ಎತ್ತಿನ ಭುಜವೇ ಕೇದಾರನಾಥವಾಯ್ತು!
ಭಕ್ತಿಯ ಜತೆಜತೆಗೆ ಸನಾತನ ಧರ್ಮೀಯರ ಕ್ರೇಜ್ ಆಗಿ ಬದಲಾಗಿರುವ ಕೇದಾರನಾಥದ ಕುರಿತಾಗಿ ಲೇಖಕರು ಸಮಗ್ರ ವಿವರಣೆ ನೀಡಿದ್ದಾರೆ. ಯಾತ್ರೆಯ ಮಾರ್ಗದರ್ಶಿಯಾಗಿ, ಕೇದಾರನಾಥದ ಪೌರಾಣಿಕ ಹಿನ್ನೆಲೆಯನ್ನೂ ವಿವರಿಸುವ ಮೂಲಕ ಕೇದಾರನಾಥದ ಪರಿಪೂರ್ಣ ಚಿತ್ರಣ ನೀಡಿದ್ದಾರೆ.
- ಸುಧೀರ್ ಸಾಗರ
ಈಗೇನಾದ್ರೂ ಬುದ್ಧ ಇದ್ದಿದ್ರೆ ಕೇದಾರನಾಥದ ಹೆಸರೇ ಕೇಳದವರ ಮನೆಯಿಂದ ಸಾಸಿವೆ ತನ್ನಿ ಅಂತಿದ್ನೇನೋ ಅನ್ನುವಷ್ಟರಮಟ್ಟಿಗೆ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿರೋ, ಅದರಲ್ಲೂ ಸೋಷಿಯಲ್ ಮೀಡಿಯಾ ರೀಲ್ಸುಗಳು ಉತ್ತುಂಗ ಸ್ಥಿತಿಗೇರಿದ ಮೇಲಂತೂ, ಯಾರನ್ನೇ ಕೇಳಿದ್ರೂ ಜೀವನದಲ್ಲಿ ಒಮ್ಮೆಯಾದ್ರೂ ಇಲ್ಲಿಗೆ ಹೋಗಿಬರಬೇಕು ಅನ್ನೋ ಡ್ರೀಮ್ ಡೆಸ್ಟಿನೇಶನ್ನಲ್ಲಿ ಜಾಗ ಪಡೆದಿರೋ ಕ್ಷೇತ್ರ ಕೇದಾರನಾಥ.
ಕೇದಾರನಾಥಕ್ಕೆ ವರ್ಷಪೂರ್ತಿ ಹೋಗಿಬರಲು ಸಾಧ್ಯವಿಲ್ಲ. ದೇವಸ್ಥಾನವು ವರ್ಷದಲ್ಲಿ ಆರು ತಿಂಗಳು ಅಂದ್ರೆ, ಮೇ ತಿಂಗಳಿಂದ (ಅಕ್ಷಯ ತೃತೀಯ) ಅಕ್ಟೋಬರ್ (ದೀಪಾವಳಿಯ ಪಾಡ್ಯದ ಮರುದಿನ) ವರೆಗೆ ಮಾತ್ರ ದರ್ಶನಕ್ಕೆ ಲಭ್ಯವಿದ್ದು, ಉಳಿದಂತೆ ಆರು ತಿಂಗಳು ಸಂಪೂರ್ಣ ಹಿಮದೊಳಗೆ ಮುಚ್ಚಿಹೋಗಿಬಿಟ್ಟಿರುತ್ತದೆ. ಲಭ್ಯವಿರೋ ಆರು ತಿಂಗಳಲ್ಲೂ ಎರಡು ಮೂರು ತಿಂಗಳು ವಿಪರೀತ ಮಳೆ ಭೂಕುಸಿತಗಳಿಂದಾಗಿ ಸಂರ‍್ಕ ಕಳೆದುಕೊಳ್ಳೋ ಕಾರಣ, ಯಾತ್ರಿಗಳಿಗೆ ಸಿಗೋದೇ ಎರಡುಮೂರು ತಿಂಗಳ ಕಾಲಾವಕಾಶ. ಕ್ಷೇತ್ರದತ್ತ ಜನರ ಸೆಳೆತ ವಿಪರೀತವಾಗಲು ಇದೂ ಕೂಡಾ ಮತ್ತೊಂದು ಕಾರಣ.
ಭಾರತದ ಅತಿ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಅಗ್ರಸ್ಥಾನದಲ್ಲಿರೋ ಹನ್ನೆರಡು ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ, ಇತ್ತೀಚಿನ ದಿನಗಳಲ್ಲಿ ಚಾರ್ ಧಾಮ್ ಯಾತ್ರೆಯೆಂದೇ ಪ್ರಖ್ಯಾತವಾಗಿ, ದೇಶದಲ್ಲಿಯೇ ಅತಿ ಹೆಚ್ಚು ಯಾತ್ರಿಕರು ಸಂದರ್ಶಿಸೋ ಯಾತ್ರೆಯೆಂಬ ದಾಖಲೆಯನ್ನು ಹೊಂದಿರುವ ಛೋಟಾ ಚಾರ್ ಧಾಮ್ (ಗಂಗೋತ್ರಿ ಯಮುನೋತ್ರಿ ಕೇದಾರನಾಥ ಬದ್ರೀನಾಥ) ತೀರ್ಥಯಾತ್ರೆಯಲ್ಲಿಯೂ ಅತಿ ಪ್ರಮುಖವಾಗಿರೋ ಕ್ಷೇತ್ರ ಅಂದ್ರೆ ಅದು ಕೇದಾರನಾಥ.

ದ್ವಾಪರ ಯುಗಕ್ಕೆ ಇತಿಹಾಸ
ಎಂಟನೇ ಶತಮಾನದಲ್ಲಿ ಪರಮಪೂಜ್ಯ ಆದಿ ಶಂಕರಾಚಾರ್ಯರಿಂದ ಜೀರ್ಣೋದ್ಧಾರಗೊಂಡ ನಂತರದಲ್ಲಿ ಕೇದಾರನಾಥ ಕ್ಷೇತ್ರದ ಮಹಿಮೆಗಳು ಜಗತ್ತಿನಾದ್ಯಂತ ಪಸರಿಸಿದ್ದು ಹೌದಾದರೂ ಕೇದಾರನಾಥ ಕ್ಷೇತ್ರದ ಸೃಷ್ಟಿಯ ಹಿನ್ನೆಲೆಯು ನಮ್ಮನ್ನು ಸೀದಾ ದ್ವಾಪರ ಯುಗಕ್ಕೇ ಕರೆದೊಯ್ಯುತ್ತವೆ. ಹಾಗಾಗಿಯೇ ನಾವು ಕೇದಾರನಾಥ ಯಾತ್ರೆಯಲ್ಲಿ ನಡೆಯೋದು 20ಕಿಮೀಗಳಾದರೂ ಹೋಗಿ ತಲುಪೋದು ಮಾತ್ರ ನೇರಾನೇರ ದ್ವಾಪರ ಯುಗಕ್ಕೆ.
ಆಗಷ್ಟೇ ಮಹಾಭಾರತ ಯುದ್ಧ ಮುಗಿದಿತ್ತು.ಗೆದ್ದ ಪಾಂಡವರು ರಾಜ್ಯವನ್ನೂ ತನ್ನದಾಗಿಸಿಕೊಂಡಾಗಿದೆ. ಧರ್ಮ ಸಂಸ್ಥಾಪನಾ ಕಾರ್ಯವೂ ಯಶಸ್ವಿಯಾಗಿದೆ. ಬಂದ ಕೆಲಸ ಮುಗೀತಲ್ಲ, ಇನ್ನೇನು ಸ್ರ‍್ಗಾರೋಹಣಕ್ಕೆ ಹೊರಡಬೇಕು, ಆಗ ಸಂಕಷ್ಟವೊಂದು ಎದುರಾಗಿಬಿಡುತ್ತದೆ.
ಯುದ್ಧದಲ್ಲಿ ದಾಯಾದಿಗಳನ್ನೂ ಸೇರಿದಂತೆ ದೈವಸಮಾನರಾದ ಗುರುಹಿರಿಯರೂ ಆಚಾರ್ಯಾದಿಗಳಾಗಿ ಬ್ರಾಹ್ಮಣೋತ್ತಮರನ್ನೆಲ್ಲಾ ಕೊಂದುಬಿಟ್ಟಿದ್ದ ಪಾಂಡವರಿಗೆ ಬ್ರಹ್ಮಹತ್ಯಾದೋಷ ಅಂಟಿಕೊಂಡುಬಿಟ್ಟಿತ್ತು. ಇದರಿಂದ ವಿಮೋಚನೆಯಾಗದ ಹೊರತು ಮೋಕ್ಷವೂ ಪ್ರಾಪ್ತಿಯಾಗುವುದಿಲ್ಲ. ಕೃಷ್ಣನೆದುರು ಯಾಚಿಸುತ್ತಾರೆ. ನನ್ನಿಂದೇನೂ ಸಾಧ್ಯವಿಲ್ಲ, ಜಗತ್ತಿನ ಸರ್ವದೋಷಗಳಿಗೂ ಪರಿಹಾರಕರ್ತನಾಗಿರೋ ಕಾಶಿಯ ನಾಥ ಶಿವನೆದುರು ಮಂಡಿಯೂರಿಬಿಡಿ. ಆತನೊಲಿದರಷ್ಟೇ ದೋಷಮುಕ್ತಿ ಎನ್ನುತ್ತಾನೆ ಕೃಷ್ಣ. ಶಿವನನ್ನರಸಿ ಪಾಂಡವರು ಕಾಶಿಗೆ ಹೋದರೆ ಅಲ್ಲಿ ಶಿವನೇ ಪತ್ತೆಯಿಲ್ಲ. ದಾಯಾದಿಗಳ ನಡುವೆಯೇ ಹತ್ಯೆಗಳಿಗೆ ನಾಂದಿಹಾಡೋ, ಲಕ್ಷಾಂತರ ಜೀವಹಾನಿಗೆ ಕಾರಣವಾಗುವ ಮಹಾಭಾರತ ಯುದ್ಧವೇ ಶಿವನಿಗೆ ಇಷ್ಟವಿರೋದಿಲ್ಲ. ಹಾಗಾಗಿಯೇ ಪಾಂಡವರ ಮೇಲೆ ಮುನಿಸಿಕೊಂಡಿದ್ದ ಶಿವನು, ಪಾಂಡವರು ಬರುತ್ತಿರೋ ಸುದ್ದಿ ತಿಳಿಯುತ್ತಿದ್ದಂತೆಯೇ ಇವರ ಕೈಗೆ ಸಿಗದಂತೆ ಎತ್ತಿನ ರೂಪ ತಳೆದು ಉತ್ತರಾಖಂಡದ ಪರ್ವತಗಳಲ್ಲಿ ಅವಿತುಬಿಟ್ಟಿರುತ್ತಾನೆ.
ಹೀಗೆ ಶಿವನು ಕಾಶಿಯಿಂದ ಬಂದು ಗುಪ್ತವಾಗಿ ತಂಗಿದ್ದ ಜಾಗವೇ ಮುಂದೆ ಗುಪ್ತಕಾಶಿಯಾಗಿ ಕರೆಸಿಕೊಳ್ಳುತ್ತದೆ.
ಶಿವನನ್ನರಸುತ್ತಾ ಉತ್ತರಾಖಂಡಕ್ಕೆ ಬರೋ ಪಾಂಡವರು ಅದೊಂದು ಕಡೆ ಎರಡು ಪರ್ವತಗಳ ನಡುವಲ್ಲಿ ಬೃಹತ್ ಹಸುಗಳ ಹಿಂಡೊಂದನ್ನು ನೋಡಿದ್ದೇ, ಈ ಗುಂಪಲ್ಲಿಯೇ ಶಿವ ಇದ್ದಾನೆಂದು ಗ್ರಹಿಸಿಬಿಡುತ್ತಾರೆ. ಎರಡೂ ಪರ್ವತಗಳ ಮೇಲೆ ಕಾಲಿಟ್ಟು ನಿಂತುಬಿಡುತ್ತಾನೆ ಭೀಮ. ಅಷ್ಟೂ ಗೋವುಗಳೂ ಈತನನ್ನು ಹಾದು ಹೋದರೂ, ಅದೊಂದು ಎತ್ತು ಮಾತ್ರ ಭೀಮನ ಕಾಲಿನಡಿ ನುಸುಳಲೊಪ್ಪದೆ ನಿಂತುಬಿಡುತ್ತದೆ. ಇದೇ ಶಿವನೆಂದು ಖಾತ್ರಿಯಾಗಿ ಆ ಎತ್ತನ್ನು ಹಿಡಿಯುತ್ತಿದ್ದಂತೆಯೇ ಭೂಮಿಯಡಿಯಲ್ಲಿ ಅಂರ‍್ಧಾನವಾಗತೊಡಗುತ್ತದೆ. ಭೀಮ ತನ್ನೆಲ್ಲಾ ಬಲಪ್ರಯೋಗಿಸಿ ಮೇಲಕ್ಕೆಳೆಯುತ್ತಿದ್ದಂತೆಯೇ ಎತ್ತು ಐದು ಭಾಗಗಳಾಗಿ ಸಿಡಿದುಹೋಗಿಬಿಡುತ್ತದೆ.
ಎತ್ತಿನ ದೇಹದ ಭಾಗಗಳು ಬಿದ್ದ ಐದೂ ಜಾಗಗಳಿಗೂ ತೆರಳಿ ದೇವಸ್ಥಾನಗಳನ್ನು ನಿರ್ಮಿಸಿ ಹೋಮ ಹವನಾದಿಗಳನ್ನು ಕೈಗೊಳ್ಳೋ ಪಾಂಡವರು ಕೊನೆಗೂ ಶಿವನನ್ನೊಲಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಹೀಗೆ ಸಿಡಿದ ಐದು ಭಾಗಗಳಲ್ಲಿ ಎತ್ತಿನ ಭುಜ ಬಿದ್ದ ಜಾಗವೇ ಕೇದಾರನಾಥ. ಹಾಗಾಗಿಯೇ ಇಲ್ಲಿ ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಶಿವಲಿಂಗವು ಲಿಂಗರೂಪದಲ್ಲಿರದೆ ಅಕ್ಷರಶಃ ಎತ್ತಿನಭುಜದ ರೂಪದಲ್ಲಿದೆ.
ಈ ಕ್ಷೇತ್ರದಲ್ಲಿಯೇ ತಮಗೆ ಅಂಟಿಕೊಂಡಿದ್ದ ಬ್ರಹ್ಮಹತ್ಯಾದೋಷದಿಂದ ಮುಕ್ತರಾಗಿ, ಪಾಂಡವರು ಸ್ವರ್ಗಾರೋಹಣಕ್ಕೆ ಹೊರಟುನಿಂತ ಪುಣ್ಯನೆಲವಾಗಿರೋ ಕಾರಣದಿಂದಾಗಿ, ಇಲ್ಲಿ ಅದೆಂಥ ದೋಷಕ್ಕೂ ಮುಕ್ತಿ ಸಾಧ್ಯವೆಂಬ ನಂಬಿಕೆ.
ಪಂಚ ಕೇದಾರ ಕ್ಷೇತ್ರಗಳು :
ಎತ್ತಿನ ರೂಪದಲ್ಲಿದ್ದ ಶಿವನು ಸಿಡಿದು ಐದು ಭಾಗಗಳಾಗಿ ಬಿದ್ದ ಜಾಗಗಳಲ್ಲಿಯೂ ಪಾಂಡವರಿಂದ ನಿರ್ಮಾಣವಾದ ದೇವಸ್ಥಾನಗಳೇ ಪಂಚ ಕೇದಾರ ಕ್ಷೇತ್ರಗಳು.
ಎತ್ತಿನ ಭುಜ ಬಿದ್ದ ಜಾಗ ಕೇದಾರನಾಥವಾದರೆ, ತೋಳುಗಳು ಬಿದ್ದ ಜಾಗವೇ ತುಂಗನಾಥ. ಇದು ಜಗತ್ತಿನಲ್ಲಿಯೇ ಅತ್ಯಂತ ಎತ್ತರದಲ್ಲಿರೋ ಶಿವನ ದೇವಸ್ಥಾನವೆಂಬ ಖ್ಯಾತಿಹೊಂದಿದೆ. ರುಂಡವು ಬಿದ್ದ ಜಾಗ ರುದ್ರನಾಥ. ಇಲ್ಲಿ ಸಾಕ್ಷಾತ್ ಶಿವನ ರುಂಡವನ್ನೇ ಪೂಜಿಸಲಾಗುತ್ತದೆ.
ನಾಭಿ/ಮಧ್ಯಭಾಗ ಬಿದ್ದ ಜಾಗವು ಮಧ್ಯಮಹೇಶ್ವರ ಹಾಗೂ ಶಿವನ ಕೇಶವು ಬಿದ್ದ ಜಾಗ ಜೋಶಿಮಠದ ಬಳಿಯ ಕಲ್ಪೇಶ್ವರ. ಕಲ್ಪೇಶ್ವರ ಮಾತ್ರ ವರ್ಷಪೂರ್ತಿ ದರ್ಶನಕ್ಕೆ ಲಭ್ಯವಿದ್ದು ಇದನ್ನು ಹೊರತು ಪಡಿಸಿ ಉಳಿದ ನಾಲ್ಕೂ ದೇವಸ್ಥಾನಗಳು ರ‍್ಷದಲ್ಲಿ ಆರು ತಿಂಗಳು ಮಾತ್ರ ದರ್ಶನಕ್ಕೆ ಲಭ್ಯವಿರುತ್ತದೆ.
ಕೇದಾರನಾಥಕ್ಕೆ ತಲುಪುವುದು ಹೇಗೆ?
ಹೃಷಿಕೇಶದಿಂದ 200ಕಿಮೀ ದೂರದಲ್ಲಿರೋ ಸೋನ್ ಪ್ರಯಾಗದಿಂದಲೇ ಕೇದಾರನಾಥ ಯಾತ್ರೆಯ ಪ್ರಾರಂಭ. ಇಲ್ಲಿಗೆ ಡೆಹ್ರಾಡೂನ್, ಹೃಷಿಕೇಶ ಅಥವಾ ಹರಿದ್ವಾರದಿಂದ ಬಸ್ ಹಾಗೂ ಶೇರಿಂಗ್ ಟ್ಯಾಕ್ಸಿಗಳು ಲಭ್ಯವಿದೆ. ಇಲ್ಲಿಯವರೆಗಷ್ಟೇ ಇತರೆ ವಾಹನಗಳಿಗೆ ಅನುಮತಿಯಿದ್ದು ಇಲ್ಲಿಂದ ಮುಂದೆ ಗೌರಿಕುಂಡದವರೆಗೂ ಆಡಳಿತ ಮಂಡಳಿಯಿಂದಲೇ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
ಗೌರಿಕುಂಡದಿಂದ ಕೇದಾರನಾಥವು ಸರಿಸುಮಾರು 20ಕಿಮೀಗಳ ಪಾದಯಾತ್ರೆ. ಇಲ್ಲಿಗೆ ಪಾದಯಾತ್ರೆಯಷ್ಟೇ ಅಲ್ಲದೆ, ಕುದುರೆ, ಪಲ್ಲಕ್ಕಿ ಬುಟ್ಟಿಯ ರ‍್ಯಾಯ ಆಯ್ಕೆಗಳೂ ಇವೆ.
ಇದಲ್ಲದೆ ಗುಪ್ತಕಾಶಿ, ಫಾಟಾ ಹಾಗೂ ಸೆರ್ಸಿ(ಸೋನ್ ಪ್ರಯಾಗ್ ಸಮೀಪದಲ್ಲಿವೆ) ಗಳಿಂದ ನೇರವಾಗಿ ಕೇದಾರನಾಥಕ್ಕೇ ಹೆಲಿಕಾಪ್ಟರ್ ಸೇವೆಯೂ ಲಭ್ಯವಿದ್ದು ಮುಂಗಡವಾಗಿ ಕಾಯ್ದಿರಿಸಿಕೊಂಡಲ್ಲಿ ಇದರಲ್ಲಿಯೂ ದರ್ಶನ ಮುಗಿಸಬಹುದು.
ಊಟ ವಸತಿ ವ್ಯವಸ್ಥೆಗಳು :
ಸೋನ್ ಪ್ರಯಾಗ್, ಗೌರಿಕುಂಡ ಹಾಗೂ ಕೇದಾರನಾಥದಲ್ಲಿ ಉಳಿದುಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಲಾಡ್ಜುಗಳು ಲಭ್ಯವಿದೆ. ಗೌರಿಕುಂಡದಿಂದ ಕೇದಾರನಾಥದ ಯಾತ್ರೆಯ ನಡುವಲ್ಲಿಯೂ ಕೂಡಾ ಯಾವುದೇ ಕ್ಷಣದಲ್ಲೂ ಇನ್ನು ನಡೆಯಲು ಸಾಧ್ಯವಿಲ್ಲವೆನ್ನಿಸಿದರೂ ಗಾಬರಿಯಾಗಬೇಕಿಲ್ಲ. 2-3 ಕಿಮೀಗೊಮ್ಮೆ ಜಂಗಲ್‌ಚಟ್ಟಿ, ಭೀಮ್‌ಬಲಿ, ರಾಮ್‌ಬಾಡಾ, ಲಿಂಚೋಲಿ ಹೀಗೆ ಹಾದಿಯುದ್ದಕ್ಕೂ ಅಲ್ಲಲ್ಲಿ ತಂಗಲು ಟೆಂಟುಗಳು ಲಭ್ಯವಿದ್ದು ಕೇವಲ 200-500ರೊಳಗೇ ವಸತಿ ವ್ಯವಸ್ಥೆಗಳಿವೆ. ಊಟ ತಿಂಡಿಗೆ ಸಹ ಯಾತ್ರೆಯುದ್ದಕ್ಕೂ ಹೊಟೇಲುಗಳಿವೆ. ಕೇದಾರನಾಥದಲ್ಲಿ ಮೂರು ಹೊತ್ತೂ ಉಚಿತ ಅನ್ನದಾಸೋಹ ಲಭ್ಯವಿದ್ದು ಸದುಪಯೋಗಪಡಿಸಿಕೊಳ್ಳಬಹುದು.
ದೇವಸ್ಥಾನ ದರ್ಶನ ಹಾಗೂ ಪೂಜೆಗಳು :
ಕೇದಾರನಾಥ ಯಾತ್ರೆಗೆ ಮೊದಲೇ ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯ. ಇದಕ್ಕೆ ಯಾವುದೇ ಶುಲ್ಕವಿರೋದಿಲ್ಲ. ಆನ್ ಲೈನಿನಲ್ಲಿ ಅಥವಾ ನೇರವಾಗಿ ಹೃಷಿಕೇಶ ಅಥವಾ ಸೋನ್ ಪ್ರಯಾಗದಲ್ಲಿಯೂ ರಿಜಿಸ್ಟ್ರೇಶನ್ ಮಾಡಿಸಬಹುದು .
ದೇವಸ್ಥಾನದಲ್ಲಿ ಬೆಳಿಗ್ಗೆ ಐದರಿಂದ ರಾತ್ರಿ ಒಂಬತ್ತರ ವರೆಗೂ ದರ್ಶನವಿರುತ್ತದೆ, ಇದಲ್ಲದೆ ವಿಶೇಷ ಪೂಜೆಗಳು ಮಾಡಿಸುವುದಿದ್ದಲ್ಲಿ ರಾತ್ರಿಗಳಲ್ಲಿ ಪ್ರತ್ಯೇಕವಾಗಿ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಮುಂಗಡ ಕಾಯ್ದಿರಿಸುವಿಕೆ ಕಡ್ಡಾಯ.

ದರ್ಶನಕ್ಕೆ ಸೂಕ್ತ ಕಾಲ :
ಮೇ ಹಾಗೂ ಜೂನ್ ಉತ್ತರಾಖಂಡದಲ್ಲಿ ಬೇಸಿಗೆಯಾಗಿರೋ ಕಾರಣ ಕೇದಾರನಾಥದಲ್ಲಿ ಚಳಿ ಕಡಿಮೆಯಿರುತ್ತದೆ. ಚಳಿ ಸಹ್ಯವಾಗದವರಿಗೆ ಈ ಸಮಯ ಸೂಕ್ತ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಆಗಷ್ಟೇ ಮಳೆಗಾಲ ಮುಗಿದು ಹಿಮಪಾತ ಶುರುವಾಗೋ ಕಾಲ. ಹಿಮದ ಅನುಭವ ಪಡೆಯಬೇಕು, ದೇವಸ್ಥಾನ ಸೇರಿದಂತೆ ಇಡೀ ಕೇದಾರನಾಥ ಆಗಾಗ ಹಿಮದ ಹೊದಿಕೆಯೊಳಗೆ ಸಂಪರ‍್ಣ ಶ್ವೇತವರ್ಣವಾಗೋದು ಕಣ್ತುಂಬಿಕೊಳ್ಳಬೇಕು ಎಂದು ಬಯಸುವವರಿಗೆ ಈ ಕಾಲ ಸೂಕ್ತ.
ಜುಲೈ ಹಾಗೂ ಆಗಸ್ಟ್ ವಿಪರೀತ ಮಳೆಗಾಲವಾಗಿರೋ ಕಾರಣ ಹಾದಿಯುದ್ದಕ್ಕೂ ಭೂಕುಸಿತಗಳೂ ಸರ್ವೇಸಾಮಾನ್ಯ. ಹಾಗಾಗಿ ಈ ಸಮಯದಲ್ಲಿ ಹೋಗದಿರೋದೇ ಸೂಕ್ತ.
ಗಮನವಹಿಸಬೇಕಾದ ಅಂಶಗಳು :
ಹಿಮಾಲಯದ ನೆತ್ತಿಯ ಮೇಲಿರೋ ಕಾರಣ ಯಾವುದೇ ತಿಂಗಳಲ್ಲಿ ಹೋದರೂ ಕೇದಾರನಾಥದಲ್ಲಿ ಯಾವ ಕ್ಷಣವೂ ಮಳೆ, ಆಲಿಕಲ್ಲು, ಹಿಮಪಾತಗಳಾಗಬಹುದು. ವಿಪರೀತ ಚಳಿಯೂ ಶತಸಿದ್ಧ. ಹಾಗಾಗಿ ಜತೆಗೆ ರೇನ್ ಕೋಟು, ಛತ್ರಿ ಹಾಗೂ ಬೆಚ್ಚನೆಯ ಉಡುಪುಗಳನ್ನು ಕೊಂಡೊಯ್ಯೋದು ಅತ್ಯಗತ್ಯ.