ಡಾರ್ಕ್ ಟೂರಿಸಂ
ಕಿಲ್ಲಿಂಗ್ ಫೀಲ್ಡ್ಸ್, ಕಾಂಬೋಡಿಯಾದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಸಾಮೂಹಿಕ ಹತ್ಯಾಕಾಂಡಗಳ ತಾಣಗಳಿಗೆ ನೀಡಲಾದ ಹೆಸರು. ಇವು 1975- 1979ರವರೆಗೆ ದೇಶವನ್ನು ಆಳಿದ ಪೋಲ್‌ಪಾಟ್ ನೇತೃತ್ವದ ಖಮೇರ್ ರೂಜ್ ಆಡಳಿತದ ದೌರ್ಜನ್ಯಗಳ ಸಂಕೇತಗಳಾಗಿವೆ. ದ್ವೇಷ, ಸರ್ವಾಧಿಕಾರ ಮತ್ತು ರಾಜಕೀಯ ಉನ್ಮಾದ ಒಂದು ದೇಶವನ್ನು ಹೇಗೆ ವಿನಾಶದೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಅರ್ಥಮಾಡಿಸುತ್ತದೆ.
- ಡಾ. ಉದಯರವಿ ಶಾಸ್ತ್ರೀ
ಪ್ರವಾಸೋದ್ಯಮ ಎಂದಾಗ ಸಾಮಾನ್ಯವಾಗಿ ನಮ್ಮ ಮನಸಿಗೆ ಸುಂದರ ಬೆಟ್ಟಗಳು, ಕಡಲತೀರಗಳು, ಐತಿಹಾಸಿಕ ಸ್ಮಾರಕಗಳು, ವನ್ಯಜೀವಿ ಅಭಯಾರಣ್ಯಗಳು ಅಥವಾ ಧಾರ್ಮಿಕ ಕ್ಷೇತ್ರಗಳು ನೆನಪಾಗುತ್ತವೆ. ಆದರೆ ಕಳೆದ ಕೆಲವು ದಶಕಗಳಲ್ಲಿ ಜಗತ್ತಿನಾದ್ಯಂತ ಒಂದು ವಿಶಿಷ್ಟ ರೀತಿಯ ಪ್ರವಾಸೋದ್ಯಮ ಬೆಳವಣಿಗೆಯಾಗಿದೆ. ಅದು ‘ಡಾರ್ಕ್ ಟೂರಿಸಂ’. ‘ಶೋಕ ಪ್ರವಾಸೋದ್ಯಮ’, ‘ದುರಂತ ಪ್ರವಾಸೋದ್ಯಮ’ ಎಂದೂ ಕರೆಯಲ್ಪಡುತ್ತದೆ. ಇದು ಸಂತೋಷದ ನೆನಪುಗಳಿಗಿಂತ ದುಃಖ, ಮರಣ, ಯುದ್ಧ, ನರಮೇಧ, ದುರಂತ, ವಿಪತ್ತು ಮತ್ತು ಮಾನವೀಯ ದುರಂತಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ.
ಇದನ್ನೂ ಓದಿ: 'ಡಾರ್ಕ್ ಟೂರಿಸಂ’: ನೋವಿನ ಕಥೆ, ಶಾಂತಿಯ ಸಂದೇಶ
ಡಾರ್ಕ್ ಟೂರಿಸಂ ಎಂದರೇನು?
ಡಾರ್ಕ್ ಟೂರಿಸಂ ಎಂಬ ಪದವನ್ನು 1996ರಲ್ಲಿ ಬ್ರಿಟಿಷ್ ಸಂಶೋಧಕರಾದ ಜಾನ್ ಲೆನ್ನನ್ ಮತ್ತು ಮ್ಯಾಲ್ಕಮ್ ಫೋಲಿ ಜನಪ್ರಿಯಗೊಳಿಸಿದರು. ಅವರ ಪ್ರಕಾರ, ಮರಣ, ದುರಂತ, ಹಿಂಸೆ ಅಥವಾ ದುರಂತಮಯ ಘಟನೆಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಜನರು ಭೇಟಿ ನೀಡುವ ಪ್ರವೃತ್ತಿಯನ್ನು ಡಾರ್ಕ್ ಟೂರಿಸಂ ಎಂದು ಕರೆಯಬಹುದು.
ಇಂಥ ಪ್ರವಾಸದ ಉದ್ದೇಶ ಮನೋರಂಜನೆಯಲ್ಲ. ಬದಲಾಗಿ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು. ಮಾನವ ದುರಂತಗಳ ನೆನಪನ್ನು ಉಳಿಸುವುದು. ಮೃತರಿಗೆ ಗೌರವ ಸಲ್ಲಿಸುವುದು ಮತ್ತು ಭೂತಕಾಲದಿಂದ ಪಾಠ ಕಲಿಯುವುದಾಗಿದೆ. ಡಾರ್ಕ್ ಟೂರಿಸಂಗೆ ಸಂಬಂಧಿಸಿದ ಸ್ಥಳಗಳಲ್ಲಿ ಯುದ್ಧಭೂಮಿಗಳು, ಜೈಲುಗಳು, ನರಮೇಧ ನಡೆದ ಪ್ರದೇಶಗಳು, ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಸ್ಥಳಗಳು, ಹತ್ಯಾಕಾಂಡಗಳ ಸ್ಮಾರಕಗಳು, ಸಮಾಧಿಗಳು ಮತ್ತು ದುರಂತ ಸಂಗ್ರಹಾಲಯಗಳು ಸೇರಿವೆ.
ಇಂಥ ಸ್ಥಳಗಳಿಗೆ ಭೇಟಿ ನೀಡುವುದೇಕೆ?
ಮಾನವನಲ್ಲಿ ಇತಿಹಾಸದ ಬಗ್ಗೆ ಸಹಜ ಕುತೂಹಲವಿದೆ. ಪುಸ್ತಕಗಳಲ್ಲಿ ಓದಿದ ಘಟನೆಗಳು ನಡೆದ ಸ್ಥಳಗಳನ್ನು ನೇರವಾಗಿ ನೋಡುವ ಆಸೆ ಅನೇಕರಲ್ಲಿ ಇರುತ್ತದೆ. ಇಂಥ ಸ್ಥಳಗಳು ಮಾನವ ಜೀವನದ ಅಸ್ಥಿರತೆಯನ್ನು ನೆನಪಿಸುತ್ತವೆ ಸಹ. ಯುದ್ಧ, ಹಿಂಸೆ ಮತ್ತು ಪ್ರಕೃತಿ ವಿಕೋಪಗಳ ಪರಿಣಾಮಗಳನ್ನು ನೋಡಿದಾಗ ಜನರಲ್ಲಿ ಸಹಾನುಭೂತಿ ಮತ್ತು ಮಾನವೀಯತೆ ಹೆಚ್ಚುತ್ತದೆ. ಡಾರ್ಕ್ ಟೂರಿಸಂ ಶಿಕ್ಷಣದ ಸಾಧನವೂ ಹೌದು. ಇಂಥ ಸ್ಥಳಗಳು ಇತಿಹಾಸದ ಪಾಠಗಳನ್ನು ಜೀವಂತವಾಗಿ ಅನುಭವಿಸಲು ಅವಕಾಶ ನೀಡುತ್ತವೆ.
ಕೆಲವು ಪ್ರಸಿದ್ಧ ಡಾರ್ಕ್ ಟೂರಿಸಂ ತಾಣಗಳು
ಪೋಲೆಂಡ್‌ನ ಆಶ್ವಿಟ್ಜ್ ಸಾಂದ್ರಣ ಶಿಬಿರವು ದ್ವಿತೀಯ ಮಹಾಯುದ್ಧದ ವೇಳೆ ಲಕ್ಷಾಂತರ ಯಹೂದಿಗಳ ಹತ್ಯೆಗೆ ಸಾಕ್ಷಿಯಾಗಿದೆ. ಇಂದು ಇದೊಂದು ಸ್ಮಾರಕ ಮತ್ತು ಸಂಗ್ರಹಾಲಯ. ಜಪಾನ್‌ನ ʼಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನʼ 1945ರ ಪರಮಾಣು ಬಾಂಬ್ ದಾಳಿಯ ನೆನಪನ್ನು ಉಳಿಸಿಕೊಂಡಿದೆ. ಅಮೆರಿಕದ ʼಗ್ರೌಂಡ್ ಜೀರೋʼ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದ ಸಾವಿರಾರು ಜನರಿಗೆ ಸಮರ್ಪಿತವಾಗಿದೆ.
ಉಕ್ರೇನ್‌ನ ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರ
1986ರ ಏಪ್ರಿಲ್ 26ರಂದು ಅಂದಿನ ಸೋವಿಯತ್ ಒಕ್ಕೂಟದ (ಇಂದಿನ ಉಕ್ರೇನ್) ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದ ನಾಲ್ಕನೆಯ ರಿಯಾಕ್ಟರ್‌ನಲ್ಲಿ ಸಂಭವಿಸಿದ ಸ್ಫೋಟವು, ಇತಿಹಾಸದ ಅತ್ಯಂತ ಭೀಕರ ಪರಮಾಣು ದುರಂತಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಇಲ್ಲಿ ಯುದ್ಧ ಅಥವಾ ನರಮೇಧವಲ್ಲ, ತಂತ್ರಜ್ಞಾನ ಮತ್ತು ಮಾನವ ದೋಷದಿಂದ ಉಂಟಾದ ದುರಂತದ ಪರಿಣಾಮಗಳನ್ನು ನೇರವಾಗಿ ಕಾಣಬಹುದು. ಈ ಪ್ರದೇಶಕ್ಕೆ ಭೇಟಿನೀಡುವ ಪ್ರವಾಸಿಗರು ಪರಮಾಣು ಶಕ್ತಿಯ ಅಪಾಯಗಳು, ಪರಿಸರದ ಮೇಲೆ ಅದರ ಪರಿಣಾಮಗಳು ಮತ್ತು ಮಾನವ ಜೀವನದ ಅಸ್ಥಿರತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಕಾಂಬೋಡಿಯಾದ ಕಿಲ್ಲಿಂಗ್ ಫೀಲ್ಡ್ಸ್
ಕಿಲ್ಲಿಂಗ್ ಫೀಲ್ಡ್ಸ್, ಕಾಂಬೋಡಿಯಾದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಸಾಮೂಹಿಕ ಹತ್ಯಾಕಾಂಡಗಳ ತಾಣಗಳಿಗೆ ನೀಡಲಾದ ಹೆಸರು. ಇವು 1975- 1979ರವರೆಗೆ ದೇಶವನ್ನು ಆಳಿದ ಪೋಲ್‌ಪಾಟ್ ನೇತೃತ್ವದ ಖಮೇರ್ ರೂಜ್ ಆಡಳಿತದ ದೌರ್ಜನ್ಯಗಳ ಸಂಕೇತಗಳಾಗಿವೆ. ದ್ವೇಷ, ಸರ್ವಾಧಿಕಾರ ಮತ್ತು ರಾಜಕೀಯ ಉನ್ಮಾದ ಒಂದು ದೇಶವನ್ನು ಹೇಗೆ ವಿನಾಶದೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಅರ್ಥಮಾಡಿಸುತ್ತದೆ.
ಭಾರತದಲ್ಲಿನ ಡಾರ್ಕ್ ಟೂರಿಸಂ
ಭಾರತದಲ್ಲಿಯೂ ಡಾರ್ಕ್ ಟೂರಿಸಂಗೆ ಸಂಬಂಧಿಸಿದ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಕೆಲವು ಗಮನಾರ್ಹವಾಗಿವೆ.
ಸೆಲ್ಯುಲರ್ ಜೈಲು, ಅಂಡಮಾನ್
‘ಕಾಲಾಪಾನಿ’ ಕುಖ್ಯಾತಿಯ ಈ ಜೈಲಿನಲ್ಲಿ ಅನೇಕ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲಾಗಿತ್ತು. ಕೈದಿಗಳು ಅನುಭವಿಸಿದ ಅಮಾನವೀಯ ಹಿಂಸೆ ಈ ಸ್ಥಳವನ್ನು ಭಾರತದ ಪ್ರಮುಖ ಡಾರ್ಕ್ ಟೂರಿಸಂ ತಾಣವನ್ನಾಗಿ ಮಾಡಿದೆ.
ಭೋಪಾಲ್ ಅನಿಲ ದುರಂತ ಸ್ಥಳ
1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ಸೋರಿಕೆ ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾಗಿದೆ. ಸಾವಿರಾರು ಜನರು ಸಾವಿಗೀಡಾದರು. ಲಕ್ಷಾಂತರ ಜನರು ಆರೋಗ್ಯ ಸಮಸ್ಯೆಗಳಿಗೆ ಒಳಗಾದರು. ಈ ದುರಂತದ ನೆನಪಿಗಾಗಿ ಸ್ಮಾರಕಗಳು ನಿರ್ಮಾಣವಾಗಿವೆ.
ಕಾರ್ಗಿಲ್ ಯುದ್ಧ ಸ್ಮಾರಕ
ಲಡಾಖ್‌ನ ದ್ರಾಸ್ ಪ್ರದೇಶದಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕವಿದೆ. ಇದು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಸಮರ್ಪಿತ ಸ್ಮಾರಕ. ಯುದ್ಧದ ಬೆಲೆ ಮತ್ತು ದೇಶಭಕ್ತಿಯ ಮಹತ್ವವನ್ನು ನೆನಪಿಸುವ ಸ್ಥಳವಾಗಿದೆ.
ಪಾರ್ಟಿಷನ್ ಮ್ಯೂಸಿಯಂ, ಅಮೃತಸರ
1947ರ ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾದರು. ಅನೇಕರು ಸಾವನ್ನಪ್ಪಿದರು. ಈ ಸಂಗ್ರಹಾಲಯವು ಆ ದುರಂತದ ಮಾನವೀಯ ಮುಖವನ್ನು ದಾಖಲಿಸುತ್ತದೆ.
ಧನುಷ್ಕೋಟಿ, ತಮಿಳುನಾಡು
1964ರ ಭೀಕರ ಚಂಡಮಾರುತದಿಂದ ನಾಶವಾದ ಧನುಷ್ಕೋಟಿ ಪಟ್ಟಣ ಇಂದು ‘ಘೋಸ್ಟ್ ಟೌನ್’ ಎಂದು ಕರೆಯಲ್ಪಡುತ್ತದೆ. ಅವಶೇಷಗಳಾಗಿ ಉಳಿದಿರುವ ಕಟ್ಟಡಗಳು ಪ್ರಕೃತಿಯ ಪ್ರಬಲ ಶಕ್ತಿಯ ನೆನಪನ್ನು ಮೂಡಿಸುತ್ತವೆ.

ಜಲಿಯನ್‌ವಾಲಾ ಬಾಗ್, ಅಮೃತಸರ
1919ರ ಏಪ್ರಿಲ್ 13ರಂದು ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್ ನೇತೃತ್ವದಲ್ಲಿ ನಿರಾಯುಧ ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ನೂರಾರು ಜನರು ಸಾವಿಗೀಡಾದರು. ಇಂದು ಜಲಿಯನ್‌ವಾಲಾ ಬಾಗ್ ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಸ್ಮಾರಕವಾಗಿದೆ.
ಕುಲಧಾರ, ರಾಜಸ್ಥಾನ
ರಾಜಸ್ಥಾನದ ಜೈಸಲ್ಮೇರ್ ಬಳಿ ಕುಲಧಾರವಿದೆ. ಇದು ಭಾರತದ ಒಂದು ರಹಸ್ಯಮಯ ಹಳ್ಳಿ. ಸುಮಾರು 200 ವರ್ಷಗಳ ಹಿಂದೆ ಪಾಲಿವಾಲ್ ಬ್ರಾಹ್ಮಣರು ವಾಸಿಸುತ್ತಿದ್ದ ಈ ಹಳ್ಳಿಯನ್ನು ಒಂದು ರಾತ್ರಿ ಎಲ್ಲರೂ ತೊರೆದು ಹೋದರು ಎನ್ನಲಾಗುತ್ತದೆ.
ಜನಪ್ರಿಯ ಕತೆಯ ಪ್ರಕಾರ ಸ್ಥಳೀಯ ಆಡಳಿತಗಾರನ ದೌರ್ಜನ್ಯದಿಂದ ಬೇಸತ್ತ ಗ್ರಾಮಸ್ಥರು ಹಳ್ಳಿಯನ್ನು ತೊರೆದು ಹೋಗುವಾಗ ‘ಇಲ್ಲಿ ಯಾರೂ ನೆಲೆಸಬಾರದು’ ಎಂದು ಶಾಪ ಹಾಕಿದರು ಎಂಬ ನಂಬಿಕೆಯಿದೆ. ಇಂದು ಕುಲಧಾರ ಅವಶೇಷಗಳ ಮಧ್ಯೆ ನಿಶ್ಶಬ್ದವಾಗಿ ನಿಂತಿದೆ. ಇದು ರಹಸ್ಯ ಮತ್ತು ಜನಪದ ಕಥೆಗಳ ಕಾರಣದಿಂದ ಡಾರ್ಕ್ ಟೂರಿಸಂ ತಾಣವಾಗಿದೆ.
ರೂಪಕುಂಡ್ ಸರೋವರ
ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ ರೂಪಕುಂಡ್ ಸರೋವರವಿದೆ. ಇದು ‘Skeleton Lake’ ಎಂದೇ ಪ್ರಸಿದ್ಧ ಸರೋವರ. ಹಿಮ ಕರಗುವ ಕಾಲದಲ್ಲಿ ಸರೋವರದ ಸುತ್ತಲೂ ನೂರಾರು ಮಾನವ ಅಸ್ಥಿಪಂಜರಗಳು ಗೋಚರಿಸುತ್ತವೆ. 1942ರಲ್ಲಿ ಈ ಅಸ್ಥಿಪಂಜರಗಳು ಜಗತ್ತಿನ ಗಮನ ಸೆಳೆದವು. ನಂತರದ ಸಂಶೋಧನೆಗಳಿಂದ ಸುಮಾರು ಸಾವಿರ ವರ್ಷಗಳ ಹಿಂದೆ ಆಲಿಕಲ್ಲಿನ ಭೀಕರ ಮಳೆಯಿಂದ ಯಾತ್ರಿಕರ ಒಂದು ಗುಂಪು ಸಾವಿಗೀಡಾಗಿರಬಹುದು ಎಂಬ ಊಹೆ ವ್ಯಕ್ತವಾಯಿತು.
ಈ ಸ್ಥಳವು ಇತಿಹಾಸ, ಪುರಾತತ್ವ ಮತ್ತು ಪ್ರಕೃತಿಯ ಸಂಯೋಜನೆಯಿಂದ ಡಾರ್ಕ್ ಟೂರಿಸಂ ತಾಣವಾಗಿದೆ.
ಚಿತ್ತೋಡಗಢ ಮತ್ತು ಜೌಹರ್‌ನ ನೆನಪು
ರಾಜಸ್ಥಾನದ ಚಿತ್ತೋಡಗಢ ಕೋಟೆಯು ರಜಪೂತರ ಶೌರ್ಯ ಮತ್ತು ದುರಂತದ ಸಂಕೇತ. ಇಲ್ಲಿ ಶತ್ರುಗಳ ಮುತ್ತಿಗೆಗೆ ಸಿಲುಕಿದಾಗ ಸಾವಿರಾರು ಮಹಿಳೆಯರು ಜೌಹರ್ ಮಾಡಿದರು ಎನ್ನುವ ಐತಿಹಾಸಿಕ ಉಲ್ಲೇಖಗಳಿವೆ. ಇಂದಿನ ಪ್ರವಾಸಿಗರು ಕೋಟೆಯ ಭವ್ಯತೆಯನ್ನು ಮಾತ್ರವಲ್ಲ, ಅದರ ಹಿಂದಿರುವ ದುರಂತಮಯ ಇತಿಹಾಸವನ್ನೂ ನೆನಪಿಸಿಕೊಳ್ಳುತ್ತಾರೆ.
ಡಾರ್ಕ್ ಟೂರಿಸಂನ ನೈತಿಕ ಪ್ರಶ್ನೆಗಳು
ಡಾರ್ಕ್ ಟೂರಿಸಂ ಕುರಿತು ಕೆಲವೊಂದು ನೈತಿಕ ಪ್ರಶ್ನೆಗಳೂ ಉದ್ಭವಿಸುತ್ತವೆ. ಮರಣ ಮತ್ತು ದುಃಖಕ್ಕೆ ಸಂಬಂಧಿತ ಸ್ಥಳಗಳನ್ನು ಪ್ರವಾಸಿ ಆಕರ್ಷಣೆಗಳಾಗಿ ಪರಿವರ್ತಿಸುವುದು ಸರಿಯೇ? ದುರಂತಗಳನ್ನು ವಾಣಿಜ್ಯೀಕರಣ ಮಾಡಲಾಗುತ್ತಿದೆಯೇ? ಈ ಪ್ರಶ್ನೆಗಳು ಮಹತ್ವದ್ದಾಗಿವೆ. ಆದಾಗ್ಯೂ ಅನೇಕ ತಜ್ಞರ ಅಭಿಪ್ರಾಯದಂತೆ, ಇಂಥ ಸ್ಥಳಗಳನ್ನು ಗೌರವಪೂರ್ವಕವಾಗಿ ನಿರ್ವಹಿಸಿದರೆ ಅವು ಶಿಕ್ಷಣ ಮತ್ತು ಸ್ಮರಣೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಬಹುದು. ಇಲ್ಲಿ ಸಂವೇದನಾಶೀಲತೆ ಮತ್ತು ಇತಿಹಾಸದ ಬಗ್ಗೆ ಗೌರವ ಮುಖ್ಯ.
ಡಾರ್ಕ್ ಟೂರಿಸಂ ಕೇವಲ ದುಃಖದ ಸ್ಥಳಗಳಿಗೆ ಭೇಟಿನೀಡುವುದಲ್ಲ; ಮಾನವ ಇತಿಹಾಸದ ಕತ್ತಲೆಯ ಅಧ್ಯಾಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ. ಯುದ್ಧ, ಹತ್ಯಾಕಾಂಡ, ದುರಂತ ಮತ್ತು ಪ್ರಕೃತಿ ವಿಕೋಪಗಳು ಮಾನವ ಸಮಾಜಕ್ಕೆ ಎಂಥ ಪರಿಣಾಮಗಳನ್ನು ಉಂಟುಮಾಡಿವೆ ಎಂಬುದನ್ನು ಇವು ನಮಗೆ ನೆನಪಿಸುತ್ತವೆ. ಭವಿಷ್ಯದಲ್ಲಿ ಇಂಥ ದುರಂತಗಳು ಮರುಕಳಿಸದಂತೆ ಎಚ್ಚೆತ್ತುಕೊಳ್ಳಲು ತಿಳಿಸುತ್ತವೆ. ಈ ಅರ್ಥದಲ್ಲಿ ಡಾರ್ಕ್ ಟೂರಿಸಂ ಒಂದು ಪ್ರವಾಸವಷ್ಟೇ ಅಲ್ಲ; ಇತಿಹಾಸದೊಂದಿಗೆ ನಡೆಸುವ ಒಂದು ಮೌನ ಸಂವಾದ.