ಪಾನಕ ಪ್ರಿಯ ಪಾನಕಾಲ ನರಸಿಂಹ
ಮಂಗಳಗಿರಿಯನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಆನೆಯಂತೆ ಕಾಣುತ್ತದೆ. ಕಥೆಯೊಂದರ ಪ್ರಕಾರ, ರಾಜನೊಬ್ಬನ ಮಗ ತೀರ್ಥಯಾತ್ರೆಗೆ ಹೊರಟು ಇಲ್ಲಿಗೆ ಬಂದು ವಿಷ್ಣುವನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿದ. ನಂತರ ರಾಜನೇ ಬಂದು ತನ್ನ ಮಗನನ್ನು ಕರೆದರೂ, ಮರಳಿ ರಾಜ್ಯಕ್ಕೆ ಹೋಗಲು ನಿರಾಕರಿಸಿದ. ನಂತರ ಆತನೇ ಆನೆಯ ರೂಪ ಪಡೆದು ಇಲ್ಲಿ ಉಳಿದನು ಎನ್ನಲಾಗಿದೆ.
- ಅಶ್ವಿನಿ ಸುನಿಲ್
ನಮ್ಮ ದೇಶದ ಪ್ರತಿ ದೇವಾಲಯಕ್ಕೂ ಅದರದ್ದೇ ಆದ ವೈಶಿಷ್ಟ್ಯವಿದೆ, ಇತಿಹಾಸವಿದೆ. ದೇವಸ್ಥಾನ, ಪೂಜಾ ಕ್ರಮ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯಗಳು ಭಿನ್ನವಾಗಿರಬಹುದು. ಆದರೆ ಭಕ್ತಿ ಮಾತ್ರ ಒಂದೇ. ತಿರುಪತಿಯ ಲಡ್ಡು, ಶಬರಿಮಲೆಯ ಅರವಣ ಪ್ರಸಾದ, ಧರ್ಮಸ್ಥಳದ ಪಂಚ ಕಜ್ಜಾಯ, ಕೊಲ್ಲೂರಿನ ಕಷಾಯ ಪ್ರಸಾದ, ಕೇರಳದ ಕೆಲವು ದೇವಾಲಯಗಳ ಔಷದ ಪ್ರಸಾದಗಳು ಪ್ರಸಿದ್ಧ. ಒಣ ಹಣ್ಣು, ಪೊಂಗಲ್, ಪುಳಿಯೋಗರೆ, ಅಪ್ಪಂ, ಹಾಲು ಪಾಯಸ, ಪಂಚಾಮೃತದಂಥ ಪ್ರಸಾದಗಳನ್ನು ಕೂಡ ನೀಡುವ ಪದ್ಧತಿಯಿದೆ. ಹೀಗೆ ವಿಭಿನ್ನ ಪ್ರಸಾದಗಳ ಸಾಲಿನಲ್ಲಿ ಮಂಗಳಗಿರಿಯ ಪಾನಕಾಲ ನರಸಿಂಹಸ್ವಾಮಿಯ ಪಾನಕ ಪ್ರಸಾದವೂ ಒಂದು.
ಆಂಧ್ರಪ್ರದೇಶದ ರಾಜಧಾನಿ ವಿಜಯವಾಡದ ಸಮೀಪದ ಮಂಗಳಗಿರಿ ಬೆಟ್ಟದಲ್ಲಿ ಪಾನಕಾಲ ನರಸಿಂಹಸ್ವಾಮಿ ಪುರಾತನ ದೇವಾಲಯವಿದೆ. ಇದು ಹಲವು ವೈಶಿಷ್ಟ್ಯಗಳ ದೇವಾಲಯ.
ಇದನ್ನೂ ಓದಿ: ಶ್ರಾವಣದ ದಿವ್ಯತೆ, ಶಿವನಿಗೆ ಧನ್ಯತೆ!
ಒಂದೇ ಗಿರಿಯಲ್ಲಿ ಮೂರು ನರಸಿಂಹಸ್ವಾಮಿ ದೇವಾಲಯಗಳು
ಒಂದೇ ಊರಿನಲ್ಲಿ ಹಲವು ದೇವಾಲಯಗಳಿರುವುದು ಸಾಮಾನ್ಯ. ಆದರೆ, ಮಂಗಳಗಿರಿಯಲ್ಲಿ ಮೂರು ನರಸಿಂಹಸ್ವಾಮಿ ದೇವಾಲಯಗಳು ಇರುವುದು ವಿಶೇಷ. ಬೆಟ್ಟದ ಕೆಳಗೆ ಲಕ್ಷ್ಮೀನರಸಿಂಹನ ದೇವಾಲಯವಿದ್ದರೆ, ಬೆಟ್ಟದ ಮೇಲೆ ಪಾನಕಾಲ ನರಸಿಂಹಸ್ವಾಮಿ ದೇವಾಲಯವಿದೆ. ಅಲ್ಲಿಂದ ಕೆಲವು ಹೆಜ್ಜೆ ಮೇಲೇರಿದರೆ ಗಂದಾಲ ನರಸಿಂಹಸ್ವಾಮಿಯ ದೇವಸ್ಥಾನವಿದೆ.
ಪುರಾಣಗಳಲ್ಲಿ ಮಂಗಳಗಿರಿ
ಮಂಗಳಗಿರಿಯನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಆನೆಯಂತೆ ಕಾಣುತ್ತದೆ. ಕಥೆಯೊಂದರ ಪ್ರಕಾರ, ರಾಜನೊಬ್ಬನ ಮಗ ತೀರ್ಥಯಾತ್ರೆಗೆ ಹೊರಟು ಇಲ್ಲಿಗೆ ಬಂದು ವಿಷ್ಣುವನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿದ. ನಂತರ ರಾಜನೇ ಬಂದು ತನ್ನ ಮಗನನ್ನು ಕರೆದರೂ, ಮರಳಿ ರಾಜ್ಯಕ್ಕೆ ಹೋಗಲು ನಿರಾಕರಿಸಿದ. ನಂತರ ಆತನೇ ಆನೆಯ ರೂಪ ಪಡೆದು ಇಲ್ಲಿ ಉಳಿದನು ಎನ್ನಲಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಮಂಗಳಗಿರಿಯನ್ನು ಮಂಗಳ ನಿಲಯ ಎಂದು ಕರೆಯಲಾಗಿತ್ತು ಎನ್ನಲಾಗಿದೆ. ಇಲ್ಲಿ ಕೃಷ್ಣದೇವರಾಯನ ಕಾಲದ ಒಂದು ಶಾಸನ ದೊರೆತಿದೆ.
ಅಗಲವಾಗಿ ಬಾಯಿ ತೆರೆದಿರುವ ನರಸಿಂಹಸ್ವಾಮಿ ದೇವರು ಇಲ್ಲಿಯ ವಿಶೇಷತೆ. ಕಣ್ಣು, ಮೂಗು, ಬಾಯಿ, ಕೈ-ಕಾಲು ಹೀಗೆ ಯಾವುದೇ ಭೌತಿಕ ರೂಪವಿಲ್ಲದ ದೇವರ ಮುಖವು ಲೋಹದಿಂದ ಮಾಡಲ್ಪಟ್ಟಿದ್ದು, ಬಾಯಿಯು ಸುಮಾರು ಹದಿನೈದು ಸೆಂಟಿಮೀಟರ್ನಷ್ಟು ಅಗಲವಾಗಿ ತೆರೆದುಕೊಂಡಿದೆ

ಪಾನಕ ಕುಡಿಯುವ ದೇವರು
ಭಕ್ತರು ಇಲ್ಲಿ ದೇವರಿಗೆ ಬೆಲ್ಲದ ಪಾನಕವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಅರ್ಚಕರು ಪಾನಕವನ್ನು ದೇವರ ಬಾಯಿಗೆ ಹಾಕುತ್ತಾರೆ. ಆಗ ದೇವರ ಗಂಟಲಿನಿಂದ ಗಟಗಟ ಶಬ್ದ ಕೇಳಿಬರುತ್ತದೆ. ಪ್ರಸಾದ ರೂಪದಲ್ಲಿ ಭಕ್ತರಿಗೂ ಪಾನಕವನ್ನೇ ಕೊಡಲಾಗುತ್ತದೆ. ಪಾನಕ ತುಂಬಿಸಿಕೊಳ್ಳಲು ಅಲ್ಲೇ ಬಾಟಲಿಯೂ ಸಿಗುತ್ತದೆ.
ಇರುವೆಗಳೇ ಇಲ್ಲಿಲ್ಲ
ಪ್ರತಿದಿನ ದೇವರಿಗೆ ಸಾವಿರಾರು ಭಕ್ತರು ಬೆಲ್ಲದ ಪಾನಕ ಅರ್ಪಿಸುತ್ತಾರೆ. ಆ ಪಾನಕ ಎಲ್ಲಿಗೆ ಹೋಗುತ್ತದೆ ಎನ್ನುವುದು ಒಂದು ಸೋಜಿಗದ ವಿಷಯ. ಗರ್ಭಗುಡಿಯಲ್ಲಿ ಇಷ್ಟೆಲ್ಲಾ ಬೆಲ್ಲದ ಪಾನಕ ಸುರಿದರೂ ಒಂದೇ ಒಂದು ಇರುವೆಯಾಗಲೀ, ನೊಣಗಳಾಗಲೀ ಇಲ್ಲದಿರುವುದು ಅಚ್ಚರಿಯ ಸಂಗತಿ.
ಗಾಂದಾಲ ನರಸಿಂಹಸ್ವಾಮಿ
ಬೆಟ್ಟದ ತುದಿಯಲ್ಲಿರುವ ಗಾಂದಾಲ ನರಸಿಂಹಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹವಿಲ್ಲ. ಆದರೆ ಭಕ್ತರು ಇಲ್ಲಿ ದೇವರನ್ನು ನೆನೆದು ದೀಪ ಬೆಳಗಿಸುತ್ತಾರೆ. ಹೀಗೆ ದೀಪ ಬೆಳಗಿಸಿದರೆ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.

ಮಂಗಳಗಿರಿಗೆ ಹೋಗಿ ಸೀರೆಕೊಳ್ಳದಿದ್ದರೆ ಹೇಗೆ?
ಮಂಗಳಗಿರಿ ಸೀರೆಗಳು ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾಗಿದೆ. ಜಿಐ ಟ್ಯಾಗ್ ಹೊಂದಿದೆ. ಮಂಗಳಗಿರಿ ರೇಷ್ಮೆ ಸೀರೆಗಳು ಹತ್ತಿಯ ಸೀರೆಯಷ್ಟೇ ನುಣುಪಾಗಿರುತ್ತವೆ. ಈ ಸೇರಿಗಳ ಅಂಚಿಗೆ ನಿಜಾಂ ಅಂಚು ಎಂದು ಕರೆಯಲಾಗುತ್ತದೆ. ಗಾಢಬಣ್ಣದ ಸೀರೆಗಳಿಗೆ ಈ ಜರಿಯ ಅಂಚು ಸೌಂದರ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.