ಹೆಣ್ಮಕ್ಳೇ ಸ್ಟ್ರಾಂಗು ಗುರು...ಆದರೂ ಸ್ವಲ್ಪ ಹುಷಾರು...!
ಸಂಪ್ರದಾಯವಾದಿಗಳ ಭಾವನೆಗೆ ಧಕ್ಕೆ ಆಗದಂತೆ ಅಥವಾ ಅ ಪ್ರದೇಶದಲ್ಲಿ ಮುಜುಗರ ಅನುಭವಿಸದಂತೆ ಸಾಧಾರಣ ಉಡುಗೆ ಇರಲಿ (ಇದು ಯಾವುದೇ ಬಲವಂತದ ಡ್ರೆಸ್‌ಕೋಡ್ ಅಲ್ಲ). ದುಬಾರಿ ಒಡವೆ, ವಸ್ತ್ರಗಳು ಬೇಡ. ಸ್ಥಳೀಯ ಪದ್ಧತಿಗಳನ್ನು ಗೌರವಿಸಿ. ಸ್ಥಳೀಯರಿಗೆ ಗೌರವವನ್ನು ತೋರಿಸಲು ಅವರದೇ ಭಾಷೆಯ ಶುಭಾಶಯಗಳು ಮತ್ತು ಪದ್ಧತಿಗಳನ್ನು ತಿಳಿದಿರಿ.
- ಹಿಮಪಯಣಿಗ
ಎಷ್ಟೋ ವರುಷಗಳಿಂದ ನನ್ನ ಹಿಮಾಲಯ ಚಾರಣಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಕ್ಕ ಒಂದು ದಿನ ಧುತ್ತೆಂದು ನಾನೂ ನಿನ್ನೊಡನೆ ಬರುತ್ತೇನೆ ಎಂದು ಹೊರಟಾಗಲೇ ನನಗೆ ಮಹಿಳೆಯರು ಚಾರಣಕ್ಕೆ ಬರುವಾಗ ಎದುರಿಸಬೇಕಾದ ಸಮಸ್ಯೆಗಳು ಕಾಣತೊಡಗಿದ್ದು.
ಇತ್ತೀಚೆಗೆ ವಿದ್ಯಾರ್ಥಿನಿಯರು, ಗೃಹಿಣಿಯರು, ವೃತ್ತಿಯಲ್ಲಿರುವ ಹೆಂಗಸರು ಮತ್ತು ತಾಯಂದಿರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರು ಹಿಮಾಲಯವನ್ನು ಅನ್ವೇಷಿಸಲು ತಮ್ಮ ಬೂಟುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಮೂಲತಃ ಹೆಣ್ಣುಮಕ್ಕಳು ಇಂಥ ಜಾಗಗಳಲ್ಲಿ ಸಂತೋಷ ಪಡುವ ಮನಸ್ಥಿತಿಯವರು. ಸಾಮಾಜಿಕ ಜಾಲತಾಣಗಳು, ಮಾಧ್ಯಮ ಮತ್ತು ಪ್ರಯಾಣ ಬ್ಲಾಗ್ ಗಳು ಹೆಚ್ಚಿನ ಮಹಿಳೆಯರು ಚಾರಣವನ್ನು ಕೈಗೊಳ್ಳಲು ಸ್ಫೂರ್ತಿ ನೀಡಿವೆ.

ಚಾರಣವು ಪುರುಷ ಪ್ರಾಬಲ್ಯ ಹೊಂದಿದ್ದರೂ, ಹೆಚ್ಚಿನ ಸಂಖ್ಯೆಯ ಮಹಿಳಾ ಚಾರಣಿಗರು ಈಗ ಈ ಕಠಿಣ ದಾರಿಗಳ ಮೂಲಕ ತಮ್ಮದೇ ಹಾದಿಗಳನ್ನು ತೆರೆದುಕೊಳ್ಳುತ್ತಿದ್ದಾರೆ. ಏಕಾಂಗಿಯಾಗಿ ಅಥವಾ ಗುಂಪುಗಳೊಂದಿಗೆ, ಮಹಿಳೆಯರು ಹಿಮಾಲಯವು ಬೇರೆಯವರಂತೆಯೇ ತಮಗೂ ಸೇರಿದೆ ಎಂದು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಚಾರಣಗಳನ್ನು ಕೈಗೊಳ್ಳುವ ಮಹಿಳೆಯರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಆದರೆ, ಮಹಿಳೆಯರು, ಪ್ರಯಾಣ / ಚಾರಣಗಳಲ್ಲಿ ಸಾಮಾನ್ಯವಾಗಿ ವಿಶಿಷ್ಟ ತೊಂದರೆಗಳನ್ನು ಅನುಭವಿಸುತ್ತಾರೆ. ಸುರಕ್ಷತಾ ಕಾಳಜಿಗಳು, ಸಾಂಸ್ಕೃತಿಕ, ಆರೋಗ್ಯ, ನೈರ್ಮಲ್ಯದ ಅಡೆತಡೆಗಳನ್ನು ಮಹಿಳಾ ಚಾರಣಿಗರು ಎದುರಿಸಬೇಕಾಗುತ್ತದೆ. ಮಹಿಳೆಯರು ಎದುರಿಸುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಹೊರಡುವ ಮುನ್ನ ನುರಿತ, ಅನುಭವಿ ಮಹಿಳೆಯರಿಂದಲೇ ತಿಳಿದುಕೊಂಡರೆ ಒಳ್ಳೆಯದು.
ನೀವು ಮೊದಲಬಾರಿಗೆ ಹಿಮಾಲಯ ಚಾರಣಕ್ಕೆ ಹೊರಟಿದ್ದೀರಿ ಎಂದರೆ, ಆದಷ್ಟು ಕಷ್ಟವಿಲ್ಲದ, ಜನಪ್ರಿಯ ಮತ್ತು ಉತ್ತಮ ಮಾರ್ಗಗಳನ್ನು ಆರಿಸಿಕೊಳ್ಳಿ. ಇಂಥ ಟ್ರೆಕ್ಕಿಂಗ್ ರೂಟ್‌ಗಳು ಉತ್ತಮ ಮೂಲಸೌಕರ್ಯ ಮತ್ತು ಹೆಚ್ಚಿನ ಸಹ ಚಾರಣಿಗರನ್ನು ಹೊಂದಿರುತ್ತವೆ. ಮಹಿಳಾ ಚಾರಣ ಗುಂಪಿಗೆ ಸೇರುವುದು ಅಥವಾ ಮಹಿಳಾ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳುವುದರಿಂದ ಸುರಕ್ಷತೆ ಹೆಚ್ಚುತ್ತದೆ. ಹೊರಡುವ ಮುನ್ನ ಎಲ್ಲಾ ಅಗತ್ಯ ಪರವಾನಗಿಗಳನ್ನು (ಉದಾ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ನಾಲ್ಕು ಫೋಟೋಗಳು, ರಾಷ್ಟ್ರೀಯ ಉದ್ಯಾನವನ ಪರವಾನಗಿ) ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಪ್ರಯಾಣದ ವಿವರವನ್ನು ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಂಡಿರಿ. ಆಯೋಜಕ ಸಂಸ್ಥೆಯ ಬಗ್ಗೆ ಸಾಕಷ್ಟು ವಿಚಾರಿಸಿ ಸುರಕ್ಷಿತ ಅನಿಸಿದ ನಂತರವೇ ಚಾರಣದ ದಿನಾಂಕಗಳನ್ನು ಕಾಯ್ದಿರಿಸಿ. ಸ್ಥಳೀಯ ಆಯೋಜಕ ಸಂಸ್ಥೆಯ ಹಾಗೂ ಸ್ಥಳೀಯ ತುರ್ತು ಸಂಖ್ಯೆಗಳ ದೂರವಾಣಿ ಸಂಖ್ಯೆಯನ್ನು ಕುಟುಂಬದವರಿಗೆ ಕೊಟ್ಟಿರಿ. ದೂರದ ಅಥವಾ ಸವಾಲಿನ ಚಾರಣಗಳಿಗಾಗಿ ಸ್ಥಳೀಯ ಮಾರ್ಗದರ್ಶಿ ಮತ್ತು ಪೋರ್ಟರ್ ನೇಮಿಸಿಕೊಳ್ಳುವುದನ್ನು ಪರಿಗಣಿಸಿ. ಅವರು ಅಲ್ಲಿನ ಸಾಂಸ್ಕೃತಿಕ ವಿಚಾರಗಳನ್ನೂ ತಿಳಿಸುತ್ತಾರೆ. ಯಾವಾಗಲೂ ಕತ್ತಲೆಯಾಗುವ ಮೊದಲೇ ನಿಮ್ಮ ಗಮ್ಯಸ್ಥಾನವನ್ನು ತಲುಪುವ ಯೋಜನೆ ಇರಲಿ.

ಹಿಮಾಲಯದ ಹವಾಮಾನವು ಅನಿರೀಕ್ಷಿತವಾಗಿರುತ್ತದೆ. ಥರ್ಮಲ್ ವೇರ್, ಜಲನಿರೋಧಕ ಜಾಕೆಟ್‌ಗಳು ಮತ್ತು ಆರಾಮದಾಯಕವಾದ ಟ್ರೆಕ್ಕಿಂಗ್ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಆಯಾಸವನ್ನು ತಪ್ಪಿಸಲು ನಿಮ್ಮ ಬೆನ್ನುಹೊರೆಯನ್ನು ಸಾಧ್ಯವಾದಷ್ಟು ಹಗುರವಾಗಿ ಇರಿಸಿ. ನಿಮ್ಮದೇ ಪ್ರಥಮ ಚಿಕಿತ್ಸಾ ಕಿಟ್, ಔಷಧಗಳು, ನೀರು ಶುದ್ಧೀಕರಣ ಮಾತ್ರೆಗಳು, ಸನ್ ಸ್ಕ್ರೀನ್, ಸನ್ ಗ್ಲಾಸ್ ಮತ್ತು ಹೆಡ್‌ಲ್ಯಾಂಪ್ ಗಳನ್ನು ತಪ್ಪದೆ ಒಯ್ಯಿರಿ.
ಎಷ್ಟೋ ಸ್ಥಳೀಯ ಹೆಂಗಸರಾಗಲೀ ಗಂಡಸರಾಗಲೀ, ಸ್ವತಂತ್ರ ಮಹಿಳಾ ಚಾರಣಿಗರನ್ನು ನೋಡಲು ಒಗ್ಗಿಕೊಂಡಿರುವುದಿಲ್ಲ. ಹೀಗಾಗಿ, ಕಡಿಮೆ ಪ್ರವಾಸಿಗರಿರುವ ಪ್ರದೇಶಗಳಲ್ಲಿ ಚಾರಣ ಮಾಡುವ ಮಹಿಳೆಯರು ನೋಟ, ಕಾಮೆಂಟ್ ಗಳು ಅಥವಾ ಕಿರುಕುಳವನ್ನು ಎದುರಿಸಬಹುದು. ಸಂಪ್ರದಾಯವಾದಿ ಹಿಮಾಲಯದ ಸಮುದಾಯಗಳಲ್ಲಿ, ಒಂಟಿಯಾಗಿ ಅಥವಾ ಪುರುಷ ಸಹಚರರಿಲ್ಲದೆ ಪ್ರಯಾಣಿಸುವ ಮಹಿಳೆಯರನ್ನು ಅನುಮಾನ ಅಥವಾ ಕುತೂಹಲದಿಂದ ನೋಡಬಹುದು. ಕೆಲವು ಪ್ರದೇಶಗಳಲ್ಲಿ ಏಕಾಂಗಿ ಮಹಿಳಾ ಚಾರಣಿಗರು ಒಂಟಿತನ ಅಥವಾ ಆತಂಕವನ್ನು ಅನುಭವಿಸಬಹುದು. ಹೀಗಾಗಿ, ಸಂಪ್ರದಾಯವಾದಿಗಳ ಭಾವನೆಗೆ ಧಕ್ಕೆ ಆಗದಂತೆ ಅಥವಾ ಅ ಪ್ರದೇಶದಲ್ಲಿ ಮುಜುಗರ ಅನುಭವಿಸದಂತೆ ಸಾಧಾರಣ ಉಡುಗೆ ಇರಲಿ (ಇದು ಯಾವುದೇ ಬಲವಂತದ ಡ್ರೆಸ್‌ಕೋಡ್ ಅಲ್ಲ). ದುಬಾರಿ ಒಡವೆ, ವಸ್ತ್ರಗಳು ಬೇಡ. ಸ್ಥಳೀಯ ಪದ್ಧತಿಗಳನ್ನು ಗೌರವಿಸಿ. ಸ್ಥಳೀಯರಿಗೆ ಗೌರವವನ್ನು ತೋರಿಸಲು ಅವರದೇ ಭಾಷೆಯ ಶುಭಾಶಯಗಳು ಮತ್ತು ಪದ್ಧತಿಗಳನ್ನು ತಿಳಿದಿರಿ.
ಏಕಾಂತ ಪ್ರದೇಶಗಳನ್ನು ತಪ್ಪಿಸಿ, ಜನನಿಬಿಡ ಹಾದಿಗಳಲ್ಲಿಯೇ ಇರಿ. ದೂರದ ಪ್ರದೇಶಗಳಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ. ನಿಮ್ಮ ಫೋನ್‌ನಲ್ಲಿ ಜಿಪಿಎಸ್ ಸಾಧನ ಅಥವಾ ಆಫ್‌ಲೈನ್ ನಕ್ಷೆಗಳನ್ನು ಒಯ್ಯಿರಿ. ಪರ್ವತ ಪ್ರದೇಶಗಳಲ್ಲಿ ಎಟಿಎಂಗಳು ವಿರಳವಾಗಿರುವುದರಿಂದ ಸಾಕಷ್ಟು ನಗದು ಒಯ್ಯಿರಿ.
ಮಹಿಳಾ ಚಾರಣಿಗರಿಗೆ ಆರೋಗ್ಯ ಮತ್ತು ನೈರ್ಮಲ್ಯ ಅತಿ ಮುಖ್ಯ. ಮಲಗಲು ಸಾಮೂಹಿಕ ಟೆಂಟ್‌ಗಳಿರುತ್ತದೆ. ಏಕಾಂತ ಅಥವಾ ಖಾಸಗಿತನಕ್ಕೆ ಆದ್ಯತೆ ನೀಡುವ ಮಹಿಳೆಯರಾಗಿದ್ದಲ್ಲಿ ಹೊಂದಿಕೊಳ್ಳುವುದನ್ನು ಕಲಿಯಲೇಬೇಕು. ನಗರಗಳಲ್ಲಿರುವಂತೆ ಬಹಿರ್ದೆಸೆಗೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಟಾಯ್ಲೆಟ್ ಟೆಂಟ್‌ಗಳು ಇರುತ್ತವೆ. ಆದರೆ, ನಮ್ಮ ಮುಂಚಿತವಾಗಿಯೇ ಹೋಗಿರುವ ತಂಡಗಳು ಅದನ್ನು ಸರಿಯಾಗಿ ಬಳಸದೆ ಇದ್ದರೆ ನೈರ್ಮಲ್ಯದ ತೊಂದರೆ ಇರುತ್ತದೆ. ರಾತ್ರಿಯ ವೇಳೆ ಹೋಗಬೇಕಾದರೆ ನಿಮ್ಮ ಜೊತೆಗಿರುವವರಿಗೆ ತಿಳಿಸಿ/ಅವರನ್ನು ಕರೆದುಕೊಂಡು ಹೋಗುವುದು ಉತ್ತಮ. ಚಾರಣದ ಸಮಯದಲ್ಲಿ ಸ್ನಾನ ಇಲ್ಲದೆ ಇರಬೇಕಾದ ಪರಿಸ್ಥಿತಿ ಇರುತ್ತದೆ. ಶೌಚಕ್ಕೆ ಕೆಲವೆಡೆ ಗಿಡ ಮರಗಳ ಮರೆಯೂ ಇರುವುದಿಲ್ಲ. ಇವೆಲ್ಲಕ್ಕೂ ಹೊಂದಿಕೊಳ್ಳುವುದೇ ಚಾರಣ. ಹೀಗಾಗಿ ನಿಮ್ಮ ಆರಾಮ ವಲಯ (ಕಂಫರ್ಟ್ ಜೋನ್)ದಿಂದ ಹೊರಬಂದರೆ ಚಾರಣ ಸುಂದರ.
ಮುಟ್ಟಿನ ಆರೋಗ್ಯದ ವಿಚಾರದಲ್ಲಿ ಹೇಳಬೇಕೆಂದರೆ, ಎತ್ತರದ ಪ್ರದೇಶಗಳಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛಮಾಡುವ ಜಾಗಗಳು ಸೀಮಿತವಾಗಿರುತ್ತದೆ. ಕಳಪೆ ನೈರ್ಮಲ್ಯವು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ, ಇದು ಚಾರಣದಲ್ಲಿ ತೊಂದರೆ ಉಂಟುಮಾಡುತ್ತದೆ. ನೈರ್ಮಲ್ಯ ಸೌಲಭ್ಯಗಳು (ಸ್ವಚ್ಛ ಶೌಚಾಲಯಗಳು ಮತ್ತು ಹರಿಯುವ ನೀರಿನಂಥವು) ಸಾಮಾನ್ಯವಾಗಿ ಅಸಮರ್ಪಕವಾಗಿದ್ದು, ಮುಟ್ಟಿನ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತದೆ. ಹ್ಯಾಂಡ್ ಸ್ಯಾನಿಟೈಸರ್, ಒರೆಸುವ ಬಟ್ಟೆಗಳು ಮತ್ತು ಮುಟ್ಟಿನ ನೈರ್ಮಲ್ಯ ವಸ್ತುಗಳನ್ನು ಒಯ್ಯಿರಿ. ಬಳಸಿದ ಸ್ಯಾನಿಟರಿ ನ್ಯಾಪ್ ಕಿನ್ ಗಳ ವಿಲೇವಾರಿ ಸಮಸ್ಯೆ ಇರುವ ಕಾರಣ ಆದಷ್ಟು "ಮುಟ್ಟಿನ ಕಪ್" ಅಥವಾ "ಋತುಚಕ್ರದ ಕಪ್" ಬಳಕೆ ಉತ್ತಮ. ಆದಷ್ಟು ಅಂಥ ಸಂದರ್ಭದ ಅನುಸಾರವಾಗಿ ನಿಮ್ಮ “ಡೇಟ್”ಗಳನ್ನು ಅನುಸರಿಸಿ ಚಾರಣದ ದಿನಾಂಕಗಳನ್ನು ನಿಗದಿಪಡಿಸಿಕೊಂಡರೆ ನಿಮಗೇ ಉತ್ತಮ. ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ.

ಅರುಣಿಮಾ ಸಿನ್ಹಾ, ಮಾಲವತ್ ಪೂರ್ಣರಂತಹ ಅನೇಕ ಮಹಿಳಾ ಚಾರಣಿಗರ ಸ್ಫೂರ್ತಿಯ ಕಥೆಗಳನ್ನು ತಿಳಿದುಕೊಂಡರೆ ಧೈರ್ಯ ಇಮ್ಮಡಿಯಾಗುತ್ತದೆ.
ಹಿಮಾಲಯವು ಕೇವಲ ಪುರುಷ ಸಾಹಸಿಗರ ಅಖಾಡವಲ್ಲ. ಈ ವಿಸ್ಮಯಕಾರಿ ಪ್ರದೇಶದಲ್ಲಿ ಚಾರಣದ ಸವಾಲುಗಳನ್ನು ಸ್ವೀಕರಿಸುವ ಮೂಲಕ ಮಹಿಳೆಯರು ಅಕ್ಷರಶಃ ಹೊಸ ಎತ್ತರವನ್ನು ಏರುತ್ತಿದ್ದಾರೆ. ಸಾಹಸದ ಮನೋಭಾವದೊಂದಿಗೆ, ಮಹಿಳಾ ಚಾರಣಿಗರು ಪರ್ವತಗಳು ನಮಗೂ ಸೇರಿದ್ದು ಎಂದು ಸಾಬೀತುಪಡಿಸುತ್ತಿದ್ದಾರೆ.
ಹಿಮಾಲಯದ ಕನಸು ಕಾಣುವ ಪ್ರತಿಯೊಬ್ಬ ಮಹಿಳೆಗೆ ಚಾರಣದ ಹಾದಿಗಳು ಕಾಯುತ್ತಿವೆ. ಶೂ ಕಟ್ಟಿ, ಹೊರಗೆ ಹೆಜ್ಜೆ ಹಾಕಿ ಮತ್ತು ಚಾರಣದ ಸಂತೋಷವನ್ನು ಅನುಭವಿಸಿ. ಮಹಿಳೆಯಾಗಿ ಹಿಮಾಲಯದಲ್ಲಿ ಒಂಟಿಯಾಗಿ ಅಥವಾ ಗುಂಪಿನಲ್ಲಿ ಚಾರಣ ಮಾಡುವುದು ಅದ್ಭುತವಾದ ಅನುಭವ. ಅದಕ್ಕೆ ಎಚ್ಚರಿಕೆಯ ಯೋಜನೆ ಮತ್ತು ಜಾಗೃತಿ ಬೇಕಾಗುತ್ತದೆ. ಸವಾಲುಗಳನ್ನು ನಿಭಾಯಿಸುವ ನಿಮ್ಮ ನಿಮ್ಮ ಆತ್ಮವಿಶ್ವಾಸ, ಸಾಮರ್ಥ್ಯಗಳನ್ನು ನಂಬಿರಿ—ಅನೇಕ ಮಹಿಳೆಯರು ಈಗಾಗಲೇ ನಿಮ್ಮ ಮುಂದೆ ಅದನ್ನು ಮಾಡಿದ್ದಾರೆ. ಸುರಕ್ಷಿತ ಮತ್ತು ಆನಂದದಾಯಕ ಚಾರಣ ನಿಮ್ಮದಾಗಲಿ.