ಪ್ರಕೃತಿಯ ಮಡಿಲಲ್ಲಿ ಮಲಗಿರುವ, ದಟ್ಟ ಕಾಡು, ಜಲಪಾತಗಳು, ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಕ್ಷೇತ್ರಗಳ ನೆಲೆವೀಡಾದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ. ಇಂಥ ಸುಂದರ ಜಿಲ್ಲೆಯನ್ನು ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಉನ್ನತ ಸ್ಥಾನಕ್ಕೇರಿಸಲು ದೂರದೃಷ್ಟಿಯಿಂದ ಶ್ರಮಿಸುತ್ತಿರುವ ನಾಯಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ ಬಿ.ವೈ. ರಾಘವೇಂದ್ರ. ಶಿವಮೊಗ್ಗವನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ಮಾರ್ಪಡಿಸಲು ಅವರು ರೂಪಿಸಿರುವ ಬೃಹತ್ ಯೋಜನೆಗಳು, ಮೂಲಸೌಕರ್ಯ ಕ್ರಾಂತಿಯ ಸಮಗ್ರ ಚಿತ್ರಣ ಇಲ್ಲಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಮೂಲಸೌಕರ್ಯ ವಿಕಾಸ

ಮಲೆನಾಡಿನ ನಿಸರ್ಗ ಸೌಂದರ್ಯವನ್ನು ವಿಶ್ವಕ್ಕೆ ಪರಿಚಯಿಸಲು ಮತ್ತು ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸಲು ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶತಕೋಟಿ ರೂಪಾಯಿಗಳ ಬೃಹತ್ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಪ್ರಕೃತಿ ಸೌಂದರ್ಯದ ಜತೆಗೆ ಸಾಹಸ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ ಮತ್ತು ಕರಾವಳಿ-ಮಲೆನಾಡು ಜೋಡಣೆಗೆ ಅಭೂತಪೂರ್ವ ವೇಗ ನೀಡಲಾಗಿದೆ.

Untitled design (91)

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಅಂಬಾರಗೋಡ್ಲು - ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾಗಿದ್ದು 2.44 ಕಿಮೀ. ಉದ್ದದ ಮತ್ತು 16 ಮೀಟರ್ ಅಗಲದ ಸೇತುವೆಯು ಭಾರತದ ಅತ್ಯಂತ ಸುಂದರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕೇಬಲ್ ಆಧಾರಿತ ಸೇತುವೆಗಳಲ್ಲಿ ಒಂದಾಗಿದೆ. ಇದು ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಜೇನು ಕೃಷಿ ಹಾಗೂ ಪ್ರವಾಸೋದ್ಯಮದ ಹೊಸ ದಾರಿ

ಸಂಪರ್ಕ ಕ್ರಾಂತಿ: ಪ್ರವಾಸೋದ್ಯಮದ ಜೀವಾಳ

ಯಾವುದೇ ಪ್ರವಾಸಿ ತಾಣ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದರೆ ಸುಲಭ ಹಾಗೂ ವೇಗದ ಸಾರಿಗೆ ಸಂಪರ್ಕ ಅತ್ಯಗತ್ಯ. ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ವಾಯು, ರೈಲು ಮತ್ತು ರಸ್ತೆ ಸಾರಿಗೆ ಮೂರರಲ್ಲೂ ಐತಿಹಾಸಿಕ ಕ್ರಾಂತಿಯನ್ನೇ ತಂದಿದ್ದಾರೆ.

ಕುವೆಂಪು ವಿಮಾನ ನಿಲ್ದಾಣ ಮತ್ತು 'ನೈಟ್ ಲ್ಯಾಂಡಿಂಗ್' ಸೌಲಭ್ಯ

ಕೇಂದ್ರ ಸರ್ಕಾರದ 'ಉಡಾನ್' ಯೋಜನೆಯಡಿಯಲ್ಲಿ ದೇಶದಲ್ಲೇ ಯಶಸ್ವಿ ವಿಮಾನ ನಿಲ್ದಾಣವಾಗಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ ಹೊರಹೊಮ್ಮಿದೆ. ದೇಶಾದ್ಯಂತ ಮಂಜೂರಾದ 128 ಮಾರ್ಗಗಳಲ್ಲಿ 118 ಮಾರ್ಗಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅದರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕೊಡುಗೆ ಗಣನೀಯವಾಗಿದೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 'ನೈಟ್ ಲ್ಯಾಂಡಿಂಗ್' (ರಾತ್ರಿ ವೇಳೆಯ ವಿಮಾನ ಇಳಿಯುವಿಕೆ) ಸೌಲಭ್ಯ ಶೀಘ್ರವೇ ಪೂರ್ಣಗೊಳ್ಳಲಿದ್ದು, ಇದರಿಂದ ಮುಂಬೈ, ದೆಹಲಿಯಂಥ ದೇಶದ ಮಹಾನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಹಾದಿ ಸುಗಮವಾಗಲಿದೆ. ಇದು ಜಾಗತಿಕ ಪ್ರವಾಸಿಗರನ್ನು ಹಾಗೂ ಉದ್ಯಮಿಗಳನ್ನು ಶಿವಮೊಗ್ಗಕ್ಕೆ ಆಕರ್ಷಿಸಲು ಪ್ರಮುಖ ಮೈಲಿಗಲ್ಲಾಗಲಿದೆ.

ಬೃಹತ್ ರೈಲ್ವೇ ಜಾಲ ಮತ್ತು ವಂದೇ ಭಾರತ್ ರೈಲು ಕನಸು

ಮಲೆನಾಡಿನ ದಶಕಗಳ ರೈಲು ಕನಸುಗಳನ್ನು ನನಸು ಮಾಡಲು ಸಂಸತ್ತಿನಲ್ಲಿ ನಿರಂತರ ಧ್ವನಿ ಎತ್ತಿರುವ ಬಿ.ವೈ. ರಾಘವೇಂದ್ರ ಅವರು, ಕರ್ನಾಟಕಕ್ಕೆ ಈ ಬಾರಿ ದಾಖಲೆಯ ₹ 7,748 ಕೋಟಿ ರೈಲ್ವೇ ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುಪಿಎ ಆಡಳಿತಾವಧಿಗೆ ಹೋಲಿಸಿದರೆ ನರೇಂದ್ರ ಮೋದಿ ಅವರ ಸರಕಾರದಲ್ಲಿ ಕರ್ನಾಟಕಕ್ಕೆ ಸಿಗುತ್ತಿರುವ ರೈಲ್ವೇ ಅನುದಾನ ಬರೋಬ್ಬರಿ ಒಂಬತ್ತು ಪಟ್ಟು ಹೆಚ್ಚಾಗಿದೆ.

  • ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ: ಈ ಯೋಜನೆಯು 50:50 ವೆಚ್ಚ ಹಂಚಿಕೆಯಲ್ಲಿ ವೇಗವಾಗಿ ಪ್ರಗತಿಯಲ್ಲಿದ್ದು, ಶೇಕಡಾ 75 ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ರೈತರಿಗೆ ₹ 100 ಕೋಟಿ ಪರಿಹಾರ ವಿತರಿಸಲಾಗಿದ್ದು, ಶೀಘ್ರದಲ್ಲೇ ಎರಡನೆಯ ಹಂತದ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
  • ಕೋಟಿಗಂಗೂರು ಕೋಚಿಂಗ್ ಟರ್ಮಿನಲ್: ಶಿವಮೊಗ್ಗದಲ್ಲಿ ಬಹುನಿರೀಕ್ಷಿತ 'ವಂದೇ ಭಾರತ್' ರೈಲು ಸಂಚಾರ ಆರಂಭಿಸಲು ಕೋಟಿಗಂಗೂರಿನಲ್ಲಿ ನಿರ್ಮಿಸಲಾಗುತ್ತಿರುವ ಕೋಚಿಂಗ್ ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವುದು ಅಗತ್ಯವಾಗಿದೆ. ಇಲ್ಲಿ ರೈಲು ತಪಾಸಣೆ, ನಿರ್ವಹಣೆ ಹಾಗೂ ಪ್ಲಾಟ್‌ಫಾರ್ಮ್ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ.
  • ತೀರ್ಥಹಳ್ಳಿ, ಸೊರಬ ಮತ್ತು ಶೃಂಗೇರಿಗೆ ರೈಲು ಸಂಪರ್ಕ ಬೇಡಿಕೆ: ಕುವೆಂಪು ಅವರ ಜನ್ಮಭೂಮಿ ತೀರ್ಥಹಳ್ಳಿ, ಶೃಂಗೇರಿ, ಮಲೆನಾಡು ಹಾಗೂ ಕರಾವಳಿಯನ್ನು ಜೋಡಿಸುವ ರೈಲು ಮಾರ್ಗದ ಸಮೀಕ್ಷೆಯನ್ನು ವೇಗಗೊಳಿಸಲು ಸಂಸತ್ತಿನಲ್ಲಿ ಮನವಿ ಮಾಡಲಾಗಿದೆ. ಹಾಗೆಯೇ ತಾಳಗುಪ್ಪ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ಮಾರ್ಗವನ್ನು ಸೊರಬದ ಮೂಲಕ ಹಾದುಹೋಗುವಂತೆ ಮಾಡುವ ಮೂಲಕ ಅರಣ್ಯ ನಾಶ ತಡೆದು ಸಾರ್ವಜನಿಕ ಸಾರಿಗೆಗೆ ಹಸಿರು ನಿಶಾನೆ ತೋರಲಾಗಿದೆ.
  • ಬೀರೂರು - ಶಿವಮೊಗ್ಗ ಜೋಡಿ ರೈಲು ಮಾರ್ಗ (ಡಬ್ಲಿಂಗ್): ಮಾರ್ಗ ಸಾಮರ್ಥ್ಯ ಹೆಚ್ಚಿಸಲು ಬೀರೂರು - ಶಿವಮೊಗ್ಗ ನಡುವೆ ರೈಲ್ವೇ ದ್ವಿಪಥ ನಿರ್ಮಾಣಕ್ಕೆ ಸಂಸದರು ರೈಲ್ವೇ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
Untitled design (93)

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಶರಾವತಿ ಹಿನ್ನೀರು ಸೇತುವೆಗಳು

ಮಲೆನಾಡಿನ ಕಠಿಣ ಭೌಗೋಳಿಕ ಪರಿಸರದಲ್ಲಿ ಸುಗಮ ಸಂಚಾರ ಕಲ್ಪಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ನೆರವಿನಿಂದ ಸಾವಿರಾರು ಕೋಟಿ ರುಪಾಯಿಗಳ ಹೆದ್ದಾರಿ ಯೋಜನೆಗಳು ನಡೆಯುತ್ತಿವೆ.

  • ಶರಾವತಿ ಹಿನ್ನೀರು ಸೇತುವೆಗಳು (ಬೆಕ್ಕೋಡಿ ಸೇತುವೆ): ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸುತ್ತಮುತ್ತಲ ರಸ್ತೆ ಅಭಿವೃದ್ಧಿಗಾಗಿ ಒಟ್ಟು 13.832 ಕಿಮೀ. ಮರು-ಜೋಡಣೆ ಯೋಜನೆಗೆ ₹ 313.56 ಕೋಟಿ ಮಂಜೂರಾಗಿದೆ. 16 ಮೀಟರ್ ಅಗಲದ ಅತ್ಯಾಧುನಿಕ ವಿನ್ಯಾಸದ ಎರಡು ಬೃಹತ್ ಸೇತುವೆಗಳು ಮಲೆನಾಡಿನ ಸಾರಿಗೆ ಚಿತ್ರಣವನ್ನೇ ಬದಲಿಸಲಿವೆ.
  • ಎನ್‌ಹೆಚ್-206 ಹಾಗೂ ಎನ್‌ಹೆಚ್-169: ತುಮಕೂರು-ಹೊನ್ನಾವರ ಚತುಷ್ಪಥ, ಶಿವಮೊಗ್ಗ-ಮಂಗಳೂರು (ತೀರ್ಥಹಳ್ಳಿ-ಆಗುಂಬೆ ಬೈಪಾಸ್), ಶಿವಮೊಗ್ಗ-ಚಿತ್ರದುರ್ಗ ಎನ್‌ಹೆಚ್-13 ರಸ್ತೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.
  • ಆಗುಂಬೆ ಘಾಟ್ ವಿಕಾಸ: ಪ್ರಸಿದ್ಧ ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಗೆ ₹ 400 ಕೋಟಿ ಕಾಯ್ದಿರಿಸಲಾಗಿದ್ದು, ಪರಿಸರ ಸಮತೋಲನ ಕಾಯ್ದುಕೊಂಡು ಸುಸ್ಥಿರ ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಶೈಕ್ಷಣಿಕ ಹಾಗೂ ವಿಜ್ಞಾನ ಪ್ರವಾಸೋದ್ಯಮಕ್ಕೆ ಹೊಸ ಮೆರುಗು: 'ವಿಜ್ಞಾನ ಕೇಂದ್ರ - ೨'

ಪ್ರವಾಸೋದ್ಯಮವೆಂದರೆ ಕೇವಲ ನಿಸರ್ಗ ವೀಕ್ಷಣೆಯಷ್ಟೇ ಅಲ್ಲ, ಅದು ಜ್ಞಾನಾರ್ಜನೆಯ ಕೇಂದ್ರವೂ ಹೌದು. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಆವರಣದ 5 ಎಕರೆ ವಿಶಾಲ ಪ್ರದೇಶದಲ್ಲಿ ₹10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ 'ವಿಜ್ಞಾನ ಕೇಂದ್ರ -2' ಕಟ್ಟಡ ನಿರ್ಮಾಣವಾಗುತ್ತಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.

Untitled design (95)

ನಗರಾಭಿವೃದ್ಧಿ ಮತ್ತು ಪ್ರವಾಸಿ ಸೌಲಭ್ಯಗಳು

ಶಿವಮೊಗ್ಗ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಸುಗಮ ಸಂಚಾರ ಕಲ್ಪಿಸಲು ನಗರ ಮೂಲಸೌಕರ್ಯಕ್ಕೂ ವಿಶೇಷ ಒತ್ತು ನೀಡಲಾಗಿದೆ:

  • ಸ್ಕೈವಾಕ್ ಮತ್ತು ಅಂಡರ್‌ಪಾಸ್ ಯೋಜನೆಗಳು: ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತಗಳಲ್ಲಿ ಅಂಡರ್‌ಪಾಸ್ ಹಾಗೂ ಹೊಸ ಆಲೋಚನೆಯ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ.
  • ಫ್ರೀಡಂ ಪಾರ್ಕ್ ಮತ್ತು ಸಿ.ಆರ್.ಎಫ್. ರಸ್ತೆಗಳು: ನಗರದ ಮಧ್ಯಭಾಗದಲ್ಲಿರುವ ಫ್ರೀಡಂ ಪಾರ್ಕ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೈಪಾಸ್ ಮತ್ತು ಒಳಸಂಚಾರ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಸಂಪರ್ಕ ವ್ಯವಸ್ಥೆ ವಿಸ್ತರಣೆ: ಗ್ರಾಮೀಣ ಭಾಗದಲ್ಲಿ ಬಲಿಷ್ಠ ಸಂಪರ್ಕ ಜಾಲಕ್ಕಾಗಿ ಸಿ.ಆರ್.ಎಫ್ ಮತ್ತು ಬಿಎಸ್ಎನ್‌ಎಲ್ ಮೂಲಕ 232 ಟವರ್‌ಗಳ ಪೈಕಿ 180 ಟವರ್‌ ಈಗಾಗಲೇ ಪೂರ್ಣಗೊಳಿಸಿದ್ದು ಇನ್ನು 52 ಟವರ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ.

ಭವಿಷ್ಯದ ದೃಷ್ಟಿಕೋನ: 'ವಿಕಸಿತ ಶಿವಮೊಗ್ಗ'ದಿಂದ 'ವಿಕಸಿತ ಭಾರತ'

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ನಾಲ್ಕನೆಯ ಬಾರಿಗೆ ಸಂಸದರಾಗಿರುವ ಅವರು ಹಲವಾರು ಅಭಿವೃದ್ಧಿ ಕಾರ್ಯಗಳ ಪೈಕಿ ಪ್ರವಾಸೋದ್ಯಮಕ್ಕೆ ಗರಿಷ್ಠ ಆದ್ಯತೆ ನೀಡಿರುವುದು ಅಂಕಿಅಂಶಗಳಿಂದಲೇ ತಿಳಿದುಬರುತ್ತದೆ. ಜೋಗ ಜಲಪಾತ, ಕೊಡಚಾದ್ರಿ, ಸಿಗಂದೂರು, ಕುಂದಾದ್ರಿ, ಮಂಡಗದ್ದೆ ಪಕ್ಷಿಧಾಮ, ತ್ಯಾವರೆಕೊಪ್ಪ, ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಹಾಗೂ ಕರಾವಳಿಯ ಮರವಂತೆ-ಸೋಮೇಶ್ವರ ಬೀಚ್‌ಗಳನ್ನು ಒಂದೇ ಪ್ರವಾಸಿ ಸರ್ಕ್ಯೂಟ್ ಅಡಿಯಲ್ಲಿ ತಂದು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವುದು ಪ್ರವಾಸೋದ್ಯಮದ ನಿರೀಕ್ಷೆಯೂ ಹೌದು, ಸಂಸದರ ಗುರಿಯೂ ಹೌದು.

‘ವಿಜ್ಞಾನ ಕೇಂದ್ರದ ಉದ್ದೇಶ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ, ಕ್ರಿಯಾಶೀಲತೆ ಮತ್ತು ಕುತೂಹಲ ಮೂಡಿಸುವುದಾಗಿದೆ. ಇಲ್ಲಿ ವನ್ಯಜೀವಿಗಳ ಥೀಮ್ಯಾಟಿಕ್ ಗ್ಯಾಲರಿ, ಜೀವವೈವಿಧ್ಯ, ಸಮುದ್ರ ವಿಜ್ಞಾನ ಹಾಗೂ ಖನಿಜ ಸಂಪನ್ಮೂಲಗಳ ಗ್ಯಾಲರಿಗಳಿರಲಿವೆ. ಕಟ್ಟಡಕ್ಕೆ ₹ 10 ಕೋಟಿ ಹಾಗೂ ಅತ್ಯಾಧುನಿಕ ವಿಜ್ಞಾನ ಉಪಕರಣಗಳಿಗೆ ₹ 2 ಕೋಟಿ ಕಾಯ್ದಿರಿಸಲಾಗಿದೆ. ಇದು ಯುವ ವಿಜ್ಞಾನಿಗಳನ್ನು ರೂಪಿಸುವ ಪ್ರಮುಖ ಕೇಂದ್ರವಾಗಲಿದೆ.’

— ಬಿ.ವೈ. ರಾಘವೇಂದ್ರ ಸಂಸದರು