Wednesday, May 13, 2026
Wednesday, May 13, 2026

ಬೇಸಗೆ ರಜೆಯಲ್ಲಿ ಎಲ್ಲೆಲ್ಲಿ ಮಜ ಮಾಡ್ಬೋದು?

ಮನಸ್ಸಿಗೆ ಮಾತ್ರವಲ್ಲ ಮೈಗೂ ತಂಪೊದಗಿಸುತ್ತದೆ ಮಲೆನಾಡು. ಮಲೆನಾಡಿನ ಮಡಿಲಲ್ಲಿರುವ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳು ಬೇಸಗೆಯಲ್ಲಿ ಸುತ್ತಾಡಲು ಹೆಚ್ಚು ಸೂಕ್ತ.

  • ಸುಕೃತಿ

ಏಪ್ರಿಲ್‌, ಮೇ ಎಂದೊಡನೆಯೇ ನೆನಪಾಗುವುದು ಬೇಸಗೆ ರಜೆ. ವರ್ಷವಿಡೀ ಶಾಲೆ, ಟ್ಯೂಶನ್‌, ಕ್ಲಾಸು, ಹೋಂವರ್ಕ್‌, ಪರೀಕ್ಷೆ ಎಂದು ಬೇಸತ್ತಿರುವ ಮಕ್ಕಳಿಗೆ ಚೇತರಿಸಿಕೊಳ್ಳಲು, ತಾಯಿಯಂದಿರಿಗೆ ತವರಿನಲ್ಲಿ ಒಂದಿಷ್ಟು ದಿನ ಕಳೆಯಲು ಇರುವ ಸಮಯ. ಇದರ ಮಧ್ಯೆ ಎಲ್ಲಾದರೂ ಸುತ್ತಾಡಿ ಬರುವ ಆಸೆ ಮಕ್ಕಳಲ್ಲೂ ಪೋಷಕರಲ್ಲೂ ಇರುವುದು ಸಹಜ. ಇಡೀ ವರ್ಷ ಮಕ್ಕಳ ಶಾಲೆಗೆ ರಜೆ ಇಲ್ಲ ಎಂದು ಪ್ರವಾಸವನ್ನು ಮುಂದೂಡುತ್ತ ಬಂದು ಈಗ ಬೇಸಗೆಯ ಬಿಸಿಲಿನಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದೆಂಬುದೇ ಗೊಂದಲ.

ಒಂದೇ ರಾಜ್ಯ ಹಲವು ಜಗತ್ತಿನಂತಿರುವ ಕರ್ನಾಟಕದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಒಂದೆರೆಡೇ ದಿನ, ಮೂರು ನಾಲ್ಕು ದಿನ ಅಥವಾ ವಾರಗಟ್ಟಲೇ ಸುತ್ತಾಡಬಹುದಾದ ಪ್ರದೇಶಗಳಿವೆ. ಅವುಗಳ ಬಗ್ಗೆ ಗೊತ್ತೆ?

ಇದನ್ನೂ ಓದಿ: ʻಅಡಾಲಜ್‌ ನಿ ವಾವ್‌ʼ ಎಂಬ ಐತಿಹಾಸಿಕ ಬಾವಿ

ಬಿಸಿಲಿನಲ್ಲೂ ತಂಪ ಕಂಡೆನು

ಉತ್ತರ ಕನ್ನಡದ ಘಟ್ಟದ ಮೇಲಿನ ತಾಲೂಕುಗಳು ಬೇಸಗೆಯಲ್ಲೂ ತಂಪಾಗಿರುತ್ತವೆ. ಬನವಾಸಿ, ಸಹಸ್ರಲಿಂಗ, ಸೋಂದಾ, ಭುವನಗಿರಿ, ಮಾರಿಕಾಂಬಾ ದೇವಾಲಯ, ಗೋ ಸ್ವರ್ಗ, ಚಂದ್ರಗುತ್ತಿ, ಯಾಣಾದಂಥ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿವೆ. ದಾಂಡೇಲಿ ಅಭಯಾರಣ್ಯ, ದಾಂಡೇಲಿ ಆನೆ ತರಬೇತಿ ಕೇಂದ್ರ, ಅತ್ತಿವೇರಿ ಪಕ್ಷಿಧಾಮದಂಥ ನೈಸರ್ಗಿಕ ನೆಲೆಗಳಿವೆ. ಇದರೊಂದಿಗೆ ಗೋಕರ್ಣಾ, ಹೊನ್ನಾವರ, ಕುಮಟಾ, ಭಟ್ಕಳ, ಮುರ್ಡೇಶ್ವರ, ಕಾರವಾರದ ಕಡಲ ಕಿನಾರೆ ಕೈಬೀಸಿ ಕರೆದರೂ ಬಿಸಿಲಿನ ಝಳ ನೆತ್ತಿಯನ್ನು ಸುಟ್ಟು ಹಾಕಿಬಿಡುತ್ತದೆ. ಸಾತೋಡಿ, ಉಂಚಳ್ಳಿ, ಬುರಡೆ, ಮಾಗೋಡು, ಶಿವಗಂಗೆಯಂತಹ ಅಸಂಖ್ಯಾತ ಜಲಪಾತಗಳಿದ್ದರೂ ಇವುಗಳಲ್ಲಿ ಬೇಸಗೆಯಲ್ಲಿ ನೀರು ಕಡಿಮೆ, ಇವು ಅಕ್ಟೋಬರ್‌, ನವೆಂಬರ್‌, ಡಿಸೆಂಬರ್ ತಿಂಗಳಲ್ಲಿ ಹೋಗಲು ಹೆಚ್ಚು ಸೂಕ್ತ.

Untitled design - 2026-05-13T184150.513

ಕೋಟೆ, ಕಾಡು, ಪ್ರಾಣಿ, ಪ್ರಾರ್ಥನೆ

ರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳಿಯ ಕವಿಶೈಲವನ್ನು ಒಳಗೊಂಡಂತೆ ಸಾಕಷ್ಟು ಪ್ರವಾಸಿತಾಣಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕೆಳದಿ, ಇಕ್ಕೇರಿ, ಕವಲೇದುರ್ಗದಂಥ ಪ್ರದೇಶಗಳು ಹೋರಾಟದ ಕಥೆಯನ್ನು ಹೇಳುತ್ತಿವೆ. ಕೊಲ್ಲೂರು, ಸಿಗಂದೂರು, ರಾಮಚಂದ್ರಾಪುರ, ವರದಹಳ್ಳಿಯಂಥ ಧಾರ್ಮಿಕ ಕ್ಷೇತ್ರಗಳು ಭಕ್ತರ ಬೇಗೆಯನ್ನು ತೀರಿಸುತ್ತಿವೆ. ಶರಾವತಿ ಕಣಿವೆ ವನ್ಯಜೀವಿ ಧಾಮ, ಗುಡವಿ ಪಕ್ಷಿಧಾಮ, ಮೂಕಾಂಬಿಕಾ ವನ್ಯಜೀವಿ ಧಾಮ, ಸಕ್ಕರೆ ಬೈಲು ಆನೆ ಶಿಬಿರ, ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪ್ರಾಣಿ ಪಕ್ಷಿಗಳು ಮಕ್ಕಳ ಕಲಿಕೆಗೆ ಪೂರಕವಾಗಬಲ್ಲವು. ಜೋಗ, ಕುಂಚಿಕಲ್‌, ಹಿಡ್ಲುಮನೆ ಜಲಪಾತ, ಗಾಜನೂರು ಜಲಾಶಯಗಳಿದ್ದರೂ ಇಲ್ಲಿ ಬೇಸಗೆಯಲ್ಲಿ ಸಾಕಷ್ಟು ನೀರಿರುವುದಿಲ್ಲ. ಆಗುಂಬೆಯ ಸೂರ್ಯಾಸ್ತವೂ ಅತ್ಯಂತ ಮನಮೋಹಕವಾಗಿರುತ್ತದೆ.

ಕಾಫಿ ಹಣ್ಣಾಗುವ ಸಮಯ

ಬೆಳ್ತಂಗಡಿ ಬಲ್ಲರಾಯನ ದುರ್ಗ, ಅಮ್ರುತೇಶ್ವರ ದೇಗುಲ, ಶೃಂಗೇರಿ, ಹೊರನಾಡು, ಕಾಲಭೈರವೇಶ್ವರ, ದತ್ತಪೀಠದಂಥ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳು ಚಿಕ್ಕಮಗಳೂರಿನ ಮಡಿಲಲ್ಲಿವೆ. ಭದ್ರ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಧಾಮಗಳು ಚಿಕ್ಕಮಗಳೂರಿನಲ್ಲಿವೆ. ಹೆಬ್ಬೆ, ಕಲ್ಲಟ್ಟಿ, ಝರಿ ಮುಂತಾದ ಜಲಪಾತಗಳೂ ಇಲ್ಲಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದೇವಿರಮ್ಮನ ಬೆಟ್ಟ, ಝೆಡ್‌ ಪಾಯಿಂಟ್‌, ಬಾಬಾ ಬುಡನಗಿರಿ, ಕುದುರೆಮುಖ, ಕೆಮ್ಮಣ್ಣಗುಂಡಿಯಂಥ ಚಾರಣ ಯೋಗ್ಯ ಪ್ರದೇಶಗಳಿದ್ದರೂ ಮಕ್ಕಳಿಗೆ ಕಷ್ಟವಾಗಬಹುದು. ಕಲಶದ ಚಹಾ, ಮತ್ತು ಮೂಡಿಗೆರೆ, ಮುಳ್ಳಯನಗಿರಿ ಸುತ್ತಲಿನ ಕಾಫಿ ಎಸ್ಟೇಟ್‌ ನೋಡುವುದನ್ನು ಮರೆಯದಿರಿ.

Untitled design - 2026-05-13T184157.999

ಶ್ರೀಮಂತ ನಿಸರ್ಗ

ಬೇಲೂರು, ಹಳೆಬೀಡು, ಮಂಜರಾಬಾದ್‌, ಶೆಟ್ಟಿಹಳ್ಳಿಯ ಐತಿಹಾಸಿಕ ಸ್ಮಾರಕಗಳು ಇತಿಹಾಸವನ್ನು ಎಳೆಯೆಳೆಯಾಗಿ ಬಿಡಿಸಿಡುತ್ತವೆ. ಶ್ರವಣಬೆಳಗೊಳ, ಪಾರ್ಶ್ವನಾಥ ಬಸದಿ, ಲಕ್ಷ್ಮೀನಾರಾಯಣ ದೇವಸ್ಥಾನ, ಈಶ್ವರ ದೇವಸ್ಥಾನ, ಹಾಸನಾಂಬ ದೇವಸ್ಥಾನ (ದೀಪಾವಳಿಯ ಸಮಯದಲ್ಲಿ ಮಾತ್ರ ತೆರೆದಿರುತ್ತದೆ) ಧಾರ್ಮಿಕ ಕೇಂದ್ರಗಳು. ಜೇನುಕಲ್ಲು ಗುಡ್ಡ, ಪಾಂಡವರ ಗುಡ್ಡ, ಬಿಸಲೇ ಘಟ್ಟ, ಸಕಲೇಶಪುರ ನಿಸರ್ಗದತ್ತವಾಗಿ ಶ್ರೀಮಂತವಾಗಿವೆ.

ಕಾವೇರಿ ತವರುಮನೆ

ಕಾವೇರಿಯ ತವರುಮನೆ ಕೊಡಗಿನಲ್ಲಿ ಗದ್ದಿಗೆ ರಾಜ ಸಮಾಧಿ, ಮಡಿಕೇರಿ ಕೋಟೆ, ಜಮ್ಮಾ ಮಸೀದಿ, ನಲಕಂದ ಕೋಟೆ ಕೊಡಗಿನ ಇತಿಹಾಸದ ಬಿಂಬವಾಗಿ ನಿಂತಿದೆ. ತಲಕಾವೇರಿ, ಬಾಗಮಂಡಲ, ಕೋಟೆ ಬೆಟ್ಟ ದೇವಸ್ಥಾನ, ಇಗ್ಗುತುಪ್ಪ ದೇವಸ್ಥಾನ, ಗೋಲ್ಡನ್‌ ಟೆಂಪಲ್‌ ಭಕ್ತಾದಿಗಳನ್ನು ಸ್ವಾಗತಿಸುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ತಲಕಾವೇರಿ, ಪುಷ್ಪಗಿರಿ, ಬ್ರಹ್ಮಗಿರಿ ಅಭಯಾರಣ್ಯಗಳು, ದುಬಾರೆ ಆನೆ ಶಿಬಿರ ಇಲ್ಲಿನ ವನ್ಯಜೀವಿಗಳ ನೆಲೆಯಾಗಿದೆ. ಚೆಲವರ, ದೇವರಗುಂಡಿ, ಇರ್ಪು, ಮಲ್ಲಳ್ಳಿ ಜಲಪಾತಗಳು ಧುಮ್ಮಿಕ್ಕುತ್ತಿವೆ. ರಾಜಾ ಸೀಟ್‌, ಮಂಡಲಪಟ್ಟಿ, ಕೋಟೆ ಬೆಟ್ಟ, ಚೋಮಕುಂಡ ಬೆಟ್ಟಗಳು ಸುಂದರ ನಿಸರ್ಗದ ತುಣುಕುಗಳನ್ನು ಅಚ್ಚುಕಟ್ಟಾಗಿ ಉಣಬಡಿಸುತ್ತವೆ. ಸುಡುವ ಬೇಸಗೆಯಲ್ಲೂ ಮನಸ್ಸನ್ನು ತಂಪು ಮಾಡುವ ಮಲೆನಾಡಿಗೆ ಮಕ್ಕಳೊಡನೆ ಸುತ್ತಾಡಿ ಬನ್ನಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..