ಸೇವೆ ಮತ್ತು ಸಾಧನೆಯ ಸಾಕಾರಮೂರ್ತಿ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 59ನೆಯ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಂಭ್ರಮ- ಸಡಗರ. 1968ರ ಅಕ್ಟೋಬರ್ 24ರಂದು ಧರ್ಮಸ್ಥಳದ 21ನೆಯ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಡಿ. ವೀರೇಂದ್ರ ಹೆಗ್ಗಡೆಯವರು 59 ವರ್ಷಗಳ ವರ್ಧಂತ್ಯುತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ಊರವರು, ಕ್ಷೇತ್ರದ ಭಕ್ತರು, ಶ್ರೀ ಹೆಗ್ಗಡೆಯವರ ಅಭಿಮಾನಿಗಳು, ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರಿಗೆ ತಕ್ಕಂತೆ ಧರ್ಮದ ಸ್ಥಾನ. ಅದು ಭಕ್ತರ ಪಾಲಿಗೆ ಶ್ರದ್ಧಾಕೇಂದ್ರ ಅಷ್ಟೇ ಅಲ್ಲ, ಕಷ್ಟ ಎಂದು ಬಂದವರಿಗೆ ಪರಿಹಾರ ಸಿಗುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ರಾಂತಿಯ ಪುಣ್ಯಭೂಮಿ. ಈ ಪವಿತ್ರ ಕ್ಷೇತ್ರದ 21ನೆಯ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಜನರು ಕೇವಲ ವ್ಯಕ್ತಿಯಾಗಿ ಅಷ್ಟೇ ಅಲ್ಲ, ದೊಡ್ಡ ಶಕ್ತಿಯಾಗಿ ನೋಡುತ್ತಾರೆ. ಪೂಜಿಸುತ್ತಾರೆ. 'ನಡೆದಾಡುವ ಮಂಜುನಾಥ' ಎಂದೇ ಭಕ್ತರ ಎದೆಯಲ್ಲಿ ಹೆಗ್ಗಡೆಯವರು ನೆಲೆಯಾಗಿದ್ದಾರೆ. ಅವರ ಪಟ್ಟಾಭಿಷೇಕದ ವಾರ್ಷಿಕೋತ್ಸವವು ನಾಡಿನಾದ್ಯಂತ ಸಂಭ್ರಮದ, ಹೆಮ್ಮೆಯ ಮತ್ತು ಪ್ರೇರಣೆಯ ದಿನ. 1968ರ ಅಕ್ಟೋಬರ್ 24ರಂದು ತಮ್ಮ 20ನೆಯ ವಯಸ್ಸಿನಲ್ಲಿ ಧರ್ಮಾಧಿಕಾರಿಯ ಪೀಠವನ್ನೇರಿದ ಹೆಗ್ಗಡೆಯವರು, ಅಂದಿನಿಂದ ಇಂದಿನವರೆಗೆ ಸವೆಸಿದ ಹಾದಿ, ಮಾಡಿದ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಅಕ್ಷರಶಃ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥವು.

ಇದನ್ನೂ ಓದಿ: ಮೈಸೂರು ದಸರಾ... ಎಷ್ಟೊಂದು ಸುಂದರ...

59ನೆಯ ವರ್ಧಂತಿ ಮಹೋತ್ಸವ

ದೇವಸ್ಥಾನದ ನೌಕರ ವೃಂದದವರು, ಊರಿನ ನಾಗರಿಕರು ಹಾಗೂ ಭಕ್ತಾದಿಗಳು ಸೇರಿ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸುತ್ತಿದ್ದಾರೆ. ದೇವಸ್ಥಾನ ಹಾಗೂ ಬಸದಿಯಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮುಂದಿನ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಹಾಗೆಯೇ ಹಿರಿಯ ನೌಕರರನ್ನು ಸನ್ಮಾನಿಸಲಾಗುತ್ತದೆ.

ಬಾಲ್ಯ ಮತ್ತು ಪೀಠದ ಜವಾಬ್ದಾರಿ

ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನವೆಂಬರ್ 25, 1948ರಂದು ಜನಿಸಿದರು. ತಂದೆ ರತ್ನವರ್ಮ ಹೆಗ್ಗಡೆ ಮತ್ತು ತಾಯಿ ರತ್ನಮ್ಮ ಹೆಗ್ಗಡೆಯವರ ಪುಣ್ಯಗರ್ಭದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ, ಕರುಣೆ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದರು. ಇವರ ತಂದೆ ರತ್ನವರ್ಮ ಹೆಗ್ಗಡೆಯವರು ಧರ್ಮಸ್ಥಳದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದವರು. ವೀರೇಂದ್ರ ಹೆಗ್ಗಡೆಯವರು ವಾಣಿಜ್ಯ ಪದವಿಯನ್ನು ಓದುತ್ತಿದ್ದಾಗಲೇ, 1968ರಲ್ಲಿ ತಂದೆಯ ಅಕಾಲಿಕ ನಿಧನದಿಂದಾಗಿ, 20ನೆಯ ವಯಸ್ಸಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.

Untitled design - 2026-10-23T222310.168

ಆ ಎಳೆಯ ವಯಸ್ಸಿನಲ್ಲಿ, ಎಂಟುನೂರು ವರ್ಷಗಳ ಸುದೀರ್ಘ ಇತಿಹಾಸವಿರುವ, ಜೈನ ಬಂಟ ಮನೆತನದ ಹೆಗ್ಗಡೆ ಪರಂಪರೆಯ ಅತಿ ದೊಡ್ಡ ಜವಾಬ್ದಾರಿಯನ್ನು ಅವರು ಹೆಗಲೇರಿಸಿಕೊಂಡರು. ಧಾರ್ಮಿಕ ಪೂಜಾ- ಪುನಸ್ಕಾರಗಳ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶ್ರೀಕ್ಷೇತ್ರದ ನೆರವು ತಲುಪಬೇಕು ಎಂಬ ಉದಾತ್ತ ಚಿಂತನೆಯನ್ನು ಅವರು ಅಂದೇ ತಮ್ಮ ಮನಸಿನಲ್ಲಿ ಬಿತ್ತಿಕೊಂಡಿದ್ದರು. ಪಟ್ಟಾಭಿಷೇಕದ ದಿನದಿಂದಲೇ ಅವರು ಹಾಕಿಕೊಂಡ ಪ್ರತಿಯೊಂದು ಹೆಜ್ಜೆಯೂ ಜನಕಲ್ಯಾಣದ ಕಡೆಗೇ ಮುಖಮಾಡಿತ್ತು.

ಸರ್ವಧರ್ಮ ಸಮನ್ವಯ ಕೇಂದ್ರ

ಇಲ್ಲಿ ಪ್ರಧಾನ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ (ಶಿವ). ಆಡಳಿತ ನಡೆಸುವವರು ಜೈನ ಧರ್ಮೀಯರಾದ 'ಹೆಗ್ಗಡೆ'ಯವರು. ಅರ್ಚಕರು ವೈಷ್ಣವರು. ಎಲ್ಲ ಭಕ್ತಾದಿಗಳು ಇಲ್ಲಿ ಬಂದು ದೇವರ ಸೇವೆ ಮಾಡುತ್ತಾರೆ.

ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಇಲ್ಲಿ ನಿತ್ಯೋತ್ಸವ. ನ್ಯಾಯದಾನ, ಆಣೆ ಮಾತು ತೀರ್ಮಾನ, ಇಲ್ಲಿನ ವಿಶಿಷ್ಟ ಸಂಪ್ರದಾಯಗಳು. 'ಮಾತು ಬಿಡ ಮಂಜುನಾಥ' ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಇಲ್ಲಿ ಮಾತಿಗೆ ಹೆಚ್ಚಿನ ಮಹತ್ವ. ಕುಟುಂಬ ಕಲಹದಲ್ಲಿ, ವ್ಯಾಪಾರ- ವ್ಯವಹಾರದಲ್ಲಿ, ವೃತ್ತಿ- ಪ್ರವೃತ್ತಿಯಲ್ಲಿ ಯಾರಾದರೂ ತನಗೆ ಮೋಸ, ಅನ್ಯಾಯ, ವಂಚನೆ ಮಾಡಿದರೆ ನ್ಯಾಯಕ್ಕಾಗಿ ಧರ್ಮಸ್ಥಳಕ್ಕೆ ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸುಮಾರು ಇನ್ನೂರು ವರ್ಷಕ್ಕೂ ಹಿಂದಿನ ಆಣೆ ಮಾತು ಪ್ರಕರಣಗಳು ಇತ್ತೀಚೆಗೆ ಇತ್ಯರ್ಥಗೊಂಡಿವೆ.

ಪಟ್ಟಾಭಿಷೇಕದ ಹೆಗ್ಗುರುತು

1948ರ ನವೆಂಬರ್ 25ರಂದು ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ ಅಂದಿನ ವೀರೇಂದ್ರ ಕುಮಾರ್ 1968ರ ಅಕ್ಟೋಬರ್ 24ರಂದು 21ನೆಯ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು.

ಸಮಾಜದಲ್ಲಿದ್ದು, ಸಮಾಜದ ವ್ಯಕ್ತಿಯಾಗಿ ತನ್ನ ತನು- ಮನ- ಧನವನ್ನು ಅರ್ಪಿಸಲು ಕಟಿಬದ್ಧನಾದ ವ್ಯಕ್ತಿ ತಮ್ಮ ಪ್ರತಿನಿಧಿ ಎಂದು ಧರ್ಮದೇವತೆಗಳು ಅಂಗೀಕರಿಸುವ ಧಾರ್ಮಿಕ ಮಹೋತ್ಸವವೇ 'ಪಟ್ಟಾಭಿಷೇಕ'.

Untitled design - 2026-10-23T222321.990

ಧರ್ಮದೇವತೆಗಳು ನೆಲ್ಯಾಡಿ ಬೀಡಿನಲ್ಲಿರುವ ತಮ್ಮ ಮಂಚದಲ್ಲಿ ಪ್ರತಿನಿಧಿಯಾಗಲಿರುವ ಹೆಗ್ಗಡೆಯವರನ್ನು ಕುಳ್ಳಿರಿಸಿ ತಮ್ಮವನನ್ನಾಗಿಸುವ ಸಮಾರಂಭವೇ ಪಟ್ಟಾಭಿಷೇಕ. ನೆಲ್ಯಾಡಿ ಬೀಡಿನ ಪಕ್ಕದಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಬಳಿಕ ಕಲಶೋದಕ ಸ್ನಾನದಿಂದ ಶುಚಿರ್ಭೂತರಾಗಿ ಅವರು ನೆಲ್ಯಾಡಿ ಬೀಡಿಗೆ ಬರುತ್ತಾರೆ. ಅಲ್ಲಿಯೂ ಕಲಶ ನೀರಿನಿಂದ ಶುಚಿರ್ಭೂತರಾಗಿ ಧರ್ಮದೇವತೆಗಳ ದರ್ಶನ ಪಾತ್ರಿಗಳೊಡನೆ ಒಳ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಲ್ಲಿ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಎಂಬ ನಾಲ್ಕು ಧರ್ಮದೇವತೆಗಳಿಗೆ ಮಂಚ ಹಾಗೂ ಹೆಗ್ಗಡೆಯವರಿಗೆ ಒಂದು ಮಂಚ ಇದೆ.

ಮಂಚಗಳಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ನಾಲ್ವಿಕೆಯರಾದ ದೇಲಂಪಾಡಿತ್ತಾಯ, ಮನೋಳಿತ್ತಾಯ ಕೋಟ್ಯಾನಬಂಟರು, ಮತ್ತು ಕಂಬೋಳಿಬಂಟರು ಆವೇಶ ಭರಿತರಾಗಿ 'ಓ ಪೆರ್ಗಡೇ' ಎಂದು ಮೂರು ಬಾರಿ ಕರೆದು ಪಟ್ಟದ ಕತ್ತಿ ಮತ್ತು ಪಟ್ಟದ ಉಂಗುರ ನೀಡಿ ತೂಗು ಮಂಚದಲ್ಲಿ ಕುಳ್ಳಿರಿಸಿ ನುಡಿಕಟ್ಟಿನ ಅಭಯವನ್ನೀಯುತ್ತಾರೆ. ಆ ಮೇಲೆ ಹೆಗ್ಗಡೆಯವರನ್ನು ಸಕಲ ಗೌರವದೊಂದಿಗೆ ಪಲ್ಲಕಿಯಲ್ಲಿ ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ಪಡೆದು ಹೆಗ್ಗಡೆಯವರು ಪಟ್ಟವನ್ನು ಅಲಂಕರಿಸುತ್ತಾರೆ. ಪಟ್ಟಾಭಿಷೇಕವಾದ ಬಳಿಕ ಧರ್ಮದೇವತೆಗಳು ಹೆಗ್ಗಡೆಯವರ ಮೂಲಕ ಮಾತನಾಡುವ ಕಾರಣ ಅವರನ್ನು 'ಮಾತನಾಡುವ ಮಂಜುನಾಥ' ಎಂದು ಶ್ರದ್ಧಾ- ಭಕ್ತಿಯಿಂದ ಗೌರವಿಸುತ್ತಾರೆ.

ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ, ಆಣೆ ಮಾತು ತೀರ್ಮಾನ, ತುಲಾಭಾರ ಮೊದಲಾದ ವಿಶೇಷ ಸೇವೆಗಳು ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯುತ್ತವೆ. ಹೆಗ್ಗಡೆಯವರ ಅನುಪಸ್ಥಿತಿಯಲ್ಲಿ ಅವರ ಅನುಮತಿಯೊಂದಿಗೆ ದೇಲಂಪಾಡಿತ್ತಾಯ, ಮನೋಳಿತ್ತಾಯ, ಕೋಟ್ಯಾನ ಬಂಟ ಮತ್ತು ಕಂಬೋಳಿ ಬಂಟ ಎಂಬ 'ನಾಲ್ವಿಕೆ'ಯವರ ಉಪಸ್ಥಿತಿಯಲ್ಲಿ ಸೇವೆಗಳು ನಡೆಯುತ್ತವೆ.

21ನೆಯ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಬಳಿಕ ಡಿ. ವೀರೇಂದ್ರ ಹೆಗ್ಗಡೆಯವರು ದೇವಸ್ಥಾನದೊಳಗೆ ಪೂಜೆ, ಧಾರ್ಮಿಕ ವಿಧಿ- ವಿಧಾನಗಳ ಅನುಷ್ಠಾನದೊಂದಿಗೆ ತನ್ನ ದೂರದೃಷ್ಟಿಯಿಂದ ಲೋಕ ಕಲ್ಯಾಣಕ್ಕಾಗಿ ಅನೇಕ ವಿನೂತನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಧರ್ಮಸ್ಥಳದ ಇತಿಹಾಸದಲ್ಲಿಯೇ ಇವರ ಆಡಳಿತಾವಧಿ 'ಸುವರ್ಣ ಯುಗ' ಎಂದೇ ಪರಿಗಣಿಸಲಾಗಿದೆ. ಅನುಪಮ ಸೇವೆ- ಸಾಧನೆಯಿಂದ ಧರ್ಮಸ್ಥಳ ಹಾಗೂ ಅಲ್ಲಿಂದ ನಡೆಸಲ್ಪಡುವ ಸಂಸ್ಥೆಗಳು ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹಾಗೂ ಮನ್ನಣೆ ಪಡೆದಿವೆ. ಧರ್ಮಸ್ಥಳದ ಇತಿಹಾಸದಲ್ಲಿಯೇ ಅತಿ ಸುದೀರ್ಘ ಕಾಲ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದಲ್ಲದೆ 'ಪದ್ಮವಿಭೂಷಣ' ಪ್ರಶಸ್ತಿಯಿಂದ ಪುರಸ್ಕೃತರಾಗಿರುವುದು ವೀರೇಂದ್ರ ಹೆಗ್ಗಡೆಯವರ ಹೆಗ್ಗಳಿಕೆಯಾಗಿದೆ.

ಡಾ. ಹೆಗ್ಗಡೆಯವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಬೆನ್ನೆಲುಬಾಗಿ ನಿಂತಿದ್ದಾರೆ. ವಿಶೇಷವಾಗಿ ಮಹಿಳಾ ಸಬಲೀಕರಣ, 'ಸಿರಿ' ಗ್ರಾಮೋದ್ಯೋಗ ಮತ್ತು ಜ್ಞಾನವಿಕಾಸ ಕಾರ್ಯಕ್ರಮಗಳಲ್ಲಿ ಹೇಮಾವತಿಯವರ ಪಾಲು ದೊಡ್ಡದು. ಈ ದಂಪತಿಗೆ ಶ್ರದ್ಧಾ ಅಮಿತ್ ಎಂಬ ಪುತ್ರಿಯಿದ್ದು, ಅವರು ಬೆಂಗಳೂರಿನ ಉದ್ಯಮಿ ಅಮಿತ್ ಅವರನ್ನು ವಿವಾಹವಾಗಿದ್ದಾರೆ. ಮೊಮ್ಮಗಳು ಮಾನ್ಯ ಎಂದರೆ ಹೆಗ್ಗಡೆಯವರಿಗೆ ಅತ್ಯಂತ ಪ್ರೀತಿ. ಕೌಟುಂಬಿಕ ಜವಾಬ್ದಾರಿಗಳ ಜತೆಗೆ ಸಮಾಜದ ಜವಾಬ್ದಾರಿಯನ್ನು ಸಮತೋಲನದಿಂದ ನಿಭಾಯಿಸುತ್ತಿರುವ ಅವರ ಬದುಕು ಎಲ್ಲರಿಗೂ ಮಾದರಿ.

Untitled design - 2026-10-23T222302.682

ಪೆರ್ಗಡೆ ವಂಶದ ಉದಾತ್ತ ಪರಂಪರೆ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಯ ಸ್ಥಾನವು ಭಾರತದ ಬೇರೆಲ್ಲ ಧಾರ್ಮಿಕ ಕೇಂದ್ರಗಳಿಗಿಂತ ತೀರಾ ಭಿನ್ನವಾದದ್ದು. ಈ ಪೀಠವನ್ನು ಏರುವವರು ಸಾಕ್ಷಾತ್ ಮಂಜುನಾಥ ಸ್ವಾಮಿಯ ಪ್ರತಿನಿಧಿ ಎಂದೇ ಪರಿಗಣಿಸಲ್ಪಡುತ್ತಾರೆ. ಎಂಟುನೂರು ವರ್ಷಗಳ ಭವ್ಯ ಇತಿಹಾಸವಿರುವ 'ಪೆರ್ಗಡೆ' (ಹೆಗ್ಗಡೆ) ವಂಶದ 21ನೆಯ ಧರ್ಮಾಧಿಕಾರಿಯಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಹೆಗ್ಗಡೆಯವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಬೆನ್ನೆಲುಬಾಗಿ ನಿಂತಿದ್ದಾರೆ. ವಿಶೇಷವಾಗಿ ಮಹಿಳಾ ಸಬಲೀಕರಣ, 'ಸಿರಿ' ಗ್ರಾಮೋದ್ಯೋಗ ಮತ್ತು ಜ್ಞಾನವಿಕಾಸ ಕಾರ್ಯಕ್ರಮಗಳಲ್ಲಿ ಹೇಮಾವತಿಯವರ ಪಾಲು ದೊಡ್ಡದು.

ಚತುರ್ವಿಧ ದಾನಗಳ ನವೀನ ರೂವಾರಿ

ಧರ್ಮಸ್ಥಳವು ಹಿಂದಿನಿಂದಲೂ 'ಚತುರ್ವಿಧ ದಾನ'ಗಳಿಗೆ (ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ) ಪ್ರಸಿದ್ಧವಾಗಿತ್ತು. ಆದರೆ, ಡಾ. ವೀರೇಂದ್ರ ಹೆಗ್ಗಡೆಯವರು ಈ ದಾನಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ಸ್ಪರ್ಶವನ್ನು ನೀಡಿದರು.

ಅನ್ನದಾನ: ಧರ್ಮಸ್ಥಳಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಅನ್ನದಾನ ಮಾಡುವ 'ಅನ್ನಪೂರ್ಣ' ಭೋಜನಾಲಯವು ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ಪ್ರತೀಕ. ಪ್ರತಿದಿನ 50,000ಕ್ಕೂ ಹೆಚ್ಚು ಜನರಿಗೆ ಅಚ್ಚುಕಟ್ಟಾಗಿ ಊಟ ಬಡಿಸುವ ವ್ಯವಸ್ಥೆ ಜಗತ್ತಿನಲ್ಲೇ ಅಪರೂಪ. ಹಾಗೆಯೇ ಪ್ರತಿದಿನ ಧರ್ಮಸ್ಥಳಕ್ಕೆ ಬರುವ ಸುಮಾರು 25,000 ಭಕ್ತರಿಗೆ ಗುಣಮಟ್ಟದ, ಸ್ವಚ್ಛವಾದ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿದೆ.

ವಿದ್ಯಾದಾನ: ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ನಂಬಿದ ಹೆಗ್ಗಡೆಯವರು 'ಎಸ್‌ಡಿಎಂ' (SDM - Shri Dharmasthala Manjunatheshwara) ಶಿಕ್ಷಣ ಸಂಸ್ಥೆಗಳ ಮೂಲಕ ಪ್ರಾಥಮಿಕ ಶಾಲೆಯಿಂದ ಹಿಡಿದು ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳವರೆಗೆ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ಔಷಧದಾನ: ಧಾರವಾಡ, ಉಡುಪಿ, ಹಾಸನ ಮತ್ತು ಮಂಗಳೂರಿನಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಸಂಚಾರಿ ಆಸ್ಪತ್ರೆಗಳು, ಕ್ಯಾನ್ಸರ್, ಕ್ಷಯರೋಗದಂಥ ರೋಗಗಳಿಗೆ ಧರ್ಮಸ್ಥಳದ ವತಿಯಿಂದ ಧನಸಹಾಯ ನೀಡುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಅಭಯದಾನ: ಧರ್ಮಸ್ಥಳದ 'ಹೊಯಿಲು' ಅಥವಾ 'ನ್ಯಾಯ ತೀರ್ಮಾನ' ವ್ಯವಸ್ಥೆಯು ರಾಜ್ಯದ ಉದ್ದಗಲಕ್ಕೂ ಪ್ರಸಿದ್ಧವಾಗಿದೆ. ಹೆಗ್ಗಡೆಯವರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಇದುವೇ ನಿಜವಾದ ಅಭಯದಾನ.

Untitled design - 2026-10-23T222253.207

ಗ್ರಾಮೀಣಾಭಿವೃದ್ಧಿ ಮತ್ತು ಸ್ವಾವಲಂಬನೆಯ ಕ್ರಾಂತಿ

ಡಾ. ವೀರೇಂದ್ರ ಹೆಗ್ಗಡೆಯವರ ಸಾಧನೆಗಳ ಕಿರೀಟದಲ್ಲಿರುವ ಅತ್ಯಮೂಲ್ಯ ರತ್ನವೆಂದರೆ 'ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ' (SKDRDP). 1972ರಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವೇ ಗ್ರಾಮಗಳಲ್ಲಿ ಪ್ರಾರಂಭವಾದ ಈ ಯೋಜನೆ ಇಂದು ಕರ್ನಾಟಕದ ಎಲ್ಲ 32 ಜಿಲ್ಲೆಗಳು ಹಾಗೂ ಕೇರಳಂನ ಕಾಸರಗೋಡು ಜಿಲ್ಲೆಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.

ಗ್ರಾಮೀಣ ಭಾಗದ ಮಹಿಳೆಯರನ್ನು ಒಗ್ಗೂಡಿಸಿ 'ಸ್ವಸಹಾಯ ಸಂಘ'ಗಳನ್ನು ರಚಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಐತಿಹಾಸಿಕ. ಬ್ಯಾಂಕ್‌ಗಳ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ, ಮಹಿಳೆಯರು ಸ್ವಾವಲಂಬಿಗಳಾಗಲು, ಹೈನುಗಾರಿಕೆ, ಗುಡಿ ಕೈಗಾರಿಕೆಗಳನ್ನು ನಡೆಸಲು ಈ ಯೋಜನೆ ಬೆನ್ನೆಲುಬಾಗಿದೆ. ರೈತರಿಗಾಗಿ 'ಪ್ರಗತಿಬಂಧು' ಸಂಘಗಳನ್ನು ರಚಿಸಿ, ಶ್ರಮ ವಿನಿಮಯದ ಮೂಲಕ ಕೃಷಿ ಭೂಮಿಯ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ನಿರ್ಗತಿಕರು, ವೃದ್ಧರು ಮತ್ತು ವಿಧವೆಯರಿಗೆ 'ಮಾಸಾಶನ' (ಪಿಂಚಣಿ) ನೀಡುವ ಮೂಲಕ ಅವರ ಬದುಕಿಗೊಂದು ಆಸರೆಯಾಗಿದ್ದಾರೆ.

ಯುವಜನತೆಯಲ್ಲಿ ಉದ್ಯಮಶೀಲತೆ ಬೆಳೆಸಲು, ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್‌ಗಳ ಸಹಯೋಗದೊಂದಿಗೆ ಅವರು ಸ್ಥಾಪಿಸಿದ 'ರುಡ್‌ಸೆಟಿ' (RUDSETI - Rural Development and Self Employment Training Institute) ಸಂಸ್ಥೆಯು ಇಂದು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ. ಈ ಸಂಸ್ಥೆಯ ಅಭೂತಪೂರ್ವ ಯಶಸ್ಸನ್ನು ಗಮನಿಸಿದ ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು, ಇದೇ ಮಾದರಿಯಲ್ಲಿ ದೇಶಾದ್ಯಂತ ಪ್ರತಿ ಜಿಲ್ಲೆಗೊಂದರಂತೆ 'ಆರ್‌ಸೆಟಿ' (RSETI - Rural Self Employment Training Institutes) ಗಳನ್ನು ಸ್ಥಾಪಿಸಲು ಮುಂದಾಯಿತು. ಇಂದು ಭಾರತದಾದ್ಯಂತ 630ಕ್ಕೂ ಹೆಚ್ಚು ಆರ್‌ಸೆಟಿ ಸಂಸ್ಥೆಗಳು ಲಕ್ಷಾಂತರ ಯುವಜನರಿಗೆ ತರಬೇತಿ ನೀಡುತ್ತಿವೆ. ಈ ಎಲ್ಲ ಸಂಸ್ಥೆಗಳ ನಿರ್ದೇಶಕರು ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಉನ್ನತ ಸಂಸ್ಥೆಯಾಗಿ 'ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟಿ' ಕಾರ್ಯನಿರ್ವಹಿಸುತ್ತಿದೆ.

ಇನ್ನೂ ಕೆಲವು ಸಾಧನೆಗಳು: 1981ರಿಂದ 'ಮಂಜುವಾಣಿ' ಮಾಸ ಪತ್ರಿಕೆ ಪ್ರಕಟಣೆ ಮಾಡಲಾಯಿತು. 2005ರಲ್ಲಿ ಮಹಾನಡಾವಳಿ ಶುರು ಮಾಡಲಾಯಿತು. ಬೆಂಗಳೂರು, ಮೈಸೂರು, ಭದ್ರಾವತಿ, ಬಂಟ್ವಾಳ, ಸಂಸೆ, ಬೆಳ್ತಂಗಡಿ ಮತ್ತು ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಯಿತು. 1982ರಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ- ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಗೊಂಡಿದ್ದು, ದೇಶದ 14 ರಾಜ್ಯಗಳಲ್ಲಿ 26 ಶಾಖೆಗಳಿವೆ. ಈವರೆಗೆ ಒಟ್ಟು 2.41 ಲಕ್ಷ ಮಂದಿ ನಿರುದ್ಯೋಗಿಗಳಿಗೆ ಸ್ವ- ಉದ್ಯೋಗ ತರಬೇತಿ ನೀಡಲಾಗಿದೆ. ಶಾಂತಿವನ ಟ್ರಸ್ಟ್ ಮೂಲಕ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಯಿತು. ಹಾಗೆಯೇ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಸಲಾಗಿದೆ.

ಪಟ್ಟಾಭಿಷೇಕದ ಸಂದರ್ಭ: ನೂತನ ಯೋಜನೆಗಳ ಘೋಷಣೆ

ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಪಟ್ಟಾಭಿಷೇಕದ ವರ್ಧಂತ್ಯುತ್ಸವವನ್ನು ವೈಯಕ್ತಿಕ ಸಂಭ್ರಮವಾಗಿ ಆಚರಿಸುವುದಿಲ್ಲ. ಆ ದಿನವನ್ನು ಸಮಾಜಕ್ಕೆ ಹೊಸ ಕೊಡುಗೆಗಳನ್ನು ನೀಡುವ, ಹೊಸ ಕಲ್ಯಾಣ ಯೋಜನೆಗಳನ್ನು ಘೋಷಿಸುವ 'ಸಂಕಲ್ಪ ದಿನ'ವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ನಾಡಿನ ಒಳಿತಿಗಾಗಿ ಬೃಹತ್ ಯೋಜನೆಗಳನ್ನು ಅವರು ಪ್ರಕಟಿಸುತ್ತಾರೆ.

Untitled design - 2026-10-23T222247.965

ಮುಖ್ಯವಾದ ಯೋಜನೆಗಳು:

ಕೆರೆ ಸಂಜೀವಿನಿ: ಜಲಸಂರಕ್ಷಣೆಯ ಮಹತ್ವವನ್ನು ಅರಿತ ಹೆಗ್ಗಡೆಯವರು ಪ್ರತಿ ವರ್ಷ ನೂರಾರು ಕೆರೆಗಳ ಹೂಳೆತ್ತುವ 'ಕೆರೆ ಸಂಜೀವಿನಿ' ಯೋಜನೆಯನ್ನು ಘೋಷಿಸಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದ ಮಳೆನೀರು ಇಂಗಿ, ಅಂತರ್ಜಲ ಮಟ್ಟ ಹೆಚ್ಚಾಗಿ ಸಾವಿರಾರು ರೈತರಿಗೆ ಅನುಕೂಲವಾಗಿದೆ.

ಶೌಚಾಲಯ ನಿರ್ಮಾಣ ಮತ್ತು ನೈರ್ಮಲ್ಯ: ಸಂಪೂರ್ಣ ನೈರ್ಮಲ್ಯ ಅಭಿಯಾನದ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಲು ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಘೋಷಿಸಿದ್ದಾರೆ.

ವಸತಿ ರಹಿತರಿಗೆ ಆಸರೆ: ಗುಡಿಸಲಿನಲ್ಲಿ ವಾಸಿಸುವ ಬಡವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುವ ವಸತಿ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ವಾತ್ಸಲ್ಯ ಮನೆ: ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ವೃದ್ಧರಿಗೆ ನೆರವಾಗಲು, ಅವರ ಮನೆಗಳನ್ನು ದುರಸ್ತಿಗೊಳಿಸಿ, ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ 'ವಾತ್ಸಲ್ಯ' ಯೋಜನೆಯೂ ಅವರ ಪಟ್ಟಾಭಿಷೇಕದ ದಿನದ ಮಹತ್ವದ ಕೊಡುಗೆಯಾಗಿದೆ.

ಗ್ರಾಮ ಪಂಚಾಯತ್ ಅಭಿವೃದ್ಧಿ: ಹಳ್ಳಿಗಳ ಮೂಲಸೌಕರ್ಯಗಳನ್ನು ವೃದ್ಧಿಸಲು, ಶಾಲಾ ಕಟ್ಟಡಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಬಸ್ ತಂಗುದಾಣ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರುಪಾಯಿಗಳ ಅನುದಾನವನ್ನು ಮೀಸಲಿಡಲಾಗುತ್ತದೆ.

ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ

ಡಾ. ಹೆಗ್ಗಡೆಯವರು ನಮ್ಮ ನಾಡಿನ ಪರಂಪರೆ, ಕಲೆ ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವಲ್ಲಿ ಅದ್ವಿತೀಯ ಪಾತ್ರವಹಿಸಿದ್ದಾರೆ.

ಧರ್ಮೋತ್ಥಾನ ಟ್ರಸ್ಟ್: ಕರ್ನಾಟಕಾದ್ಯಂತ ನೂರಾರು ವರ್ಷಗಳ ಇತಿಹಾಸವಿರುವ, ಆದರೆ ಪಾಳುಬಿದ್ದಿರುವ ಹತ್ತಾರು ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು 'ಧರ್ಮೋತ್ಥಾನ ಟ್ರಸ್ಟ್' ಸ್ಥಾಪಿಸಿದ್ದಾರೆ. 283ಕ್ಕೂ ಹೆಚ್ಚು ಐತಿಹಾಸಿಕ ದೇವಾಲಯಗಳು ಮತ್ತು ಜೈನ ಬಸದಿಗಳನ್ನು ಈ ಟ್ರಸ್ಟ್ ಮೂಲಕ ಜೀರ್ಣೋದ್ಧಾರ ಮಾಡಲಾಗಿದೆ.

ಮಂಜೂಷಾ ವಸ್ತುಸಂಗ್ರಹಾಲಯ: ಪ್ರಾಚೀನ ವಸ್ತುಗಳು, ತಾಳೆಗರಿಗಳು, ಆಯುಧಗಳು, ನಾಣ್ಯಗಳು, ಕಲಾಕೃತಿಗಳನ್ನು ಸಂರಕ್ಷಿಸಿ ಪ್ರದರ್ಶಿಸಲು ಧರ್ಮಸ್ಥಳದಲ್ಲಿ 'ಮಂಜೂಷಾ' ಎಂಬ ಬೃಹತ್ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದಾರೆ. ಬೃಹತ್ 'ವಿಂಟೇಜ್ ಕಾರ್ ಮ್ಯೂಸಿಯಂ' ತಲೆ ಎತ್ತಿದೆ. ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲೂ 'ಪಯಣ' ಎಂಬ ಮತ್ತೊಂದು ಕಾರ್ ಮ್ಯೂಸಿಯಂ ಸ್ಥಾಪಿಸಲಾಗಿದೆ.

ಯಕ್ಷಗಾನ ಪೋಷಣೆ: ಯಕ್ಷಗಾನವನ್ನು ಉಳಿಸಲು 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ'ಯನ್ನು (ಧರ್ಮಸ್ಥಳ ಮೇಳ) ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.

Untitled design - 2026-10-23T222242.930

ಸಾಮಾಜಿಕ ಕಳಕಳಿ

ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಹೆಗ್ಗಡೆಯವರು ಸದ್ದಿಲ್ಲದೆ ಸಮರ ಸಾರಿದ್ದಾರೆ. ವರದಕ್ಷಿಣೆ ಎಂಬ ಪಿಡುಗಿನಿಂದ ಬಡ ಕುಟುಂಬಗಳು ನಲುಗಬಾರದು ಎಂಬ ಸದುದ್ದೇಶದಿಂದ 1979ರಲ್ಲಿಯೇ 'ಉಚಿತ ಸಾಮೂಹಿಕ ವಿವಾಹ' ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಆರಂಭಿಸಿದರು. ಧರ್ಮಸ್ಥಳದ ಆಶ್ರಯದಲ್ಲಿ ಇದುವರೆಗೆ 13,100ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹಗಳು ಸಾವಿರಾರು ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಇಳಿಸಿವೆ.

ಮತ್ತೊಂದು ಅತಿದೊಡ್ಡ ಕ್ರಾಂತಿಯೆಂದರೆ 'ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ'ಯ ಮೂಲಕ ಹಮ್ಮಿಕೊಳ್ಳುವ ಮದ್ಯವರ್ಜನ ಶಿಬಿರಗಳು. ಈ ಶಿಬಿರಗಳ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿ, ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಇಂದು ಸಾವಿರಾರು ಕುಟುಂಬಗಳು ಹೆಗ್ಗಡೆಯವರನ್ನು 'ನಮ್ಮ ಮನೆ ಉಳಿಸಿದ ದೇವರು' ಎಂದು ಪೂಜಿಸುತ್ತವೆ. ಅದೇ ರೀತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಜಾಗತಿಕ ಮನ್ನಣೆ ತಂದುಕೊಡುವಲ್ಲಿ ಅವರ ಪಾತ್ರ ದೊಡ್ಡದು. ಧರ್ಮಸ್ಥಳದ 'ಶಾಂತಿವನ' ಮತ್ತು ಉಡುಪಿಯ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ರೋಗಗಳನ್ನು ವಾಸಿಮಾಡುವ ಸಂಜೀವಿನಿಯಾಗಿವೆ.

ಭಗವಾನ್ ಬಾಹುಬಲಿಯ ಪ್ರತಿಷ್ಠಾಪನೆ

ಕಾರ್ಕಳದ ಖ್ಯಾತ ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಮಾರ್ಗದರ್ಶನದಲ್ಲಿ 39 ಅಡಿ ಎತ್ತರದ ಬೃಹತ್ ಏಕಶಿಲಾ ಮೂರ್ತಿಯನ್ನು ಕೆತ್ತಿಸಿ, ಅದನ್ನು ಕಾರ್ಕಳದಿಂದ ಧರ್ಮಸ್ಥಳಕ್ಕೆ ಬೃಹತ್ ಟ್ರಕ್ ಮೂಲಕ ತಂದ ರೋಚಕ ಇತಿಹಾಸ ಇಂದಿಗೂ ನಾಡಿನ ಜನಮಾನಸದಲ್ಲಿ ಹಸಿರಾಗಿದೆ. 1982ರಲ್ಲಿ ರತ್ನಗಿರಿ ಬೆಟ್ಟದ ಮೇಲೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ತ್ಯಾಗ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದರು. ಸಾವಿರಾರು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನ ಮೂರ್ತಿಯನ್ನು ಸ್ಥಾಪಿಸಿದ ಗಂಗರ ಅರಸರ ಮಂತ್ರಿ ಚಾವುಂಡರಾಯನ ಸಾಹಸವನ್ನು ಮತ್ತೆ ನೆನಪಿಸಿದ ಕಾರಣಕ್ಕಾಗಿ, ನಾಡಿನ ಜನತೆ ಡಾ. ಹೆಗ್ಗಡೆಯವರನ್ನು 'ಅಭಿನವ ಚಾವುಂಡರಾಯ' ಎಂಬ ಬಿರುದಿನಿಂದ ಗೌರವಿಸಿದರು. ಇದು ಧರ್ಮಸ್ಥಳದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ.

Untitled design - 2026-10-23T222247.965

'ಸಿರಿ' ಗ್ರಾಮೋದ್ಯೋಗ

ಗ್ರಾಮೀಣಾಭಿವೃದ್ಧಿ ಯೋಜನೆ (SKDRDP) ಮೂಲಕ ಕೇವಲ ಸಾಲ ಸೌಲಭ್ಯ ನೀಡುವುದಷ್ಟೇ ಅಲ್ಲದೆ, ಮಹಿಳೆಯರು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಗ್ಗಡೆಯವರು 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯನ್ನು ಹುಟ್ಟುಹಾಕಿದರು. ಹಳ್ಳಿಗಳ ಮಹಿಳೆಯರು ತಯಾರಿಸುವ ಉಡುಪುಗಳು, ಆಹಾರ ಉತ್ಪನ್ನಗಳು, ಅಗರಬತ್ತಿ, ಫಿನಾಯಿಲ್, ಸೋಪು, ಬ್ಯಾಗ್‌ಗಳು ಮುಂತಾದ ದೈನಂದಿನ ಬಳಕೆಯ ವಸ್ತುಗಳಿಗೆ 'ಸಿರಿ' ಎಂಬ ಬ್ರ್ಯಾಂಡ್‌ನ ಅಡಿಯಲ್ಲಿ ಮಾರುಕಟ್ಟೆ ಒದಗಿಸಲಾಗುತ್ತಿದೆ. ಇಂದು 'ಸಿರಿ' ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರಾಗಿದ್ದು, ಕರ್ನಾಟಕಾದ್ಯಂತ ತಮ್ಮದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿವೆ. ಇದಕ್ಕೆ ನಟ ರಮೇಶ್‌ ಅರವಿಂದ್‌ ರಾಯಭಾರಿಯಾಗಿರುವುದು ವಿಶೇಷ.

ಶೌರ್ಯ ವಿಪತ್ತು ನಿರ್ವಹಣಾ ಪಡೆ

ಪ್ರಕೃತಿ ವಿಕೋಪಗಳು, ನೆರೆ, ಭೂಕುಸಿತ ಅಥವಾ ಅಪಘಾತಗಳು ಸಂಭವಿಸಿದಾಗ ತಕ್ಷಣವೇ ಸ್ಪಂದಿಸಲು ಡಾ. ಹೆಗ್ಗಡೆಯವರು ಶೌರ್ಯ ವಿಪತ್ತು ನಿರ್ವಹಣಾ ಪಡೆಯನ್ನು ರಚಿಸಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ಸಮಯದಲ್ಲಿ ಶೌರ್ಯ ಪಡೆಯ ಸದಸ್ಯರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಸುಜ್ಞಾನ ನಿಧಿ

ಶಿಕ್ಷಣ ಕ್ಷೇತ್ರದಲ್ಲಿ ಎಸ್‌ಡಿಎಂ ಸಂಸ್ಥೆಗಳ ಕೊಡುಗೆ ಅಪಾರ. ಆದರೆ ಬಡತನದ ಕಾರಣದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 'ಸುಜ್ಞಾನ ನಿಧಿ' ಎಂಬ ಬೃಹತ್ ವಿದ್ಯಾರ್ಥಿವೇತನ ಯೋಜನೆಯನ್ನು ಹೆಗ್ಗಡೆಯವರು ಜಾರಿಗೆ ತಂದಿದ್ದಾರೆ. ಎಸ್‌ಕೆಡಿಆರ್‌ಡಿಪಿ ಸದಸ್ಯರ ಮಕ್ಕಳು ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್ ಅಥವಾ ಯಾವುದೇ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿದ್ದರೆ, ಅವರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತದೆ.

ಇದರ ಜತೆಗೆ, ಮೈಸೂರಿನಲ್ಲಿರುವ 'ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್' (SDM-IMD) ಜಾಗತಿಕ ಮಟ್ಟದ ಬ್ಯುಸಿನೆಸ್ ಸ್ಕೂಲ್ ಆಗಿ ರೂಪುಗೊಂಡಿದೆ. ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಉತ್ತರ ಕರ್ನಾಟಕದ ಪಾಲಿಗೆ ಆರೋಗ್ಯದ ಕಾಮಧೇನುವಾಗಿದೆ.

ಸಮ್ಮೇಳನಗಳ ಇತಿಹಾಸ

ಧರ್ಮಸ್ಥಳವು ಕೇವಲ ಹಿಂದೂ ಧರ್ಮದ ಶ್ರದ್ಧಾಕೇಂದ್ರವಾಗಿರದೆ, ಎಲ್ಲ ಧರ್ಮಗಳ ಸಮಾಗಮದ ವೇದಿಕೆಯಾಗಿದೆ. ಪ್ರತಿ ವರ್ಷ ಲಕ್ಷದೀಪೋತ್ಸವದ ಸಂದರ್ಭದಲ್ಲಿ ನಡೆಯುವ 'ಸರ್ವಧರ್ಮ ಸಮ್ಮೇಳನ'ವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ ಹೀಗೆ ಎಲ್ಲ ಧರ್ಮಗಳ ಮುಖಂಡರು, ಚಿಂತಕರು ಒಂದೇ ವೇದಿಕೆಯಲ್ಲಿ ಕುಳಿತು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಸಮ್ಮೇಳನಕ್ಕೆ ದಶಕಗಳ ಸುದೀರ್ಘ ಇತಿಹಾಸವಿದೆ. 'ಎಲ್ಲ ಧರ್ಮಗಳ ಸಾರವೂ ಒಂದೇ, ಮಾನವೀಯತೆಯೇ ಅತ್ಯುನ್ನತ ಧರ್ಮ' ಎಂಬ ಹೆಗ್ಗಡೆಯವರ ತತ್ತ್ವವನ್ನು ಈ ಸಮ್ಮೇಳನಗಳು ಪ್ರತಿಬಿಂಬಿಸುತ್ತವೆ. ಅದೇ ರೀತಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ಪ್ರತಿ ವರ್ಷ 'ಸಾಹಿತ್ಯ ಸಮ್ಮೇಳನ'ವನ್ನು ಆಯೋಜಿಸಲಾಗುತ್ತದೆ.

ರೈತ ಸಬಲೀಕರಣ ಯೋಜನೆಗಳು

ರೈತರು ಕೃಷಿಯಲ್ಲಿ ಎದುರಿಸುತ್ತಿರುವ ಕಾರ್ಮಿಕರ ಕೊರತೆ ಮತ್ತು ಆಧುನಿಕ ಯಂತ್ರೋಪಕರಣಗಳ ದುಬಾರಿ ವೆಚ್ಚವನ್ನು ಮನಗಂಡ ಡಾ. ಹೆಗ್ಗಡೆಯವರು 'ಕೃಷಿ ಯಂತ್ರಧಾರೆ' ಯೋಜನೆಯನ್ನು ಪರಿಚಯಿಸಿದರು. ಈ ಯೋಜನೆಯಡಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸಜ್ಜಿತ ಕೃಷಿ ಯಂತ್ರೋಪಕರಣಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಟ್ರಾಕ್ಟರ್, ಟಿಲ್ಲರ್, ನಾಟಿ ಯಂತ್ರ, ಕಳೆ ಕೀಳುವ ಯಂತ್ರ ಸೇರಿದಂತೆ ಅತ್ಯಾಧುನಿಕ ಕೃಷಿ ಯಂತ್ರಗಳನ್ನು ರೈತರಿಗೆ ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ. ಇದರಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಿದೆ. ಕೃಷಿ ಮೇಳಗಳನ್ನು ಆಯೋಜಿಸುವ ಮೂಲಕ ಸಾವಯವ ಕೃಷಿ, ಹನಿ ನೀರಾವರಿ ಮತ್ತು ಲಾಭದಾಯಕ ಬೆಳೆಗಳ ಬಗ್ಗೆ ರೈತರಿಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯಲ್ಲಿ ಧರ್ಮಸ್ಥಳವು ಇಡೀ ದೇಶಕ್ಕೆ ಮಾದರಿಯಾಗಿದೆ. ಅಡುಗೆ ಮಾಡಲು, ನೀರು ಕಾಯಿಸಲು ಮತ್ತು ವಿದ್ಯುತ್ ಉತ್ಪಾದನೆಗೆ ಧರ್ಮಸ್ಥಳದಲ್ಲಿ ಸೌರಶಕ್ತಿ ಮತ್ತು ಬಯೋಗ್ಯಾಸ್‌ ಘಟಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಮೂಲಕ, ಸೌದೆಗಾಗಿ ಅರಣ್ಯ ನಾಶವಾಗುವುದನ್ನು ತಡೆಗಟ್ಟಿದ್ದಾರೆ. 'ವೃಕ್ಷಾರೋಹಣ' ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ನಿರಂತರವಾಗಿ ಸಾಗಿದೆ. ನೇತ್ರಾವತಿ ನದಿಯ ಸ್ವಚ್ಛತೆ ಮತ್ತು ಜಲಮೂಲಗಳ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ್ದಾರೆ.

Untitled design - 2026-10-23T222257.675

78ನೆಯ ವಯಸ್ಸಿನಲ್ಲೂ ಅವಿರತ ಸೇವೆ

ನವೆಂಬರ್ 25,1948ರಲ್ಲಿ ಜನಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಈಗ 78 ವರ್ಷ ವಯಸ್ಸು. ಆದರೂ ಅವರು ಯುವಕರನ್ನು ನಾಚಿಸುವಂಥ ಉತ್ಸಾಹದಿಂದ ಪ್ರತಿದಿನ ಬರೋಬ್ಬರಿ 18 ಗಂಟೆಗಳ ಕಾಲ ಸಾರ್ವಜನಿಕ ಸೇವೆ, ಆಡಳಿತ ಮತ್ತು ಭಕ್ತರ ಕುಂದುಕೊರತೆಗಳನ್ನು ಆಲಿಸುವಲ್ಲಿ ನಿರತರಾಗಿರುತ್ತಾರೆ. ಹೊಸ ಆಲೋಚನೆಗಳು, ನವೀನ ತಂತ್ರಜ್ಞಾನದ ಅಳವಡಿಕೆ ಮತ್ತು ಸಮಾಜಮುಖಿ ಚಿಂತನೆಗಳು ಅವರ ಸದಾ ಜಾಗೃತವಾಗಿರುವ ಮನಸಿನಿಂದ ಹೊಮ್ಮುತ್ತಲೇ ಇರುತ್ತವೆ.

ಇಷ್ಟೆಲ್ಲ ಬೃಹತ್ ಸಂಸ್ಥೆಗಳನ್ನು, ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಾ. ವೀರೇಂದ್ರ ಹೆಗ್ಗಡೆಯವರ ವೈಯಕ್ತಿಕ ಜೀವನವು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ. ಬೆಳಗಿನ ಜಾವವೇ ಎದ್ದು, ಯೋಗ, ಧ್ಯಾನ ಮತ್ತು ದೇವರ ಪೂಜೆಯಲ್ಲಿ ಪಾಲ್ಗೊಳ್ಳುವ ಅವರು, ಪ್ರತಿದಿನ ಸಾವಿರಾರು ಭಕ್ತರನ್ನು ಖುದ್ದಾಗಿ ಭೇಟಿಯಾಗುತ್ತಾರೆ. ಪ್ರತಿಯೊಬ್ಬ ಭಕ್ತನ ಕಷ್ಟ-ಕಾರ್ಪಣ್ಯಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ, ಸೂಕ್ತ ಪರಿಹಾರ ಸೂಚಿಸುತ್ತಾರೆ.

ಅವರ ಸಮಯ ಪ್ರಜ್ಞೆ ಬೆರಗುಗೊಳಿಸುವಂಥದ್ದು. ಒಂದು ಕಡೆ ಧಾರ್ಮಿಕ ವಿಧಿವಿಧಾನಗಳು, ಮತ್ತೊಂದು ಕಡೆ ಶಿಕ್ಷಣ ಸಂಸ್ಥೆಗಳ ಆಡಳಿತ, ಇನ್ನೊಂದು ಕಡೆ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪರಾಮರ್ಶೆ, ಜತೆಗೆ ನಾಡಿನಾದ್ಯಂತ ನಡೆಯುವ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿ, ಇವೆಲ್ಲವನ್ನೂ ಅವರು ಅತ್ಯಂತ ಲವಲವಿಕೆಯಿಂದ, ಹಸನ್ಮುಖಿಯಾಗಿ ನಿಭಾಯಿಸುತ್ತಾರೆ. ಅವರಲ್ಲಿರುವ ಅಪಾರ ಓದಿನ ಹಸಿವು, ಛಾಯಾಗ್ರಹಣದ ಆಸಕ್ತಿ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ತುಡಿತ ಅವರನ್ನು ಸದಾ ಕ್ರಿಯಾಶೀಲರನ್ನಾಗಿ ಇಟ್ಟಿದೆ.

ಇತ್ತೀಚಿನ ಅಂಕಿ-ಅಂಶಗಳು

ಸುಮಾರು 52 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ.

5,89,204 ಸ್ವಸಹಾಯ ಸಂಘಗಳನ್ನು (SHGs) ರಚಿಸಲಾಗಿದೆ. ಇದರಲ್ಲಿ 52,42,307 ಸದಸ್ಯರು ಸೇರಿರುತ್ತಾರೆ.

ಮಹಿಳೆಯರು ಮತ್ತು ರೈತರ ಉಳಿತಾಯದ ಮೊತ್ತ ₹3,680 ಕೋಟಿಗಳನ್ನು ಮೀರಿದೆ.

ಒಟ್ಟು ಸಾಲದ ವಹಿವಾಟು ₹1,62,179 ಕೋಟಿಗಳನ್ನು ದಾಟುವ ಮೂಲಕ ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ತರ ಕ್ರಾಂತಿಯನ್ನೇ ಸೃಷ್ಟಿಸಿದೆ.

ಹೆಗ್ಗಡೆ ಪರಂಪರೆ

  1. ಬಿರ್ಮಣ್ಣ ಹೆಗ್ಗಡೆ
  2. ಪದ್ಮಯ್ಯ ಹೆಗ್ಗಡೆ
  3. ಒಂದನೆಯ ಚಂದಯ್ಯ ಹೆಗ್ಗಡೆ
  4. ದೇವರಾಜ ಹೆಗ್ಗಡೆ
  5. ಒಂದನೆಯ ಮಂಜಯ್ಯ ಹೆಗ್ಗಡೆ
  6. ಜಿನ್ನಪ್ಪ ಹೆಗ್ಗಡೆ
  7. ಇಮ್ಮಡಿ ಚಂದಯ್ಯ ಹೆಗ್ಗಡೆ
  8. ದೇವಪ್ಪರಾಜ ಹೆಗ್ಗಡೆ
  9. ಅನಂತಯ್ಯ ಹೆಗ್ಗಡೆ
  10. ವೃಷಭಯ್ಯ ಹೆಗ್ಗಡೆ
  11. ಗುಮ್ಮಣ್ಣ ಹೆಗ್ಗಡೆ
  12. ವರ್ಧಯ್ಯ ಹೆಗ್ಗಡೆ
  13. ಮುಮ್ಮಡಿ ಚಂದಯ್ಯ ಹೆಗ್ಗಡೆ
  14. ಕುಮಾರಯ್ಯ ಹೆಗ್ಗಡೆ
  15. ನಾಲ್ವಡಿ ಚಂದಯ್ಯ ಹೆಗ್ಗಡೆ
  16. ಇಮ್ಮಡಿ ಮಂಜಯ್ಯ ಹೆಗ್ಗಡೆ
  17. ಧರ್ಮಪಾಲ ಹೆಗ್ಗಡೆ
  18. ಐದನೆಯ ಚಂದಯ್ಯ ಹೆಗ್ಗಡೆ
  19. ಮಂಜಯ್ಯ ಹೆಗ್ಗಡೆ (1918-1955)
  20. ರತ್ನವರ್ಮ ಹೆಗ್ಗಡೆ (1955- 1968)
  21. ಡಿ. ವೀರೇಂದ್ರ ಹೆಗ್ಗಡೆ