• ಮಂಜುನಾಥ ಡಿ. ಎಸ್.

ನೇಪಾಳದ ಎರಡನೆಯ ದೊಡ್ಡ ನಗರ ಪೋಖರಾ. ಇದು ನೇಪಾಳದ ಪ್ರವಾಸೋದ್ಯಮ ರಾಜಧಾನಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಅತ್ಯಂತ ಹಿರಿದಾದ ಫೇವಾ ಸರೋವರ ಸೇರಿ ಒಟ್ಟು ಎಂಟು ಸರೋವರಗಳಿಗೆ ತವರಾಗಿದೆ. ಹಸಿರು ಹೊದ್ದು ಮುಗಿಲೆತ್ತರಕ್ಕೆ ತಲೆಯೆತ್ತಿರುವ ಬೆಟ್ಟಗಳಿಂದ ಸುತ್ತುವರಿದಿರುವ ಫೇವಾ ಪುಷ್ಕರಿಣಿಯ ನಡುಗಡ್ಡೆಯಲ್ಲಿ ‘ತಾಲ್ ಬಾರಾಹಿ’ ಮಾತೆಯ ಚಿಕ್ಕ ದೇಗುಲವಿದೆ. ಪಗೋಡ ಶೈಲಿಯ ಈ ಮಂದಿರವನ್ನು ಸ್ಥಳೀಯರು ಲೇಕ್ ಟೆಂಪಲ್ ಅಥವಾ ಬಾರಾಹಿ ಮಂದಿರ ಎಂದೂ ಕರೆಯುತ್ತಾರೆ. ದುರ್ಗಾ ದೇವಿಯ ಒಂದು ರೂಪವೆಂದು ಪರಿಗಣಿಸಲಾಗುವ ವಾರಾಹಿ ಮಾತೆಯ ಕುರಿತಂತೆ ಅನೇಕ ದಂತಕತೆಗಳಿವೆ. ಈ ಮಾತೆಯ ದರ್ಶನಕ್ಕಾಗಿ ಶ್ರದ್ಧಾಳುಗಳು ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಕಾಲಗರ್ಭದಲ್ಲಿ ಅಡಗಿಹೋಗಿದ್ದ ಐತಿಹಾಸಿಕ ದೇಗುಲ...!

ಪೋಖರಾ ನಗರದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, 2018ರಲ್ಲಿ ಮಾತಾ ತಾಲ್ ಬಾರಾಹಿ ಆರತಿ ಸೇವಾ ಟ್ರಸ್ಟ್ ಸ್ಥಾಪನೆಗೊಂಡಿತು. ಈ ಸಂಸ್ಥೆಯು ಪ್ರತಿದಿನ ಸಂಜೆ ಫೇವಾ ಕೊಳದ ತಟದಲ್ಲಿ ಬಾರಾಹಿ ಆರತಿಯನ್ನು ಆಯೋಜಿಸುತ್ತದೆ. ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಕೊಳದ ದಡದಲ್ಲಿ ಆರತಿಗಾಗಿ ತಾತ್ಕಾಲಿಕ ವೇದಿಕೆಯನ್ನು ಸಿದ್ಧಪಡಿಸುತ್ತಾರೆ. ವೇದಿಕೆಯ ಮೇಲೆ ಪೂಜಾ ಪರಿಕರಗಳನ್ನು ಓರಣವಾಗಿ ಜೋಡಿಸುತ್ತಾರೆ. ವೇದಿಕೆಯ ಮುಂಭಾಗದಲ್ಲಿ ವೀಕ್ಷಕರು ಕೂಡಲು ಅನುಕೂಲವಾಗುವಂತೆ ಬೆಂಚುಗಳನ್ನು ಜೋಡಿಸುತ್ತಾರೆ. ಆ ವೇಳೆಗೆ ಅಲ್ಲಿಗೆ ಆಗಮಿಸಿದ ವೀಕ್ಷಕರು ಆಯಕಟ್ಟಿನ ಆಸನಗಳಲ್ಲಿ ಆಸೀನರಾಗುತ್ತಾರೆ. ಅರತಿ ಆರಂಭವಾಗುವ ತನಕ ಬೆಟ್ಟಗಳು, ನಡುಗಡ್ಡೆ, ಸರೋವರ, ಜಲಾಶಯದಲ್ಲಿ ಸಂಚರಿಸುತ್ತಿರುವ ದೋಣಿ ಇತ್ಯಾದಿಗಳನ್ನು ನೋಡಿ ಅನಂದಿಸುತ್ತಾ ಸಮಯ ದೂಡುತ್ತಾರೆ.

ಸಂಧ್ಯಾಕಾಲ ಸಮೀಪಿಸುತ್ತಿದ್ದಂತೆ ವಿಶೇಷ ಉಡುಪು ಧರಿಸಿದ ಅರ್ಚಕರು ಆಗಮಿಸುತ್ತಾರೆ. ಸೂರ್ಯಾಸ್ತದ ನಂತರ ಸಂಕಲ್ಪದೊಂದಿಗೆ ಆರತಿಯ ಪ್ರಕ್ರಿಯೆ ಆರಂಭವಾಗುತ್ತದೆ. ಅರ್ಚಕರು ಮೊಳಗಿಸುವ ಶಂಖನಾದ ವೀಕ್ಷಕರ ಗಮನ ಸೆಳೆಯುತ್ತದೆ. ಪುಷ್ಪ, ಧೂಪ, ದೀಪಗಳಿಂದ ದೇವಿಯನ್ನು ಅರ್ಚಿಸುತ್ತಾರೆ. ಈ ಸಮಯದಲ್ಲಿ ಇಡೀ ಪರಿಸರ ಮಂತ್ರಘೋಷ, ಸ್ತೋತ್ರಗಳ ಪಠಣಗಳಿಂದ ಅನುರಣಿಸುತ್ತದೆ. ಸಂಧ್ಯಾಕಾಲದ ಈ ಆರತಿಯಲ್ಲಿ ಶ್ರದ್ಧಾಳುಗಳು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಾರೆ.

New Project (1)

ನಾನು ಈ ಆರತಿಯನ್ನು ವೀಕ್ಷಿಸಿದ ದಿನ ಗಂಗಾಸ್ತೋತ್ರ, ಮಹಿಷಾಸುರಮರ್ದಿನೀ ಸ್ತೋತ್ರ, ಅಚ್ಯುತಾಷ್ಟಕ, ಮೊದಲಾದ ಸ್ತುತಿಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಶಿವತಾಂಡವ ಸ್ತೋತ್ರದೊಡನೆ ತಾಲ್ ಬಾರಾಹಿ ಮಾತೆಗೆ ಆರತಿ ಮಾಡಲಾಯಿತು. ಈ ಸ್ತೋತ್ರಕ್ಕೆ ಹೆಜ್ಜೆ ಹಾಕುವಂತೆ ಆಯೋಜಕರು ಭಕ್ತರನ್ನು ಆಹ್ವಾನಿಸಿದರು. ಆ ಕರೆಗೆ ಓಗೊಟ್ಟ ನೂರಾರು ಭಕ್ತಾದಿಗಳು ಭಾವಪರವಶರಾಗಿ ಕುಣಿದಾಡುತ್ತಿದ್ದರು.

ವಾರಾಣಸಿಯ ಗಂಗಾ ಆರತಿಯನ್ನು ಅನುಕರಿಸಿ ಆಯೋಜಿಸಲಾಗಿದ್ದ ತಾಲ್ ಬಾರಾಹಿ ಆರತಿ ಸುಮಾರು ನಲವತ್ತು ನಿಮಿಷಗಳ ಕಾಲ ನಿರಂತರವಾಗಿ ಸಾಗುತ್ತದೆ. ಈ ಆರಾಧನೆಯ ಚಂದದ ದೃಶ್ಯಗಳನ್ನು ಸನಿಹದಿಂದ ಕಂಡು ಆನಂದಿಸಲು ಪ್ರವಾಸಿಗರ ದಂಡು ಆಗಮಿಸಿತ್ತು. ಬಾರಾಹಿ ಆರತಿ ಪೋಖರಾ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಂಡಿದೆ. ಕಾರ್ಯಕ್ರಮದ ಕೊನೆಯಲ್ಲಿ, ಅಲ್ಲಿ ನೆರೆದಿದ್ದ ಭಕ್ತವೃಂದಕ್ಕೆ ಆರತಿಗೆ ನಮಿಸುವ ಅವಕಾಶ ಕಲ್ಪಿಸಲಾಯಿತು. ವಾರಾಹಿ ಮಾತೆಯ ಪ್ರಸಾದವನ್ನೂ ವಿತರಿಸಲಾಯಿತು.