• ಅನಿಲ್ ಹೆಚ್.ಟಿ.

ಮಡಿಕೇರಿ ಎಂದ ಕೂಡಲೇ ಬಹುತೇಕರಿಗೆ ಮೊದಲು ನೆನಪಾಗುವುದೇ ಇಲ್ಲಿನ ಜನರಲ್ ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ.ಸರ್ಕಲ್..ಬಸ್ ಕಂಡಕ್ಟರ್ ಕೂಡ ಯಾರ್ರೀ ಯಾರ್ರೀ.. ಜಿ.ಟಿ.ಸರ್ಕಲ್.. ಬೇಗ ಇಳ್ಕೊಳ್ಳಿ... ಎಂದಾಗಲೇ ಲಗುಬಗೆಯಿಂದ ಪ್ರಯಾಣಿಕರು ಮಡಿಕೇರಿ ತಲುಪಿತೆಂದು ಬಸ್ ಇಳಿಯಲು ಆತುರರಾಗುತ್ತಾರೆ ಜಿ.ಟಿ. ಸರ್ಕಲ್ ಬಂತೆಂದರೆ ಮಡಿಕೇರಿಯನ್ನು ಕ್ಷೇಮವಾಗಿ ಸೇರಿದರೆಂದೇ ಅರ್ಥ.

ಹಲವಾರು ವರ್ಷಗಳಿಂದಲೂ ಜನರಲ್ ತಿಮ್ಮಯ್ಯ ಸರ್ಕಲ್ ಎಂಬುದು ಮಡಿಕೇರಿಯ ಪ್ರವೇಶ ಸ್ಥಳದಂತಿದೆ. ತಿಮ್ಮಯ್ಯ ಪ್ರತಿಮೆ ಬಳಿಯಿಂದಲೇ ಮಡಿಕೇರಿ ನಗರದೊಳಕ್ಕೆ ಪ್ರವೇಶಿಸಿದರೆ ಅದೇನೋ ರೋಮಾಂಚನ. ವೀರಸೇನಾನಿಯ ಪ್ರತಿಮೆ ಗಮನಿಸಿಕೊಂಡು ಮಡಿಕೇರಿ ಸೇರಿದ್ದೇವೆ ಎಂಬ ಸುರಕ್ಷತೆಯ ಭಾವನೆಯೊಂದಿಗೆ ನಗರದೊಳಕ್ಕೆ ಸ್ಥಳೀಯರು ಪ್ರವೇಶಿಸುತ್ತಿದ್ದರು. ತಿಮ್ಮಯ್ಯ ಸರ್ಕಲ್ ತಲುಪಿದೆವು ಎಂದಾದರೆ ಮಡಿಕೇರಿ ತಲುಪಿದೆವು ಎಂದೇ ಅರ್ಥ!

Untitled design (81)

ಸೇನಾ ದಿರಿಸಿನಲ್ಲಿ ಶಿಸ್ತುಬದ್ಧ ಅಧಿಕಾರಿಯಾಗಿ ನಿಂತಿರುವ ತಿಮ್ಮಯ್ಯ ಅವರ ಪ್ರತಿಮೆ ನಿಜಕ್ಕೂ ಕಣ್ಣನ ಸೆಳೆಯುವಂತಿದೆ. ಮಿರಮಿರನೆ ಮಿಂಚುವ ಲೋಹನಿರ್ಮಿತ ಪ್ರತಿಮೆಯು ಕೊಡಗಿನ ಸೇನಾ ಪರಂಪರೆಯನ್ನು ಸಾಕ್ಷೀಕರಿಸುತ್ತಿದೆ. ಕೊಡಗಿನವರ ಗತ್ತುಗೈರತ್ತಿನ ಪ್ರತಿಬಿಂಬದಂತೆ ತಿಮ್ಮಯ್ಯ ಅವರ ಶಿಸ್ತಿನ ಪ್ರತಿರೂಪದ ಮೂರ್ತಿ ಇಲ್ಲಿ ಕಂಗೊಳಿಸುತ್ತಿದೆ.

ನೀವು ಮೈಸೂರಿನಿಂದ ಮಂಗಳೂರು, ಸುಳ್ಯ, ಪುತ್ತೂರು, ಧರ್ಮಸ್ಥಳ ಅಥವಾ ಸುಳ್ಯ ಕಡೆಯಿಂದ ಕುಶಾಲನಗರ, ಹುಣಸೂರು, ಮೈಸೂರು, ಬೆಂಗಳೂರಿಗೆ ತೆರಳುವಾಗ ಮಡಿಕೇರಿಯಲ್ಲಿ ಈ ತಿಮ್ಮಯ್ಯ ಪ್ರತಿಮೆ ಬಳಿಯಿಂದಲೇ ಮುಂದೆ ಸಾಗಬೇಕು. ಮಡಿಕೇರಿ ನಗರದ ಪ್ರವೇಶದಲ್ಲಿಯೇ ವೀರತೆಯ ಸಂಕೇತವಾಗಿ ತಿಮ್ಮಯ್ಯ ಪ್ರತಿಮೆ ಸಂದರ್ಶಕರನ್ನು ಸ್ವಾಗತಿಸುತ್ತಿದೆ. ರಾತ್ರಿಯಲ್ಲಿ ವಿದ್ಯುದ್ದೀಪಾಲಂಕಾರದಿಂದಾಗಿ ತಿಮ್ಮಯ್ಯ ಪ್ರತಿಮೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸುತ್ತದೆ. ಮಡಿಕೇರಿಯ ಪ್ರಮುಖ ಪ್ರವಾಸಿ ಸ್ಥಳವಾಗಿ ಈ ಸರ್ಕಲ್ ಹೆಸರು ಪಡೆಯದೇ ಹೋದರೂ ಯಾವುದೇ ಪ್ರವಾಸಿ ತಾಣಗಳಿಗೆ ತೆರಳುವಾಗ ಈ ಸರ್ಕಲ್ ದಾಟಿಯೇ ಹೋಗಬೇಕು. ಹೀಗಾಗಿಯೇ ತಿಮ್ಮಯ್ಯ ಪ್ರತಿಮೆಗೆ ಪ್ರವಾಸಿಮಹತ್ವ ಬಂದಿದೆ.

ಪ್ರತಿಮೆ ಸ್ಥಾಪನೆಯ ಹಿಂದಿನ ಕಥೆ

ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದಾಗ ತಿಮ್ಮಯ್ಯ ಪ್ರತಿಮೆ ಸ್ಥಾಪನೆಯ ಕನಸು ಕಂಡಿದ್ದರು. ಮಿಲಿಟರಿಯಲ್ಲಿ ಜನರಲ್ ಆಗಿದ್ದ ತಿಮ್ಮಯ್ಯ ಅವರ ಪ್ರತಿಮೆ ಮಡಿಕೇರಿಯಲ್ಲಿರಲೇಬೇಕು ಎಂದು ನಾಣಯ್ಯ ಚಿಂತಿಸಿದ್ದರು. ಭಾರತದ ಯುವಜನತೆ ಮತ್ತು ಸೇನಾಪಡೆಯ ಅಧಿಕಾರಿಗಳು, ಸೈನಿಕರ ಪ್ರೀತಿಗೆ ಪಾತ್ರರಾಗಿದ್ದ ತಿಮ್ಮಯ್ಯ ಅವರ ಪ್ರತಿಮೆ ಕೊಡಗಿಗೆ ಅವಶ್ಯಕ ಎಂದು ನಾಣಯ್ಯ ಛಲ ತೊಟ್ಟಿದ್ದರು.

ಪುರಸಭೆಯ ಸದಸ್ಯರ ಅಂಗೀಕಾರ ಪಡೆದು ಪ್ರತಿಮೆ ಸ್ಥಾಪನೆಗೆ ಎಂ.ಸಿ.ನಾಣಯ್ಯ ಮುಂದಾದರು. ಪ್ರತಿಮೆ ಸ್ಥಾಪನೆಗೆ ಆರ್ಥಿಕ ನೆರವು ನೀಡುವವರೇ ಇಲ್ಲದೆ ಹತಾಶರಾದ ಸಂದರ್ಭ ಅಂದಿನ ರಾಜ್ಯಪಾಲ ಧರ್ಮವೀರ 10 ಸಾವಿರ ರು. ನೀಡಿದ್ದರಂತೆ. ಸೇನಾ ಸಮವಸ್ತ್ರದಲ್ಲಿ ತಿಮ್ಮಯ್ಯ ನಿಂತಿರುವ ಭಂಗಿಯ ಚಿತ್ರಕ್ಕಾಗಿ ಯು.ಎನ್.ಓ. ಸಂಸ್ಥೆಗೆ ಪತ್ರ ಬರೆದು ನಾಣಯ್ಯ ಕೋರಿದ ಸಂದರ್ಭ, ನಾಣಯ್ಯ ಯೋಜನೆ ಮೆಚ್ಚಿ ಯು.ಎನ್.ಓ.ದಿಂದ ತಿಮ್ಮಯ್ಯ ಅವರ ಸೇನಾ ಸಮವಸ್ತ್ರದಲ್ಲಿರುವ ಅನೇಕ ಚಿತ್ರಗಳು ಲಭಿಸುವಂತಾದವು.

ಮುಂಬೈನ ಖ್ಯಾತ ಶಿಲ್ಪಿ ವಾಗ್ ಅವರನ್ನು ಸಂಪರ್ಕಿಸಿ ಪ್ರತಿಮೆ ನಿರ್ಮಿಸಿಕೊಡುವಂತೆ ನಾಣಯ್ಯ ಕೋರಿದಾಗ, ಜನರಲ್ ತಿಮ್ಮಯ್ಯ ಬಗ್ಗೆ ಸದಭಿಪ್ರಾಯ ಹೊಂದಿದ್ದ ವಾಗ್ 50 ಸಾವಿರ ರು. ಸಂಭಾವನೆಯಲ್ಲಿ 20 ಸಾವಿರ ಕಮ್ಮಿ ಮಾಡಿ 30 ಸಾವಿರ ರು.ಗೆ ಹಿತ್ತಾಳೆ ಲೋಹದ ಪ್ರತಿಮೆ ನಿರ್ಮಿಸಿದರು. ಮುಂಬೈನಲ್ಲಿದ್ದ ಕೋದಂಡ ಕುಟುಂಬದ ಮಹಿಳೆಯರಿಬ್ಬರು ಪ್ರತಿಮೆ ನಿರ್ಮಾಣದ ಸಂದರ್ಭ ಉಸ್ತುವಾರಿ ವಹಿಸಿಕೊಂಡರು. ಇದಾದ 6 ತಿಂಗಳಿನಲ್ಲಿಯೇ ಕಂಚಿನ ಪ್ರತಿಮೆ ನಿರ್ಮಾಣಗೊಂಡಿತ್ತು.

ರಾಜ್ಯದ ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೖಷ್ಣ ಅವರನ್ನು ಭೇಟಿಯಾಗಿ ಹಿರಿಯ ಸೇನಾಧಿಕಾರಿ ಮಾಣಿಕ್ ಷಾ ಅವರನ್ನು ಪ್ರತಿಮೆ ಅನಾವರಣಕ್ಕೆ ಬರುವಂತೆ ನಾಣಯ್ಯ. ಮನವಿ ಮಾಡಿದ್ದರು.

1973 ರ ಮಾಚ್೯ 20 ರಂದು ಮಡಿಕೇರಿಯ ಹೖದಯಭಾಗದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಅನಾವರಣಗೊಂಡಿತ್ತು. ರಾಜ್ಯ ಸರಕಾರದ ಅತಿಥಿಯಾಗಿ ಮಡಿಕೇರಿಗೆ ತಿಮ್ಮಯ್ಯ ಪ್ರತಿಮೆ ಅನಾವರಣಕ್ಕೆ ಪತ್ನಿಯೊಂದಿಗೆ ಮಾಣಿಕ್ ಷಾ ಬಂದಿದ್ದರು. ಕಾರ್ಯಕ್ರಮದಲ್ಲಿ ಹೆಸರು ಹಾಕಲಿಲ್ಲ ಎಂಬ ಕಾರಣದಿಂದ ಅಂದಿನ ಮೂವರು ಶಾಸಕರೂ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ನಾಣಯ್ಯ ಸ್ಮರಿಸಿಕೊಳ್ಳುತ್ತಾರೆ. ಎರಡು ದಿನಗಳ ಕಾಲ ಮಡಿಕೇರಿಯಲ್ಲಿ ಇದ್ದ ಮಾಣಿಕ್ ಷಾ - ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ರೋಶನಾರ ಮನೆಗೂ ಭೇಟಿ ನೀಡಿದ್ದರಂತೆ. ಪ್ರತಿಮೆ ಅನಾವರಣದ ನಂತರದ ದಿನ ಫೀಲ್ಡ್ ಮಾಷ೯ಲ್ ಕಾರ್ಯಪ್ಪ ಕೂಡ ತಿಮ್ಮಯ್ಯ ಪ್ರತಿಮೆಗೆ ಪುಪ್ಪಾರ್ಚನೆ ಮಾಡಿ ನಮನ ಸಲ್ಲಿಸಿದ್ದರು.

Untitled design (83)

ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ. ಸರ್ಕಲ್ ಎಂದೇ ಕರೆಯಲ್ಪಡುವ ಈ ವೖತ್ತದಲ್ಲಿದ್ದ ತಿಮ್ಮಯ್ಯ ಪ್ರತಿಮೆ ಅಡಿಯಲ್ಲಿ ಅಂದು ಪ್ರತಿಮೆ ನಿರ್ಮಾಣಕ್ಕೆ ಕಾರಣರಾದ ಎಂ.ಸಿ.ನಾಣಯ್ಯ ಅವರ ಹೆಸರು ಇಲ್ಲವೇ ಇಲ್ಲ. ಎರಡು ವರ್ಷಗಳ ಕಾಲ ತಿಮ್ಮಯ್ಯ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ್ದ ಎಂ.ಸಿ.ನಾಣಯ್ಯ ತಮ್ಮ ಹೆಸರನ್ನು ಪ್ರತಿಮೆ ಸ್ಥಳದಲ್ಲಿ ದಾಖಲೆಯಾಗಿ ಹಾಕಿಕೊಳ್ಳಲು ಇಚ್ಛಿಸಲೇ ಇಲ್ಲ. ಜನರಲ್ ತಿಮ್ಮಯ್ಯ ಅವರ ಹೆಸರು ಇರುವುದು ಮುಖ್ಯವೇ ಹೊರತು ನನ್ನ ಹೆಸರಲ್ಲ ಎಂದು ನಾಣಯ್ಯ ಭಾವಿಸಿದ್ದರು. ಹೀಗಾಗಿ ಹೆಸರಿನ ಬಗ್ಗೆ ಆಸಕ್ತಿ ತೋರಲಿಲ್ಲ.

ಇದು ಇತಿಹಾಸದ ಕಥೆಯಾದರೆ ಎರಡು ವರ್ಷಗಳ ಹಿಂದೆ ಸರಕಾರಿ ಬಸ್ ಚಾಲಕನೋರ್ವ ಬೆಳ್ಳಂಬೆಳಗ್ಗೆ ಮಂಜುಮುಸುಕಿದ್ದ ಹಿನ್ನೆಲೆಯಲ್ಲಿ ರಸ್ತೆ ಕಾಣದೇ ಈ ಪ್ರತಿಮೆಗೆ ಬಸ್ ಡಿಕ್ಕಿ ಹೊಡೆಸಿ ಪ್ರತಿಮೆಗೆ ಹಾನಿ ಉಂಟು ಮಾಡಿದ್ದ. ಆಗಲೂ ಎಂ.ಸಿ. ನಾಣಯ್ಯ ಮತ್ತೆ ಪ್ರತಿಮೆಗೆ ಕಾಯಕಲ್ಪ ನೀಡಿ ಅದರ ಮರುಸ್ಥಾಪನೆಗೆ ಮಡಿಕೇರಿ ಕೊಡವ ಸಮಾಜದ ನೇತೖತ್ವದಲ್ಲಿ ಮುಂದಾದರು. ಪ್ರತಿಮೆ ಹಾನಿಯಾದ 180 ದಿನಗಳ ಬಳಿಕ ಮಡಿಕೇರಿಯಲ್ಲಿ ಕಾಯಕಲ್ಪಗೊಂಡ, ಸುಂದರವಾಗಿ ರೂಪುಗೊಂಡ ವೖತ್ತದ ಮಧ್ಯೆ ಮತ್ತೆ ತಿಮ್ಮಯ್ಯ ಪ್ರತಿಮೆ ಕಂಗೊಳಿಸುವಂತಾಯಿತು. ಅಯೋಧ್ಯೆಯ ಬಾಲರಾಮನನ್ನು ಕೆತ್ತಿದ್ದ ಮೈಸೂರಿನ ಅರುಣ್ ಯೋಗಿರಾಜ್ ಅವರೇ ತಿಮ್ಮಯ್ಯ ಪ್ರತಿಮೆಯನ್ನು ದುರಸ್ಥಿಗೊಳಿಸಿ ಮತ್ತೆ ಆಕರ್ಷಕವಾಗಿ ರೂಪುಗೊಳ್ಳಲು ಕಾರಣರಾದರು.

ಮಡಿಕೇರಿಯಲ್ಲಿ ಯಾವುದೇ ಸಂಭ್ರಮಾಚರಣೆ, ವಿಜಯೋತ್ಸವ, ಪ್ರತಿಭಟನೆ, ಬಂದ್, ಮಾನವ ಸರಪಳಿ ರಚನೆ.. ಹೀಗೆ ಕೊಡಗಿನ ಅಥವಾ ಮಡಿಕೇರಿಯ ಪ್ರಮುಖ ಘಟನೆಗಳಿಗೆ ಕೇಂದ್ರವಾಗಿರುವ ಮತ್ತು ಇಂಥ ಎಲ್ಲಾ ಘಟನೆಗಳಿಗೆ ಸಾಕ್ಷೀಭೂತವಾಗಿರುವ ತಿಮ್ಮಯ್ಯ ಪ್ರತಿಮೆಯನ್ನು ಗಮನಿಸಿ ಅನೇಕ ಪ್ರವಾಸಿಗರು ಪ್ರತಿಮೆ ಮುಂದೆ ಫೊಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ.

ಜಗತ್ತಿನ ಇತಿಹಾಸದಲ್ಲಿ ಸದಾ ಗೌರವದ ಪ್ರತೀಕವಾಗಿ, ವೀರಧೀರತೆಯ ಪ್ರತಿಬಿಂಬವಾಗಿ ದಾಖಲಾಗಿರುವ ಕೊಡಗಿನ ವರಪುತ್ರ, ಜನರಲ್ ತಿಮ್ಮಯ್ಯ ಅವರ ಮಹತ್ವವನ್ನು ಪ್ರತಿಮೆಯ ರೂಪದಲ್ಲಿ ನಮ್ಮ ಮನದೊಂದಿಗೆ ನೆಲಸಿರುವ ಶ್ರೇಷ್ಠ ಸೇನಾಧಿಕಾರಿಯನ್ನು ಸದಾ ಗೌರವಿಸಬೇಕು.

ಇದುವೇ ಜನರಲ್ ತಿಮ್ಮಯ್ಯ ಮತ್ತು ಭಾರತೀಯ ಸೇನಾನಿಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವ.