ಕರ್ನಾಟಕ ಮ್ಯಾರಿಟೈಮ್‌ ಬೋರ್ಡ್‌ (ಕೆಎಂಬಿ) ದ್ವೀಪ ಪ್ರವಾಸೋದ್ಯಮ ಉತ್ತೇಜಿಸಲು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್‌ ಯೋಜನೆಯಡಿ‌ ದ್ವೀಪಗಳ ಅಭಿವೃದ್ಧಿಗೆ ಒಟ್ಟು 10 ದ್ವೀಪಗಳನ್ನು ಗುರುತಿಸಿದೆ. ಅವುಗಳಲ್ಲಿ ಮೂರು ದ್ವೀಪಗಳು ಉಡುಪಿ ಜಿಲ್ಲೆಯೊಂದರಲ್ಲೇ ಇರುವುದು ವಿಶೇಷವಾಗಿದ್ದು ಉಳಿದವು ಉತ್ತರ ಕನ್ನಡ ಜಿಲ್ಲೆಯಲ್ಲಿವೆ.

ಉಡುಪಿ ಜಿಲ್ಲೆಯಲ್ಲಿ ಯೋಜನೆಗೆ ಗುರುತಿಸಲಾದ ದ್ವೀಪಗಳು

ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಗೆ ಗುರುತಿಸಲಾಗಿರುವ ದ್ವೀಪಗಳೆಂದರೆ ದರಿಯಾ ಬಹದ್ದೂರ್‌ಘಡ್‌, ಮಲ್ಪೆ ಮತ್ತು ಅಯಾಬ.

ಉತ್ತರ ಕನ್ನಡದಲ್ಲಿ ಯೋಜನೆಗೆ ಗುರುತಿಸಲಾದ ದ್ವೀಪಗಳು

kurmagad

ಉತ್ತರ ಕನ್ನಡದಲ್ಲಿ ಗುರುತಿಸಲಾದ ದ್ವೀಪಗಳೆಂದರೆ ಕಾರವಾರ ತಾಲೂಕಿನಲ್ಲಿನ ಕುರುಮಗಡ, ಮಧ್ಯಲಿಂಗಗಡ, ದೇವಗಡ ಮತ್ತು ಮೊಂಗರಗುಡ. ಅಂಕೋಲಾ ತಾಲೂಕಿನಲ್ಲಿ ಗುರುತಿಸಲಾದ ಅಂಕಣಿ ಚೆಗ್ಗುಡು ದ್ವೀಪ, ಭಟ್ಕಳ ತಾಲೂಕಿನಲ್ಲಿನ ಹಾಗ್ ಮತ್ತು ಕಿರಿಕುಂಡ ದ್ವೀಪಗಳು.

ಕೆಎಂಬಿ ಪ್ರಕಾರ, ದ್ವೀಪಗಳನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಆಧಾರದ ಮೇಲೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.

ಯೋಜನೆಯ ವೆಚ್ಚ

ಯೋಜನೆಗೆ ಗುರುತಿಸಲಾಗಿರುವ ಒಟ್ಟು 10 ದ್ವೀಪಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಒಟ್ಟು 313.5 ಕೋಟಿ ಹೂಡಿಕೆ ಬೇಕಾಗಬಹುದು ಎಂದು ಮಂಡಳಿ ಹೇಳಿದೆ. ಇದರಲ್ಲಿ ಉತ್ತರ ಕನ್ನಡದ ಏಳು ದ್ವೀಪಗಳಿಗೆ 225.5 ಕೋಟಿ ಮತ್ತು ಉಡುಪಿ ಜಿಲ್ಲೆಯ ಮೂರು ದ್ವೀಪಗಳಿಗೆ 88 ಕೋಟಿ ರುಪಾಯಿಗಳ ವೆಚ್ಚವನ್ನು ಗುರುತಿಸಲಾಗಿದೆ.