ವಾಸ... ಪ್ರವಾಸ.. ವಾಸನೆಯ ಸುತ್ತ!
ಮನೆಯ ಸದಸ್ಯರೆಲ್ಲರೂ ಮನೆ ಖಾಲಿ ಮಾಡಿ ಟ್ರಿಪ್ ಹೋದಾಗ ಮನೆಯ ಮೇಲ್ವಿಚಾರಣೆಗಾಗಿ ಸ್ಮಾರ್ಟ್ ಸಾಧನಗಳನ್ನು ಬಳಸುವುದು ತುಂಬಾ ಅಗತ್ಯ. ಪ್ರತಿ ದಿನ ಒರೆಸಿ ಗುಡಿಸಲು ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಬಳಸಿ. ನೀವು ಇಲ್ಲದೇ ಇದ್ದರೂ ಕೂಡ ಈ ಸ್ಮಾರ್ಟ್ ಸಾಧನಗಳು ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತವೆ. ಇದಲ್ಲದೇ ಮನೆಯ ಸುರಕ್ಷತೆ ದೃಷ್ಟಿಕೋನದಿಂದ ಸಿಸಿಟಿವಿ ಕ್ಯಾಮೆರಾಗಳಂಥ ಸ್ಮಾರ್ಟ್ ಸಾಧನಗಳನ್ನು ಮನೆಯೊಳಗೆ ಹಾಗೂ ಹೊರಗೆ ಬಳಸುವುದು ಕೂಡ ತುಂಬಾ ಅಗತ್ಯ.
- ಸೌಗಂಧಿಕಾ ಪಿ ಎಸ್.
ದೂರದ ಊರಿಗೆ ಅಥವಾ ದೇಶಕ್ಕೆ ಪ್ರಯಾಣ ಬೆಳೆಸಿದಾಗ ಅನಿವಾರ್ಯವಾಗಿ ಮನೆಯನ್ನು ಖಾಲಿ ಬಿಟ್ಟು ಹೋಗಬೇಕಾಗುತ್ತದೆ. ಆದರೆ ಬಹಳ ದಿನಗಳ ನಂತರ ಮತ್ತೆ ಮನೆಗೆ ಬಂದಾಗ ಹಳಸಿದ ಅನ್ನ ಅಥವಾ ಮರೆತು ಹೋದ ಯಾವುದಾದರೂ ವಸ್ತುಗಳು ಗಬ್ಬುನಾತ ಹೊಡೆಯುತ್ತಿರುತ್ತವೆ. ಇದಲ್ಲದೆ ಮನೆಯೊಳಗೆ ಸಾಮಾನ್ಯವಾಗಿ ಗಾಳಿಯ ಪ್ರಸರಣದ ಕೊರತೆಯಿಂದಾಗಿ ಮತ್ತು ತೇವಾಂಶ ಶೇಖರಣೆಯಿಂದ ಕೆಟ್ಟ ವಾಸನೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಪ್ರಯಾಣ ಮಾಡಿ ನೀವು ಸಾಕಷ್ಟು ಸುಸ್ತಾಗಿದ್ದರೂ ಕೂಡ ಮನೆಯನ್ನು ಸ್ವಚ್ಛಗೊಳಿಸುವುದು ಅನಿವಾರ್ಯವಾಗಿರುತ್ತದೆ.
ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು? ಪ್ರವಾಸಕ್ಕೆ ಹೋಗುವ ಮೊದಲು ಮತ್ತು ಹೋದ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು?
ಟ್ರಿಪ್ ಹೋಗುವ ಮುನ್ನವೇ ಮನೆಯ ಸ್ವಚ್ಛತೆಗೆ ಆದ್ಯತೆ ನೀಡಿ.
ನೀವು ವಾರಗಟ್ಟಲೇ ದೂರದ ಊರಿಗೆ ಹೋಗುತ್ತಿದ್ದರೆ ಮೊದಲು ಮನೆ ಪೂರ್ತಿ ಕ್ಲೀನ್ ಮಾಡಿ ಹೋಗುವುದು ಅಗತ್ಯ. ಯಾವುದೇ ಆಹಾರದ ಪಾತ್ರೆಗಳಿದ್ದರೆ ವಿಶೇಷವಾಗಿ ಅನ್ನ ಇದ್ದರೆ ಎಲ್ಲವನ್ನೂ ಖಾಲಿ ಮಾಡಿ ತೊಳೆದಿಟ್ಟು ಹೋಗಿ. ತುಂಬಾ ದಿನಗಳಿಂದ ಒಗೆಯದೇ ಇಟ್ಟಿರುವ ಬೆವರಿನ ಬಟ್ಟೆಗಳಿದ್ದರೆ ಅದನ್ನೂ ಕೂಡ ತೊಳೆದಿಟ್ಟು ಹೋಗುವುದು ಅಗತ್ಯ. ಕಸಗಳಿದ್ದರೂ ಕೂಡ ಅದನ್ನು ಹಾಗೆಯೇ ಇಟ್ಟು ಹೊರಡಬೇಡಿ. ಇಲ್ಲದಿದ್ದರೆ ನೀವು ಪ್ರಯಾಣದಿಂದ ಬಂದ ತಕ್ಷಣ ನಿಮಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗದಷ್ಟು ಮನೆ ಗಬ್ಬುನಾತದಿಂದ ಕೂಡಿರಬಹುದು. ಮನೆ ಸಂಪೂರ್ಣವಾಗಿ ಶುಚಿಗೊಳಿಸಿದ ಬಳಿಕ ಮನೆಯೊಳಗೆ ಧೂಳು ಬರದಂತೆ ಕಿಟಕಿ ಬಾಗಿಲುಗಳನ್ನು ಸರಿಯಾಗಿ ಮುಚ್ಚಿ ನೀವು ಪ್ರಯಾಣ ಕೈಗೊಳ್ಳಬಹುದು.

ಟ್ರಿಪ್ ಹೋದಾಗ ಮನೆ ಕ್ಲೀನಿಂಗ್ ಹೇಗೆ?
ಮನೆಯ ಸದಸ್ಯರೆಲ್ಲರೂ ಮನೆ ಖಾಲಿ ಮಾಡಿ ಟ್ರಿಪ್ ಹೋದಾಗ ಮನೆಯ ಮೇಲ್ವಿಚಾರಣೆಗಾಗಿ ಸ್ಮಾರ್ಟ್ ಸಾಧನಗಳನ್ನು ಬಳಸುವುದು ತುಂಬಾ ಅಗತ್ಯ. ಪ್ರತಿ ದಿನ ಒರೆಸಿ ಗುಡಿಸಲು ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಬಳಸಿ. ನೀವು ಇಲ್ಲದೇ ಇದ್ದರೂ ಕೂಡ ಈ ಸ್ಮಾರ್ಟ್ ಸಾಧನಗಳು ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತವೆ. ಇದಲ್ಲದೇ ಮನೆಯ ಸುರಕ್ಷತೆ ದೃಷ್ಟಿಕೋನದಿಂದ ಸಿಸಿಟಿವಿ ಕ್ಯಾಮೆರಾಗಳಂಥ ಸ್ಮಾರ್ಟ್ ಸಾಧನಗಳನ್ನು ಮನೆಯೊಳಗೆ ಹಾಗೂ ಹೊರಗೆ ಬಳಸುವುದು ಕೂಡ ತುಂಬಾ ಅಗತ್ಯ. ಇದಲ್ಲದೇ ಮನೆಯಲ್ಲಿ ಹೂವಿನ ಗಿಡಗಳಿದ್ದರೆ, ಅದಕ್ಕೆ ನೀರು ಬೀಳದಿದ್ದರೆ ಒಣಗಿ ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ ನೀವು ಮನೆಯಲ್ಲಿ ಇಲ್ಲದಿದ್ದಾಗ ನಿಮ್ಮ ಹೂವಿನ ಗಿಡಗಳ ಕಾಳಜಿ ವಹಿಸಲು ನೀವು ನೆರೆಹೊರೆಯವರನ್ನು ಅಥವಾ ಸ್ನೇಹಿತರನ್ನು ಕೇಳಬಹುದು.
ಟ್ರಿಪ್ ಹೋಗಿ ಬಂದ್ಮೇಲೆ ಮನೆ ಸ್ವಚ್ಛತೆಗೆ ಟಿಪ್ಸ್:
ಸಾಕಷ್ಟು ದಿನಗಳಿಂದ ಮನೆಯ ಕಿಟಕಿ ಬಾಗಿಲುಗಳು ಮುಚ್ಚಿರುವುದರಿಂದ ಸೂರ್ಯನ ಬೆಳಕು, ಗಾಳಿ ಇಲ್ಲದೆ ಮನೆ ವಾಸನೆಯಿಂದ ಕೂಡಿರುತ್ತದೆ. ಆದ್ದರಿಂದ ಬಂದ ಕೂಡಲೇ ತಕ್ಷಣ ಕಿಟಕಿ ಬಾಗಿಲುಗಳನ್ನು ತೆಗೆದಿಡಿ. ಮನೆಯೊಳಗೆ ಸೂರ್ಯನ ಕಿರಣ ಬೀಳುವಂತೆ ನೋಡಿಕೊಳ್ಳಿ. ಹಚ್ಚಹಸಿರಿನ ಪರಿಸರದ ತಾಜಾ ಗಾಳಿ ಬೆಳಕು ಬಂದಾಗ ದುರ್ನಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದಲ್ಲದೇ ಅಡುಗೆ ಕೋಣೆ ಹಾಗೂ ಶೌಚಾಲಯವನ್ನು ಮೊದಲು ಸ್ವಚ್ಛಗೊಳಿಸಿ. ಹಳಸಿದ ಆಹಾರ ಪಾತ್ರೆಗಳಿದ್ದರೆ ಮೊದಲು ಅದನ್ನು ತೊಳೆದಿಡಿ. ಬಳಿಕ ಒಗೆಯುವ ಬಟ್ಟೆಗಳಿದ್ದರೆ ವಾಷಿಂಗ್ ಮೆಷಿನ್ ಗೆ ಹಾಕಿ. ಫ್ರಿಜ್ ಕ್ಲೀನ್ ಮಾಡಿ, ಅದರಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದು ಹಾಕಿ.