ಪ್ರವಾಸಕ್ಕೆ ವ್ಯಾಖ್ಯಾನವುಂಟೆ?
ಒಂದು ಕಲಾಕೃತಿಯ ಮೂಲಕ ನಾವು ಊರುಕೇರಿ, ದೇಶ ಸುತ್ತಿದಾಗ ಕಾಣುವ, ಮುಖಾಮುಖಿಯಾಗುವ, ಪರಸ್ಪರ ಅಭಿವ್ಯಕ್ತಿಸುವ ಅದೆಷ್ಟೋ ಮುಖಗಳನ್ನು ನಾನು ಲೀಕ್ಔಟ್ ಕರ್ನಾಟಕ ಪ್ರವಾಸದ ನಾಟಕ ಪ್ರಯೋಗದಲ್ಲಿ ಕಂಡೆ.
- ಅಕ್ಷತ ಪಾಂಡವಪುರ
ಪ್ರವಾಸ ಎಂದರೆ, ಮತ್ತೊಂದು ಊರು
ಪ್ರವಾಸ ಎಂದರೆ, ಮನೆಯಿಂದ ಆಚೆ ನಡೆ
ಪ್ರವಾಸ ಎಂದರೆ, ಒಂದಷ್ಟು ಬಟ್ಟೆ ಬರೆಯನ್ನು ಕಟ್ಟು
ಪ್ರವಾಸ ಎಂದರೆ, ಒಂದಷ್ಟು ಸಮಯವನ್ನು ಬಿಡುವು ಮಾಡಿಕೊ
ಪ್ರವಾಸ ಎಂದರೆ, ಅಲ್ಪಸ್ವಲ್ಪ ದುಡ್ಡನ್ನು ಕೂಡಿಸಿಕೊ
ಪ್ರವಾಸ ಎಂದರೆ ಬರುವಾಗ ಆತ್ಮೀಯರಿಗೆ ಉಡುಗೊರೆ ತಾ
ಪ್ರವಾಸ ಎಂದರೆ ತಲೆನೋವು ಹೌದು
ಪ್ರವಾಸ ಎಂದರೆ ತಲೆ ನೋವಿಗೆ ಔಷಧಿಯು ಹೌದು!
ನನಗೆ ಮೊದಲಿಂದಲೂ ಮನೆ ಬಿಟ್ಟು ಆಚೆ ನಡೆಯುವುದು ಎಂದರೆ ಬಹಳ ಇಷ್ಟ. ಅದು ಪ್ರವಾಸಕ್ಕಾದರೂ ಸರಿಯೇ, ಕೆಲಸಕ್ಕಾದರು ಸರಿಯೇ... ಹೊಟ್ಟೆ ತುಂಬಾ ಊಟ- ಕೈತುಂಬ ಸಂಬಳ ಬರುತ್ತದೆ ಮನೆಯಲ್ಲೇ ಕೂತಿರು ಎಂದರೂ ಸಹ ನನ್ನಿಂದ ಅದು ಸಾಧ್ಯವೇ ಇಲ್ಲ! ಇನ್ನು ಈಗಿನ 'Work From Home' ಸಂಗಾತಿಗಳನ್ನು ಕಂಡರೆ ಸ್ವಲ್ಪ ಅನುಕಂಪ!
ಇದನ್ನೂ ಓದಿ: ಅಕ್ಷತಾ ಪಾಂಡವಪುರ ಟ್ರಾವೆಲ್ ಸ್ಟೋರಿ
ಅದೇನೇ ಇರಲಿ ಒಲಿದ ಕಲೆಯನ್ನು ಪ್ರದರ್ಶಿಸಲು ಜನರ ಬಳಿ ತಲುಪುವ ಒಂದು ಸಾಹಸಮಯ ಪ್ರವಾಸದ ಕಥೆಯಲ್ಲಿ ನಾ ಕಂಡ ರಾಜ- ರಾಣಿಯರ ಬಗ್ಗೆ ಪರಿಚಯಿಸುವ ಪ್ರಯತ್ನ ಮಾಡುತ್ತೇನೆ. ಅದು ಬರೆದ ಕಥೆಗಳನ್ನು, ಬಿಡುಗಡೆಗೊಂಡ ಮಾರನೆಯ ವಾರಕ್ಕೆ ಕಥಾ ಪುಸ್ತಕದಲ್ಲಿ ಇರುವ ಪಾತ್ರಧಾರಿಗಳನ್ನು ಹುಡುಕುವ, ಮಾತನಾಡಿಸುವ ಹಂಬಲಕ್ಕೆ ಬಿದ್ದು ಒಂದು ಪ್ರವಾಸ ಕೈಗೊಂಡೆನು ಆ ಪ್ರವಾಸವೇ ‘ಲೀಕ್ಔಟ್’ ಪ್ರವಾಸ ಕಥನ ಪ್ರಯೋಗ!
‘ಲೀಕ್ಔಟ್’: ನಾ ಕಂಡ ನಾನಾ ಮುಖಗಳು
ಈ ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಾನಾ ಜನರ ಬಗ್ಗೆ ಯೋಚಿಸುವ ಜನರನ್ನು ಕಂಡರೆ ನನಗೆ ಯಾವಾಗಲೂ ಅಪಹಾಸ್ಯವೇ! ಮನೆ ಬಿಟ್ಟು ಆಚೆ ನಡೆದರೆ ಕಾಣುವ ಒಂದಷ್ಟು ಮುಖಗಳು, ಊರಿಂದಾಚೆ ಕಾಣುವ ಇನ್ನೊಂದಷ್ಟು ಮುಖಗಳು, ಕೇರಿಯಿಂದಾಚೆಗೆ ಕಾಣುವ ಮತ್ತೊಂದಷ್ಟು ಮುಖಗಳು ನನ್ನ ಜೀವನಕ್ಕೆ ಮಾರ್ಗದರ್ಶಕರಾಗಿ ಕಂಡಿದ್ದು ಸುಳ್ಳಲ್ಲ. ಅದರಲ್ಲೂ, ಸುಮ್ಮನೆ ಹೀಗೆ ಊರೂರು ಸುತ್ತಿ ಬರುತ್ತೇನೆಂದು ಯಾರು ತಾನೆ ಹೋಗುತ್ತಾರೆ? ಒಂದು ವೇಳೆ ಹೋದರೂ ಪ್ರವಾಸಿ ತಾಣಗಳಿಗೋ, ಸುಂದರ ತಾಣಗಳಿಗೋ, ಮನಃಶಾಂತಿ ದೊರೆಯುವಲ್ಲಿಗೋ, ಹೊಟೇಲು, ರೆಸಾರ್ಟು, ಹೋಮ್‌ಸ್ಟೇಗಳಿಗಷ್ಟೇ ಹೋಗುವ ಪರಂಪರೆ ಉಂಟು. ಆಗ ನಮ್ಮಂತೆಯೇ ಮನಃಶಾಂತಿಗಾಗಿ ಬಂದಂಥ ಮುಖಗಳು ನಮ್ಮ ಹಾಗೆಯೇ ಕಾಣುತ್ತವೆ ವಿನಾ ಮತ್ತೆಲ್ಲೂ ಅಡಗಿ ಕೂತಿರುವ ಮುಖಗಳನ್ನು ಕಾಣುವಲ್ಲಿ ವಿಫಲವಾಗುತ್ತೇವೆ.

ಹೀಗೆ, ಒಂದು ಕಲಾಕೃತಿಯ ಮೂಲಕ ನಾವು ಊರುಕೇರಿ ದೇಶ ಸುತ್ತಿದಾಗ ಕಾಣುವ, ಮುಖಾಮುಖಿಯಾಗುವ, ಪರಸ್ಪರ ಅಭಿವ್ಯಕ್ತಿಸುವ ಅದೆಷ್ಟೋ ಮುಖಗಳನ್ನು ನಾನು ಲೀಕ್ಔಟ್ ಕರ್ನಾಟಕ ಪ್ರವಾಸದ ನಾಟಕ ಪ್ರಯೋಗದಲ್ಲಿ ಕಂಡೆ. ಬಹುಶಃ ಕಂಡೆ ಎಂದರೆ ತಪ್ಪಾಗಬಹುದು, ಅರಿತೆ, ಬೆರೆತೆ ಜೀವನವೆಂಬ ಮುಂದಿನ ಪುಟಗಳಿಗೆ ಪ್ರೇರಣೆಯೆಂದು ಭಾವಿಸಿದೆ. ಹಾಗಂತ ಕಂಡ ಎಲ್ಲರೂ? ಊಹೂo...! ಕೆಲವು ಮುಖಗಳು ಪ್ರೇರಣೆಯಾದರೆ ಮತ್ತೆ ಕೆಲವು ಮುಖಗಳು ಹೀಗೆ ಮಾತ್ರ ಬದುಕಬಾರದು ಎಂದನ್ನಿಸಿರುವುದುಂಟು.
ಒಂದಷ್ಟು ಅದ್ಭುತ ಮುಖಗಳ ಜತೆ...
ಹೆಸರು ಬದಲಾಯಿಸಿ 'ಇದ್ದರೆ ಇವರಂತೆ ಮಾತ್ರ ಇರಬಾರದು' ಎಂದು ಭಾವಿಸಿದ ಮತ್ತಲವು ಮುಖಗಳ ಬಗ್ಗೆಯೂ ಪರಿಚಯಿಸುತ್ತಾ ಹೋಗುತ್ತೇನೆ. ಅದಕ್ಕೂ ಮೊದಲು ಕಲಾಕೃತಿಯ ಮೂಲಕ - ಆ ಕಲೆಯನ್ನು ಪ್ರವಾಸಕ್ಕೆಂದು ವಿನ್ಯಾಸಗೊಳಿಸಿ ದೊಡ್ಡ ದೊಡ್ಡ ಸಭಾಂಗಣ, ವೇದಿಕೆಗಳಲ್ಲದೆ ಸಾಮಾನ್ಯವಾಗಿ ನಿಂಗಿ, ಗಂಗಿ, ತಂಗಿ, ರಮೇಶ, ಸುರೇಶ, ಈಶ, ಸೇರುವ ಜಾಗಗಳಲ್ಲಿಯೇ, ಆ ಜನಜಂಗುಲಿ ಗಲಾಟೆಯಲ್ಲಿಯೇ ವಿನ್ಯಾಸಗೊಂಡ ಕಲೆಯನ್ನು ಪ್ರಸ್ತುತಪಡಿಸುವಾಗ ಹೇಗೆ ಜನರನ್ನು ಅರಿತೆ? ಬೆರೆತೆ? ಎಂದು ಚಿಂತಿಸಬಹುದು.

ನನ್ನ ಮೊದಲ ಆಯ್ಕೆ.. ಉತ್ತರ ಕರ್ನಾಟಕ!
ಅದೇನೋ ಗೊತ್ತಿಲ್ಲ ಉತ್ತರ ಕರ್ನಾಟಕ ಎಂದರೆ ಒಂಥರಾ ಪ್ರೀತಿ, ಅಭಿಮಾನ, ಆ ಭಾಷೆ, ಉಡುಪು, ಮನೆಯ ವಿನ್ಯಾಸಗಳು, ಊರು, ಹಬ್ಬ, ಊಟ- ತಿಂಡಿ, ಹೊಲ- ನೆಲ, ಕೂಲಿ- ನಾಲಿ, ವ್ಯಾಪಾರ- ವ್ಯವಹಾರ, ಕಲೆ, ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲ ಇಷ್ಟ. ಅದೇ ಕುತೂಹಲದಲ್ಲಿ ನಾನು ಮೊದಲು ಪ್ರವಾಸಕ್ಕೆ ಆಯ್ದುಕೊಂಡದ್ದೆ ಉತ್ತರ ಕರ್ನಾಟಕದ ಭಾಗ!
ಒಂದು ಕಾರಿನ ಕಥೆ
ಕಾರಿನ ತುಂಬಾ ನಾಟಕದ ವಸ್ತುಗಳು, ಒಬ್ಬ ಸಹಾಯಕ (ರಂಗಕರ್ಮಿ), ಒಂದು ತಿಂಗಳ ಪ್ರವಾಸ, 40 ಪ್ರಯೋಗ, ಹಾಗೂ ನಾನಾ ಮುಖಗಳು. ನಾ ಕಂಡ ನಾನಾ ಮುಖಗಳಲ್ಲಿ ಒಬ್ಬ ಸಹಾಯಕನಿಂದ ಮೊದಲು ಶುರು ಮಾಡೋಣ. ಒಬ್ಬ ಸಹಾಯಕ..! ನಾನೇನೋ ಪ್ರವಾಸ ಮಾಡಲೇಬೇಕೆಂದು ತೀರ್ಮಾನಿಸಿ, ಮಗುವಿಗೆ ಹಾಲುಣಿಸುವುದು ನಿಲ್ಲಿಸಿ, ಪುಸ್ತಕ ಬಿಡುಗಡೆಯಾದ ಮುಂದಿನ ವಾರವೇ ಮೊದಲೇ ತೀರ್ಮಾನಿಸಿ, ಒಂದಷ್ಟು ನಾಟಕ ತಾಲೀಮುಗಳನ್ನೂ ಮಾಡಿ, ಒಂದು ಪ್ರದರ್ಶನವನ್ನು ಬೆಂಗಳೂರಿನಲ್ಲಿ ಕೈಗೊಂಡು ಒಬ್ಬ ಸಹಾಯಕನೊಂದಿಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿಬಿಟ್ಟೆ. ಆದರೆ, ಆತನಿಗೂ ನಾ ಕೈಗೊಳ್ಳುತ್ತಿರುವ ಪ್ರವಾಸದ ಬಗ್ಗೆ ನನ್ನಷ್ಟೇ ಕುತೂಹಲವಿರುತ್ತದೆ, ಎಷ್ಟೇ ಸವಾಲುಗಳು ಬಂದರೂ ಎದುರಿಸಿ ನಡೆಯುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಕಾರು ಶುರು ಮಾಡಿ ಮನೆಯವರಿಗೆಲ್ಲರಿಗೂ ಟಾಟಾ ಬಾಯ್ ಬಾಯ್ ಮಾಡಿ ಕೋವಿಡ್ ಅಲೆ ಮುಗಿಯುತ್ತಿದ್ದಂತೆಯೇ ಪ್ರವಾಸ ಕೈಗೊಂಡೆ ಬಿಟ್ಟೆವು. ಆದರೆ, ಐದನೆಯ ಪ್ರಯೋಗಕ್ಕೆ ಪ್ರವಾಸದಲ್ಲಿ ಸುಸ್ತಾಗಿ ಸಾಕಾಗಿ ನನಗೆ ಟಾಟಾ ಬಾಯ್ ಬಾಯ್ ಮಾಡಿ ವಾಪಸ್ ಹೋಗೇ ಬಿಟ್ಟ.

ನಡು ನೀರಲ್ಲೇ ಬಿಟ್ಟು ಹೋದಾಗ?
ನಾನು ಮೊದಲೇ ಯಾರಿಗೂ ಹಿಂಸೆಯಾಗಬಾರದು, ಎಂಥ ಕೆಲಸವೇ ಆದರೂ ಸರಿ ಮಾಡುವ ಕೆಲಸದ ಮೇಲೆ ಪ್ರೀತಿ- ಶ್ರದ್ಧೆ- ಬದ್ಧತೆ ಇದ್ದರೆ ಮಾತ್ರ ಮುಂದುವರಿಯಬೇಕು ಎಂಬ ಸ್ಲೋಗಾನ್ ಮೇಲೆ ಕೆಲಸ ಮಾಡುತ್ತೇನೆ. ಆದರೆ ನಂಬಿ ಬಂದವ ಹೀಗೆ ನಡು ನೀರಿನಲ್ಲಿ ಬಿಟ್ಟು ಹೋದಾಗ. ಅದರಲ್ಲೂ ತೀರಾ ಹಳ್ಳಿ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡೇ ಇಲ್ಲ ಆಗಲೇ ಹೀಗಾದರೆ? ಮುಂದೆ...?!