• ಸಿ.ಎ.ವಿಲಾಸ ನಾ ಹುದ್ದಾರ

2025ರ ವರ್ಷಾಂತ್ಯದ ಸಮಯ ಕಳೆಯಲು ಡಾ.ಮದುಸೂದನ ದಂಪತಿ ಆಹ್ವಾನದ ಮೇರೆಗೆ ನಾವು ಗಂಗಾವತಿಗೆ ಹೋಗಿದ್ದೆವು. ಆಗ ಅಲ್ಲೇ ಸುತ್ತಮುತ್ತಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗಿನ ಅನುಭವವೇ ಈ ಲೇಖನ.

ಕನಕಗಿರಿ

ಕನಕ ಎಂಬ ಮುನಿಯು ತಪಸ್ಸನ್ನು ಆಚರಿಸಿ ಬಂಗಾರದ ಮಳೆ ತರಿಸಿದ್ದಕ್ಕೆ ಈ ಊರಿಗೆ ಕನಕಗಿರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿ ಸಾಲಿಗ್ರಾಮ ರೂಪದ ನರಸಿಂಹ ಹುತ್ತದಲ್ಲಿದ್ದನು. ವಿಜಯನಗರದ ಸಾಮಂತ ಪರಪ್ಪನ ಆಕಳು ಅಲ್ಲಿ ಹಾಲನ್ನು ಕರೆದಾಗ ಪ್ರಕಟವಾದ ಎನ್ನಲಾಗಿದೆ. ಇಲ್ಲಿ ಶ್ರೀ ನರಸಿಂಹನ ದೇವಾಲಯವಿದ್ದು, ವಿಶಾಲವಾದ ಪ್ರಾಕಾರ, ನವರಂಗದಲ್ಲಿ ಸುಂದರವಾದ ಕೆತ್ತನೆಗಳು ಮತ್ತು ಮೇಲೆ ಸೀತಾ, ರಾಮ, ಲಕ್ಷ್ಮಣ, ಶೇಷಶಯನ ಮೊದಲಾದ ಬಣ್ಣದ ಗೊಂಬೆಗಳಿವೆ. ಈ ದೇವಾಲಯದ ಪಕ್ಕದಲ್ಲಿ ಲಕ್ಷಣ ದೇವಾಲಯವಿದ್ದು ಇದರ ಬದಿಯಲ್ಲಿ ನಿಂತ ಆಂಜನೇಯನ ಸುಂದರವಾದ ಮೂರ್ತಿ ಇರುವ ದೇವಾಲಯವಿದೆ.

ಇದನ್ನೂ ಓದಿ: ಬಾಲಿಯ ಹೊಸವರ್ಷಕ್ಕೆ ಕುಡಿತ, ಕುಣಿತಗಳಿಲ್ಲ

ವೆಂಕಟಪತಿ ಭಾವಿ

ಕನಕಗಿರಿಯಲ್ಲಿ 16ನೆಯ ಶತಮಾನದಲ್ಲಿ ವೆಂಕಟಪ್ಪನಾಯಕರು ನಿರ್ಮಿಸಿದ 30 ಮೆಟ್ಟಿಲುಗಳಿರುವ ಮೂರು ಮಹಡಿಯ ಭಾವಿ ಇದೆ. ಏತದ ಸಹಾಯದಿಂದ ನೀರನ್ನು ಮೇಲಕ್ಕೆತುವ ಸ್ಥಳ ಮತ್ತು ಹರಿಸಲು ಕಲ್ಲಿನ ಕಾಲುವೆಯೂ ಇದೆ. ಸುತ್ತಲೂ ಕಂಬಗಳಿದ್ದು, ಸುಂದರವಾದ ಕೆತ್ತನೆಗಳನ್ನು ಕಾಣಬಹುದು.

ನವವೃಂದಾವನ

ತುಂಗಾ ತೀರದಲ್ಲಿರುವ ದ್ವೀಪದಲ್ಲಿ ವೈಷ್ಣವ ಪಂಥದ 9 ಯತಿಗಳ ವೃಂದಾವನಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಕನಕದಾಸರು, ಪುರಂದರದಾಸರ ಗುರುಗಳಾದ ವ್ಯಾಸರಾಜತೀರ್ಥರ ವೃಂದಾವನ. ಅವತಾರತ್ರಯರಾದ ಭೀಮ, ಹನುಮ ಮತ್ತು ಮಧ್ವರ ಮೂರ್ತಿ ಇದೆ. ಸೂರ್ಯಾಸ್ತ ಸಮಯದಲ್ಲಿ ನದಿ ತೀರ ನಯನ ಮನೋಹರವಾಗಿ ಕಾಣಿಸುತ್ತದೆ. ಸುಗ್ರೀವ ಮತ್ತ ವಾಲಿ ನಡುವೆ ನಡೆದ ಕಾಳಗದ ಸ್ಥಳವೂ ಇಲ್ಲಿಂದ ಕಾಣಿಸುತ್ತದೆ.

Untitled design (50)

ಶಿಲಾ ಸಮಾಧಿಗಳು

ಹಿರೇಬೆಣಕಲ್ ಸಮೀಪ ಇರುವ ಮೋರೇರ ಗುಡ್ಡದಲ್ಲಿ 2800 ವರ್ಷಗಳಿಗೂ ಪುರಾತನ ಶಿಲಾ ಸಮಾಧಿಗಳು, ವರ್ಣ ಚಿತ್ರಗಳು ಇವೆ. ಈ ಪ್ರದೇಶ ಯುನೆಸ್ಕೋದ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆ ಆಗಿದೆ. ಅಂದಿನ ಕಾಲದ ಶವ ಸಂಸ್ಕಾರ ಪದ್ದತಿಯನ್ನು ತಿಳಿಸುತ್ತವೆ. ಶವದ ಸುತ್ತಲೂ ಕಲ್ಲಿನ ಚಪ್ಪಡಿಗಳು ಇದ್ದು, ಇದರ ನಡುವೆ ಶವದ ಅವಶೇಷಗಳನ್ನು ಇಡಲಾಗುತ್ತಿತ್ತು. ಇಲ್ಲಿ ಒಟ್ಟು ಮೂರೂ ಚಾರಣ ಯೋಗ್ಯ ತಾಣಗಳಿವೆ.

ಪಂಪಾ ಸರೋವರ

ವಿಶಾಲವಾದ ಪಂಪಾ ಸರೋವರದ ಪಕ್ಕದಲ್ಲಿ ಶಬರಿ ಗುಹೆ ಇದ್ದು, ಇಲ್ಲಿಯೇ ಶಬರಿಯು ಶ್ರೀ ರಾಮನನ್ನು ಭೇಟಿಯಾದಳು. ಇಲ್ಲಿ ದೇವಿ (ಪಾರ್ವತಿ) ಗುಡಿಯೂ ಇದ್ದು ಕೋತಿಗಳ ಸಮೂಹವೇ ಕಂಡು ಬರುತ್ತದೆ.

ಸಣಾಪುರ ಲೇಕ್

ಇದೊಂದು ಸುಂದರವಾದ ಬೋಟಿಂಗ್ ಮಾಡುವ ವ್ಯವಸ್ಥೆ ಇರುವ ನದಿ. ತುಂಗಭದ್ರಾ ನದಿಯೇ ಇಲ್ಲಿ ಸಣಾಪುರ ನದಿ (ಸಣಾಪುರ ಲೇಕ್‌) ಎಂದು ಕರೆಸಿಕೊಳ್ಳುತ್ತದೆ. ಹಿನ್ನೀರಿನಲ್ಲಿ ಪ್ರವಾಸಿಗರು ಮೀನುಗಳನ್ನು ಹಿಡಿಯುತ್ತಿರುವ ದೃಶ್ಯ ಕಂಡುಬಂತು.

ಹಂಪಿ

ಹಂಪಿಯಲ್ಲಿ ವಿರೂಪಾಕ್ಷ ದೇವಾಲಯ ಮತ್ತು ತಿರುವುಮುರುವು ಆಗಿ ಕಾಣುವ ಗೋಪುರವನ್ನು ಮೊದಲಿಗೆ ನೋಡಿದೆವು. ಆಮೇಲೆ 18 ಅಡಿಗಳ ಏಕಶಿಲಾ ಕಡಲೆ ಕಾಳು ಗಣಪ, 12 ಅಡಿ ಎತ್ತರದ ಸಾಸಿವೆ ಕಾಳು ಗಣಪತಿಗಳನ್ನು, 22 ಅಡಿ ಎತ್ತರವಿರುವ ಉಗ್ರ ನರಸಿಂಹ ವಿಗ್ರಹವನ್ನು ಮತ್ತು ಅದರ ಪಕ್ಕಕ್ಕೇ ಬಡವಿ ಲಿಂಗವನ್ನು ವೀಕ್ಷಿಸಿದೆವು. ನಂತರ ಎತ್ತರದ ಗೋಡೆಗಳಿಂದ ಆವೃತವಾದ ಕಮಲ್‌ ಮಹಲ್, ವಸ್ತು ಸಂಗ್ರಹಾಲಯ, ರಾಣಿ ನಿವಾಸ, ಮೂರು ಕಾವಲು ಗೋಪುರಗಳು, ಗಜಶಾಲೆ ನೋಡಿದೆವು.

Untitled design (49)

ವಿಜಯವಿಠ್ಠಲ ದೇವಾಲಯ

ಇಲ್ಲಿನ ವಿಶಾಲವಾದ ಆವರಣದಲ್ಲಿ ಸಂಗೀತ ಮಂಟಪ, ಭಜನೆ ಮಂಟಪ, ಸಭಾ ಮಂಟಪ, ಕಲ್ಯಾಣ ಮಂಟಪ ಎಂಬ ನಾಲ್ಕು ಮಂಟಪಗಳಿವೆ. ಪ್ರಸಿದ್ಧ ಕಲ್ಲಿನ ರಥವೂ ಇಲ್ಲಿಯೇ ಇದೆ. ಅಲ್ಲಿಯ ಕೆಲವು ಕಲಾಕೃತಿಗಳನ್ನು ಕಪ್ಪು, ಕೆಂಪು, ಹಳದಿ, ಹಸಿರು ವರ್ಣಗಳನ್ನು ಬಳಸಿ ಕೆತ್ತಿರುವುದು ಕಂಡು ಬಂದಿತು. ಮುಂದೆ ಇರುವ ಆನೆಯ ಹಿಂಭಾಗದಲ್ಲಿ ಕುದುರೆಯ ಬಾಲದ ಅವಶೇಷವಿದ್ದು ರಥದ ಮುಂದೆ ಕುದುರೆಗಳು ಇದ್ದವೆಂದು ಧೃಡಪಡಿಸುತ್ತದೆ. ಸಂಗೀತ ಮಂಟಪದ ಕೆಲವು ಸ್ತಂಭಗಳು ಶಿಥಲವಾಗಿದ್ದರಿಂದ ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಲ್ಲಿ ರಾಮಾಯಣದ ದೃಶ್ಯಗಳು, ಶಾಸನಗಳೂ ಇವೆ.

ಯಂತ್ರೋದ್ಧಾರಕ ಆಂಜನೇಯ

ಈ ದೇವಸ್ಥಾನವು ಚಕ್ರತೀರ್ಥದ ದಂಡೆಯ ಮೇಲೆ ಇದೆ. ಶ್ರೀ ವ್ಯಾಸರಾಜರಿಗೆ ಸತತವಾಗಿ 12 ದಿನ ಹನುಮಂತನು ಜಪಮಾಡುವಾಗ ದರ್ಶನ ನೀಡಿ ಕಣ್ಣು ತೆರೆಯುತ್ತಲೇ ಅದೃಶ್ಯನಾಗುತ್ತಿದ್ದ. 13ನೆಯ ದಿನ ಶ್ರೀ ವ್ಯಾಸರಾಜರು ಅಂಗಾರದಿಂದ ಬಂಡೆಯಮೇಲೆ ಷಟ್ಕೋನ ನಿರ್ಮಿಸಿ ಅದರಲ್ಲಿ ಆಂಜನೇಯನನ್ನು ಬಂಧಿಸಿದ್ದರು ಎನ್ನಲಾಗಿದೆ. ಇಲ್ಲಿ ಹನುಮಂತನು ಪದ್ಮಾಸನದಲ್ಲಿದ್ದು, ಬಾಲವೇ ಕಿರೀಟವಾಗಿದೆ. ಬಲಗೈಯಲ್ಲಿ ಜಪಮಾಲೆ ಇದ್ದರೆ ಎಡಗೈ ನಾಭಿಗೆ ಸಮನಾಗಿದೆ. ಹಣೆಯಲ್ಲಿ ತಿಲಕ, ಕರ್ಣಕುಂಡಲಗಳನ್ನು, ಭುಜದಮೇಲೆ ಆಭರಣಗಳನ್ನೂ ಧರಿಸಿದ್ದಾನೆ. ಷಟ್ಕೋನದ ಸುತ್ತಲೂ ವೃತ್ತವಿದ್ದು 51 ಕಮಲದ ದಳಗಳಿಂದ ಆವೃತವಾಗಿದೆ. ಸುತ್ತಲೂ 12 ಕಪಿಗಳು ತನ್ನ ಹಿಂದಿನ ಕಪಿಯನ್ನು ನೋಡುತ್ತ ಮುಂದಿನ ಕಪಿಯ ಬಾಲವನ್ನು ಹಿಡಿದ ಚಿತ್ರವಿದೆ. ಒಂದು ಕೋಟಿ ಬೀಜಾಕ್ಷರಗಳನ್ನು ಬರೆಯಲಾಗಿದೆ.

ಮರಳಿ ಬರುವಾಗ ಸೀತಾ ಸೆರಗು, ಸುಗ್ರೀವನ ಗುಹೆ, ಶ್ರೀ ರಘುನಂದನ ತೀರ್ಥರ ವೃಂದಾವನ, 60 ಕಂಬಗಳಿರುವ ಪುರಂದರದಾಸರು ಧ್ಯಾನ ಮಾಡುತ್ತಿದ್ದ ಪುರಂದರ ಮಂಟಪವನ್ನು ಕಣ್ತುಂಬಿಕೊಂಡೆವು.

Untitled design (52)

ಅಂಜನಾದ್ರಿ ಬೆಟ್ಟ

ಈ ಬೆಟ್ಟದ ಹಿಂದಿನಿಂದ ಏರಿದರೆ ಸುಮಾರು 450 ಮೆಟ್ಟಿಲುಗಳಿವೆ. ಇದು ಆಂಜನೇಯನ ಜನ್ಮಸ್ಥಳ ಎನ್ನಲಾಗಿದೆ. ಈ ಬೆಟ್ಟದ ಮೇಲೆ ನೆಲೆಸಿರುವ ಹನುಮಂತನು ಬಲಕ್ಕೆ ಮುಖಮಾಡಿ ಅತೀ ಸುಂದರವಾಗಿದ್ದು, ನೋಡುತ್ತಿದ್ದಂತೆಯೇ ಭಕ್ತಿ-ಭಾವ ಸ್ಪುರಿಸುತ್ತದೆ. ಪಕ್ಕದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣನ ದೇವಾಲಯವಿದ್ದರೆ ಎದುರುಗಡೆ ಹನುಮಂತನ ತಾಯಿ ಅಂಜನಾದೇವಿಯ ದೇವಸ್ಥಾನವಿದೆ.

ಇನ್ನೂ ಸಾಕಷ್ಟು ಮಹತ್ವದ ತಾಣಗಳು ಅಲ್ಲೇ ಆಸುಪಾಸಿನಲ್ಲಿವೆ. ಸುತ್ತಾಡಲು ಸಾಕಷ್ಟು ಸಮಯ ಬೇಕಷ್ಟೆ.