• ಮೇಘನಾ ಕಾನೇಟ್ಕರ್

ಕೆಲವು ಪ್ರವಾಸಗಳಿಗೆ ಹೋಗಿ ಬಂದನಂತರ ಮತ್ತದೇ ನಿತ್ಯದ ಜಂಜಾಟಗಳಲ್ಲಿ ದಿನಗಳು ಉರುಳುತ್ತವೆ. ಆದರೆ ಕೆಲವು ಪ್ರವಾಸ ಮಾತ್ರ ಎಷ್ಟೇ ದಿನಗಳು ಕಳೆದರೂ ಮನಸಿನಿಂದ ಮಾಸುವುದಿಲ್ಲ. ಹಾವೇರಿಯ ಪ್ರವಾಸ ನನಗೆ ನೀಡಿದ್ದು ಅಂಥದ್ದೇ ಒಂದು ಅನುಭವ. ಅಲ್ಲಿನ ಪ್ರಾಚೀನ ದೇವಾಲಯಗಳು, ಕಲ್ಲಿನ ಕಂಬಗಳು, ಕೋಟೆಯ ಅವಶೇಷಗಳು, ಹಸಿರು ಹೊಲಗಳು, ಜನರ ಮಾತಿನ ಅಪ್ಪಟ ಜವಾರಿ ಸೊಗಡು, ಎಲ್ಲವೂ ಮನಸಿನ ಪುಟದಲ್ಲಿ ಒಂದೊಂದು ನೆನಪಾಗಿ ಉಳಿದುಬಿಡುತ್ತವೆ. ಅದರಲ್ಲೂ ಇತಿಹಾಸದ ಪುಸ್ತಕಗಳಲ್ಲಿ ಓದಿದ್ದ ಸಂಗತಿಗಳು ಕಣ್ಣೆದುರೇ ಜೀವಂತವಾದಾಗ ಉಂಟಾಗುವ ಆನಂದವೇ ಬೇರೆ.

ಇದನ್ನೂ ಓದಿ: ಸೈಕ್ಲಿಂಗ್‌ ಜರ್ನಿಗೆ ವಯಸ್ಸಿನ ಹಂಗಿಲ್ಲ

ಒಂದು ಭಾಗ ಬಯಲಸೀಮೆ ಮತ್ತೊಂದು ಭಾಗ ಅರೆ ಮಲೆನಾಡಿನಂತೆ ತೋರುವ ಹಾವೇರಿಯ ನೆಲದಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆಲ್ಲ, ಈ ಊರು ಎಷ್ಟು ಹಳೆಯ ನೆನಪುಗಳನ್ನು ತನ್ನ ಒಡಲೊಳಗೆ ಕಾಪಿಟ್ಟುಕೊಂಡಿದೆ ಎಂಬುದು ಅರಿವಾಗುತ್ತದೆ. ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಸೇರಿದಂತೆ ಹಲವು ಸಾಮಂತ ಅರಸರ ಆಳ್ವಿಕೆಯನ್ನು ಕಂಡ ಈ ಭಾಗದ ದೇವಾಲಯಗಳು ಇಂದಿಗೂ ಗತಕಾಲದ ಕಥೆ ಸಾರುತ್ತಿವೆ. ಬಂಕಾಪುರದ ನಾಗರೇಶ್ವರ ದೇವಾಲಯಕ್ಕೆ (ಅರವತ್ತು ಕಂಬಗಳ ಗುಡಿ) ಹೋದಾಗ ಅಲ್ಲಿನ ಕಂಬಗಳನ್ನು ನೋಡುತ್ತ ಎಷ್ಟು ಹೊತ್ತು ನಿಂತಿದ್ದೆನೋ ನನಗೇ ಗೊತ್ತಿಲ್ಲ. ಒಂದೊಂದು ಕಂಬದಲ್ಲೂ ಎಂಥ ಸೂಕ್ಷ್ಮ ಕೆತ್ತನೆ! ಕಲ್ಲನ್ನು ಇಷ್ಟು ಸುಂದರವಾಗಿ ರೂಪಿಸಿದ ಆ ಶಿಲ್ಪಿಗಳ ಕೈಯಲ್ಲಿ ಎಂಥ ಕಲ್ಪನೆ, ಎಂಥ ತಾಳ್ಮೆ ಇದ್ದಿರಬಹುದು ಎಂದು ಯೋಚಿಸುತ್ತಿದ್ದರೆ, ಸಮಯ ಸಾಗುವುದೇ ತಿಳಿಯುವುದಿಲ್ಲ.

Untitled Design - 2026-10-27T120724.038

ದೇವಾಲಯಗಳ ಸೌಂದರ್ಯ

ಹಾವೇರಿಯ ಸಿದ್ಧೇಶ್ವರ ದೇವಾಲಯ, ಹಾನಗಲ್ಲಿನ ತಾರಕೇಶ್ವರ, ಚೌಡಯ್ಯದಾನಪುರದ ಮುಕ್ತೇಶ್ವರ ದೇವಾಲಯ, ಗಳಗನಾಥದ ಗಳಗೇಶ್ವರ ದೇವಾಲಯ, ರಟ್ಟೀಹಳ್ಳಿಯ ಕದಂಬೇಶ್ವರ ದೇವಾಲಯ, ಇವುಗಳ ಹೆಸರು ಕೇಳುವಾಗಲೇ ಈ ನೆಲದ ಕಲಾ ಶ್ರೀಮಂತಿಕೆ ನೆನಪಾಗುತ್ತದೆ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ಸೌಂದರ್ಯ, ತನ್ನದೇ ಆದ ಕಥೆಯಿದೆ. ದೇವರ ದರ್ಶನಕ್ಕೆ ಹೋದಾಗ ಭಕ್ತಿಯಿಂದ ಕೈಮುಗಿಯುವುದು ಸಹಜ, ಆದರೆ ಅಲ್ಲಿ ಶಿಲೆಯಲ್ಲಿ ಅರಳಿರುವ ಕಲೆಯನ್ನು ನೋಡಿದಾಗ ಆ ಕಲಾವಿದರಿಗೆ ಮನಸಿನಲ್ಲೇ ಒಂದು ನಮಸ್ಕಾರ ಸಲ್ಲಿಸಬೇಕೆನಿಸುತ್ತದೆ. ಇವತ್ತು ನಮ್ಮ ಕಣ್ಣಿಗೆ ಕಾಣುವ ಈ ಶಿಲ್ಪಗಳ ಹಿಂದೆ ಅದೆಷ್ಟೋ ಜನರ ಶ್ರಮವಿದೆ, ಎಷ್ಟೋ ತಲೆಮಾರುಗಳ ಬದುಕಿದೆ ಎನ್ನುವುದನ್ನು ನೆನಪಿಸಿಕೊಂಡಾಗ ಮನಸು ತುಂಬಿ ಬರುತ್ತದೆ.

ಈ ದೇವಾಲಯಗಳ ಮಂಟಪಗಳಲ್ಲಿ ಹಿಂದೆ ಎಷ್ಟು ಜನ ಕುಳಿತು ಮಾತನಾಡಿರಬಹುದು, ಎಷ್ಟು ಭಕ್ತಿಗೀತೆಗಳು ಮೊಳಗಿರಬಹುದು, ಎಷ್ಟು ಕವಿಗಳು ಕಾವ್ಯಗಳನ್ನು ವಾಚಿಸಿರಬಹುದು! ಈ ಯೋಚನೆ ಬಂದಾಗ ಇತಿಹಾಸವೆಂದರೆ ರಾಜರ ಯುದ್ಧಗಳ ಕಥೆಯಷ್ಟೇ ಅಲ್ಲ, ನಮ್ಮ ಹಿರಿಯರು ಬದುಕಿದ ರೀತಿಯ ಗುರುತು ಎನಿಸುತ್ತದೆ. ಶಿಶುನಾಳ ಶರೀಫರ ತತ್ತ್ವಪದಗಳನ್ನು ಕೇಳಿದಾಗಲೂ, ಕನಕದಾಸರ ಕೀರ್ತನೆಗಳನ್ನು ಹಾಡಿದಾಗಲೂ ಈ ನಾಡಿನ ಸಂಸ್ಕೃತಿಯ ಆಳ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ಕಾವ್ಯ, ಸಂಗೀತ, ಭಕ್ತಿ, ಜನಪದ, ಇವೆಲ್ಲವೂ ಇಲ್ಲಿ ಜನರ ಬದುಕಿನೊಳಗೇ ಹಾಸುಹೊಕ್ಕಾಗಿವೆ.

ಊರು, ಸಂಸ್ಕೃತಿ ಮತ್ತು ಜನರು

ಬಂಕಾಪುರಕ್ಕೆ ಹೋದಾಗ ಕೋಟೆಯ ಅವಶೇಷಗಳು ಮನಸಿನಲ್ಲಿ ಒಂದು ರೀತಿಯ ನಿಶ್ಶಬ್ದವನ್ನು ಉಂಟುಮಾಡುತ್ತವೆ. ಒಮ್ಮೆ ಎಷ್ಟೋ ಚಟುವಟಿಕೆಗಳಿಂದ ತುಂಬಿದ್ದ ಈ ಜಾಗದಲ್ಲಿ ಇಂದು ಗತಕಾಲದ ಗುರುತುಗಳು ಮಾತ್ರ ಉಳಿದಿವೆ ಎಂದು ಯೋಚಿಸಿದಾಗ, ಬದುಕಿನ ಬದಲಾವಣೆಗಳ ಬಗ್ಗೆ ಸಹಜವಾಗಿಯೇ ಚಿಂತನೆ ಹೆಚ್ಚುತ್ತದೆ. ಅದೇ ಬಂಕಾಪುರದ ನವಿಲು ಸಂರಕ್ಷಣಾ ಧಾಮದಲ್ಲಿ ನವಿಲುಗಳನ್ನು ನೋಡಿದಾಗ ಮನಸು ಮತ್ತೆ ಹಗುರಾಗುತ್ತದೆ. ಹಸಿರಿನ ನಡುವೆ ನವಿಲು ಗರಿಬಿಚ್ಚಿದರೆ ಅದನ್ನು ನೋಡುತ್ತ ತನ್ಮಯರಾಗಬೇಕು ಅನಿಸುತ್ತದೆ. ಕೈಯಲ್ಲಿರುವ ಮೊಬೈಲ್‌ನಲ್ಲಿ ಚಿತ್ರ ಸೆರೆಹಿಡಿಯುವುದಕ್ಕಿಂತ ಆ ಕ್ಷಣವನ್ನು ಕಣ್ಣಲ್ಲೇ ತುಂಬಿಕೊಂಡು ಎದೆಯಲ್ಲಿ ಬಚ್ಚಿಟ್ಟುಕೊಳ್ಳಬೇಕು ಅನಿಸುತ್ತದೆ. ಇತಿಹಾಸದ ಗಾಂಭೀರ್ಯದ ನಡುವೆ ಪ್ರಕೃತಿ ಕೊಡುವ ಇಂಥ ಸಣ್ಣಪುಟ್ಟ ಸಂತೋಷಗಳೇ ಪ್ರವಾಸವನ್ನು ಮರೆಯಲಾಗದ ಅನುಭವವನ್ನಾಗಿಸುತ್ತವೆ.

Untitled Design - 2026-10-27T120728.509

ಹೀಗೆ ಸುತ್ತಿ ಬಂದ ಹಾವೇರಿಯನ್ನು ನೆನಪಿಸಿಕೊಂಡಾಗ ಅಲ್ಲಿನ ಮಣ್ಣಿನ ಘಮ ಮನಸಿಗೆ ಉಲ್ಲಾಸ ತರುತ್ತದೆ. ಬ್ಯಾಡಗಿ ಮೆಣಸಿನಕಾಯಿ ಎಂದರೆ ಅದರ ಬಣ್ಣ, ಘಮ ಮತ್ತು ರುಚಿಯ ವಿಶಿಷ್ಟ ಗುಣಗಳು ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಹೆಗ್ಗುರುತು ಮೂಡಿಸಿದೆ. ಅಕ್ಕಿ ಆಲೂರಿನ ಸಣ್ಣ ಅಕ್ಕಿಗೂ ತನ್ನದೇ ಆದ ಖ್ಯಾತಿಯಿದೆ. ‘ಏಲಕ್ಕಿ ಕಂಪಿನ ನಾಡು’ ಎಂಬ ಬಿರುದಿನೊಂದಿಗೆ ಹಾವೇರಿಯ ಹೆಸರನ್ನು ಕೇಳಿದಾಗ, ಈ ನೆಲದ ಕೃಷಿ ಕೊಡುಗೆ ತಿಳಿದು ಗರ್ವ ಮೂಡುತ್ತದೆ. ಇನ್ನು ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ, ಖಾರದ ಮಿರ್ಚಿ ಭಜಿ, ಇಂಥ ಜವಾರಿ ಊಟ ಚಪ್ಪರಿಸುವಾಗ ಹೊಟ್ಟೆ ತುಂಬುವುದಷ್ಟೇ ಅಲ್ಲ, ಆ ನೆಲದ ಬದುಕಿನ ರುಚಿಯೂ ನಾಲಗೆಯಲ್ಲಿ ಬಹುಕಾಲ ಉಳಿಯುತ್ತದೆ. ಉತ್ತರ ಕರ್ನಾಟಕದ ಜನರು ಮಾತನಾಡುವಾಗ ಪರಿಚಯವಿಲ್ಲದವರನ್ನೂ ತಮ್ಮವರಂತೆ ಕಾಣುವ ಆ ಗುಣ ಮನಸಿನಲ್ಲಿ ಅಚ್ಚೊತ್ತುತ್ತದೆ.

ಹೇಗೆ ಹೋಗಬಹುದು?

ಇಷ್ಟೆಲ್ಲಾ ಹೇಳುವಾಗ ನಿಮಗೂ ಒಮ್ಮೆ ಹಾವೇರಿಗೆ ಹೋಗಿ ಬರಬೇಕು ಅನಿಸುತ್ತಿದೆಯಲ್ಲವೇ? ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಮಾರ್ಗವಾಗಿ ಹಾವೇರಿಯತ್ತ ಸಾಗುವ ರಸ್ತೆ ಪ್ರಯಾಣವೇ ಉತ್ತರ ಕರ್ನಾಟಕದ ನೆಲದ ಪರಿಚಯ ಮಾಡಿಕೊಡುತ್ತದೆ. ರೈಲಿನಲ್ಲಿ ಹಾವೇರಿಗೆ ತಲುಪಬಹುದು, ಬಸ್‌ಗಳ ಮೂಲಕವೂ ಜಿಲ್ಲೆಯ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಬಹುದು. ಹಾವೇರಿಯನ್ನು ಕೇಂದ್ರವಾಗಿಟ್ಟುಕೊಂಡು ಹಾನಗಲ್, ಬಂಕಾಪುರ, ಗಳಗನಾಥ, ರಟ್ಟೀಹಳ್ಳಿ ಮತ್ತು ಚೌಡಯ್ಯದಾನಪುರದತ್ತ ಸಾಗಿದರೆ ಒಂದೊಂದು ಊರು ತನ್ನದೇ ಕಥೆಯನ್ನು ತೆರೆದಿಡುತ್ತದೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಹೊಲಗಳಾಗಲಿ, ಚಳಿಗಾಲದ ಹಿತವಾದ ವಾತಾವರಣವಾಗಲಿ, ಈ ಭಾಗವನ್ನು ಇನ್ನಷ್ಟು ಆಪ್ತವಾಗಿ ಅನುಭವಿಸಲು ನೆರವಾಗುತ್ತವೆ. ಆದರೆ ನನ್ನ ಪಾಲಿಗೆ ಪ್ರವಾಸದ ಸೌಂದರ್ಯ ಒಂದು ನಿರ್ದಿಷ್ಟ ಋತುವಿಗೆ ಸೀಮಿತವಲ್ಲ; ಮನಸ್ಸು ಹೊಸತನ್ನು ನೋಡಲು ಸಿದ್ಧವಾಗಿರುವಾಗ ಪ್ರತಿಯೊಂದು ಪ್ರಯಾಣವೂ ಸುಂದರವೇ.

Untitled Design - 2026-10-27T120732.938

ಹಾವೇರಿಯಿಂದ ಮರಳುವಾಗ ಪ್ರವಾಸಿಗರ ಮೊಬೈಲ್ನಲ್ಲಿ ಛಾಯಾಚಿತ್ರಗಳಷ್ಟೇ ಉಳಿಯುವುದಿಲ್ಲ, ಶಿಲೆಯಲ್ಲಿ ಅರಳಿದ ಕಲೆ, ಕವಿಗಳಲ್ಲಿ ಮೊಳಗಿದ ಭಕ್ತಿ, ರೈತನ ಪರಿಶ್ರಮದ ಸಮೃದ್ಧ ಬೆಳೆಗಳು, ಮತ್ತು ಜನರ ಮಾತಿನ ಆತ್ಮೀಯತೆಯೂ ಮನದ ಪುಟದಲ್ಲಿ ನೆಲೆಯಾಗುತ್ತವೆ. ಇಲ್ಲಿ ಇತಿಹಾಸವು ಗತಕಾಲದ ಕಥೆಯಾಗಿ ಉಳಿಯದೆ, ವರ್ತಮಾನದ ಬದುಕಿನೊಂದಿಗೆ ಮಾತಾಡುತ್ತದೆ. ಹಾವೇರಿಯನ್ನು ನೀವು ಒಮ್ಮೆ ನೋಡಬಹುದು, ಆದರೆ ಅದರ ಮಣ್ಣಿನ ಘಮ, ಶಿಲ್ಪಗಳ ಮೌನಗಾನ ಮತ್ತು ಜನಪದದ ಇಂಪನ್ನು ಮನಸ್ಸು ಬಹುಕಾಲ ಮರೆಯಲಾರದು.