ಜಲಾಸುರನ ಕೊಂದ ನರಸಿಂಹನ ದೇವಾಲಯ
ಈ ದೇವಾಲಯದ ಸುರಂಗದಲ್ಲಿ ಸಾಗಿ ನರಸಿಂಹನ ಅವತಾರವನ್ನು ವೀಕ್ಷಿಸಬಹುದು. ಈ ಗುಹೆಯ ಒಳಭಾಗದಲ್ಲಿ ಮೂರ್ನಾಲ್ಕು ಅಡಿಗಳಷ್ಟು ಎತ್ತರಕ್ಕೆ ನಿಂತಿದ್ದು, ಅದರಲ್ಲೇ ಭಕ್ತರು ನರಸಿಂಹ ಸ್ವಾಮಿಯ ದರ್ಶನಕ್ಕೆ ಸಾಗಬೇಕು. ಗುಹೆಯ ಮೇಲ್ಛಾವಣಿಯಲ್ಲಿ ಬಾವಲಿಗಳು ನೇತಾಡುತ್ತಿರುತ್ತವೆ ಮತ್ತು ಹಾರಾಡುತ್ತಿರುತ್ತವೆ.
- ಸಂತೋಷ್ ರಾವ್ ಪೆರ್ಮುಡ
ಕರ್ನಾಟಕ ಪ್ರವಾಸಿ ತಾಣಗಳ ತವರೂರು. ಕರ್ನಾಟಕದ ಉದ್ದಗಲಕ್ಕೂ ಪ್ರವಾಸಿ ತಾಣಗಳಿವೆ. ಆದರೆ ಅವುಗಳಲ್ಲಿ ಬಹುತೇಕ ನಮ್ಮ ಅರಿವಿಗೆ ಬಂದಿಲ್ಲ ಅಷ್ಟೇ. ಅಂಥದ್ದೇ ಒಂದು ತಾಣ ಬೀದರ್ ಜಿಲ್ಲೆಯಲ್ಲಿನ ನರಸಿಂಹ ಝರಣಿ ದೇವಾಲಯ. ಇದೊಂದು ಗುಹಾ ದೇವಾಲಯ. ಪುರಾತನ ದೇವಾಲಯವೂ ಹೌದು. ಬೀದರ್ ನಗರದಿಂದ ಸುಮಾರು 4.8 ಕಿಮೀ ದೂರದ ಮಣಿಚೂಲ ಬೆಟ್ಟದ ಶ್ರೇಣಿಯಲ್ಲಿದ್ದು, 300 ಮೀ ಸುರಂಗವನ್ನು ಹೊಂದಿದೆ.
ಇದನ್ನೂ ಓದಿ: ಗಿರ್ಗಾಂವ್ ಚೌಪಾಟಿಯಲ್ಲಿ ಶಿವನ ಸನ್ನಿಧಿ
ಗುಹೆಯೊಳಗೆ ಹರಿ-ಹರ
ಈ ದೇವಾಲಯದ ಸುರಂಗದಲ್ಲಿ ಸಾಗಿ ನರಸಿಂಹನ ಅವತಾರವನ್ನು ವೀಕ್ಷಿಸಬಹುದು. ಈ ಗುಹೆಯ ಒಳಭಾಗದಲ್ಲಿ ಮೂರ್ನಾಲ್ಕು ಅಡಿಗಳಷ್ಟು ಎತ್ತರಕ್ಕೆ ನಿಂತಿದ್ದು, ಅದರಲ್ಲೇ ಭಕ್ತರು ನರಸಿಂಹ ಸ್ವಾಮಿಯ ದರ್ಶನಕ್ಕೆ ಸಾಗಬೇಕು. ಗುಹೆಯ ಮೇಲ್ಛಾವಣಿಯಲ್ಲಿ ಬಾವಲಿಗಳು ನೇತಾಡುತ್ತಿರುತ್ತವೆ ಮತ್ತು ಹಾರಾಡುತ್ತಿರುತ್ತವೆ. ಈ ಗುಹೆಯಲ್ಲಿ ಭಕ್ತರು ಸಾಗುವಾಗ ಗೋವಿಂದಾ, ನರಸಿಂಹ, ಹರಿ ಎಂದು ನಾಮಸ್ಮರಣೆ ಮಾಡುತ್ತಿರುತ್ತಾರೆ. ಒಳಗೆ ಭಗವಾನ್ ನರಸಿಂಹನ ಮೂರ್ತಿ ಮತ್ತು ಶಿವಲಿಂಗವಿದೆ. ಇಲ್ಲಿ ಏಕಕಾಲಕ್ಕೆ ಸುಮಾರು ಎಂಟು ಜನ ನಿಂತು ಈ ಅದ್ಭುತ ದೃಶ್ಯವನ್ನು ನೋಡಬಹುದು. ಉಳಿದವರು ತಮ್ಮ ಪಾಳಿಗಾಗಿ ಕಾಯಬೇಕು. ಇಲ್ಲಿ ನೀರು ನಿರಂತರವಾಗಿ ಹರಿಯುತ್ತಾ ಇರುತ್ತದೆ. ಮಕ್ಕಳಿದ್ದರೆ ಅವರನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಹೋಗಬೇಕು.
ಗಂಧಕ ಭರಿತ ನೀರು
ಗುಹೆಯೊಳಗಿನ ನೀರಿನಲ್ಲಿ ಗಂಧಕದ ಅಂಶವಿದೆ. ಈ ನೀರಿಗೆ ಮನುಷ್ಯನ ಚರ್ಮ ರೋಗಗಳನ್ನು ಗುಣಪಡಿಸುವ ಗುಣವಿದೆ ಎಂಬುದು ಜನರ ನಂಬಿಕೆ. ಮಕ್ಕಳಿಲ್ಲದ ದಂಪತಿ ಇಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರೆ ಮಕ್ಕಳಾಗುತ್ತವೆ ಎಂಬುದು ಹಲವರ ಮಾತು. ಈ ದೇವಾಲಯದ ಸುರಂಗದಲ್ಲಿ ತುಂಬಿರುವ ನೀರಿನಲ್ಲಿ ಸಾಗಿ ದೇವರ ದರ್ಶನ ಪಡೆಯುವುದು ಭಕ್ತಾದಿಗಳಿಗೆ ಒಂದು ರೀತಿ ರೋಮಾಂಚಕ ಮತ್ತು ಸಾಹಸದ ಅನುಭವವನ್ನು ನೀಡುತ್ತದೆ.

ನರಸಿಂಹ ಸ್ವಾಮಿ ನೆಲೆಸಲು ಕಾರಣ
ನರಸಿಂಹ ಅವತಾರದ ವಿಷ್ಣುವು ಜಲಾಸುರ ಎಂಬ ದೈತ್ಯನನ್ನು ಇದೇ ಗುಹೆಯಲ್ಲಿ ಕೊಂದನು. ಸಾಯುವಾಗ ಜಲಾಸುರನು ನರಸಿಂಹನಲ್ಲಿ ತಾನು ವಾಸಿಸುತ್ತಿದ್ದ ಗುಹೆಯಲ್ಲೇ ನೆಲೆನಿಂತು ಭಕ್ತರನ್ನು ಹರಸುವಂತೆ ಬೇಡಿಕೊಂಡನು ಎನ್ನಲಾಗಿದ್ದು, ಅದರ ಪರಿಣಾಮವಾಗಿ ನರಸಿಂಹ ಸ್ವಾಮಿಯು ಇಲ್ಲಿ ನೆಲೆನಿಂತನು ಎನ್ನಲಾಗಿದೆ.
ನರಸಿಂಹ ಸ್ವಾಮಿಯಿಂದ ಕೊಲ್ಲಲ್ಪಟ್ಟ ಜಲಾಸುರನು ನಂತರ ನೀರಾಗಿ ಮಾರ್ಪಟ್ಟು, ನರಸಿಂಹ ದೇವರ ಪಾದಗಳ ಕೆಳಗೆ ಹರಿಯಲು ಪ್ರಾರಂಭಿಸಿದನು. ಅಂದಿನಿಂದ ಗುಹೆಯ ಸುರಂಗದಲ್ಲಿ ನೀರಿನ ಹರಿವು ನಿರಂತರವಾಗಿದ್ದು, ಬೇಸಗೆಯಲ್ಲೂ ಈ ನೀರಿನ ಚಿಲುಮೆ ಬತ್ತಿಲ್ಲ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಹತ್ತಿರದ ಪ್ರವಾಸಿ ತಾಣಗಳು
ನರಸಿಂಹ ಝರಣಿಗೆ ಭೇಟಿ ನೀಡಿದ ನಂತರ ಪ್ರವಾಸಿಗರು ಗುರುನಾನಕ್ ಝೀರಾ ಸಾಹಿಬ್, ಪಾಪನಾಶ ಶಿವ ದೇವಾಲಯ, ಐತಿಹಾಸಿಕ ಬೀದರ್ ಕೋಟೆ ಇತ್ಯಾದಿಗಳನ್ನು ವೀಕ್ಷಿಸಬಹುದು.
ನರಸಿಂಹ ಝರಣಿ ಗುಹೆಯ ದೇವಾಲಯದ ನರಸಿಂಹ ಸ್ವಾಮಿಯ ಮೂರ್ತಿಯು ಸ್ವಯಂಭೂ ರೂಪ ಎನ್ನಲಾಗಿದೆ. ಸಾಕಷ್ಟು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಅತಿಯಾದ ಸೆಖೆಯ ಕಾರಣಕ್ಕೆ, ದೇವಾಲಯದಲ್ಲಿ ಎಸಿ ಅಳವಡಿಸಲಾಗಿದೆ. ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಈ ದೇವಾಲಯವು ಬೆಳಗ್ಗೆ 8:00- ಸಂಜೆ 6ರವರೆಗೆ ತೆರೆದಿರುತ್ತದೆ. ಪ್ರವಾಸಿಗರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿದ್ದು, ವಿಶಾಲ ವಾಹನ ನಿಲುಗಡೆ, ಬಹುಪಯೋಗಿ ಸಭಾಂಗಣ, ವಿಶ್ರಾಂತಿ ಕೊಠಡಿಗಳು, ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ದಾರಿ ಹೇಗೆ?
ಬೀದರ್ ಒಂದು ಜಿಲ್ಲಾ ಕೇಂದ್ರ. ರಾಜ್ಯದ ವಿವಿದೆಡೆಯಿಂದ ಸಾರಿಗೆ ಸೌಕರ್ಯ ಉತ್ತಮವಾಗಿದೆ. ಬೆಂಗಳೂರಿನಿಂದ ಬೀದರ್‌ಗೆ ನೇರ ಬಸ್ ಸೌಲಭ್ಯವಿದ್ದು, ಅಲ್ಲಿಂದ ಪ್ರವಾಸಿ ತಾಣಗಳಿಗೆ ಸ್ಥಳೀಯ ವಾಹನಗಳನ್ನು ಬಳಸಬಹುದು. ಬೀದರ್ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನೂ ಹೊಂದಿದೆ.