಗ್ರಹಗಳು ಶಾಂತಿ ಮತ್ತು ತಪಸ್ಸಿನ ಸಂದೇಶವನ್ನು ಸಾರುತ್ತವೆ. ಸಭಾಂಗಣದ ಕಂಬಗಳ ಮೇಲಿರುವ ಕಮಲದ ಕೆತ್ತನೆಗಳು, ಆ ಕಾಲದ ಕಲಾತ್ಮಕತೆಯ ಜ್ಞಾನವನ್ನು ತೋರಿಸುತ್ತವೆ. ಪ್ರವೇಶದ್ವಾರಗಳ ಬಳಿ ನಿಂತಿರುವ ದ್ವಾರಪಾಲಕರ ವಿಗ್ರಹಗಳು, ದೇವಾಲಯದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಸ್ಥಳವನ್ನು 'ರತ್ನತ್ರಯ ಧಾಮ' ಎಂದೂ ಕರೆಯುತ್ತಾರೆ. ಹಾಗೆಯೇ ಇದು ದಟ್ಟವಾದ ಕಾಡು ಹಾಗೂ ಶರಾವತಿ ಹಿನ್ನೀರಿನಿಂದ ಆವೃತವಾಗಿದೆ. ರಾಣಿ ಚೆನ್ನಭೈರಾದೇವಿ ವಿಜಯನಗರದ ಚಕ್ರವರ್ತಿಗಳಿಗೆ ಆತ್ಮೀಯಳಾಗಿದ್ದು, ಈ ಗೇರುಸೊಪ್ಪೆಯಲ್ಲಿ ಈ ಚತುರ್ಮುಖ ಬಸದಿ ಮಾತ್ರವಲ್ಲದೆ, ಇನ್ನೂರ ಎಂಟು ಬಸದಿಗಳನ್ನು ನಿರ್ಮಿಸಿದ್ದಳೆಂದು ಹೇಳಲಾಗುತ್ತದೆ. ಅವುಗಳ ಪೈಕಿ ಕೆಲವು ಬಸದಿಗಳ ಅವಶೇಷಗಳನ್ನು ಇಲ್ಲಿನ ಸುಮಾರು ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಕಾಣಬಹುದು.

ಧಾರ್ಮಿಕ ಸಹಿಷ್ಣುತೆ
ಈ ಬಸದಿಯ ವಿಶೇಷತೆಯಲ್ಲೊಂದು ಧಾರ್ಮಿಕ ಸಹಿಷ್ಣುತೆ. ಜೈನ ದೇವಾಲಯವಾಗಿದ್ದರೂ, ಒಳಭಾಗದಲ್ಲಿ ಜ್ವಾಲಾಮಾಲಿನಿಯ ಗುಡಿಯೊಂದಿಗೆ ವೀರಭದ್ರ ಮತ್ತು ಗಣೇಶನ ಮೂರ್ತಿಗಳೂ ಕಾಣಿಸುತ್ತವೆ. ಇದು ರಾಣಿ ಚೆನ್ನಭೈರಾದೇವಿಯ ಆಡಳಿತದಲ್ಲಿ ಎಲ್ಲಾ ಧರ್ಮಗಳಿಗೆ ನೀಡಲಾದ ಗೌರವವನ್ನು ಪ್ರತಿಬಿಂಬಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೇರುಸೊಪ್ಪ ಜೈನರ ಪ್ರಮುಖ ರಾಜಧಾನಿಯಾಗಿದ್ದು, ಚತುರ್ಮುಖ ಬಸದಿ ಆ ಕಾಲದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವವನ್ನು ಇಂದಿಗೂ ಹೊತ್ತುಕೊಂಡಿದೆ. ಬೇಸಗೆಯಲ್ಲಿ ಹೋಗುವುದಕ್ಕಿಂತಲೂ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಹೀಗಾಗಿ ಈ ಸಮಯ ಹೆಚ್ಚು ಸೂಕ್ತ.
ದಾರಿ ಹೇಗೆ?
ಹೊನ್ನಾವರ-ಸಾಗರ ರಸ್ತೆಯಲ್ಲಿ ಹೊನ್ನಾವರದಿಂದ 39 ಕಿಲೋಮೀಟರ್ ದೂರ ಹೋಗುವಾಗ ಸಿಗುವ ಶರಾವತಿ ನದಿಯ ಗೇರುಸೊಪ್ಪೆ ಅಣೆಕಟ್ಟಿನ ಕೆಳಗಡೆಯಿಂದ ಹೋಗುವ ಕಚ್ಚಾರಸ್ತೆರರುಲ್ಲಿ 6 ಕಿಲೋಮೀಟರ್ ಮುಂದುವರಿದಾಗ ಈ ಪ್ರದೇಶ ಸಿಗುತ್ತದೆ. ಬೆಂಗಳೂರಿನಿಂದ ಬಸ್ ಅಲ್ಲಿ ಹೋದರೆ ಗೇರುಸೊಪ್ಪೆಯಲ್ಲಿ ಇಳಿದುಕೊಳ್ಳಬಹುದು.