- ಆಕಾಂಕ್ಷಾ ಶೇಖರ್‌

ಇಂದಿನ ಯಾಂತ್ರಿಕ ಬದುಕಿನ ನಡುವೆ ನಮಗೆ ಸಿಗಬಹುದಾದ ಅಲ್ಪವಿರಾಮವೆಂದರೆ ಆರಾಮದಾಯಕ ಪ್ರವಾಸ. ಒಳ್ಳೆಯ ಪ್ರವಾಸವು ನೀಡುವ ಹೊಸತನ, ನಮ್ಮೊಳಗೆ ನಡೆಯುವ ಚಿಂತನಾ-ಮಂಥನ, ಹಿಂದಿರುಗುವಾಗ ಸಿಗುವ ಹುರುಪು, ಉತ್ಸಾಹ ಮತ್ತು ತೃಪ್ತಿ ಇವೆಲ್ಲವೂ ಪದಗಳಲ್ಲಿ ಹೇಳಲಾಗದ ಅನುಭವಸಂಪತ್ತು. ಆದ್ದರಿಂದ, ನಾವು ಸಾಮಾನ್ಯವಾಗಿ ಪ್ರವಾಸವನ್ನು ಸಂಪೂರ್ಣವಾಗಿ ಆಸ್ವಾದಿಸಲು ಕನಿಷ್ಠ ಒಂದು ವಾರ ಮುಂಚಿತವಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ­­- ಹೊರಡುವ ದಿನಾಂಕ, ವಾಸಸ್ಥಳ, ಭೇಟಿ ನೀಡಬೇಕಾದ ಸ್ಥಳಗಳು ಮತ್ತು ಪ್ರಯಾಣದ ಉಳಿದ ಯೋಜನೆಗಳನ್ನು ಆನ್ಲೈನ್ ಅಥವಾ ಆಫ್‌ಲೈನ್ ಮೂಲಕ ಬುಕ್ ಮಾಡುತ್ತೇವೆ.

ಆದರೆ ಎಷ್ಟೇ ಯೋಜನೆ ಮಾಡಿದರೂ, ಕೆಲವೊಮ್ಮೆ ಲಾಸ್ಟ್-ಮಿನಿಟ್ ಗಳಲ್ಲಿ ಬೇಡದ ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಅಥವಾ ಆತುರದಲ್ಲಿ ಕೆಲವು ಯೋಜನೆಗಳನ್ನು ಕೈಗೊಂಡು ಅನಗತ್ಯವಾಗಿ ಸುಸ್ತಾಗಿಬಿಡುತ್ತೇವೆ. ಈ ಆತುರದ, ಅಸಂಘಟಿತ ಅಭ್ಯಾಸಗಳಿಂದ ದೂರವಿದ್ದು ಪ್ರವಾಸದ ಇಡೀ ಅನುಭವವನ್ನು ಸರಳಗೊಳಿಸಬೇಕಾದರೆ ʼಹಾಸಿಗೆ ಇದ್ದಷ್ಟೇ ಕಾಲು ಚಾಚುʼ ಎಂಬಂತೆ, ಬ್ಯಾಗಿಗೆ ಸರಿಹೋಗುವಷ್ಟೇ ಸಾಮಗ್ರಿಗಳನ್ನು ತೆಗೆದುಕೊಳ್ಳುವುದು ಉತ್ತಮ. ಬೇಕಾದ ವಸ್ತುಗಳನ್ನು ಬ್ಯಾಗಿನೊಳಗಿರಿಸುವ ಮೂಲಕ ಪ್ರವಾಸದ ಇಡೀ ಅನುಭವವನ್ನುಆದಷ್ಟು ಸುಗುಮಗೊಳಿಸಿಕೊಳ್ಳುವ ಒಂದು ಸರಳ ಮತ್ತು ಪರಿಣಾಮಕಾರಿ ವಿಧಾನವಿದೆ ಅದೇ ‘ಮಿನಿಮಲಿಸಮ್’ ತತ್ವ.

ಇದನ್ನೂ ಓದಿ: ವಿಮಾನದಲ್ಲಿ ಲಗೇಜ್‌ ನಿರ್ವಹಣೆ

ಏನಿದು ಮಿನಿಮಲಿಸಮ್?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿರುವ ಅನೇಕ ವಿಚಾರಗಳಲ್ಲಿ ‘ಮಿನಿಮಲಿಸಮ್’ ಕೂಡ ಒಂದು. ಅಷ್ಟಕ್ಕೂ ʼಮಿನಿಮಲಿಸಮ್ʼ ಎಂದರೆ ಅಗತ್ಯವಿರುವಷ್ಟೇ ವಸ್ತುಗಳನ್ನು ಹೊಂದಿ, ಸರಳ ಹಾಗೂ ಉದ್ದೇಶಪೂರ್ಣ ಜೀವನವನ್ನು ನಡೆಸುವ ಸುಲಭ ಸುಂದರ ಶೈಲಿ. ಉದಾಹರಣೆಗೆ, ಕೈ ತುಂಬಾ ಹಣವಿದೆ ಎಂಬ ಕಾರಣಕ್ಕೆ ಹತ್ತಾರು ಡ್ರೆಸ್ಸುಗಳನ್ನು ಕೊಂಡು ಸುಮ್ಮನೆ ಕಪಾಟು ತುಂಬಿಸಿಕೊಳ್ಳುವುದಕ್ಕಿಂತ, ನಿಜವಾಗಿಯೂ ಅಗತ್ಯವಿರುವ ಮತ್ತು ಉತ್ತಮ ಗುಣಮಟ್ಟದ ನಾಲ್ಕು ಚೆಂದದ ಡ್ರೆಸ್ಸುಗಳನ್ನು ಆಯ್ಕೆ ಮಾಡುವುದು.

New Project (12)

ಸರಿಸುಮಾರು 1950-60 ರ ದಶಕದಲ್ಲಿ ಮೊದಲಿಗೆ ಕಲಾಲೋಕದಲ್ಲಿ, ನಂತರ ಸಂಗೀತದಲ್ಲಿ ಹಾಗೂ ವಾಸ್ತುಶಿಲ್ಪದಲ್ಲಿ ಕಾಣಿಸಿಕೊಂಡ ಮಿನಿಮಲಿಸಮ್‌ ಪ್ರಜ್ಞೆ, ಕ್ರಮೇಣ ಜೀವನಶೈಲಿಯಾಗಿ ಪರಿಚಯವಾಯಿತು. 20–21ನೇ ಶತಮಾನಗಳಲ್ಲಿ ತಲಾ ಆದಾಯದ ಹೆಚ್ಚಳದೊಂದಿಗೆ ಅತಿಯಾದ ಖರೀದಿ, ಅನಗತ್ಯ ದುಂದುವೆಚ್ಚ, ಕೆಲಸದ ಒತ್ತಡ, ಸಾಲಭಾರ ಮತ್ತು ಫಾಸ್ಟ್ ಫ್ಯಾಷನ್ ಹೆಚ್ಚಾಗಿ ಜನರ ಮಾನಸಿಕ ಶಾಂತಿ ಕದಡಿತು. ಈ ಪರಿಸ್ಥಿತಿಯಲ್ಲಿ ಮಿನಿಮಲಿಸಮ್ ಒಂದು ಪರಿಹಾರ ಮಾರ್ಗವಾಯಿತು.

ಬದುಕಿನ ಅನೇಕ ಗೊಂದಲಗಳಿಗೆ ಅತಿಯಾದ ಸಂಗ್ರಹವೇ ಕಾರಣವೆಂಬುದನ್ನು ಮನಗಂಡ ಮಿನಿಮಲಿಸಮ್ನ ಆಧುನಿಕ ಚಿಂತಕರಾದ ಜೋಶುವಾ ಫೀಲ್ಡ್ಸ್ ಮಿಲ್ಬರ್ನ್ ಮತ್ತು ರಯನ್ ನಿಕೋಡೆಮಸ್ ಜಾಗತಿಕ ಮಟ್ಟದಲ್ಲಿ ಜನರಲ್ಲಿ ‘Less is more’ ಎಂಬ ಸಂದೇಶವನ್ನು ಹರಡಿ, ಮಿನಿಮಲಿಸಮ್ ತತ್ತ್ವವನ್ನು ಜೀವನಶೈಲಿಯನ್ನಾಗಿ ರೂಪಿಸುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಮೇರಿ ಕಾಂಡೋ ವಸ್ತುಗಳ ರ‍್ಯಾಂಕಿಂಗ್‌ ತಂತ್ರಗಳನ್ನು ಪರಿಚಯಿಸಿದರೆ, ಲಿಯೋ ಬಬೌಟಾ ‘Zen Habits’ ಮೂಲಕ ಡಿಜಿಟಲ್ ಮತ್ತು ದೈನಂದಿನ ಜೀವನದಲ್ಲಿ ಮಿನಿಮಲಿಸಮ್ ಪಾಲಿಸುವ ಮಾರ್ಗಗಳನ್ನು ತೋರಿಸಿದರು.

ಭಾರತೀಯರಿಗೆ ಹೊಸದಲ್ಲ:

ನಮ್ಮ ಸಂಸ್ಕೃತಿಯಲ್ಲಿ ಮಿನಿಮಲಿಸಮ್ ಹೊಸದೇನಲ್ಲ. ಹಿಂದೂ ಮತ್ತು ಜೈನ ಧರ್ಮದ ‘ಅಪರಿಗ್ರಹ’ ಎಂಬ ತತ್ತ್ವ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಬಾರದೆಂದು ಸಾರುತ್ತದೆ. ಬೌದ್ಧ ಧರ್ಮದಲ್ಲಿಯೂ ಆಸೆಯೇ ದುಃಖದ ಮೂಲವೆಂದು ಹೇಳಲಾಗಿದೆ. ಕಡಿಮೆ ಸಂಪನ್ಮೂಲಗಳಲ್ಲಿಯೇ ತೃಪ್ತಿಯಿಂದ ಬದುಕಿದ ನಮ್ಮ ಪೂರ್ವಜರ ಜೀವನಶೈಲಿ ಹಾಗೂ ಹಳ್ಳಿಗರ ಮಿತ ಜೀವನ— ಮಿನಿಮಲಿಸಮ್‌ನ ಪ್ರಾಯೋಗಿಕ ಉದಾಹರಣೆಗಳು.

ಇಂದು ನಾವೂ ನಮ್ಮ ದೈನಂದಿನ ಬದುಕಿನಲ್ಲಿ, ಧರಿಸುವ ಬಟ್ಟೆಗಳಿಂದ ಹಿಡಿದು, ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳವರೆಗೆ, ಬಳಕೆಯ ಗೃಹೋಪಯೋಗಿ ವಸ್ತುಗಳವರೆಗೆ — ಎಲ್ಲಾ ಕ್ಷೇತ್ರಗಳಲ್ಲಿಯೂ ಮಿನಿಮಲಿಸಮ್ ತತ್ತ್ವವನ್ನು ಅಳವಡಿಸಿಕೊಳ್ಳಬಹುದು. ವಿಶೇಷವಾಗಿ, ನಾವು ಇದೇ ಮಿನಿಮಲಿಸಮ್ ತತ್ತ್ವವನ್ನು ಪ್ರಯಾಣದ ಸಂದರ್ಭಕ್ಕೆ ಅನ್ವಯಿಸಿದಾಗ, ಅದು ನಮ್ಮ ಪ್ರಯಾಣವನ್ನು ಹೆಚ್ಚು ಸುಲಭ ಮತ್ತು ಸುಗಮಗೊಳಿಸುವ ದಿಕ್ಸೂಚಿಯಂತೆ ಕಾರ್ಯನಿರ್ವಹಿಸುತ್ತದೆ.

New Project (14)

ಹ್ಯಾಸಲ್-ಫ್ರೀ ಪ್ಯಾಕಿಂಗ್

  • ಅನಗತ್ಯ ವಸ್ತುಗಳನ್ನು ಅಗತ್ಯವೆಂದು ಭಾವಿಸದೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿ.
  • ಪರಸ್ಪರ ಹೊಂದಿಕೊಳ್ಳುವ ಬಣ್ಣಗಳ ಉಡುಪುಗಳನ್ನು ಪ್ರವಾಸಕ್ಕೆ ಆಯ್ಕೆಮಾಡಿ. ಒಂದಕ್ಕಿಂತ ಹೆಚ್ಚು ಬಾರಿ ಹಾಕಬಹುದಾದ ರೀತಿಯಲ್ಲಿ ಮಾಡಿಟ್ಟುಕೊಳ್ಳಿ. ಹಗುರವಾದ ಹಾಗೂ ಬೇಗ ಒಣಗುವ ಬಟ್ಟೆಗಳು ಪ್ರಯಾಣಕ್ಕೆ ಸೂಕ್ತ.
  • ವಸ್ತುಗಳನ್ನು ಕಡಿಮೆ ಜಾಗದಲ್ಲಿ ಜೋಡಿಸುವ ವಿಧಾನವನ್ನು ಕಲಿತುಕೊಂಡು ಆರಾಮವಾಗಿ ಪ್ರಯಾಣಿಸಿ.

ಪ್ಲಾನಿಂಗ್ ಇರಲಿ

  • ಒಂದು ಟ್ರಾವೆಲ್‌ ಚೆಕ್‌ ಲಿಸ್ಟ್‌ ಅಥವಾ ಟು-ಡು ಲಿಸ್ಟ್‌ ಮಾಡಿ. ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ಇಟ್ಟುಕೊಳ್ಳಿ.
  • ಪ್ರಯಾಣಕ್ಕೆ ಯಾವ ವಾಹನ ಆಯ್ಕೆ ಮಾಡುತ್ತೀರೋ, ಅದಕ್ಕೆ ಅನುಗುಣವಾಗಿ ನಿಮ್ಮ ಬ್ಯಾಗಿನ ತೂಕ ಪ್ಲಾನ್ ಮಾಡಿಕೊಳ್ಳಿ. ಸಾಧ್ಯವಾದರೆ ಎಲ್ಲಾ ಅಗತ್ಯ ವಸ್ತುಗಳನ್ನು ಒಂದೇ ಬ್ಯಾಗಿನಲ್ಲಿ ಜೋಡಿಸಿ.
  • ನೀವು ಉಳಿಯುವ ಜಾಗ, ಭೇಟಿ ನೀಡುವ ಸ್ಥಳಗಳು ಹಾಗೂ ಮಾರ್ಗದಲ್ಲಿ ಭೇಟಿ ಕೊಡಬೇಕಾದ ಪ್ರಸಿದ್ಧ ಹೊಟೇಲ್‌ಗಳನ್ನು ಮುಂಚಿತವಾಗಿ ಯೋಜಿಸಿ.
  • ಆದರೆ ಅತಿಯಾಗಿ ಪ್ಲಾನ್ ಮಾಡಿ ತಲೆಬಿಸಿ ಮಾಡಿಕೊಳ್ಳಬೇಡಿ. ಕೆಲವೊಮ್ಮೆ ಅನ್‌ಪ್ಲಾನ್ಡ್ ಟ್ರಿಪ್‌ಗಳೂ ಅದ್ಭುತ ಅನುಭವಗಳನ್ನು ನೀಡುತ್ತವೆ. ಆದರೂ ಒಂದು ಬೇಸಿಕ್ ಯೋಜನೆ ಇರಲಿ. Take it easy!
  • ಪ್ರವಾಸದ ಸಂದರ್ಭದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಮುಂಚಿತವಾಗಿಯೇ ಇಂತಿಷ್ಟು ಬಜೆಟ್ ಇಟ್ಟುಕೊಳ್ಳಿ. ಸಾಧ್ಯವಾದಷ್ಟು ಮಿನಿಮಲಿಸಮ್‌ ಪ್ರಜ್ಞೆಯನ್ನು ಪ್ರವಾಸದ ಸಂದರ್ಭದಲ್ಲಿ ಪಾಲಿಸಿ.

ಟ್ರಾವೆಲ್-ಫ್ರೆಂಡ್ಲಿ ಉತ್ಪನ್ನಗಳ ಆಯ್ಕೆ:

  • ಬ್ರಷ್, ಟೂತ್‌ಪೇಸ್ಟ್ ಮುಂತಾದ ವೈಯಕ್ತಿಕ ಬಳಕೆಯ ವಸ್ತುಗಳು, ಮೇಕಪ್‌ಗೆ ಸಂಬಂಧಿಸಿದ ವಸ್ತುಗಳು, ಔಷಧಗಳು ಹಾಗೂ ಇನ್ನಿತರ ವಸ್ತುಗಳನ್ನು ಪ್ರತ್ಯೇಕ ಪೌಚ್‌ಗಳಲ್ಲಿ ಇಟ್ಟುಕೊಳ್ಳಿ.
  • ಒಂದೇ ಚಾರ್ಜಿಂಗ್ ಪೋರ್ಟ್‌ನಲ್ಲಿ ಹಲವಾರು ಸಾಧನಗಳನ್ನು ಚಾರ್ಜ್ ಮಾಡಬಹುದಾದ ಅಡಾಪ್ಟರ್ ಮತ್ತು ಕತ್ತರಿ-ಚಾಕು ಹೊಂದಿರುವ ಮಲ್ಟಿಟೂಲ್‌ಗಳಂಥ ಟ್ರಾವೆಲ್-ಫ್ರೆಂಡ್ಲಿ ಉತ್ಪನ್ನಗಳನ್ನು ಕೊಂಡುಕೊಳ್ಳಿ. ನೀವೂ ಆಗಾಗ್ಗೆ ಪ್ರಯಾಣ ಮಾಡುವವರಾದರೆ, ಅಗತ್ಯ ವಸ್ತುಗಳ ‘ರೆಡಿ-ಟು-ಗೋ’ ಬ್ಯಾಗ್ ಇಟ್ಟುಕೊಂಡರೆ ಪ್ಯಾಕಿಂಗ್ ಸಮಯವೂ ಉಳಿಯುತ್ತದೆ.

ಮೊದಲು Connect, ಆಮೇಲೆ Collect

ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಾಗ, ಮೊದಲು ಆ ಸ್ಥಳದೊಂದಿಗೆ ಮನಸ್ಸಿನಿಂದ Connect ಆಗಿ. ಆಮೇಲೆ ವಸ್ತುಗಳನ್ನು Collect ಮಾಡಿ — ನಿಮ್ಮ ಊರಲ್ಲಿ ಸಿಗದ ಅಥವಾ ಆ ಸ್ಥಳದ ಸಂಸ್ಕೃತಿಯನ್ನು ಸಾರುವ ವಿಶೇಷ ವಸ್ತುಗಳಿಗೆ ಪ್ರಾಧಾನ್ಯತೆ ನೀಡಿ.

ಸರಳ ಸೂತ್ರವಾದ ‘ಮಿನಿಮಲಿಸಮ್’ ತತ್ತ್ವವನ್ನು ಪ್ರವಾಸಕ್ಕೆ ಪ್ರಜ್ಞಾಪೂರ್ವಕವಾಗಿ ಅನ್ವಯಿಸಿ ಹಗುರವಾಗಿ ಹೋಗಿ, ಆರಾಮವಾಗಿ ಬನ್ನಿ — ಸುಖಪ್ರಯಾಣ ನಿಮ್ಮದಾಗಲಿ.