ಸೂರ್ಯಕುಂಡ ಸ್ನಾನ-ಲಿಂಗದೆದುರು ಧ್ಯಾನ!
ಸೂರ್ಯ ಕುಂಡದ ಬಳಿ ಒಂದು ದೊಡ್ಡ ಬೋರ್ಡ್ ಇದೆ. ರೋಗರುಜಿನ ಇರುವವರು ಹೋಗಬೇಡಿ. ತಣ್ಣಗಿನ ನೀರಿನ ಅಲರ್ಜಿ ಇರುವವರು ಹೋಗಬೇಡಿ. ಮದ್ಯಪಾನಿಗಳಿಗೆ ಪ್ರವೇಶವಿಲ್ಲ. ತಿಂಡಿ ತಿಂದು ಅರ್ಧಗಂಟೆಯಾದರೂ ಆಗಿರಬೇಕು. ಹೀಗೆ ಹಲವಾರು ಸೂಚನೆಗಳು ಆ ಬೋರ್ಡಿನಲ್ಲಿದೆ.
- ಮಂಜುನಾಥ ಹೆಗಡೆ, ಯಲ್ಲಾಪುರ
ಪ್ರವಾಸ ಅಂದಾಕ್ಷಣ ನೆನಪಾಗೋದು ಶಾಲಾಪ್ರವಾಸಗಳು. ಆದರೆ ನನಗೆ ಆ ನೆನಪುಗಳೇ ಇಲ್ಲ. ಬಡತನದ ಕಾರಣಕ್ಕೋ ಅಥವಾ ನಾನೇ ಪ್ರವಾಸಪ್ರಿಯನಾಗಿರಲಿಲ್ವೋ, ಒಟ್ಟು ನನ್ನ ಶಾಲಾ ದಿನಗಳಲ್ಲಿ ಪ್ರವಾಸಕ್ಕೆ ಹೋದದ್ದೇ ಇಲ್ಲ. ಈಗ ಸ್ವಂತ ದುಡಿಮೆಯಲ್ಲಿ ಖುಷಿಯಿಂದ ಸುತ್ತಾಡುತ್ತಿದ್ದೇನೆ.
ಹಾಗೆ ನಾನು ಹೋಗಿದ್ದು ತಮಿಳುನಾಡಿನ ಕೊಯಮತ್ತೂರು. ಆದಿ ಯೋಗಿ ಪ್ರತಿಮೆ ಲೋಕಾರ್ಪಣೆಗೊಂಡಾಗಿನಿಂದ ಇಷಾ ಫೌಂಡೇಷನ್ ಗೆ ಹೋಗ್ಬೇಕು ಅನ್ನೋದು ಕನಸು. ನನ್ನ ಪ್ರವಾಸದ ಬಗ್ಗೆ ಹೇಳುತ್ತಾ ನಿಮಗೊಂದಷ್ಟು ಸ್ಥಳ ಮಾಹಿತಿ ಕೊಡುವ ಪ್ರಯತ್ನ ಇದು.
ನಮ್ಮ ಪ್ರಯಾಣ ಶುರುವಾಗಿದ್ದು ಹೀಗೆ. ಮಂಗಳೂರಿಂದ ಕೊಯಮತ್ತೂರು. ಬೆಳಗ್ಗೆ ಕೊಯಮತ್ತೂರಲ್ಲಿ ಇರೋ ಥರ "ವೆಸ್ಟ್ ಕೋಸ್ಟ್" ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದೆವು.
ಎಂಟು ಗಂಟೆ ಪ್ರಯಾಣದ ನಂತರ ಟ್ರೇನ್ ಕೊಯಮತ್ತೂರು ಜಂಕ್ಷನ್ ತಲುಪಿತ್ತು. ರೈಲ್ವೇ ಸ್ಟೇಷನ್ ಬಳಿಯೇ ಒಂದು ರೂಮ್ ನೋಡಿ, ಫ್ರೆಶ್ ಆಗಿ ಅಲ್ಲಿಂದ ಟೌನ್ ಬಸ್ ಸ್ಟಾಂಡ್ ಗೆ ನಡೆದು ಹೋದೆವು. ಅಲ್ಲಿಂದ ಬಸ್ ನಂಬರ್ 14ರಲ್ಲಿ, ಇಷಾ ಫೌಂಡೇಶನ್ ನತ್ತ ಪಯಣ. ಸುಮಾರು 50 ನಿಮಿಷಗಳ ಮಾರ್ಗ.

ಸೂರ್ಯಕುಂಡದ ವಿಶೇಷತೆ
"ಧ್ಯಾನಲಿಂಗ"ದ ದರ್ಶನದ ಹಾದಿಯಲ್ಲಿ ಮೊದಲು ಸಿಗುವುದು ಪ್ರವೇಶ ದ್ವಾರದಲ್ಲಿಯೇ ಇರುವ ದೊಡ್ಡದಾದ ಹಾವಿನ ಚಿತ್ರ.
ಅಲ್ಲಿಂದ ಮುಂದೆ ಫೊಟೋ ಕ್ಲಿಕ್ ಮಾಡೋಕೆ ಅವಕಾಶವೇ ಇಲ್ಲ. ಮೊಬೈಲ್ ಮತ್ತು ಕ್ಯಾಮೆರಾ ನಿಷೇಧ. ಹೀಗಾಗಿ ಇದೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಬೇಕು ಅಥವಾ ಅಕ್ಷರಗಳಲ್ಲಿ ಕಟ್ಟಿಕೊಡುವುದನ್ನು ಕಣ್ಮುಂದೆ ಕಲ್ಪಿಸಿಕೊಳ್ಳಬೇಕು.
ನಮ್ಮ ಇಷಾ ಪಯಣದ ಆರಂಭದಲ್ಲಿ ಕಡ್ಡಾಯವಾಗಿ ಕನಿಷ್ಠ ಎರಡು ನಿಮಿಷವಾದರೂ ಸೂರ್ಯಕುಂಡ ಕುರಿತ ವಿಡಿಯೋ ನೋಡಲೇಬೇಕಾಗುತ್ತದೆ. ಸೂರ್ಯಕುಂಡ ಎಂಬ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಜೀವಕೋಶಗಳಿಗೆ ಚೈತನ್ಯ ಸಿಗುತ್ತದೆ ಎಂದು ವಿಡಿಯೋದಲ್ಲಿ ಸಿಗುವ ಮುಖ್ಯಾಂಶ.
ಸೂರ್ಯ ಕುಂಡದ ಬಳಿ ಒಂದು ದೊಡ್ಡ ಬೋರ್ಡ್ ಇದೆ. ರೋಗರುಜಿನ ಇರುವವರು ಹೋಗಬೇಡಿ. ತಣ್ಣಗಿನ ನೀರಿನ ಅಲರ್ಜಿ ಇರುವವರು ಹೋಗಬೇಡಿ. ಮದ್ಯಪಾನಿಗಳಿಗೆ ಪ್ರವೇಶವಿಲ್ಲ. ತಿಂಡಿ ತಿಂದು ಅರ್ಧಗಂಟೆಯಾದರೂ ಆಗಿರಬೇಕು. ಹೀಗೆ ಹಲವಾರು ಸೂಚನೆಗಳು ಆ ಬೋರ್ಡಿನಲ್ಲಿದೆ.
20 ರು. ಟೋಕನ್ ಕೊಟ್ರೆ ಸ್ನಾನ ಗೃಹಕ್ಕೆ ಎಂಟ್ರಿ. ಅಲ್ಲಿ ಕೊಡುವ ಟವೆಲ್ ಉಟ್ಟು ಸ್ನಾನ ಮಾಡಬೇಕು. ಅದು ಶವರ್ ಸ್ನಾನ. ವಿಶೇಷ ಏನಂದ್ರೆ ದೇಹ ಪೂರ್ತಿ ಒದ್ದೆಯಾದರೆ ಮಾತ್ರ ಸೂರ್ಯ ಕುಂಡದೊಳಗೆ ಪ್ರವೇಶ. ಆ ಕಲ್ಯಾಣಿ ಮಧ್ಯೆ ಈಶ್ವರ ಲಿಂಗವಿದೆ. ಅಲ್ಲಿ ಹೋಗಿ ನೀರು ಸುರಿದು ನಮಸ್ಕರಿಸಬಹುದು. ಇನ್ನೊಂದು ಕಡೆ ಮೇಲಿನಿಂದ ಫಾಲ್ಸ್ ಥರ ನೀರು ಬೀಳುತ್ತಿರುತ್ತದೆ. ಅದಕ್ಕೂ ತಲೆ ಕೊಡಬಹುದು.
ಲಿಂಗಭೈರವಿ ಮತ್ತು ಪಾಯಸಂ!
ಸೂರ್ಯಕುಂಡ ಸ್ನಾನ ಮುಗಿಸಿ ಮುಂದೆ ಹೋದರೆ ಸಿಗೋದು ಲಿಂಗ ಭೈರವೀ. ಇದು ಪಾರ್ವತಿ ದೇವಿ ಮಂದಿರ. ಲಿಂಗದ ರೂಪದಲ್ಲಿ ನಿಂತಿರೋ ತಾಯಿಯ ವಿಗ್ರಹವಿದೆ. ಬೆಲ್ಲ, ಕಾಯಿ ಸುಳಿ, ಕಡಲೆಬೇಳೆಯಲ್ಲಿ ಮಾಡಿದ ಪಾಯಸ, ಪ್ರಸಾದ ರೂಪದಲ್ಲಿ ಹತ್ತು ರುಪಾಯಿಗೆ ಒಂದು ಫುಲ್ ಗ್ಲಾಸ್ ಕೊಡುತ್ತಾರೆ.
ಅಲ್ಲಿಂದ ಮುಂದೆ ನಡೆದರೆ ಅಲ್ಲೊಂದು ಬೆತ್ತದ ಚಾಪೆ ಥರ ಇರೋ ವಸ್ತುವಿನಿಂದ ಮುಚ್ಚಿರುವ ಜಾಗ ಕಾಣಿಸುತ್ತದೆ. ಅದು ಮಹಿಳಾ ಸ್ನಾನ ಕುಂಡ. ಅದನ್ನು ’ಚಂದ್ರ ಕುಂಡ’ ಎಂದು ಕರೆಯುತ್ತಾರೆ.

ಧ್ಯಾನಲಿಂಗದೆದುರು ಮೆಡಿಟೇಷನ್
ಹಾಗೆಯೇ ಮುನ್ನಡೆದರೆ ಧ್ಯಾನ ಲಿಂಗದ ದರ್ಶನದ ದಾರಿ ಆರಂಭ. ಪ್ರವೇಶದ್ವಾರದಲ್ಲಿ ದೊಡ್ಡ ಬಸವನ ಮೂರ್ತಿ. ಒಳಗೆ ಹೋಗುವ ಮುನ್ನ ಧ್ಯಾನ ಮಂದಿರ ಕುರಿತಾದ ವಿಡಿಯೋ ನೋಡುವುದು ಕಡ್ಡಾಯ. ಏಳು ಸುತ್ತಿನ ಹಾವಿನ ಆಸನದ ಮೇಲೆ ದೊಡ್ಡ ಲಿಂಗವೊಂದನ್ನು ಧ್ಯಾನಮಂದಿರದ ಮಧ್ಯದಲ್ಲಿ ಇಡಲಾಗಿದೆ. ಪಕ್ಕದಲ್ಲಿ ಕಮಲದ ಹೂವನ್ನು ಇಡಬಹುದು. ದೀಪ ಹಚ್ಚಿಡಬಹುದು. ಅದರ ಸುತ್ತ ಧ್ಯಾನಕ್ಕಾಗಿ 360 ಡಿಗ್ರಿಯ ಜಾಗ.
ಒಳಗೆ ಹೋಗುತ್ತಿದ್ದಂತೆ ಒಂದು ಬೆಲ್ ಬಜಾಯಿಸುತ್ತದೆ. ಹದಿನೈದು ನಿಮಿಷಗಳ ಧೀರ್ಘ ಧ್ಯಾನ ಆಗೋ ಹೊತ್ತಿಗೆ ಮತ್ತೊಂದು ಬೆಲ್. ಇದು ಧ್ಯಾನಮಂದಿರದಲ್ಲಿ ಧ್ಯಾನ ಮಾಡಲು ನೀಡುವ ಸಮಯ.
ಪ್ರತಿದಿನ 9 ಗಂಟೆಯಿಂದ ಅರ್ಧ ಗಂಟೆ ಧ್ಯಾನ ಹೇಳಿಕೊಡಲಾಗುತ್ತದೆ. ಪ್ರತಿದಿನ 12:30ಕ್ಕೆ ಓಂಕಾರ ಧ್ಯಾನ ಇರುತ್ತದೆ.
ಆದಿಯೋಗಿ ದರ್ಶನ
ಈಗ ಆದಿ ಯೋಗಿಯ ಬೃಹತ್ ವಿಗ್ರಹವನ್ನು ನೋಡುವ ಸಮಯ. ಸದ್ಗುರು ನಿರ್ಮಿತ ಇಷಾ ಫೌಂಡೇಶನ್ ಗೆ ಭಕ್ತಾದಿಗಳು ಮತ್ತು ಪ್ರವಾಸಿಗರು ಬರುವುದೇ ಆದಿಯೋಗಿಯ ದರ್ಶನಕ್ಕಾಗಿ. ಇಲ್ಲಿ ಹತ್ತು ರುಪಾಯಿ ಕೊಟ್ಟರೆ ಬುಲ್ ಕಾರ್ಟ್ ವ್ಯವಸ್ಥೆಯೂ ಇದೆ.
ಧ್ಯಾನ ಮಂದಿರದ ಕಡೆಯಿಂದ ಹೋದ್ರೆ, ಮೊದಲು ಕಾಣಸಿಗೋದು ಶಿವನ ಜಟೆಗಳ ಭಾಗ. ಆ ನಂತರ ಆದಿಯೋಗಿಯ ವದನ ದರ್ಶನ. ಆ ಕ್ಷಣವನ್ನು ಧನ್ಯತೆಯ ಪರಮಾವಧಿ ಅಂತಲೇ ಹೇಳಬಹುದು.
ಸಂಜೆಯ ನಂತರ ಶಿವನ ಮೇಲಿನ ದೀಪಗಳ ಚಿತ್ತಾರ ನೋಡಲು ಎರಡು ಕಣ್ಣು ಸಾಲದೆನಿಸುತ್ತದೆ. ಶಿವನ ಗೀತೆಗಳ ಜೊತೆಗೆ ಅಲ್ಲಿ ಸೃಷ್ಟಿಯಾಗುವ ವೈಬ್ರೇಷನ್ ಅಕ್ಷರಶಃ ದೈವಿಕ.
ಹತ್ತಿರದಲ್ಲಿ ಇನ್ನೇನಿದೆ?
ಕೊವೈ ಕುತ್ರಲಮ್ ಗಿರಿಧಾಮ. – 15ಕಿಮೀ
ಸಿರುವಾನಿ ಜಲಪಾತ -17ಕಿಮೀ
(ಗಿರಿಧಾಮದಿಂದ 2ಕಿಮೀ)
ಮರುತಮಲೈ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ – 2ಕಿಮೀ ಬರಿಗಾಲ ಚಾರಣ