• ಶಿವನಗೌಡ ಕಿಲಬನೂರು

ಪುರಾತನ ಕಾಲದಿಂದಲೂ ಕುಡಿಯಲೋ, ಕೃಷಿ ಬಳಕೆಗೋ ಆಗಲಿ ಯಾವ ಉದ್ದೇಶಗಳಿಗಾದರೂ ಮಳೆ ನೀರನ್ನು ಸಂಗ್ರಹಿಸಿ ಬಳಸುವುದು ಪದ್ದತಿಯಾಗಿತ್ತು. ಇದಕ್ಕೆ ಹೆಚ್ಚಾಗಿ ಬಳಕೆಯಲ್ಲಿದ್ದದ್ದು ಕೆರೆ ನಿರ್ಮಾಣ. ಕೆಲವು ಕೆರೆಗಳು ನೈಸರ್ಗಿಕವಾಗಿ ತುಂಬಿಕೊಂಡರೆ ಮತ್ತೆ ಕೆಲವು ಕೃತಕವಾಗಿ ತುಂಬಿಕೊಳ್ಳುತ್ತವೆ. ಮೂಲ ಉದ್ದೇಶದ ಜತೆಗೆ ಆ ಕೆರೆಗಳು ಹಲವು ಜೀವ ಸಂಕುಲಗಳಿಗೂ ಆಸರೆಯಾಗುತ್ತಿದ್ದವು. ಈಗ ನಾನು ಪರಿಚಯಿಸುತ್ತಿರುವುದೂ ಅಂಥ ಮನೋಹರ ದೃಶ್ಯ ನೀಡುವ ಕೆರೆ ಹುಬ್ಬಳ್ಳಿ- ಧಾರವಾಡ ಮಧ್ಯದಲ್ಲಿನ ಉಣಕಲ್ ಕೆರೆ.

ಸುಮಾರು 110 ವರ್ಷ ಹಳೆಯದಾದ ಈ ಉಣಕಲ್ ಕೆರೆ, 200 ಎಕರೆಯಷ್ಟು ವಿಶಾಲವಾಗಿದ್ದು, 6.5 ಕಿಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. 1893ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ಪ್ರೇರಣೆಯಲ್ಲಿ ನಿರ್ಮಾಣವಾದ ಈ ಕೆರೆ ಮೊದಲಿಗೆ ಕೇವಲ ಸುತ್ತಮುತ್ತ ನೀರು ಪೂರೈಕೆಗೆ ಬಳಸಲಾಗುತ್ತಿತ್ತು. ನಂತರ ನೀರಾವರಿ ಉದ್ದೇಶಕ್ಕಾಗಿಯೂ ಬಳಸಲಾಯಿತು. ಮೂಲವಾಗಿ ನೈಸರ್ಗಿಕವಾದರೂ 1990ರ ನಂತರ ಸ್ಥಳೀಯ ನಿಗಮಗಳಿಂದ ಅಭಿವೃದ್ಧಿಗೊಂಡು ಇಂದಿಗೆ ಹಲವಾರು ಪ್ರವಾಸಿ ಅನುಕೂಲಗಳೊಂದಿಗೆ ಮನರಂಜನೆಯ ಚಟುವಟಿಕೆಗಳಿಗೂ ಸೈ ಎನಿಸಿಕೊಂಡಿದೆ.

ವಿಶೇಷತೆ

ಗುರು ಸಿದ್ದಪ್ಪಜ್ಜರ ಜೀವಿಸಿದ ಕಾರಣ 'ಕರ್ಮಭೂಮಿ' ಅನಿಸಿಕೊಂಡಿದೆ. ಉಣಕಲ್ ಕೆರೆಯ ಪ್ರಮುಖ ಆಕರ್ಷಣೆ ಕೆರೆಯ ಮಧ್ಯದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ. ಹತ್ತಿರದಿಂದ ನೋಡಲು ಬಯಸುವವರಿಗೆ ಬೋಟಿಂಗ್‌ ಮೂಲಕ ಕರೆದೊಯ್ಯುವ ವ್ಯವಸ್ಥೆ ಇದೆ. ಕೆರೆಯ ಸುತ್ತಲೂ ವಿಶೇಷ ಅಲಂಕಾರಗಳ ವಿನ್ಯಾಸಗಳೊಂದಿಗೆ ವಾಕಿಂಗ್ ಪಾತ್ ಕೂಡ ನಿರ್ಮಿಸಲಾಗಿದೆ. ಆಕರ್ಷಣೀಯ ದೀಪಗಳ ಮಧ್ಯದಲ್ಲಿನ ಈ ಕೆರೆಯನ್ನು ರಾತ್ರಿ ಹೊತ್ತು ಆಚೆಯಿಂದ ನೋಡಿದರೆ ದಾರಿಹೋಕರಿಗೆ ಎಂಥ ಬೇಸರದಲ್ಲೂ ಉಲ್ಲಸಿತರಾಗಿಸುತ್ತದೆ. ಕೆರೆಯ ಮುಂಭಾಗದ ಮೇನ್ ರೋಡ್‌ಗೆ ಹತ್ತಿಕೊಂಡಿರುವ ಪಾರ್ಕ್ ಕೂಡ ಅತ್ಯಂತ ಶಿಸ್ತಿನಲ್ಲಿ ನೂತನ ವಿನ್ಯಾಸದಲ್ಲಿದೆ. ಮಕ್ಕಳಿಗೆ ಆಡಲು ಸಲಕರಣೆಗಳನ್ನು ಇರಿಸಲಾಗಿದೆ. ಕೂರಲು ಕಲ್ಲು ಆಸನಗಳನ್ನು ಇರಿಸಲಾಗಿದೆ. ವಿಶಿಷ್ಟ ರೀತಿಯ ಸಸ್ಯಗಳನ್ನು, ಹೂ ಪ್ರಭೇದಗಳನ್ನು, ಆಕರ್ಷಣೀಯ ಗಿಡಗಳನ್ನು ಬೆಳೆಸಲಾಗಿದೆ. ಚಿಟ್ಟೆ, ದುಂಬಿಗಳೊಂದಿಗೆ ಬೆರೆಯಬಹುದು. ಕೆರೆಯಲ್ಲಿ ಅಕ್ವೇರಿಯಂ ಪ್ಲಾಂಟೇಶನ್ ಕೂಡ ಮಾಡಲಾಗಿದೆ.

unkal lake  1

ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಒಬ್ಬರಾದ ಚೆನ್ನಬಸವೇಶ್ವರರು, ಹಸಿರಿನ ಮಧ್ಯೆ ಇರುವ ಉಳವಿಗೆ ಪ್ರಯಾಣ ಬೆಳೆಸಿದಾಗ, ಮಾರ್ಗ ಮಧ್ಯದಲ್ಲಿ ಈ ಉಣಕಲ್‌ನಲ್ಲಿ ಕಾರಣಾಂತರಗಳಿಂದ ತಂಗಿದ್ದರಿಂದ ಲೇಕ್‌ನ ಮುಂಭಾಗದಲ್ಲಿ ಚನ್ನಬಸವೇಶ್ವರರ ದೇವಸ್ಥಾನವು ಇದ್ದು, ಇಂದು ಧಾರ್ಮಿಕ ಕೇಂದ್ರವಾಗಿದೆ. ಇದೇ ಕಾರಣದಿಂದ ಉಣಕಲ್‌ ಕೆರೆಗೆ ಚೆನ್ನಬಸವ ಸಾಗರ ಎಂದು ಹೆಸರಿಡಲಾಗಿದೆ. ಭರತ ಹುಣ್ಣಿಮೆಯ ದಿನ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯು ಜರುಗುತ್ತದೆ.

ವ್ಯವಸ್ಥೆ

ʻಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ʼ ಪ್ರೊಜೆಕ್ಟ್ ಅಡಿಯಲ್ಲಿ ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ವಿನೂತನವಾಗಿ ಉಣಕಲ್ ಲೇಕ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ವಾಕಿಂಗ್ ಪಾತ್, ಲೈಟಿಂಗ್, ರಾಫ್ಟ್, ಪಾರ್ಕ್ನಲ್ಲಿ ಆಸನ, ಮೇಲಾವರಣ, ಡಸ್ಟಬಿನ್, ಆಟದ ಸಲಕರಣೆಗಳು, ಕೆರೆಯ ನೀರಿನಲ್ಲಿ ಹವಾನಿಯಂತ್ರಿತ ಮಷೀನ್‌ಗಳನ್ನು ಇರಿಸಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾಗಿ ಸಮಯಕ್ಕೆ ಸರಿಯಾಗಿ ನೀರಿಗೆ ಸೇರುವ ಗಾರ್ಬೇಜ್, ವೇಸ್ಟೇಜ್‌ಗಳನ್ನು ತೆಗೆದು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಮುಂತಾದವುಗಳೊಂದಿಗೆ ಉಣಕಲ್‌ ಕೆರೆ ಹಲವು ಜನರ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಂಡಿದೆ.

ಈ ಸ್ಥಳ ಅವಳಿ ನಗರಗಳ ಮಧ್ಯದಲ್ಲಿಯೇ ಇರುವುದರಿಂದ ಪ್ರವಾಸಿಗರಿಗೆ ಹೊಟೇಲ್, ಲಾಡ್ಜ್, ವ್ಯವಸ್ಥೆಯು ಸುಲಭವಾಗಿ ದೊರೆಯುತ್ತದೆ. ಚಂದ್ರಮೌಳೇಶ್ವರ ದೇವಸ್ಥಾನ, ಸಿದ್ದಪ್ಪಜ್ಜರ ದೇವಸ್ಥಾನ, ಬನಶಂಕರಿ ದೇವಾಲಯ, ಇನ್ನೀತರ ಪ್ರೇಕ್ಷಣೀಯ ಸ್ಥಳಗಳನ್ನು ಅವಳಿ ನಗರಗಳಲ್ಲಿ ಹತ್ತಿರದಲ್ಲಿ ನೋಡಬಹುದು. ವಾರದ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ ಲೇಕ್ ಭೇಟಿಗೆ ತೆರೆದಿರುತ್ತದೆ.

ದಾರಿ ಹೇಗೆ?

ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು, ಬಸ್‌ಗಳ ವ್ಯವಸ್ಥೆ ಇದ್ದು, ಹುಬ್ಬಳ್ಳಿ - ಧಾರವಾಡ ಮಧ್ಯದಲ್ಲಿನ ಉಣಕಲ್ ಲೇಕ್‌ಗೆ ಸಿಟಿ ಬಸ್ ಮೂಲಕ ಸುಲಭವಾಗಿ ತಲುಪಬಹುದು.