ಕೆ. ರಾಧಾಕೃಷ್ಣ ಹೊಳ್ಳ,

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ

ಬೆಂಗಳೂರು ನಗರದ ITC Gardenia ಪಂಚತಾರಾ ಹೊಟೇಲ್‌ನಲ್ಲಿ ನಡೆದ 2025ರ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್ ಅಂಗವಾಗಿ ಆಯೋಜಿಸಲಾದ ಅಭಿನಂದನಾ ಸಮ್ಮಿಲನಾ ಸಭೆ, ಪ್ರವಾಸೋದ್ಯಮ ಕ್ಷೇತ್ರದ ಭವಿಷ್ಯ ಕುರಿತು ಚಿಂತನೆಗೆ ವೇದಿಕೆಯಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಅವರು, ಕರ್ನಾಟಕವನ್ನು ದೇಶದಲ್ಲೇ ಪ್ರವಾಸೋದ್ಯಮದಲ್ಲಿ ಮೊದಲ ಸ್ಥಾನಕ್ಕೇರಿಸುವ ಗುರಿಯನ್ನು ಪುನರುಚ್ಚರಿಸಿದರು. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಹೊಟೇಲ್‌ಗಳು, ಡಾರ್ಮಿಟರಿ ವಸತಿ ವ್ಯವಸ್ಥೆಗಳು ಮತ್ತು ಐತಿಹಾಸಿಕ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೂಲಧನ ಸಹಾಯ ಒದಗಿಸುವ ಭರವಸೆ ನೀಡಿದರು.

ಇದನ್ನೂ ಓದಿ: ಅತಿಥಿ ದೇವೋಭವ ಘೋಷವಾಕ್ಯವಲ್ಲ, ಕಾರ್ಯಯೋಜನೆಯಾಗಲಿ

ಆದರೆ ಈ ಮಾತುಗಳ ನಡುವೆ ಮನಸ್ಸಿಗೆ ತಟ್ಟುವ ವಾಸ್ತವ ಏನೆಂದರೆ – ಅಭಿವೃದ್ಧಿಯ ನೆರಳು ಇನ್ನೂ ಬೀಳದ ಅನೇಕ ಅಮೂಲ್ಯ ತಾಣಗಳನ್ನು ಪದೇ ಪದೇ ಉಚ್ಚರಿಸಿದರು. ಅದು ಅವರ ಧ್ಯೇಯವಾಕ್ಯದಂತಿತ್ತು.

ದನಗಾಹಿಗಳಿಂದ, ಕುರಿ ಮೇಯಿಸುವರಿಂದಲೇ ಉಳಿದಿರುವ ಜನಕಾಣದ ಐತಿಹ್ಯದ ಪ್ರದೇಶ

ಗಂಗಾವತಿ–ಕೊಪ್ಪಳದ ಹಿರೇಬೆಣಕಲ್ ಪ್ರಾಗೈತಿಹಾಸಿಕ ಮಹತ್ವದ ತಾಣ. ಜಗತ್ತಿನ ಪುರಾತತ್ವ ನಕ್ಷೆಯಲ್ಲಿ ಸ್ಥಾನ ಪಡೆದಿರುವ ಈ ಮೆಗಾಲಿಥಿಕ್ ಗುಡ್ಡಗಳು ಇಂದಿಗೂ ಮೂಲಸೌಕರ್ಯಗಳ ನಿರೀಕ್ಷೆಯಲ್ಲಿವೆ. ವೈಭವದ ನಾಡಾದ ಲಕ್ಕುಂಡಿ ಮತ್ತು ಪ್ರಕೃತಿಯ ಅದ್ಭುತ ರೂಪವಾದ ಯಾಣ ಕೂಡ ಅಪಾರ ಸಾಧ್ಯತೆ ಹೊಂದಿದ್ದರೂ, ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳ ಕೊರತೆಯಿಂದ ಹಿಂದುಳಿದಿವೆ.

ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಮಾರ್ಗದರ್ಶಕ ವ್ಯವಸ್ಥೆ, ಸರಿಯಾದ ರಸ್ತೆ ಸಂಪರ್ಕ – ಇವುಗಳಿಲ್ಲದೆ ಯಾವುದೇ ತಾಣ ಜನಪ್ರಿಯವಾಗಲು ಸಾಧ್ಯವಿಲ್ಲ. “ಅಭಿವೃದ್ಧಿಪಡಿಸಬೇಕು” ಎನ್ನುವುದು ಸುಲಭ; ಆದರೆ ಯೋಜನೆಗಳು ಕಾಗದದಲ್ಲೇ ಉಳಿಯದೆ ನೆಲಮಟ್ಟದಲ್ಲಿ ಜಾರಿಗೆ ಬರಬೇಕಾಗಿದೆ.

Untitled design (70)

ರಾಜ್ಯ ಈಗ ದೇಶೀಯ ಪ್ರವಾಸಿಗರ ಸೆಳೆತದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಗುರಿಯಾಗಬೇಕಾದರೆ, ಅಭಿವೃದ್ಧಿಯ ಬೆಳಕು ಕೆಲವೇ ಪ್ರಸಿದ್ಧ ತಾಣಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಹಾಗೂ ಐತಿಹಾಸಿಕ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ, ಸ್ಥಳೀಯರ ಪಾಲುದಾರಿಕೆ, ಹೋಂಸ್ಟೇ ಮತ್ತು ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ – ಇವೆಲ್ಲವೂ ಸಮಗ್ರ ಕಾರ್ಯತಂತ್ರದ ಭಾಗವಾಗಬೇಕು.

ಇಲ್ಲಿ ಕರ್ನಾಟಕ ಸ್ಟೇಟ್‌ ಟೂರಿಸಂ ಡೆವಲಪ್ಮೆಂಟ್‌ ಕಾರ್ಪೊರೇಷನ್‌(Karnataka State Tourism Development Corporation) ಸೇರಿದಂತೆ ಸರಕಾರಿ ಸಂಸ್ಥೆಗಳು ಹಾಗೂ ಖಾಸಗಿ ವಲಯಗಳ ಸಹಭಾಗಿತ್ವ ಅತ್ಯಗತ್ಯ. ಪ್ರವಾಸೋದ್ಯಮವು ಕೇವಲ ಮನರಂಜನೆ ಕ್ಷೇತ್ರವಲ್ಲ; ಅದು ಗ್ರಾಮೀಣ ಆರ್ಥಿಕತೆಗೆ ಜೀವನಾಡಿ, ಸಂಸ್ಕೃತಿಯ ಉಳಿವಿಗೆ ಶಕ್ತಿ.

ಅಭಿವೃದ್ಧಿಯ ನೆರಳು ಬೀಳದ ತಾಣಗಳನ್ನು ಜನಪ್ರಿಯಗೊಳಿಸುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಪ್ರವಾಸೋದ್ಯಮವು ಸಮತೋಲನದ, ಸಮಗ್ರ ಬೆಳವಣಿಗೆಯ ದಿಕ್ಕಿನಲ್ಲಿ ಸಾಗುತ್ತದೆ ಎನ್ನುತ್ತಾರೆ ನವಯುಗದ ಮಾರ್ಗ ದರ್ಶಿಗಳಾದ ಪ್ರವಾಸೋದ್ಯಮ ಸಚಿವರು.