ಒಂಟಿಯಾಗಿ ಅಥವಾ ಗುಂಪಿನಲ್ಲಿ ಒಟ್ಟಾರೆ ಪ್ರವಾಸಮಾಡಿ
ವಾಸ್ತವದಲ್ಲಿ ಮನೆ, ಮಗು, ಸಂಸಾರವನ್ನು ನಿಭಾಯಿಸುವುದು ಕಷ್ಟ. ಆದರೆ, ಆಗುವುದೇ ಇಲ್ಲ ಎಂದೇನಿಲ್ಲ. ನಿಮ್ಮ ಮಗುವಿನ ವಯಸಿಗೆ ಅನುಗುಣವಾಗಿ ಟ್ರಿಪ್ ಪ್ಲಾನ್‌ಮಾಡಿ. ಕುವಟುಂಬದವರ ಜತೆ ಹೋದರೆ ಬೆಂಬಲವಿರುತ್ತದೆ. ಅಥವಾ ಸಮಾನ ವಯಸ್ಸಿನ ಮಗುವಿ ರುವ ಮತ್ತೊಂದು ಕುಟುಂಬದವರ ಜತೆಗೂಡಿ ಹೋಗಬಹುದು. ಅದೇ ಮಗು ಚೂರು ದೊಡ್ಡದಾದರೆ, ಒಂದು ದಿನದ ಮಟ್ಟಿಗೆ ಪತಿ, ಅತ್ತೆ-ಮಾವ ಅಥವಾ ಅಪ್ಪ -ಅಮ್ಮನ ಜತೆ ಇರಲು ಅಭ್ಯಾಸ ಮಾಡಿಸಿ. ಇದು ಕೇವಲ ಪ್ರವಾಸದ ಜತೆಗೆ ಅಗತ್ಯ ಸಂದರ್ಭಗಳಲ್ಲಿ ಸಹಾಯಕ್ಕೆ ಬರುತ್ತದೆ.
- ಶ್ವೇತಾ ಭಿಡೆ
ಪ್ರವಾಸ ಅಂದಾಗ, ʻಅಯ್ಯೋ ಅವಳಿಗೇನು ಬಿಡಿ, ಒಬ್ಬಳೇ ಇರೋದು, ಫ್ರೆಂಡ್ ಜತೆ ಸುತ್ತಾಡಿಕೊಂಡು ಇರುತ್ತಾಳೆ, ನಮ್ಮ ಹಾಗೆ ಮನೆ, ಸಂಸಾರ, ಮಗು, ಶಾಲೆ ಅಂತ ಇದ್ದಿದ್ರೆ ಗೊತ್ತಾಗ್ತಿತ್ತುʼ ಅಂತ ಮೂಗು ಮುರಿಯುವ ಒಂದು ವರ್ಗವಿದೆ. ನನಗೆ ಮನೆಯಲ್ಲಿ ಕಳಿಸೋದಿಲ್ಲ, ನಾನು ಹೇಗೆ ಹೋಗೋದು, ನನಗೆ ಜತೆಗೆ ಯಾರು ಇಲ್ಲ ಎನ್ನುವ ಮತ್ತೊಂದು ವರ್ಗವೂ ಇದೆ. ಹಾಗೆ ನೋಡಿದರೆ ಪ್ರವಾಸ ಎನ್ನುವುದು ಅವರ ಆಸಕ್ತಿಯ ಪಟ್ಟಿಯಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆಯವರ ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್ ಫೊಟೋಗಳು, ರೀಲ್ಸ್ ಕೆಲವರನ್ನು ಕಂಗೆಡಿಸುತ್ತವೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೊಂದಿದೆ. ಪ್ರವಾಸ ಹೋಗುವುದು ನಿಮ್ಮ ಜೀವನದ ಬಹುದೊಡ್ಡ ರಿಟರ್ನ್ ಇನ್ವೆಸ್ಟ್‌ಮೆಂಟ್.
ಇದನ್ನೂ ಓದಿ: ಮಹಿಳೆಯರ ಮಾನಸಿಕ ನೆಮ್ಮದಿಗೆ ಪ್ರವಾಸದ ಮದ್ದು ನೀಡಿ
ಪ್ರವಾಸವೆಂದರೆ ಕೇವಲ ಒಂದು ಜಾಗವನ್ನು ನೋಡಲು ಹೋಗುವುದು, ಅಲ್ಲಿಂದ ಫೊಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ಬರುವುದು ಮಾತ್ರವಲ್ಲ. ಆಯಾ ಜಾಗದ ಬಗ್ಗೆ ಅರಿತುಕೊಳ್ಳಬೇಕು. ಹೊಸ ವಿಷಯಗಳನ್ನು, ಸಂಸ್ಕೃತಿ, ಜನಉರ, ಇತಿಹಾಸವನ್ನು ಅರಿಯುವುದು. ಎಲ್ಲವನ್ನು ನಮ್ಮೊಳಗೆ ತಂದುಕೊಳ್ಳಬೇಕು ಎಂದೇನಿಲ್ಲ. ಅಲ್ಲಿನ ಹಲವು ಉತ್ತಮ ವಿಚಾರಗಳನ್ನು ನೆನಪುಗಳನ್ನು ನಮ್ಮೊಳಗೆ ತಂದುಕೊಂಡರೂ ಸಾಕು. ಅವು ಸದಾಕಾಲ ನಮ್ಮೊಂದಿಗೆ ಉಳಿದುಬಿಡುತ್ತವೆ. ಹಾಗಾಗಿಯೇ ಪ್ರವಾಸವನ್ನು ಜೀವನದ ಬಹುದೊಡ್ಡ ರಿಟರ್ನ್ ಇನ್ವೆಸ್ಟ್‌ಮೆಂಟ್ ಎಂದದ್ದು.

ಸಬೂಬುಗಳಿಗೆ ಹೇಳಿ ಗುಡ್ ಬೈ
ಪ್ರವಾಸಕ್ಕೆ ಮೊದಲು ಬೇಕಿರುವುದು ʻಮನಸು. ಎಲ್ಲಿಗಾದರು ಹೋಗಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿ. ಮುಂದಿನದು ತಾನಾಗಿಯೇ ಆಗುತ್ತದೆ. ನಿಮ್ಮ ಸಮಸ್ಯೆಗಳೇನೇ ಇರಲಿ, ಅವುಗಳಿಗೆ ಪರಿಹಾರಗಳಿವೆ. ನಾನೊಬ್ಬಳೇ ಎಲ್ಲಿಗೆ ಮತ್ತು ಹೇಗೆ ಹೋಗೋದು ಎನ್ನುವ ಚಿಂತೆ ಮಾಡುವುದನ್ನು ಬಿಡಿ. ಪರಿಹಾರಗಳನ್ನು ಹುಡುಕಿ.
ಗೆಳತಿಯರ ಜತೆಗೂ ಪ್ರವಾಸ ಮಾಡಬಹುದು
ಈಗೀಗ ಅಪಾರ್ಟ್ಮೆಂಟ್‌ನಲ್ಲಿ ಮಹಿಳೆಯರ ಗುಂಪು ಪ್ರವಾಸಕ್ಕೆ ಹೋಗುವುದು, ಹೊರಗಡೆ ಪಾರ್ಟಿ ಎಂದು ಓಡಾಡುವುದು ಸಹಜವಾಗಿದೆ. ನೀವೂ ಯಾವುದಾದರು ಗುಂಪಿನಲ್ಲಿದ್ದರೆ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ನಿಮಗೆ ಇಂಥಲ್ಲಿಗೇ ಪ್ರವಾಸ ಹೋಗಬೇಕು ಎನ್ನುವ ಆಸೆಯಿದ್ದರೆ ಆಯಾ ಮನಸ್ಥಿತಿಗೆ ಹೊಂದಿಕೊಳ್ಳುವ ಗೆಳತಿಯರ ಜತೆಗೆ ಕೂಡಿಕೊಂಡು ಓಡಾಡಬಹುದು.
ಮನೆ, ಮಗು, ನಿಭಾಯಿಸುವುದು ಕಷ್ಟ ಆದರೆ ಅಸಾಧ್ಯವಲ್ಲ
ವಾಸ್ತವದಲ್ಲಿ ಮನೆ, ಮಗು, ಸಂಸಾರವನ್ನು ನಿಭಾಯಿಸುವುದು ಕಷ್ಟ. ಆದರೆ, ಆಗುವುದೇ ಇಲ್ಲ ಎಂದೇನಿಲ್ಲ. ನಿಮ್ಮ ಮಗುವಿನ ವಯಸಿಗೆ ಅನುಗುಣವಾಗಿ ಟ್ರಿಪ್ ಪ್ಲಾನ್‌ಮಾಡಿ. ಕುಟುಂಬದವರ ಜತೆ ಹೋದರೆ ಬೆಂಬಲವಿರುತ್ತದೆ. ಅಥವಾ ಸಮಾನ ವಯಸ್ಸಿನ ಮಗುವಿರುವ ಮತ್ತೊಂದು ಕುಟುಂಬದವರ ಜತೆಗೂಡಿ ಹೋಗಬಹುದು. ಅದೇ ಮಗು ಚೂರು ದೊಡ್ಡದಾದರೆ, ಒಂದು ದಿನದ ಮಟ್ಟಿಗೆ ಪತಿ, ಅತ್ತೆ-ಮಾವ ಅಥವಾ ಅಪ್ಪ -ಅಮ್ಮನ ಜತೆ ಇರಲು ಅಭ್ಯಾಸ ಮಾಡಿಸಿ. ಇದು ಕೇವಲ ಪ್ರವಾಸದ ಜತೆಗೆ ಅಗತ್ಯ ಸಂದರ್ಭಗಳಲ್ಲಿ ಸಹಾಯಕ್ಕೆ ಬರುತ್ತದೆ.

ಮನೆಯವರಿಗೆ ಮಾಹಿತಿ ನೀಡಿ ಮತ್ತು ತಿರುಗಾಡಿ
ʻನಾನೊಬ್ಬಳೆ ಇರೋದು. ಪ್ರವಾಸ ಹೋಗೋದು ಹೇಗೆ? ಅಂತ ಯೋಚಿಸುತ್ತಾ ಕುಳಿತುಕೊಳ್ಳಬೇಡಿ. ಒಬ್ಬರಾದರೂ ಹೋಗಿ, ಗುಂಪಿನ ಜತೆಗಾದರೂ ಹೋಗಿ ಒಟ್ಟಾರೆ ಪ್ರವಾಸ ಮಾಡಿ. ಆದರೆ, ಸ್ಥಳಕ್ಕೆ ತಲುಪಿದ ನಂತರ ಸ್ಥಳದ ಸುರಕ್ಷತೆ ಅದರ ಮಾಹಿತಿಯನ್ನು ನಿಮ್ಮವರಿಗೆ ಆಗಿಂದಾಗಲೇ ಹಂಚಿಕೊಳ್ಳಿ.
ಪ್ರವಾಸ ಎನ್ನುವುದು ಮೋಜಿಗಾಗಿ ಅಲ್ಲ. ಅದು ನಮ್ಮ ದೇಹ ಮತ್ತು ಮನಸನ್ನು ಮತ್ತೆ ರಿಚಾರ್ಜ್ ಮಾಡುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಒಂದು ಪುಟ್ಟ ಪ್ರವಾಸ ಮಾಡಿ. ಒಂಟಿಯಾಗಿ ಅಥವಾ ಅವಕಾಶ ಸಿಕ್ಕರೆ ನಿಮ್ಮವರನ್ನೂ ಜತೆಗೆ ಕರೆದುಕೊಂಡು ಹೋಗಿಬನ್ನಿ.