• ಶ್ರೀನಿವಾಸ ನಾ. ಪಂಚಮುಖಿ

ಇತ್ತೀಚೆಗೆ ನಾನು ಗುಜರಾತ್ಗೆ ಪ್ರವಾಸ ಹೋಗಿದ್ದೆ. ಈ ಪಯಣಕ್ಕೆ ಮುಖ್ಯ ಸ್ಫೂರ್ತಿಯಾಗಿದ್ದು, ರುಪಾಯಿಯ ಹೊಸ ನೋಟು! ಹೌದು, ಒಮ್ಮೆ ನನ್ನ ಮಗ ಆ ಲಾವೆಂಡರ್ ಬಣ್ಣದ ನೋಟಿನ ಹಿಂದಿರುವ ಸುಂದರ ಕೆತ್ತನೆಯ ಕಟ್ಟಡವನ್ನು ನೋಡಿ ಬೆರಗಾಗಿ ಪ್ರಶ್ನಿಸಿದ್ದ. ಹಾಗಾಗಿ ನಮ್ಮ ಹೆಮ್ಮೆಯ ಇತಿಹಾಸವನ್ನು ಅವನಿಗೆ ತೋರಿಸಲೇಬೇಕೆಂದು ತೀರ್ಮಾನಿಸಿದೆ. ಅದೇ ಗುಜರಾತಿನ ಪಾಟಣ್ ನಗರದಲ್ಲಿರುವ 'ರಾಣಿ ಕಿ ವಾವ್'. ರೈಲಿನ ಮೂಲಕ ಅಹ್ಮದಾಬಾದ್ ತಲುಪಿ, ಅಲ್ಲಿನ ನರೋಡಾ ಉಪನಗರದ 'ಇಂದ್ರಪ್ರಸ್ಥ' ಹೊಟೇಲ್‌ನಲ್ಲಿ ಉಳಿದುಕೊಂಡೆವು. ಆ ಹೊಟೇಲ್‌ನ ಅಕ್ಕಪಕ್ಕದ ರೆಸ್ಟೋರೆಂಟ್‌ಗಳಲ್ಲಿ ಶುದ್ಧ ಸಸ್ಯಹಾರಿ ಖಾದ್ಯಗಳ ಭರಪೂರ ಭೋಜನ ಸವಿದೆವು. ಗುಜರಾತಿ ಥಾಲಿ, ಕಾಠಿಯಾವಾಡಿ ಥಾಲಿ, ಪಂಜಾಬಿ ಥಾಲಿ ಜತೆಗೆ ದಕ್ಷಿಣ ಭಾರತದ ತಿಂಡಿ- ತಿನಿಸುಗಳೂ ಅಲ್ಲಿ ಲಭ್ಯ!

ಅಡಲಜ್ ನಿ ವಾವ್

Untitled design (70)

ಅಹ್ಮದಾಬಾದ್ ನಗರದಿಂದ ಕ್ಯಾಬ್ ಆಪ್ ಮೂಲಕ ಟ್ಯಾಕ್ಸಿ ಬುಕ್‌ಮಾಡಿ, ನರೇಂದ್ರ ಮೋದಿ ಕ್ರೀಡಾಂಗಣವನ್ನು ನೋಡಿಕೊಂಡು ಮೊದಲು ತಲುಪಿದ್ದು ‘ಅಡಲಜ್ ನಿ ವಾವ್’ಗೆ. ಅಹ್ಮದಾಬಾದ್‌ನಿಂದ ಸುಮಾರು 15 ಕಿಮೀ ದೂರದಲ್ಲಿ ಈ ಬಾವಿ ಇದೆ. ಹೊರಗಿನಿಂದ ನೋಡಿದಾಗ ಸಾಮಾನ್ಯ ಕಟ್ಟಡದಂತೆ ಕಂಡಿತು. ಆದರೆ ಒಳಗೆ ಇಳಿಯುತ್ತಿದ್ದಂತೆ ಅದರ ವೈಭವ ನಮ್ಮೆದುರು ತೆರೆದುಕೊಂಡಿತು. ಇದು ಐದು ಹಂತಗಳಲ್ಲಿ ನಿರ್ಮಾಣವಾಗಿರುವ ಮೆಟ್ಟಿಲುಬಾವಿ. ಕೇವಲ ನೀರಿನ ಸಂಗ್ರಹಣಾ ಕೇಂದ್ರವಾಗಿರಲಿಲ್ಲ; ಅದು ಕಲ್ಲಿನ ಮೇಲೆ ಕೆತ್ತಿದ ಕಲೆಯ ಮಹಾಕಾವ್ಯವಾಗಿತ್ತು. ಪ್ರತಿ ಮೆಟ್ಟಿಲಿನ ಪಕ್ಕದಲ್ಲೂ ಶಿಲ್ಪಗಳು, ಪ್ರತಿ ಕಂಬದಲ್ಲೂ ಕಥೆಗಳಿವೆ. ಸೂರ್ಯನ ಬೆಳಕು ಬಾವಿಯ ಆಳಕ್ಕೆ ಇಳಿದು ನೆರಳುಗಳೊಂದಿಗೆ ಆಟವಾಡುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ರಾಣಿ ಕಿ ವಾವ್‌

Untitled design (71)

ಅಡಲಜ್ ನಿ ವಾವ್ ವೀಕ್ಷಣೆಯ ನಂತರ ನಾವು ಹೋಗಿದ್ದು ಮೊಧೆರಾ ಸೂರ್ಯ ದೇವಾಲಯಕ್ಕೆ. ಆ ದೇವಾಲಯವನ್ನು ಸುತ್ತಾಡಿ ನೋಡಿದೆವು. ಹೊರಗಿನ ಹೊಟೇಲ್‌ನಲ್ಲಿ ಶುದ್ಧ ಸಸ್ಯಹಾರಿ ಗುಜರಾತಿ ಊಟವನ್ನು ಸವಿದು, ಸುಮಾರು ಮುಕ್ಕಾಲು ಗಂಟೆಯ ಪ್ರಯಾಣದ ನಂತರ ಪಾಟಣ್ ನಗರದ 'ರಾಣಿ ಕಿ ವಾವ್' ತಲುಪಿದೆವು. 'ವಾವ್' ಎಂದರೆ ಗುಜರಾತಿಯಲ್ಲಿ ಬಾವಿ ಎಂದರ್ಥ. ರಾಣಿ ಕಿ ವಾವ್ ಎಂದರೆ ರಾಣಿಯ ಬಾವಿ. ಪದಗಳು ಇದರ ಭವ್ಯತೆಯನ್ನು ವರ್ಣಿಸಲಾರುವ. ಇದು ಕಣ್ಣಾರೆ ಕಂಡು, ಮನಸಾರೆ ಅನುಭವಿಸಬೇಕಾದ ತಾಣ. ತಾಜ್ ಮಹಲ್ ಹೆಂಡತಿಗಾಗಿ ಗಂಡ ಕಟ್ಟಿಸಿದ ಸ್ಮಾರಕ. ಆದರೆ ರಾಣಿ ಕಿ ವಾವ್‌ ಗಂಡನಿಗಾಗಿ ಹೆಂಡತಿ ನಿರ್ಮಿಸಿದ ಅಮರ ಪ್ರೇಮದ ಅದ್ಭುತ ಸಂಕೇತ. 11ನೆಯ ಶತಮಾನದಲ್ಲಿ ಸೋಲಂಕಿ ರಾಜವಂಶದ ಒಂದನೆಯ ಭೀಮದೇವನ ನೆನಪಿಗಾಗಿ ಆತನ ಪತ್ನಿ ರಾಣಿ ಉದಯಮತಿ ಈ ವಿಸ್ಮಯವನ್ನು ನಿರ್ಮಿಸಿದಳು. ಸರಸ್ವತಿ ನದಿಯ ಪ್ರವಾಹದಿಂದಾಗಿ ಶತಮಾನಗಳ ಕಾಲ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಈ ಬೆರಗನ್ನು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅತ್ಯಂತ ಜತನದಿಂದ ಉತ್ಖನನ ಮಾಡಿ ಹೊರತಂದಿದೆ. 2014ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಮಾನ್ಯತೆ ಪಡೆದ ಈ ತಾಣ, ನಮ್ಮ ಶ್ರೀಮಂತ ಇತಿಹಾಸವನ್ನು ಜಗತ್ತಿಗೆ ಸಾರುತ್ತಿದೆ.

ತಂತ್ರಜ್ಞಾನದ ಅದ್ಭುತ

Untitled design (72)

ಸರಸ್ವತಿ ನದಿಯ ದಡದಲ್ಲಿ ಈ ಮೆಟ್ಟಿಲುಬಾವಿ ಇದೆ. ಇದು ಕೇವಲ ನೀರು ಸೇದುವ ಗುಂಡಿಯಲ್ಲ; ಭೂಮಿಯೊಳಗೆ ತಲೆಕೆಳಗಾಗಿ ಕಟ್ಟಿದ ಬೃಹತ್ ದೇವಾಲಯ! ಬರೋಬ್ಬರಿ ಏಳು ಅಂತಸ್ತುಗಳ ಆಳವಿರುವ (ಸುಮಾರು 27 ಮೀಟರ್) ಈ ಬಾವಿಯ ಪ್ರತಿ ಗೋಡೆಯಲ್ಲೂ, ಕಂಬಗಳಲ್ಲೂ ಅದ್ಭುತ ಕೆತ್ತನೆಗಳಿವೆ. ವಿಷ್ಣುವಿನ ದಶಾವತಾರಗಳು, ಮಹಿಷಾಸುರಮರ್ದಿನಿ, ಧ್ಯಾನಮಗ್ನ ಸಾಧು- ಸಂತರು, ಸುಂದರ ಅಪ್ಸರೆಯರು ಮತ್ತು ಜ್ಯಾಮಿತಿಯ ವಿನ್ಯಾಸಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅಂದಿನ ಅತ್ಯುನ್ನತ ಜಲಸಂರಕ್ಷಣಾ ತಂತ್ರಜ್ಞಾನ ಹಾಗೂ ಕಲ್ಲಿನಲ್ಲಿ ಕಾವ್ಯ ಬರೆದ ನಮ್ಮ ಶಿಲ್ಪಿಗಳ ನೈಪುಣ್ಯತೆಗೆ ನಾವು ಮೂಕವಿಸ್ಮಿತರಾಗುತ್ತೇವೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಸ್ಮಾರಕವನ್ನು ನೂರು ರುಪಾಯಿಯ ನೋಟಿನ ಮೇಲೆ ಮುದ್ರಿಸಿದೆ. ಆ ಮೂಲಕ ನಮ್ಮ ಜಲಸಂಸ್ಕೃತಿ ಹಾಗೂ ಅದ್ಭುತ ವಾಸ್ತುಶಿಲ್ಪದ ಹಿರಿಮೆಯನ್ನು ಪ್ರತಿಯೊಬ್ಬ ಭಾರತೀಯನ ಕೈಸೇರಿಸಿದೆ. ಇದು ಕೇವಲ ಹಣದ ವಿನಿಮಯವಲ್ಲ; ನಮ್ಮ ಪ್ರಾಚೀನ ಪರಂಪರೆ ಮತ್ತು ಕಲೆಯ ಹಿರಿಮೆಯ ಪ್ರತೀಕ. ಇಲ್ಲಿ ಕೈಯಲ್ಲಿ ನೂರು ರುಪಾಯಿ ನೋಟು ಹಿಡಿದು, ಈ ಅದ್ಭುತ ಕಲಾಕೃತಿಯ ಮುಂದೆ ನಿಂತು, ನೋಟಿನ ಮೇಲಿನ ಚಿತ್ರದ ಮೇಲೆ ಕ್ಯಾಮೆರಾ ಫೋಕಸ್ ಮಾಡಿ, ನಂತರ ಇಡೀ ‘ರಾಣಿ ಕಿ ವಾವ್’ ಅನ್ನು ತೋರಿಸುವ ವಿಡಿಯೋ ಮಾಡುವ ಸಾಕಷ್ಟು ಜನ ಪರಿಣಿತ ಗೈಡ್’ಗಳು ಪ್ರಾವಸಿಗರನ್ನು ತಮ್ಮತ್ತ ಸೆಳೆಯುತ್ತಿರುತ್ತಾರೆ.

ಛಾಯಾಗ್ರಾಹಕರಿಗೆ ಇದು ಸ್ವರ್ಗ. ಕುಟುಂಬ ಅಥವಾ ಮಕ್ಕಳೊಂದಿಗೆ ಒಮ್ಮೆ ಹೋಗಲೇಬೇಕಾದ, ನಮ್ಮ ದೇಶದ ಹೆಮ್ಮೆಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ತಾಣವಿದು. ಒಮ್ಮೆ ಬಿಡುವು ಮಾಡಿಕೊಂಡು ಗುಜರಾತಿನತ್ತ ಹೊರಡಿ; ಈ ಮೆಟ್ಟಿಲು ಬಾವಿಯ ಒಂದೊಂದೇ ಮೆಟ್ಟಿಲುಗಳನ್ನಿಳಿಯುತ್ತಾ, ಸಾವಿರ ವರ್ಷಗಳ ಹಿಂದಿನ ಇತಿಹಾಸದ ಪುಟಗಳೊಳಗೆ ಅಕ್ಷರಶಃ ಪಯಣಿಸಿ ಬನ್ನಿ.

ಮಾಹಿತಿ ಪೆಟ್ಟಿಗೆ:

  • ಅಕ್ಟೋಬರ್‌- ಮಾರ್ಚ್‌ ಭೇಟಿ ನೀಡಲು ಅತ್ಯುತ್ತಮ ಸಮಯ.
  • ಸೂರ್ಯೋದಯ ಅಥವಾ ಸೂರ್ಯಾಸ್ತದ ಕಿರಣಗಳು ಬಾವಿಯ ಆಳಕ್ಕೆ ಇಳಿಯುವಾಗ, ಅಲ್ಲಿನ ಪ್ರತಿ ಕಲ್ಲೂ ಮೆರುಗು ಪಡೆದುಕೊಂಡು ಇತಿಹಾಸದ ಕಥೆ ಹೇಳುತ್ತದೆ.