- ವಸಂತ ಕಲ್ ಬಾಗಲ್

ಬೆಂಗಳೂರಿನಿಂದ ವಂದೇ ಭಾರತ ರೈಲಿನಲ್ಲಿ 5.30 ಗಂಟೆ ಪ್ರಯಾಣ ಮಾಡಿದರೆ, ತಿರುಚಿರಪಳ್ಳಿಗೆ ಸೇರಬಹುದು. ಇಲ್ಲಿ ವಿಶ್ವದ ನಾಲ್ಕನೆಯ ಅತಿ ಪ್ರಾಚೀನ ಮಾನವ ನಿರ್ಮಿತ ʻರಾಕ್ ಫೋರ್ಟ್ʼ ಕಲ್ಲಿನ ಕೋಟೆ, ಬೆಟ್ಟದ ಮೇಲಿದೆ.

ಚೋಳ ರಾಜನಾದ ಕರಿಕಾಲ ಚೋಳ ಇದನ್ನು ಕಟ್ಟಿಸಿದ್ದು, ಇಲ್ಲಿ ಉಚ್ಚಿ ಪಿಳ್ಳೆಯಾರ್ ಎಂಬ ಗಣೇಶನ ದೇವಾಲಯವಿದೆ. ಪಕ್ಕದಲ್ಲೇ, ಇರುವ ತಾಯುಂ ಮಾನವರ್ ಎಂಬ ಶಿವನ ಗುಡಿಗೆ ಎಲ್ಲೆಲ್ಲಿಂದಲೋ ಕೂಸು ಹಡೆದವರು ಬಂದು ಹರಕೆ ಸಲ್ಲಿಸುತ್ತಾರೆ. ಶಿವನೇ ತಾಯಿಯ ರೂಪದಲ್ಲಿ ಬಂದು ಪ್ರಸವ ಮಾಡಿಸಿದನೆಂಬ ಪ್ರತೀತಿ ಇಲ್ದೆಲಿ !

ತಿರುಚಿರಪಳ್ಳಿ , ವಿದ್ಯಾಸಂಸ್ಥೆಗಳ ಬೀಡು

ಈ ಪಟ್ಟಣದಿಂದ 15 ಕಿಮೀ. ದೂರದಲ್ಲಿ ಪುರಾತನ ಪುಣ್ಯ ಕ್ಷೇತ್ರ "ಭೂ ವೈಕುಂಠ" ವೆಂದೇ ಕರೆಯಲ್ಪಟ್ಟ ಶ್ರೀರಂಗಂ ಎಂಬ ದ್ವೀಪ ದೇಗುಲವಿದೆ. ಈ ಶ್ರೀವೈಷ್ಣವ ದೇವಾಲಯವು ಹಲವು ಚಾರಿತ್ರಿಕ ಕಾರಣಗಳಿಗೆ ಮುಖ್ಯವಾಗುತ್ತದೆ. ಇದು155 ಎಕರೆಯಷ್ಟು ವಿಶಾಲವಾಗಿದ್ದು, ಇಲ್ಲಿ 81 ದೇಗುಲಗಳು, 21 ಗೋಪುರಗಳು, 39 ಮಂಟಪಗಳು ಮತ್ತು ಅನೇಕ ಕಲ್ಯಾಣಿಗಳು ಇವೆ. ಇದು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ, ಹಾಗೂ ಇಲ್ಲಿ 800 ಶಾಸನಗಳು 8ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿವೆ.

ಇತ್ತೀಚಿಗೆ ಸೇರ್ಪಡೆಯಾದ ಹೊರ ಗೋಪುರವು ಸರಿಸುಮಾರು 240 ಅಡಿ ಎತ್ತರವಿದ್ದು, 1987ರಲ್ಲಿ ಪೂರ್ಣಗೊಂಡಿತು. ಶ್ರೀರಂಗಂ ದೇವಾಲಯವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕಾರ್ಯನಿರ್ವಹಣೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ದ್ವೀಪದಲ್ಲಿದೆ ಎಂಬುದು ಆಶ್ಚರ್ಯ ಪಡುವಂಥ ವಿಷಯ.

ಕಾವೇರಿ ಮತ್ತು ಕೊಲ್ಲಿಡಂ ನದಿಗಳ ಪ್ರಶಾಂತ ನೆಲೆ

tiruchirapalli1

ಶ್ರೀರಂಗಂ ಊರು ಹೇಗೆ ಹುಟ್ಟಿತು ಎಂಬುದಕ್ಕೆ ತ್ರೇತಾಯುಗದ ಕತೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅಯೋಧ್ಯಾ ರಾಮನ ಪಟ್ಟಾಭಿಶೇಕವಾದ ನಂತರ, ಲಂಕೆಗೆ ಮರಳಿ ಹೊರಟ ಶರಣಾಗತಿ ಪಡೆದ ರಾಜ್ಯಾಭಿಷಿಕ್ತ ದಾನವ ಲಂಕೆಯ ವಿಭೀಷಣನು, ಶ್ರೀರಾಮನನ್ನು ನಿತ್ಯ ಪೂಜೆಗೆ ಅರ್ಚಾ ಮೂರ್ತಿಯನ್ನು ಕಳುಹಿಸಿಕೊಡಲು ಕೋರಿದನು. ಆಗ ಶ್ರೀರಾಮನು ತಾನು ಪೂಜಿಸುತ್ತಿದ್ದ ಆದಿಶೇಷನ ಮೇಲೆ ಪವಡಿಸಿರುವ ಶ್ರೀರಂಗನಾಥನ ಮೂರ್ತಿಯನ್ನು ಕೊಟ್ಟನು. ಸಂತೋಷಗೊಂಡ ವಿಭೀಷಣ ಆಕಾಶಮಾರ್ಗವಾಗಿ ದಕ್ಷಿಣಕ್ಕೆ ತರುತ್ತಿರಲು, ಆಯಾಸ ಪರಿಹಾರಕ್ಕೆ ದಕ್ಷಿಣದ ಕಾವೇರಿ ನದಿಯ ದಡದಲ್ಲಿ ರಂಗನಾಥನ ಮೂರ್ತಿಯನ್ನು ಇಳಿಸಿದನು. ಕಾವೇರಿ ನದಿಯಲ್ಲಿ ದಣಿವಾರಿಸಿಕೊಂಡು ಹಿಂದಿರುಗಿದಾಗ, ಅವನಿಗೆ ರಂಗನಾಥನ ವಿಗ್ರಹವನ್ನು ಮೇಲೆ ಎತ್ತಲು ಸಾಧ್ಯವೇ ಆಗಲಿಲ್ಲ. ಆಶ್ಚರ್ಯ ನಿರಾಸೆಗಳಿಂದ ಕುಗ್ಗಿದ ವಿಭೀಷಣನಿಗೆ ರಂಗನಾಥನು ತನಗೆ ಈ ಪುಣ್ಯ ನದಿಗಳ ಸಂಗಮದ ಸುಂದರ ತಾಣದಿಂದ ಮೇಲೆದ್ದು ಬರಲು ಸಾಧ್ಯವಾಗುತ್ತಿಲ್ಲ. ಇದು ʻತಿರುಪ್ಪಾರ್ಕಡಲ್ʼನಂತೆಯೇ ಪ್ರಶಾಂತವಾಗಿ ಇರುವುದರಿಂದ ಇಲೇ ಇದ್ದುಬಿಡುವೆ ಎಂದುಬಿಟ್ಟನು. ನಿರಾಸೆಗೊಂಡ ವಿಭೀಷಣನಿಗೆ , ರಂಗ, ಇಲ್ಲಿ ಮಲಗಿದರೂ ತನ್ನ ನೋಟವನ್ನು ದಕ್ಷಿಣದತ್ತ ಬೀರುವೆನೆಂದು ಆಶ್ವಾಸನೆ ಇತ್ತು ಸಮಾಧಾನಪಡಿಸಿ ಕಳಿಸಿದನು. ಈ ಕತೆ, ರಾಮಾಯಣ ಓದಿದವರೆಲ್ಲರಿಗೂ ತಿಳಿದದ್ದೇ.

ಹೀಗೊಮ್ಮೆ ದ್ವೀಪದ ಮಧ್ಯೆ ಇದ್ದ ರಂಗನಾಥನ ವಿಗ್ರಹವು ನೆರೆಯಲ್ಲಿ, ಮುಳುಗಿಹೋಯಿತು. ಜನ ಕ್ರಮೇಣ ಮರೆತರು. ರಂಗನಾಥನ ವಿಗ್ರಹವನ್ನು ನೋಡಿದವನೊಬ್ಬ ಅದರ ಕತೆಯನ್ನು ದಡದಲ್ಲಿ ಕುಳಿತು ದಿನವೂ ಹಾಡುತ್ತಲೇ ಇದ್ದನಂತೆ. ಅಲ್ಲೇ ಕುಳಿತ ಗಿಳಿ, ಅಭ್ಯಾಸ ಬಲದಲ್ಲಿ, ಅವನನ್ನು ಅನುಕರಿಸಿ ಅವನು ಹೇಳಿದ್ದೆಲ್ಲವನ್ನೂ ಹೇಳುತ್ತಿತ್ತಂತೆ. ಆತ ಹೊರಟು ಹೋದ ನಂತರವೂ ಆ ಗಿಳಿಯು ಹಾಡನ್ನು ಮರೆಯದೆ ಹೇಳುತ್ತಿರಲು, ಚೋಳ ರಾಜನ ವಂಶಜ 'ಧರ್ಮವರ್ಮ' ಒಮ್ಮೆ ಇದನ್ನು ಆಲಿಸಿ ಇದರಲ್ಲಿ ಏನೋ ಮರ್ಮ ವಿಶೇಷವಿದೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅವನಿಗೆ ಅರಿಕೆ ಆದದ್ದು -

ಕಾವೇರಿ ವಿರಜಾ ಸೇಯಂ ವೈಕುಂಠಮ್ ರಂಗ ಮಂದಿರಂ; ಸ ವಾಸುದೇವೋ ರಂಗೇಶಃ ಪ್ರತ್ಯಕ್ಷಮ್ ಪದಂ;

ವಿಮಾನಂ ಪ್ರಣವಾಕಾರಂ ವೇದಶೃಂಗಂ ಮಹಾತ್ಭುತಮ್; ಶ್ರಿರಂಗಶಾಯಿ ಭಗವಾನ್ ಪ್ರಾಣವಾರ್ಥ ಪ್ರಕಾಶಕಃ;

ಅಂದರೆ,

ವೈಕುಂಠಕ್ಕೆ ವಿರಜಾ (ನದಿ) ಹೇಗೋ ಹಾಗೆ; ಶ್ರೀರಂಗಕ್ಕೆ ಕಾವೇರಿ(ನದಿಯು); ಶ್ರೀರಂಗವು ವೈಕುಂಠವೇ, ರಂಗನೇ ವಾಸುದೇವ;

ವಿಮಾನವೇ ಪ್ರಣವ ಹಾಗೂ ಪ್ರಣವದ ಪ್ರತಿಪಾದನೆಯನ್ನು ಮಾಡುವವನೇ ರಂಗ;

ಇದನ್ನು ಅರ್ಥೈಸಿಕೊಂಡ 'ಗಿಳಿ ರಾಜ' ಧರ್ಮ ವರ್ಮ, ನದಿಯ ಪಾತ್ರದ ಆಳದಲ್ಲಿ ಅಡಗಿದ್ದ ರಂಗನಾಥನ ವಿಗ್ರಹವನ್ನು ಹೊರತೆಗೆಸಿದನು. ಊರವರೆಲ್ಲಾ ಸಂಭ್ರಮಿಸಿ ಅದಕ್ಕೊಂದು ಗೋಪುರವನ್ನು, ಗೋಡೆಗಳನ್ನು ಕಟ್ಟಿ ದೇವಾಲಯವನ್ನಾಗಿಸಿ ಪೂಜಿಸತೊಡಗಿದರು.

shreerangam1

ಮಲ್ಲಿಖಾಫರ್‌ನಂಥ ಮುಹಮ್ಮದೀಯರ ದಂಗೆಗೆ ನಿರಂತರ ಭಯದಲ್ಲಿ ಕುಗ್ಗಿದ ದಕ್ಷಿಣವು ಆಗಾಗ ತಲ್ಲಣಿಸುತ್ತಿತ್ತು. ಒಮ್ಮೆ ರಂಗನಾಥನ ಉತ್ಸವ ಮೂರ್ತಿಯನ್ನು ಸಂರಕ್ಷಿಸಲು ಸ್ವಾಮೀ ವೇದಾಂತ ದೇಶಿಕರು ಅದನ್ನು ಹೊತ್ತು ಹೋಗದಿರುವ ಜಾಗವಿಲ್ಲ; ಕರ್ನಾಟಕ, ಕೇರಳದಿಂದ, ಆಂಧ್ರ, ತಿರುಪತಿಯ ತನಕ ಕೊಂಡೊಯ್ದು ಬೆಟ್ಟಗಳಲ್ಲಿ ಅಡಗಿಸಿಟ್ಟು ನಂತರ ಶ್ರೀರಂಗಕ್ಕೆ ವಿಜಯನಗರ ಅರಸರ ಸೇನಾಪತಿಗಳ ಸಹಾಯದಿಂದ ತಂದರು ಎಂಬ ದಾಖಲೆ ಇದೆ .

ಹಾಗೆಯೇ, ಇಲ್ಲಿಯ ಅಮ್ಮನವರಾದ ರಂಗನಾಯಕಿಯ ಮೂಲ ವಿಗ್ರಹವನ್ನೂ, ಉತ್ಸವ ಮೂರ್ತಿಯನ್ನು 13ನೆಯ ಶತಮಾನದಲ್ಲಿ ದಾಳಿಕೋರರಿಂದ ರಕ್ಷಿಸಲು ಅಡಗಿಸಿಟ್ಟು, ಗೋಡೆ ಕಟ್ಟಿದ್ದರು. ಮತ್ತೆ ಅದನ್ನು ಪ್ರತಿಷ್ಠಾಪಿಸಿದ ನಂತರವೂ ಉತ್ಸವಗಳಲ್ಲಿ ಗರ್ಭ ಗುಡಿಯಿಂದ ಹೊರಗೇ ಬಾರದ ' ಹೊಸಲು ದಾಟದ ರಂಗನಾಯಕಿ'ಯನ್ನು, ಈಗಲೂ ರಂಗನಾಥನೇ ಪ್ರಾಕಾರದಲ್ಲಿ ಸುತ್ತಿ ಬಂದು ಎದುರು ನಿಂತು ನೋಡುತ್ತಾನೆ ಎನ್ನಲಾಗಿದೆ.

ವರ್ಷದಲ್ಲಿ ಒಂದೇ ಬಾರಿ ಇವರಿಬ್ಬರ ಜೋಡಿ ಮೆರವಣಿಗೆ ನಡೆಯುವುದು. ಹಾಗಾಗಿ ಇವರು 'ದಿವ್ಯ ದಂಪತಿಗಳು' ಎಂದು ಕರೆಯಲ್ಪಡುತ್ತಾರೆ .

ರಂಗನಾಯಕಿ ಗರ್ಭ ಗುಡಿಯ ಸಮೀಪವೇ , ʻಐಂದು ಕುಳಿ ಮೂನ್ ವಾಸಲ್ʼ ಎಂಬ ಮತ್ತೊಂದು ವಿಶೇಷವಿದೆ. ಐದು ಬೆರಳುಗಳ ಆಳವಾದ ಗುರುತು ಕಲ್ಲಿನಲ್ಲಿ ಹುದುಗಿದ್ದು, ಮತ್ತೊಂದು ಕೈಯ ಒಂದು ಬೆರಳು ಮುಂದೆ ಇದೆ. ರಂಗನಾಯಕಿ, ತನ್ನ ಗುಡಿಯಿಂದ, ಮಂಡಿ ಇಟ್ಟು, ಕೈಗಳನ್ನು ಊರಿಕೊಂಡು, ರಂಗನಾಥನು ಎರಡು ದ್ವಾರಗಳನ್ನು ದಾಟಿ ವೈಕುಂಠ ದ್ವಾರದ ಮೂಲಕ ಬರುತ್ತಿರುವನೇ ಎಂದು ಎದುರು ನೋಡುವ ಸನ್ನಿವೇಶವದು! ಅಂತೆಯೇ ಇಂದಿಗೂ ಪ್ರವಾಸಿಗರು ತಾವೂ ಬೆರಳೂರಿಕೊಂಡು ಬಾಗಿ ನೋಡುತ್ತಾರೆ.

ಸಾವಿರ ವರ್ಷಗಳಾದರೂ ಭಕ್ತರೊಂದಿಗಿರುವ ರಾಮಾನುಜಾಚಾರ್ಯರು

tiruchirapalli

ಪಾಲ್ಗುಣ ವಾರ್ಷಿಕ ಮೆರವಣಿಗೆಯೊಂದನ್ನು, ಕಣ್ಣು ತುಂಬಿಸಿಕೊಂಡ ರಾಮಾನುಜಾಚಾರ್ಯರು 1137ರಲ್ಲಿ , ತಮ್ಮ ದೇಹವನ್ನು ಆನಂದದಿಂದ ತ್ಯಜಿಸಿದರು. 120 ವರ್ಷಗಳು ಅವರು ಜೀವಸಹಿತ ಇದ್ದು ಅನೇಕಾನೇಕ ಧಾರ್ಮಿಕ, ಸೈದ್ಧಾಂತಿಕ ನಿಯಮಾಡಳಿತಗಳನ್ನು ಅಳವಡಿಸಿದ್ದರೂ ಅವರ ಶಿಷ್ಯರು ಅವರನ್ನು ಕಳಿಸಿ ಕೊಡಲು, ಕಳೆದುಕೊಳ್ಳಲು ತಯಾರಿರಲಿಲ್ಲ. ಅವರದ್ದೇ ತದ್ರೂಪು ಶೀಲಾ ಮೂರ್ತಿಯೊಂದಕ್ಕೆ ಗುರುಗಳ ಜೀವಾತ್ಮವನ್ನು ಅರ್ಪಿಸಿಕೊಂಡರು ಎನ್ನಲಾಗಿದೆ. ಆನಂತರ ಶ್ರೀ ರಂಗನಾಥನ ಇಚ್ಛೆಯಂತೆ, ಅವರ ಸಮಾಧಿ ಸ್ಥಿತಿಯನ್ನು ದೇವಸ್ಥಾನದ ಐದನೇ ಪ್ರಾಕಾರದಲ್ಲೇ ಗರ್ಭಗುಡಿಯಲ್ಲಿ ಇಟ್ಟರು. ಕುಳಿತಂತೆಯೇ ಇರುವ ಅವರ ದೇಹಕ್ಕೆ, ಕರ್ಪೂರ, ಕೇಸರಿ, ಅರಿಶಿನ ಕುಂಕುಮವನ್ನಷ್ಟೇ ಲೇಪಿಸಿದರು. ಸಾವಿರ ವರ್ಷಗಳು ಕಳೆದರೂ, ಅವರ ದೇಹ ಒಂದೇ ರೀತಿ ಇದೆ. ಈಗಲೂ ಉಗುರು, ಕಣ್ಣು ಎಲ್ಲವೂ ನೈಜ್ಯವಾಗಿಯೇ ಇದ್ದು, ಯತಿಗಳು ಕುಳಿತ ಭಂಗಿಯಲ್ಲಿದ್ದಾರೆ. ವಿಶ್ವದಲ್ಲೇ ಈ ತರನಾದ ಸಮಾಧಿ ಇರುವುದು ಇದೊಂದೇ ಎನ್ನುತ್ತಾರೆ. ವರ್ಷಕ್ಕೊಮ್ಮೆ ಕರ್ಪೂರ ಕುಂಕುಮ ಕೇಸರಿ ಲೇಪನ ಮಾಡುವರು. ಅದರ ಬಳಿ ಕುಳಿತು ಸುದೀರ್ಘ ಧ್ಯಾನವನ್ನು ಮಾಡಬಹುದು. ಮುಂದೆ ಇರುವ ಅರ್ಚಾ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಕ್ರಮಪ್ರಕಾರ ಪೂಜೆ ಆಗುತ್ತದೆ. ಹುಟ್ಟು ಹಬ್ಬದಂದು ಮೆರವಣಿಗೆ ನಡೆಯುತ್ತದೆ.

ಈ ಶ್ರೀರಂಗನಾಥನ ದೇವಸ್ಥಾನದ ಗೋಪುರವವನ್ನು ವಿಜಯನಗರದ ಅರಸರು ತಮ್ಮ ಕಾಲಾವಧಿಯಲ್ಲಿ ಕಟ್ಟಲಾಗದೇಹೋದರು. ಅದನ್ನು ʻಬೋಡು ಗೋಪುರʼ ಎಂದೇ ಕರೆಯುತ್ತಿದ್ದರು. ಇತ್ತೀಚೆಗಷ್ಟೇ, 87 ವರ್ಷದ 44ನೆಯ ಮಠಾಧಿಪತಿ ಜೀಯರ್ ಯತೀಂದ್ರ ಮಹಾದೇಶಿಕ ಅವರಿಗೆ ಕನಸಾಗಿ, ಗೋಪುರವನ್ನು ವಿಜೃಂಭಣೆಯಿಂದ ಕಟ್ಟಬೇಕೆಂದು ಆದೇಶವಾಯಿತು. ಹಣಕಾಸಿನ ನೆರವನ್ನು ಎಲ್ಲರಿಂದ ಸ್ವಾಮಿಗಳು ಪಡೆದರು. ಚಿತ್ರರಂಗಕ್ಕೆ ಸೇರಿದ ಇಳಯರಾಜ ಆದಿಯಾಗಿ ಹಣ ಸುರಿದರು. ಕಂಚಿ ಶಂಕರಾಚಾರ್ಯ, ಉತ್ತರ ದಕ್ಷಿಣ ಭಾರತದ ಎಲ್ಲಾ ಮಠಗಳು, ಅಲ್ಲದೆ ವಿದೇಶದಿಂದಲೂ ಸಹಾಯ ಒದಗಿ ಬಂದಿತು. ಸತತ ಎಂಟು ವರ್ಷಗಳಲ್ಲಿ 73 ಮೀಟರ್ ಎತ್ತರದ, ಬೃಹತ್ ಗೋಪುರ 1987ರಲ್ಲಿ ಪೂರ್ಣಗೊಂಡಿತು. ಕುಂಭಾಭಿಷೇಕವಾದ ಅರುತಿಂಗಳ ನಂತರ ಜೀಯರ್ ಸ್ವಾಮಿಗಳು ಕಾಲವಾದರು. ಈ ಬೃಹತ್ ಗೋಪುರ ಕಟ್ಟುವ ಬೆಳವಣಿಗೆ ಕುರಿತು ಆಗ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತಲೇ ಇತ್ತು. ಭೂ ವೈಕುಂಠಕ್ಕೆ ʻವೈಕುಂಠ ಏಕಾದಶಿʼ ದಿನ ದೇಶ ವಿದೇಶಗಳಿಂದ ಜನ ಸಾಗರದ ಮಹಾಪೂರವೇ ಬರುವುದು.

ತಿರುಚಿರಪಳ್ಳಿ ಹತ್ತಿರ ಅನೇಕ ಪುರಾತನ ದೇಗುಲಗಳಿವೆ. ಸಮಯಪುರಂ ಮಾರಿಯಮ್ಮನ ಗುಡಿಗೆ ಬುದ್ಧಿ ಭ್ರಮಣೆ ಆಗಿರುವವರನ್ನು ಕರೆತರುತ್ತಾರೆ. ಜಂಬುಕೇಶ್ವರನ ದೇವಾಲಯ ಸಹ ಬಹಳ ಪ್ರಾಚೀನವಾದದ್ದು. ಕಲ್ಲನೈ ಡ್ಯಾಮ್ ನೋಡಲು ಸುಂದರ ತಾಣ. ಈ ಪ್ರದೇಶಕ್ಕೆ ಪ್ರಯಾಣ ಮಾಡಲು ಸೆಪ್ಟಂಬರ್ ತಿಂಗಳಿಂದ ಜನವರಿ ತನಕ ಒಳ್ಳೆಯದು. ಬಿಸಿಲು ತಾಪ ಕಡಿಮೆಯೇ ಇರುತ್ತದೆ.