Saturday, January 17, 2026
Saturday, January 17, 2026

ಕನ್ನಡದವರಿಂದ ಕನ್ನಡದವರಿಗಾಗಿಯೇ ಇರುವ ಪ್ರಯಾಣ ಸಂಸ್ಥೆ ನಮ್ಮದು: ಕೆ. ನಾಗರಾಜ ಅಡಿಗ

ನಮ್ಮ ಕ್ಷೇತ್ರದಲ್ಲಿ ಪೈಪೋಟಿಯಿರುವುದು ದರದ ವಿಚಾರದಲ್ಲಷ್ಟೇ. ಆದರೆ ನನಗೆ ಅದರಲ್ಲಿ ನಂಬಿಕೆಯಿಲ್ಲ. ಗುಣಮಟ್ಟವಷ್ಟೇ ನನಗೆ ಪ್ರಮುಖವಾಗುತ್ತದೆ. ಯಾವುದೇ ವಸ್ತು ಕಡಿಮೆಗೆ ವ್ಯಾಪಾರ ಮಾಡಿದರೆ ಒಂದು ದಿನವಷ್ಟೇ ಯಶಸ್ಸು ಕಾಣಬಹುದು. ಅದು ಲಾಂಗ್‌ ಟರ್ಮ್‌ ಯಶಸ್ಸಲ್ಲ.

ಚಿಕ್ಕದೊಂದು ಪ್ರವಾಸ ಹೋಗಲೂ ಕಾಸಿಲ್ಲದ ಸ್ಥಿತಿಯಿಂದ ಬೃಹತ್ತಾದ ಪ್ರಯಾಣ ಸಂಸ್ಥೆಯನ್ನೇ ಹುಟ್ಟುಹಾಕುವ ಹಂತಕ್ಕೆ ಬೆಳೆದ ಆ ಛಲಬಿಡದ ತ್ರಿವಿಕ್ರಮನ ಹೆಸರು ನಾಗರಾಜ ಅಡಿಗ. ಆ ಸುಪ್ರಸಿದ್ಧ ಪ್ರಯಾಣ ಸಂಸ್ಥೆಯ ಹೆಸರು ಅಡಿಗಾಸ್ ಯಾತ್ರಾ! ತಾವು ಅನುಭವಿಸಿದ ಮುಗ್ಗಟ್ಟು ಇತರ ಪ್ರವಾಸಾಸಕ್ತರು ಅನುಭವಿಸಬಾರದೆಂದು, ಪ್ರವಾಸದ ಆಸೆಗೆ ದುಡ್ಡೊಂದು ಅಡೆತಡೆಯಾಗಬಾರದೆಂದು ಈಜಿ ಪೇ, ಇಎಮ್‌ಐ ಹಾಗೂ ಟಾಟಾ ಎಐಜಿ ಸವಲತ್ತುಗಳನ್ನು ಪ್ರವಾಸ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಮೂಲದ ಹೊಸ ಪ್ರಯತ್ನಗಳಿಗೆ ನಾಂದಿ ಹಾಡಿದವರು ನಾಗರಾಜ ಅಡಿಗರು. ಇಂಥದ್ದೊಂದು ಮಾದರಿ ಪ್ರಯಾಣ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಕೆ. ನಾಗರಾಜ್ ಅಡಿಗ ಅವರ ಜತೆಗೊಂದು ಸಂದರ್ಶನ.

ಕಳೆದ 32 ವರ್ಷಗಳಿಂದಲೂ ಟ್ರಾವೆಲ್‌ ಇಂಡಸ್ಟ್ರಿಯಲ್ಲಿದ್ದೀರಿ. ಟ್ರಾವೆಲ್‌ ಇಂಡಸ್ಟ್ರಿಗೆ ಬರಬೇಕು ಅನಿಸಿದ್ದೇಕೆ?

ಟ್ರಾವೆಲ್‌ ಇಂಡಸ್ಟ್ರಿಗೆ ಬರಬೇಕೆಂಬುದು ನನ್ನ ಬಹಳ ವರ್ಷಗಳ ಕನಸು. ಅದನ್ನು ನನಸು ಮಾಡುವುದಕ್ಕಾಗಿ ನಾನು ಶ್ರಮ ವಹಿಸಿದ್ದೇನೆ. ಹೋಗಬೇಕಿನಿಸಿದ ಸಂದರ್ಭದಲ್ಲಿ ನನಗೆ ಪ್ರವಾಸ ಕೈಗೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಪ್ರಯಾಣ ಸಂಸ್ಥೆಯನ್ನೇ ಕಟ್ಟಬೇಕೆಂಬ ಮಹತ್ತರ ಯೋಜನೆಯನ್ನು ಹಾಕಿಕೊಂಡೆ. ಬರಿಯ ಯೋಜನೆ ಮಾಡಿಕೊಂಡರೆ ಸಾಲದು, ಅದಕ್ಕೆ ತಕ್ಕಂತೆ ಪರಿಶ್ರಮವಿಲ್ಲವಾದರೆ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಡಿಜಿಟಲ್‌ ತಂತ್ರಜ್ಞಾನ ಇನ್ನೂ ಬೆಳವಣಿಗೆಯಾಗುವ ಮುನ್ನವೇ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಮಾಡಿಕೊಂಡೆ. ಸೂಕ್ತ ಸಮಯದಲ್ಲಿ ಅಂದರೆ ಇಂದಿಗೆ ಸುಮಾರು 32 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ʻವಂದೇ ಮಾತರಂ ಟ್ರಾವೆಲ್ಸ್‌ʼ ಎಂಬ ಪ್ರವಾಸಿ ಸಂಸ್ಥೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಇಲ್ಲಿ ಆಧುನಿಕತೆ ಅಲ್ಲ ಆತ್ಮೀಯತೆ ಇದೆ

1994ರಲ್ಲಿ ಪ್ರಯಾಣ ಸಂಸ್ಥೆಯನ್ನು ಹುಟ್ಟುಹಾಕಿದಾಗ ನೀವು ಎದುರಿಸಿದ ಸವಾಲುಗಳೇನು?

1994ರಲ್ಲಿ ವಂದೇ ಮಾತರಂ ಟ್ರಾವೆಲ್ಸ್‌ ಎಂಬ ಹೆಸರಿನಲ್ಲಿ ಟ್ರಾವೆಲ್ಸ್‌ ಸಂಸ್ಥೆಯನ್ನು ಹುಟ್ಟುಹಾಕಿದೆ. ಆದರೆ ಅದು ಪ್ರವಾಸೋದ್ಯಮಕ್ಕೆ ಪೂರಕವಾದ ಸಮಯವಾಗಿರಲಿಲ್ಲ. ಪ್ರತಿ ವರ್ಷವೂ ಬರಗಾಲ ಬರುತ್ತಿತ್ತು. ಪ್ರವಾಸೋದ್ಯಮ ಎನ್ನುವುದು ಜನರಿಗೆ ಗೊತ್ತಿರಲಿಲ್ಲ. ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಮುಖ್ಯವಾಗಿ ಹೊಟೇಲ್‌ ಉದ್ಯಮವೇ ಚಾಲ್ತಿಯಲ್ಲಿದ್ದರಿಂದ ನಾನು ಪ್ರಯಾಣ ಸಂಸ್ಥೆ ಪ್ರಾರಂಭಿಸಿದರೂ ಎಲ್ಲರೂ ಅದನ್ನು ಹೊಟೇಲ್‌ ಎಂದೇ ಪರಿಗಣಿಸುತ್ತಿದ್ದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಮ್ಮಲ್ಲಿ ಯಾರೂ ಇರಲಿಲ್ಲ. ಇದು ಹೊಸತನದ ಪ್ರಯತ್ನ. ಮೊದಲ ಹೆಜ್ಜೆಗಳು ಸಾಕಷ್ಟು ಕಷ್ಟವೆನಿಸಿದರೂ ಧೃತಿಗೆಡದೆ ಮುನ್ನಡೆದೆ. ನಿಧಾನವಾಗಿ ಪ್ರಗತಿ ಕಂಡೆನೆಂಬುದೇ ಹೆಮ್ಮೆಯ ವಿಚಾರ.

ನಿಮ್ಮ ಸಂಸ್ಥೆಯಿಂದ ಮೊದಲು ಪರಿಚಯಿಸಿದ ಪ್ಯಾಕೇಜ್‌ ಯಾವುದು?

ನಮ್ಮ ದೇಶದಲ್ಲಿ ಯಾತ್ರಾ ಸ್ಥಳಗಳಿಗೆ ಹೋಗುವುದೇ ಪ್ರವಾಸ ಎಂಬಂಥ ಪರಿಸ್ಥಿತಿಯಿತ್ತು. ಅಡ್ವೆಂಚರ್‌ ಅಕ್ಟಿವಿಟೀಸ್‌, ಮೌಂಟೇನ್‌ ಏರಿಂಗ್‌, ಬೀಚ್‌ ಆಕ್ಟಿವಿಟೀಸ್‌ ಇದ್ಯಾವುದೂ ನಮ್ಮಲ್ಲಿರದೆ ಬರಿಯ ಗೋವಾ ಅಥವಾ ವಿದೇಶಗಳಿಗಷ್ಟೇ ಸೀಮಿತವಾಗಿತ್ತು. ನಿಧಾನವಾಗಿ ಅಂಥ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದೆ. ಮೊದಲೆಲ್ಲಾ ಲಾಂಗ್‌ ಟೂರ್‌ ಚಾಲ್ತಿಯಲ್ಲಿತ್ತು. ಆದರೆ ನಾನು ಭವಿಷ್ಯದ ಬಗ್ಗೆ ಚಿಂತಿಸಿ, ದೂರದ ಊರುಗಳಿಗೆ ಕಡಿಮೆ ದಿನಗಳಲ್ಲಿ ಪ್ರವಾಸ ಹೋಗಿ ಬರುವ ಪ್ಯಾಕೇಜ್‌ ಪರಿಚಯಿಸಿದೆ. ತುಂಬಾ ಸ್ಥಳಗಳ್ನು ಒಮ್ಮೆಲೇ ನೋಡಿ ಬರುವ ಬದಲಾಗಿ, ಆಯ್ದ ಸ್ಥಳಗಳನ್ನು ಸಂಪೂರ್ಣವಾಗಿ ತಿಳಿದು ಬರುವುದಕ್ಕೆ ಅವಕಾಶ ಮಾಡಿಕೊಟ್ಟೆ. ಇದೇ ಸಂದರ್ಭದಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಹುಟ್ಟಿಕೊಂಡು ಉತ್ತಮ ಸೇವೆ ನೀಡುವುದಕ್ಕೆ ಪ್ರಾರಂಭಿಸಿದ ನಂತರ ಸಾರಿಗೆ ವ್ಯವಸ್ಥೆ ಸುಗಮವಾಯಿತು. ಈ ವ್ಯವಸ್ಥೆಯನ್ನು ನಾವು ಉಪಯೋಗಿಸಿಕೊಂಡು ʻಶಾರ್ಟ್‌ ಟೂರ್ಸ್‌ʼ ಆಯೋಜನೆ ಮಾಡಿದೆ. ನಮ್ಮಲ್ಲಿ 3 ದಿನಗಳಲ್ಲಿ ಕಾಶಿಗೆ ಹೋಗಿಬರುವ ಪ್ಯಾಕೇಜ್‌ ಸಹ ಇದೆ.

nagaraj adiga 1

ಹೊಸ ಪ್ಯಾಕೇಜ್‌ಗೆ ಪ್ರವಾಸಿಗರ ಪ್ರತಿಕ್ರಿಯೆ ಹೇಗಿತ್ತು?

ಹೊಸ ಪ್ಯಾಕೇಜನ್ನು ಮೊದಲು ಪ್ರಯೋಗ ಮಾಡಿದ್ದೆ. ಹುಬ್ಬಳ್ಳಿಯಲ್ಲಿ ಒಂದಷ್ಟು ಮಂದಿ ರಿಟೈರ್ಡ್‌ ರೈಲ್ವೆ ಉದ್ಯೋಗಿಗಳಿದ್ದರು. ಅವರಿಗೆ ಫ್ರೀ ಆಗಿ ರೈಲ್ವೆ ಪಾಸ್‌ಗಳಿರುತ್ತಿದ್ದವು. ಅವರ ಅಸೋಸಿಯೇಷನ್‌ ನ್ನು ಭೇಟಿಮಾಡಿ ಅವರಿಗೆ ಒಂದು ಟೂರ್‌ ವ್ಯವಸ್ಥೆ ಮಾಡಿಕೊಟ್ಟೆ. 10 ದಿನಗಳಲ್ಲಿ ಅವರಿಗೆ ರೈಲು ಫ್ರೀ. ಭಾರತದ ಲಾಸ್ಟ್‌ ಡೆಸ್ಟಿನೇಷನ್‌ ಎಂದರೆ ಗೋರಕ್‌ಪುರ್.‌ ಅವರಿಗೆ ಅಲ್ಲಿಯವರೆಗೆ ಟ್ರಾವೆಲ್‌ ಫ್ರೀ ಆಗಿತ್ತು. ಅಲ್ಲಿಂದ ಅವರಿಗೆ ಕಡಿಮೆ ವೆಚ್ಚದಲ್ಲಿ ನೇಪಾಳ ಪ್ರವಾಸ ಮಾಡಿಸಿಕೊಟ್ಟೆ. ಅಲ್ಲಿಂದ ನಮ್ಮ ಪ್ರಯಾಣ ಶುರುವಾಗಿದ್ದು. ಆಮೇಲೆ ಬೇರೆ ಬೇರೆ ಡೆಸ್ಟಿನೇಷನ್‌ಗಳನ್ನು ಪರಿಚಯಿಸುತ್ತಾ ಬಂದೆ. ಅಂದಾಜು 2000ನೇ ಇಸವಿಯ ಸುಮಾರಿಗೆ ಅಂತಾರಾಷ್ಟ್ರೀಯ ಪ್ರವಾಸ ಆಯೋಜನೆ ಮಾಡುವುದಕ್ಕೆ ಪ್ರಾರಂಭಿಸಿದೆ. ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು.

ʻವಂದೇ ಮಾತರಂ ಟ್ರಾವೆಲ್ಸ್‌ʼ ʻಅಡಿಗಾಸ್‌ ಯಾತ್ರಾʼ ಆಗಿದ್ದು ಹೇಗೆ ?

ʻವಂದೇ ಮಾತರಂ ಟ್ರಾವೆಲ್ಸ್‌ʼ ಅನ್ನುವುದನ್ನು ನಮ್ಮ ಜನ ತಪ್ಪಾಗಿ ಬರೆಯುವುದಕ್ಕೆ ಪ್ರಾರಂಭಿಸಿದ್ದರು. ಇದು ನನ್ನಿಂದ ದೇಶಕ್ಕಾಗುವ ಅವಮಾನ ಅಂದುಕೊಂಡೆ. ಬೇರೆ ಹೆಸರಿಡಬೇಕೆನಿಸಿತು. ನಾವು ಅದಾಗಲೇ ಮಂಗಳೂರು, ಉಡುಪಿಯ ಕಡೆ ಫೇಮಸ್‌ ಆಗಿದ್ದೆವು. ಯಾತ್ರೆ, ಕಾಶಿ ಅಂದರೆ ಅಡಿಗರ ಜತೆ ಹೋಗಬೇಕೆಂದು ಹೇಳುತ್ತಿದ್ದರು. ಹೀಗೆ ಅಡಿಗರ ಜತೆ ಯಾತ್ರೆಗೆ ಹೋಗಿದ್ದೆ ಎಂಬುದೇ ಎಲ್ಲ ಕಡೆ ಹರಡಲು ಪ್ರಾರಂಭವಾಗಿತ್ತು. ಇದನ್ನೇ ಯಾಕೆ ಬಳಸಿಕೊಳ್ಳಬಾರದು ಅಂದುಕೊಂಡು ʼಅಡಿಗಾಸ್‌ ಯಾತ್ರಾʼ ಎಂದು ಮರುನಾಮಕರಣ ಮಾಡಿದೆ. ʻಅಡಿಗಾಸ್‌ ವರ್ಲ್ಡ್‌ʼ ಎಂಬ ಮತ್ತೊಂದು ಬ್ರ್ಯಾಂಡ್‌ ಕೂಡ ಇದೆ.

ಟ್ರಾವೆಲ್‌ ಇಂಡಸ್ಟಿಯ ಪೈಪೋಟಿಗಳ ನಡುವೆ ನೀವು ಗಟ್ಟಿಯಾಗಿ ಬೇರೂರುವುದಕ್ಕೆ ಹೇಗೆ ಸಾಧ್ಯವಾಯ್ತು ?

ನಮ್ಮ ಕ್ಷೇತ್ರದಲ್ಲಿ ಪೈಪೋಟಿಯಿರುವುದು ದರದ ವಿಚಾರದಲ್ಲಷ್ಟೇ. ಆದರೆ ನನಗೆ ಅದರಲ್ಲಿ ನಂಬಿಕೆಯಿಲ್ಲ. ಗುಣಮಟ್ಟವಷ್ಟೇ ನನಗೆ ಪ್ರಮುಖವಾಗುತ್ತದೆ. ಯಾವುದೇ ವಸ್ತು ಕಡಿಮೆಗೆ ವ್ಯಾಪಾರ ಮಾಡಿದರೆ ಒಂದು ದಿನವಷ್ಟೇ ಯಶಸ್ಸು ಕಾಣಬಹುದು. ಅದು ಲಾಂಗ್‌ ಟರ್ಮ್‌ ಯಶಸ್ಸಲ್ಲ. 35,000ಕ್ಕೆ ಥೈಲ್ಯಾಂಡ್‌, 40,000ಕ್ಕೆ ಸಿಂಗಾಪುರ, 25,000ಕ್ಕೆ ದುಬೈ ಪ್ರವಾಸವೆಂಬ ಫೇಕ್‌ ಪಬ್ಲಿಸಿಟಿಗಳಿಗೆ ಮಾರುಹೋಗುವ ಮುನ್ನ ವಿದ್ಯಾವಂತರಾಗಿ ನಾವು ಯೋಚನೆ ಮಾಡಬೇಕು. ಇಷ್ಟೊಂದು ಕಡಿಮೆ ಬಜೆಟ್‌ನಲ್ಲಿ ಹೇಗೆ ಟೂರ್‌ ಪ್ಲಾನ್‌ ಮಾಡುವುದಕ್ಕೆ ಸಾಧ್ಯ ಎಂದು. ಗ್ರಾಹಕರ ಭರವಸೆ ನಂಬಿಕೆಗೆ ತಕ್ಕಂತೆ ಉತ್ತಮ ಸೇವೆ ನೀಡಬೇಕೆಂಬುದು ನನ್ನ ಉದ್ದೇಶ. ಬೇರೆ ಟ್ರಾವೆಲ್‌ ಏಜೆನ್ಸಿಗಳಿಗೆ ಕಾಂಪಿಟೇಷನ್‌ ಕೊಡುವುದಲ್ಲ, ಬದಲಾಗಿ ಸರ್ವಿಸ್‌ನಲ್ಲಿ ನಮಗೆ ನಾವೇ ಪೈಪೋಟಿ ನೀಡಬೇಕು. ಇಂದಿನದಕ್ಕಿಂತ ನಾಳೆ ಇನ್ನೂ ಉತ್ತಮ ಸೇವೆ, ಸೌಲಭ್ಯಗಳನ್ನು ಕೊಡುವ ಗುರಿ ಹೊಂದಬೇಕು. ಇದಕ್ಕಾಗಿ ಪ್ರತಿ ಪ್ರವಾಸಕ್ಕೂ ಮುನ್ನ ಹಾಗೂ ಪ್ರವಾಸ ನಂತರ ಗಾಹಕರ ಜತೆಗೆ ನಮ್ಮ ಸರ್ವಿಸ್‌ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತೇವೆ. ಒಳ್ಳೆಯ ಸರ್ವಿಸ್‌ ಕೊಡಬೇಕೆಂದರೆ ರೇಟ್‌ನಲ್ಲಿ ರಾಜಿಯಾಗುವುದಕ್ಕಾಗುವುದಿಲ್ಲ. ಇಂಟರ್‌ ನ್ಯಾಷನಲ್‌ ಟೂರ್‌ಗೆ ಹೋದಾಗ ಕಡಿಮೆ ಬಜೆಟ್‌ ಹೊಟೇಲ್‌ಗಳ ಬಗ್ಗೆ ನಮಗೆ ಗೊತ್ತಿದ್ದರೂ ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ಒದಗಿಸುವುದಷ್ಟೇ ನಮ್ಮ ಗುರಿಯಾಗಿರುತ್ತದೆ. ಅದರಲ್ಲೂ ಭಾರತೀಯರು ವಿದೇಶ ಪ್ರವಾಸ ಮಾಡುವಾಗ ರಾಯಲ್‌ ಆಗಿ ಹೋಗಿ ರಾಯಲ್‌ ಆಗಿ ಪ್ರವಾಸ ಮಾಡಿ ಬರಬೇಕೆಂಬ ಉದ್ದೇಶ ನನ್ನದು.

ಪ್ರವಾಸಿಗರ ಜತೆ ನೀವು ಮಾಡಿದ ಬೆಸ್ಟ್‌ ಟ್ರಿಪ್‌ ಯಾವುದು?

ಪ್ರತೀ ಪ್ರವಾಸವೂ ನಮಗೆ ಬೆಸ್ಟ್.‌ ನಾವು ಮಾಡಿರುವ ಐಟನರೀಸ್‌ ಒಂದಕ್ಕಿಂತ ಒಂದು ಚೆನ್ನಾಗಿರುತ್ತದೆ. ವ್ಯಾಲ್ಯೂ ಆಡೆಡ್‌ ಅಟ್ರ್ಯಾಕ್ಷನ್ಸ್‌ ಬಗ್ಗೆ ನಾವು ಹೆಚ್ಚಿನ ಗಮನಹರಿಸುತ್ತೇವೆ. ಪ್ರತಿಯೊಂದು ಟೂರ್‌ ಕರೆದುಕೊಂಡು ಹೋಗುವಾಗಲೂ ಎಷ್ಟೇ ಅನುಭವವಿದ್ದರೂ ಇದು ನಮ್ಮ ಮೊದಲ ಟ್ರಿಪ್‌ ಎಂದುಕೊಂಡೇ ಹೋಗಬೇಕು. ಯಾಕೆಂದರೆ ಅಂದುಕೊಂಡಂತೇ ಎಲ್ಲಾ ಟ್ರಿಪ್‌ ಮಾಡುವುದಕ್ಕೆ ಆಗುವುದಿಲ್ಲ. ಸಿಹಿಯಷ್ಟೇ ಅಲ್ಲ, ಕಹಿ ಅನುಭವ ನೀಡುವ ಪ್ರವಾಸಗಳೂ ಸಾಕಷ್ಟು ಇರುತ್ತವೆ.

nagaraj adiga 1 (1)

ಪ್ರಯಾಣದಲ್ಲಿ ಅಂಥ ಕಹಿ ಅನುಭವಗಳು ಆಗಿರುವುದಿದೆಯಾ?

ಹೌದು, ಚಾರ್‌ಧಾಮ್‌ ಯಾತ್ರಾಗಳಲ್ಲಿ ಲ್ಯಾಂಡ್‌ ಸ್ಲೈಡ್‌ ಆಗುವುದು ಸಾಮಾನ್ಯ. ಭೂಕಂಪದ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಒಮ್ಮೆ 40 ಜನರ ತಂಡದೊಂದಿಗೆ ಬಾಲಿಗೆ ಹೋಗಿದ್ದೆವು. ಅಲ್ಲಿ ಎಲ್ಲಾ ರೋಡ್‌ಗಳಲ್ಲಿ ಮ್ಯೂಸಿಕ್‌, ಡ್ಯಾನ್ಸ್‌ ಮಾಡುತ್ತಾ ಎಲ್ಲರೂ ಖುಷಿಯಿಂದಿದ್ದರು. ಇದಕ್ಕಿದ್ದಂತೆ ಭೂಕಂಪ ಸಂಭವಿಸಿತ್ತು. ಎಲ್ಲೆಡೆ ಕೂಗಾಟ, ಚೀರಾಟ ಕೇಳಿಬಂತು. ಪಕ್ಕದ ಐಲ್ಯಾಂಡ್‌ನಲ್ಲಿ ಭೂಕಂಪ ಆಗಿ ಸಾಕಷ್ಟು ಸಾವು ನೋವು ಸಂಭವಿಸಿತ್ತು ಎಂಬ ವಿಚಾರ ನಂತರವಷ್ಟೇ ಗೊತ್ತಾಗಿತ್ತು. ನಾರ್ತ್‌ ಈಸ್ಟ್‌ ನಲ್ಲಿ ಇದೆಲ್ಲವೂ ಸಾಮಾನ್ಯ ವಿಚಾರ. 10 ಟೂರ್‌ನಲ್ಲಿ ಒಂದು ಬ್ಯಾಚ್‌ಗೆ ಇಂಥದ್ಯಾವುದೋ ಅನುಭವವಾಗುತ್ತದೆ.

ಅಡಿಗಾಸ್‌ ಯಾತ್ರಾ ಜತೆಗೆ ಪ್ರವಾಸಕ್ಕೆ ಬರುವವರಿಗೆ ಯಾವ ರೀತಿಯ ಮಾರ್ಗದರ್ಶನ ನೀಡುತ್ತೀರಿ ?

ನಮ್ಮಲ್ಲಿ ಕಚೇರಿಗೆ ಬಂದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಲ್ಲವಾದರೆ ನಮ್ಮ ತಂಡವೂ ಇದ್ದು, ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಯಾತ್ರೆಗೆ ಯಾವ ಸಮಯ ಸೂಕ್ತ, ಯಾವುದೇ ಯಾತ್ರೆಯ ಬುಕಿಂಗ್‌ ಪ್ರೊಸೀಜರ್‌ ಹೇಗೆ ? ಬುಕಿಂಗ್‌ ನಂತರ ಮೀಟಿಂಗ್‌, ಪ್ರವಾಸಕ್ಕೆ ಹೋಗುವ ಮೊದಲು ಮತ್ತೊಂದು ಸುತ್ತಿನ ಮಾತುಕತೆಯೂ ಇರುತ್ತದೆ. ಅದರಲ್ಲಿ ಆಯ್ದ ಪ್ರವಾಸಿ ತಾಣದ ಬಗೆಗೆ ಮಾಹಿತಿ, ಅಲ್ಲಿನ ವಾತಾವರಣ, ಅದಕ್ಕೆ ತಕ್ಕಂತೆ ಬಟ್ಟೆಗಳ ಆಯ್ಕೆ, ಎಷ್ಟು ಕರೆನ್ಸಿ ಜತೆಗಿರಿಸಿಕೊಳ್ಳಬೇಕು ಇಂಥ ಅನೇಕ ವಿಚಾರಗಳ ಮಾಹಿತಿಯನ್ನು ನೀಡುತ್ತೇವೆ. ಮತ್ತೆ ಪ್ರಿ ಡಿಪಾರ್ಚರ್‌ ಮೀಟಿಂಗ್‌ ಮಾಡಿ, ಟೂರಿಸ್ಟ್‌ ಗಳಿಗೆ ಏರ್‌ ಪೋರ್ಟ್‌ ಗೆ ಬರಬೇಕಿರುವ ಸಮಯ, ಜಾಗ ಹೀಗೆ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತೇವೆ. ಟೂರ್‌ ನಿಂದ ಟೂರ್‌ ಗೆ ಇವೆಲ್ಲದರಲ್ಲೂ ವ್ಯತ್ಯಾಸವಿರುತ್ತದೆ. ಕಾಶಿ ಯಾತ್ರೆಗೆ ಹೋಗುವವರಿಗೆ ತಯಾರಿ ಬೇರೆಯದೇ ರೀತಿ.

ಸದ್ಯ ಟ್ರೆಂಡಿಂಗ್‌ನಲ್ಲಿರುವ ಟೂರ್‌ ಪ್ಯಾಕೇಜ್‌ ಯಾವುದು ?

ಸ್ಪಿರಿಚ್ಯುವಲ್‌ ಟೂರಿಸಂ ಅಥವಾ ಯಾತ್ರಾ ಎಂಬುದು ಎವರ್‌ ಗ್ರೀನ್.‌ ಕಾಶಿ ಎಂದರೆ ಹೋಗಲೇಬೇಕು ಅಂತಾರೆ. ಸಮಯ, ಹಣ ಇದೆಲ್ಲವೂ ಬೇರೆ ಬಗೆಯ ಟೂರ್‌ಗಳತ್ತ ಮುಖಮಾಡುತ್ತಾರೆ. ಕಾಶಿ, ರಾಮೇಶ್ವರ, ಧರ್ಮಸ್ಥಳಕ್ಕೆ ಹೋಗಬೇಕೆಂದರೆ ಇರುವ ದುಡ್ಡಿನಲ್ಲೇ ಪ್ರಯಾಣ ಎನ್ನುವಂತಿರುತ್ತದೆ. ಲಿಶರ್‌ ಟೂರ್‌ ಗೆ ಟೇಸ್ಟ್‌ ಬೇಕು, ಲಕ್ಸುರಿ ಬೇಕೆನ್ನುತ್ತಾರೆ. ಹನಿಮೂನ್‌ ಡೆಸ್ಟಿನೇಷನ್‌ ಹೋಗುವವರು ದುಬಾರಿಯಾದರೂ ಪರವಾಗಿಲ್ಲ ಎನ್ನುತ್ತಾರೆ.

ಟ್ರಾವೆಲ್ ಉದ್ಯಮ ಅಂದಿನಿಂದ ಇಂದಿನವರೆಗೂ ಕಂಡಿರುವ ಬದಲಾವಣೆಗಳೇನು?

ಬದಲಾವಣೆ ಜಗದ ನಿಯಮ. ಎಲ್ಲ ಉದ್ಯಮಗಳಂತೆ ಈ ಉದ್ಯಮದಲ್ಲೂ ಅನೇಕ ಬದಲಾವಣೆಗಳಾಗಿವೆ. 1999ರ ಕಾಲದಲ್ಲಿ ನಮಗೆ ದೂರವಾಣಿ ಸಂಪರ್ಕವೇ ಇರಲಿಲ್ಲ. ಲಕ್ಸುರಿ ಕಾನ್ಸೆಪ್ಟ್‌ ಪ್ರಾರಂಭವಾಗಿದ್ದು 2000ನೇ ಇಸವಿಯ ನಂತರ. ಮೊದಲೆಲ್ಲ ಎಷ್ಟೇ ದುಡ್ಡಿದ್ದರೂ ಬೇಸಿಕ್‌ ಪ್ಯಾಕೇಜ್‌ಗೆ ಹೋಗಬೇಕಿತ್ತು. ಈಗ ಅದೆಲ್ಲ ಬದಲಾಗಿದೆ. ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿದೆ. ಕಾಲ್‌, ಇಂಟರ್ ನೆಟ್‌, ಗೂಗಲ್‌ ಸರ್ಚ್‌ ನಂಥ ಅವಕಾಶಗಳು, ಹೊಸ ಪ್ರವಾಸಿ ತಾಣಗಳ ಸೇರ್ಪಡೆ ಹೀಗೆ ಅನೇಕ ಕಾರಣಗಳಿಂದಾಗಿ ಪ್ರವಾಸಿಗರಿಗೆ ಆಯ್ಕೆ ಹೆಚ್ಚಿದೆ. ಕಾಲಕ್ಕೆ ತಕ್ಕಂತೆ ನಾವೂ ಅಪ್‌ ಡೇಟ್‌ ಆಗಿದ್ದೇವೆ.

2026ರಲ್ಲಿ ಪರಿಚಯಿಸಿದ ಹೊಸ ಪ್ಯಾಕೇಜ್‌ಗಳ ಬಗ್ಗೆ ತಿಳಿಸುವಿರಾ?

ಅಮೆರಿಕ ವೀಸಾ ಸಿಗುವುದು ಬಹಳ ಕಷ್ಟ. ಆದರೆ ವೀಸಾ ಸಿಕ್ಕಿದವರಿಗೆ ಅಲ್ಲಿನ ಲೋಕಲ್‌ ವೆಂಡರ್‌ಗಳ ಜತೆಗೆ ಮಾತನಾಡಿಕೊಂಡು ಯುಎಸ್‌ಎ ಪ್ಯಾಕೇಜ್‌ ಡೇಟ್‌ ಬಿಡುಗಡೆ ಮಾಡಿದ್ದೇವೆ. ಆಸ್ಟೇಲಿಯಾ, ನ್ಯೂಜಿಲೆಂಡ್‌ ಪ್ಯಾಕೇಜ್‌ನಲ್ಲಿ ಹೆಚ್ಚುವರಿಯಾಗಿ ಅನೇಕ ತಾಣಗಳನ್ನು ಸೇರಿಸಿಕೊಂಡಿದ್ದೇವೆ. ಸದ್ಯದಲ್ಲೇ ಸೌತ್‌ ಆಫ್ರಿಕಾವನ್ನೂ ಪರಿಚಯಿಸಲಿದ್ದೇವೆ. ಈಜಿಪ್ಟ್‌, ಜೋರ್ಡನ್‌, ಇಟಲಿ ಹೀಗೆ ಪಟ್ಟಿ ಹೆಚ್ಚುತ್ತಲೇ ಇದೆ.

ನಿಮಗಿರುವ ಪ್ರವಾಸದ ಆಸಕ್ತಿಯ ಬಗ್ಗೆ ಹೇಳಿ?

ನಾನು ಎಷ್ಟು ಪ್ರವಾಸಗಳನ್ನು ಕೈಗೊಂಡಿದ್ದೇನೆ ಎನ್ನುವ ಬಗ್ಗೆ ನನಗೇ ಮಾಹಿತಿಯಿಲ್ಲ. 32 ವರ್ಷದ ಈ ಪ್ರಯಾಣದಲ್ಲಿ 2-3 ಲಕ್ಷ ಜನರನ್ನು ಪ್ರವಾಸಕ್ಕೆ ಕರೆದೊಯ್ದಿದ್ದೇನೆ. ವೈಯಕ್ತಿಕವಾಗಿ ನಾನು ಅಂಟಾರ್ಕ್ಟಿಕಾ ಖಂಡವನ್ನು ಬಿಟ್ಟು ಎಲ್ಲ ಖಂಡಗಳನ್ನು ಸುತ್ತಾಡಿದ್ದೇನೆ. ಏಷ್ಯಾದಲ್ಲಿ ಎಲ್ಲ ಭಾಗಗಳಿಗೂ, ಯುರೋಪ್‌ ನಲ್ಲಿ ಸುಮಾರು 20 ದೇಶಗಳು, ಯುಎಸ್‌ಎ, ಆಸ್ಟ್ರೇಲಿಯಾ, ಹೀಗೆ ಟ್ರಾವೆಲ್‌ ಮಾಡುತ್ತಲೇ ಇರುತ್ತೇನೆ. ಇತ್ತೀಚೆಗಷ್ಟೇ ಫಿಲಿಪ್ಪೀನ್ಸ್‌ ಗೆ ಹೋಗಿಬಂದೆ. ಹೋದಾಗಲೆಲ್ಲ ನನ್ನ ಯೋಚನೆ ಈ ಪ್ರದೇಶ ನನ್ನ ಟೂರಿಸ್ಟ್‌ ಗಳಿಗೆ ಮೆಚ್ಚುಗೆಯಾಗಬಹುದಾ ಎಂಬುದೇ ಇರುತ್ತದೆ.

ಈ ಉದ್ಯಮದಲ್ಲಿ ಮುಂದುವರಿಯಲು ಕುಟುಂಬದ ಸಹಕಾರ ಎಷ್ಟರಮಟ್ಟಿಗಿದೆ?

ಇದುವರೆಗೂ ನನ್ನ ಕುಟುಂಬದಿಂದ ಟೂರಿಸಂ ಕ್ಷೇತ್ರಕ್ಕೆ ಯಾರೂ ಬಂದಿಲ್ಲ. ಮದುವೆಯಾದ ಮೇಲೆ ನನ್ನ ಪತ್ನಿ ಈ ಉದ್ಯಮದಲ್ಲಿ ಕೈಜೋಡಿಸಿದರು. ಅವರ ತಮ್ಮನೂ ಸೇರಿಕೊಂಡರು. ಸಂಸ್ಥೆಯ ಜವಾಬ್ದಾರಿಯನ್ನು ಪತ್ನಿ ಆಶಾ ವಹಿಸಿಕೊಂಡಿದ್ದಾರೆ. ನಮ್ಮ ಸಿಬ್ಬಂದಿ, ಬುಕಿಂಗ್‌ ಸ್ಟಾಫ್‌, ಟೂರ್‌ ಮ್ಯಾನೇಜರ್‌ಗಳೂ ಉತ್ತಮ ಸಹಕಾರ ನೀಡುತ್ತಾರೆ. ಇಲ್ಲಿ ಎಲ್ಲರೂ ಆಧಾರಸ್ತಂಭಗಳೇ.

ನಿಮ್ಮ ಕ್ಷೇತ್ರಕ್ಕೆ ಸರಕಾರದಿಂದ ಯಾವ ರೀತಿಯಲ್ಲಿ ನೆರವು ಅಥವಾ ಸಹಕಾರ ಸಿಕ್ಕಿದೆ ?

ಟ್ರಾವೆಲ್ಸ್‌ಗಳಿಗೆ ಸರಕಾರದಿಂದ ಯಾವುದೇ ಸವಲತ್ತುಗಳಿಲ್ಲ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿ, ಸಾಕಾರಗೊಳಿಸುತ್ತದೆ. 10-15 ವರ್ಷಗಳ ಹಿಂದೆ ಟ್ರಾವೆಲ್‌ ಇಂಡಸ್ಟ್ರಿಯಲ್ಲಿ ರೆಕಗ್ನಿಷನ್‌ ತೆಗೆದುಕೊಂಡರೆ 5,000 ರುಪಾಯಿ ವರೆಗೂ ಸ್ಟೈಫಂಡ್‌ ಬರುತ್ತಿತ್ತು. ಆದರೆ ಅದೆಲ್ಲವೂ ಇಂದು ನಿಂತುಹೋಗಿದೆ. ಆದರೆ ಈಗ ಕಾಶಿಗೆ ಹೋಗುವ ಗ್ರಾಹಕರಿಗೆ ಸಬ್ಸಿಡಿ ಕೊಡುತ್ತಾರೆ. ಇದು ಎಲ್ಲರಿಗೂ ತಲುಪಿದರೆ ಒಳ್ಳೆಯದು. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ.

ಅಡಿಗಾಸ್ ಯಾತ್ರಾ ಪ್ಯಾಕೇಜ್‌ಗಳ ಮಾಹಿತಿ ತಿಳಿಸಿ

ಡೊಮೆಸ್ಟಿಕ್‌ ಫಿಕ್ಸೆಡ್‌ ಡಿಪಾರ್ಚರ್‌ ಪ್ಯಾಕೇಜ್‌ ಅಂದರೆ ಸ್ಟ್ಯಾಂಡರ್ಡ್‌ ಗ್ರೂಪ್‌ ಟೂರ್‌ಗಳಾಗಿರುತ್ತವೆ. ಪ್ರತಿ ತಿಂಗಳು ಒಂದು ಸ್ಯೂಟೆಬಲ್‌ ಡೇಟ್ಸ್‌ ಹಾಕಿರುತ್ತೇವೆ. ಇದಕ್ಕೆ ಇಲ್ಲಿಂದಲೇ ಕಿಚನ್‌ ಟೀಮ್‌ ಕಳುಹಿಸುತ್ತೇವೆ. ವೆಜಿಟೇರಿಯನ್‌ ಫುಡ್‌ ಕೊಡಲಾಗುತ್ತದೆ. ಟೂರ್‌ ಮ್ಯಾನೇಜರ್‌ ಜತೆಗಿರುತ್ತಾರೆ. 44-49 ಜನರ ತಂಡವಿರುತ್ತದೆ. ಡಿಲಕ್ಸ್‌ ರೂಮ್ಸ್‌ ಕೊಡಲಾಗುತ್ತದೆ. ಫಿಕ್ಸೆಡ್‌ ಡಿಪಾರ್ಚರ್‌ನಲ್ಲಿ ಸ್ಥಳ ಒಂದೇ ಇದ್ದರೂ ಆ ಡೇಟ್‌ ಗೆ ಎಷ್ಟು ಜನ ಬುಕ್‌ ಆಗುತ್ತಾರೋ ಅವರನ್ನಷ್ಟೇ ಕಳಿಸುತ್ತೇವೆ. ಫೋರ್‌ ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯಕ್ಕೆ ಬುಕ್‌ ಮಾಡಲಾಗುತ್ತದೆ. ನಾನ್‌ ವೆಜ್‌ ಆಹಾರವೇ ಬೇಕೆನ್ನುವವರಿಗೂ ಇಲ್ಲಿ ಅವಕಾಶವಿದೆ. ಗ್ರೂಪ್‌ ಸೈಜ್ ಗೆ ತಕ್ಕಂತೆ ವಾಹನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಇನ್ನು ಕಸ್ಟಮೈಸ್ಡ್‌ ಟೂರ್‌ ಅಂದರೆ ನೀವು ಎಷ್ಟು ಜನ ಬರುತ್ತೀರೆಂಬುದರ ಮೇಲೆ ಯಾವುದೇ ಟೂರನ್ನೂ ನಾವು ಅರೇಂಜ್‌ ಮಾಡಿಕೊಡುತ್ತೇವೆ. ಇಂಡಿಯಾದಲ್ಲಿ ಯಾವುದೇ ಮೂಲೆಗೂ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಕ್ಲಾಸಿಕ್‌, ಸ್ಟ್ಯಾಂಡರ್ಡ್‌, ಡಿಲಕ್ಸ್‌, ಸೂಪರ್‌ ಡಿಲಕ್ಸ್‌, ಲಕ್ಸುರಿ ಆಂಡ್‌ ಪ್ರೀಮಿಯಂ ಹೀಗೆ ಬಜೆಟ್‌ಗೆ ತಕ್ಕಂತೆ ಹೊಟೇಲ್‌ ಬುಕ್‌ ಮಾಡಿಕೊಡುತ್ತೇವೆ.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಬರಬೇಕು ಅಂದುಕೊಳ್ಳುವ ಯುವಕರಿಗೆ ನಿಮ್ಮ ಕಿವಿಮಾತು?

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದುಕೊಂಡರೆ ಪ್ರಾರಂಭದಲ್ಲಿ ಕೆಲವು ವರ್ಷ ಹೆಚ್ಚು ನಿರೀಕ್ಷೆಯಿಲ್ಲದೆ ಪರಿಶ್ರಮಪಡಬೇಕಾಗುತ್ತದೆ. ನೀವು ಒಂದು ಬಾರಿ ಗಟ್ಟಿಯಾಗಿ ನಿಂತ ಮೇಲೆ ಮತ್ತೆ ತಿರುಗಿ ನೋಡಬೇಕಿಲ್ಲ. ಆದರೆ ಇಂದಿನ ಜನಾಂಗದಲ್ಲಿ ತಾಳ್ಮೆ ಕಡಿಮೆ. ಅದನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ.

adigas

ಪ್ರವಾಸೋದ್ಯಮ ಕ್ಷೇತ್ರ ಹಾಗೂ ಪ್ರಯಾಣ ಸಂಸ್ಥೆಗಳಲ್ಲಿ ಮಾಧ್ಯಮದ ಪಾತ್ರವಿದೆಯೇ?

ಇಂದು ಮಾಧ್ಯಮದಿಂದಲೇ ಎಲ್ಲವೂ. ಒಳ್ಳೆಯ ಪ್ರಚಾರದ ಜತೆಗೆ ಜನರಿಗೆ ಅನೇಕ ವಿಚಾರಗಳನ್ನು ತಲುಪಿಸುವ ಕೆಲಸವನ್ನು ಮಾಧ್ಯಮ ನಿಷ್ಠೆಯಿಂದ ಮಾಡುತ್ತಲೇ ಬಂದಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯ ಬಗೆಗಷ್ಟೇ ಅಲ್ಲದೆ ನೈಸರ್ಜಿಕ ವಿಕೋಪಗಳ ಬಗೆಗೂ ಮಾಹಿತಿ ನೀಡುತ್ತದೆ. ಅದು ನೇರವಾಗಿ ಪ್ರವಾಸೋಧ್ಯಮಕ್ಕೆ ಸಹಕಾರಿಯಾಗುತ್ತದೆ. ಟಿವಿ ಅಥವಾ ಪ್ರಿಂಟ್‌ ಮೀಡಿಯಾವೇ ಆಗಿದ್ದರೂ ಅದೂ ಪ್ರವಾಸೋದ್ಯಮದ ಭಾಗವೇ ಆಗಿದೆ.

--

ಕರ್ನಾಟಕದ ಪ್ರವಾಸಿ ಸಂಸ್ಥೆಗಳಲ್ಲಿ ಅಡಿಗಾಸ್‌ ಉನ್ನತ ಸ್ಥಾನದಲ್ಲಿದೆ. ಪ್ರವಾಸಿ ಸಂಸ್ಥೆಗಳು ಜನರಿಗೆ ಇಷ್ಟವಾಗಬೇಕಾದರೆ ಪ್ರವಾಸಕ್ಕೆ ಜನರು ಹೋದಾಗ ಅವರನ್ನು ಸಂಸ್ಥೆ ನೋಡಿಕೊಳ್ಳುವ ರೀತಿ, ಒದಗಿಸುವ ಸೇವೆಗಳು ಎಲ್ಲವೂ ಮುಖ್ಯವಾಗುತ್ತದೆ. ಇದರಲ್ಲಿ ಅಡಿಗಾಸ್‌ ಹೆಸರು ಮಾಡಿದೆ. ಅನೇಕ ಸಂಸ್ಥೆಗಳಿದ್ದರೂ ಕನ್ನಡಿಗರಿಗಾಗಿ ಕನ್ನಡ ನಾಡಿನಲ್ಲಿ ಹುಟ್ಟಿ ದೇಶ- ವಿದೇಶಗಳಿಗೆ ಉತ್ತಮ ಪ್ರವಾಸಗಳನ್ನು ಏರ್ಪಡಿಸುತ್ತಿದೆ. ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರಿಗೆ ಅವರ ಸಾಂಪ್ರದಾಯಿಕ ಊಟೋಪಚಾರವನ್ನು ಇವರು ಉತ್ತಮವಾಗಿ ನೀಡುತ್ತಿದ್ದಾರೆ. ನಾನು ಈ ಹೊತ್ತಿಗಾಗಲೇ ಏಳೆಂಟು ಪ್ರವಾಸಗಳನ್ನು ಅಡಿಗಾಸ್‌ ಯಾತ್ರಾ ಮೂಲಕ ಮಾಡಿದ್ದೇನೆ ಇವರ ಪ್ರವಾಸ ಯೋಜನೆಗಳು ಸೇವಾ ಮನೋಭಾವ ಮತ್ತು ಸೌಲಭ್ಯಗಳು ನನಗೆ ಇಷ್ಟವಾಗಿವೆ.
- ಜಯಪ್ರಕಾಶ, ನಿವೃತ್ತ ಸಹಾಯಕ ಜನರಲ್‌ ಮ್ಯಾನೇಜರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು

--

ನಾನು ಈ ಸಂಸ್ಥೆಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಾವಿಲ್ಲಿ ಕೆಲಸಕ್ಕೆ ಸೇರಿದಾಗ ನಮಗೆ ಪ್ರವಾಸಕ್ಕೆ ಬರುವ ಜನರನ್ನು ನೋಡಿಕೊಳ್ಳುವುದು, ಅವರೊಂದಿಗೆ ಮಾತನಾಡುವುದು, ಟೂರ್‌ ಮ್ಯಾನೇಜರ್‌ಗಳೊಂದಿಗೆ ಸಂಪರ್ಕದಲ್ಲಿರುವುದು ಹೇಗೆ ಎಂಬುದನ್ನು ಮೊದಲಿಗೆ ಕಲಿಸಿಕೊಟ್ಟರು. ನಮ್ಮನ್ನೂ ಸ್ಟಡಿ ಟೂರ್‌ಗೆ ಕಳುಹಿಸಿದರು. ಇದರಿಂದ ನಾವು ಎಲ್ಲವನ್ನೂ ಕಲಿತುಕೊಂಡು ಕೆಲಸದಲ್ಲೂ ಅಳವಡಿಸಿಕೊಂಡೆವು. ಗ್ರಾಹಕರಿಗೆ ಹೇಗೆ ಮಾಹಿತಿ ನೀಡಬೇಕು, ಅವರ ಬೇಕು ಬೇಡಗಳು ಏನು ಎಂಬುದನ್ನು ತಿಳಿದು ನಾವು ಪ್ರವಾಸಕ್ಕೆ ಬುಕಿಂಗ್‌ ಮಾಡಿಕೊಡುತ್ತೇವೆ.
- ಮಹೇಶ್‌, ಟೂರ್‌ ಮ್ಯಾನೇಜರ್‌, ಅಡಿಗಾಸ್‌ ಯಾತ್ರಾ

--

ನಾನೂ ಈ ಮೊದಲು ಸಾಕಷ್ಟು ಪ್ರವಾಸಗಳನ್ನು ಮಾಡಿದ್ದೇನೆ. ಆದರೆ ನಿಜವಾಗಿಯೂ ಪ್ರವಾಸ ಅಂದರೇನು, ಪ್ರವಾಸದಲ್ಲಿ ಎದುರಾಗುವ ಫಜೀತಿಗಳೇನು, ಅವುಗಳನ್ನು ನಿಭಾಯಿಸುವುದು ಹೇಗೆ ಹೀಗೆ ಎಲ್ಲವನ್ನೂ ನಾನು ಅಡಿಗಾಸ್‌ನಲ್ಲಿ ಸೇರಿದಾಗಿನಿಂದ ಕಲಿತಿದ್ದೇನೆ, ಕಲಿಯುತ್ತಲೇ ಇದ್ದೇನೆ. ಆತಿಥ್ಯದಲ್ಲಿ ಏನಾದರೂ ತೊಡಕುಗಳಾದರೆ ಅವುಗಳನ್ನು ಪರಿಹರಿಸುವ ತನಕ ನಾಗರಾಜ ಅಡಿಗರು ಅದನ್ನು ಕೈಬಿಡುವುದಿಲ್ಲ. ಯಾವುದೇ ಸೇವೆಯಲ್ಲಿ ಪ್ರವಾಸಿಗೆ ಮೋಸವಾಗಬಾರದು ಎನ್ನುವುದೇ ಅವರ ಕಾಳಜಿ. ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರೂ ನಮ್ಮಲ್ಲಿದ್ದಾರೆ ಎಂದರೆ ಈ ಸಂಸ್ಥೆಯ ವಿಶ್ವಾಸಾರ್ಹತೆ ಎಂಥದ್ದು ಎಂದು ಅರಿತುಕೊಳ್ಳಬಹುದು.
- ದ್ವಾರಕನಾಥ್‌, ಸೀನಿಯರ್‌ ಮ್ಯಾನೇಜರ್‌, ಅಡಿಗಾಸ್‌ ಯಾತ್ರಾ

--

ನಾನು ಅಡಿಗಾಸ್‌ನಲ್ಲಿ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅಡಿಗಾಸ್‌ ವತಿಯಿಂದ ದೇಶ-ವಿದೇಶಗಳಿಗೂ ಸಾಕಷ್ಟು ಪ್ರವಾಸ ಮಾಡಿದ್ದೇನೆ. ಭಾರತದಲ್ಲಿ ಅನೇಕ ಪ್ರವಾಸಗಳಿಗೆ ನಾನು ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದೇನೆ. ವಿದೇಶ ಪ್ರವಾಸಕ್ಕಿಂತ ಭಾರತದಲ್ಲಿ ನೋಡುವಂಥದ್ದು ಸಾಕಷ್ಟಿದೆ. ನಾರ್ತ್‌ ಈಸ್ಟ್‌ ರಾಜ್ಯಗಳ ಪ್ರವಾಸಕ್ಕೆ ಜನರನ್ನು ಕರೆದುಕೊಂಡು ಹೋಗುವುದು ಕಷ್ಟ. ಆದರೂ ಅಡಿಗಾಸ್‌ ಈ ಕಾರ್ಯವನ್ನು ಉತ್ತಮ ನಿರ್ವಹಣೆಯೊಂದಿಗೆ ಮಾಡುತ್ತಿದೆ.
-ನಾಗೇಂದ್ರ, ಟೂರ್‌ ಮ್ಯಾನೇಜರ್‌, ಅಡಿಗಾಸ್‌ ಯಾತ್ರಾ
Bhagya Divana

Bhagya Divana

Bhagya Divana is a Professional Journalist. Working in Pravasi Prapancha.