ಬಾಗಲಕೋಟೆಗೆ ಒಂದು ಟೂರು ಅವಕಾಶ ಹತ್ತಾರು
ಸತಾರಾದ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಬಾಗಲಕೋಟೆ ಅವರ ನಂತರ ಮೈಸೂರು ಅರಸರು, ನಂತರ ಬ್ರಿಟಿಷರ ಬಾಂಬೆ ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟು ಸ್ವಾತಂತ್ರ್ಯ ನಂತರ ರಾಜ್ಯ ಪುನರ್ ವಿಂಗಡನೆ ಕಾಯ್ದೆಯಿಂದ ಅವಿಭಜಿತ ಬಿಜಾಪುರ ಜಿಲ್ಲೆಯ ಭಾಗವಾಗಿ ಮೈಸೂರು ರಾಜ್ಯಕ್ಕೆ ಸೇರಿಕೊಂಡಿತು. ಮುಂದೆ 1997 ರಲ್ಲಿ ಬಿಜಾಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಬಾಗಲಕೋಟೆ ಸ್ವತಂತ್ರ ಜಿಲ್ಲೆಯಾಯಿತು. ಹೀಗೆ ನೂರಾರು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ವಿಭಿನ್ನ ಸಂಸ್ಕೃತಿಯ ಸೊಗಡನ್ನು ತನ್ನ ಮಣ್ಣಲ್ಲಿ ಬೆರೆಸಿಕೊಂಡಿತು.
- ಅಶ್ವಿನಿ ಕುಲಕರ್ಣಿ
ಯಾವುದಾದರೂ ಸ್ಥಳಕ್ಕೆ ಪ್ರವಾಸ ಹೊರಟಾಗ ಅಥವಾ ಯಾವುದೋ ಕೆಲಸದ ನಿಮಿತ್ತ ಯಾವುದೋ ಒಂದು ಊರಿಗೆ ಹೋಗಬೇಕಾಗಿ ಬಂದಾಗ ಸಮಯದ ಅಭಾವ ಇಲ್ಲದಿದ್ದರೆ ಅಲ್ಲಿಯೇ ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬರುವುದು ಮತ್ತು ಆ ಊರಿನ ವಿಶೇಷತೆಗಳನ್ನು ನೋಡಿ, ತಿಳಿದು, ಸವಿದು, ಫೋನಿನ ಗ್ಯಾಲರಿ ಮತ್ತು ಮನಸಿನ ಮೆಮೊರಿ ಎರಡನ್ನು ಭರ್ತಿ ಮಾಡಿಕೊಂಡು ಬರುವುದು ಪ್ರವಾಸ ಪ್ರಿಯರ ಸಾಮಾನ್ಯ ಅಭ್ಯಾಸ. ಅದರಲ್ಲೂ ಹೊರಟ ಒಂದು ಊರಿನ ಸುತ್ತವೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿದ್ದರೆ? ಒಂದೇ ಪ್ರವಾಸ ಹಲವಾರು ವಿಶೇಷ ಅಲ್ಲವೇ? ಬಾಗಲಕೋಟೆ ಇಂಥ ಅವಕಾಶಗಳನ್ನು ನೀಡುವ ಜಿಲ್ಲೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲದು. ಇಲ್ಲಿ ಇತಿಹಾಸ ಪ್ರಿಯರು, ಕ್ಷೇತ್ರಯಾತ್ರೆ ಬಯಸುವ ಹಿರಿಯರು, ಸೀರೆ ಪ್ರಿಯರು, ಹಾಗೂ ಮಕ್ಕಳು ಎಲ್ಲರಿಗೂ ಅವಕಾಶಗಳಿವೆ.
ಇದನ್ನೂ ಓದಿ: ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ!
ಒಂದೇ ಊರು ಕಟ್ಟಿ ಆಳಿದವರು ಹತ್ತಾರು
ಗಂಡು ಮೆಟ್ಟಿದ ನೆಲ ಉತ್ತರ ಕರ್ನಾಟಕದ ಬಯಲು ಸೀಮೆಯ ಊರು ಬಾಗಲಕೋಟೆ. ಹೆಸರಲ್ಲೇ ಕೋಟೆ ಇದ್ದಮೇಲೆ ಇದರ ಇತಿಹಾಸವು ಸ್ವಾರಸ್ಯಕರವಾಗಿ ಇರುತ್ತದೆ. ತ್ರೇತಾಯುಗದಿಂದ ಈ ಊರಿನ ಇತಿಹಾಸ ತೆರೆದುಕೊಳ್ಳುತ್ತದೆ. ಲಂಕಾಧಿಪತಿ ರಾವಣ ತನ್ನ ಆಸ್ಥಾನದ ಸಂಗೀತಗಾರರಿಗೆ ಈ ಪ್ರದೇಶವನ್ನ ದಾನವಾಗಿ ಕೊಟ್ಟಿದ್ದ ಎನ್ನಲಾಗುತ್ತದೆ. ಎರಡನೆಯ ಶತಮಾನದಲ್ಲಿ ಗ್ರೀಕ್ ಖಗೋಳಶಾಸ್ತ್ರಜ್ಞ ಟಾಲೇಮಿಯ ಗ್ರಂಥಗಳಲ್ಲಿ ಬಾದಾಮಿ, ಇಂಡಿ, ಕಲ್ಕೇರಿಗಳ ಉಲ್ಲೇಖವಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಕನ್ನಡದ ಹೆಮ್ಮೆಯ ರಾಜಮನೆತನ ಚಾಲುಕ್ಯರೊಂದಿಗೆ ಬೆಸೆದುಕೊಂಡಿದೆ. ಆಗ ಬಾಗಲಕೋಟೆಯ ಹೆಸರು ಬಾಗಡಿಗೆ ಎಂಬುದಾಗಿತ್ತು. ಇದೊಂದು ಪ್ರಮುಖ ವ್ಯಾಪಾರಿ ಕೇಂದ್ರ ಆಗಿತ್ತು.

ಚಾಲುಕ್ಯರ ನಂತರ ಹೊಯ್ಸಳರು, ಚೋಳರು, ಪಾಂಡ್ಯರು, ದೇವಗಿರಿಯ ಯಾದವರು, ಮಹಮ್ಮದ್ ಬಿನ್ ತುಘಲಕ್, ಅಲ್ಲಾವುದ್ದೀನ್ ಖಿಲ್ಜಿ, ವಿಜಯನಗರದ ಅರಸರು ಹೀಗೆ ಹಲವರು ಈ ಪ್ರದೇಶಗಳನ್ನು ಆಳಿದ್ದಾರೆ. ಚಾಲುಕ್ಯರ ಕಾಲದಲ್ಲಿ ಆಡಳಿತ ಕೇಂದ್ರವಾಗಿದ್ದ ಪ್ರದೇಶ ಮುಂದೆ ಬೇರೆ ಬೇರೆ ಆಡಳಿತಗಾರರ ಕೈಯಲ್ಲಿ ತುಸು ಸೊರಗಿತು. ಆದರೆ ಮತ್ತೆ ಯೂಸಿಫ್ ಆದಿಲ್ ಷಾ ಆದಿಲ್ ಶಾಹಿ ವಂಶವನ್ನು ಸ್ಥಾಪಿಸಿ ಬಿಜಾಪುರವನ್ನು ರಾಜಧಾನಿಯಾಗಿ ಮಾಡಿಕೊಂಡ ನಂತರ ಮತ್ತೆ ಈ ಪ್ರದೇಶ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಎರಡನೆಯ ಇಬ್ರಾಹಿಂ ಆದಿಲ್ ಷಾ ಈ ಬಾಗಲಕೋಟೆ ನಗರವನ್ನು ತನ್ನ ಮಗಳಿಗೆ ಉಡುಗೊರೆಯಾಗಿ ಕೊಟ್ಟಿದ್ದ ಎನ್ನಲಾಗಿದೆ. ಆದಿಲ್ ಶಾಹಿಗಳ ಪ್ರಾಬಲ್ಯ ಕಡಿಮೆಯಾದ ನಂತರ ಸತಾರಾದ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಬಾಗಲಕೋಟೆ ಅವರ ನಂತರ ಮೈಸೂರು ಅರಸರು, ನಂತರ ಬ್ರಿಟಿಷರ ಬಾಂಬೆ ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟು ಸ್ವಾತಂತ್ರ್ಯ ನಂತರ ರಾಜ್ಯ ಪುನರ್ ವಿಂಗಡನೆ ಕಾಯ್ದೆಯಿಂದ ಅವಿಭಜಿತ ಬಿಜಾಪುರ ಜಿಲ್ಲೆಯ ಭಾಗವಾಗಿ ಮೈಸೂರು ರಾಜ್ಯಕ್ಕೆ ಸೇರಿಕೊಂಡಿತು. ಮುಂದೆ 1997 ರಲ್ಲಿ ಬಿಜಾಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಬಾಗಲಕೋಟೆ ಸ್ವತಂತ್ರ ಜಿಲ್ಲೆಯಾಯಿತು. ಹೀಗೆ ನೂರಾರು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ವಿಭಿನ್ನ ಸಂಸ್ಕೃತಿಯ ಸೊಗಡನ್ನು ತನ್ನ ಮಣ್ಣಲ್ಲಿ ಬೆರೆಸಿಕೊಂಡಿತು. ಆದರೂ ಆದಿಲ್ ಶಾಹಿ ಹಾಗೂ ಪೇಶ್ವೆಗಳ ಆಡಳಿತದ ಪ್ರಭಾವ ಈ ಪ್ರದೇಶಗಳ ಸಂಸ್ಕೃತಿಯ ಮೇಲೆ ದಟ್ಟವಾಗಿ ಕಾಣಬಹುದು.
ಬಾಗಲಕೋಟೆಯ ಪ್ರೇಕ್ಷಣೀಯ ಸ್ಥಳಗಳು
ವಿಶ್ವ ಪ್ರಸಿದ್ಧ ಬಾದಾಮಿಯ ಗುಹಾಂತರ ದೇವಾಲಯಗಳು, ಅಗಸ್ತ್ಯ ತೀರ್ಥ, ಅಗಸ್ತ್ಯತೀರ್ಥದ ಎದುರಿಗಿರುವ ಬೆಟ್ಟದಿಂದ ಮಳೆಗಾಲದಲ್ಲಿ ಧುಮ್ಮಿಕ್ಕುವ ಸಣ್ಣ ನೀರಿನ ಝರಿ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಾಗೂ ನಾಗರ ಶೈಲಿ ಹಾಗೂ ದ್ರಾವಿಡ ಶೈಲಿಗಳು ಮಿಳಿತವಾಗಿರುವ ವೇಸರ ಶೈಲಿಯ ಪಟ್ಟದಕಲ್ಲು ಹಾಗೂ ಐಹೊಳೆಯ ದೇವಾಲಯಗಳು, ಮಹಾಕೂಟದ ಶಿವ ದೇವಾಲಯ ಮತ್ತು ಅಲ್ಲಿನ ದೇವಾಲಯಗಳ ಸಮಚ್ಚಯ, ಬಸವಣ್ಣನವರ ಹುಟ್ಟೂರು ಬಸವನ ಬಾಗೇವಾಡಿಯ ಇಂಗಳಗಿ ಹಾಗೂ ಲಿಂಗೈಕ್ಯರಾದ ಸ್ಥಳ ಕೂಡಲಸಂಗಮ. ಸಂಗಮನಾಥನ ಮಂದಿರ, ಕೃಷ್ಣ ಹಾಗೂ ಮಲಪ್ರಭೆಯ ಸಂಗಮದ ಮಧ್ಯದಲ್ಲಿರುವ ಬಸವಣ್ಣನವರ ಸಮಾಧಿ ಮಂದಿರ, ಆಲಮಟ್ಟಿಯಲ್ಲಿ ಕಟ್ಟಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಆಣೆಕಟ್ಟು, ಅಲ್ಲಿ ನಿರ್ಮಿಸಲಾದ ಬೃಹತ್ ಉದ್ಯಾನವನಗಳು, ಆಂಜನೇಯ ದೇವರ ತೀರ್ಥಕ್ಷೇತ್ರಗಳಾದ ಎಲಗೂರು, ತುಳಸಿಗೇರಿ ಅಚನೂರು ಎಂಬ ಎಂಬ ಮೂರು ಪ್ರಸಿದ್ಧ ಕ್ಷೇತ್ರಗಳು ಬಾಗಲಕೋಟೆ ಜಿಲ್ಲೆಯಲ್ಲಿಯೇ ಇವೆ. ಈ ಮೂರನ್ನು ದೇವಾಲಯಗಳನ್ನು ಒಂದೇ ದಿನ ಸಂದರ್ಶಿಸಿದರೆ ಕಾಶಿಯಾತ್ರೆಯ ಫಲ ದೊರೆಯುತ್ತದೆ ಎಂಬ ಪ್ರತೀತಿಯೂ ಇದೆ. ಶಾಕಾಂಬರಿ ಶಕ್ತಿ ಪೀಠದ ಶ್ರೀ ಬನಶಂಕರಿ ದೇವಿಯು ಇಲ್ಲಿಯೇ ನೆಲೆ ನಿಂತಿದ್ದಾಳೆ.

ಊರಿಗೆ ಬಂದವರು ಸೀರೆ ಖರೀದಿಗೆ ಬರದೇ ಇರ್ತಾರ?
ಇಲ್ಲಿಗೆ ಬಂದ ನಾರಿಯರು ಸೀರೆ ಖರೀದಿಸದೆ ಹೋಗುವುದುಂಟೆ? ಜಿಐ ಟ್ಯಾಗ್ ಹೊಂದಿರುವ ಇಳಕಲ್ ಸೀರೆಗಳ ತವರೂರು ಬಾಗಲಕೋಟೆ. ರೇಷ್ಮೆಯ ನೂಲಿನಲ್ಲಿ ಸುಂದರ ಬಣ್ಣಗಳಲ್ಲಿ ದಪ್ಪದ ಜರಿಯ ಅಂಚು ಹೊದಿರುವ ಮೆತ್ತಗಿನ ಇಳಕಲ್ ಸೀರೆ ಎಲ್ಲ ಮಹಿಳೆಯರ ಸಂಗ್ರಹಗಳಲ್ಲಿ ಇರಲೇಬೇಕಾದ ಸೀರೆ. ಸೀರೆ ಅಷ್ಟೇ ಸಾಕೆ ಇಷ್ಟೊಂದು ವಿಶಿಷ್ಟ ಸೀರೆಗೆ ವಿಶಿಷ್ಟ ಕುಪ್ಪಸವೂ ಬೇಕಲ್ಲ. ಇಲ್ಲಿನ ಗುಳೇದಗುಡ್ಡ ರವಿಕೆಯ ಖಣ ಈಗಂತೂ ಬಹಳಷ್ಟು ಟ್ರೆಂಡಿಂಗ್. ಹಸಿರು, ನೀಲಿ, ಕಪ್ಪು, ಕೆಂಪು, ಕಂದು ಹಾಗೂ ನೇರಳೆ ಬಣ್ಣಗಳ ಸುಂದರವಾದ ಈ ಖಣಗಳು ಎಲ್ಲ ಸೀರೆಗೂ ಹೊಂದುವ ಹಾಗೂ ಉಟ್ಟ ಸೀರೆಗೆ ಒಂದು ವಿಶಿಷ್ಟ ಮೆರುಗನ್ನು ನೀಡುತ್ತವೆ. ಬರಿ ಇಳಕಲ್ ಸೀರೆಯ ಬಗ್ಗೆ ಹೇಳಿದರೆ ಸಾಕೆ ಇಲ್ಲಿನ ರಬಕವಿ, ಬನಹಟ್ಟಿಗಳು ಸಹ ಸೀರೆಯ ಮಗ್ಗಗಳಿಗೆ ತುಂಬಾನೇ ಪ್ರಖ್ಯಾತಿ ಪಡೆದಿದೆ. ಇಲ್ಲಿಯ ಮಗ್ಗಗಳಲ್ಲಿ ನೇಯ್ದು ಸೀರೆಗಳು ಅವುಗಳ ವಿನ್ಯಾಸವು ಸಹ ಅಷ್ಟೇ ಚೆಂದವಾಗಿರುತ್ತವೆ.
ಭೋಜನಕ್ಕೂ ಒಂದು ಪ್ರವಾಸ ಮಾಡಬಹುದು
ಅಮೀನಗಡದ ಸ್ವಾದಿಷ್ಟವಾದ ಪುಟಾಣಿ ಹಿಟ್ಟಿನ ಕರದಂಟು, ಗಲಗಲಿಯ ರುಚಿಕರವಾದ ಪೇಡಾ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸೇತುವೆಯಂತಿರುವ ಗಟ್ಟಿ ಕೆನೆ ಮೊಸರು, ಇವುಗಳ ಸ್ವಾಧವನ್ನು ಸವಿಯದೆ ಹೋದರೆ ಈ ಜಿಲ್ಲೆಯ ಪ್ರವಾಸವೇ ಅಪೂರ್ಣ ಎಂದುಕೊಳ್ಳಿ. ಇದಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಮುಖ್ಯ ಆಹಾರ ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಕಾಳಿನ ಪಲ್ಯ, ನೀರು ಜುಣಕ, ಜುಣಕದವಡಿ ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಶೇಂಗಾ ಹೋಳಿಗೆ, ಮಿರ್ಚಿ ಬಜಿ, ಕಾಂಧಾ ಬಜಿ, ಚುರುಮುರಿ ಸುಸಲಾ, ಅವಲಕ್ಕಿ ಸೂಸಲಾ ಹಾಗೂ ಬಿಸಿ ಬಿಸಿ ಜೋಳದ ರೊಟ್ಟಿ ಮುಟಗಿ ಸೇರಿ ನೂರಾರು ವಿಧದ ಸ್ವಾದಿಷ್ಟ ಉತ್ತರ ಕರ್ನಾಟಕದ ವ್ಯಂಜನಗಳನ್ನು ನೀವಿಲ್ಲಿ ಸವಿಯಲೇಬೇಕು.

ಬಾಗಲಕೋಟೆ ಮುಳುಗೆದ್ದು ಗೆದ್ದ ಕಥೆ
ಕರ್ನಾಟಕ ಸರ್ಕಾರದ ಪ್ರಮುಖ ಹಾಗೂ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣ ಮೇಲ್ದಂಡೆ ಯೋಜನೆಗಾಗಿ ವಿಜಯಪುರ ಹಾಗೂ ಬಾಗಲಕೋಟೆಯ ಜಿಲ್ಲೆಯ ಅಂಚಿನಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ಶಂಕು ಸ್ಥಾಪನೆ ಮಾಡಿದ್ದರು. ನಂತರ ಈ ಯೋಜನೆ ಹಂತ ಹಂತವಾಗಿ ಪೂರ್ಣಗೊಳ್ಳುತ್ತಿದ್ದಂತೆ ಬಾಗಲಕೋಟೆ ನಗರದ ಬಹುಭಾಗ ಸೇರಿ ಸುತ್ತಮುತ್ತಲ ನೂರಾರು ಹಳ್ಳಿಗಳು ಕೃಷ್ಣೆಯ ಹಿನ್ನೀರಿನಲ್ಲಿ ಮುಳುಗಿ ಕೃಷ್ಣಾರ್ಪಣಗೊಂಡವು. ನೂರಾರು ಹಳ್ಳಿಗಳ ಫಲವತ್ತಾದ ಕೃಷಿ ಭೂಮಿ, ನೂರಾರು ವರ್ಷಗಳ ಹಿಂದೆ ಕಟ್ಟಿದ ದೇವಾಲಯಗಳು, ತಲತಲಾಂತರದಿಂದ ಬದುಕಿ ಬಾಳಿದ ಮನೆಗಳು, ಹುಟ್ಟಿ ಆಡಿ ಬೆಳೆದ ಬಾಲ್ಯದ ನೆನಪಿನ ಹಾದಿಬೀದಿಗಳು ಎಲ್ಲವೂ ಕೃಷ್ಣೆಯ ಒಡಲಿನಲ್ಲಿ ಮಣ್ಣಾಗಿ ಹೋದವು. ಲಕ್ಷಾಂತರ ಜನ ಗಂಟು ಮೂಟೆ ಕಟ್ಟಿಕೊಂಡು ಊರು ಕೇರಿ ತೊರೆದು ಮತ್ತೆ ಹೊಸ ಊರಿಗೆ ಹಳೆಯ ಹೆಸರು ಕೊಟ್ಟು ಹಳೆಯ ನೆನಪುಗಳ ಅಡಿಪಾಯದ ಮೇಲೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಈ ದೊಡ್ಡ ಯೋಜನೆಯ ಪ್ರಮುಖ ಫಲಾನುಭವಿ ಗುಲ್ಬರ್ಗ ಜಿಲ್ಲೆ. ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೂ ನೀರಾವರಿ ಒದಗಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ. ನಾಡಿನ ಇಂಥ ಪ್ರಮುಖ ಯೋಜನೆಗೆ ತ್ಯಾಗ ಮಾಡಿದ ಹೆಮ್ಮೆ ನಮ್ಮ ಜಿಲ್ಲೆಯದ್ದು. ಆದರೆ, ಸರಕಾರ ಕಲ್ಪಿಸಿಕೊಟ್ಟ ಪುನರ್ವಸತಿ ಯೋಜನೆಯಡಿ ಮತ್ತೆ ಚೆಂದದ ನಗರ ನಿರ್ಮಾಣವಾಯಿತು. ಭಾರತದಲ್ಲಿ ಚಂಡಿಗಡ ನಂತರ ಹಾಗೂ ಅದೇ ಮಾದರಿಯಲ್ಲಿ ಅತ್ಯಂತ ಯೋಜನಾಬದ್ಧವಾಗಿ ನಿರ್ಮಾಣಗೊಂಡ ಎರಡನೆಯ ನಗರ ನಮ್ಮ ಬಾಗಲಕೋಟೆಯ ನವನಗರ. ಮುಳುಗಿದ ಹಾಗೂ ಮತ್ತೆ ಮೇಲಿದ್ದು ಗೆದ್ದ ಜಿಲ್ಲೆ ನಮ್ಮದು ಎನ್ನುವ ಸಂತಸ ನನ್ನದು.